Thursday 15 June 2017

ಉಝ್ಮಾ ತೆರೆದಿಟ್ಟ ದೇಶಭಕ್ತರ ಹಿಪಾಕ್ರಸಿ

     ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಅವರು ಕಳೆದವಾರ ಪಾಕಿಸ್ತಾನವನ್ನು ಹೊಗಳಿದರು. ಪಾಕಿಸ್ತಾನಕ್ಕೆ ಕೃತಜ್ಞತೆ
ಸಲ್ಲಿಸಿದರು. ಅಲ್ಲಿರುವವರ ಮಾನವೀಯ ಗುಣಗಳನ್ನು ಶ್ಲಾಘಿಸಿದರು. ಒಂದು ವೇಳೆ ಪಾಕಿಸ್ತಾನದ ಆಂತರಿಕ ಸಚಿವಾಲಯ, ವಿದೇಶಾಂಗ ಸಚಿವರು, ನ್ಯಾಯಾಂಗ ಮತ್ತು ನ್ಯಾಯವಾದಿಗಳು ಸಹಕರಿಸದೇ ಇರುತ್ತಿದ್ದರೆ ಉಝ್ಮಾ ಭಾರತಕ್ಕೆ ಮರಳುವುದು ಕಷ್ಟವಿತ್ತು ಎಂದು ಹೇಳಿದರು. ಆದರೆ ಈ ವರೆಗೆ ಯಾರೂ ಸುಶ್ಮಾರನ್ನು ಪಾಕಿಸ್ತಾನಕ್ಕೆ ಅಟ್ಟುವ ಹೇಳಿಕೆಯನ್ನು ಕೊಟ್ಟಿಲ್ಲ. ‘ಪಾಕಿಸ್ತಾನ ನರಕವಲ್ಲ’ ಎಂದು ಈ ಹಿಂದೆ ನಟಿ ರಮ್ಯಾ ನೀಡಿದ ಹೇಳಿಕೆಗಾಗಿ ಅವರ ಮೇಲೆ ಮೊಟ್ಟೆ, ಟೊಮೆಟೋ ಎಸೆದು ಅವಮಾನಿಸಿದ ಬಿಜೆಪಿ ಕಾರ್ಯಕರ್ತರೆಲ್ಲ ಸದ್ಯ ಮೌನವಾಗಿದ್ದಾರೆ.
       ಪಾಕಿಸ್ತಾನವನ್ನು ನರಕವಾಗಿ ಮತ್ತು ಪಾಕಿಸ್ತಾನದಲ್ಲಿರುವವರನ್ನು ಭಾರತ ವಿರೋಧಿಗಳನ್ನಾಗಿ ಬಿಂಬಿಸುವವರು ಈ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸಕ್ರಿಯರಾಗಿದ್ದಾರೆ. ಕೆಲವು ಮಾಧ್ಯಮ ಕೇಂದ್ರಗಳಂತೂ ಈ ನಕಾರಾತ್ಮಕ ಪ್ರಚಾರದ ನೊಗವನ್ನು ಹಿಡಿದುಕೊಂಡಂತೆ ವರ್ತಿಸುತ್ತಿವೆ. ವೀಸಾ ಅವಧಿ ಮೀರಿಯೂ ಈ ದೇಶದಲ್ಲೇ ಉಳಿದುಕೊಂಡ ಪಾಕಿಸ್ತಾನಿಯರ ಬಂಧನವನ್ನು ಉಗ್ರವಾದಿಗಳ ಬಂಧನವೆಂಬಂತೆ ಅವು ಸುದ್ದಿ ಮಾಡುತ್ತಿವೆ. ಪಾಕಿಸ್ತಾನಿ ಸಂಗೀತಗಾರರನ್ನು, ಚಿತ್ರತಾರೆಯರು, ಕ್ರೀಡಾಪಟುಗಳನ್ನು ಭಾರತಕ್ಕೆ ಬರದಂತೆ ತಡೆಯುವುದೂ ನಡೆಯುತ್ತಿದೆ. ದೇಶಪ್ರೇಮವೆಂದರೆ ಪಾಕಿಸ್ತಾನವನ್ನು