Saturday 3 February 2024

ಅಪರಾಧಿಗಳು ಮತ್ತು ಪ್ರಭುತ್ವದ ಅನೈತಿಕ ನಂಟಿನ ಅನಾವರಣ




`ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳು ಜೈಲಿನಿಂದ ಹೊರಗಿರುವುದಕ್ಕೆ ಅನರ್ಹರು' ಎಂದು ಸುಪ್ರೀಮ್ ಕೋರ್ಟು ತೀರ್ಪು  ನೀಡುತ್ತಿದ್ದ ಹೊತ್ತಿನಲ್ಲೇ, 20 ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿರುವ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಬಿಡುಗಡೆಯ ಭಾಗ್ಯ  ಸಿಕ್ಕಿದೆ. ಈತ ಸ್ವಘೋಷಿತ ಧಾರ್ಮಿಕ ನಾಯಕ. ದೇರಾ ಸಚ್ಚಾ ಸೌದಾ ಪಂಥದ ಮುಖ್ಯಸ್ಥ. ಬಿಜೆಪಿಯೊಂದಿಗೆ ನಿಕಟ ಸಂಬಂಧ ಇರುವ  ವ್ಯಕ್ತಿಯಾಗಿಯೂ ಗುರುತಿಸಿಕೊಂಡಿದ್ದಾನೆ. ತನ್ನ ಆಶ್ರಮದಲ್ಲಿರುವ ಇಬ್ಬರ ಮೇಲೆ ಅತ್ಯಾಚಾರ ಎಸಗಿದ ಅಪರಾಧಕ್ಕಾಗಿ ಸಿಬಿಐ  ನ್ಯಾಯಾಲಯದಿಂದ ದೋಷಿ ಎಂದು ಘೋಷಿಸಲ್ಪಟ್ಟವ. ಹರ್ಯಾಣದ ರೋಹ್ಟಕ್ ಜಿಲ್ಲೆಯ ಸುನರಿಯಾ ಜೈಲಿನಲ್ಲಿ ಕಳೆದ  2017ರಿಂದಲೂ ಬಂಧಿಯಾಗಿರುವ ಈತನಿಗೆ ನ್ಯಾಯಾಲಯವು 50 ದಿನಗಳ ಪೆರೋಲನ್ನು (ಬಿಡುಗಡೆ) ಮಂಜೂರು ಮಾಡಿದೆ.  ಹಾಗಂತ,

ಇದು ಮೊದಲ ಪೆರೋಲ್ ಅಲ್ಲ. ಇದು ಕಳೆದ 24 ತಿಂಗಳುಗಳಲ್ಲಿ ಈತನಿಗೆ ಲಭಿಸಿರುವ 7ನೇ ಪೆರೋಲ್ ಮತ್ತು ಕಳೆದ ನಾಲ್ಕು  ವರ್ಷಗಳಲ್ಲಿ ಸಿಕ್ಕಿರುವ 9ನೇ ಪೆರೋಲ್ ಕೂಡಾ ಹೌದು. ಕೇವಲ ಕಳೆದ ಒಂದೇ ವರ್ಷದಲ್ಲಿ ಈತನಿಗೆ 3 ಪೆರೋಲ್‌ಗಳು ಸಿಕ್ಕಿವೆ ಮತ್ತು  ಆ ಮೂಲಕ ಆತ 91 ದಿನಗಳ ಕಾಲ ಜೈಲಿನಿಂದ ಹೊರಗೆ ಇದ್ದ. ದೇರಾ ಸಚ್ಚಾ ಸೌದಾದ ಮಾಜಿ ಮುಖ್ಯಸ್ಥ ಸತ್ನಾಮ್ ಸಿಂಗ್ ಜನ್ಮ  ವಾರ್ಷಿಕೋತ್ಸವದಲ್ಲಿ ಭಾಗವಹಿಸುವುದಕ್ಕಾಗಿ ಪೆರೋಲ್ ಮೂಲಕ ಜೈಲಿನಿಂದ ಹೊರಬಂದ ಆತ, ಭಾರೀ ಗಾತ್ರದ ಖಡ್ಗದಿಂದ ಕೇಕ್  ಕತ್ತರಿಸಿದ್ದ. ಆ ವೀಡಿಯೋ ಆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹರ್ಯಾಣದಲ್ಲಿ ಪಂಚಾಯತ್ ಚುನಾವಣೆ  ನಡೆಯುವುದಕ್ಕಿಂತ ತುಸು ಮುನ್ನ 2022ರ ಅಕ್ಟೋಬರ್‌ನಲ್ಲಿ ಈತನಿಗೆ ಪೆರೋಲ್ ಸಿಕ್ಕಿತ್ತು. ಹೀಗೆ ಬಿಡುಗಡೆಗೊಂಡ ಈತ ವರ್ಚುವಲ್  ಸತ್ಸಂಗ ನಡೆಸಿದ್ದ ಮತ್ತು ಬಿಜೆಪಿಯ ಹಲವು ಮುಖಂಡರು ಇದರಲ್ಲಿ ಭಾಗಿಯಾಗಿದ್ದರು. ತನ್ನ ತಾಯಿಯನ್ನು ನೋಡುವುದಕ್ಕಾಗಿ 2020  ಮತ್ತು 21ರಲ್ಲಿ ತಲಾ ಒಂದು ಬಾರಿ ಈತನಿಗೆ ಪೆರೋಲ್ ಸಿಕ್ಕಿತ್ತು. 2022ರಲ್ಲಂತೂ ಮೂರು ಬಾರಿ ಪೆರೋಲ್ ಸಿಕ್ಕಿತ್ತು. ಆಗೆಲ್ಲ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರಕಾರವನ್ನು ವಿಪಕ್ಷಗಳು ತೀವ್ರವಾಗಿ ತರಾಟೆಗೆ ಎತ್ತಿಕೊಂಡಿದ್ದುವು. ಹಾಗಂತ,

