Monday 1 April 2024

ಹಿಂದೂ ಧಾರ್ಮಿಕ ಮುಖಂಡರೇಕೆ ಮೌನವಾಗಿದ್ದಾರೆ?




ನಿಜಕ್ಕೂ ಧರ್ಮ ಅಸಹಿಷ್ಣುಗಳು ಯಾರು ಎಂಬುದನ್ನು ಉತ್ತರ ಪ್ರದೇಶ ಮತ್ತೊಮ್ಮೆ ದೇಶದ ಮುಂದೆ ಬಹಿರಂಗವಾಗಿ ಸಾರಿ ಹೇಳಿದೆ.  ಬರೇಲ್ವಿ ಜಿಲ್ಲೆಯ ಮುಸ್ಲಿಮ್ ಧರ್ಮಗುರುಗಳ ಸಭೆ ನಡೆಸಿರುವ ಬರೇಲ್ವಿಯ ಹಿರಿಯ ಪೊಲೀಸ್ ಅಧೀಕ್ಷಕ ಗುಲೆ ಸುಶೀಲ್ ಚಂದ್ರಬಾನ್,  ಮಸೀದಿಗಳಿಗೆ
ಹೊದಿಕೆ ಹಾಕುವಂತೆ ಹೇಳಿದ್ದಾರೆ. ಹಾಗಂತ, ಹೀಗೆ ಹೊದಿಕೆ ಹಾಕುವುದು ದೂಳಿನಿಂದಲೋ ಬಿಸಿಲಿನಿಂದಲೋ ರಕ್ಷಣೆ  ಹೊಂದುವುದಕ್ಕಲ್ಲ. ಬರೇಲ್ವಿಯ ನರಸಿಂಹ ದೇವಾಲಯ, ಶಹಜಾನ್‌ಪುರದ ಪೂಲ್ಮತಿ ದೇವಾಲಯದಿಂದ ಹೋಳಿ ಹಬ್ಬದ ಹಿನ್ನೆಲೆಯಲ್ಲಿ  ಮೆರವಣಿಗೆ ನಡೆಯಲಿದ್ದು, ಕಿಡಿಗೇಡಿಗಳು ಮಸೀದಿಗಳಿಗೆ ಬಣ್ಣ ಎರಚದಂತೆ ತಡೆಯುವುದೇ ಇದರ ಉದ್ದೇಶ. ಪೊಲೀಸ್ ಅಧಿಕಾರಿಗಳ ಈ  ಸೂಚನೆಯನ್ನು ಮುಸ್ಲಿಮ್ ಸಮುದಾಯ ಪಾಲಿಸಿದ್ದು, ಮೆರವಣಿಗೆ ಸಾಗುವ ದಾರಿಯಲ್ಲಿನ ಮಸೀದಿಗಳಿಗೆ ಹೊದಿಕೆ ಹಾಸಿರುವ ಚಿತ್ರಗಳು  ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಇದರ ಜೊತೆಗೇ ಇನ್ನಷ್ಟು ವೀಡಿಯೋಗಳೂ ಸೋಶಿಯಲ್ ಮೀಡಿಯಾದಲ್ಲಿ  ಹಂಚಿಕೆಯಾಗುತ್ತಿದ್ದು, ವಾಹನದಲ್ಲಿ ಸಾಗುತ್ತಿರುವ ಮುಸ್ಲಿಮ್ ಸಮುದಾಯದ ವ್ಯಕ್ತಿಗಳ ಮೇಲೆ ಬಲವಂತದಿಂದ ಬಣ್ಣ ಎರಚಿ ಧಾರ್ಮಿಕ  ಘೋಷಣೆಯೊಂದಿಗೆ ಸಂಭ್ರಮಪಡುತ್ತಿರುವುದೂ ಕಾಣಿಸಿದೆ. ಅಂದಹಾಗೆ,