ತೆಗಳುವುದು ಎಂಬಂತಾಗಿದೆ. ‘ಭಾರತದ ಓರ್ವ ಯೋಧನ ತಲೆಗೆ ಪಾಕ್‍ನ 10 ಯೋಧರ ತಲೆಯನ್ನು ಕತ್ತರಿಸಬೇಕು’ ಎಂಬ ಘೋಷಣೆಯೊಂದಿಗೆ ಚುನಾವಣಾ ಅಖಾಡಕ್ಕಿಳಿದ ಪಕ್ಷವು ಇವತ್ತು ಅಧಿಕಾರದಲ್ಲಿರುವುದರಿಂದ ಇಂಥ ಉದ್ರಿಕ್ತತೆಯನ್ನು ಅನಿರೀಕ್ಷಿತ ಎಂದು ಹೇಳುವಂತಿಲ್ಲ. ಸದ್ಯಕ್ಕಂತೂ ಭಾರತ-ಪಾಕ್‍ಗಳ ನಡುವೆ ಸಂಬಂಧ ತೀರಾ ಹಳಸಿದೆ. ಕುಲ್‍ಭೂಷಣ್ ಯಾದವ್ ಪ್ರಕರಣ ಮತ್ತು ಕಾಶ್ಮೀರದ ಉದ್ವಿಘ್ನ ಸ್ಥಿತಿಯಿಂದಾಗಿ ಎರಡೂ ದೇಶಗಳು ಮುಖ ಕೊಟ್ಟು ಮಾತಾಡಲಾಗದಂಥ ಸ್ಥಿತಿಯಿದೆ. ಇಂಥ ಸಂದರ್ಭದಲ್ಲೂ ಸುಶ್ಮಾ ಸ್ವರಾಜ್ ಪಾಕಿಸ್ತಾನವನ್ನು ಹೊಗಳುವುದೆಂದರೇನು? ಕಡು ವೈರಿ ರಾಷ್ಟ್ರವಾದ ಪಾಕಿಸ್ತಾನವನ್ನು ಮಾನವೀಯ ಗುಣಗಳುಳ್ಳ ರಾಷ್ಟ್ರವಾಗಿ ಪರಿಗಣಿಸುವುದೆಂದರೇನು? ಇಷ್ಟಿದ್ದೂ ಯಾಕೆ ಯಾವ ದೇಶಪ್ರೇಮಿಯೂ ಸುಶ್ಮಾರಿಗೆ ಪಾಕ್ ಟಿಕೆಟ್ ರವಾನಿಸುವ ಪ್ರಯತ್ನ ಮಾಡಿಲ್ಲ?
    ಮಲೇಶ್ಯದಲ್ಲಿ ಉದ್ಯೋಗದಲ್ಲಿದ್ದ ದೆಹಲಿಯ ಉಝ್ಮಾ ಎಂಬ ಯುವತಿಗೆ ಅಲ್ಲೇ ಉದ್ಯೋಗದಲ್ಲಿದ್ದ ಪಾಕಿಸ್ತಾನದ ತಾಹಿರ್ ಅಲಿಯ ಪರಿಚಯವಾಗುತ್ತದೆ. ಸ್ನೇಹಿತರಾಗುತ್ತಾರೆ. ಆತನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ ಆಕೆ ಭ್ರಮನಿರಸನಗೊಂಡು ಭಾರತೀಯ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆಯುತ್ತಾಳೆ. ಭಾರತಕ್ಕೆ ಮರಳಿ ಕಳುಹಿಸಿ ಕೊಡುವಂತೆ ವಿನಂತಿಸುತ್ತಾಳೆ. ಇಡೀ ಘಟನೆ ನಡೆದಿರುವುದು ಪಾಕಿಸ್ತಾನದಲ್ಲಿ. ಕುಲ್‍ಭೂಷಣ್ ಯಾದವ್ ಪ್ರಕರಣದಲ್ಲಿ ಭಾರತ ಈಗಾಗಲೇ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ದೂರು ಸಲ್ಲಿಸುವ ಮೂಲಕ ಪಾಕಿಸ್ತಾನದ ನ್ಯಾಯ ಪ್ರಕ್ರಿಯೆಯನ್ನು ಪ್ರಶ್ನಿಸಿದೆ. ಇನ್ನೊಂದೆಡೆ ಸರ್ಜಿಕಲ್ ಸ್ಟ್ರೈಕ್‍ನ ವೀಡಿಯೋಗಳನ್ನು ಬಿಡುಗಡೆಗೊಳಿಸಿದೆ. ಪಾಕಿಸ್ತಾನವನ್ನು ಒಂಟಿ ಮಾಡುವ ಪ್ರಯತ್ನದಲ್ಲೂ ಸಕ್ರಿಯವಾಗಿದೆ. ಹೀಗಿರುತ್ತಾ, ಉಝ್ಮಾ ಪ್ರಕರಣವನ್ನು ಮಾನವೀಯ ನೆಲೆಯಲ್ಲಿ ನೋಡಬೇಕಾದ ಯಾವ ದರ್ದೂ ಪಾಕಿಸ್ತಾನಕ್ಕಿರಲಿಲ್ಲ. ತಾಹಿರ್ ಅಲಿ ವಾದಿಸಿದ್ದೂ ಅದೇ ರೀತಿಯಲ್ಲಿ. ಇದು ಪಾಕಿಸ್ತಾನದ ಪ್ರತಿಷ್ಠೆಯ ಪ್ರಶ್ನೆಯೆಂದು ಆತ ನ್ಯಾಯಾಲಯದಲ್ಲಿ ಹೇಳಿಕೊಂಡಿದ್ದ. ಆಗ ಅದನ್ನು ಖಂಡಿಸಿದ್ದು ಹೈಕೋರ್ಟ್‍ನ ನ್ಯಾಯಾಧೀಶ ಮುಹ್ಸಿನ್ ಅಖ್ತರ್ ಕಯಾನಿ ಅವರೇ. ಭಾರತ-ಪಾಕ್‍ಗಳ ಮಟ್ಟಿಗೆ ಯಾಕೆ ಈ ಪ್ರಕರಣ ಪ್ರತಿಷ್ಠೆಯದ್ದಾಗಬೇಕು ಎಂದವರು ಮರು ಪ್ರಶ್ನಿಸಿದರು. ಉಝ್ಮಾಳ ಜೊತೆ ಖಾಸಗಿ ಮಾತುಕತೆಗೆ ಅವಕಾಶ ಮಾಡಿಕೊಡಬೇಕೆಂಬ ತಾಹಿರ್ ಅಲಿಯ ವಿನಂತಿಯನ್ನೂ ಅವರು ತಿರಸ್ಕರಿಸಿದರು. ಎಲ್ಲಿಯವರೆಗೆಂದರೆ, ಉಝ್ಮಾಳ ಪರ ವಕೀಲರಾದ ಶಾ ನವಾಝ್‍ರು ತಂದೆಯಂತೆ ವಾದಿಸಿದರು ಎಂದು ಸ್ವತಃ ಸುಶ್ಮಾ ಸ್ವರಾಜ್‍ರೇ ಕೊಂಡಾಡಿದ್ದಾರೆ. ಆದ್ದರಿಂದ, ಪಾಕಿಸ್ತಾನದಲ್ಲಿ ಭಾರತ ವಿರೋಧಿ ಗಿಡಗಳಷ್ಟೇ ಬೆಳೆಯುತ್ತಿವೆ ಎಂದು ನಂಬಿಕೊಂಡವರು ಮತ್ತು ಆ ರೀತಿಯಲ್ಲಿ ಪ್ರಚಾರ ಮಾಡುವವರೆಲ್ಲ ಉಝ್ಮಾ ಪ್ರಕರಣವನ್ನು ಎದುರಿಟ್ಟುಕೊಂಡು ಆತ್ಮಾವಲೋಕನಕ್ಕೆ ಇಳಿಯಬೇಕು. ಪಾಕ್‍ನ ಕಣ ಕಣದಲ್ಲೂ ಭಾರತ ವಿರೋಧಿ ಭಾವನೆ ನೆಲೆ ನಿಂತಿರುತ್ತಿದ್ದರೆ ಉಝ್ಮಾ ಅಷ್ಟು ಸುಲಭದಲ್ಲಿ ಎರಡ್ಮೂರು ವಾರಗಳೊಳಗೆ ಭಾರತದ ಪಾಲಾಗಲು ಸಾಧ್ಯವೇ ಇರಲಿಲ್ಲ. ಅದನ್ನು ಸುಶ್ಮಾ ಸ್ವರಾಜ್‍ರೂ ಒಪ್ಪಿಕೊಂಡಿದ್ದಾರೆ. ಇವೇನನ್ನು ಸೂಚಿಸುತ್ತದೆ?
     ನಿಜವಾಗಿ ಎಲ್ಲ ರಾಷ್ಟ್ರಗಳಿಗೂ ತನ್ನ ಗಡಿಯ ಪಕ್ಕ ಜಗಳಗಂಟ ರಾಷ್ಟ್ರವೊಂದು ಇರಲೇ ಬೇಕಾಗಿದೆ. ತೈವಾನ್-ಜಪಾನ್‍ಗಳಿಗೆ ಚೀನಾ ಇರುವಂತೆ, ನೇಪಾಳಕ್ಕೆ ಭಾರತ ಇರುವಂತೆ, ಅಮೇರಿಕಕ್ಕೆ ದಕ್ಷಿಣ ಅಮೇರಿಕಾದ ಕಮ್ಯುನಿಸ್ಟ್ ರಾಷ್ಟ್ರಗಳು ಇರುವಂತೆ, ಇರಾಕ್‍ಗೆ ಇರಾನ್ ಇರುವಂತೆ, ಟರ್ಕಿಗೆ ಸಿರಿಯಾ ಇರುವಂತೆ, ಸುಡಾನ್‍ಗೆ ದಕ್ಷಿಣ ಸುಡಾನ್ ಇರುವಂತೆ, ರಶ್ಯಾಕ್ಕೆ ಹಳೆ ಸೋವಿಯಾತ್ ಯುನಿಯನ್‍ನ ರಾಷ್ಟ್ರಗಳಿರುವಂತೆ, ಯುಗೋಸ್ಲಾವಿಯಕ್ಕೆ ಹರ್ಝಾಗೋವಿನ ಇರುವಂತೆ ಪಾಕಿಸ್ತಾನಕ್ಕೂ ಭಾರತ ಇರಲೇಬೇಕಾಗಿದೆ. ಗಡಿಯಲ್ಲಿ ಜಗಳ ಇದ್ದರೆ ಗಡಿಯ ಒಳಗಡೆ ಇರುವ ಜನರನ್ನು ದೇಶಪ್ರೇಮದ ಹೆಸರಲ್ಲಿ ಒಗ್ಗೂಡಿಸುವುದು ಸುಲಭ. ಸರಕಾರ ಎಡವಟ್ಟು ಮಾಡಿಕೊಂಡಾಗಲೆಲ್ಲ ಗಡಿಯಲ್ಲಿ ಉದ್ವಿಘ್ನ ಸ್ಥಿತಿಯನ್ನು ನಿರ್ಮಿಸಿದರೆ ಸಾಕಾಗುತ್ತದೆ. ಆಗ ಗಡಿಯ ಒಳಗೆ ನಡೆಯುತ್ತಿದ್ದ ಚರ್ಚೆಗಳೆಲ್ಲ ಸ್ತಬ್ದಗೊಂಡು ಗಡಿಯೇ ಮುಖ್ಯ ಚರ್ಚಾ ವಿಷಯವಾಗುತ್ತದೆ. ನೋಟು ನಿಷೇಧದ ವಿರುದ್ಧ ತೀವ್ರ ಮಟ್ಟದ ಪ್ರತಿಕ್ರಿಯೆಗಳು ಕಾಣಿಸಿಕೊಂಡಾಗ ಕೇಂದ್ರ ಸರಕಾರ ತೋರಿಸಿದ್ದು ಪಾಕಿಸ್ತಾನವನ್ನು. ಅಲ್ಲಿಂದ ಭಾರೀ ಪ್ರಮಾಣದಲ್ಲಿ ನಕಲಿ ನೋಟುಗಳು ಬರುತ್ತಿರುವುದಕ್ಕೆ ಪ್ರತಿಯಾಗಿ ಕೈಗೊಂಡ ದೇಶಪ್ರೇಮಿ ನಿರ್ಧಾರ ಇದು ಎಂದು ಅದು ಹೇಳಿಕೊಂಡಿತು. ನೋಟು