ರಾಜ್ಯ ಸರಕಾರದ ಸಹಕಾರ ಇಲ್ಲದೇ ಅಪರಾಧಿಯೋರ್ವ ಇಷ್ಟು ಸಲೀಸಾಗಿ ಪೆರೋಲ್ ಪಡಕೊಂಡು ಜೈಲಿನಿಂದ ಹೊರಡುವುದಕ್ಕೆ  ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಬಿಲ್ಕೀಸ್ ಬಾನು ಪ್ರಕರಣದ ಅಪರಾಧಿಗಳಿಗೂ ಇಂಥದ್ದೇ ಪೆರೋಲ್ ಲಭಿಸಿದೆ. 2023  ಆಗಸ್ಟ್ 15 ರಂದು ಸನ್ನಡತೆಯ ಆಧಾರದಲ್ಲಿ ಈ 11 ಮಂದಿ ಅಪರಾಧಿಗಳು ಬಿಡುಗಡೆಗೊಳ್ಳುವುದಕ್ಕಿಂತ ಮೊದಲು ಹಲವಾರು ಬಾರಿ  ಪೆರೋಲ್‌ಗಳನ್ನು ಪಡೆದಿದ್ದರು. ರಮೇಶ್ ಭಾಯಿ ರೂಪಾ ಭಾಯಿ ಚಂದನ ಎಂಬ ಅಪರಾಧಿ ಒಟ್ಟು 1198 ದಿನಗಳ ಕಾಲ ಜೈಲಿನಿಂದ  ಹೊರಗಿದ್ದ. ರಾಜು ಭಾಯಿ  ಬಾಬುಲಾಲ್ ಸೋನಿ ಎಂಬವ 1166 ದಿನಗಳ ಕಾಲ ಜೈಲಿನಿಂದ ಹೊರಗಿದ್ದ. ಪ್ರದೀಪ್ ರಮಣ್ ಲಾಲ್  ಮೋಧಿಯಾ ಎಂಬವನು  1011 ದಿನಗಳ ಕಾಲ ಜೈಲಿನಿಂದ ಹೊರಗಿದ್ದು ಓಡಾಡಿಕೊಂಡಿದ್ದ. ಇವರ ಹೊರತಾಗಿ ಜಸ್ವಂತ್ ಭಾಯಿ   ಚತುರ್ ಭಾಯಿ  ನೈ ಎಂಬವ 950 ದಿನಗಳ ಕಾಲ, ಗೋವಿಂದ ಭಾಯಿ  ಲಖಮ್ ಭಾಯಿ  ನೈ ಎಂಬವ 986 ದಿನಗಳ ಕಾಲ, ಶೈಲೇಶ್ ಭಾಯಿ   ಚಿಮಣ್ ಲಾಲ್ ಭಟ್ 934 ದಿನಗಳ ಕಾಲ ಮತ್ತು ಬಿಪಿನ್ ಚಂದ್ರ ಕನ್ನಯ್ಯ ಲಾಲ್ ಜೋಷಿ ಎಂಬವ 909 ದಿನಗಳ ಕಾಲ ಜೈಲಿನಿಂದ  ಹೊರಗಿದ್ದರು. ಈ ಅಪರಾಧಿಗಳ ಪೈಕಿ ಅತ್ಯಂತ ಕಡಿಮೆ ಕಾಲ ಜೈಲಿನಿಂದ ಹೊರಗಿದ್ದವನ ಹೆಸರು ಮಿತೇಶ್ ಭಾಯಿ  ಚಿಮಣ್ ಲಾಲ್  ಭಟ್ ಎಂದಾಗಿದ್ದು, ಆತ 771 ದಿನಗಳ ಕಾಲ ಜೈಲಿನಿಂದ ಬಿಡುಗಡೆ ಹೊಂದಿದ್ದ. ಈ ಎಲ್ಲ ಮಾಹಿತಿಯನ್ನು ಖುದ್ದು ಗುಜರಾತ್  ಸರ್ಕಾರವೇ ಸುಪ್ರೀಮ್ ಕೋರ್ಟ್ಗೆ ತಿಳಿಸಿದೆ.

2002ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆದ ಭೀಕರ ಹತ್ಯಾಕಾಂಡದ ಅಪರಾಧಿಗಳಿಗೆ ಗುಜರಾತ್ ಸರ್ಕಾರ ಕೊಟ್ಟ ಗೌರವ ಇದು.  21ರ ಹರೆಯದ ಗರ್ಭಿಣಿ ಬಿಲ್ಕೀಸ್ ಬಾನು ಮೇಲೆ ಈ ದುರುಳರು ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ ಆಕೆಯ ಮೂರು ವರ್ಷದ  ಮಗಳನ್ನು ನೆಲಕ್ಕೆ ಅಪ್ಪಳಿಸಿ ಕೊಂದಿದ್ದರು ಮತ್ತು ಕುಟುಂಬದ 7 ಮಂದಿಯ ಹತ್ಯೆ ನಡೆಸಿದ್ದರು. ಈ ಅಪರಾಧ ಸಾಬೀತಾದ ಕಾರಣದಿಂದಲೇ ಸಿಬಿಐ ನ್ಯಾಯಾಲಯ 2008ರಲ್ಲಿ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ 2012ರಲ್ಲಿ ಎತ್ತಿ ಹಿಡಿದಿತ್ತು. ಆ  ಬಳಿಕ ಸುಪ್ರೀಮ್ ಕೋರ್ಟಿನ ಕದ ತಟ್ಟುವ ಅವಕಾಶ ಈ ಅಪರಾಧಿಗಳಿಗೆ ಇತ್ತಾದರೂ ಅವರು ಅದಕ್ಕಾಗಿ ಪ್ರಯತ್ನಿಸಲಿಲ್ಲ. ಬಹುಶಃ, ಈ  ಜೀವಾವಧಿ ಶಿಕ್ಷೆ ಎಲ್ಲಿ ಮರಣ ದಂಡನೆಯಾಗಿ ಪರಿವರ್ತನೆಯಾದೀತೋ ಎಂಬ ಭಯ ಇವರನ್ನು ಕಾಡಿರಬೇಕು. ನಿಜವಾಗಿ,

