Thursday, 6 July 2017

.ತುಮಕೂರಿನ 37 ಹಸುಗಳು ಮತ್ತು ಗೋರಕ್ಷಣೆ

      ಕಳೆದವಾರ ತುಮಕೂರಿನಲ್ಲಿ ನಡೆದ ರೈತ ಪ್ರತಿಭಟನೆಯು ಸ್ವಘೋಷಿತ ಗೋರಕ್ಷಕರ ಕುರಿತಂತೆ ಮತ್ತೊಂದು ಸುತ್ತಿನ ಚರ್ಚೆಗೆ ವೇದಿಕೆಯನ್ನು ಒದಗಿಸಿದೆ. ತಮಿಳುನಾಡಿನ ಈರೋಡ್‍ನಿಂದ ಹೈನುಗಾರಿಕೆಗೆಂದು 37 ಜರ್ಸಿ ಹಸುಗಳು ಮತ್ತು ಎರಡು  ಎಮ್ಮೆಗಳನ್ನು ಖರೀದಿಸಿ ಬೆಳಗಾವಿಗೆ ತರುತ್ತಿದ್ದ ವೇಳೆ ಮೇ 24ರಂದು ತುಮಕೂರಿನಲ್ಲಿ ಸ್ವಘೋಷಿತ ಗೋರಕ್ಷಕರು ದಾಳಿ ನಡೆಸಿದರು. ಸುಮಾರು 200ರಷ್ಟಿದ್ದ ಗೋರಕ್ಷಕರು ರೈತರನ್ನು ಮತ್ತು ಲಾರಿ ಚಾಲಕರನ್ನು ಥಳಿಸಿದರು. ಪೊಲೀಸರು ರೈತರ ಮೇಲೆ ಮೊಕದ್ದಮೆ ದಾಖಲಿಸಿದರು. ಎಮ್ಮೆ ಮತ್ತು ಹಸುಗಳನ್ನು ಗುಬ್ಬಿ ತಾಲೂಕಿನಲ್ಲಿರುವ ಧ್ಯಾನ್ ಫೌಂಡೇಶನ್ ಗೋರಕ್ಷಕ್ ಟ್ರಸ್ಟ್‍ಗೆ ಹಸ್ತಾಂತರಿಸಿದರು. ರೈತರು ಕಂಗಾಲಾದರು. ತಲಾ 50 ಸಾವಿರ ರೂಪಾಯಿಯನ್ನು ತೆತ್ತು 37 ಹಸು ಮತ್ತು ಎರಡು ಎಮ್ಮೆಗಳನ್ನು ಖರೀದಿಸಿದ್ದ ರೈತರು, ಅದಕ್ಕಾಗಿ ಸಂಸ್ಥೆಗಳಿಂದ ಸಾಲಗಳನ್ನೂ ಪಡೆದಿದ್ದರು. ಅಲ್ಲದೇ 37 ಹಸುಗಳೂ ಗರ್ಭ ಧರಿಸಿದ್ದುವು. ಕಳೆದ ಜೂನ್ 5ರಂದು ತುಮಕೂರಿನ ಜೆಎಂಎಫ್‍ಸಿ ನ್ಯಾಯಾಲಯವು, ಮುಟ್ಟುಗೋಲು ಹಾಕಲಾದ ಜಾನುವಾರುಗಳನ್ನು ರೈತರಿಗೆ ಹಿಂದಿರುಗಿಸಬೇಕೆಂದು ಆದೇಶಿಸಿತು. ಮಾತ್ರವಲ್ಲ, ತಲಾ 50 ರೂಪಾಯಿಯಂತೆ 39 ಜಾನುವಾರುಗಳಿಗೂ ಪ್ರತಿದಿನದ ನಿರ್ವಹಣಾ ವೆಚ್ಚವಾಗಿ ಪಾವತಿಸಬೇಕೆಂದೂ ರೈತರಿಗೆ ನಿರ್ದೇಶಿಸಿತು. ಆದರೆ ಧ್ಯಾನ್ ಟ್ರಸ್ಟ್ ಜಾನುವಾರುಗಳನ್ನು ಹಿಂದಿರುಗಿಸಲು ಒಪ್ಪುತ್ತಿಲ್ಲ. ತಲಾ 1.7 ಲಕ್ಷ ರೂಪಾಯಿಯಂತೆ 39 ಜಾನುವಾರಿಗಳಿಗೆ ಪಾವತಿಸಿದರೆ ಮಾತ್ರ ಬಿಟ್ಟು ಕೊಡುವುದಾಗಿ ಅದು ಹೇಳಿಕೊಂಡಿದೆ.
      ಇಲ್ಲಿ ಕೆಲವು ಪ್ರಶ್ನೆಗಳಿವೆ. ನಿಜಕ್ಕೂ ಗೋರಕ್ಷಕರೆಂದರೆ ಯಾರು? ಅವರ ನಿಯಂತ್ರಣ ಯಾರ ಕೈಯಲ್ಲಿದೆ?  ಇತ್ತೀಚೆಗಷ್ಟೇ ತಮಿಳುನಾಡು ಸರಕಾರದ ಆದೇಶದಂತೆ ರಾಜಸ್ಥಾನದಿಂದ ಖರೀದಿಸಿ ತರಲಾಗುತ್ತಿದ್ದ ಜಾನುವಾರುಗಳನ್ನು ತಡೆಹಿಡಿದ ಘಟನೆ ರಾಜಸ್ಥಾನದಲ್ಲೇ ನಡೆಯಿತು. ಅದರಲ್ಲಿದ್ದವರ ಮೇಲೆ ಹಲ್ಲೆ ನಡೆಸಲಾಯಿತು. ಮಾಂಸ ಸಾಗಿಸುತ್ತಿರುವರೆಂಬ ಆರೋಪದಲ್ಲಿ ಯುವಕನನ್ನು ಇರಿದು ಕೊಂದ ಘಟನೆ ಕಳೆದವಾರ ದೆಹಲಿಯಲ್ಲಿ ನಡೆದಿದೆ. ಪೆಹ್ಲೂಖಾನ್, ಅಖ್ಲಾಕ್ ಹತ್ಯಾ ಘಟನೆಗಳು ಜನರ ನೆನಪಿನಿಂದ ಮಾಸುವ ಮೊದಲೇ ಅಂಥದ್ದೇ ಸರಣಿ ಕ್ರೌರ್ಯಗಳು ನಡೆಯುತ್ತಿರುವುದು ಏನನ್ನು ಸೂಚಿಸುತ್ತದೆ? ಹಾಗಂತ, ಗೋರಕ್ಷಣೆಯ ಹೆಸರಲ್ಲಿ ಥಳಿಸುವ ಗುಂಪಿನ ಮನಸ್ಥಿತಿ ಎಷ್ಟು ಭೀಭತ್ಸಕರ ಎನ್ನುವುದಕ್ಕೆ ಪುರಾವೆಯಾಗಿ ನಿರ್ದಿಷ್ಟ ಘಟನೆಗಳನ್ನು ಉಲ್ಲೇಕಿಸಿ ಸಮರ್ಥಿಸಿಕೊಳ್ಳಬೇಕಾದ ಅಗತ್ಯವೇ ಇಲ್ಲ. ಪ್ರತಿ ಘಟನೆಯೂ ಅದಕ್ಕೆ ಸಾಕ್ಷಿಯೇ. ಪ್ರತಿ ಹಿಂಸಾತ್ಮಕ ಘಟನೆಯನ್ನೂ ಚಿತ್ರೀಕರಿಸುವುದು ಮತ್ತು ಸಾಮಾಜಿಕ ಜಾಲತಾಣಗಳಿಗೆ ರವಾನಿಸಿ ತೃಪ್ತಿಪಡುವುದರಲ್ಲಿಯೇ ಆ ಮನಸ್ಥಿತಿ ಎಷ್ಟು ಭೀಕರ ಎಂಬುದನ್ನು ಸಾರಿ ಹೇಳುತ್ತದೆ. ಸಾಮಾನ್ಯವಾಗಿ, ಅತ್ಯಾಚಾರ ಪ್ರಕರಣಗಳಲ್ಲಿ ಇಂಥ ಚಿತ್ರೀಕರಣಗಳು ನಡೆಯುವುದಿದೆ. ಸಂತ್ರಸ್ತೆಯನ್ನು ಬೆದರಿಸುವುದಕ್ಕೆ ಅಂಥ ಚಿತ್ರೀಕರಣಗಳನ್ನು ಬಳಸಲಾಗುತ್ತದೆ. ಆದರೆ ಸಾಮಾಜಿಕ ಜಾಲತಾಣಗಳಿಗೆ ಅಂಥ ಚಿತ್ರೀಕರಣವನ್ನು ರವಾನಿಸಲು ಅಂಥವರು ಧೈರ್ಯ ತೋರುವುದು ತೀರಾ ತೀರಾ ಕಡಿಮೆ. ಒಂದು ಕಡೆ ಶಿಕ್ಷೆಯ ಭೀತಿಯಿದ್ದರೆ ಇನ್ನೊಂದು ಕಡೆ ಸಹಜ ಅಳುಕು ಇರುತ್ತದೆ. ತಾವು ಅಪರಾಧ ಎಸಗಿದ್ದೇವೆ ಎಂಬ ತಪ್ಪಿತಸ್ಥ ಭಾವ. ನಿಜವಾಗಿ ಗೋರಕ್ಷಕರ ಕ್ರೌರ್ಯ ಅತ್ಯಾಚಾರಕ್ಕಿಂತ ತೀರಾ ಭಿನ್ನವೇನೂ ಅಲ್ಲ. ಅತ್ಯಾಚಾರವು ಓರ್ವ ಹೆಣ್ಣು ಮಗಳನ್ನು ದೈಹಿಕವಾಗಿ ಹಿಂಸಿಸುವುದಕ್ಕಿಂತ ಹೆಚ್ಚು ಮಾನಸಿಕವಾಗಿ ಇರಿಯುತ್ತದೆ. ಸದಾ ಬದುಕಿನುದ್ದಕ್ಕೂ ಅದು ಕಾಡುತ್ತಲೂ ಇರುತ್ತದೆ. ಸಾಮಾಜಿಕವಾಗಿಯೂ ಅದು ಅಡ್ಡ ಪರಿಣಾಮವನ್ನು ಬೀರುತ್ತದೆ. ‘ಅತ್ಯಾಚಾರದ ಸಂತ್ರಸ್ತೆ’ ಎಂಬುದು ಈ ದೇಶದಲ್ಲಿ ಗೌರವದ ಪದವಾಗಿಯೇನೂ ಉಳಿದಿಲ್ಲ. ಮದುವೆ ಸಂದರ್ಭದಲ್ಲಿ ಅದು ತೊಂದರೆ ಕೊಡಬಹುದು. ಸಮಾರಂಭಗಳಲ್ಲಿ ಅದು ಮುಜುಗರಕ್ಕೆ ಒಳಪಡಿಸಬಹುದು. ಅನುಕಂಪ, ತ್ಚು ತ್ಚು ತ್ಚು ಮಾತುಗಳ ಮೂಲಕ ಮತ್ತೆ ಮತ್ತೆ ಕಂಡ ಕಂಡವರಿಂದ ಸಂತ್ರಸ್ತೆಯಾಗುತ್ತಲೇ ಇರುವ ಸನ್ನಿವೇಶಕ್ಕೂ ದೂಡಬಹುದು. ಗೋರಕರಿಂದ ಥಳಿತಕ್ಕೆ ಒಳಗಾಗುವವರ ಪರಿಸ್ಥಿತಿಯೂ ಬಹುತೇಕ ಹೀಗೆಯೇ. ಆವರೆಗೆ ಅತ್ಯಂತ ಪ್ರಾಮಾಣಿಕ ರೈತ, ಹೈನುದ್ಯಮಿ, ವ್ಯಾಪಾರಿಯಾಗಿ ಗುರುತಿಸಿಕೊಂಡಿದ್ದವ ಒಂದು ಬೆಳಗಾತ ದಿಢೀರನೇ ಕಳ್ಳನಾಗಿ ಬಿಡುತ್ತಾನೆ. ಥಳಿಕ್ಕೆ ಒಳಗಾಗುತ್ತಾನೆ. ಅಟ್ಟಾಡಿಸಿ ಹೊಡೆಯುವ, ಬಡಿಯುವ ವೀಡಿಯೋಗಳು ಆತನ ಪತ್ನಿ, ಮಕ್ಕಳಿಂದ ಹಿಡಿದು ಎಲ್ಲರಿಗೂ ಲಭ್ಯವಾಗುತ್ತದೆ. ಮೊಬೈಲ್‍ನಿಂದ ಮೊಬೈಲ್‍ಗೆ ಮತ್ತೆ ಮತ್ತೆ ರವಾನೆಯಾಗುತ್ತಲೂ ಇರುತ್ತದೆ. ಓರ್ವ ವ್ಯಕ್ತಿ ಥಳಿತದ ನೋವಿಗಿಂತಲೂ ಹೆಚ್ಚು ನೋವು ಅನುಭವಿಸುವ ಸಂದರ್ಭ ಇದು. ಒಂದು ಕಡೆ ಸಾರ್ವಜನಿಕವಾಗಿ ತನ್ನ ಪ್ರಾಮಾಣಿಕತೆಗೆ ಬಿದ್ದಿರುವ ಏಟು ಮತ್ತು ಇನ್ನೊಂದು ಕಡೆ ಮನೆಯಲ್ಲಿ ಇದ್ದಿರಬಹುದಾದ ಅಪ್ಪ ಅಥವಾ ಅಣ್ಣ ಎಂಬ ವರ್ಚಸ್ವೀ ವ್ಯಕ್ತಿತ್ವಕ್ಕೆ ನಡುಬೀದಿಯಲ್ಲಿ ಆಗುತ್ತಿರುವ ಅವಮಾನ.. ಇವೆರಡೂ ಸದಾಕಾಲ ಆತನನ್ನು ಖಂಡಿತ ಕಾಡುತ್ತಿರುತ್ತದೆ. ಅಂದಹಾಗೆ, ಅತ್ಯಾಚಾರದ ಸಂತ್ರಸ್ತೆಯ ಹೆಸರನ್ನು ಗೌಪ್ಯವಾಗಿ ಇಡುವ ವ್ಯವಸ್ಥೆಯಾದರೂ ಇದೆ. ಆದರೆ ಗೋರಕ್ಷಕರ ಥಳಿತಕ್ಕೆ ಒಳಗಾಗುವ ವ್ಯಕ್ತಿಯ ಮಟ್ಟಿಗೆ ಹೆಸರು ಮಾತ್ರವಲ್ಲ, ವೀಡಿಯೋಗಳು ಜೊತೆಜೊತೆಗೇ ಬಹಿರಂಗವಾಗುವ ಸ್ಥಿತಿ ಇದೆ. ವ್ಯಕ್ತಿ ಎಷ್ಟೇ ಪ್ರಾಮಾಣಿಕನಾಗಿರಲಿ, ತನಗಾಗಿರುವ ಅವಮಾನ ಮತ್ತು ತನ್ನ ಅಸಹಾಯಕ ವರ್ತನೆಯನ್ನು ತನ್ನ ಪತ್ನಿ, ಮಕ್ಕಳು, ಕುಟುಂಬ ಅಥವಾ ಸಮಾಜ ವೀಕ್ಷಿಸುವುದನ್ನು
ಇಷ್ಟಪಡುವುದಿಲ್ಲ. ಆದ್ದರಿಂದಲೇ ಅತ್ಯಾಚಾರದ ಸಂತ್ರಸ್ತೆಯಂತೆ ‘ಗೋರಕ್ಷಕ ಸಂತ್ರಸ್ತ’ರನ್ನೂ ಯಾಕೆ ಪರಿಗಣಿಸಬಾರದು ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದು? ಗೋರಕ್ಷಕರ ಕ್ರೌರ್ಯ ಯಾವ ನೆಲೆಯಲ್ಲೂ ಅತ್ಯಾಚಾರಿಗಳ ಕ್ರೌರ್ಯಕ್ಕಿಂತ ಕಡಿಮೆಯದಲ್ಲ. ಈ ಗೋರಕ್ಷಕರಿಗೆ ಯಾವ ನೀತಿ ನಿಯಮಗಳೂ ಇಲ್ಲ. ಅಕ್ರಮ ಮತ್ತು ಸಕ್ರಮ ಸಾಗಾಟಗಳ ಬಗ್ಗೆ ಕನಿಷ್ಠ ಮಾಹಿತಿಯೂ ಇರುವುದಿಲ್ಲ. ಅವರದು ವಿಕೃತ ಮನಸ್ಥಿತಿ. ಆ ಮನಸ್ಥಿತಿಯ ಸ್ವಭಾವ ಏನೆಂದರೆ, ಇತರರನ್ನು ಹಿಂಸಿಸಿ ಆನಂದ ಪಡುವುದು. ಆಕಳನ್ನು ಸ್ವತಃ ಅದರ ಮಾಲಿಕನೇ ಗದ್ದೆಗೆ ಅಟ್ಟಿಕೊಂಡು ಹೋದರೂ ಥಳಿಸುವಷ್ಟು ಈ ಮನಸ್ಥಿತಿ ವಿಕೃತವಾದುದು. ದುರಂತ ಏನೆಂದರೆ, ಈ ಮನಸ್ಥಿತಿಯ ಅಟ್ಟಹಾಸ ದಿನೇ ದಿನೇ ಪ್ರಬಲಗೊಳ್ಳುತ್ತಿದ್ದರೂ ಸಮಾಜ ಎಚ್ಚೆತ್ತುಕೊಳ್ಳುತ್ತಿಲ್ಲ. ನಿರ್ಭಯ ಪ್ರಕರಣದಲ್ಲಿ ಈ ದೇಶ ತೋರಿದ ಒಗ್ಗಟ್ಟನ್ನು ಈ ಕ್ರೌರ್ಯ ಮತ್ತೆ ಮತ್ತೆ ಬಯಸುತ್ತಿದ್ದರೂ ದೊಡ್ಡ ಮಟ್ಟದಲ್ಲಿ ಅಂಥದ್ದೊಂದು ಜಾಗೃತಿ ಇನ್ನೂ ರೂಪುಪಡೆದಿಲ್ಲ. ಉನಾ ಪ್ರಕರಣದಲ್ಲಿ ಈ ಜಾಗೃತಿ ಪ್ರಜ್ಞೆ ಅಲ್ಪ ಮಟ್ಟದಲ್ಲಿ ಕಾಣಿಸಿಕೊಂಡದ್ದನ್ನು ಬಿಟ್ಟರೆ ಉಳಿದಂತೆ ಸಮಾಜ ವೀಕ್ಷಕನ ಪಾತ್ರ ನಿರ್ವಹಿಸಿದ್ದೇ ಹೆಚ್ಚು. ಕಾನೂನನ್ನು ಕೈಗೆತ್ತಿಕೊಳ್ಳುವ ಅವಕಾಶವಿಲ್ಲದ ದೇಶವೊಂದರಲ್ಲಿ ಪ್ರಾಮಾಣಿಕರನ್ನೂ ರೈತರನ್ನೂ ಕಳ್ಳರ ಪಟ್ಟಿಗೆ ಸೇರಿಸುವ ಕ್ರೌರ್ಯವೊಂದು ಸಮಾಜದ ಮೌನ ಸಮ್ಮತಿಯೊಂದಿಗೆ ನಡೆಯುತ್ತಿರುವುದು ಅತ್ಯಂತ ಅಪಾಯಕಾರಿಯಾದುದು. ಇದರ ವಿರುದ್ಧ ಸಮಾಜ ಪ್ರತಿ ಚಳವಳಿ ನಡೆಸಬೇಕು. ಗೋರಕ್ಷಕರ ವೇಷದಲ್ಲಿರುವ ಕ್ರಿಮಿನಲ್‍ಗಳನ್ನು ‘ಅತ್ಯಾಚಾರಿ’ಗಳಂತೆ ನಡೆಸಿಕೊಳ್ಳಬೇಕು. ಅವರಿಗೆ ಸಾರ್ವಜನಿಕವಾಗಿ ಮಾನ್ಯತೆ ಲಭ್ಯವಾಗದಂತೆ ನೋಡಿಕೊಳ್ಳಬೇಕು. ಕಾನೂನುಬಾಹಿರವಾಗಿ ಗೋಹತ್ಯೆ ನಡೆಸುವವರಿಗೆ ಶಿಕ್ಷೆ ವಿಧಿಸುವ ನಿಯಮಗಳನ್ನು ರೂಪಿಸಿರುವ ಮಾದರಿಯಲ್ಲೇ ಗೋರಕ್ಷಣೆಯ ಹೆಸರಲ್ಲಿ ಬೀದಿ ನ್ಯಾಯ ನೀಡುವವರ ವಿರುದ್ಧವೂ ಕಠಿಣ ನಿಯಮಗಳನ್ನು ರಚಿಸಬೇಕು. ಅಕ್ರಮ ಮತ್ತು ಸಕ್ರಮವನ್ನು ಪತ್ತೆ ಹಚ್ಚುವುದು ಸರಕಾರದ ಕರ್ತವ್ಯ. ಆ ಕೆಲಸವನ್ನು ಸರಕಾರ ನಿರ್ವಹಿಸಲಿ. ಸ್ವಘೋಷಿತ ರಕ್ಷಕರಿಗೆ ಅತ್ಯಾಚಾರಿಗಳ ಸ್ಥಾನ-ಮಾನ ಸಿಗಲಿ. ತುಮಕೂರು ಪ್ರಕರಣವು ಇಂಥದ್ದೊಂದು ಒತ್ತಾಯಕ್ಕೆ ಮತ್ತೊಮ್ಮೆ ಅವಕಾಶವನ್ನು ಒದಗಿಸಿದೆ.

No comments:

Post a Comment