Friday 21 July 2017

ಗೋ ಹಿಂಸೆಗೆ ರೂಪಕವಾಗಬಹುದಾದ ಹಿಟ್ಲರ್ ನ ಕುಂಚ

      ನಾಲ್ಕು ದಿನಗಳ ನಡುವೆ ಲಂಡನ್‍ನಲ್ಲಿ ಎರಡು ಬೆಳವಣಿಗೆಗಳು ನಡೆದುವು. ಜಗತ್ತಿನ ಅತಿ ದೊಡ್ಡ ಭಯೋತ್ಪಾದಕನಾಗಿ ಮತ್ತು ಹಿಂಸಾಪ್ರೇಮಿಯಾಗಿ ಗುರುತಿಸಿಕೊಂಡಿರುವ ಜರ್ಮನಿಯ ಅಡಾಲ್ಫ್ ಹಿಟ್ಲರ್‍ನ 5 ವರ್ಣ ಚಿತ್ರಗಳನ್ನು ಹರಾಜು ಹಾಕುವ ಬಗ್ಗೆ ಲಂಡನಿನ ಮುಲ್ಲೋಕ್ ಏಲಂ ಹೌಸ್ ನೀಡಿದ ಪ್ರಕಟಣೆ ಇದರಲ್ಲಿ ಒಂದಾದರೆ, ಈ ಪ್ರಕಟನೆಯ ನಾಲ್ಕು ದಿನಗಳ ಮೊದಲು ಇದೇ ಲಂಡನ್ ನಗರವು ಪ್ರತಿಭಟನೆಯೊಂದಕ್ಕೆ ಸಾಕ್ಷ್ಯ ವಹಿಸಿದ್ದು ಇನ್ನೊಂದು.  ಹಾಗಂತ, ಆ ಪ್ರತಿಭಟನೆಗೂ ಲಂಡನ್‍ಗೂ ಯಾವ ಸಂಬಂಧವೂ ಇರಲಿಲ್ಲ. ಜುನೈದ್ ಖಾನ್, ಪೆಹ್ಲೂ ಖಾನ್ ಎಂಬೆರಡು ಹೆಸರಿನ ಪರಿಚಯ ಈ ನಗರಕ್ಕೆ ಗೊತ್ತಿರುವ ಸಾಧ್ಯತೆ ಶೂನ್ಯವೆಂದೇ ಹೇಳಬಹುದು. ಯಾಕೆಂದರೆ ಇವರಿಬ್ಬರು ಭಾರತದ ಹರ್ಯಾಣಕ್ಕೆ ಸೇರಿದವರು. ಪೆಹ್ಲೂ ಖಾನ್‍ರನ್ನು ಗೋರಕ್ಷಕರೆಂದು ಕರೆಸಿಕೊಂಡಿರುವ ದುಷ್ಕರ್ಮಿಗಳ ಗುಂಪು ರಾಜಸ್ಥಾನದಲ್ಲಿ ಥಳಿಸಿ ಕೊಂದಿದ್ದರೆ, 16 ವರ್ಷದ ಜುನೈದ್ ಖಾನ್‍ನನ್ನು `ಮಾಂಸ ಸೇವಕ' ಎಂಬ ಕಾರಣಕೊಟ್ಟು ದೆಹಲಿಯಲ್ಲಿ ರೈಲಿನಲ್ಲಿ ಹತ್ಯೆ ಮಾಡಲಾಗಿತ್ತು. ಗೋವಿನ ಹೆಸರಲ್ಲಿ ದೇಶದಲ್ಲಿ ನಡೆಯುತ್ತಿರುವ ಕ್ರೌರ್ಯಗಳನ್ನು ಮತ್ತು ಈ ಎರಡು ಹತ್ಯೆಗಳನ್ನು ಖಂಡಿಸಿ ಕಳೆದವಾರ ಒಂದೇ ದಿನ ಒಟ್ಟು 16 ನಗರಗಳಲ್ಲಿ ಪ್ರತಿಭಟನೆಗಳು ನಡೆದುವು. ದೆಹಲಿ, ಮುಂಬೈ, ಲಕ್ನೋ, ಬೆಂಗಳೂರು, ಲಂಡನ್, ಟೊರೆಂಟೊ ಮತ್ತು ಕರಾಚಿಗಳು ಇವುಗಳಲ್ಲಿ ಕೆಲವು. ದೆಹಲಿಯ ಜಂತರ್ ಮಂತರ್‍ನಲ್ಲಿ ನಡೆದ ಪ್ರತಿಭಟನೆಯಲ್ಲಿ ಜುನೈದ್ ಮತ್ತು ಪೆಹ್ಲೂ ಖಾನ್‍ರ ಕುಟುಂಬಗಳು ಭಾಗವಹಿಸಿದುವು. `ಸ್ವರ್ಗದಿಂದ- ಜುನೈದ್ ತನ್ನ ತಾಯಿಗೆ'- ಎಂಬ ಶೀರ್ಷಿಕೆಯ ಕವನವನ್ನು ಜುನೈದ್‍ನ ಚಿಕ್ಕಪ್ಪನ ಮಗ ವಾಚಿಸಿದ. `ಅಮ್ಮಾ, ನೀನು ಈದ್‍ನ ಖರೀದಿಗೆ ನನ್ನನ್ನು ದೆಹಲಿಗೆ ಕಳುಹಿಸಿದೆ. ಆದರೆ ನಾನು ಸ್ವರ್ಗ ಸೇರಿಕೊಂಡೆ. ಹಿಂದೂ ಮತ್ತು ಮುಸ್ಲಿಮರು ಪರಸ್ಪರ ಸಹೋದರರೆಂದು ನೀನು ನನಗೆ ಕಲಿಸಿರುವುದು ಸುಳ್ಳಮ್ಮಾ. ನನ್ನನ್ನು ಸಾಯುವಂತೆ ಹೊಡೆಯುಲಾಗುತ್ತಿದ್ದರೂ ಎಲ್ಲರೂ ಬರೇ ವೀಕ್ಷಿಸಿದರು. ವೀಡಿಯೋ ಮಾಡಿದರು. ತಮ್ಮ ಕಣ್ಣೆದುರೇ ತಮ್ಮ ಸಹೋದರನನ್ನು ಸಾಯಲು ಯಾರು ಬಿಡುತ್ತಾರಮ್ಮಾ...' ಈ ಹಾಡಿಗೆ ಪ್ರತಿಭಟನಾಕಾರರ ಕಣ್ಣುಗಳು ಹನಿಯಾದುವು. ಇದರ ನಾಲ್ಕು ದಿನಗಳ ಬಳಿಕ ಹಿಟ್ಲರ್‍ನ ಐದು ವರ್ಣ ಚಿತ್ರಗಳನ್ನು ತಲಾ 5 ಲಕ್ಷ ರೂಪಾಯಿ ಮೊತ್ತಕ್ಕೆ ಹರಾಜು ಕೋರುವ ಪ್ರಕಟಣೆ ಹೊರಬಿತ್ತು. ಹಿಟ್ಲರ್‍ನು ವರ್ಣಚಿತ್ರ ಕಲಾವಿದ ಆಗಿದ್ದ. ಈ ವರ್ಣ ಚಿತ್ರಗಳ ಪೈಕಿ ನಾಲ್ಕರಲ್ಲೂ ಆತನ ಸಹಿ ಇದೆ. ಗಡಿಯಾರದ ಚಿತ್ರ, ತಾನು ಹುಟ್ಟಿದೂರಾದ ಆಸ್ಟ್ರೀಯಾದ ನಗರದ ಗೇಟ್‍ನ ವರ್ಣಚಿತ್ರವೂ ಇದರಲ್ಲಿ ಸೇರಿದೆ. ನಿಜವಾಗಿ, ನ್ಯೂಯಾರ್ಕ್ ಪೋಸ್ಟ್ ಪತ್ರಿಕೆಯು ಪ್ರಕಟಿಸಿರುವ ಈ ಸುದ್ದಿ ಮುಖ್ಯವಾಗುವುದು ಎರಡು ಕಾರಣಗಳಿಗಾಗಿ. ಒಂದು- ಕ್ರೌರ್ಯವನ್ನು ಪ್ರತಿಭಟಸಿ ಸಭೆ ನಡೆಸಲಾದ ಲಂಡನ್‍ನಿಂದಲೇ ಈ ವರ್ಣಚಿತ್ರಗಳ ಏಲಂನ ಸುದ್ದಿಯೂ ಪ್ರಕಟವಾಗಿದೆ ಎಂಬುದಾದರೆ, ಭಾರತದ ಈ ದುಷ್ಕರ್ಮಿಗಳೂ ಹಿಟ್ಲರ್‍ನ `ಹಿಂಸಾ ಪ್ರೇಮಿ' ಮನಃಸ್ಥಿತಿಯನ್ನು ಬಹಳವಾಗಿ ಪ್ರತಿನಿಧಿಸುತ್ತಿದ್ದಾರೆಂಬುದು ಇನ್ನೊಂದು ಹಿಟ್ಲರ್ ಒಂದು ಕಡೆ ಕ್ರೌರ್ಯ ಎಸಗುವುದಕ್ಕೇ ಜನಿಸಿರುವವನಂತೆ ವರ್ತಿಸುತ್ತಿದ್ದರೂ ಇನ್ನೊಂದು ಕಡೆ ಕಲಾವಿದನ ಮನಸ್ಸನ್ನೂ ಹೊಂದಿದ್ದ. ಆದರೆ ಆತನೊಳಗಿರುವ ಕಲಾವಿದನ ಮನಸ್ಸನ್ನು ಆತ ಪೋಷಿಸುವ ಕೆಲಸವನ್ನು ಮಾಡಲಿಲ್ಲ. ಅದರ ಬದಲು ಹಿಂಸಕ ಮನಸ್ಸನ್ನು ಪೋಷಿಸಿದ. ಇವತ್ತು ಲಂಡನ್‍ನಲ್ಲಿ ಏಲಂಗೆ ಇಡಲಾಗಿರುವ ವರ್ಣಚಿತ್ರಗಳ ಬಗ್ಗೆ ಯಾರಾದರೂ ಆಸಕ್ತಿ ವಹಿಸುವುದಾದರೆ, ಮತ್ತು ಆ ಏಲಂಗೆ ವ್ಯಾಪಕ ಪ್ರಚಾರ ಲಭ್ಯವಾಗುವುದಾದರೆ, ಅದು ಕಲಾವಿದ ಹಿಟ್ಲರ್‍ನಿಂದಾಗಿ ಅಲ್ಲ. ಹಿಂಸಾಪ್ರೇಮಿ ಹಿಟ್ಲರ್‍ನಿಂದಾಗಿ. ಆ ವರ್ಣಚಿತ್ರಗಳು ಆತನ ಕ್ರೌರ್ಯವನ್ನು ಮತ್ತೊಮ್ಮೆ ನೆನಪಿಸುತ್ತದೆ. ಕಲಾವಿದನಾಗಿರಬೇಕಾಗಿದ್ದ ಈತ ಯಾಕಾಗಿ ನರಮೇಧಿಯಾದ ಎಂದು ಆ ವರ್ಣಚಿತ್ರಗಳನ್ನು ವೀಕ್ಷಿಸಿದ ಪ್ರತಿಯೊಬ್ಬರೂ ಪ್ರಶ್ನಿಸಬಹುದು. ಆ ವರ್ಣಚಿತ್ರಗಳಲ್ಲಿ ಕ್ರೌರ್ಯದ ಅಂಶವಿದೆಯೇ ಎಂದು ಪರೀಕ್ಷಿಸಬಹುದು. ಸದ್ಯ, ನಮ್ಮ ದೇಶದಲ್ಲಿ ಬಹುತೇಕ ಹಿಟ್ಲರ್‍ನ ಮನಃಸ್ಥಿತಯನ್ನೇ ಹೋಲುವ ಒಂದು ಗುಂಪು ಇದೆ. ಹಿಟ್ಲರ್ ಪ್ರಶ್ನಾತೀತನಾಗಿದ್ದ. ಆದರೆ ಈ ಮಂದಿ ಆ ಮಟ್ಟಕ್ಕೆ ತಲುಪಿಲ್ಲ ಎಂಬುದನ್ನು ಬಿಟ್ಟರೆ ಉಳಿದಂತೆ ಇವರ ಮಾತು, ವರ್ತನೆ, ದೇಹ ಭಾಷೆಗಳು ಹಿಟ್ಲರ್‍ನನ್ನೇ ಹೋಲುತ್ತಿವೆ. ಹಿಟ್ಲರ್‍ನ ಕೈಯಲ್ಲಿ ಕುಂಚ ಇತ್ತು. ಆದರೆ ಆ ಕುಂಚ ಎಷ್ಟು ದುರ್ಬಲ ಆಗಿತ್ತು ಅಂದರೆ, ತನ್ನೊಳಗಿನ ಕ್ರೌರ್ಯವನ್ನು ಬಿಡಿಸುವ ಧೈರ್ಯ ತೋರದಷ್ಟು. ಸಾಮೂಹಿಕ ನರಮೇಧಗಳು ಆತನ ಕುಂಚದಲ್ಲಿ ಚಿತ್ರಗಳಾಗಿ ಪಡಿಮಾಡಿಲ್ಲ. ದ್ವೇಷದ ಭಾಷಣಗಳು ವರ್ಣಚಿತ್ರಗಳಾಗಿಲ್ಲ. ಆರ್ಯಶ್ರೇಷ್ಠತೆಯ ಅಮಲಿಗೆ ಸಿಲುಕಿ ನಜ್ಜು ಗುಜ್ಜಾದ ಮಹಿಳೆ, ಮಕ್ಕಳು, ವೃದ್ಧರನ್ನು ಆ ಕುಂಚ ಸ್ಪರ್ಶಿಸಿಲ್ಲ. ಇದು ಹಿಟ್ಲರ್‍ನೊಳಗಿನ ಕಲಾವಿದನ ಅಸಹಾಯಕತೆಯನ್ನಷ್ಟೇ ದಾಖಲಿಸುವುದಿಲ್ಲ, ಆ ಕಲಾವಿದ ಆತನೊಳಗೆ ನಿಜಕ್ಕೂ ಇದ್ದನೋ ಅಥವಾ ತನ್ನ ಕ್ರೌರ್ಯದ ಮುಖವನ್ನು ಅಡಗಿಸುವ ಉದ್ದೇಶದಿಂದ ಕುಂಚವನ್ನು ದುರುಪಯೋಗಿಸಿದನೋ ಅನ್ನುವ ಅನುಮಾನವನ್ನು ಹುಟ್ಟು ಹಾಕುತ್ತದೆ. ಹಿಟ್ಲರ್ ಕ್ರೂರಿಯಲ್ಲ, ಆತನೊಳಗೆ ಓರ್ವ ಕಲಾವಿದನಿದ್ದ ಎಂದು ಜಗತ್ತು ನಂಬಲಿ ಎಂಬ ಕಾರಣಕ್ಕಾಗಿ ಆತ ಕುಂಚ ಪ್ರೇಮಿಯಂತೆ ನಟಿಸಿದನೋ ಎಂದು ಸಂದೇಹಪಡುವುದಕ್ಕೆ ಆತನ ವ್ಯಕ್ತಿತ್ವ ಅವಕಾಶವನ್ನು ಕೊಡುತ್ತದೆ. ನಿಜವಾಗಿ ಹಿಟ್ಲರ್‍ನ ಕೈಯಲ್ಲಿ ಕುಂಚ ಇರುವಂತೆಯೇ ನಮ್ಮ ದೇಶದ ದುಷ್ಕರ್ಮಿಗಳ ಬಾಯಲ್ಲಿ ಗೋವು ಇದೆ. ಆದರೆ ಈ ಗೋವು ಎಷ್ಟು ದುರ್ಬಲ ಅಂದರೆ, ಪ್ರತಿದಿನ ಬೃಹತ್ ಕಂಪೆನಿಗಳಲ್ಲಿ ಹತ್ಯೆಯಾಗುವ ಮತ್ತು ವಿದೇಶಗಳಿಗೆ ಮಾಂಸವಾಗಿ ರವಾನೆಯಾಗುವ ಗೋವುಗಳ ಬಗ್ಗೆ ಒಂದೇ ಒಂದು ಮಾತನ್ನೂ ಆಡದಷ್ಟು. ಪ್ರತಿದಿನ ಈ ದೇಶದ ಹಾದಿ-ಬೀದಿಗಳಲ್ಲಿ, ಗೋಶಾಲೆಗಳಲ್ಲಿ ಹಸಿವಿನಿಂದ ಸಾಯುವ ಗೋವುಗಳ ಬಗ್ಗೆ ಒಂದು ತುಂಡು ಹೇಳಿಕೆಯನ್ನೂ ಕೊಡದಷ್ಟು. ಕನಿಷ್ಠ ತಂತಮ್ಮ ಮನೆಯಲ್ಲಿ ಒಂದು ಗೋವನ್ನೂ ಸಾಕದಷ್ಟು. ಆದ್ದರಿಂದ ಇವರ ಬಾಯಲ್ಲಿರುವ ಗೋವು ಹಿಟ್ಲರ್‍ನ ಕೈಯಲ್ಲಿದ್ದ ಕುಂಚದಂತೆ ಕಾಣಿಸುತ್ತದೆ. ಹಿಟ್ಲರ್ ತನ್ನ ಹಿಂಸಕ ಮನಸ್ಸು ಚರ್ಚೆಗೊಳಗಾಗದಂತೆ ನೋಡಿಕೊಳ್ಳುವುದಕ್ಕಾಗಿ ಕುಂಚ ಬಳಸಿದ್ದರೆ ಈ ದುಷ್ಕರ್ಮಿಗಳು ತಮ್ಮ ಕೊಲೆಗಾರ ಮನಸ್ಸನ್ನು ಅಡಗಿಸುವುದಕ್ಕಾಗಿ ಗೋವನ್ನು ಬಳಸುತ್ತಿದ್ದಾರೆ. ಗೋವು ಅವರ ಮನಸ್ಸಲಿಲ್ಲ. ಗೋವನ್ನು ಪುಕ್ಕಟೆಯಾಗಿ ಕೊಟ್ಟರೂ ಸಾಕುವ ಉಮೇದು ಅವರಲ್ಲಿರುವುದಕ್ಕೆ ಸಾಧ್ಯವೂ ಇಲ್ಲ. ಅವರ ದುಷ್ಕೃತ್ಯಗಳು ಗೋವಿನ ಸಂರಕ್ಷಣೆಗಾಗಿಯೂ ಅಲ್ಲ. ಅವರೊಳಗೊಂದು ವಿಕೃತ ಭಾವವಿದೆ. ದ್ವೇಷವಿದೆ. ಈ ದ್ವೇಷ ಗೋವಿನ ಮೇಲಿನ ಪ್ರೇಮದಿಂದಾಗಿ ಹುಟ್ಟಿಕೊಂಡದ್ದಲ್ಲ. ಒಂದುವೇಳೆ ಗೋವಿನ ಮೇಲಿನ ಪ್ರೇಮವೇ ಅವರ ದುಷ್ಕೃತ್ಯಗಳಿಗೆ ಕಾರಣವೆಂದಾದರೆ, ಅವರ ಪ್ರತಿ ಗುರಿಯೂ ಮುಸ್ಲಿಮರೇ ಆಗಿರುವುದಕ್ಕೆ ಸಾಧ್ಯವೇ ಇಲ್ಲ. ಅವರು ನಿರ್ದಿಷ್ಟ ಧರ್ಮದ ಅನುಯಾಯಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಗೋಮಾಂಸ ಸೇವಕರು ಈ ದೇಶದಲ್ಲಿ ಮುಸ್ಲಿಮರಿಗಿಂತ ಮುಸ್ಲಿಮೇತರರೇ ಹೆಚ್ಚಿದ್ದರೂ ಅವರು ಕೈಗೆ ಪ್ರತಿಬಾರಿಯೂ ಜುನೈದ್‍ಗಳೂ, ಪೆಹ್ಲೂ ಖಾನ್‍ರೇ ಸಿಗುತ್ತಾರೆ.
     ನಿಜವಾಗಿ, ಹಿಟ್ಲರ್‍ನ ಕೈಯಲ್ಲಿದ್ದ ಕುಂಚದಂತೆ ಈ ದೇಶದಲ್ಲಿ ಥಳಿಸಿ ಕೊಲ್ಲುವವರ ಬಾಯಲ್ಲಿ ಗೋವು ಇದೆ. ಉಳಿದಂತೆ ಕುಂಚ ಹಿಡಿದ ಕೈ ಮತ್ತು ಗೋವಿನ ಸ್ಮರಣೆ ಮಾಡುವ ಬಾಯಿ ಎರಡರ ಮನಸ್ಸೂ ಒಂದೇ. ಅದೇನೆಂದರೆ, ನಿರ್ದಿಷ್ಟ ಧರ್ಮದ ಜನರನ್ನು ಬೇಟೆಯಾಡುವುದು. ಲಂಡನ್‍ನಲ್ಲಿ ಹರಾಜಿಗಿಟ್ಟಿರುವ ವರ್ಣ ಚಿತ್ರಗಳು ಈ ಹಿನ್ನೆಲೆಯಲ್ಲಿ ಬಹಳ ಮುಖ್ಯವಾಗುತ್ತದೆ. ಅದೊಂದು ರೂಪಕ. ಈ ರೂಪಕವು ನಮ್ಮ ನಡುವಿನ ಗೋರಕ್ಷಕರಿಗೆ ಚೆನ್ನಾಗಿಯೇ ಒಪ್ಪುತ್ತದೆ.

No comments:

Post a Comment