Tuesday 24 November 2020

ಸಸಿಕಾಂತ್ ಸೆಂಥಿಲ್ ಕಾಂಗ್ರೆಸ್ ಸೇರ್ಪಡೆ: ಸರಿ- ತಪ್ಪುಗಳ ನಡುವೆ


ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್‍ರ ಮುಂದೆ ಎರಡು ಆಯ್ಕೆಗಳಿದ್ದುವು. 

1. ಆ್ಯಕ್ಟಿವಿಸ್ಟ್ ಆಗಿ ಮುಂದುವರಿಯುವುದು.

2. ರಾಜಕೀಯ ಪಕ್ಷವನ್ನು ಸೇರುವುದು.

ಅವರು ಎರಡನೆಯದನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಸಸಿಕಾಂತ್ ಸೆಂಥಿಲ್‍ರಂಥ ತಣ್ಣನೆಯ, ಮೃದು ಮಾತಿನ ಮತ್ತು ಆಕರ್ಷಕ ವಾಕ್ಚಾತುರ್ಯವಿಲ್ಲದ ವ್ಯಕ್ತಿಗೆ ಆ್ಯಕ್ಟಿವಿಸಂ ರಂಗದಲ್ಲಿ ಏನು  ಭವಿಷ್ಯವಿದೆ ಎಂಬುದು ಎರಡನೆಯ ಪ್ರಶ್ನೆ. ಮೊದಲನೆಯ ಪ್ರಶ್ನೆ ಏನೆಂದರೆ, ಭಾರತದ ಸದ್ಯದ ಪರಿಸ್ಥಿತಿಯಲ್ಲಿ ಆ್ಯಕ್ಟಿವಿಸಂಗೆ ಯಾವ  ಮನ್ನಣೆ ದೊರಕುತ್ತಿದೆ ಎಂಬುದು. ಸಾಮಾಜಿಕ ಹೋರಾಟವನ್ನು ಮತ್ತು ಹೋರಾಟಗಾರರನ್ನು ಸಾರಾಸಗಟು ದೇಶದ್ರೋಹಿ  ಪಟ್ಟದಲ್ಲಿ ಕೂರಿಸುವುದಕ್ಕೆ ಮತ್ತು ಸಾಮಾಜಿಕ ಒಂಟಿತನಕ್ಕೆ ದೂಡುವುದಕ್ಕೆ ಹಿಂದೆಂದಿಗಿಂತಲೂ ಇವತ್ತು ಅತ್ಯಂತ ಸುಲಭ. ಕೇಂದ್ರ  ಸರಕಾರದ ಪಾಲಿಗೆ ಇದನ್ನು ಅತ್ಯಂತ ಸುಲಭಗೊಳಿಸಿರುವುದು ಸಾಮಾಜಿಕ ಜಾಲತಾಣಗಳು. ಸಾಮಾಜಿಕ ಹೋರಾಟವನ್ನು  ದ್ವೇಷಿಸುವ ಮತ್ತು ಬಲಪಂಥವನ್ನು ಅಥವಾ ಇನ್ನಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ, ಕೋಮು ಆಧಾರದಲ್ಲಿ ಧಾರ್ಮಿಕ  ಧ್ರುವೀಕರಣವನ್ನು ನಡೆಸುವ ಬಿಜೆಪಿ ಆಡಳಿತಕ್ಕೆ ಬಲ ನೀಡಿರುವುದೇ ಸಾಮಾಜಿಕ ಜಾಲತಾಣಗಳು. 

ಹೋರಾಟಗಾರರನ್ನು ಅತ್ಯಂತ  ಹೀನಾಯ ಭಾಷೆಯಲ್ಲಿ ನಿಂದಿಸುವುದರಿಂದ ತೊಡಗಿ ಅವರ ವರ್ಚಸ್ಸಿಗೆ ಹಾನಿ ತಟ್ಟಬಲ್ಲಂಥ ಅಪ್ಪಟ ಸುಳ್ಳು ಸುದ್ದಿಗಳನ್ನು ತೇಲಿ  ಬಿಡುವುದಕ್ಕೆ ದೊಡ್ಡ ಪಡೆಯನ್ನೇ ಇವತ್ತು ಆಡಳಿತದ ಮಂದಿ ಕಟ್ಟಿಕೊಂಡಿದ್ದಾರೆ. ಬಲಪಂಥೀಯ ವಿಚಾರಧಾರೆಗೆ ಎದುರಾಗಿ  ಮಾತಾಡುವ ಯಾರೂ ಆ ಪಡೆಯ ನಿಂದನೆಗೆ ಈಡಾಗದೇ ಹೋಗಿದ್ದಿಲ್ಲ. ಬಲಪಂಥ ವಿರೋಧಿ ಸರ್ವ ಹೋರಾಟವನ್ನು ಮತ್ತು  ಸಾಮಾಜಿಕ ನ್ಯಾಯದ, ಸಂವಿಧಾನ ಪರವಾದ ಸಕಲ ವಾದಗಳನ್ನೂ ವಿರೋಧಿಸುವುದು ಮತ್ತು ಉಸಿರುಗಟ್ಟಿಸುವುದನ್ನು ವ್ಯವಸ್ಥೆ  ಮಾಡುತ್ತಾ ಬರುತ್ತಿದೆ. ಎನ್‍ಆರ್ ಸಿ  ವಿರೋಧಿ ಹೋರಾಟವನ್ನು ಪ್ರಭುತ್ವ ಹೇಗೆ ದೇಶವಿರೋಧಿಯಾಗಿ ಮತ್ತು ಬಹುಸಂಖ್ಯಾತ  ವಿರೋಧಿಯಾಗಿ ಪರಿವರ್ತಿಸಲು ಯತ್ನಿಸಿತು ಎಂಬುದು ಎಲ್ಲರಿಗೂ ಗೊತ್ತು. ಹಲವು ಜೀವಗಳು ಅದಕ್ಕೆ ಬಲಿಯಾದುವು. ಬಿಜೆಪಿ  ನೇತೃತ್ವ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೋರಾಟವನ್ನು ದಮನಿಸುವುದಕ್ಕೆ ಪ್ರಯತ್ನಪಟ್ಟವು. ಎನ್‍ಆರ್‍ಸಿಯ ವಿರುದ್ಧ ನಿಂತ  ವಿವಿಗಳ ಮೇಲೆ ವ್ಯವಸ್ಥೆಯೇ ಮುಗಿಬಿತ್ತು. ದೆಹಲಿಯ ಜಾಮಿಯಾ ವಿವಿ, ಅಲಿಘರ್ ವಿವಿಗಳ ಮೇಲೆ ಲಾಠಿ ಮತ್ತು ಗುಂಡಿನ  ದಾಳಿಗಳು ನಡೆದುವು. ದೆಹಲಿಯಲ್ಲಿ ಗಲಭೆಯೂ ನಡೆಯಿತು. ಎನ್‍ಆರ್‍ ಸಿಯನ್ನು ಹಿಂದೂ ಮತ್ತು ಮುಸ್ಲಿಮ್ ಇಶ್ಶೂಗಳಂತೆ  ವಿಭಜಿಸುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯನಿರತವಾದ ಪಡೆ ಗರಿಷ್ಠ ಶ್ರಮಿಸಿತು. ಹೋರಾಟದಲ್ಲಿ ಭಾಗಿಯಾದ ಉಮರ್  ಖಾಲಿದ್, ಡಾ| ಕಫೀಲ್ ಖಾನ್‍ರಂಥ ಅನೇಕರನ್ನು ಬೇರೆ ಬೇರೆ ನೆಪಗಳ ಮೂಲಕ ಜೈಲಿಗಟ್ಟಿತು. ಕೆಲವರ ಮೇಲೆ  ಯುಎಪಿಎಯಂಥ ಕರಾಳ ಕಾನೂನಿನಡಿ ಕೇಸು ದಾಖಲಿಸಿಕೊಂಡಿತು. ಇದು ಪುಟ್ಟ ಉಲ್ಲೇಖ ಮಾತ್ರ.

ಇದಕ್ಕಿಂತ ಮೊದಲೇ ಕೇಂದ್ರ ಸರಕಾರ ಹೋರಾಟಗಾರರನ್ನು ಹತ್ತಿಕ್ಕುವ ಅಭಿಯಾನವನ್ನು ಸದ್ದಿಲ್ಲದೇ ಪ್ರಾರಂಭಿಸಿತ್ತು. ಭೀಮಾ  ಕೋರೆಗಾಂವ್ ಪ್ರಕರಣದ ನೆಪದಲ್ಲಿ ಪ್ರಮುಖ 16 ಹೋರಾಟಗಾರರನ್ನು ಯುಎಪಿಎ ಕಾಯ್ದೆಯಡಿ ಈಗಾಗಲೇ ಜೈಲಿಗಟ್ಟಿದೆ. 1818  ಜನವರಿ ಒಂದರಂದು ಮರಾಠ ಪೇಶ್ವೆಯ ವಿರುದ್ಧ ದಲಿತರು ಕೋರೆಗಾಂವ್‍ನಲ್ಲಿ ಪಡೆದ ಐತಿಹಾಸಿಕ ಗೆಲುವಿನ ಸ್ಮರಣಾರ್ಥ  2018ರಲ್ಲಿ ಆಯೋಜಿಸಲಾಗಿದ್ದ ಸಭೆ ಇದಕ್ಕೊಂದು ನೆಪ. ಈ ಸಭೆಯ ಒಂದು ದಿನ ಮೊದಲು ಎಲ್ಗಾರ್ ಪರಿಷತ್ ಆಯೋಜಿಸಿದ್ದ  ಸಭೆಯಲ್ಲಿ ಭಾಗಿಯಾದವರನ್ನು ಮತ್ತು ಅವರೊಂದಿಗೆ ಸಂಪರ್ಕದಲ್ಲಿದ್ದವರನ್ನು ಜೈಲಿಗಟ್ಟಲಾಗಿದೆ. 2018 ಜನವರಿ ಒಂದರಂದು  ಕೋರೆಗಾಂವ್‍ನಲ್ಲಿ ನಡೆದ ಸಭೆಯು ಹಿಂಸಾತ್ಮಕವಾಗಿ ಕೊನೆಗೊಂಡಿತ್ತು. ಖ್ಯಾತ ನ್ಯಾಯವಾದಿ ಸುಧಾ ಭಾರದ್ವಾಜ್, ಗೌತಮ್  ನವ್ಲಾಖಾ, ಫಾದರ್ ಸ್ಟ್ಯಾನಿ ಸ್ವಾಮಿ, ವರವರ ರಾವ್‍ರಂಥ ಹಲವು ಹಿರಿಯರು ಇವತ್ತು ಜೈಲಲ್ಲಿದ್ದಾರೆ. ಹರ್ಷಮಂದರ್ ಅವರನ್ನು  ಸುಪ್ರೀಮ್ ಕೋರ್ಟ್‍ಗೆ ಎಳೆಯಲಾಗಿದೆ. ಅನುಭವಿ ಹೋರಾಟಗಾರರನ್ನು ಜೈಲಿಗಟ್ಟಿ ಮತ್ತು ಪ್ರಬಲ ಕಾಯ್ದೆಗಳನ್ನು ಅವರ ಮೇಲೆ  ಹೇರುವ ಮೂಲಕ ಕಿರಿಯರನ್ನು ಬೆದರಿಸುವುದು ಇದರ ಉದ್ದೇಶ. ಹೋರಾಟಗಾರರ ಅಕ್ಕಪಕ್ಕದಿಂದ ಜನರನ್ನು ಚದುರಿಸಿ ಬಲಿಷ್ಠ  ಹೋರಾಟ ರೂಪುಗೊಳ್ಳದಂತೆ ತಡೆಯುವ ಹುನ್ನಾರ ಇದು. ಇಂಥ ಸಂದರ್ಭದಲ್ಲಿ ಪ್ರಭುತ್ವವನ್ನು ಎದುರು ಹಾಕಿಕೊಳ್ಳುವುದಕ್ಕೆ  ಎರಡು ದಾರಿಗಳಿವೆ.

1. ವಿರೋಧ ಪಕ್ಷವನ್ನು ಬಲಿಷ್ಠಗೊಳಿಸುವುದು.

2. ಹೋರಾಟದಲ್ಲೇ  ಸ್ಥಿರವಾಗಿ ನಿಲ್ಲುವುದು.

ಇವರೆಡರಲ್ಲಿ ಒಂದು ಸರಿ, ಇನ್ನೊಂದು ತಪ್ಪು ಎಂದು ಹೇಳುವ ಹಾಗಿಲ್ಲ. ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಆಯ್ಕೆಗಳು ನಡೆಯುತ್ತವೆ. ಸಸಿಕಾಂತ್ ಸೆಂಥಿಲ್ ಇಲ್ಲಿ ಮೊದಲನೆಯದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರು  ನಂಬಿರುವ ಮೌಲ್ಯವನ್ನು ಕಾಂಗ್ರೆಸ್ ಪಕ್ಷದ ಮೂಲಕ ಸಾಧ್ಯವಾಗಿಸಿಕೊಳ್ಳಬಹುದು ಎಂದು ಭಾವಿಸಿದ್ದಾರೆ. ಆದರೆ ಹೋರಾಟಗಾರ ನೋರ್ವ ರಾಜಕೀಯ ಪಕ್ಷವನ್ನು ಸೇರುವುದೆಂದರೆ, ಅವರ ಹಿಂದೆ ನಡೆದವರು ಮತ್ತು ಬೆಂಬಲಿಸಿದವರನ್ನು ವಂಚಿಸಿದಂತಲ್ಲವೇ  ಎಂಬ ಪ್ರಶ್ನೆ ತಿರಸ್ಕರಿಸುವಂಥದ್ದಲ್ಲ. ಓರ್ವ ಪಕ್ಷಾತೀತ ವ್ಯಕ್ತಿಯಾಗಿ ಸೆಂಥಿಲ್ ಯಾವುದೇ ಹೋರಾಟದಲ್ಲಿ ಭಾಗಿಯಾಗುವುದಕ್ಕೂ  ಕಾಂಗ್ರೆಸ್ ಪಕ್ಷದ ವ್ಯಕ್ತಿಯಾಗಿ ಭಾಗವಹಿಸುವುದಕ್ಕೂ ವ್ಯತ್ಯಾಸ ಇದೆ. ಕಾಂಗ್ರೆಸ್ ಪಕ್ಷದ ವ್ಯಕ್ತಿಯಾಗಿ ಅವರು ಎನ್‍ಆರ್ ಸಿ   ಹೋರಾಟದಲ್ಲಿ ಭಾಗವಹಿಸುತ್ತಿದ್ದರೆ ಅವರಿಗೆ ಆ ಮಟ್ಟಿನ ಬೆಂಬಲ ಸಿಗುತ್ತಿತ್ತೇ? ಎನ್‍ಆರ್ ಸಿ  ಹೋರಾಟವನ್ನು ಜನರು  ಪಕ್ಷಾತೀತವಾಗಿ ಸಂಘಟಿಸಿದ್ದರು. ಆದ್ದರಿಂದ, 

ಸೆಂಥಿಲ್ ಅವರ ಈ ನಿರ್ಧಾರ ಪ್ರಶ್ನಾರ್ಹಗೊಳ್ಳುವುದು ಸಹಜ. ಆದರೆ ಸೆಂಥಿಲ್ ತನ್ನ  ಐಎಎಸ್ ಹುದ್ದೆಯನ್ನು ತೊರೆದಿರುವುದು ಎನ್‍ಆರ್ ಸಿಯನ್ನು  ಬೊಟ್ಟು ಮಾಡಿಕೊಂಡು ಅಲ್ಲ. ಕೇಂದ್ರ ಸರಕಾರದ ಜನವಿರೋಧಿ  ನೀತಿಯನ್ನು ಖಂಡಿಸಿ. ವಿಶೇಷವಾಗಿ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದೂ ಇದರಲ್ಲಿ ಒಂದು. ಸಂವಿಧಾನವನ್ನು  ದುರ್ಬಲಗೊಳಿಸುವ ಪ್ರಯತ್ನದಲ್ಲಿ ಕೇಂದ್ರ ಸರಕಾರ ತೊಡಗಿರುವುದು ಅವರ ರಾಜಿನಾಮೆಗೆ ಮುಖ್ಯ ಕಾರಣಗಳಲ್ಲಿ ಒಂದು. ಎ ನ್‍ಆರ್ ಸಿಯು ಸಂವಿಧಾನದ ಆಶಯಗಳಿಗೆ ವಿರೋಧ ಎಂಬ ಕಾರಣಕ್ಕಾಗಿಯೇ ಅವರು ಆ ಚಳವಳಿಯಲ್ಲಿ ಸಕ್ರಿಯವಾಗಿ  ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ನೋಡಿದರೆ ಅವರ ರಾಜಕೀಯ ಪ್ರವೇಶ ಅಚ್ಚರಿಯದ್ದೇನೂ ಆಗಬೇಕಿಲ್ಲ. ಅವರ  ಗುರಿಯಿದ್ದುದು ಸಂವಿಧಾನದ ಮೂಲ ಆಶಯಗಳನ್ನು ಉಳಿಸುವುದು. ಒಂದು ಹಂತದವರೆಗೆ ಜನಜಾಗೃತಿಯಲ್ಲಿ ತೊಡಗಿಸಿಕೊಂಡ  ಅವರು ಇದೀಗ ರಾಜಕೀಯ ಪ್ರವೇಶಿಸಿದ್ದಾರೆ. ಮಾತ್ರವಲ್ಲ, ಹೋರಾಟಗಾರರಾಗಿ ಮುನ್ನೆಲೆಗೆ ಬಂದು ಬಳಿಕ ರಾಜಕೀಯ  ಪ್ರವೇಶಿಸಿದವರ ದೊಡ್ಡ ಪಟ್ಟಿಯೇ ಈ ದೇಶದ ಶಾಸಕಾಂಗ ಸಭೆಯಲ್ಲಿ ಇದೆ. ಆದರೆ, ಇಲ್ಲಿರುವ ಮುಖ್ಯ ಪ್ರಶ್ನೆ ಏನೆಂದರೆ,

ಅವರ ಆಶಯ ಈಡೇರುವಂಥ ವಾತಾವರಣ ಕಾಂಗ್ರೆಸ್ ಪಕ್ಷದಲ್ಲಿ ಇದೆಯೇ ಎಂಬುದು. ದೇಶದ ಸಂವಿಧಾನ ಮತ್ತು ಜಾತ್ಯತೀತ  ಪರಿಕಲ್ಪನೆಗೆ ಕಾಂಗ್ರೆಸ್ ಎಷ್ಟು ಬದ್ಧವಾಗಿದೆ ಎಂಬ ಪ್ರಶ್ನೆ ಎನ್‍ಆರ್‍ಸಿ ಚಳವಳಿಯಲ್ಲಿ ಜೈಕಾರ ಹಾಕಿದ ದೊಡ್ಡ ಜನಸಮೂಹದಲ್ಲೂ  ಇತ್ತು ಎಂಬುದು ಸೆಂಥಿಲ್‍ರಿಗೆ ಗೊತ್ತಿಲ್ಲದ್ದೇನಲ್ಲ. ಆದರೆ ರಾಜಕೀಯವಾಗಿ ಸೆಂಥಿಲ್‍ರ ಮುಂದೆ ಕಾಂಗ್ರೆಸ್ ಬಿಟ್ಟರೆ ಬೇರೆ  ಆಯ್ಕೆಗಳಿರಲಿಲ್ಲ ಎಂಬುದೂ ನಿಜ. ಅಂದಹಾಗೆ,

ಸೆಂಥಿಲ್ ಕಾಂಗ್ರೆಸ್ ಸೇರುವುದು ಮತ್ತು ಅಣ್ಣಾಮಲೈ ಬಿಜೆಪಿ ಸೇರುವುದು ಎರಡೂ ಒಂದೇ ಅಲ್ಲ. ಸೈದ್ಧಾಂತಿಕವಾಗಿ ಕಾಂಗ್ರೆಸ್  ಮತ್ತು ಬಿಜೆಪಿ ನಡುವೆ ಮೂಲಭೂತ ವ್ಯತ್ಯಾಸ ಇದೆ. ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ ಎಡವಿರಬಹುದು. ಉದ್ದೇಶ ಪೂರ್ವಕವಾಗಿ ತಪ್ಪು ಮಾಡಿರಬಹುದು. ಆದರೆ ಕಾಂಗ್ರೆಸ್ ಆಡಳಿತದಲ್ಲಿ ಜನಧ್ವನಿಗೆ, ಹೋರಾಟಗಳಿಗೆ ಮತ್ತು ಪ್ರಭುತ್ವ ವಿರೋಧಿ  ಮಾತುಗಳಿಗೆ ಅವಕಾಶ ಇತ್ತು. ಆದರೆ ಬಿಜೆಪಿ ದಮನಿಸಿರುವುದೇ ಈ ಸ್ವಾತಂತ್ರ್ಯವನ್ನು. 2014ರ ಬಳಿಕದ ಈ ವರೆಗಿನ  ಬೆಳವಣಿಗೆಯನ್ನು ಪೂರ್ವಾಗ್ರಹವಿಲ್ಲದೇ ಅವಲೋಕಿಸಿದರೆ ಸೆಂಥಿಲ್ ಮತ್ತು ಅಣ್ಣಾಮಲೈ ಅವರ ಆಯ್ಕೆಯನ್ನು ಯಾಕೆ ಸಮಾ ನವಾಗಿ ತೂಗಬಾರದು ಎಂಬುದು ಸ್ಪಷ್ಟವಾಗುತ್ತದೆ.

ಸೆಂಥಿಲ್ ಅವರೊಳಗಿನ ಸಂವಿಧಾನ ಗೆಲ್ಲಲಿ ಎಂಬ ಹಾರೈಕೆಯಷ್ಟೇ ಈಗಿನದು.

Tuesday 10 November 2020

ಈ ಪ್ರಶ್ನೆಗಳು ಹೊರಗೆ ಕಂಡಷ್ಟು ಮುಗ್ಧವಲ್ಲ



ಎರಡು ಪ್ರಶ್ನೆಗಳಿವೆ.
1. ಪ್ರವಾದಿ ಮುಹಮ್ಮದ್‍ರ(ಸ) ವಿಷಯದಲ್ಲಿ ಮುಸ್ಲಿಮರೇಕೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ?
2. ಮುಸ್ಲಿಮರ ಧೋರಣೆಯೇಕೆ ಆಕ್ರಮಣಕಾರಿ ರೂಪದಲ್ಲಿರುತ್ತದೆ?
ನಿಜವಾಗಿ, ಮೇಲಿನ ಎರಡೂ ಪ್ರಶ್ನೆಗಳು ಬಾಹ್ಯವಾಗಿ ಕಂಡಷ್ಟು ಮುಗ್ಧವಲ್ಲ. ಭಾವನಾತ್ಮಕ ಪ್ರತಿಕ್ರಿಯೆ ಮತ್ತು ಆಕ್ರಮಣಕಾರಿ  ಧೋರಣೆ- ಎಂಬೆರಡು ಪದ ಪ್ರಯೋಗಗಳಲ್ಲಿ ಹೊರಗೆ ಕಾಣದ ಕೆಲವು ಅಂತರ್ಗತ ಸಂಗತಿಗಳಿವೆ. ಪ್ರವಾದಿಗೆ ಸಂಬಂಧಿಸಿ  ಮುಸ್ಲಿಮರು ಯಾವಾಗೆಲ್ಲ ಆಕ್ರಮಣಕಾರಿಯಾಗಿ ಮತ್ತು ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ ಎಂಬ ಉಪ ಪ್ರಶ್ನೆಯನ್ನು ಕೇಳಿದಾಗ  ಮೂಲ ಪ್ರಶ್ನೆ ಬಿಚ್ಚಿಕೊಳ್ಳತೊಡಗುತ್ತದೆ.
ಪ್ರವಾದಿ ಮುಹಮ್ಮದರನ್ನು(ಸ) ಪ್ರಶ್ನಾತೀತವಾಗಿ ಒಪ್ಪಿಕೊಳ್ಳಬೇಕು ಮತ್ತು ಅವರನ್ನು ನಿಕಷಕ್ಕೆ ಒಡ್ಡುವುದು ಅಪರಾಧ ಎಂದು ಯಾವುದೇ ಜನಸಮೂಹದ ಮೇಲೆ ಒತ್ತಡವನ್ನು ಹೇರುವುದು ಸ್ವತಃ ಪ್ರವಾದಿಯವರ(ಸ) ಶಿಕ್ಷಣಕ್ಕೇ ವಿರುದ್ಧ. ಮುಹಮ್ಮದರಿಗೆ  ಪ್ರವಾದಿತ್ವ ಲಭಿಸಿದ್ದು 40ನೇ ವರ್ಷದಲ್ಲಿ. ಇಲ್ಲಿಂದ 53 ವರ್ಷಗಳ ವರೆಗೆ ಅವರು ಮಕ್ಕಾದಲ್ಲಿದ್ದರೂ ಅವರಿಗೆ ಅನುಯಾಯಿಗಳು  ಸಿಕ್ಕಿದ್ದು ಜುಜುಬಿ ಸಂಖ್ಯೆಯಲ್ಲಿ. ಆ ಬಳಿಕ ಮದೀನಕ್ಕೆ ಹೋದರು. ಮಕ್ಕಾದ ಪ್ರಮಾಣಕ್ಕೆ ಹೋಲಿಸಿದರೆ, ಅಲ್ಲಿನ ಅನುಯಾಯಿಗಳ  ಸಂಖ್ಯೆ ಹೆಚ್ಚು. ಆ ಬಳಿಕ ಪುನಃ ಮಕ್ಕಾಕ್ಕೆ ಬಂದರು. ಈ ಮೂರೂ ಹಂತಗಳು ಪ್ರವಾದಿಯವರ ಬದುಕಿನ ಬೇರೆ ಬೇರೆ  ಮಜಲುಗಳು. ಆದರೆ,
ಈ ಮೂರು ಹಂತಗಳಲ್ಲೂ ಪ್ರವಾದಿ ವಿಮರ್ಶಾತೀತರಾಗಿರಲಿಲ್ಲ. ಅವರು ಮತ್ತು ಅವರ ವಿಚಾರಧಾರೆ ವಿಮರ್ಶೆಗೆ ಒಳಗಾಗಿದೆ. ಸ್ವತಃ ಪವಿತ್ರ ಕುರ್‍ಆನೇ ಅವರ ನಿಲುವನ್ನು ಪ್ರಶ್ನಿಸಿದೆ. ತಪ್ಪು ಎಂದು ಹೇಳಿ ತಿದ್ದಿದೆ. ಪತ್ನಿಯರೇ ಪ್ರಶ್ನಿಸಿದ್ದಾರೆ. ಅವರ  ಅನುಯಾಯಿಗಳು ಅವರಿಗಿಂತ ಭಿನ್ನ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಈ ಯಾವ ಸಂದರ್ಭದಲ್ಲೂ ಪ್ರವಾದಿ ಇವುಗಳಿಗೆ ಭಾವ ನಾತ್ಮಕವಾಗಿ ಅಥವಾ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಿಲ್ಲ. ಅಂದು ಮಾತ್ರವಲ್ಲ, ಇಂದು ಕೂಡ ಜಾಗತಿಕವಾಗಿ ವಿಮರ್ಶೆ ಮತ್ತು ಪ್ರ ಶ್ನೆಗಳು ಕೇಳಿ ಬರುತ್ತಲೂ ಇವೆ. ಪ್ರವಾದಿ ಪ್ರಸ್ತುತ ಪಡಿಸಿರುವ ಆಹಾರಕ್ರಮ, ಶಿಕ್ಷಾ ನೀತಿ, ಮದ್ಯ ವಿರೋಧಿ- ಬಡ್ಡಿ ವಿರೋಧಿ  ನಿಲುವುಗಳು, ಕೌಟುಂಬಿಕ ನೀತಿ-ನಿಯಮಗಳು, ಮಹಿಳೆಯರ ಕುರಿತಾಗಿರುವ ಧೋರಣೆಗಳು, ಪವಿತ್ರ ಕುರ್‍ಆನಿನ ವಚನಗಳು...  ಎಲ್ಲವೂ ವಿಮರ್ಶೆಗೆ ಒಳಗಾಗುತ್ತಲೇ ಇವೆ ಮತ್ತು ಈ ವಿಮರ್ಶೆಗಳು ಆಕ್ರಮಣಕಾರಿ ಮತ್ತು ಭಾವನಾತ್ಮಕ ಪ್ರತಿಕ್ರಿಯೆಗಳಿಗೆ ತುತ್ತಾದದ್ದು  ಶೂನ್ಯ ಅನ್ನುವಷ್ಟು ಕಡಿಮೆ. ಹಾಗಿದ್ದರೆ,
ಡಿ.ಜೆ. ಹಳ್ಳಿಯಲ್ಲಿ ನಡೆದಿದ್ದೇನು, ಫ್ರಾನ್ಸ್ ನಲ್ಲಿ  ಅಥವಾ ಇನ್ನಿತರ ಕಡೆ ನಡೆದಿರುವುದೆಲ್ಲ ಏನು ಎಂಬ ಪ್ರಶ್ನೆ ಉದ್ಭವಿಸಬಹುದು.  ನೇರವಾಗಿ ಹೇಳುವುದಾದರೆ ಅವು ವಿಮರ್ಶೆ ಅಲ್ಲ. ವ್ಯಂಗ್ಯ, ಅಣಕ, ದೂಷಣೆ, ಅಪಹಾಸ್ಯ ಇತ್ಯಾದಿ ಇತ್ಯಾದಿಗಳು. ಆದ್ದರಿಂದ ಭಾವನಾತ್ಮಕ ಮತ್ತು ಆಕ್ರಮಣಕಾರಿ ಪ್ರತಿಕ್ರಿಯೆಗಳು ಎಂಬ ಏಕ ವಾಕ್ಯವನ್ನು ಬಿಡಿಸಿ, ಅವಲೋಕಿಸುವ ಅಗತ್ಯ ಇದೆ. ಹಾಗಂಥ,
ಇಂಥ ಪ್ರತಿಕ್ರಿಯೆಗಳು ಸಮರ್ಥನೀಯ ಎಂದಲ್ಲ. ಅವು ಖಂಡನೀಯ ಮತ್ತು ಕಾನೂನು ಪ್ರಕಾರ ಅಂಥವುಗಳಿಗೆ ಶಿಕ್ಷೆಯಾಗಬೇಕು.  ಅಂಥ ಪ್ರತಿಕ್ರಿಯೆಗಳು 
ಪ್ರವಾದಿಯವರ(ಸ) ವರ್ಚಸ್ಸಿನ ಮೇಲೆ ಹಾನಿಯೆಸಗುತ್ತವೆ ಮತ್ತು ಅಪಹಾಸ್ಯ ಮಾಡಿದವರ ಮೇಲೆಯೇ  ಸಾರ್ವಜನಿಕ ಅನುಕಂಪಕ್ಕೆ ಕಾರಣವಾಗುತ್ತದೆ.
ಇದಕ್ಕೆ ಇನ್ನೊಂದು ಮಗ್ಗುಲೂ ಇದೆ.
ಪ್ರವಾದಿ ಮುಹಮ್ಮದರು(ಸ) ನಿರ್ದಿಷ್ಟ ದಿನ, ತಿಂಗಳು, ವರ್ಷದಲ್ಲಿ ಮಾತ್ರ ಸ್ಮರಣೆಗೆ ಒಳಗಾಗಿರುವ ವ್ಯಕ್ತಿ ಅಲ್ಲ. ಅವರನ್ನು ಪ್ರತಿದಿ ನವೂ ಸ್ಮರಿಸದ, ಅವರ ವಚನಗಳನ್ನು ಉಲ್ಲೇಖಿಸದ, ಅವರ ಬಗ್ಗೆ ಅಭಿಮಾನ ಪಡದ ಒಂದೇ ಒಂದು ಮುಸ್ಲಿಮ್ ಮನೆ ಇರುವ  ಸಾಧ್ಯತೆ ಇಲ್ಲ. ಪ್ರವಾದಿಯವರು(ಸ) ಮುಸ್ಲಿಮರಿಗೆ ಅಷ್ಟು ನಿಕಟ ಮತ್ತು ಆಪ್ತ. ಇಂಥದ್ದೊಂದು ಸಂಬಂಧವನ್ನು ತನ್ನ ಸಮುದಾಯದ  ಜೊತೆ ಬೇರೆ ಯಾವುದೇ ನಾಯಕರು ಇರಿಸಿಕೊಂಡಿದ್ದಾರೋ ಎಂಬುದು ಸಂಶಯ. ಪ್ರವಾದಿಯವರ(ಸ) ಜೊತೆಗೆ ಮುಸ್ಲಿಮ್  ಸಮುದಾಯದ ಈ ನಿಕಟ ಸಂಬಂಧವೇ ಅವರ ಶೀಘ್ರ ಮತ್ತು ಕೆಲವೊಮ್ಮೆ ಆವೇಶಭರಿತ ಪ್ರತಿಕ್ರಿಯೆಗಳ ಹಿಂದಿನ ಕಾರಣ ಎಂದೂ  ಹೇಳಬಹುದು. ವಿಷಾದ ಏನೆಂದರೆ, 
ಪ್ರವಾದಿ(ಸ)ಯನ್ನು ವ್ಯಂಗ್ಯವಾಗಿ ಇರಿಯುವ, ಹೀನಾಯವಾಗಿ ಚಿತ್ರಿಸುವ ಮತ್ತು ಅವಹೇಳ ನಕಾರಿಯಾಗಿ ವಿವರಿಸುವವರು ಅವರನ್ನು(ಸ) ಆಳವಾಗಿ ಓದಿರುವುದಿಲ್ಲ ಅಥವಾ ವಿರೋಧಕ್ಕಾಗಿಯೇ ವಿರೋಧಿಸುವವರ  ಬರಹಗಳನ್ನಷ್ಟೇ ಓದಿರುತ್ತಾರೆ ಎಂಬುದು. ಇತಿಹಾಸದ ಯಾವುದೇ ವ್ಯಕ್ತಿಯನ್ನು ನೀವು ದಕ್ಕಿಸಿಕೊಳ್ಳಬೇಕಾದರೆ ಅವರನ್ನು  ವಿವರಿಸುವ ಎಲ್ಲ ಮೂಲಗಳ ಬರಹಗಳನ್ನೂ ಓದಬೇಕು. ಮುಕ್ತ ಮನಸ್ಸೂ ಬೇಕು. ಸದ್ಯ ಅಲಭ್ಯವಾಗಿರುವುದೇ ಇವೆರಡು.  ಅಂದಹಾಗೆ,
ಪ್ರವಾದಿ ಮುಹಮ್ಮದರನ್ನು ಈ ಸಮಾಜಕ್ಕೆ ಸರಿಯಾದ ರೂಪದಲ್ಲಿ ಪರಿಚಯಿಸುವುದೇ ಇಂದಿನ ದಿನಗಳಲ್ಲಿ ಪ್ರವಾದಿಯವರಿಗೆ  ಮುಸ್ಲಿಮ್ ಸಮುದಾಯ ನೀಡಬಹುದಾದ ಅತಿದೊಡ್ಡ ಗೌರವ.

