Friday 30 June 2017

ಪೇಜಾವರ ಶ್ರೀ ಇಫ್ತಾರ್ ಕೂಟ: ಪರ- ವಿರೋಧಗಳ ಆಚೆ..

      ಸೌಹಾರ್ದತೆಯ ಕುರಿತಂತೆ ವಿವಿಧ ಅಭಿಪ್ರಾಯಗಳು ಸಮಾಜದಲ್ಲಿವೆ. ವಿಗ್ರಹವನ್ನು ಪೂಜಿಸದ ಮತ್ತು ವಿಗ್ರಹಾರಾಧನೆಯನ್ನು ಒಪ್ಪದ ವ್ಯಕ್ತಿಯೋರ್ವ ವಿಗ್ರಹಕ್ಕೆ ಪೂಜೆ ಸಲ್ಲಿಸುವುದನ್ನು ‘ಸೌಹಾರ್ದತೆ’ಯಾಗಿ ಕಾಣುವವರಿದ್ದಾರೆ. ಮುಸ್ಲಿಮ್ ಜೋಡಿಯೊಂದು ಹಿಂದೂ ವಿಧಿ-ವಿಧಾನದಂತೆ ಮದುವೆಯಾಗುವುದು, ಆರತಿ ಎತ್ತುವುದನ್ನು ಧಾರ್ಮಿಕ ಸೌಹಾರ್ದತೆಗೆ ಮಾದರಿಯಾಗಿ ಪರಿಗಣಿಸುವವರಿದ್ದಾರೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗಣೇಶನಿಗೆ ಪೂಜೆ ಸಲ್ಲಿಸುವ ಮುಸ್ಲಿಮರ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟವಾಗುವುದಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲೂ ಇಂಥ ಘಟನೆಗಳು ಸುದ್ದಿಯಲ್ಲಿರುತ್ತವೆ. ಹಾಗಂತ, ಇದು ಸರ್ವರೂ ಒಪ್ಪುವ ಮಾದರಿ ಎಂದು ಹೇಳುವಂತಿಲ್ಲ. ಇದನ್ನು ಧಾರ್ಮಿಕ ಭ್ರಷ್ಟತನವಾಗಿ ಕಾಣುವವರೂ ಇದ್ದಾರೆ. ಪ್ರತಿ ಧರ್ಮಕ್ಕೂ ಅದರದ್ದೇ  ಆದ ಆಚರಣಾ ವಿಧಾನಗಳಿವೆ. ನಿಯಮ ಸಂಹಿತೆಗಳಿವೆ. ಯಾವುದು ಪೂಜೆ, ಯಾಕೆ ಪೂಜೆ, ಹೇಗೆ ಪೂಜೆ, ಯಾವುದು ಪೂಜೆಯಲ್ಲ.. ಇತ್ಯಾದಿ ಇತ್ಯಾದಿಗಳ ಬಗ್ಗೆ ಪ್ರತಿ ಧರ್ಮದಲ್ಲೂ ಸ್ಪಷ್ಟವಾದ ಉಲ್ಲೇಖಗಳಿವೆ. ಹೀಗಿರುವಾಗ, ವಿಗ್ರಹ ಪೂಜೆಯನ್ನೇ ಮಾಡದ ವ್ಯಕ್ತಿ ಸೌಹಾರ್ದತೆಯ ಹೆಸರಲ್ಲಿ ವಿಗ್ರಹ ಪೂಜೆ ಮಾಡುವುದೆಂದರೆ ಒಂದೋ ಆತ ಆತ್ಮವಂಚನೆ ಮಾಡಿಕೊಳ್ಳುತ್ತಾನೆ ಅಥವಾ ತನ್ನ ಧರ್ಮದ ನಿಲುವುಗಳು ಅಪರಿಪೂರ್ಣ ಎಂದು ಸಾರುತ್ತಾನೆ. ಸೌಹಾರ್ದತೆ ಎಂಬುದು ತನ್ನ ಧರ್ಮದ ಮೌಲ್ಯಗಳನ್ನು ಭ್ರಷ್ಟಗೊಳಿಸಿಕೊಂಡು ಮಾಡುವ ಕರ್ಮದ ಹೆಸರೇ ಅನ್ನುವ ಪ್ರಶ್ನೆಯೂ ಇಲ್ಲಿ ಹುಟ್ಟಿಕೊಳ್ಳುತ್ತದೆ. ಓರ್ವ ವ್ಯಕ್ತಿ ತನ್ನ ಧರ್ಮಕ್ಕೆ ನಿಷ್ಠನಾಗಿದ್ದುಕೊಂಡೇ ಸೌಹಾರ್ದಮಯಿ ಆಗಲು ಸಾಧ್ಯವಿಲ್ಲವೇ? ಇದೆ ಎಂದಾದರೆ ಅದರ ಮಾದರಿಗಳು ಯಾವುವು? ಮುಸ್ಲಿಮರು ಮತ್ತು ಹಿಂದೂಗಳು ಬಹುದೊಡ್ಡ ಸಂಖ್ಯೆಯಲ್ಲಿರುವ ಭಾರತದಲ್ಲಿ ಇರಬೇಕಾದ ಸೌಹಾರ್ದತೆಯ ಪರಿಕಲ್ಪನೆಗಳು ಏನೇನು ಎಂದು ಮುಂತಾದ ಪ್ರಶ್ನೆಗಳಿಗೆ ಪುಟ್ಟದೊಂದು ಉತ್ತರವನ್ನು ಕೇರಳದ ತಿರುವನಂತಪುರಂ ಜಿಲ್ಲೆಯ ಪುನ್ನತ್ತಲದಲ್ಲಿರುವ ಶ್ರೀ ನರಸಿಂಹ ಮೂರ್ತಿ ದೇವಳದಲ್ಲಿ ಮತ್ತು ಉಡುಪಿಯ ಪೇಜಾವರ ಮಠದಲ್ಲಿ ನಡೆದ ಇಫ್ತಾರ್ ಕೂಟಗಳು ನೀಡಿವೆ.
 ಮೂರು ವಾರಗಳ ಹಿಂದೆ ಶ್ರೀ ನರಸಿಂಹ ಮೂರ್ತಿ ದೇವಳದಲ್ಲಿ ಏರ್ಪಡಿಸಲಾದ ಇಫ್ತಾರ್ ಕೂಟದಲ್ಲಿ (ಉಪವಾಸ ತೊರೆಯುವ ಕಾರ್ಯಕ್ರಮ) ಸುಮಾರು 500ರಷ್ಟು ಮಂದಿ ಭಾಗವಹಿಸಿದ್ದರು. ಕಳೆದ ವಾರ ಪೇಜಾವರ ಮಠದಲ್ಲಿ ನಡೆದ ಇಫ್ತಾರ್ ಕೂಟದಲ್ಲೂ ನೂರಾರು ಮಂದಿ ಭಾಗವಹಿಸಿದರು. ದೇವಳ  ಮತ್ತು ಮಠದ  ಸಂಪ್ರದಾಯದಂತೆ ಎಲ್ಲೂ ಮಾಂಸಾಹಾರದ ಬಳಕೆ ಮಾಡಿರಲಿಲ್ಲ. ಎಲ್ಲವೂ ಶಾಖಾಹಾರ. ಹಾಗಂತ ಮುಸ್ಲಿಮರು ಮಾಂಸಾಹಾರ ಸೇವಿಸುತ್ತಾರೆ ಎಂಬ ಕಾರಣ ಕೊಟ್ಟು ತನ್ನ ಶಾಖಾಹಾರ ಸಂಪ್ರದಾಯದಲ್ಲಿ ಇವು ರಾಜಿ ಮಾಡಿಕೊಳ್ಳಬಹುದಿತ್ತು ಮತ್ತು ಮಾಂಸಾಹಾರವನ್ನು ಬಡಿಸಬಹುದಿತ್ತು. ಮಾತ್ರವಲ್ಲ, ಸೌಹಾರ್ದತೆಯ ಹೆಸರಲ್ಲಿ ಅದನ್ನು ಸಮರ್ಥಿಸುವುದಕ್ಕೂ ಅವಕಾಶ ಇತ್ತು. ಆದರೆ, ತನ್ನ ಧರ್ಮದ ನಿಯಮಗಳನ್ನು ಪಾಲಿಸಿಕೊಂಡೇ ಸೌಹಾರ್ದಯುತವಾಗಿ ಬದುಕಬಹುದು ಮತ್ತು ಎಲ್ಲರನ್ನೂ ಒಗ್ಗೂಡಿಸಬಲ್ಲ ಸಂದರ್ಭಗಳನ್ನು ಸೃಷ್ಟಿಸಿಕೊಳ್ಳಬಹುದು ಎಂಬುದನ್ನು ದೇವಳ ಮತ್ತು ಮಠ ಸಾರಿ ಹೇಳಿದೆ. ಸದ್ಯ ನಮ್ಮ ನಡುವೆ ಅಭಾವ ಇರುವುದು ಇಂಥ ಸಭೆಗಳನ್ನು ಏರ್ಪಡಿಸುವ ವಿಷಯದಲ್ಲೇ.  ಧರ್ಮದ ಕುರಿತಂತೆ ಸಾಮಾಜಿಕವಾಗಿ ಎರಡು ವಿಭಿನ್ನ ನಿಲುವುಗಳಿವೆ. ಒಂದು ಅತ್ಯಂತ ಉದಾರಿ ನಿಲುವಾದರೆ ಇನ್ನೊಂದು ಅತ್ಯಂತ ಕರ್ಮಠ ನಿಲುವು. ಇವುಗಳ ನಡುವೆ ಒಂದು ಸಂತುಲಿತ ದಾರಿಯನ್ನು ಹುಡುಕಬೇಕಾದ ಅಗತ್ಯ ಬಹಳವೇ ಇದೆ.
     ನಿಜವಾಗಿ, ಈ ದೇಶದಲ್ಲಿ ಶಾಲೆ-ಆಸ್ಪತ್ರೆಗಳಿಗಿಂತ ಹೆಚ್ಚು ಮಸೀದಿ-ಮಂದಿರಗಳಿವೆ. ಮಾತ್ರವಲ್ಲ, ಅವು ಸಮಾಜದಲ್ಲಿ ಎಷ್ಟು ಗೌರವಪೂರ್ಣ ಸ್ಥಾನವನ್ನು ಪಡಕೊಂಡಿವೆ ಎಂದರೆ, ಓರ್ವರು ಎಸೆದ ಕಲ್ಲು ಗುರಿ ತಪ್ಪಿ ಇವುಗಳ ಮೇಲೆ ಬಿದ್ದರೂ ಸಮಾಜದಲ್ಲಿ ತಳಮಳ ಉಂಟಾಗುತ್ತದೆ. ಹಂದಿಯದ್ದೋ ದನದ್ದೋ ಅಥವಾ ಇನ್ನಾವುದಾದರೂ ಪ್ರಾಣಿಯದ್ದೋ ತಲೆಗಳು ಯಾಕೆ ಮಸೀದಿ-ಮಂದಿರದ ಮುಂದೆ ಕಾಣಿಸಿಕೊಳ್ಳುತ್ತದೆಂದರೆ, ಈ ಕ್ಷೇತ್ರಗಳು ಅಷ್ಟು ಪ್ರಭಾವಶಾಲಿ ಎಂಬುದರಿಂದ. ಅದರಿಂದ ಸಮಾಜ ಉದ್ವಿಗ್ನಗೊಳ್ಳುತ್ತದೆ. ಘರ್ಷಣೆಯ ಹಂತಕ್ಕೆ ಜಾರುತ್ತದೆ. ಹಾಗಂತ, ಒಂದು ಮನೆಯ ಎದುರು ಇಂಥ ತಲೆಗಳನ್ನು ಹಾಕಿದರೆ ಇಂಥದ್ದೊಂದು ಪ್ರತಿಕ್ರಿಯೆ ಸಿಗಬಹುದೇ? ಮನೆಯಲ್ಲಿರುವವರು ಎಷ್ಟೇ ನಿಷ್ಠಾವಂತ ಧರ್ಮಿಷ್ಠರೇ ಆಗಿರಲಿ, ಮಸೀದಿ ಅಥವಾ ಮಂದಿರದೆದುರು ಹಾಕಿದ ತಲೆಯಷ್ಟು ಸುದ್ದಿಯನ್ನು ಈ ತಲೆ ಮಾಡಲಾರದು. ಧಾರ್ಮಿಕ ಕೇಂದ್ರಗಳು ಭಾರತದಲ್ಲಿ ಪಡೆದುಕೊಂಡಿರುವ ಸ್ಥಾನಮಾನವಿದು. ಸದ್ಯ ಈ ಗೌರವಾರ್ಹ ಕ್ಷೇತ್ರಗಳ ಸದುಪಯೋಗವನ್ನು ಪಡಕೊಳ್ಳುವ ಪ್ರಯತ್ನಗಳು ಗಂಭೀರವಾಗಿ ನಡೆಯಬೇಕಾಗಿದೆ. ವಿವಿಧ ಧರ್ಮೀಯರನ್ನು ಒಟ್ಟುಗೂಡಿಸುವ ತಾಣಗಳನ್ನಾಗಿ ಈ ದೇಶದ ಪ್ರತಿ ಹಳ್ಳಿ-ಗ್ರಾಮ-ಪಟ್ಟಣಗಳಲ್ಲಿರುವ ಮಸೀದಿಗಳು ಮತ್ತು ಮಠ, ಮಂದಿರ, ದೇವಸ್ಥಾನ, ದೈವಸ್ಥಾನಗಳನ್ನು ಮಾಡುವ ರೂಪು-ರೇಷೆಗಳನ್ನು ತಯಾರಿಸಬೇಕಾಗಿದೆ. ಪರಸ್ಪರ ಮಾತಾಡಿದಷ್ಟೂ ಅನುಮಾನಗಳು ಕರಗುತ್ತವೆ. ಬೆರೆತಷ್ಟೂ ಗೆಳೆತನದಲ್ಲಿ ವೃದ್ಧಿಯಾಗುತ್ತದೆ. ಇವತ್ತಿನ ಬಹುದೊಡ್ಡ ಕೊರತೆ ಏನೆಂದರೆ, ವಿವಿಧ ಧರ್ಮೀಯರು ಬೆರೆಯಬಹುದಾದ ಸಂದರ್ಭಗಳು ಕಡಿಮೆಯಾಗುತ್ತಾ ಹೋಗುತ್ತಿರುವುದು. ಹಿಂದೂ ಮಹಿಳೆಯರು ಮತ್ತು ಮುಸ್ಲಿಮ್ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಒಂದೇ ಕಡೆ ಬೆರೆಯುವ ಮತ್ತು ಪರಸ್ಪರ ಮುಖ ಕೊಟ್ಟು ಮಾತಾಡಿಕೊಳ್ಳುವ ಸಂದರ್ಭವನ್ನೊಮ್ಮೆ ಊಹಿಸಿ. ಪುರುಷರಿಗೂ ಇದು ಅನ್ವಯಿಸುತ್ತದೆ. ಅದರ ಪರಿಣಾಮ ಏನಾಗಬಹುದು? ದ್ವೇಷಿಸುವುದಕ್ಕೆ ಕಾರಣಗಳೇ ಸಿಗದಿರಬಹುದು. ಯಾರೋ ಹೇಳಿರುವುದರ ಮೇಲೆ ಅಭಿಪ್ರಾಯವನ್ನು ರೂಪಿಸಿಕೊಂಡ ವ್ಯಕ್ತಿ ತಾನೆಷ್ಟು ಮೂರ್ಖ ಎಂದು ತಿದ್ದಿಕೊಳ್ಳಬಹುದು. ಹಾಗಿದ್ದೂ ಇಂಥ ಸಂದರ್ಭಗಳನ್ನು ಸೃಷ್ಟಿಸಿಕೊಳ್ಳಲು ಯಾಕೆ ಗಂಭೀರ ಪ್ರಯತ್ನಗಳು ನಡೆಯುತ್ತಿಲ್ಲ? ಎಲ್ಲೆಲ್ಲ ಮಸೀದಿ ಮತ್ತು ಮಂದಿರಗಳಿವೆಯೋ ಅಲ್ಲೆಲ್ಲ ಚೌತಿ, ಕೃಷ್ಣಾಷ್ಟಮಿ, ಉಪವಾಸ, ಈದ್‍ಗಳಂಥ ಸಂದರ್ಭಗಳನ್ನು ನೆಪ ಮಾಡಿಕೊಂಡು ಪರಸ್ಪರರನ್ನು ಒಟ್ಟು ಸೇರಿಸುವ ಸಭೆಗಳೇಕೆ ನಡೆಯಬಾರದು? ಧಾರ್ಮಿಕ ಕ್ಷೇತ್ರವೊಂದರಲ್ಲಿ ನಡೆಯುವ ಇಫ್ತಾರ್ ಕೂಟಕ್ಕೂ ಭವ್ಯ ಕಲಾಭವನದಲ್ಲಿ ನಡೆಯುವ ಇಫ್ತಾರ್ ಕೂಟಕ್ಕೂ ನಡುವೆ ಧಾರಾಳ ವ್ಯತ್ಯಾಸ ಇದೆ. ಧಾರ್ಮಿಕ ಕ್ಷೇತ್ರಕ್ಕೆ ಬರುವಾಗ ಎಲ್ಲರೂ ಅವರವರ ಧರ್ಮಕ್ಕೆ ನಿಷ್ಠಾವಂತರಾಗಿರುತ್ತಾರೆ. ಭಯ-ಭಕ್ತಿಗಳಿರುತ್ತವೆ. ತನ್ನ ಧರ್ಮಕ್ಕೆ ನಿಷ್ಠನಾಗಿದ್ದುಕೊಂಡೇ ಇನ್ನೊಂದು ಧರ್ಮದ ಶ್ರದ್ಧಾಕೇಂದ್ರದಲ್ಲಿ ತುಸು ಸಮಯವನ್ನು ಕಳೆಯುವುದು ಮತ್ತು ಆ ಧರ್ಮದ ಅನುಯಾಯಿಗಳೊಂದಿಗೆ ಬೆರೆಯುವುದು ಬಹುದೊಡ್ಡ ಪರಿವರ್ತನೆಗೆ ಕಾರಣವಾಗಬಹುದು. ಎರಡೂ ಧರ್ಮಗಳ ಮಂದಿ ಮತ್ತೆ ಮತ್ತೆ ಒಂದು ಸೇರುವ ಸಂದರ್ಭಗಳು ಸೃಷ್ಟಿಯಾಗುವುದರಿಂದ ಅನುಮಾನಗಳಷ್ಟೇ ಹೊರಟು ಹೋಗುವುದಲ್ಲ, ಅನುಮಾನವನ್ನು ಉಳಿಸಿ ಬೆಳೆಸಬೇಕೆಂದು ಬಯಸುವವರೂ ಹೊರಟು ಹೋಗುತ್ತಾರೆ.
