Thursday 28 November 2019

ಮಹಾರಾಷ್ಟ್ರ: ಸಿದ್ಧಾಂತ-ವಿಚಾರಧಾರೆಗಳೆಲ್ಲ ಮಣ್ಣು-ಮಸಿ ಎಂದು ಅರ್ಥವೇ?



ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಯು ಮೂರು ಪ್ರಮುಖ ಪ್ರಶ್ನೆಗಳನ್ನು ಎತ್ತುತ್ತಿವೆ.
1. ತದ್ವಿರುದ್ಧ ವಿಚಾರಧಾರೆಯುಳ್ಳ ಪಕ್ಷಗಳು ಅಧಿಕಾರಕ್ಕಾಗಿ ಜೊತೆಗೂಡುವುದು ಎಷ್ಟರ ಮಟ್ಟಿಗೆ ಸಮರ್ಥನೀಯ?
2. ಶಿವಸೇನೆ-ಎನ್‍ಸಿಪಿ-ಕಾಂಗ್ರೆಸ್ ಮೈತ್ರಿಕೂಟ ಸರಕಾರದ ಆಯುಷ್ಯ ಎಷ್ಟು ಸಮಯ?
ಅಜಿತ್ಮ ಪವಾರ್ ರನ್ನು ಸೆಳೆದು ಸರಕಾರ ರಚಿಸಿದ ಬಿಜೆಪಿ ನಡೆ ಎಷ್ಟು ನೈತಿಕ?
ಹಾರಾಷ್ಟ್ರದಲ್ಲಿ ಸದ್ಯ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ವಿಚಿತ್ರ ಮತ್ತು ನಂಬಲಸಾಧ್ಯವಾದದ್ದು. ಮಹಾರಾಷ್ಟ್ರ ವಿಧಾನಸಭೆಗೆ ಕಳೆದ ತಿಂಗಳು ನಡೆದ ಚುನಾವಣೆಯು ಎರಡು ಮೈತ್ರಿಕೂಟಗಳ ನಡುವಿನ ಹೋರಾಟವಾಗಿತ್ತು. ಬಿಜೆಪಿ ಮತ್ತು ಶಿವಸೇನೆಯದ್ದು ಒಂದು ಕೂಟವಾದರೆ ಕಾಂಗ್ರೆಸ್ ಮತ್ತು ಎನ್‍ಸಿಪಿಯದ್ದು ಇನ್ನೊಂದು ಕೂಟ. ನಿಜವಾಗಿ, ಇವೆರಡೂ ಬರೇ ಮೈತ್ರಿಕೂಟಗಳಷ್ಟೇ ಅಲ್ಲ, ಎರಡು ವಿಚಾರಧಾರೆ ಮತ್ತು ಸಿದ್ಧಾಂತದ ಪ್ರತಿನಿಧಿಗಳಾಗಿಯೂ ಗುರುತಿಸಿಕೊಂಡಿದ್ದುವು. ಬಿಜೆಪಿ ಮತ್ತು ಶಿವಸೇನೆಯು ಹಿಂದುತ್ವ ಸಿದ್ಧಾಂತವನ್ನು ಬಲವಾಗಿ ಪ್ರತಿಪಾದಿಸುವ ಮೈತ್ರಿಕೂಟವಾದರೆ, ಕಾಂಗ್ರೆಸ್-ಎನ್‍ಸಿಪಿಗಳು ಸೆಕ್ಯುಲರ್ ವಿಚಾರಧಾರೆಯನ್ನು ನೆಚ್ಚಿಕೊಂಡ ಮೈತ್ರಿಕೂಟ. ಈ ನಾಲ್ಕೂ ಪಕ್ಷಗಳು ಮೈತ್ರಿಕೂಟವನ್ನು ರಚಿಸಿಕೊಂಡೇ ಚುನಾವಣೆಯನ್ನು ಎದುರಿಸಿದ್ದುವು. ಮತದಾರರು ಶಿವಸೇನಾ-ಬಿಜೆಪಿ ಮೈತ್ರಿಕೂಟವನ್ನು ಬೆಂಬಲಿಸಿದರು. ಸೆಕ್ಯುಲರ್ ಮೈತ್ರಿಕೂಟವನ್ನು ತಿರಸ್ಕರಿಸಿದರು. ಇದು ಅತ್ಯಂತ ಸ್ಪಷ್ಟ. ಆದರೆ,
ಆ ಬಳಿಕ ಮಹಾರಾಷ್ಟ್ರದಲ್ಲಿ ನಡೆದಿರುವುದು ದಂಗುಬಡಿಸುವ ರಾಜಕೀಯ ಬೆಳವಣಿಗೆ. ಶಿವಸೇನೆಯು ತನ್ನ ಕಟು ಹಿಂದುತ್ವ ಸಿದ್ಧಾಂತವನ್ನು ತೊರೆಯದೆಯೇ ಮತ್ತು ಅದರಲ್ಲಿ ರಾಜಿ ಮಾಡಿಕೊಳ್ಳುವ ಯಾವ ಸೂಚನೆಯನ್ನು ನೀಡದೆಯೇ ಎನ್‍ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಜೊತೆಸೇರಿ ಸರಕಾರ ರಚಿಸುವ ಇಂಗಿತ ವ್ಯಕ್ತಪಡಿಸಿತು. ಮಾತುಕತೆ ನಡೆಸಿತು ಮತ್ತು ಬಹುತೇಕ ಅದು ಕೈಗೂಡುವ ಸಾಧ್ಯತೆಯೂ ಇದೆ. ಹಾಗಂತ, ಬಿಜೆಪಿಯೊಂದಿಗಿನ ಸಂಬಂಧವನ್ನು ಶಿವಸೇನೆ ಕಡಿದುಕೊಂಡಿರುವುದಕ್ಕೆ ಸಿದ್ಧಾಂತ ಕಾರಣ ಅಲ್ಲ. ಬಿಜೆಪಿಗಿಂತಲೂ ಕಟುವಾದ ಹಿಂದುತ್ವ ಸಿದ್ಧಾಂತದಲ್ಲಿ ನಂಬಿಕೆ ಇಟ್ಟ ಪಕ್ಷ ಶಿವಸೇನೆ. ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದುದು ತನ್ನ ಕಾರ್ಯಕರ್ತರು ಎಂದು ಅದು ಹೆಮ್ಮೆಯಿಂದ ಹೇಳುತ್ತದೆ. ಮುಂಬೈ ಗಲಭೆಯಲ್ಲಿ ಶಿವಸೇನೆಯ ಪಾತ್ರ ಅತ್ಯಂತ ಘಾತಕ ರೂಪದ್ದು ಅನ್ನುವುದನ್ನು ಶ್ರೀಕೃಷ್ಣ ಆಯೋಗ ಸ್ಪಷ್ಟಪಡಿಸಿದೆ. ಬಾಳಾಠಾಕ್ರೆಯನ್ನು ಅದು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದೆ. ಮರಾಠಿ ಅಸ್ಮಿತೆಯನ್ನು ಎತ್ತಿ ಹಿಡಿದು ಮರಾಠೇತರರನ್ನು ಹೊರದಬ್ಬುವ ಅಭಿಯಾನ ಕೈಗೊಂಡ ಕರಾಳ ಇತಿಹಾಸವೂ ಶಿವಸೇನೆಗಿದೆ. ಹಾಗಂತ,
