Thursday 27 July 2017

ಅವರ ಆತ್ಮಹತ್ಯೆಗೆ ಕಾರಣ ವಿಷ ಮಾತ್ರವೇ?

ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ತಂದೆ-ತಾಯಿ ಮತ್ತು ಇಬ್ಬರು ಮಕ್ಕಳು
      ಆತ್ಮಹತ್ಯೆಯ ಬಗ್ಗೆ ಒಂದು ಬಗೆಯ ಉಡಾಫೆತನ ನಮ್ಮಲ್ಲಿದೆ. ಆತ್ಮಹತ್ಯೆಯು ಸಮಸ್ಯೆಯನ್ನು ಪರಿಹರಿಸುವುದಿಲ್ಲ ಎಂಬುದು ಇದಕ್ಕಿರುವ ಕಾರಣಗಳಲ್ಲಿ ಒಂದಾದರೆ, ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಮಧ್ಯಮ ವರ್ಗ ಮತ್ತು ಬಡ ವರ್ಗದವರೇ ಹೆಚ್ಚಿರುವುದು ಇನ್ನೊಂದು. ಅತ್ತ 7 ಸಾವಿರ ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತವನ್ನು ಬ್ಯಾಂಕುಗಳಿಗೆ ಬಾಕಿ ಇರಿಸಿಕೊಂಡೂ ವಿಜಯ್ ಮಲ್ಯ ಆರಾಮವಾಗಿ ಲಂಡನ್‍ನಲ್ಲಿ ಜೀವನ ನಡೆಸುತ್ತಿರುವಾಗ ಇತ್ತ, ಜುಜುಬಿ ಸಾವಿರ, ಲಕ್ಷ ರೂಪಾಯಿ ಸಾಲ ಮಾಡಿಕೊಂಡ ರೈತರು ಮತ್ತು ಮಧ್ಯಮ ವರ್ಗದ ಮಂದಿ ಮರ್ಯಾದೆಗೋ ಬೆದರಿಕೆಗೋ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ, ವಿಜಯ್ ಮಲ್ಯಗೆ ಇಲ್ಲದ ಮರ್ಯಾದೆಯ ಭಯ ಜುಜುಬಿ ಮೊತ್ತವನ್ನು ಬಾಕಿ ಉಳಿಸಿಕೊಂಡವರಿಗೆ ಯಾಕೆ ಎದುರಾಗುತ್ತದೆ ಎಂಬ ಪ್ರಶ್ನೆಯ ಜೊತೆಜೊತೆಗೇ ಇಂಥ ಆತ್ಮಹತ್ಯೆಗಳನ್ನು ತಡೆಯುವುದಕ್ಕೆ ಪರಿಣಾಮಕಾರಿ ಪ್ರಯತ್ನಗಳು ನಡೆಯುತ್ತಿವೆಯೇ ಎಂಬ ಪ್ರಶ್ನೆಯನ್ನೂ ನಾವಿಲ್ಲಿ ಎತ್ತಬೇಕಾಗುತ್ತದೆ. ಕಳೆದ ವಾರ ಎರಡು ಸಾಮೂಹಿಕ ಆತ್ಮಹತ್ಯಾ ಪ್ರಕರಣಗಳು ನಡೆದುವು. ಒಂದು ಉಡುಪಿಯ ಪಡುಬೆಳ್ಳೆಯಲ್ಲಿ ನಡೆದರೆ ಇನ್ನೊಂದು ಕಲಬುರ್ಗಿಯಲ್ಲಿ. ಎರಡೂ ಮನೆಗಳು ಇವತ್ತು ಸ್ಮಶಾನವಾಗಿವೆ. ಮನೆಯ ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಡುಪಿಯ ಪ್ರಕರಣದಲ್ಲಿ ತಂದೆ-ತಾಯಿ ಮತ್ತು ಇಬ್ಬರು ಮಕ್ಕಳು ಪ್ರಾಣ ಕಳಕೊಂಡಂತೆಯೇ ಕಲಬುರ್ಗಿಯ ಪ್ರಕರಣದಲ್ಲೂ ಸಂಭವಿಸಿದೆ. ಬಾಳಿ, ಬದುಕಿ ಸಾಧನೆ ಮಾಡಬೇಕಾದ ಹರೆಯದ ನಾಲ್ಕೂ ಮಕ್ಕಳು ಈ ಆತ್ಮಹತ್ಯೆಯ ಭಾಗವಾಗಿದ್ದಾರೆ. ಈ ಮಕ್ಕಳು ಸ್ವಇಚ್ಛೆಯಿಂದ ಆತ್ಮಹತ್ಯೆಯಲ್ಲಿ ಭಾಗಿಯಾದರೋ ಅಥವಾ ಹೆತ್ತವರು ಇವರನ್ನು ವಂಚಿಸಿದರೋ ಗೊತ್ತಿಲ್ಲ. ಇವು ಏನೇ ಇದ್ದರೂ ಸತ್ತವರನ್ನು ಮರಳಿ ಕರೆತರಲು ನಮ್ಮಿಂದ ಸಾಧ್ಯವಿಲ್ಲ. ಆದರೆ ಇನ್ನಷ್ಟು ಆತ್ಮಹತ್ಯೆಗಳಾಗದಂತೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಕ್ಕೆ ಖಂಡಿತ ಸಾಧ್ಯವಿದೆ.
     ಆತ್ಮಹತ್ಯೆಗೂ ಸಹಜ ಸಾವಿಗೂ ನಡುವೆ ಒಂದು ಕಳವಳಕಾರಿ ವ್ಯತ್ಯಾಸ ಇದೆ. ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಏನನ್ನೋ ಹೇಳ ಬಯಸಿ ಹೋಗಿರುತ್ತಾನೆ. ಒಂದು ಆತ್ಮಹತ್ಯೆಯಲ್ಲಿ ‘ಆತ್ಮಹತ್ಯೆ’ ಎಂಬ ನಾಲ್ಕಕ್ಷರದಲ್ಲಿ ಕೊನೆಗೊಳಿಸಿ ಬಿಡುವುದಕ್ಕಿಂತ ಹೆಚ್ಚಿನ ಅಂಶಗಳಿರುತ್ತವೆ. ಆತನ/ಕೆ/ಯ ಸಾವಿಗೆ ಸಮಾಜ ಕಾರಣವಾಗಿರಬಹುದು ಅಥವಾ ವ್ಯವಸ್ಥೆ ಕಾರಣವಾಗಿರಬಹುದು. ಆದ್ದರಿಂದ ಆತ್ಮಹತ್ಯೆಗಳು ಉಡಾಫೆತನದ ಪ್ರತಿಕ್ರಿಯೆಗಿಂತ ಹೊರಗೆ ನಮ್ಮನ್ನು ಕೊಂಡೊಯ್ಯಬೇಕು. ಉಡುಪಿಯ ಆತ್ಮಹತ್ಯೆ ಪ್ರಕರಣದಲ್ಲಿ ಬ್ಯಾಂಕ್‍ನ ಸಾಲ ಮತ್ತು