Wednesday 24 June 2020

ಜನಪ್ರತಿನಿಧಿಗಳೇ, ಪ್ರಶ್ನಿಸಲೇಬೇಕಾದ ಸಂದರ್ಭದಲ್ಲಿ ಯಾಕೆ ಮೌನವಾದಿರಿ?



ಕೊರೋನಾ ಲಾಕ್‍ಡೌನ್‍ನಿಂದಾಗಿ ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿದ್ದ ಕನ್ನಡಿಗರ ಪೈಕಿ 175 ಮಂದಿಯನ್ನು ಬಾಡಿಗೆ ವಿಮಾನದಲ್ಲಿ ಊರಿಗೆ ಕಳುಹಿಸಿದ ಬಶೀರ್ ಸಾಗರ್ ಮತ್ತು ಅಲ್ತಾಫ್ ಉಳ್ಳಾಲ್ ಎಂಬ ಉದ್ಯಮಿಗಳು ರಾಜ್ಯಾದ್ಯಂತ ಶ್ಲಾಘನೆಗೆ ಒಳಗಾಗಿದ್ದಾರೆ. ಅವರು ನಡೆಸುತ್ತಿರುವ ಸಾಕೋ ಕಂಪೆನಿ ಕನ್ನಡಿಗರ ಮನೆಮಾತಾಗಿದೆ. ಅವರು ಬಾಡಿಗೆ ವಿಮಾನದ ವೆಚ್ಚವನ್ನು ಭರಿಸಿದ್ದಷ್ಟೇ ಅಲ್ಲ, ಪ್ರತಿಯೊಬ್ಬರ ಪ್ರಯಾಣ ವೆಚ್ಚವನ್ನೂ ಭರಿಸಿದ್ದಾರೆ. ಮಾತ್ರವಲ್ಲ, ಹೀಗೆ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ ಬಳಿಕ ನಡೆದ ಕೊರೋನಾ ಪರೀಕ್ಷಾ ಶುಲ್ಕ, ಕ್ವಾರಂಟೈನ್‍ಗೆ ಬೇಕಾದ ಕೊಠಡಿ ವ್ಯವಸ್ಥೆ, ಆಹಾರ ಎಲ್ಲವುಗಳ ವೆಚ್ಚವನ್ನೂ ಅವರೇ ಭರಿಸಿದ್ದಾರೆ. ಇದು ಸಾಮಾನ್ಯ ಸಂಗತಿಯಲ್ಲ. ಲಾಕ್‍ಡೌನ್‍ನಿಂದಾಗಿ ಉದ್ಯಮಿಗಳು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ತಮಗೆ ಸಂಬಂಧಿಸಿಯೇ ಇಲ್ಲದ ಜನರಿಗಾಗಿ ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡುವುದಕ್ಕೆ ವಿಶಾಲ ಹೃದಯ ಬೇಕು. ಒಂದುವೇಳೆ, ಈ ಸಾಹಸಕ್ಕೆ ಕೈ ಹಾಕದೇ ಇರುತ್ತಿದ್ದರೆ ಅವರು ಕಳಕೊಳ್ಳುವುದಕ್ಕೇನೂ ಇರಲಿಲ್ಲ. ಬದಲಾಗಿ ಈ ಕಷ್ಟಕಾಲದಲ್ಲಿ ಲಕ್ಷಾಂತರ ರೂಪಾಯಿಗಳು ಅವರ ಪಾಲಿಗೆ ಉಳಿಕೆಯಾಗುತ್ತಿತ್ತು. ಆದ್ದರಿಂದಲೇ, 
\ರಾಜ್ಯದ ಮಂದಿ ಈ ಉದ್ಯಮಿಗಳನ್ನು ಅಭಿಮಾನದಿಂದ ನೋಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ದ.ಕ. ಜಿಲ್ಲೆಯ ಬಿಜೆಪಿ ಶಾಸಕರುಗಳಾದ ವೇದವ್ಯಾಸ್ ಕಾಮತ್, ರಾಜೇಶ್ ನಾಯ್ಕ್ ಉಳೇಪಾಡಿಯವರೂ ಅಭಿನಂದಿಸಿದ್ದಾರೆ. ಅವರ ಸೇವಾ ಮನೋಭಾವವನ್ನು ಕೊಂಡಾಡಿದ್ದಾರೆ.