Wednesday 28 October 2020

ಇಂಥ ಪೋಸ್ಟರನ್ನು ಮಸೀದಿ, ಮದ್ರಸಗಳ ಎದುರು ತೂಗು ಹಾಕೋಣ..



ಈ ಬಾರಿಯ ನೀಟ್ (NEET) ಪರೀಕ್ಷಾ ಫಲಿತಾಂಶ ಪ್ರಕಟವಾದ ಕೂಡಲೇ ನೆಟ್ಟಿಗರು ಸುದರ್ಶನ್ ಟಿ.ವಿ.ಯ ಸುರೇಶ್  ಚಾವ್ಲಾಂಕೆಯ ಕಾಲೆಳೆದಿದ್ದರು. `ನೀಟ್ ಜಿಹಾದ್' ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡು ಎಂದು ಕುಟುಕಿದ್ದರು. ಇದಕ್ಕೆ ಕಾರಣ  ಏನೆಂದರೆ, ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ಒಡಿಸ್ಸಾದ ಶುಐಬ್ ಅಖ್ತರ್ ಮೊದಲ ರಾಂಕ್  ಪಡೆದಿರುವುದು. ಒಟ್ಟು 720  ಅಂಕಗಳ ಈ ಪರೀಕ್ಷೆಯಲ್ಲಿ ಪೂರ್ತಿ 720 ಅಂಕಗಳನ್ನೂ ಪಡೆಯುವ ಮೂಲಕ ಈ ವಿದ್ಯಾರ್ಥಿ ದೇಶದ ಗಮನ ಸೆಳೆದಿದ್ದಾರೆ. 

ಈ  ಪರೀಕ್ಷಾ ಫಲಿತಾಂಶಕ್ಕಿಂತ ಒಂದು ತಿಂಗಳ ಹಿಂದಷ್ಟೇ ಸುದರ್ಶನ್ ಟಿ.ವಿ. ಸುದ್ದಿಯಲ್ಲಿತ್ತು. ಯುಪಿಎಸ್‍ಸಿ ಜಿಹಾದ್ ಎಂಬ ಹೆಸರಲ್ಲಿ  ಅದು ಕಾರ್ಯಕ್ರಮಗಳನ್ನು ಪ್ರಸಾರ ಮಾಡಿತ್ತು. ಅದೊಂದು ಸರಣಿ ಕಾರ್ಯಕ್ರಮವಾಗಿದ್ದು, 4 ಕಾರ್ಯಕ್ರಮಗಳು ಪ್ರಸಾರವಾದ  ಕೂಡಲೇ ಸುಪ್ರೀಮ್ ಕೋರ್ಟು ಮಧ್ಯಪ್ರವೇಶಿಸಿ ಮುಂದಿನ ಕಾರ್ಯಕ್ರಮದ ಮೇಲೆ ತಡೆ ವಿಧಿಸಿತ್ತು. ಯುಪಿಎಸ್‍ಸಿ ಪರೀಕ್ಷೆಯಲ್ಲಿ  ತೇರ್ಗಡೆಯಾದವರನ್ನು ವಿದೇಶಾಂಗ, ಪೊಲೀಸ್ ಸೇರಿದಂತೆ ದೇಶದ ಆಡಳಿತಾಂಗ ವ್ಯವಸ್ಥೆಗೆ ಭರ್ತಿ ಮಾಡಲಾಗುತ್ತಿದ್ದು, ಇಲ್ಲೊಂದು ಜಿಹಾದ್ ನಡೆಯುತ್ತಿದೆ ಎಂಬುದು ಚಾವ್ಲಾಂಕೆಯ ಆರೋಪವಾಗಿತ್ತು. ದೆಹಲಿಯ ಜಾಮಿಯಾ ವಿವಿ, ಮುಂಬೈಯ ಝಕಾತ್  ಫೌಂಡೇಶನ್‍ಗಳು ಮುಸ್ಲಿಮ್ ಸಮುದಾಯದ ವಿದ್ಯಾರ್ಥಿಗಳಿಗಾಗಿ ಯುಪಿಎಸ್‍ಸಿ ಪರೀಕ್ಷಾ ತರಬೇತಿ ನೀಡುವ ಮೂಲಕ ಸಂಚು  ರೂಪಿಸುತ್ತಿದೆ ಎಂಬುದು ಅವರ ವಾದವಾಗಿತ್ತು. ವಿಶೇಷ ಏನೆಂದರೆ, 

ಸಂಘಪರಿವಾರದ ಹಿಡಿತದಲ್ಲಿರುವ ಸಂಕಲ್ಪ್ ಫೌಂಡೇಶನ್  ಎಂಬ ಸಂಸ್ಥೆಯು 1986ರಿಂದಲೇ ಯುಪಿಎಸ್‍ಸಿಗಾಗಿ ಭಾರೀ ದೊಡ್ಡ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾ ಬರುತ್ತಿದೆ.  ಮಾತ್ರವಲ್ಲ, ಪ್ರತಿವರ್ಷದ ಫಲಿತಾಂಶದಲ್ಲಿ ಸಿಂಹಪಾಲು ಈ ಸಂಸ್ಥೆಯ ವಿದ್ಯಾರ್ಥಿಗಳೇ ಪಡೆಯುತ್ತಿದ್ದಾರೆ. ಯುಪಿಎಸ್‍ಸಿ ಪರೀಕ್ಷೆಯಲ್ಲಿ  ತೇರ್ಗಡೆಯಾದ ಒಟ್ಟು ವಿದ್ಯಾರ್ಥಿಗಳ ಪೈಕಿ ಸುಮಾರು 60% ವಿದ್ಯಾರ್ಥಿಗಳು ಸಂಕಲ್ಪ್ ಫೌಂಡೇಶನ್‍ನಲ್ಲಿ ತರಬೇತಿ ಪಡೆದವರೇ  ಆಗಿರುತ್ತಾರೆ. ಸುರೇಶ್ ಚಾವ್ಲಾಂಕೆ ಹೇಳದೇ ಹೋದ ಈ ಸತ್ಯವು ಬಹಿರಂಗಕ್ಕೆ ಬಂದದ್ದೂ ಯುಪಿಎಸ್‍ಸಿ ಜಿಹಾದ್ ಕಾರ್ಯಕ್ರಮದಿಂದಾಗಿ ಎಂಬುದೂ ಬಹುಮುಖ್ಯ.

ದೇಶದಲ್ಲಿ 542 ಸರಕಾರಿ ಮತ್ತು ಖಾಸಗಿ ಮೆಡಿಕಲ್ ಕಾಲೇಜುಗಳಿವೆ. ಇಲ್ಲಿರುವ ಒಟ್ಟು 80,035 ಸೀಟುಗಳನ್ನು  ತುಂಬಿಸಿಕೊಳ್ಳುವುದು ನೀಟ್ ಪರೀಕ್ಷೆಯ ಫಲಿತಾಂಶದ ಆಧಾರದಲ್ಲಿ. ವೈದ್ಯಕೀಯ (ಎಂಬಿಬಿಎಸ್) ಮತ್ತು ದಂತ ವೈದ್ಯಕೀಯ  (ಬಿಡಿಎಸ್) ಕಲಿಯಲಿಚ್ಛಿಸುವ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಕೊರೋನಾದ ಕಾರಣದಿಂದಾಗಿ ಈ ಬಾರಿ ನೀಟ್ ಪರೀಕ್ಷೆ ತೂಗುಯ್ಯಾಲೆಯಲ್ಲಿತ್ತು. ಕೊನೆಗೆ ಸೆ. 13 ಮತ್ತು 14ರಂದು ಪರೀಕ್ಷೆಗಳು ನಡೆದುವು ಮತ್ತು  ಅಕ್ಟೋಬರ್ 16ರಂದು ಫಲಿತಾಂಶವೂ ಪ್ರಕಟವಾಯಿತು. ಈ ಪರೀಕ್ಷೆ ಬರೆಯುವುದಾಗಿ ಒಟ್ಟು 15,97,435 ಮಂದಿ ತಮ್ಮ ಹೆಸರನ್ನು  ನೋಂದಾಯಿಸಿದ್ದರು. ಆದರೆ, ಪರೀಕ್ಷೆಗೆ ಹಾಜರಾಗಿರುವುದು 13,66,945 ಮಂದಿ. ಈ ವ್ಯತ್ಯಾಸಕ್ಕೆ ಮುಖ್ಯ ಕಾರಣ ಕೊರೋನಾ.  ಅಂದಹಾಗೆ, 

ಹಿಂದಿನ ವರ್ಷದಂಥ  ವಾತಾವರಣ ಈ ಬಾರಿಯದ್ದಲ್ಲ. ಸಹಜ ಸಂಚಾರಕ್ಕೂ ತೊಡಕಿದೆ. ಗುಂಪು ಕಲಿಕೆಗೂ ಅಡಚಣೆಯಿದೆ. ದೈಹಿಕ ಅಂತರ, ಮಾಸ್ಕ್,  ಸ್ಯಾನಿಟೈಸರ್ ಇತ್ಯಾದಿ ರಗಳೆಗಳ ನಡುವೆ ಈ ಬಾರಿಯ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಆದ್ದರಿಂದಲೇ, ಪರೀಕ್ಷೆಯಲ್ಲಿ  ಪೂರ್ಣಾಂಕವನ್ನು ಪಡೆದ ಶುಐಬ್ ಅಖ್ತರ್ ಮತ್ತು ದೆಹಲಿಯ ಆಕಾಂಕ್ಷಾ ಸಿಂಗ್‍ರಿಗೆ ವಿಶೇಷ ಅಭಿನಂದನೆಯನ್ನು ಸಲ್ಲಿಸಬೇಕು.  ಮುಖ್ಯವಾಗಿ ಸುರೇಶ್ ಚಾವ್ಲಾಂಕೆಯ ಯುಪಿಎಸ್‍ಸಿ ಜಿಹಾದ್ ಕಾರ್ಯಕ್ರಮಕ್ಕೆ ಸಡ್ಡು ಹೊಡೆಯಲೋ ಎಂಬಂತೆ ಶುಐಬ್ ಅಖ್ತರ್  ಅದ್ಭುತ ಸಾಧನೆ ಮಾಡಿದ್ದಾನೆ. ನೀಟ್ ಪರೀಕ್ಷೆಯಲ್ಲಿ ಮೊದಲಿಗನಾಗಿ ಗುರುತಿಸಿಕೊಳ್ಳುವುದೆಂದರೆ, ಅದು ಸುಲಭದ ಸಾಧನೆಯಲ್ಲ.  ಅಂಚಿನಲ್ಲಿರುವ ಸಮುದಾಯದ ವ್ಯಕ್ತಿ ಎಂಬ ನೆಲೆಯಲ್ಲಿ ಈ ಸಾಧನೆ ಬಹಳ ಮಹತ್ವಪೂರ್ಣ. ಅದೇರೀತಿಯಲ್ಲಿ, 12ನೇ ರಾಂಕ್  ಪಡೆದ ಕೇರಳದ ಆಯಿಷಾ, 18ನೇ ರಾಂಕ್  ಪಡೆದ ಆಂಧ್ರಪ್ರದೇಶದ ಶೈಕ್ ಕೊಥವಲ್ಲಿ, 25ನೇ ರಾಂಕ್  ಪಡೆದ ಕೇರಳದ ಸಾನಿಶ್  ಅಹ್ಮದ್, 66ನೇ ರಾಂಕ್  ಪಡೆದ ಕೇರಳದ ಫರ್‍ಹೀನ್, 8ನೇ ರಾಂಕ್  ಪಡೆದ ಉತ್ತರ ಪ್ರದೇಶದ ಮುಹಮ್ಮದ್ ಶಾಹಿದ್-  ಇವರೆಲ್ಲರನ್ನೂ ಸ್ಮರಿಸಿಕೊಳ್ಳುವುದು ಇಲ್ಲಿ ಬಹುಮುಖ್ಯ. ಇವರ ಜೊತೆಗೇ 922ನೇ ರಾಂಕ್  ಪಡೆದು ಗೋವಾಕ್ಕೆ ಟಾಪರ್ ಆಗಿ  ಮೂಡಿ ಬಂದಿರುವ ಶೈಕ್ ರುಬಿಯಾ, 2306ನೇ ರಾಂಕ್ ನೊಂದಿಗೆ ಲಕ್ಷದ್ವೀಪಕ್ಕೆ ಟಾಪರ್ ಆಗಿರುವ ಮುಹಮ್ಮದ್ ಅಫ್ರೋಜ್  ಮತ್ತು 35,673ನೇ ರಾಂಕ್  ಪಡೆದು ಲಡಾಕ್‍ಗೆ ಟಾಪರ್ ಆಗಿರುವ ಮುರ್ತಝಾ ಅಲಿಯವರನ್ನೂ ಇಲ್ಲಿ ಸ್ಮರಿಸಿಕೊಳ್ಳಬೇಕು.  ಅಂದಹಾಗೆ,

ಇವರೆಲ್ಲರನ್ನೂ ಇಲ್ಲಿ ಉಲ್ಲೇಖಿಸುವುದಕ್ಕೆ ಎರಡು ಕಾರಣಗಳಿವೆ. ಒಂದು- ಸಾಧನೆ ಎಂಬ ನೆಲೆಯಲ್ಲಿ.  ಎರಡನೆಯದ್ದು- ನಕಾರಾತ್ಮಕ  ಪ್ರತಿಕ್ರಿಯೆಗಳಿಗೆ ನೀಡಬಹುದಾದ ಸಮರ್ಪಕ ಉತ್ತರ ಎಂಬ ನೆಲೆಯಲ್ಲಿ.

ಅಷ್ಟಕ್ಕೂ, ಯುಪಿಎಸ್‍ಸಿ ಜಿಹಾದ್ ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಹೊರಟ ಸುರೇಶ್ ಚಾವ್ಲಾಂಕೆಗೆ ನಿಜ ಏನು  ಎಂಬುದು ಗೊತ್ತಿರಲಿಲ್ಲ ಎಂದಲ್ಲ. ಅಲ್ಲದೆ, ಕಳೆದ ವರ್ಷ ದೆಹಲಿಯ ಜಾಮಿಯಾ ವಿವಿಯಿಂದ ಯುಪಿಎಸ್‍ಸಿ ತೇರ್ಗಡೆಯಾದ  ಒಟ್ಟು 31 ವಿದ್ಯಾರ್ಥಿಗಳ ಪೈಕಿ 16 ಮಂದಿ ಮುಸ್ಲಿಮೇತರರಾಗಿದ್ದರು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಮಹಾನ್ ಪಾಂಡಿತ್ಯವೇನೂ  ಅಗತ್ಯವೂ ಬೇಕಾಗಿಲ್ಲ. ಕನಿಷ್ಠ ಅಕ್ಷರ ಜ್ಞಾನವುಳ್ಳ ಯಾರಿಗೂ ಗೂಗಲ್‍ನಲ್ಲಿ ಜಾಲಾಡಿದರೆ ಸಂಗತಿ ಗೊತ್ತಾಗುತ್ತದೆ. ಚಾವ್ಲಾಂಕೆಯಲ್ಲಿ  ಗೂಗಲ್ ಬ್ಯಾನ್ ಮಾಡಿಲ್ಲದೇ ಇರುವುದರಿಂದ ಅವರಿಗೂ ಈ ಮಾಹಿತಿ ಲಭಿಸಿಯೇ ಇರುತ್ತದೆ. ಮತ್ತೇಕೆ ಅವರು ಅಂಥದ್ದೊಂದು   ಕಾರ್ಯಕ್ರಮ ಮಾಡಿದರೆಂದರೆ, ಅದೊಂದು ಸಂಚು. ಮುಸ್ಲಿಮರು ನಿಧಾನಕ್ಕೆ ಶೈಕ್ಷಣಿಕವಾಗಿ ಮುಂದೆ ಬರುತ್ತಿದ್ದಾರೆ ಎಂಬುದನ್ನು  ಸಹಿಸಲು ಸಾಧ್ಯವಾಗದೇ ಹೆಣೆದಿರುವ ಸಂಚು. ಮುಸ್ಲಿಮರನ್ನು ಹಣಿಯಲು ಮತ್ತು ಕೀಳರಿಮೆ ಹಾಗೂ ಸ್ವಾಭಿಮಾನ ರಹಿತವಾಗಿ  ಬದುಕಲು ಆಡಳಿತಾತ್ಮಕವಾಗಿಯೇ ಪ್ರಯತ್ನಗಳು ನಡೆಯುತ್ತಿರುವುದರ ಹೊರತಾಗಿಯೂ ಅವರು ಸ್ವಪ್ರಯತ್ನದಿಂದ ಈ ಎಲ್ಲ  ಒತ್ತಡಗಳನ್ನು ಮೀರಿ ಚಿಮ್ಮತೊಡಗಿದ್ದಾರೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗದೇ ಹೆಣೆದ ಸಂಚು. ಹಾಗಂತ,

ಇಂಥ ಸನ್ನಿವೇಶಗಳಿಗೆ ಯಾವುದೇ ರಾಷ್ಟ್ರದ ಅಲ್ಪಸಂಖ್ಯಾತ ಸಮುದಾಯ ತುತ್ತಾಗಿರುವುದು ಇದು ಹೊಸತಲ್ಲ. ಐತಿಹಾಸಿಕವಾಗಿ,  ಇಂಥ ಘಟನೆಗಳಿಗೆ ಸಾಲು ಸಾಲು ಉದಾಹರಣೆಗಳೇ ಇವೆ. ಮಹತ್ವದ ಅಂಶ ಏನೆಂದರೆ, ಇಂಥ ಸಂದರ್ಭದಲ್ಲಿ ಈ ಪುಟ್ಟ  ಸಮುದಾಯ ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಅದರ ಆಧಾರದಲ್ಲೇ ಆ ಸಮುದಾಯದ ಸೋಲು-ಗೆಲುವು  ನಿರ್ಧಾರವಾಗುತ್ತದೆ. ಇಂಥ ಸಂದರ್ಭದಲ್ಲಿ ನಕಾರಾತ್ಮಕವಾದ ಪ್ರತಿಕ್ರಿಯೆಯನ್ನು ಸಂಚು ಹೆಣೆದವರು ಬಯಸುತ್ತಿರುತ್ತಾರೆ.  ಯುಪಿಎಸ್‍ಸಿ ಅಥವಾ ನೀಟ್‍ನಂಥ ಸ್ಮರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವುದನ್ನೇ ನಿಲ್ಲಿಸುವುದು ಅಥವಾ ಅದಕ್ಕೆ ಮಹತ್ವ ಕೊಡದಿರುವುದು ಅಥವಾ ಚಿಪ್ಪಿನೊಳಗೆ ಮುದುಡಿಕೊಂಡು ಇನ್ನಷ್ಟು ಒಂಟಿಯಾಗುವುದು ಅಥವಾ ಬಹುಸಂಖ್ಯಾತರನ್ನು ವಿರೋಧಿಸುವ,  ದ್ವೇಷಿಸುವ, ಹಗೆ ಸಾಧಿಸುವ ರೀತಿಯಲ್ಲಿ ಪ್ರತಿಕ್ರಿಯಿಸುವುದು ಸಂಚು ಹೆಣೆದವರ ಬಯಕೆಯಾಗಿರುತ್ತದೆ. ಒಂದುವೇಳೆ, ಅಲ್ಪಸಂಖ್ಯಾತ  ಸಮುದಾಯ ಇದನ್ನೇ ಉತ್ತರವಾಗಿ ಆಯ್ಕೆ ಮಾಡಿಕೊಂಡರೆ, ಆ ಬಳಿಕ ಸಂಚುಕೋರರ ಬಲೆಯೊಳಗೆ ಬಿದ್ದಂತೆ. ಸಂಚು ಹೆಣೆದಿರುವವರ ಯಶಸ್ಸು ಅಡಗಿರುವುದೇ ಈ ಬಗೆಯ ನಕಾರಾತ್ಮಕ ಮತ್ತು ದೂರದೃಷ್ಟಿ ರಹಿತ ಪ್ರತಿಕ್ರಿಯೆಗಳಲ್ಲಿ. ಆದ್ದರಿಂದಲೇ, 

ನೀಟ್ ಪರೀಕ್ಷೆಯ ಫಲಿತಾಂಶ ಮುಖ್ಯವಾಗುತ್ತದೆ. ಇದು ಯುಪಿಎಸ್‍ಸಿ ಜಿಹಾದ್ ಎಂಬಂಥ ಸಾವಿರ ಬಗೆಯ ಸಂಚನ್ನು ಹೆಣೆದಿರುವವರಿಗೆ ಮುಸ್ಲಿಮ್ ಸಮುದಾಯ ನೀಡಬಹುದಾದ ಅತ್ಯಂತ ಪರಿಣಾಮಕಾರಿ ಉತ್ತರ. ಯಾವುದೇ ಸಂಚಿಗೆ  ಸಕಾರಾತ್ಮಕ ಉತ್ತರಕ್ಕೆ ಸಮುದಾಯ ಸಿದ್ಧವಾದಾಗ ಸಂಚು ಮಾತ್ರ ವಿಫಲವಾಗುವುದಲ್ಲ, ಜೊತೆಗೇ ಆ ಸಮುದಾಯ ಬೆಳೆಯುತ್ತಲೂ  ಹೋಗುತ್ತದೆ. ಸಂಚು ಹೆಣೆದವರನ್ನೇ ವಿರೋಧಿಸುವ ಹಂತಕ್ಕೆ ಬಹುಸಂಖ್ಯಾತರನ್ನು ಈ ಸಕಾರಾತ್ಮಕ ಪ್ರತಿಕ್ರಿಯೆ ಪ್ರೇರೇಪಿಸುತ್ತದೆ.  ಸದ್ಯದ ಅಗತ್ಯ ಇದು. ಸಾಧ್ಯವಾದರೆ, ಯುಪಿಎಸ್‍ಸಿ, ನೀಟ್ ಸಹಿತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ  ಪೋಸ್ಟರ್‍ ಗಳನ್ನು ಮದ್ರಸ, ಪರೀಕ್ಷೆ ಮಸೀದಿಗಳ ಮುಂದೆ ಪ್ರದರ್ಶಿಸುವುದಕ್ಕೆ ಆಯಾ ಜಮಾಅತ್‍ಗಳು ಮುಂದೆ ಬರಲಿ. ಇದರಿಂದ  ಉಳಿದ ಮಕ್ಕಳಿಗೂ ಪ್ರೇರಣೆ ದೊರೆಯಬಹುದು. ಅವರಂತೆ ನಾವಾಗಬೇಕೆಂಬ ಕನಸನ್ನು ಹೊತ್ತುಕೊಂಡು ಈ ಮಕ್ಕಳು ನಡೆಯುವುದಕ್ಕೂ ಇದು  ಕಾರಣವಾಗಬಹುದು.

ಪರೀಕ್ಷೆಯಲ್ಲಿ ಸಾಧನೆ ಮಾಡಿದ ಎಲ್ಲರಿಗೂ ಅಭಿನಂದನೆಗಳು.

Monday 19 October 2020

ಒಂದಾನೊಂದು ಕಾಲದಲ್ಲಿ ಕಾವಲುನಾಯಿ ಇತ್ತು..


ಸನ್ಮಾರ್ಗ ಸಂಪಾದಕೀಯ 

ಮಾಧ್ಯಮಗಳಿಗೆ ಸಂಬಂಧಿಸಿ ಕಳೆದವಾರ ಎರಡು ಪ್ರಮುಖ ಬೆಳವಣಿಗೆಗಳು ನಡೆದಿವೆ. ಒಂದು- ತಬ್ಲೀಗಿ ಜಮಾಅತ್‍ಗೆ ಸಂಬಂಧಿಸಿದ್ದರೆ, ಇನ್ನೊಂದು- ಟಿಆರ್ಪಿಗೆ ಸಂಬಂಧಿಸಿದ್ದು. ಈ ಎರಡರ ಕೇಂದ್ರ ಬಿಂದುವೂ ಮಾಧ್ಯಮವೇ.

ದೇಶದಲ್ಲಿ ಮಾರ್ಚ್ 24ರಂದು ಕೇಂದ್ರ ಸರಕಾರ ದಿಢೀರ್ ಲಾಕ್‍ಡೌನ್ ಘೋಷಿಸಿದ ಬಳಿಕ ಮಾಧ್ಯಮಗಳು ಅದರಲ್ಲೂ ಟಿ.ವಿ. ವಾಹಿನಿಗಳು ಕೊರೋನಾದ ಬದಲು ತಬ್ಲೀಗಿ ಜಮಾಅತ್‍ನ ಬೆನ್ನು ಬಿದ್ದಿದ್ದುವು. ಈ ಲಾಕ್‍ಡೌನ್ ಘೋಷಣೆಯ ವೇಳೆ ತಬ್ಲೀಗಿ  ಜಮಾಅತ್‍ನ ಕೇಂದ್ರ ಕಚೇರಿಯಾದ ದೆಹಲಿಯ ನಿಝಾಮುದ್ದೀನ್ ಮರ್ಕಜ್ ನಲ್ಲಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಾವಿರಾರು  ಮಂದಿ ಸೇರಿಕೊಂಡಿದ್ದರು. ಪ್ರತಿ ತಿಂಗಳೂ ಇಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಮತ್ತು ದೇಶ-ವಿದೇಶಗಳಿಂದ ದೊಡ್ಡಮಟ್ಟದಲ್ಲಿ ಪ್ರತಿ ನಿಧಿಗಳು ಭಾಗವಹಿಸುತ್ತಾರೆ. ಈ ದಿಢೀರ್ ಲಾಕ್‍ಡೌನ್‍ನಿಂದ ಈ ಸಾವಿರಾರು ಮಂದಿ ಬಂಧನಕ್ಕೊಳಗಾದ ಸ್ಥಿತಿಗೆ ತಲುಪಿದರು.  ರೈಲು, ವಿಮಾನ ಸೇವೆಗಳು ಸ್ಥಗಿತಗೊಂಡುದು ಮಾತ್ರವಲ್ಲ, ರಸ್ತೆಗಳೂ ಮೌನವಾದುವು. ಈ ಮರ್ಕಝïಗಿಂತ ಕೇವಲ 50  ಮೀಟರ್ ದೂರದಲ್ಲೇ  ಪೊಲೀಸ್ ಠಾಣೆಯೂ ಇದೆ. ಅಲ್ಲಿಗೆ ಸ್ಥಿತಿಗತಿಯ ವಿವರಗಳನ್ನೂ ನೀಡಲಾಯಿತು. ಮರ್ಕಜ್ ನಲ್ಲಿ  ಸಿಲುಕಿಕೊಂಡವರ ಆರೋಗ್ಯ ತಪಾಸಣೆಗಾಗಿ ಸರಕಾರದ ವತಿಯಿಂದ ವ್ಯವಸ್ಥೆಯೂ ನಡೆಯಿತು. ಆದರೆ,

ಮಾರ್ಚ್ 28-29ರ ಬಳಿಕ ಒಟ್ಟು ಚಿತ್ರಣವೇ ಬದಲಾಯಿತು. ಕೊರೋನಾ ಹಾಟ್‍ಸ್ಪಾಟ್ ಕೇಂದ್ರವಾಗಿ ಮರ್ಕಝï  ಬಿಂಬಿತವಾಯಿತು. ಟಿ.ವಿ. ವಾಹಿನಿಗಳ ಕ್ಯಾಮರಾಗಳು ಅಲ್ಲೇ  ಠಿಕಾಣಿ ಹೂಡಿದುವು. ಪತ್ರಿಕೆಗಳಲ್ಲೂ ಅಸಹನೀಯ ಮತ್ತು ಸತ್ಯಕ್ಕೆ  ದೂರವಾದ ವರದಿಗಳು ಪುಂಖಾನುಪುಂಖ ಬರತೊಡಗಿದುವು. ಕೊರೋನಾ ಜಿಹಾದ್, ತಬ್ಲೀಗಿ ವೈರಸ್, ಕೊರೋನಾ ಟೆರರಿಸಂ  ಎಂಬಿತ್ಯಾದಿ ಕಡು ಕೆಟ್ಟ ಪದಪ್ರಯೋಗಳೊಂದಿಗೆ ಟಿ.ವಿ. ಮತ್ತು ಪತ್ರಿಕಾ ಮಾಧ್ಯಮಗಳು ಸುದ್ದಿಗಳನ್ನು ಕೊಡತೊಡಗಿದುವು. ತಬ್ಲೀಗಿ  ಜಮಾಅತ್‍ನ ಮುಖ್ಯಸ್ಥ ಮೌಲಾನಾ ಸಾದ್‍ರನ್ನು ಸಾವಿನ ಮೌಲಾನಾ ಎಂದೂ ಹೇಳಲಾಯಿತು. ಮರ್ಕಜ್ ಗಾಗಲಿ,  ತಬ್ಲೀಗಿಗಳಿಗಾಗಲಿ ಯಾವ ಸಂಬಂಧವೂ ಇಲ್ಲದ ಮತ್ತು ಹಳೆಯದಾದ ವೀಡಿಯೋಗಳನ್ನು ಯುಟ್ಯೂಬ್‍ನಿಂದ ಹೆಕ್ಕಿ ತೆಗೆದು ಅದನ್ನು ತಬ್ಲೀಗಿಗಳ ವೀಡಿಯೋ ಎಂದು ಪ್ರಚಾರ ಮಾಡಲಾಯಿತು. ಮೌಲಾನಾ ಸಾದ್‍ರದ್ದೆಂದು ಮುದ್ರೆಯೊತ್ತಲಾದ ಹಳೆಯ  ವೀಡಿಯೋವನ್ನು ತಿರುಚಿ ಕೊರೋನಾ ಕಾಲದ ವೀಡಿಯೋವೆಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯವಸ್ಥಿತವಾಗಿ  ಹರಿಯಬಿಡಲಾಯಿತು. ಜಗತ್ತಿನಲ್ಲಿರುವ ಎಲ್ಲ ಕೆಟ್ಟ ವೀಡಿಯೋಗಳನ್ನು, ಸುದ್ದಿಗಳನ್ನು ಹೆಕ್ಕಿಕೊಂಡು ಅದನ್ನು ತಬ್ಲೀಗಿಗಳ ತಲೆಗೆ  ಕಟ್ಟುವ ಅತ್ಯಂತ ಹೀನಾಯ ಕೃತ್ಯದಲ್ಲಿ ಮಾಧ್ಯಮದ ಮಂದಿಯೇ ತೊಡಗಿಸಿಕೊಂಡರು...  