ಶಿವಸೇನೆಯ ಈ ರಾಜಕೀಯ ಸಿದ್ಧಾಂತ ಮತ್ತು ವಿಚಾರಧಾರೆಯ ಕುರಿತು ಬಿಜೆಪಿಗೂ ಭಿನ್ನಾಭಿಪ್ರಾಯವಿಲ್ಲ. ಆದರೆ, ಎನ್‍ಸಿಪಿ ಮತ್ತು ಕಾಂಗ್ರೆಸ್ ಈ ಸಿದ್ಧಾಂತದ ಪ್ರಬಲ ವಿರೋಧಿಗಳು. ಆದ್ದರಿಂದಲೇ ಕಾಂಗ್ರೆಸ್-ಎನ್‍ಸಿಪಿ ಜೊತೆಸೇರಿ ಶಿವಸೇನೆಯು ರಚಿಸುವ ಸರಕಾರ ಎಷ್ಟು ನೈತಿಕ ಅನ್ನುವ ಪ್ರಶ್ನೆ ಮುಖ್ಯವಾಗುವುದು. ಸರಕಾರ ರಚಿಸದಂತೆ ಬಿಜೆಪಿಯನ್ನು ತಡೆಯುವ ಏಕೈಕ ಉದ್ದೇಶದಿಂದ ರಚಿತವಾಗಿರುವ ಈ ಮೈತ್ರಿಕೂಟ ಎಲ್ಲಿಯವರೆಗೆ ಸುರಕ್ಷಿತ? ಎನ್‍ಸಿಪಿ ಮತ್ತು ಕಾಂಗ್ರೆಸ್ ಎರಡೂ ಕೂಡ ಬಿಜೆಪಿ-ಶಿವಸೇನಾ ಸಿದ್ಧಾಂತವನ್ನು ವಿರೋಧಿಸುತ್ತಲೇ ರಾಜಕೀಯ ಅಖಾಡದಲ್ಲಿವೆ. ಹೀಗಿರುವಾಗ, ಈ ಮೈತ್ರಿಯಿಂದ ನಾಗರಿಕರ ಮೇಲೆ ಆಗುವ ಪರಿಣಾಮ ಏನು? ಈ ಪಕ್ಷಗಳ ಕಾರ್ಯಕರ್ತರು ಈ ಬೆಳವಣಿಗೆಯನ್ನು ಹೇಗೆ ಜೀರ್ಣಿಸಿಕೊಳ್ಳಬಹುದು? ‘ಸಮಾನ ಕನಿಷ್ಠ ಕಾರ್ಯಕ್ರಮವನ್ನು ರಚಿಸಿ ತಾವು ಅಧಿಕಾರ ಚಲಾಯಿಸುತ್ತೇವೆ’ ಎಂದು ಈ ಮೈತ್ರಿಕೂಟ ಹೇಳಿಕೊಂಡಿದ್ದರೂ ಅದು ಅಷ್ಟು ಸುಲಭ ಅಲ್ಲ. ಸಮಾನ ಕನಿಷ್ಠ ಕಾರ್ಯಕ್ರಮವಿದ್ದೂ ಸಮಾನ ವಿಚಾರಧಾರೆಯ ಪಕ್ಷಗಳೇ ಪರಸ್ಪರ ಕಚ್ಚಾಡಿಕೊಂಡು ಅಧಿಕಾರದಂದ ನಿರ್ಗಮಿಸಿರುವಾಗ ಈ ಅಸಮಾನ ವಿಚಾರಧಾರೆಯ ಕೂಡಾವಳಿಗೆ ದೀರ್ಘ ಆಯುಷ್ಯವನ್ನು ನಿರೀಕ್ಷಿಸುವುದು ಹೇಗೆ? ಈ ಮೈತ್ರಿಕೂಟವನ್ನು ಅಧಿಕಾರದಿಂದ ಹೊರದಬ್ಬುವುದಕ್ಕೆ ಬಿಜೆಪಿ ಸಹಜವಾಗಿಯೇ ತಂತ್ರಗಳನ್ನು ಹೆಣೆಯಬಹುದು. ಹಿಂದುತ್ವಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಹುಟ್ಟು ಹಾಕಬಹುದು. ಶಿವಸೇನೆಯನ್ನು ಸೈದ್ಧಾಂತಿಕವಾಗಿ ಇಕ್ಕಟ್ಟಿಗೆ ಸಿಲುಕಿಸುವ ತಂತ್ರಗಳನ್ನು ಹೆಣೆಯಬಹುದು. ಆಗೆಲ್ಲ ಸಮಾನ ಕನಿಷ್ಠ ಕಾರ್ಯಕ್ರಮಕ್ಕೆ ಅಂಟಿಕೂರಲು ಶಿವಸೇನೆ ಪ್ರಯತ್ನಿಸಿದರೆ ಕಾರ್ಯಕರ್ತರನ್ನು ಕಳಕೊಳ್ಳಬೇಕಾಗುತ್ತದೆ. ಆಗ ಶಿವಸೇನೆಯನ್ನು ಅಧಿಕಾರ ದಾಹಿಯಂತೆ ಮತ್ತು ಹಿಂದುತ್ವ ವಿರೋಧಿಯಂತೆ ಬಿಂಬಿಸಲು ಬಿಜೆಪಿಗೆ ಸುಲಭವಾಗುತ್ತದೆ. ಇದೇವೇಳೆ, ಕಾಂಗ್ರೆಸ್-ಎನ್‍ಸಿಪಿಯನ್ನು ಮುಜುಗರಕ್ಕೆ ತಳ್ಳುವುದೂ ಕಷ್ಟ ಅಲ್ಲ. ಈ ಎರಡೂ ಪಕ್ಷಗಳ ಸೆಕ್ಯುಲರ್ ನೀತಿಗೆ ಸವಾಲಾಗಬಲ್ಲ ಬೆಳವಣಿಗೆಯನ್ನು ಮಹಾರಾಷ್ಟ್ರದಲ್ಲಿ ನಿರ್ಮಿಸುವುದು ಬಿಜೆಪಿಗೆ ಸುಲಭ. ಅತ್ತ ಶಿವಸೇನೆಯನ್ನು ಒತ್ತಡಕ್ಕೆ ಸಿಲುಕಿಸಿದಂತೆಯೇ ಇತ್ತ ಎನ್‍ಸಿಪಿ-ಕಾಂಗ್ರೆಸನ್ನು ಒತ್ತಡಕ್ಕೆ ಸಿಲುಕಿಸಿ ಅವುಗಳಿಗೆ ಇದ್ದ ಬದ್ಧ ಸಾರ್ವಜನಿಕ ಬೆಂಬಲವನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಬಿಜೆಪಿ ಮಾಡಬಹುದು. ಆದ್ದರಿಂದಲೇ,
ಶಿವಸೇನೆ, ಎನ್‍ಸಿಪಿ-ಕಾಂಗ್ರೆಸ್ ಪಕ್ಷಗಳು ಮೈತ್ರಿಕೂಟ ರಚಿಸಿಕೊಂಡು ಸರಕಾರ ರಚಿಸುವುದರಿಂದ ಬಿಜೆಪಿಗೆ ಆರಂಭಿಕ ಹಿನ್ನಡೆ ಉಂಟಾಗಬಹುದೇ ಹೊರತು ಶಾಶ್ವತ ಅಲ್ಲ. ಅದು ಶಿವಸೇನೆಯನ್ನು ವಚನಭ್ರಷ್ಟವಾಗಿ ಮತ್ತು ಸಿದ್ಧಾಂತಕ್ಕೆ ಇರಿದ ಪಕ್ಷವಾಗಿ ಬಿಂಬಿಸುತ್ತಾ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಬಹುದು. ಕರ್ನಾಟಕದಲ್ಲಿ ಜೆಡಿಎಸ್‍ನೊಂದಿಗೆ ಸೇರಿ ಸರಕಾರ ರಚಿಸಿದ ಬಳಿಕ ಹೇಗೆ ಆ ಇಡೀ ಪ್ರಕ್ರಿಯೆಯನ್ನು ತನ್ನ ಪರವಾಗಿ ಬಿಜೆಪಿ ತಿರುಗಿಸಿಕೊಂಡಿತೋ ಅಂಥದ್ದೇ ಒಂದು ಸ್ಥಿತಿ ಮಹಾರಾಷ್ಟ್ರದಲ್ಲೂ ನಿರ್ಮಾಣವಾಗಬಹುದು. ಜೆಡಿಎಸ್ ಅನ್ನು ವಚನಭ್ರಷ್ಟ ಪಕ್ಷಎಂದು ಘೋಷಿಸಿಯೇ ಬಿಜೆಪಿ ರಾಜ್ಯದಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಂಡಿರುವುದು ಇಲ್ಲಿ ಉಲ್ಲೇಖನೀಯ.