ಇವರು ಮಾಡಿರುವ ಕೃತ್ಯಕ್ಕೆ ಮರಣ ದಂಡನೆಯೇ ಸೂಕ್ತ ಶಿಕ್ಷೆ. ಯಾವಾಗ ಇವರಿಗೆ ವಿಧಿಸಲಾಗಿರುವ ಜೀವಾವಧಿ ಶಿಕ್ಷೆಯನ್ನು ಬಾಂಬೆ  ಹೈಕೋರ್ಟು ಎತ್ತಿ ಹಿಡಿಯಿತೋ ಮುಂದೆ ಇವರ ಹಿತ ಕಾಯುವ ಕೆಲಸವನ್ನು ಗುಜರಾತ್ ಸರಕಾರ ವಹಿಸಿಕೊಂಡಂತೆ  ಕಾಣಿಸುತ್ತಿದೆ.  2012ರಿಂದ 2023 ಆಗಸ್ಟ್ 15ರಂದು ಬಿಡುಗಡೆಯಾಗುವ ವರೆಗಿನ ಅವಧಿಯ ನಡುವೆ ಈ 11 ಮಂದಿ ಅಪರಾಧಿಗಳು ಕನಿಷ್ಠ 2  ವರ್ಷಗಳಿಂದ ಸುಮಾರು 4 ವರ್ಷಗಳ ತನಕ ಜೈಲಿನಿಂದ ಹೊರಗಿದ್ದುದು ಇದನ್ನೇ ಸೂಚಿಸುತ್ತದೆ. ಇದೀಗ ಈ ದುರುಳರನ್ನು  ಸುಪ್ರೀಮ್ ಕೋರ್ಟು ಮತ್ತೆ ಜೈಲಿಗಟ್ಟಿದೆ. ಜೈಲಿಗೆ ಮರಳುವುದಕ್ಕೆ ಕಾಲಾವಕಾಶ ಕೋರಿ ಅವರು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದೆ.  ಇದು ಆಶಾದಾಯಕ ಬೆಳವಣಿಗೆಯಾದರೂ ಸಂಭ್ರಮಿಸುವಂಥದ್ದಲ್ಲ. ಯಾಕೆಂದರೆ,
ಆಡಳಿತಗಾರರು ಅಪರಾಧಿಗಳ ಪೋಷಕ ಪಾತ್ರವನ್ನು ನಿಭಾಯಿಸುತ್ತಿರುವ ವರೆಗೆ ಶಿಕ್ಷೆ ಎಂಬುದು ಸರಕಾರಿ ಕಡತಗಳಿಗಷ್ಟೇ  ಸೀಮಿತವಾಗಿರುತ್ತದೆ. ಅಪರಾಧಿಗಳ ಜೊತೆ ಆಡಳಿತಗಾರರೇ ಶಾಮೀಲಾದರೆ ಕಾನೂನಿನ ಕಣ್ಣಿಗೆ ಮಣ್ಣೆರಚುವುದು ಕಷ್ಟ ಅಲ್ಲ. ಈ 11  ಮಂದಿ ಅಪರಾಧಿಗಳು ಕಳೆದ ಒಂದು ದಶಕದಲ್ಲಿ ನೂರಕ್ಕಿಂತಲೂ ಅಧಿಕ ಬಾರಿ ಪಡೆದಿರುವ ಬಿಡುಗಡೆ ಭಾಗ್ಯವೇ ಇದಕ್ಕೆ ಸಾಕ್ಷಿ.  ನಿಜವಾಗಿ, ಅಪರಾಧಿಗಳಲ್ಲಿ ಪಶ್ಚಾತ್ತಾಪಭಾವವನ್ನು ಮೂಡಿಸಬೇಕು ಮತ್ತು ಸನ್ನಡತೆಯನ್ನು ಬೆಳೆಸಬೇಕು ಎಂಬ ಉದ್ದೇಶವೂ  ನ್ಯಾಯಾಲಯ ವಿಧಿಸುವ ಶಿಕ್ಷೆಯ ಹಿಂದಿರುತ್ತದೆ. ಆದರೆ ಆಡಳಿತಗಾರರು ಅಪರಾಧಿಗಳ ಬೆಂಬಲಕ್ಕೆ ನಿಂತಾಗ ಈ ಉದ್ದೇಶವೇ ಅರ್ಥ  ಕಳಕೊಳ್ಳುತ್ತದೆ. ಅಪರಾಧಿ ನಿಶ್ಚಿಂತರಾಗುತ್ತಾರೆ ಮತ್ತು ಈ ಹಿಂದಿಗಿಂತಲೂ ಹೆಚ್ಚು ಕ್ರೂರಿಗಳಾಗುತ್ತಾರೆ. 2020ರಲ್ಲಿ ಪೆರೋಲ್ ಮೂಲಕ  ಜೈಲಿನಿಂದ ಹೊರಬಂದ ಮಿತೇಶ್ ಚಿಮಣ್‌ಲಾಲ್ ಭಟ್ ಇದಕ್ಕೊಂದು ನಿದರ್ಶನ. ಈ ಅವಧಿಯಲ್ಲಿ ಈತನ ಮೇಲೆ ಪ್ರಕರಣ  ದಾಖಲಾಗಿತ್ತು. ಮಹಿಳೆಗೆ ಕಿರುಕುಳ ನೀಡಿದ್ದು, ಉದ್ದೇಶಪೂರ್ವಕವಾಗಿ ಅವಮಾನಿಸಿದ್ದು, ಶಾಂತಿಭಂಗಕ್ಕೆ ಪ್ರಚೋದನೆ ನೀಡಿದ್ದು ಹಾಗೂ  ಕ್ರಿಮಿನಲ್ ಕೃತ್ಯವೂ ಸೇರಿದಂತೆ ಭಾರತೀಯ ದಂಡಸಂಹಿತೆ ಯ ಸೆಕ್ಷನ್ 354, 504 ಮತ್ತು 506ರಡಿಯಲ್ಲಿ ಈತನ ವಿರುದ್ಧ ಎಫ್‌ಐಆರ್  ದಾಖಲಿಸಲಾಗಿತ್ತು. ಹೀಗಿದ್ದೂ, ಆ ಬಳಿಕವೂ ಈತನಿಗೆ ಪೆರೋಲ್ ಲಭಿಸಿತು ಮತ್ತು ಆ ಮೂಲಕ 281 ದಿನಗಳ ಕಾಲ ಈತ ಜೈಲಿನಿಂದ  ಹೊರಗಿದ್ದ. ಅಂದಹಾಗೆ,