ಈ ಸಂದರ್ಭದಲ್ಲಿ ಮಾಧ್ಯಮಗಳ ಈ  ಬೇಜವಾಬ್ದಾರಿಯುತ ಪ್ರವೃತ್ತಿಗೆ ಆಕ್ಷೇಪ ವ್ಯಕ್ತಪಡಿಸಿದ ಜಮೀಯತೆ ಉಲೆಮಾಯೆ ಹಿಂದ್, ಎಪ್ರಿಲ್ 6ರಂದು ಸುಪ್ರೀಮ್ ಕೋರ್ಟಿನ  ಬಾಗಿಲು ಬಡಿಯಿತು. ಮಾಧ್ಯಮಗಳು ಕೊರೋನಾವನ್ನು ಕೋಮುವಾದೀಕರಣಗೊಳಿಸಿದೆ ಮತ್ತು ಅವುಗಳ ವಿರುದ್ಧ ಕ್ರಮ  ಕೈಗೊಳ್ಳಬೇಕು ಎಂದು ಅದು ದೂರಿನಲ್ಲಿ ಮನವಿ ಮಾಡಿಕೊಂಡಿತು. ಕಳೆದವಾರ ಈ ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ಸುಪ್ರೀಮ್  ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಅವರ ನೇತೃತ್ವದಲ್ಲಿ ಮೂವರು ಸದಸ್ಯರ ಪೀಠವು ಕೇಂದ್ರ ಸರಕಾರವನ್ನು ತರಾಟೆಗೆ  ಎತ್ತಿಕೊಂಡಿದೆ. ಕೋರ್ಟನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಎಚ್ಚರಿಸಿದೆ. ಇದೇ ಸಂದರ್ಭದಲ್ಲಿ 

ಹಾರಾಷ್ಟ್ರ ಹೈಕೋರ್ಟೂ  ಮಾಧ್ಯಮಗಳ ಮೇಲೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ. ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಮಾಧ್ಯಮಗಳ  ವರ್ತನೆ ಸರಿಯಾಗಿರಲಿಲ್ಲ ಎಂದೂ ಹೇಳಿದೆ. ಹೇಗೆ ತನಿಖೆ ಮಾಡಬೇಕು ಎಂಬುದನ್ನು ನಿರ್ಧರಿಸಬೇಕಾದವರು ಯಾರು- ತ ನಿಖಾಧಿಕಾರಿಯೋ ಅಥವಾ ಮಾಧ್ಯಮವೋ ಎಂದು ಖಾರವಾಗಿ ಪ್ರಶ್ನಿಸಿದೆ. ವಿಶೇಷ ಏನೆಂದರೆ,

ಇದೇ ಸಂದರ್ಭದಲ್ಲಿ ಆಜ್‍ತಕ್, ಝೀನ್ಯೂಸ್, ನ್ಯೂಸ್ 24 ಮತ್ತು ಇಂಡಿಯಾ ಟಿ.ವಿ.ಗಳು ಕ್ಷಮೆ ಯಾಚಿಸಬೇಕೆಂದು ಸುದ್ದಿ ಪ್ರಸಾರ  ಮಾನದಂಡಗಳ ಪ್ರಾಧಿಕಾರ (NBSA) ಸೂಚಿಸಿರುವುದು. ಅಲ್ಲದೇ, ನಕಲಿ ಟ್ವೀಟ್ ಮಾಡಿರುವುದಕ್ಕಾಗಿ ಆಜ್‍ತಕ್ ಟಿ.ವಿ.ಗೆ 1 ಲಕ್ಷ  ರೂಪಾಯಿ ದಂಡವನ್ನೂ ವಿಧಿಸಿದೆ. ಸುಶಾಂತ್ ಪ್ರಕರಣವನ್ನು ಸಂವೇದನಾರಹಿತವಾಗಿ ಈ ಎಲ್ಲ ಟಿ.ವಿ. ಚಾನೆಲ್‍ಗಳು ಪ್ರಸಾರ  ಮಾಡಿವೆ ಎಂದು NBSA ದೂಷಿಸಿದೆ. ಇದರ ಜೊತೆಗೇ ಇನ್ನೊಂದು ಪ್ರಮುಖ ಬೆಳವಣಿಗೆಯೂ ನಡೆದಿದೆ. ಅದೇನೆಂದರೆ,  ಮುಂಬೈ ಪೊಲೀಸ್ ಆಯುಕ್ತ ಪರಮ್‍ವೀರ್ ಸಿಂಗ್ ನಡೆಸಿದ ಪತ್ರಿಕಾಗೋಷ್ಠಿ. ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್‍ ಪಿ)ಗಾಗಿ  ರಿಪಬ್ಲಿಕ್ ಟಿ.ವಿ. ಸಹಿತ ಮೂರು ಚಾನೆಲ್‍ಗಳು ವಂಚನೆಯ ದಾರಿಯನ್ನು ಹಿಡಿದಿವೆ ಎಂಬುದಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ  ಬಹಿರಂಗಪಡಿಸಿದ್ದಾರೆ.

ಟಿಆರ್‍ ಪಿ  ಎಂಬುದು ಟಿ.ವಿ.ಗಳ ಜಾಹೀರಾತು ದರವನ್ನು ನಿರ್ಧರಿಸುವ ಮಾನದಂಡ. ನಿಗದಿತ ಅವಧಿಯಲ್ಲಿ ಎಷ್ಟು ಮಂದಿ ಯಾವ  ಟಿ.ವಿ. ಚಾನೆಲ್‍ನ ಯಾವ ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ ಆ ಮತ್ತು ಆ ಕಾರ್ಯಕ್ರಮವನ್ನು ಎಷ್ಟು ಸಮಯ ನೋಡುತ್ತಾರೆ  ಎಂಬುದನ್ನು ಆಧರಿಸಿ ಟಿಆರ್‍ಪಿ ನಿಗದಿಯಾಗುತ್ತದೆ. ಟಿಆರ್‍ಪಿಯು ಜಾಹೀರಾತು ದರವನ್ನು ನಿಗದಿ ಮಾಡುವ  ಸಂಗತಿಯಾಗಿರುವುದರಿಂದ ಭಾರತೀಯ ಬ್ರಾಡ್‍ಕಾಸ್ಟಿಂಗ್ ಫೌಂಡೇಶನ್ ಜೊತೆ ವಿವಿಧ ಭಾರತೀಯ ಜಾಹೀರಾತು ಏಜೆನ್ಸಿಗಳು  ಸೇರಿಕೊಂಡು ಬ್ರಾಡ್‍ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC)ನ್ನು ಸ್ಥಾಪಿಸಿವೆ. ದೇಶದೆಲ್ಲೆಡೆ ಆಯ್ದ 44 ಸಾವಿರ ಮನೆಗಳ  ಟಿವಿ ಸೆಟ್ ಬಾಕ್ಸ್‍ಗಳ ಜೊತೆ ಬಾರೋಮೀಟರ್ ಎಂಬ ವಿಶೇಷ ಸಾಧನವನ್ನು ಈ ಃಂಖಅ ಸಂಸ್ಥೆ ಅಳವಡಿಸುತ್ತದೆ. ಮತ್ತು ಈ  ಮನೆಗಳಿಂದ ಪಡೆಯಲಾಗುವ ದತ್ತಾಂಶವನ್ನು ಇಡೀ ದೇಶಕ್ಕೆ ಅನ್ವಯಿಸಲಾಗುತ್ತದೆ. ಆದ್ದರಿಂದಲೇ ಒಂದು ವಾಹಿನಿಯು ತಮ್ಮ  ಕಾರ್ಯಕ್ರಮ ವೀಕ್ಷಿಸುವಂತೆ ಒಂದೆರಡು ಮನೆಗಳನ್ನು ಪುಸಲಾಯಿಸಿದರೂ ಸಾಕು, ಲಕ್ಷಾಂತರ ಮಂದಿ ವೀಕ್ಷಿಸಿದ ದತ್ತಾಂಶ  ಲಭ್ಯವಾಗುವುದಲ್ಲದೇ, ಭಾರೀ ಮಟ್ಟದಲ್ಲಿ ಟಿಆರ್‍ಪಿ ಏರಿಕೆ ಆಗುತ್ತದೆ. ಹಾಗಂತ, 

ಬಾರೋಮೀಟರ್ ಅಳವಡಿಸಲಾಗಿರುವ ಮ ನೆಗಳೂ ನಿಗೂಢವಾಗಿರುವುದಿಲ್ಲ. ಯಾವ ಮನೆಯಲ್ಲಿ ಬಾರೋಮೀಟರ್ ಅಳವಡಿಸಲಾಗಿದೆಯೋ ಅವರಿಗೆ ಪ್ರತ್ಯೇಕ ಗುರುತಿನ  ಬಟನ್ ನೀಡಲಾಗುತ್ತದೆ. ಅವರು ಟಿ.ವಿ. ನೋಡುವ ಸಮಯದಲ್ಲಿ ತಮ್ಮ ಗುರುತಿನ ಬಟನ್ ಒತ್ತಬೇಕು. ಆಗ ಆ ವ್ಯಕ್ತಿ ಯಾವ  ಕಾರ್ಯಕ್ರಮ ವೀಕ್ಷಿಸುತ್ತಿದ್ದಾರೆ ಎಂಬುದು ಬಾರೋ ಮೀಟರ್‍ನಲ್ಲಿ ದಾಖಲಾಗುತ್ತದೆ. ಈಗಿರುವ ಆರೋಪ ಏನೆಂದರೆ, ಇಂಥ ಮ ನೆಗಳನ್ನು ರಿಪಬ್ಲಿಕ್ ಸಹಿತ ಮೂರು ಚಾನೆಲ್‍ಗಳು ಸಂಪರ್ಕಿಸಿವೆ. ತಮ್ಮ ಚಾನೆಲ್‍ನ ಕಾರ್ಯಕ್ರಮಗಳನ್ನೇ ವೀಕ್ಷಿಸುವಂತೆ ಅವರಿಗೆ  ಹಣ ನೀಡಿವೆ. ಆ ಮೂಲಕ ಕಳ್ಳದಾರಿಯಲ್ಲಿ ಟಿಆರ್‍ಪಿ ಹೆಚ್ಚಿಸಿಕೊಂಡಿವೆ.

ಮಾಧ್ಯಮಗಳು ಪ್ರಾಮಾಣಿಕವಾಗಿಲ್ಲ ಎಂಬುದು ಈ ಟಿಆರ್‍ಪಿ ವಿವಾದಕ್ಕಿಂತ ಮೊದಲೇ ಈ ದೇಶದ ಜನರಿಗೆ ಗೊತ್ತಿತ್ತು. ನಿರ್ದಿಷ್ಟ  ವಿಚಾರಧಾರೆಯ ಮತ್ತು ಪಕ್ಷದ ಪರ ಹಾಗೂ ನಿರ್ದಿಷ್ಟ ಸಮುದಾಯದ ವಿರುದ್ಧ ದೇಶದ ಪ್ರಮುಖ ಹಿಂದಿ ಮತ್ತು ಇಂಗ್ಲಿಷ್ ಚಾನೆಲ್‍ಗಳು ಅಸಂಖ್ಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ಬಂದಿರುವುದು ಮತ್ತು ಬರುತ್ತಿರುವುದೂ ಎಲ್ಲರಿಗೂ ಗೊತ್ತು.  ಮುಂಬೈ ಪೊಲೀಸ್ ಆಯುಕ್ತರು ಈ ಅಭಿಪ್ರಾಯಕ್ಕೆ ಪುಷ್ಠಿಯನ್ನಷ್ಟೇ ನೀಡಿದ್ದಾರೆ. ಮಾಧ್ಯಮಗಳು ಸಾರ್ವಜನಿಕರನ್ನು ವಂಚಿಸುತ್ತಿವೆ  ಎಂಬುದಕ್ಕೆ ಅವರು ಸಾಕ್ಷ್ಯ ಸಮೇತ ಆಧಾರವನ್ನು ಕೊಟ್ಟಿದ್ದಾರೆ. ಇದೇವೇಳೆ, ಸುಪ್ರೀಮ್ ಕೋರ್ಟು ಮತ್ತು ಮುಂಬೈ  ಹೈಕೋರ್ಟ್‍ಗಳೂ ಮಾಧ್ಯಮಗಳ ಕಾರ್ಯನಿರ್ವಹಣೆಯ ಮೇಲೆ ಅಸಮಾಧಾನ ಸೂಚಿಸಿವೆ. NBSA ಅಂತೂ ಪ್ರಮುಖ ಟಿ.ವಿ.  ಚಾನೆಲ್‍ನ ಮೇಲೆಯೇ ದಂಡ ಹಾಕಿದೆ. ಕ್ಷಮೆ ಯಾಚಿಸುವಂತೆ ಹಲವು ಚಾನೆಲ್‍ಗಳಿಗೆ ಆಗ್ರಹಿಸಿದೆ. ಇವೆಲ್ಲ ಈ ದೇಶದ  ಮಾಧ್ಯಮಗಳ ಹೀನಾಯ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.
ಪ್ರಜಾತಂತ್ರದ ಕಾವಲುನಾಯಿ ಎಂಬ ಗೌರವದಿಂದ ಆಡಳಿತಗಾರರ ಸಾಕು ನಾಯಿ ಎಂಬ ಅವಮಾನದೆಡೆಗೆ ಭಾರತೀಯ  ಮಾಧ್ಯಮಗಳು ಸಾಗಿರುವುದು ಅತ್ಯಂತ ವಿಷಾದಕರ, ಆಘಾತಕಾರಿ ಮತ್ತು ದುಃಖಕರ ಸಂಗತಿ. ಜನಾಕ್ರೋಶವೇ ಇದನ್ನು  ಬದಲಾಯಿಸುವುದಕ್ಕಿರುವ ಸೂಕ್ತ ದಾರಿ.

Saturday 17 October 2020

ದಣಿಗಳ ಬೆನ್ನು ಮಾಲೀಶು ಮಾಡುವ ಕಾನೂನು



ರೈತರಿಗೆ ಸಂಬಂಧಿಸಿದ 3 ಮಸೂದೆಗಳು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಧ್ವನಿಮತದಿಂದ  ಅಂಗೀಕಾರಗೊಂಡು ಇದೀಗ ರಾಷ್ಟ್ರಪತಿಯವರೂ ಸಹಿ ಹಾಕುವುದರೊಂದಿಗೆ ಕಾನೂನಾಗಿ  ಪರಿವರ್ತನೆಯಾಗಿದೆ. ವಿಶೇಷ ಏನೆಂದರೆ, ಈ ಮೂರೂ ಮಸೂದೆಗಳನ್ನು ಜಾರಿಗೊಳಿಸಿದ್ದು ಕಳೆದ  ಜೂನ್ ತಿಂಗಳಲ್ಲಿ- ಸುಗ್ರೀವಾಜ್ಞೆಯ ಮೂಲಕ. ಇದನ್ನು ವಿರೋಧಿಸಿ ರೈತರು ಬೀದಿಗಿಳಿದ  ಸಂದರ್ಭದಲ್ಲೇ  ಪ್ರತಿಪಕ್ಷಗಳ ಆಕ್ಷೇಪವನ್ನು ಪರಿಗಣಿಸದೇ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ  ಅಂಗೀಕರಿಸಿಕೊಂಡ ಕೇಂದ್ರ ಸರಕಾರ, ಅಷ್ಟಕ್ಕೇ ಸಾಕು ಮಾಡದೇ ರೈತರು ಕರೆ ನೀಡಿರುವ ಕ ರ್ನಾಟಕ ಬಂದ್‍ಗಿಂತ ಒಂದು ದಿನ ಮೊದಲೇ ರಾಷ್ಟ್ರಪತಿಯವರಿಂದಲೂ ಅಂಗೀಕಾರ  ಪಡೆದುಕೊಂಡಿದೆ. ನಿಜಕ್ಕೂ ಕೇಂದ್ರ ಸರಕಾರವು ತನ್ನ ಮೂರು ಮಸೂದೆಗಳಾದ ರೈತರ ಉತ್ಪನ್ನ  ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ, ಬೆಲೆ ಭರವಸೆ ಮತ್ತು ಕೃಷಿ  ಸೇವೆಗಳ ಕುರಿತು ರೈತರ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಮಸೂದೆ ಹಾಗೂ ಅಗತ್ಯ  ಸಾಮಗ್ರಿಗಳ (ತಿದ್ದುಪಡಿ) ಮಸೂದೆಗಳ ಬಗ್ಗೆ ಪ್ರಾಮಾಣಿಕವಾಗಿದ್ದಿದ್ದರೆ, ಅದರ ಜಾರಿಗೆ ಇಷ್ಟೊಂದು  ಅವಸರದ ಅಗತ್ಯ ಏನಿತ್ತು? ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತರಬೇಕಾದ ಯಾವ ಅ ನಿವಾರ್ಯತೆ ಸೃಷ್ಟಿಯಾಗಿತ್ತು? ರಾಜ್ಯಸಭೆಯ 8 ಸದಸ್ಯರನ್ನು ಅಮಾನತು ಮಾಡಿ ಮತ್ತು ವಿಪಕ್ಷ  ಸದಸ್ಯರ ಮೈಕ್ ಅನ್ನು ಮ್ಯೂಟ್ ಮಾಡಿ ಮಸೂದೆಯನ್ನು ಅಂಗೀಕರಿಸಿಕೊಂಡ ಉದ್ದೇಶವೇನು?  ಅಂದಹಾಗೆ, ಸರಕಾರದ ಮೇಲೆ ಇಂಥದ್ದೊಂದು ಒತ್ತಡವನ್ನು ರೈತರು ತಂದಿಲ್ಲ. ವಿಪಕ್ಷಗಳೂ ತಂದಿಲ್ಲ. ಹಾಗಿದ್ದರೆ, ಈ ಮಸೂದೆಗಳನ್ನು ತರಾತುರಿಯಿಂದ ಜಾರಿ ಮಾಡುವಂತೆ ಸರಕಾರದ ಮೇಲೆ  ಒತ್ತಡ ಹಾಕಿದವರು ಯಾರು? ಅವರಿಗೂ ಸರಕಾರಕ್ಕೂ ಏನು ಸಂಬಂಧ?

ಈ ದೇಶದ ರೈತರಿಗೂ ಕೃಷಿ ಉತ್ಪನ್ನ ಮಾರಾಟ ಸಮಿತಿಗಳಿಗೂ (ಎಪಿಎಂಸಿ) ಬಿಟ್ಟಿರಲಾರದ  ನಂಟಿದೆ. ರೈತರು, ಮಧ್ಯವರ್ತಿಗಳು ಮತ್ತು ವ್ಯಾಪಾರಿಗಳನ್ನು ಒಳಗೊಂಡಿರುವ ಈ ಸಮಿತಿಗಳಿಂದ  ರೈತರಿಗೆ ಆಗುವ ಲಾಭ ಏನೆಂದರೆ, ಅವರ ಬೆಳೆಗಳಿಗೆ ಖಚಿತ ಆದಾಯವನ್ನು ಇವು ಖಾತರಿ ಪಡಿಸುತ್ತವೆ. ಸರಕಾರ ಕನಿಷ್ಠ ಬೆಂಬಲ ಬೆಲೆಯನ್ನು ಕೊಟ್ಟು ಈ ಮಂಡಿಗಳಿಂದ ಸರಕುಗಳನ್ನು  ಖರೀದಿಸುತ್ತದೆ ಮತ್ತು ದೇಶದಾದ್ಯಂತದ ಮಾರುಕಟ್ಟೆಗಳಿಗೆ ವಿತರಿಸುತ್ತದೆ. ಇದು ಈಗಿನ ವ್ಯವಸ್ಥೆ.  ಇಲ್ಲಿಂದ ಖರೀದಿಸಲಾದ ಆಹಾರ ಉತ್ಪನ್ನಗಳನ್ನು ಸಂಗ್ರಹಿಸಿಡುವುದು ಮತ್ತು ರಿಯಾಯಿತಿ ದರದಲ್ಲಿ  ದೇಶದ ಜನರಿಗೆ ಒದಗಿಸುವ ವ್ಯವಸ್ಥೆಯನ್ನೂ ಸರಕಾರ ಮಾಡುತ್ತಿದೆ. ಈ ದೇಶದಲ್ಲಿ ಇಂಥ 7000  ಎಪಿಎಂಸಿಗಳಿವೆ. ಅಲ್ಲದೇ, ಗೋಧಿ ಮತ್ತು ಅಕ್ಕಿಯನ್ನು ಬೆಳೆಯುವ ಬಹುಮುಖ್ಯ ರಾಜ್ಯಗಳೆಂದರೆ  ಪಂಜಾಬ್ ಮತ್ತು ಹರ್ಯಾಣ. ಪಂಜಾಬಿನ ಒಟ್ಟು ಗೋಧಿ ಮತ್ತು ಅಕ್ಕಿ ಉತ್ಪಾದನೆಯ ಪೈಕಿ 85%  ಮತ್ತು ಹರ್ಯಾಣದ 75% ಉತ್ಪನ್ನವು ಮಾರಾಟವಾಗುವುದೇ ಎಪಿಎಂಸಿಗಳ ಮೂಲಕ. ಅಂದರೆ  ಸರಕಾರದ ಕನಿಷ್ಠ ಬೆಂಬಲ ಬೆಲೆಯನ್ನು ಆಶ್ರಯಿಸಿಯೇ ರೈತರು ಬೆಳೆ ಬೆಳೆಯುತ್ತಿದ್ದಾರೆ.  ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದರೂ ಸರಕಾರವು ಕನಿಷ್ಠ ಬೆಂಬಲ ಬೆಲೆ ನೀಡುವ ಮೂಲಕ  ರೈತರನ್ನು ಆದರಿಸುವ ಕ್ರಮ ಎಪಿಎಂಸಿ ಮೂಲಕ ಮಾಡುತ್ತಿದೆ. ಆದ್ದರಿಂದಲೇ,
 
ಸದ್ಯ ಮೂರು  ಮಸೂದೆಗಳ ಮೇಲೆ ಎದ್ದಿರುವ ಆಕ್ಷೇಪಗಳಲ್ಲಿ ಈ ಕನಿಷ್ಠ ಬೆಂಬಲ ಬೆಲೆಗೆ ಮುಖ್ಯ ಪಾತ್ರ ಇದೆ.  ಈ ಮಸೂದೆಗಳ ಪ್ರಕಾರ, ಇನ್ನು ಮುಂದೆ ರೈತರು ತಮ್ಮ ಬೆಳೆಯನ್ನು ಮಾರಾಟ ಮಾಡಲು  ಎಪಿಎಂಸಿಯನ್ನು ಆಶ್ರಯಿಸಬೇಕಿಲ್ಲ. ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಹಾಗೆ  ಮಾರಾಟ ಮಾಡುವ ರೈತರನ್ನು ಆಕ್ಷೇಪಿಸುವ ಯಾವ ಹಕ್ಕೂ ಎಪಿಎಂಸಿಗಳಿಗೆ ಇಲ್ಲ. ನಾಳೆ  ಯಾವುದೇ ಕಾರ್ಪೋರೇಟ್ ಕಂಪೆನಿ ಬಂದು ರೈತರಿಂದ ನೇರವಾಗಿ ಉತ್ಪನ್ನ ಖರೀದಿಸಬಹುದು.  ಎಪಿಎಂಸಿಗಿಂತ ಹೆಚ್ಚಿನ ಬೆಲೆಯನ್ನು ಕೊಟ್ಟು ಅವು ಖರೀದಿಸುವುದಕ್ಕೂ ಅವಕಾಶ ಇದೆ.  ಒಂದುವೇಳೆ, ಈ ಕಂಪೆನಿಗಳು ಎಪಿಎಂಸಿ ನಿಗದಿಪಡಿಸಿದ ಬೆಲೆಗಿಂತ ಕಡಿಮೆ ಬೆಲೆಯನ್ನು ನಿಗದಿ ಪಡಿಸಿದರೆ ರೈತ ತನ್ನ ಉತ್ಪನ್ನಗಳನ್ನು ಅವರಿಗೆ ಮಾರದೇ ಎಪಿಎಂಸಿಗಳ ಮೂಲಕವೇ  ಮಾರಬಹುದು ಎಂಬ ಅವಕಾಶವೂ ಮಸೂದೆಯಲ್ಲಿದೆ. ಒಂದುರೀತಿಯಲ್ಲಿ, ಮುಕ್ತ ಮಾರುಕಟ್ಟೆಗೆ  ರೈತರನ್ನು ದೂಡುವ ಪ್ರಯತ್ನ ಇದು ಎಂಬುದು ಸ್ಪಷ್ಟ. ಆದರೆ,

ರೈತರ ಆತಂಕವಿರುವುದೂ ಇಲ್ಲೇ. ಬೃಹತ್ ಕಾರ್ಪೋರೇಟ್ ಕಂಪೆನಿಗಳು ನಾಳೆ ರೈತರಿಂದ ಹೆಚ್ಚಿನ  ಬೆಲೆಗೆ ಉತ್ಪನ್ನಗಳನ್ನು ಖರೀದಿಸಬಹುದು. ಇದರಿಂದ ಉತ್ತೇಜಿತಗೊಳ್ಳುವ ರೈತರು ಎಪಿಎಂಸಿಯ ನ್ನು ನಿರ್ಲಕ್ಷಿಸಿ ಕಂಪೆನಿಗಳನ್ನೇ ಆಶ್ರಯಿಸಬಹುದು. ಇದರಿಂದಾಗಿ ಕೆಲವೇ ವರ್ಷಗಳಲ್ಲಿ  ಎಪಿಎಂಸಿಗಳು ನಾಶವಾಗಬಹುದು. ಇದರ ಬಳಿಕ ಕಾರ್ಪೋರೇಟ್ ಕಂಪೆನಿಗಳು ತಮ್ಮ ನಿಜವಾದ  ಮುಖವನ್ನು ಪ್ರದರ್ಶಿಸುವುದಕ್ಕೆ ಪ್ರಾರಂಭಿಸಬಹುದು. ರೈತರ ಉತ್ಪನ್ನಗಳಿಗೆ ತೀರಾ ಕನಿಷ್ಠ ಬೆಲೆಯನ್ನು ನಿಗದಿಗೊಳಿಸಿ, ಇಕ್ಕಟ್ಟಿಗೆ ಸಿಲುಕಿಸಬಹುದು. ಆದರೆ, ಇದನ್ನು ತಿರಸ್ಕರಿಸಿ ಎಪಿಎಂಸಿಗೆ  ಹೋಗುವ ಅವಕಾಶವೂ ಇರುವುದಿಲ್ಲ. ಯಾಕೆಂದರೆ, ಅದು ಆ ಮೊದಲೇ ನಾಶವಾಗಿರುತ್ತದೆ. ಆ  ಮೂಲಕ ಸರಕಾರ ಆವರೆಗೆ ರೈತ ಉತ್ಪನ್ನಗಳಿಗೆ ನೀಡುತ್ತಾ ಬಂದಿರುವ ಕನಿಷ್ಠ ಬೆಂಬಲ ಬೆಲೆಯೂ  ತನ್ನಿಂತಾನೇ ನಿಂತು ಹೋಗಿರುತ್ತದೆ. ಆದ್ದರಿಂದ ರೈತ ಅನ್ಯದಾರಿಯಿಲ್ಲದೇ ಕಾರ್ಪೋರೇಟ್ ಕಂಪೆ ನಿಗಳು ನಿಗದಿಗೊಳಿಸಿದ ಬೆಲೆಗೆ ತನ್ನ ಉತ್ಪನ್ನಗಳನ್ನು ಮಾರಲೇಬೇಕಾಗುತ್ತದೆ. ಬೆಳೆಯನ್ನು  ಬೆಳೆಯುವುದಕ್ಕೆ ತಗಲುವ ವೆಚ್ಚವು ಉತ್ಪನ್ನ ಮಾರಾಟದಲ್ಲಿ ಸರಿದೂಗದೇ ಹೋದಾಗ ರೈತ  ಒಂದೋ ಆತ್ಮಹತ್ಯೆ ಮಾಡಿಕೊಳ್ಳಬೇಕು ಅಥವಾ ತನ್ನ ಜಮೀನನ್ನು ಕಾರ್ಪೋರೇಟ್ ಕಂಪೆನಿಗಳಿಗೆ  ಬಿಟ್ಟುಕೊಟ್ಟು ಕೂಲಿಯಾಳಾಗಿ ದುಡಿಯಬೇಕು. ಒಂದುರೀತಿಯಲ್ಲಿ ಇದು ಪುನಃ ಹಿಮ್ಮುಖವಾಗಿ  ಚಲಿಸಿದಂತೆ. 