ಈದ್‌ನ ಸಮಯದಲ್ಲಿ ಅಥವಾ ಪೈಗಂಬರರ ದಿನದ ಹೆಸರಲ್ಲಿ ನಡೆಯುವ ಮೆರವಣಿಗೆಗಳ ವೇಳೆ ದೇವಾಲಯಗಳಿಗೆ ಹೊದಿಕೆ ಹಾಸುವಂತೆ  ಕೋರಲಾಗಿರುತ್ತಿದ್ದರೆ ಏ
ನಾಗುತ್ತಿತ್ತು? ಟಿ.ವಿ. ಚಾನೆಲ್‌ಗಳಲ್ಲಿ ಯಾವೆಲ್ಲ ರೀತಿಯ ಚರ್ಚೆಗಳು ನಡೆಯುತ್ತಿತ್ತು? ಸೋಶಿಯಲ್ ಮೀಡಿಯಾದ  ಅಬ್ಬರ ಹೇಗಿರುತ್ತಿತ್ತು? ಮುಸ್ಲಿಮರನ್ನು ಅಸಹಿಷ್ಣುಗಳು, ಕಾನೂನು ಭಂಜಕರು, ಹಿಂದೂ ವಿರೋಧಿಗಳು ಎಂದೆಲ್ಲಾ ಮಾಧ್ಯಮಗಳ ಮುಂದೆ  ಘೋಷಿಸುವ ರಾಜಕಾರಣಿಗಳು ಮತ್ತು ಅವರ ಬೆಂಬಲಿಗರು ಎಷ್ಟಿರುತ್ತಿದ್ದರು?
ಈ ದೇಶದಲ್ಲಿ ಹೋಳಿಯಂತೆಯೇ ಈದ್ ಅನ್ನೂ  ಆಚರಿಸಲಾಗುತ್ತದೆ. ಆದರೆ, ಈ ದೇಶದ ಯಾವ ದೇವಾಲಯವೂ ಈದ್‌ನಿಂದಾಗಿ ಗಾಂಬರಿಗೊಂಡದ್ದಿಲ್ಲ. ಟಾರ್ಪಲಿನ್ ಹೊದಿಸಲಾದದ್ದೂ  ಇಲ್ಲ.

ಹಬ್ಬ ಎಂಬುದು ಆಯಾ ಧರ್ಮದ ಸಾಂಸ್ಕೃತಿಕ ಮತ್ತು ಧಾರ್ಮಿಕ ಸೊಗಡಿನ ಪ್ರತೀಕವೇ ಹೊರತು ಅನ್ಯಧರ್ಮ ಅಸಹಿಷ್ಣುತೆಯ ಆಯುಧ  ಅಲ್ಲ. ಹೋಳಿ ಹಬ್ಬಕ್ಕೊಂದು ಹಿನ್ನೆಲೆಯಿದೆ. ಆ ಹಿನ್ನೆಲೆಯ ಯಾವ ಭಾಗದಲ್ಲೂ ಮತ್ತು ಯಾವ ಪುಟದಲ್ಲೂ ಮುಸ್ಲಿಮರ ಪ್ರಸ್ತಾಪವೇ ಇಲ್ಲ.  ಮುಸ್ಲಿಮರನ್ನು ವಿರೋಧಿಸುವುದಕ್ಕಾಗಿಯೋ ಅಥವಾ ಅವರ ಮಸೀದಿಗೆ ಬಣ್ಣ ಎರಚುವುದಕ್ಕಾಗಿಯೋ ಹೋಳಿ ಆಚರಿಸಬೇಕೆಂಬ ಒಂದು ಸಣ್ಣ  ಗೆರೆಯ ಉಲ್ಲೇಖವೂ ಇಲ್ಲ. ಅದು ಪೂರ್ತಿಯಾಗಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಖುಷಿಯ ಪ್ರದರ್ಶನ. ಹಬ್ಬಗಳೆಲ್ಲ ಸಾಮಾನ್ಯವಾಗಿ ಹೀಗೆಯೇ  ಇವೆ. ಗಣೇಶ ಚತುರ್ಥಿಯಾಗಲಿ, ದೀಪಾವಳಿಯಾಗಲಿ ಅಥವಾ ಮುಸ್ಲಿಮರ ಈದ್, ಕ್ರೈಸ್ತರ ಕ್ರಿಸ್ಮಸ್‌ಗಳಾಗಲಿ.. ಯಾವುವೂ ಇನ್ನೊಂದು  ಧರ್ಮವನ್ನು ದ್ವೇಷಿಸಿಕೊಂಡೋ ಕೆರಳಿಸಿಕೊಂಡೋ ಹುಟ್ಟಿದ್ದಲ್ಲ. ಆಯಾ ಧರ್ಮಗಳ ಅನುಯಾಯಿಗಳು ಸಂತಸಪಡುವ ಸಂದರ್ಭಗಳಾಗಿ  ಅವು ಉಳಿದುಕೊಂಡಿವೆ. ಹೀಗಿರುವಾಗ, ಹೋಳಿ ಹಬ್ಬ ಆಚರಿಸುವವರು ಅದನ್ನಾಚರಿಸದವರ ಮೇಲೆ ಬಣ್ಣವನ್ನೇಕೆ ಎರಚಬೇಕು? ಮಸೀದಿಗಳನ್ನೇಕೆ ಗುರಿಯಾಗಿಸಬೇಕು? ಹೋಳಿಗೂ ಮಸೀದಿಗೂ ಏನು ಸಂಬಂಧ? ತಮಾಷೆ ಏನೆಂದರೆ,