ಒಳ್ಳೆಯ ಕೆಲಸವನ್ನು ಯಾರು ಮಾಡಿದರೂ ಅದನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಒಟ್ಟು ಅಭಿವೃದ್ಧಿಯ ದೃಷ್ಟಿಯಿಂದ ಬಹಳ ಅಗತ್ಯ. ಇಂತಹ ಬೆಳವಣಿಗೆಯು ಇನ್ನಷ್ಟು ಸಮಾಜ ಸೇವಕರ ತಯಾರಿಗೆ ವೇದಿಕೆಯನ್ನು ಸೃಷ್ಟಿಸುತ್ತದೆ. ಇಂಥವರನ್ನು ನೋಡಿ ಬೆಳೆಯುವ ಯುವ ಪೀಳಿಗೆಯು ನಾವು ಹೀಗೆ ಇತರರಿಗೆ ನೆರವಾಗಬೇಕು ಎಂಬ ಬಯಕೆಯೊಂದನ್ನು ಒಳಗೊಳಗೇ ಬಚ್ಚಿಟ್ಟುಕೊಂಡು ಬೆಳೆಯುತ್ತವೆ. ಅವುಗಳು ಮುಂದೊಂದು ದಿನ ಫಲ ಕೊಡುವುದಕ್ಕೂ ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಶಾಸಕರುಗಳ ಶ್ಲಾಘನೆ ಮತ್ತು ಗುರುತಿಸುವಿಕೆ ಅತ್ಯಂತ ಸಕಾಲಿಕ. ಆದರೆ,
 ಒಳಿತನ್ನು ಗುರುತಿಸಿ ಪ್ರೋತ್ಸಾಹಿಸುವಂತೆಯೇ ಕೆಡುಕನ್ನು ವಿರೋಧಿಸುವ ಮತ್ತು ಧರ್ಮಾತೀತವಾಗಿ ಖಂಡಿಸುವ ಪ್ರಕ್ರಿಯೆಗಳೂ ನಡೆಯಬೇಕು. ಒಳಿತನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಒಳಿತು ಹೇಗೆ ಪ್ರಚಾರಗೊಳ್ಳುತ್ತದೋ ಕೆಡುಕನ್ನು ವಿರೋಧಿಸಿ ಖಂಡಿಸುವುದರಿಂದ ಕೆಡುಕಿನ ಹರಡುವಿಕೆಗೂ ತಡೆ ಬೀಳುತ್ತದೆ. ಒಳಿತನ್ನು ಪ್ರೋತ್ಸಾಹಿಸುವ ಮತ್ತು ಕೆಡುಕನ್ನು ವಿರೋಧಿಸುವ ಈ ಎರಡೂ ಪ್ರಕ್ರಿಯೆಗಳು ಒಟ್ಟೊಟ್ಟಿಗೆ ನಡೆಯಬೇಕಾದವು. ವಿಷಾದ ಅನ್ನಿಸುವುದೂ ಇಲ್ಲೇ. 
ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಶಾಸಕರು ಒಳಿತನ್ನು ಶ್ಲಾಘಿಸಿದ ರೀತಿಯಲ್ಲಿಯೇ ಕೆಡುಕನ್ನೂ ವಿರೋಧಿಸಬೇಕು ಎಂದು ರಾಜ್ಯದ ಮಂದಿ ಬಯಸುವುದು ಸಹಜ. ಜನಪ್ರತಿನಿಧಿಗಳೆಂಬ ನೆಲೆಯಲ್ಲಿ ಅವರಿಂದ ಇಂತಹ ಬಯಕೆಯನ್ನು ನಿರೀಕ್ಷಿಸುವುದು ಅಪರಾಧವೂ ಅಲ್ಲ. ಆದರೆ ಈ ನಿರೀಕ್ಷೆ ಈಡೇರುತ್ತಿಲ್ಲ ಅನ್ನುವ ಸಂಕಟ ಜನರಲ್ಲಿದೆ. ಸೌದಿಯಿಂದ 175 ಪ್ರಯಾಣಿಕರು ಮಂಗಳೂರು ತಲುಪಿದ ಎರಡು ದಿನಗಳಾದ ಬಳಿಕ ಇದೇ ಮಂಗಳೂರಿನಲ್ಲಿ ಮುಹಮ್ಮದ್ ಹನೀಫ್ ಎಂಬವರ ಮೇಲೆ ದುಷ್ಕರ್ಮಿಗಳು ತೀವ್ರ ಹಲ್ಲೆ ನಡೆಸಿದ್ದಾರೆ. ಕೈಯಲ್ಲಿ ರಾಡ್, ತಲವಾರು, ದೊಣ್ಣೆಗಳನ್ನು ಹಿಡಿದಿದ್ದ 20ರಿಂದ 25ರಷ್ಟಿದ್ದ ದುಷ್ಕರ್ಮಿಗಳ ಗುಂಪು