ಉಳುವವನೇ ಹೊಲದೊಡೆಯ ಎಂಬ ಕಾನೂನು ಜಾರಿಗೊಳ್ಳುವ ಮೊದಲು ಈ  ದೇಶದಲ್ಲಿ ಬೃಹತ್ ಜಮೀನ್ದಾರರು ಮತ್ತು ಕೂಲಿಯಾಳುಗಳು ಎಂಬ ಪದ್ಧತಿ ಚಾಲ್ತಿಯಲ್ಲಿತ್ತು. ದಣಿ  ಮತ್ತು ಒಕ್ಕಲು ಎಂಬುದಾಗಿ ಸಾಮಾನ್ಯವಾಗಿ ಅದು ಗುರುತಿಸಿಕೊಳ್ಳುತ್ತಿತ್ತು. ಜಮೀನ್ದಾರ ಕೂತು  ಉಣ್ಣುತ್ತಿದ್ದ. ಆತನ ಜಮೀನಿನಲ್ಲಿ ಹಗಲೂ ರಾತ್ರಿ ಬೆವರು ಸುರಿಸುವ ರೈತ ಮತ್ತು ಕಾರ್ಮಿಕ ಋಣ  ಸಂದಾಯದಲ್ಲೇ  ಆಯುಷ್ಯವನ್ನು ಕಳೆಯುತ್ತಿದ್ದ. ಕೇಂದ್ರ ಸರಕಾರದ ಈ ಮಸೂದೆಗಳು  ಸುಮಾರಾಗಿ ರೈತರನ್ನು ಅದೇ ಸ್ಥಿತಿಗೆ ದೂಡುವ ಎಲ್ಲ ಸಾಧ್ಯತೆಗಳಿವೆ ಅನ್ನುವುದು ರೈತರ ಆತಂಕ.  ಅಲ್ಲದೇ ಕರ್ನಾಟಕದಲ್ಲಿ ಭೂಸುಧಾರಣಾ ಕಾಯ್ದೆಯನ್ನು ಇದರ ಜೊತೆಗೇ ಅಂಗೀಕರಿಸಲಾಗಿದೆ.  ರೈತರ ಕೃಷಿ ಭೂಮಿಯನ್ನು ಕಾರ್ಪೋರೇಟ್ ದೊರೆಗಳಿಗೆ ಖರೀದಿಸುವ ಅವಕಾಶ ಇನ್ನು ಮುಂದೆ  ಈ ಕಾಯ್ದೆಯ ಮೂಲಕ ಲಭ್ಯವಾಗಲಿದೆ. ಒಂದುಕಡೆ ರೈತರ ಉತ್ಪನ್ನಗಳನ್ನು ನೇರವಾಗಿ ಈ ಕಂ ಪೆನಿಗಳಿಗೆ ಖರೀದಿಸಲು ಮುಕ್ತ ಅವಕಾಶ ನೀಡುತ್ತಾ, ಇನ್ನೊಂದು ಕಡೆ ಇದೇ ಕಂಪೆನಿಗಳಿಗೆ ರೈತರ  ಕೃಷಿ ಭೂಮಿಯನ್ನು ಖರೀದಿಸುವುದಕ್ಕೂ ಬಾಗಿಲು ತೆರೆದುಕೊಂಡಂತಾಗುತ್ತದೆ. ಇದರಿಂದ ರೈತರಿಗೆ  ಲಾಭವಾಗುವ ಬದಲು ಅಂತಿಮವಾಗಿ ಅವರನ್ನು ಶೋಷಿಸುವುದಕ್ಕೆ ಈ ಕಂಪೆನಿಗಳಿಗೆ ಅವಕಾಶ  ಒದಗಬಹುದು ಎಂಬ ಭಯ ರೈತರಲ್ಲಿದೆ. ಈ ಆತಂಕ ನಿರ್ಲಕ್ಷಿಸುವಂಥದ್ದೂ ಅಲ್ಲ. ಆದ್ದರಿಂದ,  ಸರಕಾರಕ್ಕೆ ರೈತರ ಮೇಲೆ ಕಾಳಜಿ ಇರುವುದೇ ಆಗಿದ್ದಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು  ಎಪಿಎಂಸಿಯಂತೆಯೇ ಎಪಿಎಂಸಿ ಹೊರಗೂ ನಿಗದಿಗೊಳಿಸಿದರೆ ಮತ್ತು ಸರಕಾರ ನಿಗದಿಪಡಿಸುವ  ಬೆಲೆಗಿಂತ ಕಡಿಮೆ ಬೆಲೆಗೆ ಯಾವ ಕಾರ್ಪೋರೇಟ್ ಕಂಪೆನಿಯೂ ರೈತರಿಂದ ಉತ್ಪನ್ನ ಖರೀ ದಿಸದಂತೆ ಮಾಡುವ ನಿಯಮಗಳನ್ನು ಈ ಮಸೂದೆಗಳಲ್ಲಿ ಸೇರಿಸಬೇಕಿತ್ತು. ಹೀಗಾದರೆ ರೈತರನ್ನು  ಶೋಷಿಸುವುದಕ್ಕೆ ಕಂಪೆನಿಗಳಿಗೆ ಅವಕಾಶ ಇಲ್ಲದಂತಾಗುತ್ತದೆ. ವಿಪಕ್ಷಗಳೂ ಇದೇ ಬೇಡಿಕೆಯನ್ನು  ಮುಂದಿಟ್ಟಿವೆ.

ಬಹುಶಃ ಕೇಂದ್ರ ಸರಕಾರದ ಈಗಿನ ಅವಸರವನ್ನು ಮತ್ತು ದಮನಕಾರಿ ನೀತಿಯನ್ನು ನೋಡಿದರೆ  ಈ ಮೂಲ ಕಾನೂನುಗಳು ರೈತರ ಬದಲು ಕಾರ್ಪೋರೇಟ್ ಕಂಪೆನಿಗಳ ಹಿತವನ್ನು ದೃಷ್ಟಿಯ ಲ್ಲಿಟ್ಟುಕೊಂಡು ರೂಪಿಸಿರುವಂತಿದೆ. ರೈತರನ್ನು ದೇಶದ ಬೆನ್ನೆಲುಬು ಎಂದು ಕೊಂಡಾಡುತ್ತಲೇ ಉ ಪಾಯವಾಗಿ ಅವರ ಬೆನ್ನೆಲುಬನ್ನು ಮುರಿದು ಕಾರ್ಪೋರೇಟ್ ದಣಿಗಳ ಬೆನ್ನೆಲುಬನ್ನು ಮಾಲೀಶು  ಮಾಡುವ ಉದ್ದೇಶ ಹೊಂದಿರುವಂತಿದೆ. ಈ ನಡೆ ಅಪಾಯಕಾರಿ.

Thursday 1 October 2020

ಇದರಾಚೆಗೆ ಏನೂ ಹೇಳಬೇಕಿಲ್ಲ



ಯಾವುದೇ ಹೋರಾಟವನ್ನು ದಮನಿಸುವುದಕ್ಕೆ ಪ್ರಭುತ್ವ ಸಾಮಾನ್ಯವಾಗಿ ಎರಡು ತಂತ್ರಗಳನ್ನು ಹೆಣೆಯುತ್ತದೆ.

 1. ಹೋರಾಟದ ಮುಂಚೂಣಿಯಲ್ಲಿರುವವರನ್ನು ಖರೀದಿಸುವುದು. 
2. ಪೋಲೀಸ್ ಬಲವನ್ನು ಪ್ರಯೋಗಿಸುವುದು.

ಪ್ರಭುತ್ವದ ಜನವಿರೋಧಿ ನೀತಿಯನ್ನು ಪ್ರಶ್ನಿಸಿ ಹುಟ್ಟಿಕೊಳ್ಳುವ ಎಲ್ಲ ಹೋರಾಟಗಳಿಗೂ ಎದುರಾಗುವ ಸವಾಲು ಇದು. ಅನೇಕ ಹೋರಾಟಗಳು ಈ ಸವಾಲಿನ ಮುಂದೆ ಮಂಡಿಯೂರಿವೆ.  ಶರಣಾಗಿವೆ. ಪ್ರಭುತ್ವದ ಆಮಿಷವನ್ನು ಒಪ್ಪಿಕೊಂಡು ಹೋರಾಟದ ಕಣದಿಂದಲೇ ಮಾಯವಾದ ಹೋರಾಟಗಾರರೂ ಇದ್ದಾರೆ. ಇದೇವೇಳೆ, ಯಾವ ಕಾರಣಕ್ಕೂ ಪ್ರಭುತ್ವದೊಂದಿಗೆ  ರಾಜಿಯಾಗದೇ ಮತ್ತು ಖರೀದಿಗೆ ಒಳಗಾಗದೇ ಉಳಿದ ಹೋರಾಟಗಳೂ ಇವೆ. ಹೋರಾಟಗಾರರೂ ಇದ್ದಾರೆ. ಇಂಥವರನ್ನು ಬಗ್ಗುಬಡಿಯುವುದಕ್ಕೆ ಪ್ರಭುತ್ವ ಕಳ್ಳ ದಾರಿಯನ್ನು  ಹಿಡಿಯುತ್ತದೆ. ಅವರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸುತ್ತದೆ. ಸಂಬಂಧವೇ ಇಲ್ಲದ ಪ್ರಕರಣಗಳನ್ನು ಅವರಿಗೆ ಜೋಡಿಸಿ ಕಿರುಕುಳ ಕೊಡುತ್ತದೆ.

ಉತ್ತರ ಪ್ರದೇಶದ ಡಾ. ಕಫೀಲ್ ಖಾನ್ ಇದಕ್ಕೊಂದು ಇತ್ತೀಚಿನ ಉದಾಹರಣೆ. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅವರ ಮೇಲೆ ಸುಳ್ಳು ಕೇಸನ್ನು ದಾಖಲಿಸುವಾಗ, ಇದು ಸುಳ್ಳು ಎಂಬುದು  ಪೊಲೀಸರಿಗೂ ಗೊತ್ತಿರಲೇ ಬೇಕು. ಆದರೆ ಅಂಥದ್ದೊಂದು  ಕೇಸನ್ನು ದಾಖಲಿಸದೇ ಅವರ ಮುಂದೆ ಅನ್ಯ ದಾರಿ ಇರುವುದಿಲ್ಲ. ಆ ಕೇಸು ಪ್ರಭುತ್ವದ ಬಯಕೆ. ಆ ಬಯಕೆಯನ್ನು  ತಿರಸ್ಕರಿಸುವುದರಿಂದ ಮುಂದೆ ಏನೇನು ಸಮಸ್ಯೆಗಳು ಎದುರಾಗಬಹುದು ಎಂಬುದು ಪೊಲೀಸರಿಗೆ ಗೊತ್ತಿರುತ್ತದೆ. ಒಂದೋ ಸಸಿಕಾಂತ್ ಸೆಂಥಿಲ್‍ರಂತೆ ಅಥವಾ ಕಣ್ಣನ್ ಗೋಪಿನಾಥ ನ್‍ರಂತೆ ಆ ವರ್ತುಲದಿಂದ ಹೊರಬರಬೇಕು. ಇದು ಆಡಿದಷ್ಟು ಸುಲಭ ಅಲ್ಲ ಮತ್ತು ಹಾಗೆ ಹೊರಬರುವುದು ಸಮಸ್ಯೆಗೆ ಪರಿಹಾರವೇ ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ. ಮಿಥ್ಯವೇ  ತುಂಬಿಕೊಂಡಿರುವ ಮನೆಯಲ್ಲಿ ಸತ್ಯ ಅವಮಾನವನ್ನಲ್ಲದೇ ಯಶಸ್ಸನ್ನು ಸಾಧಿಸದು ಎಂದು ವಾದಿಸುವವರು ಇರುವಂತೆಯೇ ಸತ್ಯ ಅಲ್ಲೇ ಇದ್ದು ತನಗಿರುವ ಸೀಮಿತ ಅವಕಾಶವನ್ನು  ಬಳಸಿಕೊಂಡೇ ಮಿಥ್ಯದ ವಿರುದ್ಧ ಸಮರ ಸಾರಬೇಕು ಎಂದು ವಾದಿಸುವವರೂ ಇದ್ದಾರೆ. ಇವೆರಡೂ ತಿರಸ್ಕರಿಸಲಾಗದ ವಾದಗಳು. ಡಾ. ಕಫೀಲ್ ಖಾನ್‍ರ ಮೇಲೆ ರಾಷ್ಟ್ರೀಯ ಭದ್ರತಾ  ಕಾಯ್ದೆಯಡಿ ಪ್ರಕರಣ ದಾಖಲಿಸುವಾಗ ಪೊಲೀಸರ ಒಳಮನಸ್ಸನ್ನು ಇವು ಕಾಡಿರಬಹುದು. ತಾವು ಅಸತ್ಯಕ್ಕೆ ಸಾಕ್ಷ್ಯ ವಹಿಸುತ್ತಿದ್ದೇವೆ ಎಂಬ ಅಪರಾಧಿ ಭಾವ ಸುಳಿದು ಹೋಗಿರಲೂ ಬಹುದು.  ಆದರೆ ಪ್ರಭುತ್ವವನ್ನು ಎದುರು ಹಾಕಿಕೊಳ್ಳುವುದು ಸುಲಭವಲ್ಲ. ಹಾಗಂತ,

ಇದು ಕೇವಲ ಕಫೀಲ್ ಖಾನ್‍ಗೆ ಸಂಬಂಧಿಸಿ ಮಾತ್ರ ಹೇಳಬೇಕಾದುದಲ್ಲ. ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ಪ್ರಭುತ್ವ ಶತ್ರುಗಳಂತೆ ಬೆನ್ನಟ್ಟುತ್ತಿದೆ. ಸಿಎಎ ಪ್ರತಿಭಟನೆಯಲ್ಲಿ  ತೊಡಗಿಸಿಕೊಂಡಿದ್ದವರನ್ನು ದೆಹಲಿ ಸಂಘರ್ಷದೊಂದಿಗೆ ಜೋಡಿಸಿ ಬಂಧಿಸುತ್ತಿದೆ. ದೆಹಲಿ ಗಲಭೆಗೆ ಸಿಎಎ ವಿರೋಧಿ ಪ್ರತಿಭಟನಾಕಾರರೇ ಕಾರಣ ಎಂಬ ರೀತಿಯಲ್ಲಿ ಪ್ರಭುತ್ವ ವರ್ತಿಸುತ್ತಿದೆ.  ಸೆಪ್ಟೆಂಬರ್ ಒಂದರಂದು ಅಲಿಘರ್ ಜೈಲಿನಿಂದ ಬಿಡುಗಡೆಗೊಂಡ ಶರ್ಜೀಲ್ ಉಸ್ಮಾನಿಯ ಪ್ರಕರಣ ಇದರಲ್ಲಿ ಒಂದು. ಸಿಎಎ ಪ್ರತಿಭಟನೆಯ ವೇಳೆ ಅಲೀಘರ್ ವಿವಿಯ ವಿದ್ಯಾರ್ಥಿಗಳನ್ನು  ಉಸ್ಮಾನಿ ಪ್ರಚೋದಿಸಿದ್ದಾನೆ ಎಂಬ ಆರೋಪದಲ್ಲಿ ಜುಲೈಯಲ್ಲಿ ಪೊಲೀಸರು ಬಂಧಿಸಿದ್ದರು. 10 ವರ್ಷದ ಹಿಂದೆ ಭಾರತದ ಗುಪ್ತಚರ ಇಲಾಖೆಯು ನೇಪಾಳದಲ್ಲಿ ಭಯೋತ್ಪಾದಕರನ್ನು ಸೆರೆ  ಹಿಡಿದಿತ್ತು. ಅವರ ಬಗ್ಗೆ ನಿನಗೆ ಎಷ್ಟು ಗೊತ್ತಿದೆ, ಅವರೆಲ್ಲ ನಿನ್ನ ಊರಿನವರಾಗಿದ್ದಾರೆ.. ಎಂಬಿತ್ಯಾದಿ ಪ್ರಶ್ನೆಗಳನ್ನು ನನ್ನಲ್ಲಿ ಕೇಳಲಾಗಿತ್ತು ಎಂದಾತ ದಿ ಹಿಂದೂ ಪತ್ರಿಕೆಯೊಂದಿಗೆ ಮಾತಾಡುತ್ತಾ  ಹೇಳಿದ್ದಾರೆ. ಮಾತ್ರವಲ್ಲ, ಸಿಎಎ ಅಥವಾ ಅಲೀಘರ್ ವಿವಿಯ ಹಿಂಸೆಯ ಬಗ್ಗೆ ನನ್ನಲ್ಲಿ ಒಂದೇ ಒಂದು ಪ್ರಶ್ನೆಯನ್ನೂ ಕೇಳಿಲ್ಲ ಎಂದೂ ಆತ ಹೇಳಿದ್ದಾನೆ. ಅಂದರೆ ಇದೊಂದು ಬಗೆಯ  ದಬ್ಬಾಳಿಕೆ. ಭೀತಿ ಹುಟ್ಟಿಸುವ ಪ್ರಕ್ರಿಯೆ. ಮುಂದೆಂದೂ ಇಂಥ ಹೋರಾಟಗಳಲ್ಲಿ ತೊಡಗಿಸಿಕೊಳ್ಳಬಾರದು ಎಂಬ ಪರೋಕ್ಷ ಎಚ್ಚರಿಕೆ. ಅಂದಹಾಗೆ,

ಸಿಎಎ ವಿರೋಧಿ ಹೋರಾಟಕ್ಕೆ ಆಮ್ಲಜನಕ ದೊರಕಿದ್ದೇ  ವಿಶ್ವವಿದ್ಯಾಲಯಗಳಿಂದ. ಅಲಿಘರ್ ವಿವಿಯಲ್ಲಿ ಹುಟ್ಟಿಕೊಂಡ ಹೋರಾಟದ ಈ ಕಿಡಿ ಆ ಬಳಿಕ ಜಾಮಿಯಾ ಮಿಲ್ಲಿಯಾ  ವಿಶ್ವವಿದ್ಯಾಲಯದಲ್ಲಿ ಬೃಹದಾಕಾರವನ್ನು ಪಡೆದುಕೊಂಡು ಅಲ್ಲಿಂದ ದೇಶವ್ಯಾಪಿಯಾಗಿ ಹರಡಿಕೊಂಡಿತು. ಮುಸ್ಲಿಮರ ಹೋರಾಟವಾಗಿ ಮಾರ್ಪಡಬೇಕಾದ ಪ್ರತಿಭಟನೆಯೊಂದು ವಿದ್ಯಾರ್ಥಿಗಳ  ಚಳವಳಿಯಾಗಿ ನಿಧಾನಕ್ಕೆ ರೂಪಾಂತರ ಹೊಂದುತ್ತಿರುವುದನ್ನು ಕಂಡು ಪ್ರಭುತ್ವ ಭಯಕ್ಕೆ ಬಿತ್ತು. ಈ ಹೋರಾಟದ ನೊಗವನ್ನು ವಿದ್ಯಾರ್ಥಿಗಳು ಎತ್ತಿಕೊಳ್ಳುವುದೆಂದರೆ, ಅದಕ್ಕೆ ಪಕ್ಷರಹಿತ ಮತ್ತು  ಧರ್ಮರಹಿತ ವರ್ಚಸ್ಸು ಲಭ್ಯವಾಗಬಹುದು ಎಂಬ ಆತಂಕ ಎದುರಾಯಿತು. ಆದ್ದರಿಂದಲೇ, ಚಳವಳಿಯ ನೇತೃತ್ವವನ್ನು ವಿದ್ಯಾರ್ಥಿಗಳು ವಹಿಸಿಕೊಂಡಿದ್ದರೂ ಅದನ್ನು ಬರೇ ಮುಸ್ಲಿಮರ  ಹೋರಾಟವೆಂಬಂತೆ ಬಿಂಬಿಸುವುದಕ್ಕೆ ಪ್ರಭುತ್ವ ತಂತ್ರ ಹೂಡಿತು. ಪ್ರಭುತ್ವವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಕೇವಲ ಮುಸ್ಲಿಮರನ್ನು ಮಾತ್ರ ಗುರಿಯಾಗಿಸಿಕೊಂಡು ಹೇಳಿಕೆ  ನೀಡತೊಡಗಿದರು. ದೆಹಲಿಯ ಶಾಹೀನ್‍ಭಾಗ್‍ನ ಪ್ರತಿಭಟನೆಯನ್ನು ನಿರಂತರ ಪ್ರಶ್ನೆಗೆ ಗುರಿಪಡಿಸಲಾಯಿತು. ಶಾಹೀನ್‍ಬಾಗ್ ಪ್ರತಿಭಟನೆಯನ್ನು ಮತ್ತೆ ಮತ್ತೆ ಉಲ್ಲೇಖಿಸುವುದರಿಂದ ಮತ್ತು  ಅಲ್ಲಿನ ಪ್ರತಿಭಟನಾ ನಿರತರನ್ನು ಪದೇ ಪದೇ ಟಿ.ವಿ. ಮಾಧ್ಯಮಗಳಲ್ಲಿ ತೋರಿಸುವುದರಿಂದ ಪ್ರತಿಭಟನೆಗೆ ನಿರ್ದಿಷ್ಟ ಧರ್ಮದ ಬಣ್ಣ ಬಳಿಯಲು ಸುಲಭ ಎಂಬುದಾಗಿ ಪ್ರಭುತ್ವ  ಭಾವಿಸಿಕೊಂಡಿತು. ಕೊನೆಗೆ,

ಶಾಹೀನ್‍ಬಾಗ್, ಜಾಫ್ರಾಬಾದ್ ಇತ್ಯಾದಿ ಪ್ರತಿಭಟನಾ ನಿರತರನ್ನು ಆರೋಪಿ ಸ್ಥಾನದಲ್ಲಿ ಕೂರಿಸಿಕೊಂಡೇ ದೆಹಲಿ ಗಲಭೆಗೆ ಕಾರಣಗಳನ್ನು ಹುಡುಕಲಾಯಿತು. ಸಿಎಎ ವಿರೋಧಿ ಪ್ರತಿಭಟ ನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಒಬ್ಬೊಬ್ಬರನ್ನೇ ಗುರಿ ಮಾಡಿಕೊಂಡು ಬಂಧಿಸಲಾಯಿತು. ಸಫೂರಾ ಝರ್ಗರ್, ನತಾಶಾ ನರ್ವಾಲ್, ದೇವಾಂಗನಾ ಕಲಿಟ್ರಾ, ಮೀರಾನ್ ಹೈದರ್,  ಗುಲ್‍ಫಿಶಾ ಖಾತೂನ್, ಇಕ್ಬಾಲ್ ತನ್ಹಾ ಮುಂತಾದ ಅನೇಕರು ಬಂಧನಕ್ಕೊಳಗಾದರು. ಅಲ್ಲದೇ, ಉಮರ್ ಖಾಲಿದ್ ಸಹಿತ ಅನೇಕ ವಿದ್ಯಾರ್ಥಿ ಹೋರಾಟಗಾರರಿಗೆ ದೆಹಲಿ ಪೆÇಲೀಸರು  ನಿರಂತರ ಸಮನ್ಸ್ ಕಳುಹಿಸುತ್ತಿದ್ದಾರೆ. ಈ ಬಗ್ಗೆ ದೆಹಲಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಯೋಗೇಂದ್ರ ಯಾದವ್, ಹರ್ಷ ಮಂದರ್, ಕವಲ್‍ಪ್ರೀತ್ ಕೌರ್, ಉಮರ್ ಖಾಲಿದ್  ಮುಂತಾದವರು ವಿವರಗಳನ್ನು ಹಂಚಿಕೊಂಡಿದ್ದಾರೆ.

ಪ್ರಭುತ್ವ ಮತ್ತು ಪ್ರತಿಭಟನೆ- ಇವೆರಡೂ ಶತ್ರುಗಳಲ್ಲ. ಪ್ರಜಾತಂತ್ರದಲ್ಲಿ ನಂಬಿಕೆಯಿಲ್ಲದವರಿಗೆ ಮಾತ್ರ ಪ್ರತಿಭಟನೆಯನ್ನು ಶತ್ರುವಿನಂತೆ ಕಾಣುವುದಕ್ಕೆ ಸಾಧ್ಯ. ಪ್ರತಿಭಟನೆಗೆ ಅವಕಾಶ ಇಲ್ಲದ ಕಡೆ  ನಿರಂಕುಶತೆ ಬೆಳೆಯುತ್ತದೆ. ನಿಜವಾಗಿ, ಸಿಎಎ ಕಾಯ್ದೆಯನ್ನು ರಚಿಸುವ ಸ್ವಾತಂತ್ರ್ಯ ಪ್ರಭುತ್ವಕ್ಕೆ ಇರುವಂತೆಯೇ ಅದನ್ನು ವಿರೋಧಿಸುವ ಸ್ವಾತಂತ್ರ್ಯ ಆ ಪ್ರಭುತ್ವವನ್ನು ಚುನಾಯಿಸಿದ  ನಾಗರಿಕರಿಗೂ ಇದೆ. ಆ ಪ್ರತಿಭಟನಾ ಧ್ವನಿಯನ್ನು ಸಂಯಮದಿಂದ ಆಲಿಸಬೇಕಾದುದು ಪ್ರಭುತ್ವದ ಕರ್ತವ್ಯ. ಆದರೆ, ಸಿಎಎ ಕಾಯ್ದೆಯನ್ನು ಜಾರಿಗೆ ತಂದ ಪ್ರಭುತ್ವವನ್ನು ಅದಕ್ಕೆ ಎದುರಾದ  ವಿರೋಧವನ್ನು ಸಹಿಸಿಕೊಳ್ಳಲು ಸಿದ್ಧವಾಗಲಿಲ್ಲ. ವಿರೋಧವನ್ನೇ ದೇಶದ್ರೋಹದಂತೆ ಮತ್ತು ಷಡ್ಯಂತ್ರದಂತೆ ಬಿಂಬಿಸಲು ಯತ್ನಿಸಿತು. ಗೋಲೀಬಾರನ್ನು ನಡೆಸಿತು. ತನ್ನದೇ ನಾಗರಿಕರನ್ನು  ಇಷ್ಟೊಂದು ಕೆಟ್ಟದಾಗಿ ನಡೆಸಿಕೊಂಡ ಘಟನೆ ತುರ್ತುಸ್ಥಿತಿಯ ಬಳಿಕದ ಭಾರತದಲ್ಲಿ ಬಹುಶಃ ಇದೇ ಮೊದಲು. ತಾನು ಮಾಡಿದ್ದೇ  ಕಾನೂನು ಮತ್ತು ಹೇಳಿದ್ದೇ  ನ್ಯಾಯ ಎಂಬ ರೀತಿಯಲ್ಲಿ  ಯಾವುದೇ ಪ್ರಭುತ್ವ ವರ್ತಿಸುವುದು ಪ್ರಜಾತಂತ್ರದ ಉಳಿವಿನ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ. ಪ್ರಜಾತಂತ್ರದಲ್ಲಿ ನಾಗರಿಕರ ಅಭಿಪ್ರಾಯವೇ ಅಂತಿಮ. ನಾಗರಿಕರನ್ನು ಹೊರತುಪಡಿಸಿ  ಪ್ರಭುತ್ವವೇ ಇಲ್ಲ. ಇದೊಂದು ಉದಾತ್ತ ಪರಿಕಲ್ಪನೆ. ಆದರೆ 

ಕೆಲವೊಮ್ಮೆ ಪ್ರಭುತ್ವ ಪ್ರಜಾತಂತ್ರದ ಈ ಮೂಲ ಆಶಯವನ್ನೇ ತಾರುಮಾರುಗೊಳಿಸಿ ಬೀಗುವುದಿದೆ. ನಾಗರಿಕರ ಮೇಲೆಯೇ  ದಬ್ಬಾಳಿಕೆ, ದೌರ್ಜನ್ಯ ನಡೆಸುವುದಿದೆ. 1975ರಲ್ಲಿ ಇಂದಿರಾಗಾಂಧಿ ಈ ಸಾಹಸಕ್ಕೆ ಕೈ ಹಾಕಿದ್ದರು ಮತ್ತು ಬಳಿಕ ಎಂದೂ ಮರೆಯಲಾಗದ ಉತ್ತರವನ್ನೂ ಈ ದೇಶದ ನಾಗರಿಕರು ಕೊಟ್ಟಿದ್ದರು.  ಇದರಾಚೆಗೆ ಏನೂ ಹೇಳಬೇಕಿಲ್ಲ.

Thursday 10 September 2020

ಅವಮಾನಿತನಾಗಬೇಕಾದವ ಆರಾಮವಾಗಿ ಇರುವಂಥ ಸ್ಥಿತಿ ಏಕೆ ನಿರ್ಮಾಣವಾಯಿತು?


ಬೆಂಗಳೂರು ಮತ್ತು ಶೃಂಗೇರಿಯಲ್ಲಿ ಎರಡು ದಿನಗಳ ಅಂತರದಲ್ಲಿ ಎರಡು ಘಟನೆಗಳು ನಡೆದಿವೆ. ಈ ಎರಡೂ ಘಟನೆಗಳಿಗೆ ಮುಸ್ಲಿಮ್ ಸಮುದಾಯ ವ್ಯಕ್ತಪಡಿಸಿದ ಪ್ರತಿಕ್ರಿಯೆ ಏಕಪ್ರಕಾರವಾಗಿರಲಿಲ್ಲ. ಬೆಂಗಳೂರು ಮತ್ತು ಶೃಂಗೇರಿ ಘಟನೆಗಳಿಗೆ ಮೂಲ ಕಾರಣ ನವೀನ್ ಮತ್ತು ಮಿಲಿಂದ್. ಪ್ರವಾದಿ ಮುಹಮ್ಮದ್‍ರನ್ನು(ಸ) ಅವಮಾನಿಸಿ ಸಾಮಾಜಿಕ ಜಾಲತಾಣದಲ್ಲಿ ನವೀನ್ ಒಂದು ಪೋಸ್ಟ್ ಹಾಕುತ್ತಾನೆ. ನಡೆದಿರುವುದು ಇಷ್ಟೇ. ಆದರೆ ಆ ಬಳಿಕದಿಂದ ಇವತ್ತಿನ ವರೆಗೆ ಚರ್ಚೆಯಲ್ಲಿರುವುದು ನವೀನನಲ್ಲ, ಮುಸ್ಲಿಮ್ ಸಮುದಾಯ. ಪೊಲೀಸರು ಬಂಧಿಸುತ್ತಿರುವುದು ಮುಸ್ಲಿಮರನ್ನು. ಸರಕಾರವು ಆಸ್ತಿ ಜಪ್ತಿ ಮಾಡಲು ಹೊರಟಿರುವುದು ಮುಸ್ಲಿಮರದ್ದು. ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಖಳನಾಯಕರಂತೆ ಬಿಂಬಿಸುತ್ತಿರುವುದೂ ಮುಸ್ಲಿಮರನ್ನು. ಒಂದೇ ಒಂದು ಪೋಸ್ಟ್ ಒಂಡಿದೀ ಸಮುದಾಯವನ್ನು ತಲೆ ತಗ್ಗಿಸುವಂತೆ ಮಾಡಿದ್ದರೆ ಅದರ ಹೊಣೆಯನ್ನು ಯಾರು ಹೊರಬೇಕು? ನಿಜವಾಗಿ ತಲೆ ತಗ್ಗಿಸಬೇಕಾದದ್ದು ನವೀನ್. ಕ್ಷಮೆ ಕೇಳಬೇಕಾದದ್ದೂ ಆತನೇ. ಆದರೆ ಪರಿಸ್ಥಿತಿ ತದ್ವಿರುದ್ಧವಾಗಿರುವುದಕ್ಕೆ ಯಾರು ಕಾರಣ? ಇದನ್ನು ಸರಿಪಡಿಸುವುದು ಹೇಗೆ?