ಕಾಂಗ್ರೆಸ್-ಎನ್‍ಸಿಪಿಯೊಂದಿಗೆ ಶಿವಸೇನೆಯು ಮೈತಿ ಮಾಡಿಕೊಳ್ಳುವುದೆಂದರೆ, ಅದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಂತೆ ಅಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್‍ಗಳ ನಡುವೆ ಎತ್ತಿ ಹೇಳಬಹುದಾದ ಸೈದ್ಧಾಂತಿಕ ಭಿನ್ನತೆಗಳೇ ಇಲ್ಲ. ಎನ್‍ಸಿಪಿ ಮತ್ತು ಕಾಂಗ್ರೆಸ್ ನಡುವೆಯೂ ಇದೇ ಸ್ಥಿತಿ ಇದೆ. ರಾಜಕೀಯ ಮತ್ತು ಸ್ಥಳೀಯ ಕಾರಣಗಳು ಎನ್‍ಸಿಪಿ ಮತ್ತು ಜೆಡಿಎಸ್‍ಗಳ ಹುಟ್ಟಿಗೆ ಕಾರಣವೇ ಹೊರತು ಸೆಕ್ಯುಲರ್ ಸಿದ್ಧಾಂತದ ಮೇಲಿನ ದ್ವೇಷವಲ್ಲ. ಆದರೆ ಶಿವಸೇನೆ ಹಾಗಲ್ಲ. ಅದು ಹುಟ್ಟಿಕೊಂಡದ್ದೇ ಸೆಕ್ಯುಲರ್ ಸಿದ್ಧಾಂತವನ್ನು ವಿರೋಧಿಸಿಕೊಂಡು. ಸಂವಿಧಾನ ಪ್ರತಿಪಾದಿಸುವ ಬಹುತ್ವದ ಭಾರತದೊಂದಿಗೆ ಅದಕ್ಕೆ ತಕರಾರಿದೆ. ಅದು ಇವತ್ತು ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದುಕೊಂಡಿದ್ದರೆ ಅದಕ್ಕೆ ಅದರ ಅಸ್ತಿತ್ವದ ಭಯ ಕಾರಣವೇ ಹೊರತು ಸಿದ್ಧಾಂತ ಅಲ್ಲ. ಬಿಜೆಪಿ ನಿಧಾನವಾಗಿ ತನ್ನನ್ನು ಆಪೋಶನ ಪಡಕೊಳ್ಳುತ್ತಿದೆ ಅನ್ನುವ ಭಯ ಅದನ್ನು ಆವರಿಸಿದೆ. ತನ್ನ ಪಕ್ಷದ ಭದ್ರ ಕೋಟೆಗಳನ್ನು ಮತ್ತು ಬೆಂಬಲಿಗರನ್ನು ಬಿಜೆಪಿ ನಿಧಾನಕ್ಕೆ ತನ್ನ ತೆಕ್ಕೆಗೆ ಪಡೆದುಕೊಳ್ಳುತ್ತಿದೆ ಅನ್ನುವ ಸಂಕಟ ಅದರದು. ಇದು ಹೀಗೆಯೇ ಮುಂದುವರಿದರೆ ಶಿವಸೇನೆಯ ಬದಲು ಜನರು ಬಿಜೆಪಿಯನ್ನೇ ಆಯ್ಕೆ ಮಾಡಿಕೊಂಡಾರು ಎಂಬುದು ಅದಕ್ಕೆ ಅರಿವಾಗಿದೆ. ಅಲ್ಲದೇ, ತನ್ನ ಜೊತೆ ಮೈತ್ರಿ ಮಾಡಿಕೊಂಡ ಯಾವ ಸ್ಥಳೀಯ ಪಕ್ಷವನ್ನೂ ಬಿಜೆಪಿ ಬೆಳೆಯಲು ಬಿಟ್ಟಿಲ್ಲ. ಇದನ್ನು ಮನಗಂಡೇ ಶಿವಸೇನೆ ಬಿಜೆಪಿಯನ್ನು ತೊರೆದು ಹೊಸ ಮೈತ್ರಿಕೂಟವನ್ನು ರಚಿಸಿಕೊಂಡಿದೆ. ಇದು ಅನುಕೂಲ ಸಿಂಧು ಮೈತ್ರಿಯೇ ಹೊರತು ಇನ್ನೇನಲ್ಲ. ಕಾಂಗ್ರೆಸ್-ಎನ್‍ಸಿಪಿಗಳು ಶಿವಸೇನೆಯೊಂದಿಗೆ ಸೇರುವುದೆಂದರೆ, ಅದು ಆತ್ಮಹತ್ಯೆ ಮಾಡಿಕೊಂಡಂತೆ. ಶಿವಸೇನೆಗೆ ಸರಕಾರ ರಚನೆಯ ಅನಿವಾರ್ಯತೆ ಇರಬಹುದು. ಆದರೆ ಎನ್‍ಸಿಪಿ-ಕಾಂಗ್ರೆಸ್‍ಗೆ ಆ ಅನಿವಾರ್ಯತೆ ಇಲ್ಲ. ಮತದಾರರು ಈ ಮೈತ್ರಿಕೂಟವನ್ನು ಬೆಂಬಲಿಸಿಯೂ ಇಲ್ಲ. ಅಂದಹಾಗೆ,
ಅಧಿಕಾರ ಮತ್ತು ಸಿದ್ಧಾಂತದ ನಡುವೆ ಆಯ್ಕೆಯ ಪ್ರಶ್ನೆ ಎದುರಾದಾಗ ಸಿದ್ಧಾಂತ ಮುಖ್ಯವಾಗಬೇಕೇ ಹೊರತು ಅಧಿಕಾರ ಅಲ್ಲ. ಒಂದುವೇಳೆ, ಇವತ್ತು ಬಿಜೆಪಿಯನ್ನು ಅಧಿಕಾರದಿಂದ ಹೊರತಳ್ಳುವುದಕ್ಕಾಗಿ ಶಿವಸೇನೆಯ ಜೊತೆ ಕಾಂಗ್ರೆಸ್-ಎನ್‍ಸಿಪಿಗಳು ಕೈಜೋಡಿಸಬಹುದಾದರೆ ನಾಳೆ ಶಿವಸೇನೆಯನ್ನು ಹೊರಗಿಡುವುದಕ್ಕಾಗಿ ಬಿಜೆಪಿ ಜೊತೆ ಕೈ ಜೋಡಿಸಲೂ ಕಾಂಗ್ರೆಸ್-ಎನ್‍ಸಿಪಿಗಳು ಒಂದಾಗಬಹುದು. ಹಾಗಿದ್ದ ಮೇಲೆ ಜನಸಾಮಾನ್ಯರ ಮುಂದಿರುವ ಆಯ್ಕೆಯಾದರೂ ಏನು? ಸಿದ್ಧಾಂತ, ವಿಚಾರಧಾರೆ ಇತ್ಯಾದಿಗಳೆಲ್ಲ ಮಣ್ಣು-ಮಸಿ ಆಗಲಾರದೇ?