ನಿಷೇಧದಿಂದಾಗಿ ಭಯೋತ್ಪಾದಕರ ನುಸುಳುವಿಕೆ ಕಡಿಮೆಯಾಗಿದೆ ಮತ್ತು ಕಾಶ್ಮೀರದಲ್ಲಿ ಕಲ್ಲೆಸೆತಗಳು ನಿಂತಿವೆ ಎಂದೂ ಅದು ವಾದಿಸಿತು. ಆದರೆ ಕಾಶ್ಮೀರದಲ್ಲಿನ ಸದ್ಯದ ಬೆಳವಣಿಗೆಗಳು ನೋಟು ನಿಷೇಧದ ಒಟ್ಟು ನಿರ್ಧಾರವನ್ನೇ ಅಪಹಾಸ್ಯ ಮಾಡುವಷ್ಟು ಅಪಾಯಕಾರಿ ಮಟ್ಟದಲ್ಲಿದೆ. ಹಾಗಾದರೆ ನೋಟು ನಿಷೇಧದ ಸಂದರ್ಭದಲ್ಲಿ ಕೇಂದ್ರ ಸರಕಾರ ನೀಡಿದ ಸಮರ್ಥನೆಯನ್ನು ಏನೆಂದು ಪರಿಗಣಿಸಬೇಕು? ನೋಟು ನಿಷೇಧಕ್ಕೂ ಕಲ್ಲೆಸತಕ್ಕೂ ಸಂಬಂಧಗಳಿದ್ದುದು ನಿಜವೊ ಅಥವಾ ಅವರ ಗುರಿ ಇನ್ನೇನೋ ಆಗಿತ್ತೋ?
     ಅಗತ್ಯ ಬಂದಾಗ ಅಮೆರಿಕ ಯಾವುದಾದರೂ ತೃತೀಯ ರಾಷ್ಟ್ರಗಳ ಮೇಲೆ ದಾಳಿ ಮಾಡುತ್ತದೆ, ದಲಾಯಿಲಾಮ ಮತ್ತು ಅರುಣಾಚಲದ ನೆಪದಲ್ಲಿ ಚೀನಾ ತಗಾದೆ ಎತ್ತುತ್ತದೆ, ಫೆಲೆಸ್ತೀನ್‍ನ ಮೇಲೆ ಇಸ್ರೇಲ್ ಸವಾರಿ ಮಾಡುತ್ತದೆ, ವಿನಾಕಾರಣ ಸೌದಿ ಮತ್ತು ಇರಾನ್‍ಗಳು ಪರಸ್ಪರ ರೇಗಾಡುತ್ತವೆ, ದಕ್ಷಿಣ ಕೊರಿಯ ಮತ್ತು ಉತ್ತರ ಕೊರಿಯಾಗಳು ಯುದ್ಧದಾಹದಿಂದ ಬಳಲುತ್ತಿರುವಂತೆ ಆಡುತ್ತವೆ.. ಬಹುಶಃ ಭಾರತ-ಪಾಕ್‍ಗಳ ನಡುವಿನ ಜಗಳದ ಹಿಂದೆಯೂ ದೇಶಹಿತಕ್ಕಿಂತ ಹೊರತಾದ ಇಂಥ ಅನೇಕಾರು ಕಾರಣಗಳಿವೆ. ಸುಶ್ಮಾ ಆ ಕಾರಣಗಳನ್ನು ಚರ್ಚಿಸುವುದಕ್ಕೆ ವೇದಿಕೆಯೊಂದನ್ನು ನಿರ್ಮಿಸಿದ್ದಾರೆ. ಉಝ್ಮಾ ಅದಕ್ಕೊಂದು ನಿಮಿತ್ತ ಮಾತ್ರ.


No comments:

Post a Comment