ಶೃಂಗೇರಿಯಲ್ಲಿ ಶಂಕಾರಾಚಾರ್ಯರ ಪುತ್ಥಳಿಗೆ ಹಸಿರು ಧ್ವಜವನ್ನು ಹಾಕಲಾದ ಘಟನೆ ಬೆಳಕಿಗೆ ಬಂದ ತಕ್ಷಣ ಅದನ್ನು ಮುಸ್ಲಿಮರ ತಲೆಗೆ ಕಟ್ಟುವ ಪ್ರಯತ್ನವನ್ನು ಅಲ್ಲಿನ ಮಾಜಿ ಶಾಸಕರೇ ಮಾಡಿದ್ದಾರೆ. ಪೋಲೀಸರನ್ನು ಬೀದಿಯಲ್ಲಿ ನಿಲ್ಲಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಮಿಲಿಂದ್‍ನ ಬಂಧನವಾಗಿದೆ. ನಿಜವಾಗಿ, ಮಿಲಿಂದ್‍ನ ಬಂಧನದ ಬಳಿಕ ಮುಸ್ಲಿಮರ ಪ್ರತಿಕ್ರಿಯೆ ಏನು ಅನ್ನುವುದು ಬಹಳ ಮುಖ್ಯವಾಗಿತ್ತು. ಆ ಪ್ರತಿಕ್ರಿಯೆಯೇ ಮುಸ್ಲಿಮರನ್ನು ಅಳೆಯುವ ಮಾನದಂಡವಾಗಿತ್ತು. ಬೆಂಗಳೂರಿನಲ್ಲಿ ಕಾನೂನುಬಾಹಿರವಾಗಿ ನಡೆದುಕೊಂಡ ಮುಸ್ಲಿಮ್ ಯುವಕರ ವರ್ತನೆಯು ಶೃಂಗೇರಿ ಘಟನೆಯ ಸಂದರ್ಭದಲ್ಲಿ ಹಸಿಹಸಿಯಾಗಿತ್ತು. ಅಲ್ಲದೇ, ಮುಸ್ಲಿಮರೇ ಅಪರಾಧಿಗಳು ಎಂದು ಮಾಜಿ ಶಾಸಕರು ಮತ್ತು ಅವರ ಬೆಂಬಲಿಗರು ಷರಾ ಬರೆದು, ಬೆದರಿಕೆಯನ್ನೂ ಹಾಕಿದ್ದರು. ಆದರೆ, ಶೃಂಗೇರಿಯ ಮುಸ್ಲಿಮರು ಎಷ್ಟು ಬುದ್ಧಿವಂತಿಕೆಯಿಂದ ವರ್ತಿಸಿದರೆಂದರೆ, ಇವತ್ತಿಗೂ ಅಲ್ಲಿ ಮಿಲಿಂದ್ ಖಳನಾಯಕನೇ ಹೊರತು ಮುಸ್ಲಿಮರಲ್ಲ. ಒಂದು ಪತ್ರಿಕಾಗೋಷ್ಠಿಯನ್ನು ಕರೆದು ಮುಸ್ಲಿಮರು ಹೇಳಬೇಕಾದುದನ್ನೆಲ್ಲ ಹೇಳಿದರು. ಅಲ್ಲಿಗೆ ಮಾಜಿ ಶಾಸಕರ ಬಣ್ಣ ಬಯಲಾಯಿತು. ಇದು ಶಾಸಕರಿಗೆ ಮಾತ್ರ ಸಂಬಂಧಿಸಿದ ಸಂಗತಿ ಅಲ್ಲ. ಅವರನ್ನು ಬೆಂಬಲಿಸುವವರು, ಅವರ ಪರವಾಗಿ ನಿಲುವುಳ್ಳವರು ಮತ್ತು ಅವರು ಪ್ರತಿನಿಧಿಸುವ ಪಕ್ಷದ ಹಿತೈಷಿಗಳು... ಎಲ್ಲರ ಪಾಲಿಗೂ ಮುಜುಗರ ತಂದಿಕ್ಕಿದ ಪ್ರಕರಣ. ಆರೋಪಿ ಯಾರು ಎಂಬುದು ಬಯಲಾಗುವ ಮೊದಲೇ ಆರೋಪಿ ಇಂಥವನೇ ಮತ್ತು ಇಂತಿಂಥ ಧರ್ಮಕ್ಕೆ ಸೇರಿದವನೇ ಎಂದು ಕಡ್ಡಿ ಮುರಿದಂತೆ ಹೇಳುವುದು ಎಷ್ಟು ಸಮರ್ಥನೀಯ ಎಂಬ ಅವಲೋಕನಕ್ಕೆ ಅವರೆಲ್ಲರನ್ನೂ ಖಂಡಿತ ಈ ಪ್ರಕರಣ ಒಳಪಡಿಸಿರಬಹುದು. ರಾಜಕೀಯಕ್ಕಾಗಿ ಸಮಾಜದ ಆರೋಗ್ಯವನ್ನು ಕೆಡಿಸುವುದನ್ನು ನಾವೇಕೆ ಬೆಂಬಲಿಸಬೇಕು ಎಂಬ ಪ್ರಶ್ನೆ ಅವರೊಳಗೆ ಮೂಡಿರಬಹುದು. ಇಂಥದ್ದೊಂದು ಮುಜುಗರ ಅವರಲ್ಲಿ ಉಂಟಾಗಿದ್ದರೆ ಅದಕ್ಕೆ ಕಾರಣ ಮಿಲಿಂದ್ ಅಲ್ಲ, ಮುಸ್ಲಿಮರು. ಮಿಲಿಂದ್ ಅಥವಾ ನವೀನ್ ಒಂದು ದಾಳ ಮಾತ್ರ. ಇಂಥವರ ಸಂಖ್ಯೆ ಸಾಕಷ್ಟಿರಬಹುದು. ಇವರನ್ನು ಹೀರೋ ಮಾಡಬೇಕೇ ಅಥವಾ ಖಳರನ್ನಾಗಿ ಪರಿವರ್ತಿಸಬೇಕೇ ಎಂಬುದು ಪ್ರತಿಕ್ರಿಯಿಸುವವರ ಬುದ್ಧಿವಂತಿಕೆಯನ್ನು ಹೊಂದಿಕೊಂಡಿದೆ.

ನವೀನ್ ಅನ್ನುವ ಏಕ ವ್ಯಕ್ತಿ ನಾಲ್ವರು ಯುವಕರ ಸಾವಿಗೆ, ನೂರಾರು ಮಂದಿಯ ಬಂಧನಕ್ಕೆ ಮತ್ತು ಕೋಟ್ಯಂತರ ರೂಪಾಯಿಯ ಆಸ್ತಿ ಜಪ್ತಿಯ ಭೀತಿಯನ್ನು ತಂದೊಡ್ಡುವುದಕ್ಕೆ ಹೇಗೆ ಸಫಲನಾದ? ಇವತ್ತು ನವೀನ್ ಸುದ್ದಿಯು ಕೇಂದ್ರವಲ್ಲ. ಆತನ ಆಸ್ತಿಯ ಜಪ್ತಿಯೂ ಆಗಲ್ಲ. ಪುಟ್ಟದೊಂದು ಮೊತ್ರವನ್ನು ಪಾವತಿಸಿ ಆತ ಜಾಮೀನು ಪಡೆದು ಹೊರಬರಬಲ್ಲ. ಇಷ್ಟೇ ಸರಳವಾಗಿ ಜೈಲಿಗೆ ಹೋದ ಮುಸ್ಲಿಮ್ ಯುವಕರ ಬಗ್ಗೆ ಹೇಳುವುದಕ್ಕೆ ಸಾಧ್ಯವೇ? ಆ ಅರೆಕ್ಷಣದ ಆವೇಶಕ್ಕೆ ತೆರಬೇಕಾದ ಮೊತ್ತ ಎಷ್ಟು? ಬಂಧಿತ ಒಬ್ಬೊಬ್ಬ ವ್ಯಕ್ತಿಗೂ ಖರ್ಚು ಮಾಡಬೇಕಾದ ಹಣವೆಷ್ಟು? ಜೈಲಲ್ಲಿರುವವರ ಕುಟುಂಬ-ಪತ್ನಿ-ಮಕ್ಕಳು ಅನುಭವಿಸುತ್ತಿರುವ ಸಂಕಟಗಳ ಭಾರ ಎಷ್ಟು? ಈ ಬಂಧಿತರಿಗಾಗಿ ಖರ್ಚಾಗುವ ಲಕ್ಷಾಂತರ ರೂಪಾಯಿಗಳು, ಕಾನೂನು ಪ್ರಕ್ರಿಯೆ, ಕೋರ್ಟು-ಕಚೇರಿಯೆಂದು ವ್ಯಯವಾಗುವ ಮಾನವ ಶ್ರಮಗಳನ್ನು ಒಟ್ಟು ಸೇರಿಸಿದರೆ ಅದರ ಪ್ರಮಾಣ ಎಷ್ಟಾಗಬಹುದು? ಇವೆಲ್ಲ ಅನಿವಾರ್ಯವಾಗಿತ್ತೇ? ಪ್ರವಾದಿಯನ್ನು ಓರ್ವ ಅವಮಾನಿಸಿದರೆ, ಅದರ ಪರಿಣಾಮವನ್ನು ಎದುರಿಸಬೇಕಾಗಿರುವುದು ಅವಮಾನಿಸಿದವನೇ ಹೊರತು ಅವಮಾನಕ್ಕೊಳಗಾದವರಲ್ಲ. ಆದರೆ, ಪದೇ ಪದೇ ಈ ಸರಳ ಸತ್ಯಕ್ಕೆ ಸೋಲಾಗುತ್ತಿದೆ. ನಿಂದಿಸಿದವರು ಆರಾಮವಾಗಿಯೂ ಆರಾಮವಾಗಿ ಇರಬೇಕಾದವರು ಅವಮಾನಿತರಾಗಿಯೂ ಮತ್ತೆ ಮತ್ತೆ ಗುರುತಿಗೀಡಾಗುತ್ತಿದ್ದಾರೆ. ಇದೊಂದು ವೈಫಲ್ಯ ಮತ್ತು ಯಾವುದೇ ವೈಫಲ್ಯ ದೀರ್ಘಕಾಲ ವೈಫಲ್ಯವಾಗಿಯೇ ಮುಂದುವರಿಯುವುದು ಆ ಸಮುದಾಯದ ಪಾಲಿಗೆ ಅತ್ಯಂತ ಅಪಾಯಕಾರಿ. ಸದ್ಯ ಇಂಥದ್ದೊಂದು ನಿರ್ಣಾಯಕ ಸ್ಥಿತಿಯಲ್ಲಿ ಮುಸ್ಲಿಮ್ ಸಮುದಾಯ ಇದೆ. ಈ ಸಮುದಾಯವನ್ನು ಪ್ರಚೋದಿಸಿ, ಗಲಭೆಗೆ ಹಚ್ಚುವುದು ಸುಲಭ ಎಂಬ ಭಾವನೆ ಸಮಾಜಘಾತುಕ ಶಕ್ತಿಗಳಲ್ಲಿ ಬಲವಾಗತೊಡಗಿದೆ. ಶೃಂಗೇರಿ ಘಟನೆಯ ಹಿಂದೆ ಈ ಧೈರ್ಯವೇ ಕೆಲಸ ಮಾಡಿರುವಂತಿದೆ. ಮುಸ್ಲಿಮರನ್ನು ಪ್ರಚೋದಿಸುವುದು, ಬೀದಿಗಿಳಿಸುವುದು ಮತ್ತು ಒರಟಾಗಿ ವರ್ತಿಸುವಂತೆ ಬಲವಂತಪಡಿಸುವುದು ಈ ಸಮಾಜ ದ್ರೋಹಿ ಶಕ್ತಿಗಳ ಆರಂಭಿಕ ಹಂತ. ಅದರಲ್ಲಿ ಅವರು ಯಶಸ್ವಿಯಾಗತೊಡಗಿದಂತೆಯೇ ಎರಡನೇ ಹಂತ ಜಾರಿಗೆ ಬರುತ್ತದೆ. ಮುಸ್ಲಿಮರು ಹೀಗೆಯೇ ಎಂದು ಪದೇಪದೇ ಸಮಾಜಕ್ಕೆ ಸಂದೇಶವನ್ನು ಕೊಡುವುದು, ಮುಸ್ಲಿಮರು ಒರಟರು, ಅವರು ಕಾನೂನನ್ನು ಪಾಲಿಸದವರು ಎಂಬ ಭಾವ ಸಾರ್ವತ್ರಿಕವಾಗುವಂತೆ ನೋಡಿಕೊಳ್ಳುವುದು. ಇದು ಯಶಸ್ವಿಯಾಯಿತೆಂದರೆ, ಆ ಬಳಿಕದ ಮೂರನೇ ಹಂತವನ್ನು ಜಾರಿಗೊಳಿಸುವುದು ಸುಲಭ. ನವೀನ್ ಮತ್ತು ಮಿಲಿಂದ್ ಆ ಮೂರನೇ ಹಂತದ ದಾಳಗಳು.

ಸದ್ಯ ಮುಸ್ಲಿಮ್ ಸಮುದಾಯದ ಜವಾಬ್ದಾರಿ ಏನೆಂದರೆ, ಸಮಾಜ ಘಾತುಕ ಶಕ್ತಿಗಳ ತಂತ್ರಕ್ಕೆ ಪ್ರತಿ ತಂತ್ರವನ್ನು ಹೆಣೆಯುವುದು. ಶೃಂಗೇರಿಯ ಮುಸ್ಲಿಮರು ಮಾಡಿರುವಂತೆ ಅತ್ಯಂತ ಬುದ್ಧಿವಂತಿಕೆಯಿಂದ ನಡೆದುಕೊಳ್ಳುವುದು. ಯಾವುದೇ ಸಂದರ್ಭದಲ್ಲೂ ಆವೇಶಕ್ಕೋ ಪ್ರಚೋದನೆಗೋ ಒಳಗಾಗದೆಯೇ ಪ್ರತಿಕ್ರಿಯಿಸಲು ಕಲಿಯುವುದು. ಹಾಗಂತ, ಇವೇನೂ ಬಹಳ ಸವಾಲಿನ ಕೆಲಸ ಅಲ್ಲ. ಈ ಸಮುದಾಯಕ್ಕೆ ಗಲ್ಲಿಗೊಂದರಂತೆ ಮಸೀದಿಗಳಿವೆ. ಸಮುದಾಯಕ್ಕೆ ಮಾರ್ಗದರ್ಶನ ನೀಡಲು ಧಾರ್ಮಿಕ, ಸಾಮಾಜಿಕ ಮುಖಂಡರಿದ್ದಾರೆ. ಸಂಘಟನೆಗಳಿವೆ. ಪ್ರತಿ ಶುಕ್ರವಾರ ಮಸೀದಿಗಳು ಸಮುದಾಯವನ್ನು ತಿದ್ದುವ ಕೇಂದ್ರವಾಗಿ ಬದಲಾಗಬೇಕು. ಧಾರ್ಮಿಕ ಸಂಘಟನೆಗಳು ಮುಸ್ಲಿಮ್ ಸಮುದಾಯದ ಗಲ್ಲಿಗಲ್ಲಿಗೆ ತೆರಳಿ ಅಲ್ಲಿಯ ಸಮಸ್ಯೆಗಳಿಗೆ ಕಣ್ಣಾಗುವ ಮತ್ತು ಗಾಂಜಾದಂಥ ವ್ಯಸನಗಳಿಗೆ ತುತ್ತಾಗಿರುವ ಯುವಕರನ್ನು ಸರಿದಾರಿಗೆ ತರುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಮುಸ್ಲಿಮ್ ಸಮುದಾಯದ ಕೇರಿಗಳು ಮೂಲಭೂತ ಸೌಲಭ್ಯಗಳನ್ನು ಹೊಂದುವಂತೆ ಮಾಡುವುದಕ್ಕೆ ಸಕಲ ಪ್ರಯತ್ನವನ್ನೂ ಮಾಡಬೇಕು. ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶನ ಮಾಡುವ ದೀರ್ಘಕಾಲಿಕ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಆರೋಗ್ಯ ಕೇಂದ್ರಗಳ ಸ್ಥಾಪನೆಗೆ, ಕೌಶಲ್ಯ ಅಭಿವೃದ್ಧಿಯಂತಹ ಯೋಜನೆಗಳಿಗೆ ಕಾಳಜಿ ತೋರಬೇಕು. ಆಯಾ ಪ್ರದೇಶಕ್ಕೆ ತಕ್ಕಂತೆ ಅತ್ಯಂತ ಪರಿಣಾಮಕಾರಿ ನೀಲನಕಾಶೆಯನ್ನು ತಯಾರಿಸಿ ಮುಂದಡಿಯಿಟ್ಟರೆ ಯಶಸ್ಸು ಅಸಾಧ್ಯವಿಲ್ಲ. ಒಂದುವೇಳೆ, ಇಂಥ ದೂರದೃಷ್ಟಿಯಿಂದ ಸಮುದಾಯ ಸಂಘಟನೆಗಳು, ನಾಯಕರು ಮ್ತು ಧಾರ್ಮಿಕ ಮುಖಂಡರು ಕಾರ್ಯಪ್ರವೃತ್ತವಾದರೆ ಓರ್ವ ನವೀನ್ ಬಿಡಿ, ನೂರಾರು ನವೀನ್‍ರೂ ಈ ಸಮುದಾಯಕ್ಕೆ ಸವಾಲು ಆಗಲಾರರು. ಅವರಿಗೆ ಯಶಸ್ಸು ಸಿಗಲಾರದು. ಪ್ರವಾದಿಯನ್ನು ನಿಂದಿಸಿದರೆ ಅದಕ್ಕೆ ಪ್ರತಿಯಾಗಿ ಪ್ರವಾದಿ ಸಂದೇಶವನ್ನು ಸಾರುವ ಲಕ್ಷಾಂತರ ಯುವಕರು ತಯಾರಾಗಬಹುದು. ಅವರನ್ನು ಕಂಡು ನವೀನ್ ಮತ್ತು ಅವನ ಹಿಂದಿರುವಂಥ ಸಮಾಜ ಘಾತುಕರು ಅವಮಾನದಿಂದ ತಲೆ ತಗ್ಗಿಸುವಂಥ ಪರಿಸ್ಥಿತಿ ನಿರ್ಮಾಣವಾಗಬಹುದು. ಇದು ಇಂದಿನ ತುರ್ತು ಅಗತ್ಯ.


Wednesday 19 August 2020

ಹಾಗೇನಾದರೂ ಆಗಿಬಿಟ್ಟರೆ ಅವರು ಹೂಡಿರುವ ಕೋಟ್ಯಂತರ ರೂಪಾಯಿಯ ಪಾಡೇನು?



ಕೊರೋನಾ ಏನು, ಅದರಿಂದ ಹಾನಿ ಎಷ್ಟು ಮತ್ತು ನಾಗರಿಕರು ಏನೆಲ್ಲ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ನಂಬಲರ್ಹ ಹಾಗೂ ಅಧಿಕೃತ ಮಾಹಿತಿಗಳಿಗಿಂತ ನೂರು ಪಟ್ಟು ಹೆಚ್ಚು  ನಂಬಲನರ್ಹ ಮತ್ತು ಅನಧಿಕೃತ ಮಾಹಿತಿಗಳು ಸಾರ್ವಜನಿಕವಾಗಿ ಇವತ್ತು ಲಭ್ಯವಿವೆ. ಕೊರೋನಾ ಸುತ್ತ ಹುಟ್ಟು ಹಾಕಲಾಗಿರುವ ಭಯವೇ ರೋಗಿಗಳ ಪಾಲಿಗೆ ರೋಗಕ್ಕಿಂತ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ ಎಂಬ ಮಾತು ತಜ್ಞರಿಂದಲೇ ಕೇಳಿ ಬರುತ್ತಿದೆ. ಕೊರೋನಾ ಇವತ್ತು ಬಿಂಬಿಸಲಾಗುತ್ತಿರುವಷ್ಟು ಅಪಾಯಕಾರಿಯೇ, ಔಷಧಕ್ಕೆ ಬಗ್ಗದಷ್ಟು ಮಾರಣಾಂತಿಕವೇ ಅಥವಾ  ಅದನ್ನು ಅಗತ್ಯಕ್ಕಿಂತ ಹೆಚ್ಚು ಉಬ್ಬಿಸಲಾಗುತ್ತಿದೆಯೇ ಎಂಬಲ್ಲಿಂದ ಹಿಡಿದು, ಕೊರೋನಾದ ನೆಪದಲ್ಲಿ ಮೆಡಿಕಲ್ ಮಾಫಿಯಾ ಸಕ್ರಿಯವಾಗಿದೆಯೇ ಎಂಬಲ್ಲಿ ವರೆಗೆ ಸಾರ್ವಜನಿಕ ಚರ್ಚೆಗಳೂ ಅಲ್ಲಲ್ಲಿ  ನಡೆಯತೊಡಗಿವೆ. ಹಾಗಂತ,
ಇಂಥ ಬೆಳವಣಿಗೆಗಳು ಶೂನ್ಯದಿಂದ ಹುಟ್ಟಿಕೊಂಡಿರುವುದಲ್ಲ. ದೇಶದಾದ್ಯಂತದ ವಿವಿಧ ಪ್ರಕರಣಗಳು ಇಂಥ ಅನುಮಾನಗಳಿಗೆ ಪ್ರೇರಣೆಯನ್ನು ಒದಗಿಸುತ್ತಿವೆ.
ಕೊರೋನಾ ಪುರಾತನ ಕಾಲದ ಕಾಯಿಲೆಯಲ್ಲ. 2019 ಡಿಸೆಂಬರ್‍ನಲ್ಲಿ ಚೀನಾ ಈ ಕಾಯಿಲೆಯ ಉಪಸ್ಥಿತಿಯ ಕುರಿತಂತೆ ಅಧಿಕೃತವಾಗಿ ಘೋಷಿಸುವಾಗ ಈ ಜಗತ್ತಿನ 600 ಕೋಟಿ ಜನಸಂಖ್ಯೆಯನ್ನು  ಒಂದೇ ಬಾರಿ ಸಾಯಿಸಿ ಬಿಡಬಹುದಾದಷ್ಟು ಅಣುಬಾಂಬುಗಳನ್ನು ಕೇವಲ ಒಂದೇ ರಾಷ್ಟ್ರ ತನ್ನ ಗೋದಾಮಿನಲ್ಲಿ ಪೇರಿಸಿಟ್ಟಿರುವ ವಾಸ್ತವ ಕೂಡ ಈ ಜಗತ್ತಿಗೆ ಗೊತ್ತಿತ್ತು. ಮಾನವ ಹತ್ಯೆಯ ಹೊರತಾಗಿ  ಈ ಅಣುಬಾಂಬುಗಳಿಗೆ ಬೇರೆ ಯಾವ ಉದ್ದೇಶವೂ ಇಲ್ಲ. ಈ ಅಣುಬಾಂಬಿಗೆ ಬಲಿಯಾಗುವವರು ಸಾಯಿಸಲೇಬೇಕಾದ ಅಪರಾಧಿಗಳೂ ಅಲ್ಲ. ಯಾರದೋ ಹುಚ್ಚಿಗೆ, ತಪ್ಪಿಗೆ ಅಥವಾ ಅಹಂಕಾರಕ್ಕೆ  ಪ್ರತಿಯಾಗಿ ಈ ಅಣುಬಾಂಬುಗಳು ಇನ್ನಾರನ್ನೋ ಸಾಯಿಸುತ್ತವೆ. ಕೊರೋನಾವೂ ಅಷ್ಟೇ. ಯಾವುದೋ ಪ್ರಯೋಗಾಲಯದ ತಪ್ಪಿನಿಂದಲೋ ಅಥವಾ ಪ್ರಕೃತಿ ಸಹಜವಾಗಿಯೋ ಹುಟ್ಟಿಕೊಂಡ  ಕೊರೋನಾವು ಇವತ್ತು ಅಪರಾಧಿ, ನಿರಪರಾಧಿ ಎಂಬ ವರ್ಗೀಕರಣವನ್ನೇ ಮಾಡದೇ ಸರ್ವರನ್ನೂ ಕಾಡತೊಡಗಿದೆ. ದುರಂತ ಏನೆಂದರೆ,
ಜಗತ್ತಿನ ಅಷ್ಟೂ ಮಂದಿಯನ್ನು ಸಾಯಿಸಿಬಿಡಬಹುದಾದಷ್ಟು ಬಾಂಬುಗಳನ್ನು ತಯಾರಿಸಿಟ್ಟುಕೊಂಡಿರುವ ಜಗತ್ತೇ ಯಕಶ್ಚಿತ್ ಒಂದು ಜ್ವರಕ್ಕೆ ಮಂಡಿಯೂರಿ ಬಿಟ್ಟಿರುವುದು.
ಇದು ಪುರಾತನ ಕಾಲವಲ್ಲ. ಚೀನಾದ ಯಾವುದೋ ಭೂಗರ್ಭದಲ್ಲಿ ನಡೆಯುವ ಸಂಶೋಧನೆಯನ್ನು ಅಲ್ಲಿಂದ ಲಕ್ಷಾಂತರ ಕಿಲೋಮೀಟರ್ ದೂರದ ಇನ್ನಾವುದೋ ಪ್ರದೇಶದಲ್ಲಿ ನಿಂತು  ಗ್ರಹಿಸಬಹುದಾದ ಕಾಲ. ಕೊರೋನಾ 20ನೇ ಶತಮಾನದ ಕಾಯಿಲೆ. ಸ್ಪ್ಯಾನಿಷ್ ಫ್ಲೂ, ಪ್ಲೇಗ್‍ಗಳ ಕಾಲಕ್ಕೆ ಹೋಲಿಸಿದರೆ, ಕೊರೋನಾದ ಕಾಲ ಅತ್ಯಂತ ಆಧುನಿಕವಾದುದು. ಕೊರೋನಾ ಕಾಯಿಲೆಯ  ಲಕ್ಷಣಗಳು ಏನೇನು ಮತ್ತು ಯಾವೆಲ್ಲ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಿದರೆ ಅದನ್ನು ಅನ್ಯಗೊಳಿಸಬಹುದು ಎಂಬ ಮಾಹಿತಿಯನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಜನರಿಗೆ  ತಲುಪಿಸಬಹುದಾದಷ್ಟು ತಂತ್ರಜ್ಞಾನಗಳು ಆವಿಷ್ಕಾರಗೊಂಡಿರುವ ಕಾಲ. ಸ್ಪ್ಯಾನಿಷ್ ಫ್ಲೂ, ಪ್ಲೇಗ್‍ನಂಥ ಸಾಂಕ್ರಾಮಿಕ ರೋಗಗಳು ಈ ಜಗತ್ತಿನ ಮೇಲೆ ದಾಳಿ ಮಾಡಿದ ಕಾಲದಲ್ಲಿ ಈ ಅವಕಾಶಗಳು ಇರಲಿಲ್ಲ. ಒಂದು ಪ್ರದೇಶಕ್ಕೆ ಪ್ಲೇಗ್ ಬಂದಿದೆಯೆಂಬುದು ಇನ್ನೊಂದು ಪ್ರದೇಶಕ್ಕೆ ತಿಳಿಯುವುದಕ್ಕೆ ಬೇಕಾದ ವ್ಯವಸ್ಥೆಯಿರಲಿಲ್ಲ. ಪ್ಲೇಗ್‍ನ ಲಕ್ಷಣಗಳೇನು ಮತ್ತು ಅದಕ್ಕಿರುವ ಔಷಧಿಗಳೇನು ಎಂಬಂತಹ  ಬಹುಮುಖ್ಯ ಮಾಹಿತಿಗಳೂ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವ ದಾರಿಗಳಿರಲಿಲ್ಲ. ಆದರೆ ಕೊರೋನಾ ಹಾಗಲ್ಲ. ಕೊರೋನಾ ವೈರಸ್‍ನ ಚಿತ್ರದಿಂದ ಹಿಡಿದು ಚಿಕಿತ್ಸೆ ಪಡೆಯುತ್ತಿರುವವರ ವರೆಗೆ  ಮತ್ತು ಪಿಪಿಇ ಕಿಟ್ ಧರಿಸಿದ ಶುಶ್ರೂಕರಿಂದ ಆರಂಭವಾಗಿ ಮನೆ ಮದ್ದುಗಳ ಪಟ್ಟಿಯ ವರೆಗೆ ಪ್ರತಿಯೊಂದೂ ಜನರ ಬೆರಳಿಗೆ ದಕ್ಕುವ ಸ್ಥಿತಿಯಿದೆ. ಹೀಗಿದ್ದೂ ಕೊರೋನಾ ಕುರಿತು ಸತ್ಯಕ್ಕಿಂತ ಭೀತಿಯೇ  ಮತ್ತು ಅವಾಸ್ತವವೇ ಮೇಲುಗೈ ಪಡೆದಿರಲು ಕಾರಣವೇನು? ಮೃತದೇಹದೊಂದಿಗೆ ಅತ್ಯಂತ ಅನಾಗರಿಕವಾಗಿ ನಡೆದುಕೊಳ್ಳುತ್ತಿರುವ ಪ್ರಕರಣಗಳ ಹಿನ್ನೆಲೆಯೇನು? ಅಂದಹಾಗೆ,
ಕೊರೋನಾ ಪೀಡಿತರನ್ನು ಮತ್ತು ಕೊರೋನಾದಿಂದಾಗಿ ಸಾವಿಗೀಡಾದವರನ್ನು ಪ್ರಾಣಿಗಳಿಗಿಂತ ಕೀಳಾಗಿ ನಡೆಸಿಕೊಳ್ಳುತ್ತಿರುವುದು ಜನಸಾಮಾನ್ಯರಲ್ಲ. ಪಿಪಿಇ ಕಿಟ್ ಧರಿಸಿರುವ ಮತ್ತು ಕೊರೋನಾದ ಬಗ್ಗೆ  ಅತ್ಯಂತ ಹೆಚ್ಚು ಮಾಹಿತಿ ಇರುವವರೇ ಇದರಲ್ಲಿ ಮುಂಚೂಣಿಯಲ್ಲಿದ್ದಾರೆ. ಇದೊಂದು ಒಗಟು. ಈ ಒಗಟನ್ನು ಬಿಡಿಸುವುದು ಹೇಗೆ? ಜನರನ್ನು ಎಜುಕೇಟ್ ಮಾಡಬೇಕಾಕಿದ್ದ ತಂತ್ರಜ್ಞಾನಗಳು,  ಅದಕ್ಕಿಂತಲೂ ಹೆಚ್ಚಾಗಿ ಭೀತಿಗೆ ಮತ್ತು ಅಸತ್ಯಗಳ ಪ್ರಸಾರಕ್ಕೆ ಬಳಕೆಯಾಗುತ್ತಿವೆಯೇ ಎಂಬುದನ್ನು ಈ ದುರಿತ ಕಾಲದಲ್ಲಿ ವಿಶ್ಲೇಷಿಸಬೇಕಿದೆ. ಅದೇವೇಳೆ,
ಸಾರ್ವಜನಿಕವಾಗಿ ಇರುವ ಭೀತಿಗೂ ಕೊರೋನಾಕ್ಕೂ ನಡುವೆ ಏನು ಸಂಬಂಧ ಮತ್ತು ಎಷ್ಟು ವಾಸ್ತವ ಅನ್ನುವ ಚರ್ಚೆ-ಸಂವಾದಗಳು ಆರಂಭಗೊಂಡಿರುವುದು ಸ್ವಾಗತಾರ್ಹ. ಇದು  ಮುಂದುವರಿಯಬೇಕು. ಕೊರೋನಾ ಪ್ರಕೃತಿ ಸಹಜವೋ ಅಥವಾ ಮಾನವ ಎಡವಟ್ಟೋ ಅನ್ನುವ ಸಂದೇಹದಂತೆಯೇ ಕೊರೋನಾ ಕಾಲದ ಬೆಳವಣಿಗೆಗಳ ಸುತ್ತಲೂ ಸಂದೇಹವೊಂದನ್ನು  ಇಟ್ಟುಕೊಳ್ಳುವುದು ಮತ್ತು ಸೂಕ್ಷ್ಮವಾಗಿ ಅವಲೋಕಿಸಿಕೊಳ್ಳುವುದು ಅತ್ಯಂತ ಅಗತ್ಯ. ಈ ಕಾಯಿಲೆಯು ಸಾಮುದಾಯಿಕ ಹರಡುವಿಕೆಯನ್ನು ಪ್ರಾರಂಭಿಸಿದೆ. ಹಾಗೆಯೇ ಅತ್ಯಂತ ದುಬಾರಿ ಯಂತ್ರಗಳು  ಆಸ್ಪತ್ರೆಗಳ ಕೋಣೆ ಸೇರಿಕೊಳ್ಳತೊಡಗಿವೆ. ಕೊರೋನಾ ಪರೀಕ್ಷೆಯ ದೃಷ್ಟಿಯಿಂದ ಅವುಗಳು ಎಷ್ಟು ಅಗತ್ಯವೋ ಆ ಯಂತ್ರಕ್ಕೆ ಸುರಿದಿರಬಹುದಾದ ಮೊತ್ತವನ್ನು ರೋಗಿಗಳಿಂದ ಭರಿಸಿಕೊಳ್ಳಬೇಕಾದುದೂ  ಆಸ್ಪತ್ರೆಗಳ ಅಗತ್ಯ. ನಿಜವಾಗಿ,
ಈ ಜಗತ್ತಿನ ಎಲ್ಲ ಕಾಯಿಲೆಗಳೂ ಮಾನವ ದ್ರೋಹಿಯಾದುದು ಆ ಕಾಯಿಲೆಗಳಿಗಿಂತ ಹೆಚ್ಚಾಗಿ ಆ ಕಾಯಿಲೆಯ ಹೆಸರಲ್ಲಿ ನಡೆಯುವ ಪರೀಕ್ಷೆಗಳು, ಔಷಧಗಳು ಮತ್ತು ಅದಕ್ಕೆ ತಗಲುವ ದುಬಾರಿ  ವೆಚ್ಚಗಳಿಂದಾಗಿದೆ. ಕೊರೋನಾಕ್ಕೆ ಮದ್ದು ಕಂಡು ಹಿಡಿಯುವ ಪೈಪೋಟಿ ಇವತ್ತು ಜಾಗತಿಕ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದೆ. ಇದೊಂದು ಬಹು ದುಬಾರಿ ಪ್ರಕ್ರಿಯೆ. ಸಂಶೋಧನೆಗೆಂದು ಕೋಟಿ ಕೋಟಿ  ರೂಪಾಯಿಯನ್ನು ಖರ್ಚು ಮಾಡಬೇಕಾಗುತ್ತದೆ. ಸಂಶೋಧಿತ ಔಷಧವನ್ನು ಜನರ ಮೇಲೆ ಪ್ರಯೋಗಿಸುವುದು, ಔಷಧ ಪರಿಣಾಮಕಾರಿಯೆಂದು ದೃಢಪಡಿಸಿಕೊಳ್ಳುವುದು ಹಾಗೂ ಔಷಧ ತಯಾರಿಸಿ  ಮಾರುಕಟ್ಟೆಗೆ ಬಿಡುಗಡೆಗೊಳಿಸುವುದು-ಇತ್ಯಾದಿ ಪ್ರಕ್ರಿಯೆಗಳಿಗೆ ದೀರ್ಘ ಸಮಯ ಹಿಡಿಯುತ್ತದೆ. ಇದು ಕೇವಲ ಕೊರೋನಾಕ್ಕೆ ಸಂಬಂಧಿಸಿ ಮಾತ್ರ ಇರುವ ಸಮಸ್ಯೆಯಲ್ಲ. ಯಾವುದೇ ಕಾಯಿಲೆಗೆ  ಸಂಬಂಧಿಸಿದ ಔಷಧವೂ ಇಂಥ ಪ್ರಕ್ರಿಯೆಗಳಿಗೆ ತನ್ನನ್ನು ಒಡ್ಡಿಕೊಳ್ಳಲೇಬೇಕು. ಒಂದುವೇಳೆ,
ಇಂಥ ಸಂಶೋಧನಾ ಪ್ರಕ್ರಿಯೆಗಳು ನಡೆಯುವ ಸಂದರ್ಭದಲ್ಲೇ  ಆ ಕಾಯಿಲೆಯು ಪ್ರಾಕೃತಿಕ ಕಾರಣದಿಂದಲೋ ಅಥವಾ ನಾಟಿ ಔಷಧಗಳಿಗೆ ಶರಣಾಗಿಯೋ ಕಾಣೆಯಾದರೆ, ಈ ಸಂಶೋಧನೆಗೆ ಸುರಿದ  ಕೋಟಿಗಟ್ಟಲೆ ರೂಪಾಯಿಗಳ ಪಾಡೇನು? ಇದು ಕೊರೋನಾಕ್ಕೆ ಸಂಬಂಧಿಸಿ ಮಾತ್ರ ಉದ್ಭವವಾಗಿರುವ ಪ್ರಶ್ನೆಯಲ್ಲ. ಯಾವುದೇ ಕಾಯಿಲೆಗೆ ಸಂಬಂಧಿಸಿ ಮಾಡಲಾಗುವ ಸಂಶೋಧನೆಯೂ  ಇಂಥz್ದÉೂಂದು ಅಪಾಯವನ್ನು ಎದುರಿಸಿಯೇ ಇರುತ್ತದೆ. ಇಂಥ ಸಂದರ್ಭದಲ್ಲಿ ಒಂದೋ ಈ ಔಷಧ ಸಂಶೋಧನಾ ನಿರತ ರಾಷ್ಟ್ರಗಳು ಆ ಕಾಯಿಲೆಯನ್ನು ಮತ್ತಷ್ಟು ಅವಧಿ ವರೆಗೆ  ಜೀವಂತವಾಗಿರುವಂತೆ ನೋಡಿಕೊಳ್ಳಬೇಕು ಅಥವಾ ತಾವು ಸಂಶೋಧನೆಗೆಂದು ಹೂಡಿಕೆ ಮಾಡಿರುವ ಹಣದ ಬಗ್ಗೆ ಚಿಂತೆ ಬಿಡಬೇಕು. ಆದ್ದರಿಂದಲೇ, ಇವತ್ತು ಅಸ್ತಿತ್ವದಲ್ಲಿರುವ ಕಾಯಿಲೆಗಳ ಬಗ್ಗೆ ಅ ನುಮಾನ ಮೂಡುವುದು. ವರ್ಷದಿಂದ ವರ್ಷಕ್ಕೆ ಹೊಸ ಹೊಸ ಕಾಯಿಲೆಗಳು ಹುಟ್ಟಿಕೊಳ್ಳುವುದು ಮತ್ತು ಹಳೆ ಕಾಯಿಲೆಗಳು ಮತ್ತಷ್ಟು ವೃದ್ಧಿಗೊಂಡು ರೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದ ನ್ನು ಸಂದೇಹದಿಂದ ನೋಡುವುದು. ಇವೆಲ್ಲ ಸಹಜವೇ, ಅಸಹಜವೇ? ಔಷಧ ಮಾಫಿಯಾ ಇದರ ಹಿಂದಿರಬಹುದೇ? ಕೊರೋನಾದ ಸುತ್ತ ನಡೆಯುತ್ತಿರುವ ಬೆಳವಣಿಗೆಯನ್ನು ಇದೇ ಕನ್ನಡಕವನ್ನಿಟ್ಟು  ನೋಡಬಹುದೇ?
ಚರ್ಚೆಗಳು ನಡೆಯಲಿ.