ಬಾಬರಿ: ಆಕ್ಷೇಪ ಮುಕ್ತ ತೀರ್ಪು ಸಾಧ್ಯವಿತ್ತೇ?



ವಿಶೇಷ ಸಂಪಾದಕೀಯ
ಅಯೋಧ್ಯೆಯ 2.77 ಎಕರೆ ನಿವೇಶನದ ವಿವಾದವನ್ನು ಸುಪ್ರೀಮ್ ಕೋರ್ಟು ಇತ್ಯರ್ಥಪಡಿಸಿರುವ ರೀತಿಗೆ ವ್ಯಕ್ತವಾಗಿರುವ ಆಕ್ಷೇಪಗಳನ್ನು ತಕ್ಷಣದ  ಆವೇಶವೆಂದೋ ಭಾವುಕತೆಯೆಂದೋ ಕಡೆಗಣಿಸಿ  ಬಿಡುವುದು ಸಲ್ಲ. ಹಾಗಂತ, ಉಭಯ ಕಕ್ಷಿಗಳನ್ನೂ ಸಮಾನವಾಗಿ ತೃಪ್ತಿಪಡಿಸಬಲ್ಲ ಇತ್ಯರ್ಥ ಸಾಧ್ಯವಿತ್ತೇ ಎಂಬ ಪ್ರಶ್ನೆ ಸಹಜವಾದುದು. ಒಂದುವೇಳೆ, ಅದು ಸಾಧ್ಯವಿರುತ್ತಿದ್ದರೆ 2010ರಲ್ಲಿ ಅಲಹಾಬಾದ್  ಹೈಕೋರ್ಟ್ ನೀಡಿದ ತೀರ್ಪಿಗೆ ಪ್ರಕರಣ ಮುಕ್ತಾಯವನ್ನು ಕಾಣಬೇಕಿತ್ತು. ರಾಮಲಲ್ಲಾ, ಸುನ್ನಿ ವಕ್ಫ್ ಬೋರ್ಡ್ ಮತ್ತು ನಿರ್ಮೋಹಿ ಅಖಾಡಕ್ಕೆ ಈ ವಿವಾದಿತ 2.77 ಎಕರೆ ಭೂಮಿಯನ್ನು ಅಲಹಾಬಾದ್  ಹೈಕೋರ್ಟ್ ಸಮಾನವಾಗಿ ಹಂಚುವ ಮೂಲಕ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಯತ್ನಿಸಿತ್ತು. ಆಗಲೂ ಆಕ್ಷೇಪ ವ್ಯಕ್ತವಾಗಿತ್ತು. ಮೂರೂ ಕಕ್ಷಿಗಳೂ ಈ ಇತ್ಯರ್ಥ ಕ್ರಮವನ್ನು ಒಪ್ಪಿರಲಿಲ್ಲ. ಹಾಗಂತ, 
ಈಗಿನ ತೀರ್ಪೂ ಆಕ್ಷೇಪ ರಹಿತವೋ ವಿವಾದ ರಹಿತವೋ ಆಗಿಲ್ಲ. ಸುಪ್ರೀಮ್ ಕೋರ್ಟಿನ ಐವರು ನ್ಯಾಯಾಧೀಶರು ಈ ಪ್ರಕರಣವನ್ನು ಇತ್ಯರ್ಥಪಡಿಸುವುದಕ್ಕೆ ಅನೇಕ ದಾಖಲೆಗಳನ್ನು  ಪರಿಶೀಲಿಸಿದ್ದಾರೆ. ಕ್ರಿಸ್ತಪೂರ್ವ ರಾಮಾಣಯದ ಕಾಲದಿಂದ ಹಿಡಿದು ಮೀರ್ ಬಾಖಿ 1528ರಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಿರುವಲ್ಲಿವರೆಗೆ, ಅಲ್ಲಿಂದ ಪ್ರಥಮ ಹಿಂದೂ-ಮುಸ್ಲಿಮ್ ಘರ್ಷಣೆ ನಡೆದ 1558ರ ವರೆಗೆ, ಅಲ್ಲಿಂದ 1949ರಲ್ಲಿ ಶ್ರೀರಾಮ ಮತ್ತು ಸೀತೆಯ ವಿಗ್ರಹಗಳನ್ನು ಬಾಬರಿ ಮಸೀದಿಯ ಒಳಗಡೆ ಸ್ಥಾಪಿಸಿದ ಘಟನೆಯ ವರೆಗೆ ಮತ್ತು ಅಲ್ಲಿಂದ 1992ರ ಮಸೀದಿ ಧ್ವಂಸ ಕೃತ್ಯದ ವರೆಗೆ  ಎಲ್ಲವನ್ನೂ ಪರಿಶೀಲಿಸಿದ್ದಾರೆ. ಕಂದಾಯ ದಾಖಲೆಗಳ ಪ್ರಕಾರ ವಿವಾದಿತ ನಿವೇಶನವು ಸರ್ಕಾರಿ ಭೂಮಿ ಎಂಬುದು ಈ ಸಂದರ್ಭದಲ್ಲಿ ಗೊತ್ತಾಗಿದೆ. ಬಾಬರಿ ಮಸೀದಿಯನ್ನು ಕಟ್ಟಲು ದೇವಾಲಯವನ್ನು  ಕೆಡವಲಾಗಿದೆಯೆಂಬ ವಾದವನ್ನು ಭಾರತೀಯ ಪುರಾತತ್ವ ಇಲಾಖೆಯು ದೃಢಪಡಿಸಿಲ್ಲ ಎಂಬುದು ಈ ವೇಳೆ ಸ್ಪಷ್ಟವಾಗಿದೆ. ಅದೇವೇಳೆ, ಮಸೀದಿ ಇರುವ ಸ್ಥಳ ತಮಗೆ ಮಾತ್ರ ಸೇರಿತ್ತೆಂಬುದನ್ನು  ನಿರೂಪಿಸಲು ಸುನ್ನಿ ವಕ್ಫ್ ಮಂಡಳಿ ವಿಫಲವಾಗಿರುವುದನ್ನೂ ನ್ಯಾಯಾಲಯ ಕಂಡುಕೊಂಡಿದೆ. ಹಾಗೆಯೇ, ವಿವಾದಿತ ನಿವೇಶನದ ಹೊರ ಆವರಣವು ತಮ್ಮ ಸ್ವಾಧೀನದಲ್ಲಿತ್ತು ಎಂಬುದನ್ನು ಸಾಬೀತು ಪಡಿಸಲು ಹಿಂದೂ ಕಕ್ಷಿದಾರರು ಯಶಸ್ವಿಯಾಗಿರುವುದನ್ನು ನ್ಯಾಯಾಧೀಶರು ಸ್ಪಷ್ಟಪಡಿಸಿಕೊಂಡಿದ್ದಾರೆ. ಮುಸ್ಲಿಮರು ಇಲ್ಲಿ ಪ್ರಾರ್ಥನೆ ಮಾಡುತ್ತಿದ್ದರು ಅನ್ನುವುದಕ್ಕೆ ಪುರಾವೆಗಳಿರುವುದೂ ಗೊತ್ತಾಗಿದೆ.  ಬಹುಶಃ, ಮುಖ್ಯ ಪ್ರಶ್ನೆ ಎದುರಾಗುವುದೂ ಇಲ್ಲೇ. ಬಾಬರಿ ಮಸೀದಿಯ ಮೂರು ಗುಮ್ಮಟಗಳ ಪೈಕಿ ಮಧ್ಯದ ಗುಮ್ಮಟದ ಕೆಳಗಡೆ ಶ್ರೀರಾಮನ ಜನನವಾಗಿದೆಯೆಂಬುದು ಹಿಂದೂ ಕಕ್ಷಿಗಳ ವಾದ. 1992ರಲ್ಲಿ ಮಸೀದಿಯನ್ನು ಧ್ವಂಸಗೈದು ಶ್ರೀರಾಮದ ವಿಗ್ರಹವನ್ನು ಈ ಗುಂಬಜದ ಕೆಳಗಡೆ ಸ್ಥಾಪಿಸಲಾಗಿತ್ತು. ಆದರೆ, 