     ಸೌಹಾರ್ದತೆ ಎಂಬುದು ಧರ್ಮಭ್ರಷ್ಟವಾಗಿ ಮಾಡಬೇಕಾದ ಒಂದು ಆಚರಣೆ ಅಲ್ಲ. ಧರ್ಮಿಷ್ಟರಾಗಿದ್ದುಕೊಂಡೇ ಪ್ರಸ್ತುತ ಮತ್ತು ಪ್ರಾಯೋಗಿಕಗೊಳ್ಳಬೇಕಾದ ಮೌಲ್ಯ ಅದು. ಹಾಗಂತ, ಇದು ಅಸಾಧ್ಯವೂ ಅಲ್ಲ. ಆದರೆ ನಾವೆಲ್ಲ ಸೇರಿಕೊಂಡು ಅದನ್ನು
ಶ್ರೀ ನರಸಿಂಹ ಮೂರ್ತಿ ದೇವಳ
ಅಸಾಧ್ಯವೋ ಎಂದು ಭಾವಿಸುವಂತಹ ಸ್ಥಿತಿಗೆ ತಂದು ಮುಟ್ಟಿಸಿದ್ದೇವೆ. ಮಸೀದಿ ಮತ್ತು ಮಂದಿರಗಳು ಬಹುತೇಕ ಸಮಯ ಖಾಲಿ ಬಿದ್ದಿದ್ದರೂ ಮತ್ತು ಇವುಗಳ ಹೊರಗಿನ ಪ್ರಪಂಚ ಧರ್ಮದ ಹೆಸರಿನ ಜಗಳದಲ್ಲಿ ಬ್ಯುಝಿಯಾಗಿದ್ದರೂ ಇವನ್ನು ಬಳಸಿಕೊಳ್ಳುವ ಸಂದರ್ಭಗಳು ಸೃಷ್ಟಿಯಾಗುತ್ತಿಲ್ಲ. ಪುನ್ನತ್ತಲದಲ್ಲಿರುವ ಶ್ರೀ ನರಸಿಂಹ ಮೂರ್ತಿ ದೇವಳದಲ್ಲಿ ಮತ್ತು ಉಡುಪಿಯ ಪೇಜಾವರ ಮಠದಲ್ಲಿ ನಡೆದ ಇಫ್ತಾರ್ ಕೂಟಗಳು  ಈ ನೆಲೆಯಲ್ಲಿ ಅತ್ಯಂತ ಮಹತ್ವಪೂರ್ಣ. ಹಿಂದೂ-ಮುಸ್ಲಿಮರನ್ನು ಒಟ್ಟು ಸೇರಿಸುವ ಇಂಥ ಪ್ರಯತ್ನಗಳು ಮಸೀದಿ ಮತ್ತು ಮಂದಿರಗಳಲ್ಲಿ ಮತ್ತೆ ಮತ್ತೆ ನಡೆಯಲಿ. ಜನರ ನಡುವೆ ಸಂಬಂಧಗಳು ಗಟ್ಟಿಯಾಗಲಿ. ಆ ಮೂಲಕ ಸೌಹಾರ್ದತೆ ನೆಲೆಗೊಳ್ಳಲಿ.



No comments:

Post a Comment