Friday 10 July 2020

ಆಕ್ಸಿಜನ್ ಸೆಂಟರ್ ಆದ ಮಸೀದಿ, ಕ್ವಾರಂಟೈನ್ ಕೇಂದ್ರವಾದ ಹಜ್ ಭವನ: ಸುಳ್ಳೇ ಒಮ್ಮೆ ಶರಣಾಗು



ಕೊರೋನಾದಿಂದ ಈ ದೇಶ ಕಲಿತ ಅತಿದೊಡ್ಡ ಪಾಠ ಏನೆಂದರೆ, ಸುಳ್ಳಿಗೆ ದೀರ್ಘಾಯುಷ್ಯ ಇಲ್ಲ ಅನ್ನುವುದನ್ನು. ಇದನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕೆ ಎರಡು ಪ್ರಕರಣಗಳೇ ಧಾರಾಳ ಸಾಕು.
1. ಬಾಬಾ ರಾಮ್‍ದೇವ್.
2. ಮುಸ್ಲಿಮರು.
ಒಂದಷ್ಟು ನಿಗೂಢತೆಗಳನ್ನು ತನ್ನ ಸುತ್ತ ಉಳಿಸಿಕೊಂಡೇ ಪ್ರವರ್ಧಮಾನಕ್ಕೆ ಬಂದ ಬಾಬಾ ರಾಮ್‍ದೇವ್‍ರನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿದ್ದು ಕೊರೋನಾ. ಕೊರೋನಾಕ್ಕೆ ಔಷಧಿ ಸಂಶೋ ಧಿಸಿದ್ದೇವೆ ಎಂದು ಪತ್ರಿಕಾಗೋಷ್ಠಿ ಕರೆದು ಘೋಷಿಸಿದ್ದಲ್ಲದೇ, ಔಷಧಿಯನ್ನೂ ಬಿಡುಗಡೆಗೊಳಿಸಿದ ಬಳಿಕ ಉಂಟಾದ ತಲ್ಲಣದಲ್ಲಿ ಪತಂಜಲಿ ಕಂಪೆನಿಯ ಮುಖ್ಯಸ್ಥರ ಸಹಿತ ಐದಾರು ಮಂದಿಯ ವಿರುದ್ಧ  ಎಫ್‍ಐಆರ್ ದಾಖಲಾಗಿದೆ. ನೆಗಡಿ, ಜ್ವರದಂತಹ ಸಾಮಾನ್ಯ ಕಾಯಿಲೆಗೆ ಸಂಬಂಧಿಸಿದ ಔಷಧಿಯನ್ನು ಕೊರೋನಾ ಔಷಧಿ ಎಂದು ಸಾರಿರುವುದಕ್ಕೆ ಸರಕಾರದ ವತಿಯಿಂದಲೇ ವಿರೋಧ ವ್ಯಕ್ತವಾಗಿದೆ.  ಅನುಮತಿ ಪಡೆಯದೇ ಔಷಧ ಬಿಡುಗಡೆಗೊಳಿಸಿದ ಆರೋಪದೊಂದಿಗೆ, ಸುಳ್ಳು ಹೇಳಿ ಜನರನ್ನು ತಪ್ಪು ದಾರಿಗೆಳೆದ ಕಳಂಕವನ್ನೂ ಪತಂಜಲಿ ಸಂಸ್ಥೆ ಇದೀಗ ಹೊತ್ತುಕೊಂಡಿದೆ. ನಿಜವಾಗಿ,
ಭಯದಲ್ಲಿರುವ ಜನರನ್ನು ಸುಳ್ಳಿನಿಂದ ಖರೀದಿಸುವ ಪ್ರಯತ್ನಕ್ಕೆ ಸದಾ ಯಶಸ್ಸು ಲಭ್ಯವಾಗದು ಎಂಬುದನ್ನು ಪತಂಜಲಿಯನ್ನು ಪೋಷಿಸುತ್ತಾ ಬಂದ ಸರಕಾರವೇ ಅನೌಪಚಾರಿಕವಾಗಿ  ಘೋಷಿಸುವಂತಾದುದು ಸತ್ಯಕ್ಕೆ ಸಿಕ್ಕ ಬಲುದೊಡ್ಡ ಗೆಲುವು. ಈ ಬೆಳವಣಿಗೆಗಿಂತ ತುಸು ಮೊದಲೇ, ಇನ್ನೊಂದು ಸುಳ್ಳಿನ ತಲೆಗೂ ಕೊರೋನಾ ಬಲವಾದ ಏಟನ್ನು ಕೊಟ್ಟಿದೆ ಮತ್ತು ಈಗಲೂ  ಕೊಡುತ್ತಿದೆ. ಪತಂಜಲಿಗೆ ಹೋಲಿಸಿದರೆ ಕೊರೋನಾ ನೀಡಿರುವ ಈ ಏಟು ಅತ್ಯಂತ ಪ್ರಬಲವಾದುದು ಮತ್ತು ಸಮಾಜದ ಕಣ್ಣು ತೆರೆಸುವಂಥದ್ದು.
ಸುಳ್ಳುಗಳನ್ನು ತಯಾರಿಸುವುದಕ್ಕೆಂದೇ ಕಾರ್ಖಾನೆಗಳನ್ನು ಸ್ಥಾಪಿಸಿ, ಕೋರೆಹಲ್ಲು-ವಿಕಾರ ಉಗುರುಗಳುಳ್ಳ ಭೀತಿಕಾರಕ ಸುಳ್ಳುಗಳನ್ನು ಉತ್ಪಾದಿಸಿ ಅದಕ್ಕೊಂದು ನಿರ್ದಿಷ್ಟ ರೂಪವನ್ನು ಕೊಟ್ಟು ಹಂಚುವ  ಪ್ರಕ್ರಿಯೆ ಕೊರೋನಾ ಪೂರ್ವದಲ್ಲೇ ಈ ದೇಶದಲ್ಲಿ ಚಾಲ್ತಿಯಲ್ಲಿತ್ತು. ಈ ಎಲ್ಲ ಸುಳ್ಳುಗಳೂ ಗುರಿಯಾಗಿಸಿಕೊಂಡಿದ್ದುದು ಮುಸ್ಲಿಮರನ್ನು. ಕ್ರಮೇಣ ಎಂಥ ಹೀನಾಯ ಮತ್ತು ನಗೆಪಾಟಲು ಸುಳ್ಳುಗಳಿಗೂ  ನಿಧಾನಕ್ಕೆ ಮಾರುಕಟ್ಟೆ ಲಭ್ಯವಾಗತೊಡಗಿತು. ಮುಸ್ಲಿಮರನ್ನು ಖಳರಂತೆ ಬಿಂಬಿಸುವ ಯಾವ ನಕಲಿ ಸರಕಿಗೂ ಬೆಲೆ ಬರತೊಡಗಿತು. ಚುನಾವಣೆಯಲ್ಲೂ ಅದುವೇ ನಿರ್ಣಾಯಕ ಪಾತ್ರ ವಹಿಸತೊಡಗಿತು.  ಆದ್ದರಿಂದಲೇ,
ಈ ಸುಳ್ಳಿನ ಉತ್ಪಾದಕರು ಕೊರೋನಾ ಕಾಲದಲ್ಲೂ ಚುರುಕಾದರು. ಕೊರೋನಾ ಪೂರ್ವದಲ್ಲಿ ಸುಳ್ಳಿಗೆ ಸಿಕ್ಕ ಯಶಸ್ಸಿನಿಂದ ಉತ್ತೇಜಿತರಾಗಿ ಕೊರೋನಾ ಭಾರತದಲ್ಲೂ ಇದೇ ತಂತ್ರವನ್ನು  ಮುಂದುವರಿಸುವುದಕ್ಕೆ ನಿರ್ಧರಿಸಿದರು. ಮಾರ್ಚ್ 24ರಂದು ದೇಶದಾದ್ಯಂತ ಲಾಕ್‍ಡೌನ್ ಘೋಷಿಸುವಾಗ ಕೊರೋನಾ ಒಂದು ವೈರಸ್‍ಗೆ ಅಷ್ಟೇ ಆಗಿತ್ತು. ಕೋವಿಡ್-19 ಎಂಬ ಹೆಸರಲ್ಲಿ  ಗುರುತಿಸಿಕೊಂಡಿದ್ದ ಈ ವೈರಸ್ ಎಪ್ರಿಲ್ 1ರಂದು ತಬ್ಲೀಗಿ ವೈರಸ್ ಎಂದು ನಾಮಕಾರಣ ಮಾಡುವ ಮೂಲಕ ಸುಳ್ಳಿನ ಕಾರ್ಖಾನೆಗಳು ರಂಗಕ್ಕಿಳಿದುವು. ರಾಶಿ ರಾಶಿ ಸುಳ್ಳುಗಳು ಉತ್ಪಾದನೆಯಾದುವು.  ಕೊರೋನಾಕ್ಕೆ ಮುಸ್ಲಿಮ್ ವೇಶವನ್ನು ತೊಡಿಸಿ ದೇಶದಾದ್ಯಂತ ಮೆರವಣಿಗೆ ನಡೆಸಲಾಯಿತು. ಅದರಿಂದ ಪ್ರಭಾವಿತರಾದ ಜನರು ಮುಸ್ಲಿಮರನ್ನು ತಪ್ಪಿತಸ್ಥರಂತೆ ಕಂಡದ್ದೂ ಇದೆ. ಹಲ್ಲೆ ನಡೆಸಿದ್ದೂ ಇದೆ.  ಪೊಲೀಸರೂ ಇಂಥ ಸುಳ್ಳುಗಳಿಂದ ಪ್ರಭಾವಿತರಾಗಿ ಅಮಾನುಷವಾಗಿ ನಡಕೊಂಡದ್ದೂ ಇದೆ. ಆದರೆ ಸುಳ್ಳಿಗೆ ಆಯುಷ್ಯ ತೀರಾ ಕಡಿಮೆ ಎಂಬುದನ್ನು ಕೊರೋನಾ ಭಾರತದ ಈ ನಾಲ್ಕು ತಿಂಗಳುಗಳೇ  ಮತ್ತೊಮ್ಮೆ ಸಾಬೀತುಪಡಿಸಿದೆ.
ಕಳೆದವಾರ ಮಹಾರಾಷ್ಟ್ರದ ಭೀವಂಡಿಯಲ್ಲಿರುವ ಮಕ್ಕಾ ಮಸೀದಿಯು ತನ್ನ ಅಭೂತಪೂರ್ವ ನಿರ್ಧಾರಕ್ಕಾಗಿ ದೇಶದಾದ್ಯಂತ ಸುದ್ದಿಗೀಡಾಯಿತು. ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ಅಧೀನದಲ್ಲಿರುವ ಈ ಮಸೀದಿಯನ್ನು ಆಕ್ಸಿಜನ್ ಸೆಂಟರ್ ಆಗಿ ಬದಲಾಯಿಸಿರುವುದಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಯಿತು. ಕೊರೋನಾ ಪೀಡಿತರಿಗೆ ಉಚಿತವಾಗಿ ಆಕ್ಸಿಜನ್ ಒದಗಿಸುವುದಕ್ಕಾಗಿ ಈ ಏರ್ಪಾಡು  ಮಾಡಿರುವುದನ್ನು ಸುಳ್ಳಿನಿಂದ ಪ್ರಭಾವಿತರಾದವರೂ ಮೆಚ್ಚಿಕೊಂಡರು. ಹಾಗೆಯೇ, ಸೋಂಕಿನಿಂದ ಗುಣಮುಖರಾದ ತಬ್ಲೀಗಿ ಸಂಘಟನೆಯ ಸದಸ್ಯರು ಸೋಂಕಿನಿಂದ ನರಳುತ್ತಿರುವ ಭಾರತೀಯರನ್ನು  ಉಳಿಸಿಕೊಳ್ಳುವುದಕ್ಕಾಗಿ ತಮ್ಮ ಪ್ಲಾಸ್ಮಾವನ್ನು ನೀಡಲು ಮುಂದೆ ಬಂದಾಗ, ತಬ್ಲೀಗಿ ವೈರಸ್ ಎಂದು ಅಣಕಿಸಿದವರೇ ಮೌನವಾದರು. ಕೊರೋನಾ ಶಂಕಿತ ಆದರೆ, ರೋಗ ಲಕ್ಷಣಗಳಿಲ್ಲದ ಬೆಂಗಳೂರಿನ  ಮಂದಿಯನ್ನು ಇವತ್ತು ಕ್ವಾರಂಟೈನ್‍ಗೆ ಒಳಪಡಿಸಲಾಗುತ್ತಿರುವುದು ಹಜ್ಜ್ ಭವನದಲ್ಲಿ.
ಈ ದೇಶದ ಅನೇಕ ಮಸೀದಿಗಳು, ಮದ್ರಸಗಳು, ಬೀದರ್ ನ  ಶಾಹೀನ್‍ನಂಥ ಮುಸ್ಲಿಮ್ ಒಡೆತನದ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು-ಕ್ವಾರಂಟೈನ್ ಕೇಂದ್ರಗಳಾಗಿ ಬದಲಾಗಿವೆ. ಕೊರೋನಾ ಪೀಡಿತ  ವ್ಯಕ್ತಿಯ ಮೃತದೇಹವನ್ನು ಸ್ವೀಕರಿಸಲು ರುದ್ರಭೂಮಿಗಳು ವಿಫಲವಾದಾಗ ಅವನ್ನು ಸ್ವೀಕರಿಸುವುದಕ್ಕೆ ಕಬರಸ್ತಾನಗಳು ಮುಂದೆ ಬಂದಿವೆ. ಕೊರೋನಾ ಪೀಡಿತ ವ್ಯಕ್ತಿಯ ಶವದಫನಕ್ಕೆ ಈ ದೇಶದ ಯಾವ  ಕಬರಸ್ತಾನದಲ್ಲೂ ವಿರೋಧ ವ್ಯಕ್ತವಾಗಿಲ್ಲ. ವಿಶೇಷ ಏನೆಂದರೆ, ಕೊರೋನಾದಿಂದಾಗಿ ಸಾವಿಗೀಡಾದ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸುವುದಕ್ಕೆಂದೇ ಮುಸ್ಲಿಮ್ ಸಮುದಾಯದ ಸಂಘಟನೆಗಳು  ತರಬೇತುಗೊಂಡ ತಂಡವನ್ನೇ ರಚಿಸಿವೆ. ಕೊರೋನಾ ಪೀಡಿತ ವ್ಯಕ್ತಿಯ ಮೃತದೇಹವನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವುದು ಬಿಡಿ, ತಮ್ಮ ವ್ಯಾಪ್ತಿಯಲ್ಲಿ ಶವ ಸಂಸ್ಕಾರಕ್ಕೇ ಭಯಪಟ್ಟು ವಿರೋಧ  ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ಮುಸ್ಲಿಮ್ ಸಮುದಾಯವು ಆ ಇಡೀ ಪ್ರಕ್ರಿಯೆಯನ್ನು ಅತ್ಯಂತ ಸುಲಲಿತವಾಗಿ ನಿರ್ವಹಿಸುತ್ತಿದೆ. ಮೃತದೇಹದ ಗೌರವಕ್ಕೆ ಒಂದಿಷ್ಟೂ ಚ್ಯುತಿ ಬರದಂತೆಯೇ ಸಕಲ  ಮರ್ಯಾದೆಗಳೊಂದಿಗೆ ಶವಸಂಸ್ಕಾರ ನಡೆಸುತ್ತಿದೆ.

ಇದೇವೇಳೆ, ಕೊರೋನಾದಿಂದ ಸಂಕಷ್ಟಕ್ಕೊಳ್ಳಗಾದವರ ಸೇವೆಯಲ್ಲಿ ಮುಸ್ಲಿಮ್ ಸಮುದಾಯ ತೊಡಗಿಸಿಕೊಂಡ ರೀತಿಗೆ ಈ ದೇಶದ ಸುಳ್ಳಿನ ಕಾರ್ಖಾನೆಗಳೇ ಬೆರಗಾಗಿವೆ. ಅತ್ಯಂತ ಬಡ  ಸಮುದಾಯವೊಂದು ಆರ್ಥಿಕವಾಗಿ ಸಬಲ ಸಮುದಾಯವನ್ನೇ ಮೀರಿಸುವ ರೀತಿಯಲ್ಲಿ ಸೇವಾತತ್ಪರವಾದುದನ್ನು ಯಾವ ಸುಳ್ಳಿಗೂ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ.
ಅಂದಹಾಗೆ,

ಮುಸ್ಲಿಮರನ್ನು ಖಳರಂತೆ ಮತ್ತು ದೇಶದ್ರೋಹಿಗಳಂತೆ ಬಿಂಬಿಸುವ ಸುಳ್ಳಿನ ಕತೆಗಳನ್ನು ಉತ್ಪಾದಿಸುವವರಿಗೆ ನಿಜ ಏನೆಂದು ಗೊತ್ತಿತ್ತು. ಮಾತ್ರವಲ, ನಿಜ ಏನೆಂದು ಹೇಳಿದರೆ, ತಮ್ಮ ಅಸ್ತಿತ್ವಕ್ಕೆ  ಕುತ್ತು ಬರುವುದೆಂಬುದೂ ಗೊತ್ತಿತ್ತು. ಆದ್ದರಿಂದಲೇ ಸುಳ್ಳು ಚಿರಕಾಲ ಉಳಿಯಲಿ ಎಂಬ ಮಹದಾಸೆಯೊಂದಿಗೆ ನಿರಂತರ ಸುಳ್ಳಿನ ಕಾರ್ಖಾನೆಯಲ್ಲಿ ಸುದ್ದಿಗಳನ್ನು ಉತ್ಪಾದಿಸಿದರು. ಹಂಚಿಕೊಂಡರು.  ಆದರೆ,

ಇದೀಗ ಆ ಸುಳ್ಳು ಸುದ್ದಿಗಳ ಪ್ರಭಾವದಿಂದ ಭಾರತೀಯರು ಹೊರ ಬರುವುದಕ್ಕೆ ಪೂರಕವಾದ ಸನ್ನಿವೇಶ ದೇಶದಲ್ಲಿ ನಿರ್ಮಾಣವಾಗುತ್ತಿದೆ. ಸುಳ್ಳುಗಳು ಬೆತ್ತಲಾಗತೊಡಗಿವೆ. ಬಾಬಾ ರಾಮ್‍ದೇವ್‍ರ  ಪತಂಜಲಿ ಸಂಸ್ಥೆಯು ಇದರ ಉದ್ಘಾಟನೆ ಮಾಡಿರುವಂತಿದೆ. ಈ ಪತಂಜಲಿ ಸಂಸ್ಥೆಯ ಸುತ್ತ ಭಾವನಾತ್ಮಕ ಭ್ರಮೆಯೊಂದನ್ನು ತೇಲಿಬಿಡುವಲ್ಲಿ ಮುಂಚೂಣಿಯಲ್ಲಿ ನಿಂತಿದ್ದುದು ಇವೇ ಸುಳ್ಳಿನ ಕಾರ್ಖಾನೆಗಳು. ಪತಂಜಲಿ ಸಂಸ್ಥೆಯ ಉತ್ಪನ್ನಗಳನ್ನು ಇವೇ ಸುಳ್ಳಿನ ಕಾರ್ಖಾನೆಯಲ್ಲಿ ಉತ್ಪಾದಿತ ಸುದ್ದಿಗಳು ಮಾರುಕಟ್ಟೆ ಮಾಡುತ್ತಿದ್ದುವು. ಅಲ್ಲಿ ತಯಾರಾದ ಔಷಧಗಳನ್ನು ಬಳಸಿ ನಿರಾಶೆಗೊಂಡವರ ಅಭಿ ಪ್ರಾಯಗಳಿಗೆ ವೇದಿಕೆ ಸಿಗದಂತೆ ಮತ್ತು ಸಿಕ್ಕರೂ ಅವುಗಳ ತಲೆಗೆ ಹೊಡೆದಂತೆ ಸುಳ್ಳುಗಳನ್ನು ಸೃಷ್ಟಿಸಿ ಆ ಅಭಿಪ್ರಾಯಗಳನ್ನೇ ದೇಶದ್ರೋಹಿಯಾಗಿಸುವಂತೆ ಮಾಡುವಲ್ಲಿ ಅವು ಶ್ರಮ ವಹಿಸುತ್ತಿದ್ದುವು. ಇದೀಗ ಕೊರೋನಾ ಈ ಎಲ್ಲವನ್ನೂ ಬಯಲಿಗೆ ತಂದಿದೆ. ನಿಜ ಏನು ಎಂಬುದನ್ನು ಘಂಟಾಘೋಷವಾಗಿ ಸಾರಿದೆ.

ಪತಂಜಲಿ ಸಂಸ್ಥೆಯನ್ನು ಪೋಷಿಸಿ ಬೆಳೆಸುತ್ತಿರುವ ಸರಕಾರವೇ ಪತಂಜಲಿ ಹೊರ ತಂದಿರುವ ಔಷಧಿಯನ್ನು ಒಪ್ಪದಿರುವ ಸ್ಥಿತಿ ಒಂದೆಡೆಯಾದರೆ, ಮುಸ್ಲಿಮರನ್ನು ಹೀನಾಯವಾಗಿ ಕಂಡವರೇ ಅಭಿಮಾನದಿಂದ  ಮೆಚ್ಚಿಕೊಳ್ಳುವ ಸ್ಥಿತಿ ಇನ್ನೊಂದೆಡೆ.
ಸುಳ್ಳಿನ ಪರದೆಯನ್ನು ಸರಿಸಿದ ಕೊರೋನಾಕ್ಕೆ ಅಭಿನಂದನೆಗಳು.

Wednesday 1 July 2020

ಪ್ರಶ್ನೆಗೊಳಗಾಗಬೇಕಾದದ್ದು ಯಾರು- ಪರವಾನಿಗೆ ಕೊಟ್ಟ ಸರಕಾರವೋ ಅಲ್ಲ, ಮಾಂಸವೃತ್ತಿಯಲ್ಲಿರುವ ಬಡಪಾಯಿಗಳೋ?