ಈ ನಿರ್ದಿಷ್ಟ ಜಾಗದಲ್ಲೇ ಶ್ರೀರಾಮನ ಜನನವಾಗಿದೆ ಎಂಬುದನ್ನು ಸಾಬೀತು ಪಡಿಸುವುದು ಸುಲಭ ಸಾಧ್ಯವಲ್ಲ. ಬಹುಶಃ, ಅಲಹಾಬಾದ್ ಹೈಕೋರ್ಟು 2010ರಲ್ಲಿ ಈ ನಿವೇಶನವನ್ನು ಮೂರು ಪಾಲು ಮಾಡಿ ಹಂಚಲು ನಿರ್ಧರಿಸಿದುದಕ್ಕೆ ಇದುವೇ ಕಾರಣ ಇರಬೇಕು. ಸುಪ್ರೀಮ್  ಕೋರ್ಟ್‍ನ ಮುಂದೆಯೂ ಇದೇ ಸಮಸ್ಯೆ ಎದುರಾಗಿರುವಂತಿದೆ. ಆದ್ದರಿಂದ, ಅದು ಸತ್ಯಾಂಶ, ಸಾಕ್ಷ್ಯ, ಮೌಖಿಕ ವಾದಗಳನ್ನಷ್ಟೇ ತನ್ನ ತೀರ್ಪಿಗೆ ಆಧಾರವಾಗಿ ಬಳಸಿಕೊಳ್ಳದೇ ಇತಿಹಾಸ, ಪುರಾತತ್ವ ಶಾಸ್ತ್ರ,  ಧರ್ಮ ಮತ್ತು ನಂಬಿಕೆಗಳನ್ನೂ ಆಧಾರವಾಗಿ ಪರಿಗಣಿಸಿರುವಂತಿದೆ. ಅದಕ್ಕಾಗಿ ವಾಲ್ಮೀಕಿ ರಾಮಾಯಣವನ್ನು ಅದು ಪರಿಶೀಲಿಸಿದೆ. ಸ್ಕಂದ ಪುರಾಣದ ವೈಷ್ಣವ ಕಾಂಡದಲ್ಲಿ ಆಧಾರವನ್ನು ಹುಡುಕಿದೆ.  ವೈಷ್ಣವ ಕಾಂಡದ ಶ್ಲೋಕಗಳನ್ನು ಎತ್ತಿಕೊಂಡು ರಾಮನ ಜನನ ಸ್ಥಾನವು ಯಾವ ದಿಕ್ಕಿನಲ್ಲಿ ಬರುತ್ತದೆ ಎಂಬುದನ್ನು ವಿಶ್ಲೇಷಣೆಗೆ ಒಳಪಡಿಸಿದೆ. ಒಂದು ರೀತಿಯಲ್ಲಿ, ವಿವಾದಿತ ನಿವೇಶನವನ್ನು ನಿರ್ದಿಷ್ಟವಾಗಿ  ಇಂಥವರಿಗೇ ಎಂದು ಹಂಚಲು ಅಸಾಧ್ಯವೆಂದು ಅನಿಸಿದಾಗ ಹಿಂದೂ ಧರ್ಮೀಯರ ನಂಬಿಕೆ, ವಿಶ್ವಾಸ, ಆಚರಣೆಗಳನ್ನು ಹೆಚ್ಚುವರಿ ಪುರಾವೆಗಳಾಗಿ ಇಲ್ಲಿ ಅವಲಂಬಿಸುವ ಅನಿವಾರ್ಯತೆ ಎದುರಾಯಿತು  ಅನ್ನುವ ಭಾವ ಈ ತೀರ್ಪಿನಲ್ಲಿ ವ್ಯಕ್ತವಾಗಿದೆ. ಹಿಂದೂಗಳ ನಂಬಿಕೆ ಮತ್ತು ವಿಶ್ವಾಸಗಳನ್ನು ತೀರ್ಪಿನ ವೇಳೆ ಪರಿಗಣಿಸಲಾಗಿರುವುದನ್ನು ತೀರ್ಪಿನಲ್ಲೇ ಹೇಳಿರುವುದರಿಂದ ಇದು ಸ್ಪಷ್ಟ. ನಿಜವಾಗಿ, 
ಸುಪ್ರೀಮ್  ಕೋರ್ಟಿನ ತೀರ್ಪು 2019 ನವೆಂಬರ್ 9ರ ಶನಿವಾರದಂದು ಹುಟ್ಟಿಕೊಂಡು ಅಂದೇ ಅಂತ್ಯ ಕಾಣುವ ಒಂದಲ್ಲ. ಈ ತೀರ್ಪು ಮುಂದೆ ಇಂಥದ್ದೇ ವಿವಾದಗಳ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಮತ್ತೆ  ಮತ್ತೆ ಉಲ್ಲೇಖಕ್ಕೆ ಒಳಗಾಗಬಹುದು. ನ್ಯಾಯಾಲಯದಲ್ಲಿ ನಡೆಯುವ ವಾದಗಳ ಸಂದರ್ಭದಲ್ಲಿ ಈ ತೀರ್ಪು ಆಧಾರವಾಗಿ ಬಳಸಲ್ಪಡಬಹುದು. ಅಲ್ಲದೆ, ಯಾವುದೇ ವಾದವನ್ನು ಮಾಡುವಾಗ ಅದಕ್ಕೆ ಪೂರಕವಾಗಿ ಈ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸುವುದು ಕೋರ್ಟು-ಕಲಾಪಗಳಲ್ಲಿ ಸಾಮಾನ್ಯ ರೂಢಿ. ಹೀಗಿರುವಾಗ,  ನಂಬಿಕೆ-ವಿಶ್ವಾಸಗಳ ಆಧಾರದಲ್ಲಿ ಕೋರ್ಟಿನಲ್ಲಿ ವಾದಿಸುವವರಿಗೆ ಮುಂದಿನ ದಿನಗಳಲ್ಲಿ ಈ ತೀರ್ಪು ಆಧಾರವಾಗಿ ಬಳಕೆಯಾಗದೇ? ಅಂಥ ಸಂದರ್ಭದಲ್ಲಿ ನ್ಯಾಯಾಲಯ ಏನು ಮಾಡಬಹುದು. ಅಂದಹಾಗೆ, 