ಸಾಲ ಪಡೆಯಲು ಅನುಸರಿಸಲಾದ ಕ್ರಮಗಳು ಮುಖ್ಯ ಕಾರಣ ಎಂದು ಹೇಳಲಾಗುತ್ತದೆ. ಇದು ಅಲ್ಲದೆಯೂ ಇರಬಹುದು. ಒಂದು ವೇಳೆ ಇದುವೇ ನಿಜವಾದ ಕಾರಣ ಎಂದಾದರೆ, ಆ ಇಡೀ ಪ್ರಕರಣದಲ್ಲಿ ಆ ಕುಟುಂಬದ ಎಲ್ಲರ ಪಾತ್ರ ಇರುವ ಸಾಧ್ಯತೆ ಖಂಡಿತ ಇಲ್ಲ. ಇನ್ನು ಆ ಕುಟುಂಬದ ಹೊರಗಿನ ವ್ಯಕ್ತಿಗಳ ನೆರವಿಲ್ಲದೇ ಅಂಥ ಸಾಲ ಮಂಜೂರಾತಿ ನಡೆಯುವುದಕ್ಕೂ ಸಾಧ್ಯವಿಲ್ಲ. ಬ್ಯಾಂಕ್‍ನ ಸಾಲ, ಅದರ ಬಡ್ಡಿ ಮತ್ತು ಮತ್ತದರ ಪಾವತಿಯಲ್ಲಿ ಒಂದು ಪುಟ್ಟ ಕುಟುಂಬ ಮಾತ್ರ ಅಪರಾಧಿ ಭಾವದಲ್ಲೋ ಮರ್ಯಾದೆಗೆ ಅಂಜಿಯೋ ಬದುಕು ಕೊನೆಗೊಳಿಸುವುದು ಯಾವ ಕೋನದಲ್ಲಿ ವ್ಯಾಖ್ಯಾನಕ್ಕೆ ಒಳಗಾಗಬೇಕು? ಬ್ಯಾಂಕ್‍ಗಳು ಸಾಲ ಕೊಡುವಾಗ ಮುಖ್ಯವಾಗಿ ಚರ್ಚೆಗೆ ಬರುವುದೇ ಬಡ್ಡಿ. ಪಡಕೊಳ್ಳುವ ಸಾಲಕ್ಕೆ ಎಷ್ಟು ಶೇಕಡಾ ಬಡ್ಡಿ ವಿಧಿಸಲಾಗುತ್ತದೆ ಎಂಬುದರ ಆಧಾರದಲ್ಲಿ ಯಾವ ಬ್ಯಾಂಕ್‍ನಿಂದ ಸಾಲ ಪಡೆಯಬೇಕು ಎಂಬುದು ನಿರ್ಧಾರವಾಗುತ್ತದೆ. ಇದಲ್ಲದೇ ಖಾಸಗಿ ಹಣಕಾಸು ಸಂಸ್ಥೆಗಳೂ ಸಾಲ ಕೊಡುತ್ತವೆ. ಕೈಗಡ ನೀಡುವವರೂ ಇದ್ದಾರೆ. ಇವಕ್ಕೆಲ್ಲಾ ಬಡ್ಡಿಯೇ ಷರತ್ತಾಗಿರುತ್ತದೆ. ಒಂದು ವೇಳೆ, ಸಾಲ ಪಡಕೊಂಡ ವ್ಯಕ್ತಿಯ ನಿರೀಕ್ಷೆಗೆ ತಕ್ಕಂತೆ ಆ ಬಳಿಕದ ಬೆಳವಣಿಗೆಗಳು ನಡೆಯದೇ ಹೋದರೆ, ಅದರ ಹೊಣೆಯನ್ನು ಯಾವ ಸಾಲ ಸಂಸ್ಥೆಗಳೂ ವಹಿಸಿಕೊಳ್ಳುವುದಿಲ್ಲ. ಸಾಲವಾಗಿ ಪಡೆದುಕೊಂಡ ದುಡ್ಡನ್ನು ಓರ್ವ ಗದ್ದೆಗೆ ಸುರಿಯಬಹುದು. ಇನ್ನೋರ್ವ ವ್ಯಾಪಾರಕ್ಕೆ ಹೂಡಿಕೆ ಮಾಡಬಹುದು. ಮತ್ತೋರ್ವ ಕೈಗಾರಿಕೆಯಲ್ಲಿ ತೊಡಗಿಸಿಕೊಳ್ಳಬಹುದು. ಒಂದು