ಒಂದೇ ವಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಹಿಂಸಾತ್ಮಕ ಘಟನೆಗಳು ನಡೆದಿವೆ. ಈ ಮೂರೂ ಘಟನೆಗಳು ಜಾನುವಾರು ಸಾಗಾಟ ಮತ್ತು ಮಾಂಸ ಸಾಗಾಟಕ್ಕೆ ಸಂಬಂಧಿಸಿದವು. ಹಾವೇರಿಯ  ರಾಣೆಬೆನ್ನೂರಿನಿಂದ ನಾಲ್ಕು ಎಮ್ಮೆಗಳನ್ನು ಮಂಗಳೂರಿಗೆ ಕಾನೂನುಬದ್ಧವಾಗಿಯೇ ಸಾಗಿಸುತ್ತಿದ್ದ ಮುಹಮ್ಮದ್ ಹನೀಫ್ ಎಂಬವರನ್ನು ಅವರದೇ ವಾಹನಕ್ಕೆ ಕಟ್ಟಿ ಹಾಕಿ ಥಳಿಸಲಾದ ಘಟನೆ ನಡೆದ  ಬಳಿಕ ಇನ್ನೆರಡು ಇಂಥದ್ದೇ  ಘಟನೆಗಳು ನಡೆದುವು. ಇದರಲ್ಲಿ ಒಂದು ಸುಳ್ಯದಲ್ಲಿ ನಡೆದರೆ, ಇನ್ನೊಂದು ಮಂಗಳೂರಿನಲ್ಲಿ. ಮಂಗಳೂರಿನ ಪ್ರಾಣಿ ವಧಾಗೃಹದಿಂದ ಪಕ್ಕದ ಕಂಕನಾಡಿ ಮತ್ತು ಜೆಪ್ಪು  ಮಾರುಕಟ್ಟೆಗೆ ಪರವಾನಿಗೆ ಸಹಿತ ಮಾಂಸ ಸಾಗಾಟ ಮಾಡುತ್ತಿದ್ದ ಅಬ್ದುಲ್ ರಶೀದ್ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ. ಅವರ ರಿಕ್ಷಾ ಟೆಂಪೋಗೆ ಹಾನಿ ಮಾಡಲಾಗಿದೆ.
ಇದೊಂದು ಬಗೆಯ ಕ್ರೌರ್ಯ. ವ್ಯವಸ್ಥೆಗೆ ಒಡ್ಡುವ ಸವಾಲು. ಕಾನೂನುಬದ್ಧ ವೃತ್ತಿಯನ್ನು ಅಪರಾಧಿ ಕೃತ್ಯದಂತೆ ಮತ್ತು ಆ ವೃತ್ತಿಯಲ್ಲಿ ತೊಡಗುವವರನ್ನು ಭೀತಿಗೆ ತಳ್ಳುವುದಕ್ಕೆ ಮಾಡುವ ಹುನ್ನಾರ.  ಮಂಗಳೂರಿನಲ್ಲಿರುವ ವಧಾಗೃಹಕ್ಕೆ ಪರವಾನಿಗೆ ಕೊಟ್ಟಿರುವುದು ನಿರ್ದಿಷ್ಟ ಧರ್ಮವೊಂದರ ಧರ್ಮಗುರುಗಳಲ್ಲ, ಸರಕಾರ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಸಂಸದರಿದ್ದಾರೆ. 8 ಮಂದಿ ಶಾಸಕರ ಪೈಕಿ 7  ಮಂದಿಯೂ ಬಿಜೆಪಿಯವರೇ. ರಾಜ್ಯದಲ್ಲಿ ಬಿಜೆಪಿಯದ್ದೇ  ಆಡಳಿತವಿದೆ. ಮಂಗಳೂರು ನಗರದ ಸ್ಥಳೀಯಾಡಳಿತವೂ ಬಿಜೆಪಿಯ ಕೈಯಲ್ಲಿದೆ. ಇಷ್ಟಿದ್ದೂ ಜಾನುವಾರು ಮತ್ತು ಮಾಂಸ ಸಾಗಾಟಗಾರರ  ಮೇಲೆ ಹಲ್ಲೆ ನಡೆಯುವುದೆಂದರೆ ಏನರ್ಥ? ಯಾಕೆ ಸಂಸದರು ಮತ್ತು ಶಾಸಕರು ಈ ಬೆಳವಣಿಗೆಯನ್ನು ಪ್ರಶ್ನಿಸುತ್ತಿಲ್ಲ? ಒಂದುಕಡೆ ವಧಾಗೃಹ, ಜಾನುವಾರು ಸಾಗಾಟ ಮತ್ತು ಮಾಂಸ ಸಾಗಾಣಿಕೆಗೆ  ಪರವಾನಿಗೆಯನ್ನು ಕೊಡುವುದು ಮತ್ತು ಇನ್ನೊಂದು ಕಡೆ ಈ ಪ್ರಕ್ರಿಯೆಯನ್ನೇ ಅವಮಾನಿಸುವ ರೀತಿಯಲ್ಲಿ ನಡೆಯುವ ದುಷ್ಕೃತ್ಯಗಳ ಬಗ್ಗೆ ಮೌನವಾಗುವುದು- ಈ ದ್ವಂದ್ವವೇಕೆ?
ಮಾಂಸಾಹಾರದ ಬಗ್ಗೆ ಒಂದು ವರ್ಗದ ಜನರಿಗೆ ಭಿನ್ನಾಭಿಪ್ರಾಯವಿದೆ ಎಂಬುದನ್ನು ನಿರಾಕರಿಸಬೇಕಿಲ್ಲ. 6 ಕೋಟಿ ಕನ್ನಡಗಿರುವ ಈ ರಾಜ್ಯದಲ್ಲಿ ಪ್ರತಿಯೊಬ್ಬರ ಆಲೋಚನೆಗಳೂ ಭಿನ್ನ. ಆಹಾರ  ಕ್ರಮಗಳೂ ಭಿನ್ನ. ರಾಜಕೀಯ ಒಲವು, ಸಂಸ್ಕೃತಿ, ಧರ್ಮ, ರೂಢಿ-ಸಂಪ್ರದಾಯಗಳೂ ಏಕರೂಪದ್ದಲ್ಲ. ಈ ದೇಶದಲ್ಲಿ ಸಸ್ಯಾಹಾರವನ್ನು ಅಳವಡಿಸಿಕೊಳ್ಳುವ ಮತ್ತು ಅದರ ಪರ ಜನಜಾಗೃತಿಯನ್ನು  ಮೂಡಿಸುವ ಸ್ವಾತಂತ್ರ್ಯ ಇರುವಂತೆಯೇ ಮಾಂಸಾಹಾರವನ್ನು ಸೇವಿಸುವ ಮತ್ತು ಆ ಹಕ್ಕನ್ನು ಉಳಿಸಿಕೊಳ್ಳುವುದಕ್ಕೆ ಹೋರಾಡುವ ಸ್ವಾತಂತ್ರ್ಯವೂ ಇದೆ. ಇದು ಪ್ರತಿಯೊಬ್ಬರಿಗೂ ಸಂವಿಧಾನ ಒದಗಿಸಿರುವ  ಸ್ವಾತಂತ್ರ್ಯ. ಈ ಸ್ವಾತಂತ್ರ್ಯದಲ್ಲಿ ಬದಲಾವಣೆ ತರುವುದಕ್ಕೆ ಅದರದ್ದೇ  ಆದ ದಾರಿಯಿದೆ. ಅದು ಬೀದಿ ದುಷ್ಕರ್ಮದಿಂದ ಆಗಬೇಕಾದುದಲ್ಲ. ಈ ದೇಶದಲ್ಲಿ ಮದ್ಯಪಾನದ ವಿರುದ್ಧ ಹಲವು ಚಳವಳಿಗಳಾಗಿವೆ.  ಪಾನ ನಿಷೇಧವನ್ನು ಒತ್ತಾಯಿಸಿ ಚಿತ್ರದುರ್ಗದಿಂದ ಸಾವಿರಾರು ಮಹಿಳೆಯರು ವರ್ಷದ ಹಿಂದೆ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿದ್ದರು. ವೀಣಾ ಭಟ್ ಅವರು ಮುಂಚೂಣಿಯಲ್ಲಿ ನಿಂತು ಈ  ಹೋರಾಟಕ್ಕೆ ಜೀವ ತುಂಬಿದ್ದರು. ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ತಮ್ಮ ಅಹವಾಲನ್ನು ಮಂಡಿಸಿದ್ದರು. ಆ ಬಳಿಕವೂ ಈ ಹೋರಾಟ ಮುಂದುವರಿದಿದೆ. ಆದರೆ, ಸರಕಾರ  ತಮ್ಮ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸಿಲ್ಲ ಎಂಬ ಕಾರಣವನ್ನೊಡ್ಡಿ ಈ ಹೋರಾಟದಲ್ಲಿದ್ದ ಯಾರೂ ಮದ್ಯಸಾಗಾಟ ವಾಹನಗಳನ್ನು ಹಾನಿಗೈದ ಘಟನೆ ನಡೆದಿಲ್ಲ. ಚಾಲಕರ ಮೇಲೆ ದೌರ್ಜನ್ಯ ಎಸಗಿದ್ದೂ  ಇಲ್ಲ. ಹಾಗಂತ, ಸಂಪೂರ್ಣ ಪಾನ ನಿಷೇಧ ಜಾರಿಯಾಗಬೇಕೆಂಬುದು ಚಿತ್ರದುರ್ಗದಿಂದ ಬೆಂಗಳೂರಿಗೆ ಹೊರಟ ಮಹಿಳೆಯರ ಮಾತ್ರ ಬೇಡಿಕೆಯಾಗಿರಲಿಲ್ಲ. ಈ ರಾಜ್ಯದ ಎಲ್ಲ ಧರ್ಮದ  ಧರ್ಮಗುರುಗಳು ಕೂಡ ಈ ಬೇಡಿಕೆಯ ಪರವಾಗಿ ಮಾತಾಡಿದ್ದರು. ಈ ಹೋರಾಟಕ್ಕೆ ಸ್ವಾಮೀಜಿಯವರೇ ಚಾಲನೆ ನೀಡಿದ್ದೂ ಇದೆ. ಮದ್ಯಪಾನದಿಂದಾಗಿ ಕುಟುಂಬಗಳು ಬೀದಿಗೆ ಬಿದ್ದಿವೆ. ಮದ್ಯಪಾವನವು ಆತ್ಮಹತ್ಯೆ, ಹಲ್ಲೆ ಮತ್ತು ಹತ್ಯಾ ಪ್ರಕರಣಗಳಿಗೆ ಪ್ರಚೋದನೆ ನೀಡುತ್ತಿವೆ ಎಂಬುದಾಗಿ ಈ ಕ್ಷೇತ್ರದಲ್ಲಿ ಅಧ್ಯಯನ ನಡೆಸಿದ ತಜ್ಞರೇ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಈ ಬೇಡಿಕೆಯನ್ನು ಬೆಂಬಲಿಸುವ  ದೊಡ್ಡದೊಂದು ಜನಸಮುದಾಯವೇ ಇದೆ. ಆದರೂ ಈ ಗುಂಪು ಹಿಂಸೆಗೆ ಇಳಿದಿಲ್ಲ. ಮದ್ಯ ಮಾರಾಟಗಾರರನ್ನು ಅಪರಾಧಿಗಳಂತೆ ಕಂಡಿಲ್ಲ. ಯಾಕೆಂದರೆ, ಅವರು ಆ ವೃತ್ತಿಯಲ್ಲಿರುವುದಕ್ಕೆ ಇಲ್ಲಿನ  ಆಡಳಿತವೇ ಕಾರಣ. ಸರಕಾರ ಪರವಾನಿಗೆ ಕೊಡದೇ ಇರುತ್ತಿದ್ದರೆ, ಮದ್ಯ ಮಾರಾಟಗಾರರನ್ನು ಅಪರಾಧಿಗಳಂತೆ ನೋಡಬಹುದಿತ್ತು. ಅವರ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಡಬಹುದಿತ್ತು. ಅಷ್ಟಕ್ಕೂ,
ವಧಾಗೃಹ ನಡೆಸುವ ಪರವಾನಿಗೆಯನ್ನು ಸರಕಾರ ಯಾವುದಾದರೊಂದು ನಿರ್ದಿಷ್ಟ ಧರ್ಮದ ಜನರಿಗೆ ಮೀಸಲಾಗಿ ಇಟ್ಟಿಲ್ಲ. ಅದು ಏಲಂನಲ್ಲಿ ವಿತರಣೆಯಾಗುತ್ತದೆ. ಯಾರು ಹೆಚ್ಚು ಬೆಲೆಗೆ  ಕೊಂಡುಕೊಳ್ಳಲು ತಯಾರಾಗುತ್ತಾರೋ ಅವರಿಗೆ ಪರವಾನಿಗೆ ಸಿಗುತ್ತದೆ. ಅದೊಂದು ಮುಕ್ತ ಪರವಾನಿಗೆ. ವಧಾಗೃಹಕ್ಕೆ ಜಾನುವಾರು ಸಾಗಾಟ ಮಾಡುವುದಕ್ಕೂ ಪರವಾನಿಗೆ ಇದೆ. ಅದೂ ಮುಕ್ತವಾಗಿದೆ.  ಅಗತ್ಯ ದಾಖಲೆಗಳನ್ನು ಸಲ್ಲಿಸಿ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಯಾರಿಗೂ ಅದು ಲಭಿಸುತ್ತದೆ. ವಧಾಗೃಹದಿಂದ ಮಾಂಸ ಸಾಗಾಟ ಮಾಡುವುದಕ್ಕೂ ಪರವಾನಿಗೆ ಇದೆ. ಅದೂ ಕೂಡ  ಮುಕ್ತವಾಗಿದೆ. ಆದ್ದರಿಂದ ಯಾರಿಗೆ ವಧಾಗೃಹದ ಮೇಲೆ, ಜಾನುವಾರು ಸಾಗಾಟ ಮತ್ತು ಮಾಂಸ ಸಾಗಾಟದ ಮೇಲೆ ಭಿನ್ನಾಭಿಪ್ರಾಯ ಇದೆಯೋ ಅವರು ವಧಾಗೃಹದ ಮೇಲೆ ಮತ್ತು ಜಾನುವಾರು  ಸಾಗಾಟಗಾರರ ಮೇಲೆ ದಾಳಿ ಮಾಡಬೇಕಾದುದಲ್ಲ. ಹೀಗೆ ಮಾಡುವುದು ಪ್ರಭುತ್ವಕ್ಕೆ ಎಸೆಯುವ ಸವಾಲು. ಆದರೂ ಮತ್ತೆ ಮತ್ತೆ ಇಂಥ ದಾಳಿಗಳು ಯಾಕೆ ನಡೆಯುತ್ತವೆ ಎಂಬ ಪ್ರಶ್ನೆ ಮುಖ್ಯವಾಗುತ್ತದೆ  ಮತ್ತು ಈ ದಾಳಿಗಳ ಹಿಂದಿನ ಹುನ್ನಾರ ಬಿಚ್ಚಿಕೊಳ್ಳುವುದೂ ಈ ಪ್ರಶ್ನೆಯಿಂದಲೇ.
ವಧಾಗೃಹ, ಜಾನುವಾರು ಸಾಗಾಟ ಮತ್ತು ಮಾಂಸ ವ್ಯಾಪಾರದಲ್ಲಿ ನಿರ್ದಿಷ್ಟ ಧರ್ಮವೊಂದರ ಸಾಕಷ್ಟು ಅನುಯಾಯಿಗಳು ತೊಡಗಿಸಿಕೊಂಡಿದ್ದಾರೆ. ಕಾನೂನುಬದ್ಧ ವೃತ್ತಿ ಎಂಬ ನೆಲೆಯಲ್ಲಿ ಅದು  ಅವಹೇಳನಕ್ಕೋ, ಹಿಂಜರಿಕೆಗೋ, ಕೀಳರಿಮೆಗೋ ಒಳಗಾಗಬೇಕಾದ್ದೂ ಅಲ್ಲ. ಆದರೆ, ದಾಳಿಗಳ ಹಿಂದಿನ ಉದ್ದೇಶವೂ ಇದುವೇ. ಮುಸ್ಲಿಮರನ್ನು ಅಪರಾಧಿಗಳಂತೆ ಬಿಂಬಿಸುವುದು, ಕಾನೂನುಬದ್ಧ  ವೃತ್ತಿಯ ಬಗ್ಗೆ ಕೀಳರಿಮೆಗೆ ಗುರಿಪಡಿಸುವುದು ಮತ್ತು ಮುಸ್ಲಿಮರು ಪರವಾನಿಗೆಯಿಲ್ಲದೇ ಮಾಂಸ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಸುಳ್ಳನ್ನು ಸದಾ ಜೀವಂತ ಇಟ್ಟುಕೊಳ್ಳುವುದು- ಇವು ಮತ್ತು  ಇಂಥ ಇನ್ನಿತರ ಉದ್ದೇಶಗಳೇ ಈ ದಾಳಿಗಳ ಹಿಂದಿವೆ. ಇಂಥ ದಾಳಿಗಳು ರಾಜಕೀಯವಾಗಿಯೂ ಲಾಭವನ್ನು ತಂದುಕೊಡುತ್ತದೆ. ವಧಾಗೃಹದಿಂದ ಹಿಡಿದು ಮಾಂಸ ಸಾಗಾಟದ ವರೆಗೆ ನಡೆಯುವ ಎಲ್ಲ  ಪ್ರಕ್ರಿಯೆಗಳಿಗೆ ಸರಕಾರವೇ ಪರವಾನಿಗೆ ನೀಡಿದ್ದರೂ ಈ ದಾಳಿಗಳ ಸಂದರ್ಭದಲ್ಲಿ ಇವು ಯಾವುವೂ ಚರ್ಚೆಗೆ ಒಳಗಾಗದಂತೆ ಜಾಣತನದಿಂದ ನೋಡಿಕೊಳ್ಳಲಾಗುತ್ತದೆ. ಅಲ್ಲದೇ, ದುಷ್ಕರ್ಮಿಗಳು ಬಂಧ ನಕ್ಕೀಡಾದ ಮರುಕ್ಷಣವೇ ಜಾಮೀನು ಪಡೆದು ಹೊರಬರುತ್ತಾರೆ. ಇದೊಂದು ರೀತಿಯ ಕಣ್ಣಾಮುಚ್ಚಾಲೆ ಆಟ. ಈ ಆಟಕ್ಕೆ ಕೊನೆ ಹಾಡಲೇಬೇಕು. ರಾಜಕೀಯದ ಮಂದಿ ಆಡುತ್ತಿರುವ ಈ ಆಟಕ್ಕೆ ಕಾ ನೂನುಬದ್ಧವಾಗಿ ದುಡಿಯುತ್ತಿರುವ ಮಂದಿ ಪದೇಪದೇ ಬಲಿಯಾಗುವುದನ್ನು ನಾಗರಿಕರು ಸಹಿಸಬಾರದು. ಅಷ್ಟಕ್ಕೂ,
ಬರೇ ದಾಳಿ ನಡೆಸುವುದು ದುಷ್ಕರ್ಮಿಗಳ ಉದ್ದೇಶ ಅಲ್ಲ. ಎರಡೂ ಸಮುದಾಯಗಳ ನಡುವೆ ಸಂಘರ್ಷವನ್ನು ಹುಟ್ಟು ಹಾಕುವುದೂ ಅವರ ಗುರಿಯಾಗಿದೆ. ಇದು ಗಂಭೀರ ಅಪರಾಧ. ಆದ್ದರಿಂದ  ದುಷ್ಕರ್ಮಿಗಳ ವಿರುದ್ಧ ಈ ಕಾಯ್ದೆಯಡಿ ಪೊಲೀಸರು ಕೇಸು ದಾಖಲಿಸಬೇಕು. ದುಷ್ಕರ್ಮಿಗಳು ಸುಲಭವಾಗಿ ಜಾಮೀನು ಪಡೆದು ಹೊರಬರದಂತೆ ನೋಡಿಕೊಳ್ಳಬೇಕು. ಅಂದಹಾಗೆ,
ವಧಾಗೃಹ, ಜಾನುವಾರು ಸಾಗಾಟ ಮತ್ತು ಮಾಂಸಾಹಾರದ ಬಗ್ಗೆ ಭಿನ್ನಾಭಿಪ್ರಾಯವನ್ನು ತಾಳುವುದು ಬೇರೆ ಹಾಗೂ ಕಾನೂನುಬದ್ಧ ವೃತ್ತಿಯಲ್ಲಿ ತೊಡಗಿರುವವರ ಮೇಲೆ ಹಲ್ಲೆ ನಡೆಸುವುದು ಬೇರೆ.  ಇವೆರಡನ್ನೂ ಸಮಾನವಾಗಿ ಕಾಣಲಾಗದು, ಕಾಣಬಾರದು.

Wednesday 24 June 2020

ಜನಪ್ರತಿನಿಧಿಗಳೇ, ಪ್ರಶ್ನಿಸಲೇಬೇಕಾದ ಸಂದರ್ಭದಲ್ಲಿ ಯಾಕೆ ಮೌನವಾದಿರಿ?



ಕೊರೋನಾ ಲಾಕ್‍ಡೌನ್‍ನಿಂದಾಗಿ ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿದ್ದ ಕನ್ನಡಿಗರ ಪೈಕಿ 175 ಮಂದಿಯನ್ನು ಬಾಡಿಗೆ ವಿಮಾನದಲ್ಲಿ ಊರಿಗೆ ಕಳುಹಿಸಿದ ಬಶೀರ್ ಸಾಗರ್ ಮತ್ತು ಅಲ್ತಾಫ್ ಉಳ್ಳಾಲ್ ಎಂಬ ಉದ್ಯಮಿಗಳು ರಾಜ್ಯಾದ್ಯಂತ ಶ್ಲಾಘನೆಗೆ ಒಳಗಾಗಿದ್ದಾರೆ. ಅವರು ನಡೆಸುತ್ತಿರುವ ಸಾಕೋ ಕಂಪೆನಿ ಕನ್ನಡಿಗರ ಮನೆಮಾತಾಗಿದೆ. ಅವರು ಬಾಡಿಗೆ ವಿಮಾನದ ವೆಚ್ಚವನ್ನು ಭರಿಸಿದ್ದಷ್ಟೇ ಅಲ್ಲ, ಪ್ರತಿಯೊಬ್ಬರ ಪ್ರಯಾಣ ವೆಚ್ಚವನ್ನೂ ಭರಿಸಿದ್ದಾರೆ. ಮಾತ್ರವಲ್ಲ, ಹೀಗೆ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ ಬಳಿಕ ನಡೆದ ಕೊರೋನಾ ಪರೀಕ್ಷಾ ಶುಲ್ಕ, ಕ್ವಾರಂಟೈನ್‍ಗೆ ಬೇಕಾದ ಕೊಠಡಿ ವ್ಯವಸ್ಥೆ, ಆಹಾರ ಎಲ್ಲವುಗಳ ವೆಚ್ಚವನ್ನೂ ಅವರೇ ಭರಿಸಿದ್ದಾರೆ. ಇದು ಸಾಮಾನ್ಯ ಸಂಗತಿಯಲ್ಲ. ಲಾಕ್‍ಡೌನ್‍ನಿಂದಾಗಿ ಉದ್ಯಮಿಗಳು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ತಮಗೆ ಸಂಬಂಧಿಸಿಯೇ ಇಲ್ಲದ ಜನರಿಗಾಗಿ ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡುವುದಕ್ಕೆ ವಿಶಾಲ ಹೃದಯ ಬೇಕು. ಒಂದುವೇಳೆ, ಈ ಸಾಹಸಕ್ಕೆ ಕೈ ಹಾಕದೇ ಇರುತ್ತಿದ್ದರೆ ಅವರು ಕಳಕೊಳ್ಳುವುದಕ್ಕೇನೂ ಇರಲಿಲ್ಲ. ಬದಲಾಗಿ ಈ ಕಷ್ಟಕಾಲದಲ್ಲಿ ಲಕ್ಷಾಂತರ ರೂಪಾಯಿಗಳು ಅವರ ಪಾಲಿಗೆ ಉಳಿಕೆಯಾಗುತ್ತಿತ್ತು. ಆದ್ದರಿಂದಲೇ, 
\ರಾಜ್ಯದ ಮಂದಿ ಈ ಉದ್ಯಮಿಗಳನ್ನು ಅಭಿಮಾನದಿಂದ ನೋಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ದ.ಕ. ಜಿಲ್ಲೆಯ ಬಿಜೆಪಿ ಶಾಸಕರುಗಳಾದ ವೇದವ್ಯಾಸ್ ಕಾಮತ್, ರಾಜೇಶ್ ನಾಯ್ಕ್ ಉಳೇಪಾಡಿಯವರೂ ಅಭಿನಂದಿಸಿದ್ದಾರೆ. ಅವರ ಸೇವಾ ಮನೋಭಾವವನ್ನು ಕೊಂಡಾಡಿದ್ದಾರೆ.
ಒಳ್ಳೆಯ ಕೆಲಸವನ್ನು ಯಾರು ಮಾಡಿದರೂ ಅದನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಒಟ್ಟು ಅಭಿವೃದ್ಧಿಯ ದೃಷ್ಟಿಯಿಂದ ಬಹಳ ಅಗತ್ಯ. ಇಂತಹ ಬೆಳವಣಿಗೆಯು ಇನ್ನಷ್ಟು ಸಮಾಜ ಸೇವಕರ ತಯಾರಿಗೆ ವೇದಿಕೆಯನ್ನು ಸೃಷ್ಟಿಸುತ್ತದೆ. ಇಂಥವರನ್ನು ನೋಡಿ ಬೆಳೆಯುವ ಯುವ ಪೀಳಿಗೆಯು ನಾವು ಹೀಗೆ ಇತರರಿಗೆ ನೆರವಾಗಬೇಕು ಎಂಬ ಬಯಕೆಯೊಂದನ್ನು ಒಳಗೊಳಗೇ ಬಚ್ಚಿಟ್ಟುಕೊಂಡು ಬೆಳೆಯುತ್ತವೆ. ಅವುಗಳು ಮುಂದೊಂದು ದಿನ ಫಲ ಕೊಡುವುದಕ್ಕೂ ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಶಾಸಕರುಗಳ ಶ್ಲಾಘನೆ ಮತ್ತು ಗುರುತಿಸುವಿಕೆ ಅತ್ಯಂತ ಸಕಾಲಿಕ. ಆದರೆ,
 ಒಳಿತನ್ನು ಗುರುತಿಸಿ ಪ್ರೋತ್ಸಾಹಿಸುವಂತೆಯೇ ಕೆಡುಕನ್ನು ವಿರೋಧಿಸುವ ಮತ್ತು ಧರ್ಮಾತೀತವಾಗಿ ಖಂಡಿಸುವ ಪ್ರಕ್ರಿಯೆಗಳೂ ನಡೆಯಬೇಕು. ಒಳಿತನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಒಳಿತು ಹೇಗೆ ಪ್ರಚಾರಗೊಳ್ಳುತ್ತದೋ ಕೆಡುಕನ್ನು ವಿರೋಧಿಸಿ ಖಂಡಿಸುವುದರಿಂದ ಕೆಡುಕಿನ ಹರಡುವಿಕೆಗೂ ತಡೆ ಬೀಳುತ್ತದೆ. ಒಳಿತನ್ನು ಪ್ರೋತ್ಸಾಹಿಸುವ ಮತ್ತು ಕೆಡುಕನ್ನು ವಿರೋಧಿಸುವ ಈ ಎರಡೂ ಪ್ರಕ್ರಿಯೆಗಳು ಒಟ್ಟೊಟ್ಟಿಗೆ ನಡೆಯಬೇಕಾದವು. ವಿಷಾದ ಅನ್ನಿಸುವುದೂ ಇಲ್ಲೇ. 
ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಶಾಸಕರು ಒಳಿತನ್ನು ಶ್ಲಾಘಿಸಿದ ರೀತಿಯಲ್ಲಿಯೇ ಕೆಡುಕನ್ನೂ ವಿರೋಧಿಸಬೇಕು ಎಂದು ರಾಜ್ಯದ ಮಂದಿ ಬಯಸುವುದು ಸಹಜ. ಜನಪ್ರತಿನಿಧಿಗಳೆಂಬ ನೆಲೆಯಲ್ಲಿ ಅವರಿಂದ ಇಂತಹ ಬಯಕೆಯನ್ನು ನಿರೀಕ್ಷಿಸುವುದು ಅಪರಾಧವೂ ಅಲ್ಲ. ಆದರೆ ಈ ನಿರೀಕ್ಷೆ ಈಡೇರುತ್ತಿಲ್ಲ ಅನ್ನುವ ಸಂಕಟ ಜನರಲ್ಲಿದೆ. ಸೌದಿಯಿಂದ 175 ಪ್ರಯಾಣಿಕರು ಮಂಗಳೂರು ತಲುಪಿದ ಎರಡು ದಿನಗಳಾದ ಬಳಿಕ ಇದೇ ಮಂಗಳೂರಿನಲ್ಲಿ ಮುಹಮ್ಮದ್ ಹನೀಫ್ ಎಂಬವರ ಮೇಲೆ ದುಷ್ಕರ್ಮಿಗಳು ತೀವ್ರ ಹಲ್ಲೆ ನಡೆಸಿದ್ದಾರೆ. ಕೈಯಲ್ಲಿ ರಾಡ್, ತಲವಾರು, ದೊಣ್ಣೆಗಳನ್ನು ಹಿಡಿದಿದ್ದ 20ರಿಂದ 25ರಷ್ಟಿದ್ದ ದುಷ್ಕರ್ಮಿಗಳ ಗುಂಪು ಮುಹಮ್ಮದ್ ಹನೀಫ್‍ರನ್ನು ಅವರ ವಾಹನಕ್ಕೆ ಕಟ್ಟಿ ಹಾಕಿ ಥಳಿಸಿದೆ. ಪೊಲೀಸರು ಬಂದಾಗ ಈ ಗುಂಪು ಪರಾರಿಯಾಗಿದೆ. ವೈದ್ಯಾಧಿಕಾರಿಗಳಿಂದ ‘ಪ್ರಾಣಿ ಆರೋಗ್ಯ ಪ್ರಮಾಣ ಪತ್ರ’ವನ್ನು ಪಡೆದುಕೊಂಡು ಹಾವೇರಿಯ ಕೃಷಿ ಮಾರುಕಟ್ಟೆಯಿಂದ 4 ಎಮ್ಮೆಗಳನ್ನು ಕಾನೂನುಬದ್ಧವಾಗಿಯೇ ಸಾಗಿಸುತ್ತಿದ್ದೇನೆ ಎಂದವರು ಹೇಳಿದ್ದಾರೆ. ಇದೇವೇಳೆ, ಬಂಧನಕ್ಕೀಡಾದ ಆರು ಮಂದಿ ಆರೋಪಿಗಳು ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ಹಾಗಂತ,
ಜಾನುವಾರು ಸಾಗಾಟದ ನೆಪದಲ್ಲಿ ಥಳಿತ, ಹಲ್ಲೆ, ಹತ್ಯೆ ಜಿಲ್ಲೆಗೆ ಹೊಸತಲ್ಲ. ಕಾನೂನನ್ನು ಕೈಗೆತ್ತಿಕೊಳ್ಳುವುದು ಅಪರಾಧ ಎಂದು ಗೊತ್ತಿದ್ದೂ ಮತ್ತೆ ಮತ್ತೆ ಇಂಥ ಕ್ರೌರ್ಯಗಳು ನಡೆಯುವುದಕ್ಕೆ ಕಾರಣ ಏನು ಮತ್ತು ಈ ಕ್ರೌರ್ಯದಲ್ಲಿ ಭಾಗಿಯಾದವರು ತಕ್ಷಣ ಜಾಮೀನು ಪಡೆದು ಹೊರಬರುವುದರ ಹಿಂದಿನ ಗುಟ್ಟೇನು ಅನ್ನುವುದು ಅಲ್ತಾಫ್ ಮತ್ತು ಬಶೀರ್ ರನ್ನು ಕೊಂಡಾಡಿದ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮತ್ತು ಜಿಲ್ಲೆಯ ಶಾಸಕರುಗಳಿಗೆ ತಿಳಿಯದ ವಿಷಯವೂ ಅಲ್ಲ. ಮುಹಮ್ಮದ್ ಹನೀಫ್ ಅವರು ಕಾನೂನು ಉಲ್ಲಂಘಿಸಿ ಜಾನುವಾರು ಸಾಗಾಟ ಮಾಡುತ್ತಿದ್ದಾರೆಂದರೆ, ಅದನ್ನು ನೋಡಿಕೊಳ್ಳುವುದಕ್ಕೆ ಪೊಲೀಸ್ ಇಲಾಖೆ ಇದೆ. ನ್ಯಾಯಾಲಯ ಇದೆ. ಅದರ ಹೊರತಾಗಿ ಯಾವ ಖಾಸಗಿ ಗುಂಪುಗಳಿಗೂ ಈ ಹೊಣೆಯನ್ನು ವಹಿಸಿಕೊಡಲಾಗಿಲ್ಲ. ಯಾರಾದರೂ ಕಾನೂನು ಉಲ್ಲಂಘನೆ ಮಾಡುತ್ತಿರುವ ಅನುಮಾನ ಮೂಡಿದರೆ, ಜವಾಬ್ದಾರಿಯುತ ನಾಗರಿಕರಾಗಿ ನಾವು ಮಾಡಬಹುದಾದ ಅತಿಶ್ರೇಷ್ಟ ದೇಶಸೇವೆಯೆಂದರೆ, ಆ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ಕೊಡುವುದು. ಇದರ ಹೊರತಾಗಿ ಸ್ವಯಂ ಪೊಲೀಸರಾಗುವುದು, ಕಾನೂನನ್ನು ಕೈಗೆತ್ತಿಕೊಳ್ಳುವುದು ಅಪರಾಧ. ಇದು ಅಲ್ತಾಫ್ ಮತ್ತು ಬಶೀರ್ ನ್ನು ಕೊಂಡಾಡಿದ ಜಿಲ್ಲೆಯ ಸಂಸದರು ಮತ್ತು ಶಾಸಕರಿಗೆ ಖಂಡಿತ ಗೊತ್ತಿದೆ. ಆದರೆ ಈವರೆಗೂ ಇವರಾರೂ ಈ ಅಮಾನವೀಯ ಕ್ರೌರ್ಯದ ವಿರುದ್ಧ ಮಾತಾಡಿಲ್ಲ. ಇದು ಸಾರುವ ಸಂದೇಶ ಏನು?
ಮೊನ್ನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ 175 ಪ್ರಯಾಣಿಕರ ಪೈಕಿ ಸಾಕೋ ಕಂಪೆನಿಯ ಒಬ್ಬನೇ ಒಬ್ಬ ಸಿಬ್ಬಂದಿ ಅಥವಾ ಅವರ ಸಂಬಂಧಿಕರು ಇರಲಿಲ್ಲ. ಒಂದೇ ಧರ್ಮದವರೂ ಇರಲಿಲ್ಲ. ಗರ್ಭಿಣಿಯರು, ವಿಸಿಟ್ ವೀಸಾದಲ್ಲಿ ಬಂದು ಲಾಕ್‍ಡೌನ್ ಕಾರಣದಿಂದ ಸಿಲುಕಿಕೊಂಡ ಹಿರಿಯ ನಾಗರಿಕರು, ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯ ಇರುವವರು, ಕೆಲಸ ಕಳೆದುಕೊಂಡು ಕಂಗಾಲಾಗಿರುವವರು ಮುಂತಾದ ಮನುಷ್ಯರಷ್ಟೇ ಅವರಾಗಿದ್ದರು. ಅವರನ್ನು 61 ಹಿರಿಯ ನಾಗರಿಕರು, 55 ಗರ್ಭಿಣಿಯರು, 20 ಮಂದಿ ತುರ್ತು ಚಿಕಿತ್ಸೆ ಅಗತ್ಯವಿರುವವರು, 35 ಮಕ್ಕಳು- ಹೀಗೆ ಗುರುತಿಸಲಾಗಿತ್ತೇ ಹೊರತು ಅವರ ಧರ್ಮ, ಭಾಷೆ, ರಾಜಕೀಯ ಒಲವುಗಳು ಗುರುತಿಸುವಿಕೆಯ ಮಾನದಂಡವಾಗಿರಲೇ ಇಲ್ಲ. ಸಂಸದರು ಮತ್ತು ಶಾಸಕರು ಈ ಬೆಳವಣಿಗೆಯನ್ನು ಮೆಚ್ಚಿಕೊಂಡೂ ಇದ್ದಾರೆ. ಆದ್ದರಿಂದಲೇ,
 ಈ ಸಂಸದರು ಮತ್ತು ಶಾಸಕರಿಂದ ರಾಜ್ಯದ ಜನರು ಇನ್ನಷ್ಟನ್ನು ನಿರೀಕ್ಷಿಸುವುದು. ಕೆಡುಕನ್ನು ಖಂಡಿಸುವ ವಿಚಾರದಲ್ಲೂ ಇವರು ಇದೇ ಮಾನದಂಡವನ್ನು ಅನುಸರಿಸಬೇಕು ಎಂದು ಬಯಸುವುದು. ಆದರೆ,
ಈ ಬಯಕೆ ಪದೇ ಪದೇ ವಿಫಲವಾಗುತ್ತಿದೆ. ಜಾನುವಾರು ಸಾಗಾಟದ ಹೆಸರಲ್ಲಿ, ಯುವಕ-ಯುವತಿಯರ ಮಾತುಕತೆಯ ಹೆಸರಲ್ಲಿ, ‘ಲವ್ ಜಿಹಾದ್’ ಆರೋಪದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ  ಅನೇಕ ಥಳಿತದ ಘಟನೆಗಳು ನಡೆದಿವೆ, ಬೆತ್ತಲೆ ಮಾಡಲಾಗಿದೆ, ಮಾರಣಾಂತಿಕವಾಗಿ ಗಾಯಗೊಳಿಸಲಾಗಿದೆ. ಹತ್ಯೆಯೂ ನಡೆದಿದೆ. ಆದರೆ, ಬಶೀರ್ ಮತ್ತು ಅಲ್ತಾಫ್ ಅವರ ಒಳಿತಿನ ಕೆಲಸವನ್ನು ಶ್ಲಾಘಿಸಿರುವ ಈ ಸಂಸದರಾಗಲಿ, ಶಾಸಕರಾಗಲಿ, ಇವಾವುದನ್ನೂ ಖಂಡಿಸಬೇಕಾದ ರೀತಿಯಲ್ಲಿ ಖಂಡಿಸಲೇ ಇಲ್ಲ. ಯಾಕೆ ಹೀಗೆ? ಥಳಿತಕ್ಕೊಳಗಾಗುತ್ತಿರುವವರು ಒಂದು ಧರ್ಮದವರು ಮತ್ತು ಥಳಿಸುವವರು ಇನ್ನೊಂದು ಧರ್ಮದವರು ಎಂಬುದು ಇದಕ್ಕೆ ಕಾರಣವೇ? ತನ್ನದಲ್ಲದ ಧರ್ಮದವರ ಮೇಲೆ ಅನ್ಯಾಯ ನಡೆಯುವುದು ಸಹ್ಯವೇ? ಅನ್ಯಾಯಕ್ಕೂ ಧರ್ಮಕ್ಕೂ ಏನು ಸಂಬಂಧ? ಕೆಡುಕಿಗೂ ಧರ್ಮಕ್ಕೂ ಏನು ಸಂಬಂಧ? ಒಂದುವೇಳೆ, 
ಒಳಿತನ್ನು ಧರ್ಮಾಧಾರಿತವಾಗಿ ಮಾಡುವುದಾಗಿದ್ದರೆ ಅದನ್ನು ಅಲ್ತಾಫ್ ಮತ್ತು ಬಶೀರ್ ಗೆ ಮಾಡಬಹುದಿತ್ತು. ಒಂದೇ ಧರ್ಮದವರನ್ನು ಹುಡುಕಿ ಊರಿಗೆ ಕಳುಹಿಸಬಹುದಿತ್ತು. ಅಲ್ಲದೇ ಅವರು ಜನಪ್ರತಿನಿಧಿಗಳೂ ಅಲ್ಲ, ಉದ್ಯಮಿಗಳು. ಜನಪ್ರತಿನಿಧಿಗಳಂತೆ ಜನರಿಗೆ ಅವರು ಉತ್ತರದಾಯಿಗಳೂ ಅಲ್ಲ. ಆದರೆ ಅವರು ಒಳಿತಿನ ವಿಚಾರದಲ್ಲಿ ಧರ್ಮವನ್ನು ನೋಡಲಿಲ್ಲ. ಅಲ್ಲಿ ಆಯ್ಕೆಗೆ ಕಷ್ಟವೇ ಮಾನದಂಡವಾಗಿತ್ತು. ಧರ್ಮವಲ್ಲ. ನಿಜವಾಗಿ, 
ಕೆಡುಕನ್ನು ವಿರೋಧಿಸುವುದಕ್ಕೂ ಇದುವೇ ಮಾನದಂಡವಾಗಬೇಕು. ಕೆಡುಕಿಗೆ ಧರ್ಮವಿಲ್ಲ. ಅದುವೇ ಒಂದು ಧರ್ಮ. ಆದರೆ, ಜಿಲ್ಲೆಯ ಸಂಸದರು ಮತ್ತು ಶಾಸಕರುಗಳು ಕೆಡುಕನ್ನು ಧರ್ಮದ ಆಧಾರದಲ್ಲಿ ನೋಡುತ್ತಿರುವಂತಿದೆ. ಆದ್ದರಿಂದಲೇ ಮುಹಮ್ಮದ್ ಹನೀಫ್‍ರ ಮೇಲಾದ ಹಲ್ಲೆಯನ್ನು ಖಂಡಿಸುತ್ತಿಲ್ಲ. ಆರೋಪಿಗಳ ವಿರುದ್ಧ ಕಠಿಣ ಕಲಂಗಳಡಿ ಕೇಸು ದಾಖಲಿಸಿ ಎಂದು ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರುತ್ತಿಲ್ಲ. ಇದು ವಿಷಾದನೀಯ. ಒಂದೆಡೆ ಒಳಿತನ್ನು ಶ್ಲಾಘಿಸಿದ ಅದೇ ಜನಪ್ರತಿನಿಧಿಗಳು ಇನ್ನೊಂದು ಕಡೆ ಕೆಡುಕನ್ನು ಕಂಡೂ ಮೌನವಾಗುತ್ತಾರೆಂದರೆ, ಅವರ ಶ್ಲಾಘನೆಯನ್ನೇ ಅನುಮಾನಿಸಬೇಕಾಗುತ್ತದೆ.

Tuesday 16 June 2020

ನಮ್ಮೊಳಗಿನ ದುಷ್ಟತನಕ್ಕೆ ಕನ್ನಡಿ ಹಿಡಿದ ಎರಡು ಘಟನೆಗಳು



ಕಳೆದವಾರ ಎರಡು ಘಟನೆಗಳು ನಡೆದುವು. ಎರಡೂ ಘಟನೆಗಳು ಪ್ರಾಣಿಗೆ ಸಂಬಂಧಿಸಿದ್ದು. ಆದರೆ ಮನುಷ್ಯ ಎಂಬ ಪ್ರಾಣಿ ಈ ಎರಡೂ ಘಟನೆಗಳಿಗೆ ಸ್ಪಂದಿಸಿದ ರೀತಿ ಮತ್ತು ವ್ಯಕ್ತಪಡಿಸಿದ ಅಭಿ ಪ್ರಾಯಗಳಲ್ಲಿ ಎದ್ದು ಕಾಣುತ್ತಿದ್ದ ಪಕ್ಷಪಾತದ ಧ್ವನಿ, ಧಾರ್ಮಿಕ ದ್ವೇಷ, ಕ್ರೌರ್ಯ ಮನೋಭಾವ ಜಿಗುಪ್ತೆ ತರುವಂಥದ್ದು.
1. ಪಟಾಕಿ ತುಂಬಿಸಿಟ್ಟಿದ್ದ ಅನಾನಸು ಹಣ್ಣನ್ನು ತಿಂದು ಕೇರಳದ ಪಾಲಕ್ಕಾಡಿನಲ್ಲಿ ಆನೆಯೊಂದು ಸಾವಿಗೀಡಾದದ್ದು.
2. ಹಿಮಾಚಲ ಪ್ರದೇಶದ ಬಿಲಸ್ಪುರ ಜಿಲ್ಲೆಯಲ್ಲಿ ಪಟಾಕಿ ಸಿಡಿತದಿಂದ ಹುಲ್ಲು ಮೇಯುತ್ತಿದ್ದ ಹಸುವಿನ ದವಡೆ ಮುರಿದು ರಕ್ತ ಸೋರುತ್ತಿರುವುದು. ಹಸುವನ್ನು ಕೊಲ್ಲುವ ಉದ್ದೇಶದಿಂದ ನೆರೆಮನೆಯಾತ  ಇಂಥದ್ದೊಂದು  ಕೃತ್ಯ ನಡೆಸಿದ್ದಾನೆ ಅನ್ನುವ ದೂರು.
ಅನಾನಸಿನ ಒಳಗಡೆ ಪಟಾಕಿ ಇಟ್ಟಿರಬಹುದು ಎಂದು ಆಲೋಚಿಸುವ ಸಾಮರ್ಥ್ಯ  ಆನೆಗಿಲ್ಲ, ಹಸುವಿಗೂ ಇಲ್ಲ. ಆದರೆ ಮನುಷ್ಯನಿಗಿದೆ. ಮಾತ್ರವಲ್ಲ, ಆನೆ ಮತ್ತು ಹಸುವನ್ನು ಪೀಡಿಸಿದ ಊರು  ಯಾವುದು, ಅಲ್ಲಿ ಯಾವ ಧರ್ಮದವರ ಜನಸಂಖ್ಯೆ ಹೆಚ್ಚಿದೆ, ಯಾವ ರಾಜಕೀಯ ಪಕ್ಷದ ಆಡಳಿತವಿದೆ, ಆರೋಪಿಗಳು ಯಾರು... ಅನ್ನುವುದನ್ನೆಲ್ಲ ಅವಲೋಕಿಸಿ ಪ್ರತಿಕ್ರಿಯಿಸುವ ಸಾಮಥ್ರ್ಯವೂ ಮ ನುಷ್ಯನಿಗಿದೆ. ಮನುಷ್ಯ ಸ್ವಭಾವತಃ ದುಷ್ಟನಲ್ಲ, ಪರಿಸ್ಥಿತಿ, ಸನ್ನಿವೇಶ ಮತ್ತು ಸ್ವಾರ್ಥಗಳು ಆತನನ್ನು ದುಷ್ಟನನ್ನಾಗಿಯೋ ದುಷ್ಟತನದ ಪರೋಕ್ಷ ಬೆಂಬಲಿಗನನ್ನಾಗಿಯೋ ಮಾಡಿಬಿಡುತ್ತದೆ ಎಂದು  ಹೇಳಲಾಗುತ್ತದೆ. ಇಲ್ಲದಿದ್ದರೆ ಯಾವ್ಯಾವುದೋ ನೆಪದಲ್ಲಿ ಬೀದಿಯಲ್ಲಿ ಅಟ್ಟಾಡಿಸಿ ಥಳಿಸಿ ಕೊಲ್ಲುತ್ತಿರುವುದನ್ನು ಸಮರ್ಥಿಸಲು ಓರ್ವ ಮನುಷ್ಯನಿಗೆ ಹೇಗೆ ಸಾಧ್ಯ? ಆ ಕ್ರೌರ್ಯಕ್ಕೆ ಮೌನವಾಗಿರಲು ಹೇಗೆ  ಸಾಧ್ಯ ಅಥವಾ ಇನ್ನಾವುದೋ ಕಾರಣ ಕೊಟ್ಟು ಆ ಹತ್ಯೆಯ ಪರೋಕ್ಷ ಬೆಂಬಲಿಗನಾಗಲು ಹೇಗೆ ಸಾಧ್ಯ? ಅಖ್ಲಾಕ್‍ನಿಂದ ಹಿಡಿದು ತಬ್ರೇಜ್ ನ ವರೆಗೆ, ಊನಾದಿಂದ ಹಿಡಿದು ನಮ್ಮ ಅಕ್ಕ-ಪಕ್ಕದ ಬೀ ದಿಯ ವರೆಗೆ ಎಷ್ಟೊಂದು ಥಳಿತ, ಹತ್ಯೆಗಳಾಗಿವೆ? ಈ ಯಾವ ಘಟನೆಗಳಲ್ಲೂ ಪ್ರಾಣಿಗಳಿಗೆ ಯಾವ ಪಾತ್ರವೂ ಇಲ್ಲ. ಥಳಿಸುವವರೂ ಮನುಷ್ಯರೇ. ಥಳಿತಕ್ಕೊಳಗಾಗುವವರೂ ಮನುಷ್ಯರೇ. ಆದರೆ,  ಇಲ್ಲೆಲ್ಲಾ  ಸ್ಪಷ್ಟವಾಗಿ ಎದ್ದು ಕಾಣುವ ಒಂದು ಸತ್ಯ ಇದೆ. ಅದೇನೆಂದರೆ, ಥಳಿಸುವವರ ಧರ್ಮ ಅಥವಾ ಜಾತಿ ಮತ್ತು ಥಳಿತಕ್ಕೊಳಗಾಗುವವರ ಧರ್ಮ ಅಥವಾ ಜಾತಿ. ನಿರ್ದಿಷ್ಟ ರಾಜಕೀಯ ಸಿದ್ಧಾಂತದ  ಪರವಾಗಿರುವವರು ಥಳಿಸುವುದು ಮತ್ತು ನಿರ್ದಿಷ್ಟ ಧರ್ಮಾನುಯಾಯಿಗಳು ಥಳಿತಕ್ಕೊಳಗಾಗುವುದು- ಇವೆರಡೂ ಏನನ್ನು ಸೂಚಿಸುತ್ತವೆ? ಥಳಿಸುವವರು ಸದಾಕಾಲ ದುಷ್ಟರೇ? ಹಾಗೆ ಮಾಡುವುದಕ್ಕೆ  ಅವರ ತತ್ವಸಿದ್ಧಾಂತ ಕಾರಣವೇ ಮತ್ತು ಅವರು ತಮ್ಮ ಪ್ರತಿಪಾದನೆಯಲ್ಲಿ ನಿಜಕ್ಕೂ ಪ್ರಾಮಾಣಿಕರೇ ಎಂದು ಪ್ರಶ್ನಿಸುತ್ತಾ ಹೋದರೆ ಸಿಗುವ ಉತ್ತರ ಅತ್ಯಂತ ಆಘಾತಕಾರಿಯಾಗಿರುತ್ತದೆ. ಗುಜರಾತ್  ಹತ್ಯಾಕಾಂಡವನ್ನು ಉಲ್ಲೇಖಿಸಿದರೆ ಮತ್ತು ಹಸಿ ಭ್ರೂಣವನ್ನು ಕತ್ತಿಯ ಮೊನೆಗೆ ಸಿಲುಕಿಸಿ ವಿಕೃತ ಸಂತೋಷಪಟ್ಟ ದುಷ್ಟತನವನ್ನು ಪ್ರಸ್ತಾಪಿಸಿದರೆ, ಆ ಬಗ್ಗೆ ಯಾವ ಖಂಡನೆಯನ್ನಾಗಲಿ, ವಿಷಾದವನ್ನಾಗಲಿ  ವ್ಯಕ್ತಪಡಿಸದೆಯೇ ಅದಕ್ಕೂ ಮೊದಲಿನ ಗೋಧ್ರಾ ರೈಲು ದುರ್ಘಟನೆಯನ್ನು ಎತ್ತುತ್ತಾರೆ. ಅದೊಂದು ರೀತಿಯ ಪಲಾಯನವಾದ. ಖಂಡಿಸಲೇ ಬೇಕಾದ ಸಂದರ್ಭವೊಂದರಿಂದ ತಪ್ಪಿಸಿಕೊಳ್ಳುವುದಕ್ಕಾಗಿ  ಅಡ್ಡ ದಾರಿಯನ್ನು ಹಿಡಿಯುವುದು. ಪ್ರಶ್ನೆ- ಕ್ರೌರ್ಯವೊಂದನ್ನು ಖಂಡಿಸದೇ ಇರುವುದಲ್ಲ. ಅಂಥದ್ದೊಂದು  ದುಷ್ಟತನ ವ್ಯಕ್ತಿಯೊಳಗಡೆ ಅಡರಿಕೊಳ್ಳುವುದು ಹೇಗೆ? ಗುಜರಾತ್ ಹತ್ಯಾಕಾಂಡವನ್ನು  ಉಲ್ಲೇಖಿಸಿದ ಕೂಡಲೇ ಅದನ್ನು ಖಂಡಿಸದೆಯೇ ಅದಕ್ಕೆ ಪ್ರತಿಯಾಗಿ ದೆಹಲಿ ಸಿಕ್ಖ್ ಹತ್ಯಾಕಾಂಡವನ್ನು ಎತ್ತುವುದು ಅಥವಾ ಗೋಧ್ರಾ ರೈಲು ದಹನದಂಥ ಕ್ರೌರ್ಯಗಳನ್ನು ಉಲ್ಲೇಖಿಸುವುದು ದುಷ್ಟತನದ  ಪ್ರತಿಬಿಂಬ. ದೆಹಲಿಯಲ್ಲಾಗಲಿ, ಗುಜರಾತ್‍ನಲ್ಲಾಗಲಿ, ಗೋಧ್ರಾದಲ್ಲಾಗಲಿ ನಡೆದಿರುವುದು ಮಾನವ ಹತ್ಯೆಗಳೇ ಹೊರತು ಇನ್ನೇನಲ್ಲ. ನಿಶ್ಚಲವಾದ ಆ ಜೀವಗಳನ್ನು ಹಿಂದೂ-ಮುಸ್ಲಿಮ್, ಸಿಕ್ಖ್ ಎಂದು  ವಿಭಜಿಸುವುದರಿಂದ ಸಂತ್ರಸ್ತಗೊಂಡ ಆ ಕುಟುಂಬಗಳ ನೋವಿನಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ. ಆದರೆ ಸಾಯಿಸಿದವರು ನಿರ್ದಿಷ್ಟ ಉದ್ದೇಶದಿಂದಲೇ ಸಾಯಿಸಿದ್ದಾರೆ. ಹಿಂದೂ-ಮುಸ್ಲಿಮ್-ಸಿಖ್ ರ  ಸಾವಿನಲ್ಲಿ ತಂತಮ್ಮ ತತ್ವ ಸಿದ್ಧಾಂತದನುಸಾರ ಆನಂದವನ್ನೂ ಪಟ್ಟಿದ್ದಾರೆ. ಆದ್ದರಿಂದ,
ಈ ದುಷ್ಟತನವನ್ನು ಧರ್ಮಾತೀತವಾಗಿ ಮತ್ತು ಪಕ್ಷಾತೀತವಾಗಿ ಖಂಡಿಸುವುದಕ್ಕೆ ಸಾಧ್ಯವಾಗದೇ ಹೋಗಿರುವ ದೇಶದಲ್ಲಿ ಆನೆ ಮತ್ತು ಹಸು ಪ್ರಕರಣದಲ್ಲಿ ಪ್ರಾಮಾಣಿಕ ಪ್ರತಿಕ್ರಿಯೆಯನ್ನು ನಿರೀಕ್ಷಿಸುವುದೇ  ದೊಡ್ಡ ತಮಾಷೆ. ಆನೆಯ ಘಟನೆ ಕೇರಳದಲ್ಲಿ ನಡೆದಿದೆ ಅನ್ನುವುದೇ ಒಂದು ನಿರ್ದಿಷ್ಟ ವರ್ಗದ ಪಾಲಿಗೆ ದೊಡ್ಡ ಸಂಭ್ರಮ. ಅಲ್ಲಿ ಎಡಪಕ್ಷದ ಆಡಳಿತವಿದೆ. ಆದ್ದರಿಂದ ಬಲಪಕ್ಷಕ್ಕೆ ಅದೊಂದು ರಾಷ್ಟ್ರಮಟ್ಟದ  ಇಶ್ಶೂ. ಕೇರಳಿಗರು ಎಂಥ ಕ್ರೂರಿಗಳು ಅನ್ನುವುದನ್ನು ಎತ್ತಿ ಹೇಳುವುದಕ್ಕೂ ಆ ಘಟನೆಯನ್ನು ಎಗ್ಗಿಲ್ಲದೇ ಬಲಪಕ್ಷದವರು ಮತ್ತು ಅವರಿಂದ ಪ್ರೇರಿತರಾದ ಸಾಮಾನ್ಯರೂ ಬಳಸಿಕೊಂಡರು. ಹೀಗೆ ಆನೆ  ಮೇಲೆ ಕರುಣೆ ವ್ಯಕ್ತಪಡಿಸಿದವರಲ್ಲಿ ಹೆಚ್ಚಿನವರೂ ದೇಶದಾದ್ಯಂತ ಥಳಿತ ಘಟನೆಗಳಾಗುತ್ತಿದ್ದಾಗ, ಅದರಿಂದಾಗಿ ಸಾವುಗಳು ಸಂಭವಿಸುತ್ತಿದ್ದಾಗ, ಗುಜರಾತ್-ಮುಝಫ್ಫರ್‍ ನಗರ್ ಹತ್ಯಾಕಾಂಡಗಳಾಗುವಾಗ  ಮೌನಿಗಳಾಗಿದ್ದರು ಎಂಬುದು ಸ್ಪಷ್ಟ. ಆ ಕ್ರೌರ್ಯಗಳ ಕುರಿತಂತೆ ಅವರು ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸುವುದಿಲ್ಲ. ಯಾರಾದರೂ ಪ್ರಶ್ನಿಸಿದರೆ ಪ್ರಶ್ನೆಗೆ ಪ್ರತಿಯಾಗಿ ಇನ್ನೊಂದು ಪ್ರಶ್ನೆಯನ್ನು  ಎತ್ತುತ್ತಾರೆಯೇ ಹೊರತು ಅದು ಖಂಡನಾರ್ಹ ಎಂಬ ಮಾತೂ ಹೊರಡುವುದಿಲ್ಲ. ಅದೇವೇಳೆ,
ಹಿಮಾಚಲ ಪ್ರದೇಶದಲ್ಲಿ ದವಡೆ ಹರಿದುಕೊಂಡು ರಕ್ತ ಸುರಿಸುತ್ತಾ ಸಂಕಟಪಡುತ್ತಿರುವ ಹಸು, ಕೇರಳದ ಆನೆಯಂತೆ ಯಾವ ಕಾಳಜಿಯನ್ನೂ ಗಿಟ್ಟಿಸಿಕೊಳ್ಳುವುದಿಲ್ಲ. ಕೇರಳದ ಆನೆಗೆ ಭಯಂಕರವಾಗಿ  ಮಿಡಿದವರಲ್ಲಿ ಸಣ್ಣ ಸಂಖ್ಯೆಯೊಂದನ್ನು ಬಿಟ್ಟರೆ ಉಳಿದವರ್ಯಾರೂ ಆ ಬಗ್ಗೆ ಮಾತನ್ನೇ ಆಡುವುದಿಲ್ಲ. ಯಾಕೆಂದರೆ, ಅರುಣಾಚಲ ಪ್ರದೇಶದಲ್ಲಿ ಆಡಳಿತದಲ್ಲಿರುವುದು ಬಲಪಕ್ಷ ಮತ್ತು ಹಸುವಿಗೆ ಪಟಾಕಿ ತಿನ್ನಿಸಿದವನು ಈ ಬಲಪಕ್ಷ ಪ್ರತಿನಿಧಿಸುವ ಧರ್ಮದ ಅನುಯಾಯಿ.
ಅನ್ಯಾಯವನ್ನು ಯಾವ ಧರ್ಮವೂ ಹಿಂದೂ-ಮುಸ್ಲಿಮ್ ಎಂದು ವಿಭಜಿಸುವುದಿಲ್ಲ. ಅನ್ಯಾಯವೆಂದರೆ, ಅನ್ಯಾಯ ಅಷ್ಟೇ. ದುಷ್ಟತನವೆಂದರೆ ದುಷ್ಟತನ ಅಷ್ಟೇ. ಕ್ರೌರ್ಯದಲ್ಲಿ ಹಿಂದೂ-ಮುಸ್ಲಿಮ್ ಕ್ರೌರ್ಯ  ಎಂಬ ಬೇಧವಿಲ್ಲ. ಆನೆ ಮತ್ತು ಹಸು ಇವೆರಡೂ ಮೂಕ ಪ್ರಾಣಿಗಳು. ಅವುಗಳ ಮೇಲೆ ದೌರ್ಜನ್ಯ ಎಸಗಿದವರು ದುಷ್ಟರೇ ಹೊರತು ಅವರಲ್ಲಿ ಹಿಂದೂ ದುಷ್ಟ-ಮುಸ್ಲಿಮ್ ದುಷ್ಟ, ಎಡ ದುಷ್ಟ, ಬಲ  ದುಷ್ಟ ಎಂಬ ವ್ಯತ್ಯಾಸ ಮಾಡುವುದು ಧರ್ಮ ವಿರೋಧಿ. ಇದು ಪ್ರಾಣಿಗಳಿಗೆ ಸಂಬಂಧಿಸಿ ಮಾತ್ರ ಹೇಳಬೇಕಾದುದಲ್ಲ. ಮನುಷ್ಯರ ಮೇಲಿನ ಹಲ್ಲೆ, ಹತ್ಯೆಗಳಿಗೆ ಸಂಬಂಧಿಸಿಯೂ ಇವೇ ಮಾನದಂಡವನ್ನು  ಅಳವಡಿಸಬೇಕು. ಅನ್ಯಾಯ- ಹಿಂದೂ ಎಸಗಿದರೂ ಮುಸ್ಲಿಮ್ ಎಸಗಿದರೂ ಅನ್ಯಾಯವೇ. ನೋವು- ಹಿಂದೂವಿನದ್ದಾದರೂ ಮುಸ್ಲಿಮನದ್ದಾದರೂ ನೋವೇ. ಪ್ರಾಮಾಣಿಕತೆ- ಹಿಂದೂವಿನದ್ದಾದರೂ  ಮುಸ್ಲಿಮನದ್ದಾದರೂ ಪ್ರಾಮಾಣಿಕತೆಯೇ. ಕೆಡುಕು ಮತ್ತು ಒಳಿತು ಯಾವ ಧರ್ಮದ ಖಾಸಗಿ ಸೊತ್ತೂ ಅಲ್ಲ. ಯಾರು ಅದನ್ನು ಕೈವಶ ಮಾಡಿಕೊಳ್ಳುತ್ತಾರೋ ಅವರದು. ಆನೆ ಮತ್ತು ಹಸು ಪ್ರಕರಣಗಳು  ನಮ್ಮೊಳಗಿನ ದುಷ್ಟತನವನ್ನು ಮತ್ತೊಮ್ಮೆ ಜಗಜ್ಜಾಹೀರುಗೊಳಿಸಿದೆ. ದುಷ್ಟತನವನ್ನು ಖಂಡಿಸುವ ಬದಲು ದುಷ್ಟತನ ಎಲ್ಲಿ ನಡೆದಿದೆ, ಯಾರು ಭಾಗಿಯಾಗಿದ್ದಾರೆ ಎಂಬುದನ್ನು ನೋಡಿಕೊಂಡು  ಪ್ರತಿಕ್ರಿಯಿಸುವ ಅತೀ ದುಷ್ಟತನವೊಂದು ನಮ್ಮೊಳಗೆ ಇದೆ. ಆನೆ ಮತ್ತು ಹಸು ನಮ್ಮಲ್ಲಿನ ಈ ದುಷ್ಟತನಕ್ಕೆ ಕನ್ನಡಿ ಹಿಡಿದಿದೆ, ಅಷ್ಟೇ.