ಬಾಬರಿ ಮಸೀದಿ ಇರುವ 2.77 ಎಕರೆ ನಿವೇಶನವೊಂದೇ ಈ ದೇಶದ ಏಕೈಕ ವಿವಾದಿತ ಪ್ರದೇಶ ಅಲ್ಲ. ಬಾಬರಿಯ ಮೇಲೆ ಹಕ್ಕು ಸ್ಥಾಪಿಸಿ ಕೋರ್ಟು ಮೆಟ್ಟಿಲೇರಿದ ಮಂದಿ ಇಂಥ ಇನ್ನಿತರ  ಸ್ಥಳಗಳ ಪಟ್ಟಿಗಳನ್ನೂ ಹೊಂದಿದ್ದಾರೆ. ಈ ಹಿಂದೆ ಅಸಂಖ್ಯ ಬಾರಿ ಅದನ್ನು ದೇಶದ ಮುಂದೆ ಸ್ಪಷ್ಟಪಡಿಸಿಯೂ ಇದ್ದಾರೆ. ಇವಲ್ಲದೇ, ಬಹುಧರ್ಮೀಯ ಈ ದೇಶದ ಉದ್ದಕ್ಕೂ ಇಂಥ ಇನ್ನಷ್ಟು ವಿವಾದಗಳು ಅನೇಕ ಇರಬಹುದು. ಇಸ್ಲಾಮ್ ಮತ್ತು ಕ್ರೈಸ್ತ ಧರ್ಮ ಈ ದೇಶವನ್ನು ಪ್ರವೇಶಿಸುವ ಮೊದಲೇ ಈ ದೇಶದಲ್ಲಿ ಅನೇಕ ವಿವಾದಗಳಿದ್ದುವು. ಬೌದ್ಧರು, ಜೈನರು ಇಲ್ಲಿದ್ದರು. ಅವರಿಗೂ  ಇಲ್ಲಿನ ಇತರ ಪಂಥಗಳಿಗೂ ನಡುವೆ ಘರ್ಷಣೆ ನಡೆದಿರುವುದು ಮತ್ತು ಬೌದ್ಧರು ನಿಧಾನಕ್ಕೆ ನೆಲೆ ಕಳಕೊಂಡಿರುವುದೂ ಇಲ್ಲಿನ ಇತಿಹಾಸವಾಗಿ ಗುರುತಿಗೀಡಾಗಿದೆ. ಅದೇಷ್ಟೋ ಬಸದಿಗಳು, ಬೌದ್ಧ  ವಿಹಾರಗಳು ಇನ್ನಾರದೋ ಪಾಲಾಗಿವೆ. ಮಾತ್ರವಲ್ಲ, ಅವು ಇನ್ನೊಂದು ಧರ್ಮದ ಆರಾಧನಾ ಕ್ಷೇತ್ರವಾಗಿ ಪರಿವರ್ತನೆಗೊಂಡದ್ದೂ ಇದೆ. ಒಂದುವೇಳೆ, ಸುಪ್ರೀಮ್ ಕೋರ್ಟಿನ ಈ ತೀರ್ಪನ್ನೇ  ಆಧಾರವಾಗಿಸಿಕೊಂಡು ಧಾರ್ಮಿಕ ನಂಬಿಕೆ ಮತ್ತು ವಿಶ್ವಾಸಗಳ ಹೆಸರಲ್ಲಿ ಹಕ್ಕು ಸ್ಥಾಪನೆಗೆ ಹೊರಡುವ ಪ್ರಯತ್ನಗಳು ಉಂಟಾದರೆ ಅದನ್ನು ಹೇಗೆ ನಿಭಾಯಿಸಬಹುದು? ಅಂದಹಾಗೆ,
ಈ ವಿಷಯದಲ್ಲಿ ಸುಪ್ರೀಮ್ ಕೋರ್ಟು ಯಾವ ತೀರ್ಪನ್ನು ನೀಡುತ್ತಿದ್ದರೂ ಅದು ಆಕ್ಷೇಪ ಮುಕ್ತವಾಗಿರುತ್ತಿರಲಿಲ್ಲ ಎಂಬ ವಾದವನ್ನು ಒಪ್ಪಿಕೊಳ್ಳುತ್ತಲೇ ಹಿಂದೂಗಳ ನಂಬಿಕೆ, ವಿಶ್ವಾಸವನ್ನು ತೀರ್ಪಿಗೆ  ಆಧಾರವಾಗಿಸಿಕೊಂಡಿರುವ ಕೋರ್ಟಿನ ನಡೆಯು ಇತ್ಯರ್ಥದ ಒಟ್ಟು ಗೌರವಕ್ಕೆ ಕುಂದುಂಟು ಮಾಡಿದೆ ಎನ್ನಬೇಕಾಗುತ್ತದೆ. ಅಷ್ಟಕ್ಕೂ, ಈ ತೀರ್ಪು ಆಕ್ಷೇಪ ಮುಕ್ತವೋ ಎಂಬ ಜಿಜ್ಞಾಸೆಯ ಆಚೆಗೆ ದೀರ್ಘ ವಿವಾದವೊಂದರಿಂದ ದೇಶವನ್ನು ಮುಕ್ತಗೊಳಿಸಿದ ಸಂದರ್ಭವೆಂಬ ನೆಲೆಯಲ್ಲಿ ಸುಪ್ರೀಮ್ ಕೋರ್ಟಿನ ಈ ತೀರ್ಪನ್ನು ಪರಿಗಣಿಸಬೇಕಾಗಿದೆ. ನಿಜವಾಗಿ, 
ಸುಪ್ರೀಮ್ ಕೋರ್ಟು ನೀಡುವ ಯಾವುದೇ ತೀ ರ್ಪು ಗೌರವಾರ್ಹವಾದುದು ಮತ್ತು ನ್ಯಾಯಾಂಗದ ದೃಷ್ಟಿಯಲ್ಲಿ ಅಂತಿಮವಾದುದು. ಇದರರ್ಥ ತೀರ್ಪು ಪ್ರಶ್ನಾತೀತ ಎಂದಲ್ಲ. ಪ್ರಶ್ನಿಸುತ್ತಲೇ ಒಪ್ಪಿಕೊಳ್ಳುವ ಮತ್ತು ಒಪ್ಪಿಕೊಳ್ಳಬೇಕಾದ ಸಾಂವಿಧಾನಿಕ  ಪ್ರಬುದ್ಧತೆಯನ್ನು ಭಾರತೀಯರು ತೋರಬೇಕಾಗಿದೆ ಮತ್ತು ಬಾಬರಿ ತೀರ್ಪುಗೆ ಸಂಬಂಧಿಸಿ ಅದನ್ನು ಅತ್ಯಂತ ಗರಿಷ್ಠ ಮಟ್ಟದಲ್ಲಿ ಭಾರತೀಯರು ತೋರಿಸಿಯೂ ಇದ್ದಾರೆ. ಬಾಬರಿ ತೀರ್ಪಿನ ಬಳಿಕ ಈ  ದೇಶದ ಮುಸ್ಲಿಮರು ಮತ್ತು ಹಿಂದೂಗಳು ತೋರಿದ ಸಂಯಮ, ಕಾನೂನಿಗೆ ವ್ಯಕ್ತಪಡಿಸಿದ ನಿಷ್ಠೆ ಮತ್ತು ತೋರಿದ ಶಾಂತಿಪ್ರಿಯತೆಯು ಶ್ಲಾಘನಾರ್ಹವಾದುದು. ತೀರ್ಪು ತನ್ನ ಪರವಿದ್ದರೂ  ವಿರುದ್ಧವಿದ್ದರೂ ತಾನು ತೀರ್ಪನ್ನು ಗೌರವಿಸುತ್ತೇನೆ ಅನ್ನುವ ಪ್ರಬುದ್ಧ ಸಂದೇಶವನ್ನು ಈ ದೇಶದ ಮುಸ್ಲಿಮರು ರವಾನಿಸಿದ್ದಾರೆ. ವಿಜಯೋತ್ಸವ ಆಚರಿಸದೇ ಹಿಂದೂಗಳೂ ಸಂಯಮ ಪಾಲಿಸಿದ್ದಾರೆ.  ಇದುವೇ ಈ ದೇಶದ ಸೌಂದರ್ಯ. ಇದು ಸದಾಕಾಲ ಉಳಿಯಲಿ. ಅಶಾಂತಿ ಅಳಿಯಲಿ.

Monday 11 November 2019

ಸಫಾ ಬೆಟ್ಟದಿಂದ ಅರಫಾ ಮೈದಾನದ ವರೆಗೆ



ಯಶಸ್ಸಿನ ದಾರಿ ಯಾವುದು?
ಈ ಪ್ರಶ್ನೆ ಸದಾ ಕಾಲ ಜೀವಂತ. ಜಗತ್ತಿನ ಶ್ರೇಷ್ಠ ಸಂಶೋಧಕರಲ್ಲಿ ಅನೇಕರು ಪ್ರವಾದಿ ಮುಹಮ್ಮದ್(ಸ)ರನ್ನು ಮೆಚ್ಚಿಕೊಂಡಿದ್ದು- ಹೃಸ್ವ ಅವಧಿಯಲ್ಲಿ ಅವರು ಸಾಧಿಸಿದ ಯಶಸ್ಸಿಗಾಗಿ. ಹಾಗಂತ, ಪ್ರವಾದಿವರ್ಯರಿಗೆ(ಸ) ಅನಾಯಾಸವಾಗಿ ಈ ಯಶಸ್ಸು ಒದಗಿ ಬಂದಿತ್ತು ಎಂದಲ್ಲ. ಅವರು ಯಶಸ್ಸನ್ನು ಹುಡುಕುತ್ತಾ ಹೊರಟರು. ಯಶಸ್ಸಿನ ತುತ್ತ ತುದಿಯನ್ನು ತಲುಪುದಕ್ಕೆ ಅಂದಿನ ಕಾಲದ ಸರ್ವ ವಿಧಾನಗಳನ್ನೂ ಬಳಸಿಕೊಂಡರು. ಇದರಲ್ಲಿ 3 ಪ್ರಮುಖ ಅಂಶಗಳಿವೆ:
1. ಸಂವಹನ, 2. ಮಾನವೀಯ ಕಾಳಜಿ, 3. ಒಪ್ಪಂದ ಅಥವಾ ಮೈತ್ರಿ.
ಸತ್ಯದ ಕಡೆಗೆ ಕರೆ ನೀಡುವವರಾಗಿ ನಿಮ್ಮನ್ನು ಕಳುಹಿಸಿದ್ದೇನೆ (133: 45-46) ಎಂದು ಪವಿತ್ರ ಕುರ್ ಆನ್ ಪ್ರವಾದಿಯವರನ್ನು ಪರಿಚಯಿಸಿದೆಯೇ ಹೊರತು ಆ ಸತ್ಯವನ್ನು ತಲುಪಿಸುವುದಕ್ಕೆ ಅವರು  ಯಾವೆಲ್ಲ ಮಾಧ್ಯಮಗಳನ್ನು ಬಳಸಿಕೊಳ್ಳಬೇಕು ಎಂದು ಪಟ್ಟಿ ಮಾಡಿ ಹೇಳಲಿಲ್ಲ. ಅದು ಪ್ರವಾದಿಯವರ ಸ್ವಾತಂತ್ರ್ಯವಾಗಿತ್ತು. ಅಂದಿನ ಕಾಲದಲ್ಲಿ ಸತ್ಯದ ಕರೆಯನ್ನು ತಲಪಿಸುವುದಕ್ಕೆ ಯಾವೆಲ್ಲ  ಮಾಧ್ಯಮಗಳಿದ್ದುವೋ ಅವೆಲ್ಲವನ್ನೂ ಪ್ರವಾದಿ(ಸ) ಬಳಸಿದರು. ಸಫಾ ಬೆಟ್ಟ ಅದರ ಒಂದು ತುದಿಯಾದರೆ, ಮಕ್ಕಾದ 14 ಸಣ್ಣ ಪುಟ್ಟ ಮಾರುಕಟ್ಟೆಗಳು ಅದರ ಇನ್ನೊಂದು ತುದಿ. ರಾತ್ರಿ ಭೋಜನದ  ಮೂಲಕ, ಕಾಬಾದ ಬಾಗಿಲಿಗೆ ಸಂದೇಶ ನೇತು ಹಾಕುವ ಮೂಲಕ ಮತ್ತು ಮಕ್ಕಾಕ್ಕೆ ಬರುವ ವ್ಯಾಪಾರಿ ತಂಡಗಳ ಜೊತೆಗೆ ಸಂವಾದದ ಮೂಲಕ... ಹೀಗೆ ಅಂದಿನ ಲಭ್ಯ ಮಾಧ್ಯಮಗಳನ್ನು ಪ್ರವಾದಿ(ಸ)  ತನ್ನ ಗುರಿಯೆಡೆಗೆ ತಲುಪುವ ಪರಿಕರಗಳಾಗಿ ಬಳಸಿಕೊಂಡರು. ಇದೇ ವೇಳೆ, ಇನ್ನೊಂದು ಪ್ರಶ್ನೆಯೂ ಎದುರಾಯಿತು. ಸತ್ಯದ ಕರೆ ಕೊಡುವಾತ ಹೇಗಿರಬೇಕು ಮತ್ತು ಆತನ ಐಡೆಂಟಿಟಿ ಏನಿರಬೇಕು  ಎಂಬುದೇ ಆ ಪ್ರಶ್ನೆ. ಪ್ರವಾದಿ ಮುಹಮ್ಮದ್(ಸ)ರ ಯಶಸ್ಸಿನ ಗುಟ್ಟು ಇರುವುದೂ ಇಲ್ಲೇ. ತನ್ನ ಸತ್ಯವನ್ನು ಒಪ್ಪಿಕೊಂಡವರು ಮತ್ತು ಒಪ್ಪಿಕೊಳ್ಳದವರು ಎಂಬ ನೆಲೆಯಲ್ಲಿ ಸಮಾಜವನ್ನು ವಿಭಜಿಸಿ, ತನ್ನ  ಕರೆಯನ್ನು ಒಪ್ಪಿಕೊಂಡವರಿಗೆ ಮಾತ್ರ ನ್ಯಾಯ, ಕರುಣೆ, ಮಾನವೀಯ ಕಾಳಜಿಯನ್ನು ವಿತರಿಸುವ ಸಣ್ಣತನವನ್ನು ಪ್ರವಾದಿ ಎಂದೂ ತೋರಲಿಲ್ಲ. ಅವರು ಪ್ರದರ್ಶಿಸಿದ ಮಾನವೀಯ ಕಾಳಜಿ  ಅಮೋಘವಾದುದು. ಅವರು ದರಿದ್ರರ ಪರ, ಅನಾಥರ ಪರ (ಪವಿತ್ರ ಕುರ್ ಆನ್: 107) ಧ್ವನಿಯೆತ್ತಿದರು. ಅಬೂಜಹಲ್ ಮಕ್ಕಾದಲ್ಲಿ ಅತ್ಯಂತ ಪ್ರಬಲನಾಗಿದ್ದಾಗ ಮತ್ತು ತಾನು ಮಕ್ಕಾದಲ್ಲಿ ಏನೇನೂ  ಆಗಿಲ್ಲದಾಗಲೂ ಪ್ರವಾದಿಯವರು(ಸ) ನ್ಯಾಯ ವಂಚಿತರ ಪರ ನಿಂತರು. ತನಗೆ ಸಲ್ಲಬೇಕಾದ ಮೊತ್ತವನ್ನು ಅಬೂಜಹಲ್ ನೀಡುತ್ತಿಲ್ಲವೆಂದು ವ್ಯಕ್ತಿಯೋರ್ವನು ಬಂದು ಪ್ರವಾದಿಯವರ(ಸ) ಜೊತೆ  ದೂರಿಕೊಂಡಾಗ ಅವರು ತಕ್ಷಣ ಸ್ಪಂದಿಸಿದರು. ಅಬೂಜಹಲ್‍ನ ಬಳಿ ತೆರಳಿ ಹಣ ವಸೂಲಿ ಮಾಡಿಸಿದರು. ಹಾಗಂತ, ಹಾಗೆ ದೂರಿಕೊಂಡವ ಅವರ ಸತ್ಯದ ಕರೆಯನ್ನು ಸ್ವೀಕರಿಸಿದವನಾಗಿರಲಿಲ್ಲ. ಸತ್ಯದ  ಕರೆ ಕೊಡುವಾತ ದುರ್ಬಲರು, ದರಿದ್ರರು, ಹಕ್ಕು ವಂಚಿತರು ಮುಂತಾದವರ ಪರ ಅತ್ಯಂತ ಗಟ್ಟಿಯಾಗಿ ನಿಲ್ಲಬೇಕು ಮತ್ತು ಅವರ ಪರ ಬಹಿರಂಗವಾಗಿ ಮಾತಾಡಬೇಕು ಎಂಬುದು ಅವರ  ಇಂಗಿತವಾಗಿತ್ತು. ಇಂಥ ಸನ್ನಿವೇಶಗಳಲ್ಲಿ `ಸಂತ್ರಸ್ತರಿಂದ ಯಾವುದೇ ಪ್ರತಿಫಲವನ್ನಾಗಲಿ ಕೃತಜ್ಞತೆಯನ್ನಾಗಲಿ ಬಯಸಬಾರದು' (ಪವಿತ್ರ ಕುರ್ ಆನ್- 76: 9) ಎಂಬ ನಿಯಮವನ್ನು ಅವರು ಸ್ವಯಂ  ಹಾಕಿಕೊಂಡಿದ್ದರು. ಅವರ ಯಶಸ್ಸಿನಲ್ಲಿ ಈ ನಿಯಮಕ್ಕೆ ಬಹುದೊಡ್ಡ ಪಾತ್ರ ಇದೆ. ಅವರು ಸತ್ಯಕ್ಕೆ ವಿಧೇಯರಾಗಿರುವ ಜನಕೂಟವೊಂದನ್ನು ನಿರ್ಮಿಸ ಹೊರಟಿದ್ದರೇ ಹೊರತು ವ್ಯಕ್ತಿ ವಿಧೇಯತ್ವವನ್ನು  ತಿರಸ್ಕರಿಸಿದ್ದರು. ಬಡವರು, ದುರ್ಬಲರು, ಹಕ್ಕು ವಂಚಿತರು ಮತ್ತು ನ್ಯಾಯ ನಿರಾಕರಣೆಗೆ ಒಳಗಾದವರನ್ನೆಲ್ಲ ಅವರು ಆದರಿಸಿದರು. ಎಲ್ಲಿಯ ವರೆಗೆಂದರೆ, ಮದೀನಾದಲ್ಲಿ ವಿವಿಧ ಬುಡಕಟ್ಟು ಗುಂಪುಗಳೊಂದಿಗೆ ಸುಮಾರು 12 ರಷ್ಟು ಒಪ್ಪಂದಗಳನ್ನು ಮಾಡಿಕೊಂಡರು. ತನ್ನ ಸತ್ಯದ ಕರೆಯನ್ನು ಸ್ವೀಕರಿಸಲೇಬೇಕು ಮತ್ತು ಸ್ವೀಕರಿಸದೇ ಇರುವುದು ಯುದ್ಧಕ್ಕೆ ಕಾರಣವಾಗುತ್ತದೆ ಎಂಬುದು ಈ ಒಪ್ಪಂದಗಳ ಮೂಲಭೂತ ಷರತ್ತು ಆಗಿರಲಿಲ್ಲ. ಶಾಂತಿ, ನ್ಯಾಯ, ನೆಮ್ಮದಿಯ ಬದುಕನ್ನು ದೃಢಪಡಿಸಿಕೊಳ್ಳುವುದು ಮತ್ತು ಅಪಾಯಕಾರಿ ಸಂದರ್ಭಗಳಲ್ಲಿ ಪರಸ್ಪರ ಸಹಕಾರ ನೀಡುವುದು ಈ ಒಪ್ಪಂದಗಳ  ಮುಖ್ಯ ಉದ್ದೇಶವಾಗಿತ್ತು. ಸತ್ಯದ ಕರೆಗೆ ಸ್ಪಂದಿಸಬೇಕಾದರೆ ನ್ಯಾಯಪೂರ್ಣವಾದ ಮತ್ತು ಶಾಂತಿಯುತವಾದ ವಾತಾವರಣವೊಂದು ನೆಲೆಗೊಂಡಿರಬೇಕಾದುದು ಬಹಳ ಅಗತ್ಯ. ಪ್ರವಾದಿ(ಸ) ಅದನ್ನು ಚೆನ್ನಾಗಿ ಮನಗಂಡಿದ್ದರು. ಅದಕ್ಕೆ ಪೂರಕವಾಗಿ ಯೋಜನೆಗಳನ್ನು ರೂಪಿಸಿದರು ಮತ್ತು ಅದರಲ್ಲಿ ಯಶಸ್ಸನ್ನೂ ಕಂಡರು. ಆದ್ದರಿಂದ,
ಮಕ್ಕಾ ಪ್ರವೇಶಿಸಿದ ಯಶಸ್ವೀ ಪ್ರವಾದಿಯನ್ನಷ್ಟೇ ನಾವಿಂದು ನೋಡಬೇಕಾದುದಲ್ಲ. ಅರಫಾ ಬೆಟ್ಟವೇರಿದ ಪ್ರವಾದಿಯನ್ನೂ ನಾವು ನೋಡಬೇಕು. ಮದೀನದಲ್ಲಿ ಬುಡಕಟ್ಟುಗಳೊಂದಿಗೆ ಒಪ್ಪಂದ  ಮಾಡಿಕೊಂಡ ಪ್ರವಾದಿಯನ್ನೂ ನೋಡಬೇಕು. ಅರಫಾ ಮೈದಾನದಲ್ಲಿ ಅವರು ಮಾಡಿದ ವಿದಾಯ ಭಾಷಣವನ್ನೂ ನೋಡಬೇಕು. ಇಲ್ಲೆಲ್ಲಾ ಒಟ್ಟು ಮೊತ್ತವಾಗಿ ಸಿಗುವ ಪ್ರವಾದಿಯೇ ನಿಜವಾದ ಪ್ರವಾದಿ(ಸ). ಅಲ್ಲಿಂದ ಪಡಕೊಳ್ಳುವ ಸ್ಫೂರ್ತಿಯೇ ಯಶಸ್ಸಿಗೆ ದಾರಿ.