ಗುರ್ಮೀತ್ ರಾಮ್ ರಹೀಮ್‌ನಿಗೆ ಸಿಗುತ್ತಿರುವ ಪೆರೋಲ್‌ಗಳನ್ನೂ ಈ ನೆಲೆಯಲ್ಲೇ  ವಿಶ್ಲೇಷಿಸಬೇಕಾಗಿದೆ. ಜೀವಾವಧಿ  ಶಿಕ್ಷೆಗೊಳಗಾಗಿರುವ ಸಾಮಾನ್ಯ ಅಪರಾಧಿಗಳಿಗೆ ಸಿಗದ ಪೆರೋಲ್‌ಗಳು ಇಂಥವರಿಗೆ ಯಾಕೆ ಮತ್ತು ಹೇಗೆ ಸಿಗುತ್ತದೆ ಎಂಬ ಪ್ರಶ್ನೆಯನ್ನು  ಹರಡಿ ಕುಳಿತರೆ ಆಡಳಿತಗಾರರು ಮತ್ತು ಅಪರಾಧಿಗಳ ನಡುವಿನ ಅನೈತಿಕ ನಂಟು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಹಾಗಿದ್ದರೂ,

ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ಉಜ್ವಲ್ ಭುಯಾನ್ ಅವರಿದ್ದ ನ್ಯಾಯಪೀಠದ ನಿಷ್ಠುರ ತೀರ್ಪನ್ನು ಶ್ಲಾಘಿಸಬೇಕಾಗಿದೆ.  ನ್ಯಾಯಾಧೀಶರುಗಳು ಪ್ರಭುತ್ವದ ಪಕ್ಷಪಾತಿಳಾಗುತ್ತಿದ್ದಾರೋ ಎಂಬ ಸಂದೇಹ ಸಾರ್ವಜನಿಕವಾಗಿ ಬಲಗೊಳ್ಳುತ್ತಿರುವ ಹೊತ್ತಿನಲ್ಲೇ  ಈ  ತೀರ್ಪು ಪ್ರಕಟವಾಗಿದೆ. ಸ್ವತಂತ್ರ ನ್ಯಾಯಾಲಯವೇ ಜನರ ಪಾಲಿನ ಬಹುದೊಡ್ಡ ಆಯುಧ. ಪ್ರಭುತ್ವ ಎಂದೂ ಸಂಪೂರ್ಣ ನ್ಯಾಯ ಪಕ್ಷಪಾತಿಯಾಗುವುದಕ್ಕೆ  ಸಾಧ್ಯವೇ ಇಲ್ಲ. ಅದು ಓಟಿನ ಲೆಕ್ಕಾಚಾರದಲ್ಲೇ ನ್ಯಾಯಾನ್ಯಾಯವನ್ನು ನಿರ್ಧರಿಸುತ್ತದೆ. ಆದರೆ ನ್ಯಾಯಾಲಯ ಹಾಗಲ್ಲ. ಅದಕ್ಕೆ ಓಟಿನ  ಹಂಗಿಲ್ಲ. ಆದ್ದರಿಂದ ಅದು ನ್ಯಾಯದ ಹೊರತು ಇನ್ನಾವುದಕ್ಕೂ ನಿಷ್ಠವಾಗಿರಲೇಬಾರದು. 11 ಮಂದಿ ಅಪರಾಧಿಗಳನ್ನು ಮತ್ತೆ ಜೈಲಿಗಟ್ಟಿ  ಗುಜರಾತ್ ಸರ್ಕಾರಕ್ಕೆ ಪಾಠ ಕಲಿಸಿದ ನ್ಯಾಯಾಧೀಶರುಗಳಿಗೆ ಧನ್ಯವಾದಗಳು.

No comments:

Post a Comment