ಮುಹಮ್ಮದ್ ಹನೀಫ್‍ರನ್ನು ಅವರ ವಾಹನಕ್ಕೆ ಕಟ್ಟಿ ಹಾಕಿ ಥಳಿಸಿದೆ. ಪೊಲೀಸರು ಬಂದಾಗ ಈ ಗುಂಪು ಪರಾರಿಯಾಗಿದೆ. ವೈದ್ಯಾಧಿಕಾರಿಗಳಿಂದ ‘ಪ್ರಾಣಿ ಆರೋಗ್ಯ ಪ್ರಮಾಣ ಪತ್ರ’ವನ್ನು ಪಡೆದುಕೊಂಡು ಹಾವೇರಿಯ ಕೃಷಿ ಮಾರುಕಟ್ಟೆಯಿಂದ 4 ಎಮ್ಮೆಗಳನ್ನು ಕಾನೂನುಬದ್ಧವಾಗಿಯೇ ಸಾಗಿಸುತ್ತಿದ್ದೇನೆ ಎಂದವರು ಹೇಳಿದ್ದಾರೆ. ಇದೇವೇಳೆ, ಬಂಧನಕ್ಕೀಡಾದ ಆರು ಮಂದಿ ಆರೋಪಿಗಳು ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ಹಾಗಂತ,
ಜಾನುವಾರು ಸಾಗಾಟದ ನೆಪದಲ್ಲಿ ಥಳಿತ, ಹಲ್ಲೆ, ಹತ್ಯೆ ಜಿಲ್ಲೆಗೆ ಹೊಸತಲ್ಲ. ಕಾನೂನನ್ನು ಕೈಗೆತ್ತಿಕೊಳ್ಳುವುದು ಅಪರಾಧ ಎಂದು ಗೊತ್ತಿದ್ದೂ ಮತ್ತೆ ಮತ್ತೆ ಇಂಥ ಕ್ರೌರ್ಯಗಳು ನಡೆಯುವುದಕ್ಕೆ ಕಾರಣ ಏನು ಮತ್ತು ಈ ಕ್ರೌರ್ಯದಲ್ಲಿ ಭಾಗಿಯಾದವರು ತಕ್ಷಣ ಜಾಮೀನು ಪಡೆದು ಹೊರಬರುವುದರ ಹಿಂದಿನ ಗುಟ್ಟೇನು ಅನ್ನುವುದು ಅಲ್ತಾಫ್ ಮತ್ತು ಬಶೀರ್ ರನ್ನು ಕೊಂಡಾಡಿದ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮತ್ತು ಜಿಲ್ಲೆಯ ಶಾಸಕರುಗಳಿಗೆ ತಿಳಿಯದ ವಿಷಯವೂ ಅಲ್ಲ. ಮುಹಮ್ಮದ್ ಹನೀಫ್ ಅವರು ಕಾನೂನು ಉಲ್ಲಂಘಿಸಿ ಜಾನುವಾರು ಸಾಗಾಟ ಮಾಡುತ್ತಿದ್ದಾರೆಂದರೆ, ಅದನ್ನು ನೋಡಿಕೊಳ್ಳುವುದಕ್ಕೆ ಪೊಲೀಸ್ ಇಲಾಖೆ ಇದೆ. ನ್ಯಾಯಾಲಯ ಇದೆ. ಅದರ ಹೊರತಾಗಿ ಯಾವ ಖಾಸಗಿ ಗುಂಪುಗಳಿಗೂ ಈ ಹೊಣೆಯನ್ನು ವಹಿಸಿಕೊಡಲಾಗಿಲ್ಲ. ಯಾರಾದರೂ ಕಾನೂನು ಉಲ್ಲಂಘನೆ ಮಾಡುತ್ತಿರುವ ಅನುಮಾನ ಮೂಡಿದರೆ, ಜವಾಬ್ದಾರಿಯುತ ನಾಗರಿಕರಾಗಿ ನಾವು ಮಾಡಬಹುದಾದ ಅತಿಶ್ರೇಷ್ಟ ದೇಶಸೇವೆಯೆಂದರೆ, ಆ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ಕೊಡುವುದು. ಇದರ ಹೊರತಾಗಿ ಸ್ವಯಂ ಪೊಲೀಸರಾಗುವುದು, ಕಾನೂನನ್ನು ಕೈಗೆತ್ತಿಕೊಳ್ಳುವುದು ಅಪರಾಧ. ಇದು ಅಲ್ತಾಫ್ ಮತ್ತು ಬಶೀರ್ ನ್ನು ಕೊಂಡಾಡಿದ ಜಿಲ್ಲೆಯ ಸಂಸದರು ಮತ್ತು ಶಾಸಕರಿಗೆ ಖಂಡಿತ ಗೊತ್ತಿದೆ. ಆದರೆ ಈವರೆಗೂ ಇವರಾರೂ ಈ ಅಮಾನವೀಯ ಕ್ರೌರ್ಯದ ವಿರುದ್ಧ ಮಾತಾಡಿಲ್ಲ. ಇದು ಸಾರುವ ಸಂದೇಶ ಏನು?