ವೇಳೆ, ಗದ್ದೆ ನಿರೀಕ್ಷಿತ ಫಸಲು ಕೊಡದೇ ಹೋದರೆ, ಆ ಬಳಿಕದ ಸರ್ವ ಸವಾಲುಗಳನ್ನೂ ರೈತನೇ ಹೊತ್ತುಕೊಳ್ಳಬೇಕು. ಒಂದು ಕಡೆ ತಿಂಗಳು ತಿಂಗಳು ಸಾಲದ ಮೊತ್ತವನ್ನು ಬ್ಯಾಂಕ್‍ಗೆ ಸಂದಾಯ ಮಾಡಬೇಕಾಗುತ್ತದೆ. ಇನ್ನೊಂದು ಕಡೆ, ಸಂಸಾರದ ಮೇಲೆ ಭಾರ ಬೀಳದಂತೆ ನೋಡಿಕೊಳ್ಳಬೇಕಾಗುತ್ತದೆ. ಹಾಗಂತ ಸುಮ್ಮನೆ ಕೂರುವಂತಿಲ್ಲ. ಮತ್ತೆ ಗz್ದÉಯಲ್ಲಿ ಉಳುಮೆ ಮಾಡಿ ಬೀಜ ಬಿತ್ತಬೇಕಾಗುತ್ತದೆ. ಪುನಃ ಹಣ ಹೊಂದಿಸಬೇಕಾಗುತ್ತದೆ. ಸಾಲ ಮಾಡಬೇಕಾಗುತ್ತದೆ. ದುರಂತ ಏನೆಂದರೆ, ಸಾಲ ನೀಡಿ ಬೇಸಾಯಕ್ಕೆ ಉತ್ತೇಜನ ನೀಡಿದ ಬ್ಯಾಂಕ್ ಅ ಬಳಿಕದ ಈ ಎಲ್ಲ ಸವಾಲುಗಳ ಸಂದರ್ಭದಲ್ಲೂ ಅತ್ಯಂತ ನಿರ್ದಯವಾಗಿ ವರ್ತಿಸುತ್ತದೆ. ಸಾಲ ಪಡಕೊಂಡವನಿಗೂ ತನಗೂ ಮಾನವೀಯವಾದ ಯಾವ ಸಂಬಂಧವೂ ಇಲ್ಲ ಎಂಬಂತೆ ನಡಕೊಳ್ಳುತ್ತದೆ. ಫಸಲು ಬರಲಿ, ಬರದೇ ಇರಲಿ ಬಡ್ಡಿ ಸಹಿತ ಸಾಲ ಮರುಪಾವತಿ ಮಾಡದೇ ಇರುವುದನ್ನು ಅದು ದಂಡನಾತ್ಮಕ ಅಪರಾಧವಾಗಿ ಪರಿಗಣಿಸುತ್ತದೆ. ಇದೊಂದು ಉದಾಹರಣೆಯಷ್ಟೇ. ಹೆಚ್ಚಿನ ಆತ್ಮಹತ್ಯೆ ಪ್ರಕರಣಗಳು ಯಾವುದೋ ಧೈರ್ಯ, ಸಾಂತ್ವನ, ಮಾನವೀಯ ಸ್ಪರ್ಶಗಳನ್ನು ಬಯಸಿ, ಅದು ಸಿಗದೆ ನಿರಾಶವಾಗಿ ಮಾಡಿಕೊಂಡವು ಅನ್ನುವುದು ಸ್ಪಷ್ಟ. ರೈತ ಆತ್ಮಹತ್ಯೆಗಳಲ್ಲಂತೂ ಇದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಸಾಲ ವಸೂಲಾತಿಯಲ್ಲಿ ಬ್ಯಾಂಕ್‍ಗಳು ನಿಷ್ಠುರವಾದಂತೆಲ್ಲಾ  ಸಾಲ ಪಡಕೊಂಡ ರೈತ ದುರ್ಬಲವಾಗುತ್ತಾ ಹೋಗುತ್ತಾನೆ. ಆತನ ಎದುರು ನಿರೀಕ್ಷೆಯ ದಾರಿಗಳೆಲ್ಲ ಮುಚ್ಚಿಕೊಳ್ಳುತ್ತಾ ಹೋಗತೊಡಗುತ್ತವೆ. ಪಡೆದ ಸಾಲಕ್ಕಿಂತ ಬಡ್ಡಿಯ ಮೊತ್ತವೇ ಹೆಚ್ಚಾಗುವುದನ್ನು ಪ್ರಶ್ನಿಸಲಾಗದೇ ಮತ್ತು ಬಡ್ಡಿರಹಿತ ಮಾನವೀಯ ಸಾಲ ಯೋಜನೆಗಳೆಂಬ ಪರ್ಯಾಯವು ಇಲ್ಲದೇ ಆತ ಕುಸಿಯತೊಡಗುತ್ತಾನೆ. ಅದೇ ವೇಳೆ, ಕೋಟ್ಯಾಂತರ ಲೆಕ್ಕದಲ್ಲಿ ಸಾಲ ಪಡೆಯುವ ಬೃಹತ್ ಶ್ರೀಮಂತ ವರ್ಗವು ಆಡಳಿತಗಾರರೊಂದಿಗೆ ಸಲುಗೆಯನ್ನು ಬೆಳೆಸಿಕೊಂಡು ತಮಗೆ ಪೂರಕವಾದ ನೀತಿಗಳನ್ನು ಜಾರಿಗೆ ಬರುವಂತೆ ನೋಡಿಕೊಳ್ಳುತ್ತಾ, ಸಾಲ ಮನ್ನಾ ಮಾಡಿಸಿಕೊಳ್ಳುತ್ತಾ ಬದುಕುತ್ತವೆ.
     ಆತ್ಮಹತ್ಯೆ ಯಾವ ಕಾರಣಕ್ಕೂ ಯಾವ ಸಮಸ್ಯೆಗೂ ಪರಿಹಾರ ಅಲ್ಲ. ಹಾಗಂತ, ಆತ್ಮಹತ್ಯೆಯ ಬಗ್ಗೆ ಉಡಾಫೆತನ ತೋರುವುದೂ ತಪ್ಪು. ಇವತ್ತು ಜಾಗತೀಕರಣ ಮತ್ತು ಕೊಳ್ಳುಬಾಕ ಸಂಸ್ಕೃತಿಯು ಆತ್ಮಹತ್ಯೆಯನ್ನು ಒಂದು ಆಯ್ಕೆಯಾಗಿಯೂ ಜನರ ಮುಂದೆ ಇಟ್ಟಿದೆ. ಮರ್ಯಾದೆ, ಸ್ವಾಭಿಮಾನ, ಘನತೆಯಿಂದ ಬದುಕುವ ಮಂದಿಯನ್ನು ಅದು ಆಮಿಷಕ್ಕೆ ಕೆಡವಿ ಕೊನೆಗೆ ತತ್ತರಿಸುವಂತೆ ಮಾಡುತ್ತಿದೆ. ಆದ್ದರಿಂದ ನೇಣು ಬಿಗಿದುಕೊಂಡ ರೀತಿಯ ಸಾವು ಬಾಹ್ಯನೋಟಕ್ಕೆ ನಮಗೆ ಆತ್ಮಹತ್ಯೆಯಂತೆ ಕಂಡರೂ ವಾಸ್ತವ ಹಾಗಿರಬೇಕಿಲ್ಲ. ಅಲ್ಲೊಬ್ಬ ಕೊಲೆಗಾರ ಇರುತ್ತಾನೆ. ಆತ ಬರಿಗಣ್ಣಿಗೆ ಕಾಣಿಸುವುದಿಲ್ಲ. ಸದ್ಯ ಆತನನ್ನು ಜನರ ಮುಂದಿಟ್ಟು ಚರ್ಚಿಸುವ ಗಂಭೀರ ಪ್ರಯತ್ನಗಳಾಗಬೇಕಾಗಿದೆ. ಉಡುಪಿ ಮತ್ತು ಕಲಬುರ್ಗಿ ಪ್ರಕರಣಗಳು ಅಂಥ ಚರ್ಚೆಗೆ ಇನ್ನೊಂದು ಅವಕಾಶವನ್ನು ಒದಗಿಸಿದೆ.


No comments:

Post a Comment