ಮೊನ್ನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ 175 ಪ್ರಯಾಣಿಕರ ಪೈಕಿ ಸಾಕೋ ಕಂಪೆನಿಯ ಒಬ್ಬನೇ ಒಬ್ಬ ಸಿಬ್ಬಂದಿ ಅಥವಾ ಅವರ ಸಂಬಂಧಿಕರು ಇರಲಿಲ್ಲ. ಒಂದೇ ಧರ್ಮದವರೂ ಇರಲಿಲ್ಲ. ಗರ್ಭಿಣಿಯರು, ವಿಸಿಟ್ ವೀಸಾದಲ್ಲಿ ಬಂದು ಲಾಕ್‍ಡೌನ್ ಕಾರಣದಿಂದ ಸಿಲುಕಿಕೊಂಡ ಹಿರಿಯ ನಾಗರಿಕರು, ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯ ಇರುವವರು, ಕೆಲಸ ಕಳೆದುಕೊಂಡು ಕಂಗಾಲಾಗಿರುವವರು ಮುಂತಾದ ಮನುಷ್ಯರಷ್ಟೇ ಅವರಾಗಿದ್ದರು. ಅವರನ್ನು 61 ಹಿರಿಯ ನಾಗರಿಕರು, 55 ಗರ್ಭಿಣಿಯರು, 20 ಮಂದಿ ತುರ್ತು ಚಿಕಿತ್ಸೆ ಅಗತ್ಯವಿರುವವರು, 35 ಮಕ್ಕಳು- ಹೀಗೆ ಗುರುತಿಸಲಾಗಿತ್ತೇ ಹೊರತು ಅವರ ಧರ್ಮ, ಭಾಷೆ, ರಾಜಕೀಯ ಒಲವುಗಳು ಗುರುತಿಸುವಿಕೆಯ ಮಾನದಂಡವಾಗಿರಲೇ ಇಲ್ಲ. ಸಂಸದರು ಮತ್ತು ಶಾಸಕರು ಈ ಬೆಳವಣಿಗೆಯನ್ನು ಮೆಚ್ಚಿಕೊಂಡೂ ಇದ್ದಾರೆ. ಆದ್ದರಿಂದಲೇ,
 ಈ ಸಂಸದರು ಮತ್ತು ಶಾಸಕರಿಂದ ರಾಜ್ಯದ ಜನರು ಇನ್ನಷ್ಟನ್ನು ನಿರೀಕ್ಷಿಸುವುದು. ಕೆಡುಕನ್ನು ಖಂಡಿಸುವ ವಿಚಾರದಲ್ಲೂ ಇವರು ಇದೇ ಮಾನದಂಡವನ್ನು ಅನುಸರಿಸಬೇಕು ಎಂದು ಬಯಸುವುದು. ಆದರೆ,
ಈ ಬಯಕೆ ಪದೇ ಪದೇ ವಿಫಲವಾಗುತ್ತಿದೆ. ಜಾನುವಾರು ಸಾಗಾಟದ ಹೆಸರಲ್ಲಿ, ಯುವಕ-ಯುವತಿಯರ ಮಾತುಕತೆಯ ಹೆಸರಲ್ಲಿ, ‘ಲವ್ ಜಿಹಾದ್’ ಆರೋಪದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ  ಅನೇಕ ಥಳಿತದ ಘಟನೆಗಳು ನಡೆದಿವೆ, ಬೆತ್ತಲೆ ಮಾಡಲಾಗಿದೆ, ಮಾರಣಾಂತಿಕವಾಗಿ ಗಾಯಗೊಳಿಸಲಾಗಿದೆ. ಹತ್ಯೆಯೂ ನಡೆದಿದೆ. ಆದರೆ, ಬಶೀರ್ ಮತ್ತು ಅಲ್ತಾಫ್ ಅವರ ಒಳಿತಿನ ಕೆಲಸವನ್ನು ಶ್ಲಾಘಿಸಿರುವ ಈ ಸಂಸದರಾಗಲಿ, ಶಾಸಕರಾಗಲಿ, ಇವಾವುದನ್ನೂ ಖಂಡಿಸಬೇಕಾದ ರೀತಿಯಲ್ಲಿ ಖಂಡಿಸಲೇ ಇಲ್ಲ. ಯಾಕೆ ಹೀಗೆ? ಥಳಿತಕ್ಕೊಳಗಾಗುತ್ತಿರುವವರು ಒಂದು ಧರ್ಮದವರು ಮತ್ತು ಥಳಿಸುವವರು ಇನ್ನೊಂದು ಧರ್ಮದವರು ಎಂಬುದು ಇದಕ್ಕೆ ಕಾರಣವೇ? ತನ್ನದಲ್ಲದ ಧರ್ಮದವರ ಮೇಲೆ ಅನ್ಯಾಯ ನಡೆಯುವುದು ಸಹ್ಯವೇ? ಅನ್ಯಾಯಕ್ಕೂ ಧರ್ಮಕ್ಕೂ ಏನು ಸಂಬಂಧ? ಕೆಡುಕಿಗೂ ಧರ್ಮಕ್ಕೂ ಏನು ಸಂಬಂಧ? ಒಂದುವೇಳೆ, 
ಒಳಿತನ್ನು ಧರ್ಮಾಧಾರಿತವಾಗಿ ಮಾಡುವುದಾಗಿದ್ದರೆ ಅದನ್ನು ಅಲ್ತಾಫ್ ಮತ್ತು ಬಶೀರ್ ಗೆ ಮಾಡಬಹುದಿತ್ತು. ಒಂದೇ ಧರ್ಮದವರನ್ನು ಹುಡುಕಿ ಊರಿಗೆ ಕಳುಹಿಸಬಹುದಿತ್ತು. ಅಲ್ಲದೇ ಅವರು ಜನಪ್ರತಿನಿಧಿಗಳೂ ಅಲ್ಲ, ಉದ್ಯಮಿಗಳು. ಜನಪ್ರತಿನಿಧಿಗಳಂತೆ ಜನರಿಗೆ ಅವರು ಉತ್ತರದಾಯಿಗಳೂ ಅಲ್ಲ. ಆದರೆ ಅವರು ಒಳಿತಿನ ವಿಚಾರದಲ್ಲಿ ಧರ್ಮವನ್ನು ನೋಡಲಿಲ್ಲ. ಅಲ್ಲಿ ಆಯ್ಕೆಗೆ ಕಷ್ಟವೇ ಮಾನದಂಡವಾಗಿತ್ತು. ಧರ್ಮವಲ್ಲ. ನಿಜವಾಗಿ, 
ಕೆಡುಕನ್ನು ವಿರೋಧಿಸುವುದಕ್ಕೂ ಇದುವೇ ಮಾನದಂಡವಾಗಬೇಕು. ಕೆಡುಕಿಗೆ ಧರ್ಮವಿಲ್ಲ. ಅದುವೇ ಒಂದು ಧರ್ಮ. ಆದರೆ, ಜಿಲ್ಲೆಯ ಸಂಸದರು ಮತ್ತು ಶಾಸಕರುಗಳು ಕೆಡುಕನ್ನು ಧರ್ಮದ ಆಧಾರದಲ್ಲಿ ನೋಡುತ್ತಿರುವಂತಿದೆ. ಆದ್ದರಿಂದಲೇ ಮುಹಮ್ಮದ್ ಹನೀಫ್‍ರ ಮೇಲಾದ ಹಲ್ಲೆಯನ್ನು ಖಂಡಿಸುತ್ತಿಲ್ಲ. ಆರೋಪಿಗಳ ವಿರುದ್ಧ ಕಠಿಣ ಕಲಂಗಳಡಿ ಕೇಸು ದಾಖಲಿಸಿ ಎಂದು ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರುತ್ತಿಲ್ಲ. ಇದು ವಿಷಾದನೀಯ. ಒಂದೆಡೆ ಒಳಿತನ್ನು ಶ್ಲಾಘಿಸಿದ ಅದೇ ಜನಪ್ರತಿನಿಧಿಗಳು ಇನ್ನೊಂದು ಕಡೆ ಕೆಡುಕನ್ನು ಕಂಡೂ ಮೌನವಾಗುತ್ತಾರೆಂದರೆ, ಅವರ ಶ್ಲಾಘನೆಯನ್ನೇ ಅನುಮಾನಿಸಬೇಕಾಗುತ್ತದೆ.

No comments:

Post a Comment