ಮಸೀದಿಗೆ ಬಣ್ಣ ಎರಚುವ ಕಿಡಿಗೇಡಿಗಳನ್ನು ಮಟ್ಟ ಹಾಕಬೇಕಾದ ಪೊಲೀಸ್ ಇಲಾಖೆಯು ಅದರ ಬದಲು ಮಸೀದಿಯನ್ನೇ ಹೊದಿಕೆಯಿಂದ  ಮುಚ್ಚುವಂತೆ ಆದೇಶಿಸಿರುವುದು. ಬರೇಲ್ವಿಯಲ್ಲಾಗಲಿ, ಶಹಜಹಾನ್‌ಪುರದಲ್ಲಾಗಲಿ ಯಾವ ಮಸೀದಿಯೂ ಹೋಳಿ ಹಬ್ಬದ ವಿರುದ್ಧ ಮಾತಾಡಿಲ್ಲ.  ಅಥವಾ ಹೋಳಿ ಹಬ್ಬದ ಮೆರಣಿಗೆಯ ದಿನದಂದು ತನ್ನದೇ ಕಾರ್ಯಕ್ರಮದ ಮೆರವಣಿಗೆಯನ್ನೂ ಇಟ್ಟುಕೊಂಡಿಲ್ಲ. ಹೀಗಿರುವಾಗ  ಕಿಡಿಗೇಡಿಗಳನ್ನು ಮಟ್ಟ ಹಾಕುವ ಬದಲು ಮಸೀದಿಗಳನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದಕ್ಕೆ ಏನರ್ಥವಿದೆ? ಮೆರವಣಿಗೆಯಲ್ಲಿ ಕಿಡಿಗೇಡಿಗಳು  ನುಸುಳುತ್ತಾರೆಂಬುದು ಪೊಲೀಸರ ಸಂದೇಹವಾದರೆ ಅದಕ್ಕಾಗಿ ದಂಡಿಸಬೇಕಾದದ್ದು ಮಸೀದಿಯನ್ನೋ ಅಲ್ಲ ಕಿಡಿಗೇಡಿಗಳನ್ನೋ? ಯಾವುದೇ  ಮಸೀದಿಯಾಗಲಿ ಮಂದಿರವಾಗಲಿ ಮೆರವಣಿಗೆಗಳನ್ನು ಆಯೋಜಿಸುತ್ತದೆಂದಾದರೆ, ಅದು ಶಾಂತಿಪೂರ್ಣ ಮತ್ತು ದ್ವೇಷರಹಿತವಾಗಿರುವಂತೆ  ನೋಡಿಕೊಳ್ಳಬೇಕಾದುದು ಮೆರವಣಿಗೆ ಆಯೋಚಿಸಿದವರ ಕರ್ತವ್ಯ. ಸಾಮಾನ್ಯವಾಗಿ ಪೊಲೀಸರು ಆಯೋಜಕರಿಂದ ಈ ಬಗ್ಗೆ ಮುಚ್ಚಳಿಕೆಯನ್ನು ಪಡಕೊಳ್ಳುವುದೂ ಇದೆ. ಅದು ಬಿಟ್ಟು ಮಸೀದಿಗಳನ್ನೇ ಅಪರಾಧಿಯಂತೆ ಕಾಣುವುದಕ್ಕೆ ಏನೆನ್ನಬೇಕು? ನಿಜವಾಗಿ,

ಮಸೀದಿಗಳನ್ನು ಹೊದಿಕೆಯಿಂದ ಮುಚ್ಚಿ ಎಂದು ಪೊಲೀಸರು ಮುಸ್ಲಿಮರಿಗೆ ಸೂಚಿಸುವುದರಲ್ಲಿ ಒಂದು ಸಂದೇಶವಂತೂ  ಸ್ಪಷ್ಟವಾಗಿ ರವಾನೆಯಾಗಿದೆ. ಹೋಳಿಯು ಬರೇ ಹಬ್ಬವಾಗಿ ಉಳಿದಿಲ್ಲ. ಅದು ಮುಸ್ಲಿಮ್ ದ್ವೇಷವನ್ನು ಕಾರುವುದಕ್ಕಿರುವ ಒಂದು ಸಂದರ್ಭವೂ ಆಗುತ್ತಿದೆ.  ಮಾತ್ರವಲ್ಲ, ವ್ಯವಸ್ಥೆಯೇ ಇದನ್ನು ಒಪ್ಪಿಕೊಳ್ಳುತ್ತಲೂ ಇದೆ. ಇದು ನಿಜಕ್ಕೂ ಅಪಾಯಕಾರಿ ಬೆಳವಣಿಗೆ. ಹೋಳಿ ಮೆರವಣಿಗೆಯಲ್ಲಿ ತೆರಳುವವರು  ಮಸೀದಿಯನ್ನೇಕೆ ದ್ವೇಷಿಸುತ್ತಾರೆ? ಅವರೇಕೆ ಮಸೀದಿಗಳಿಗೆ ಬಣ್ಣ ಎರಚುತ್ತಾರೆ? ಹಿಂದೂ ಧರ್ಮ ಅನ್ಯ ಧರ್ಮ ಅಸಹಿಷ್ಣುವೇ? ಅಲ್ಲ  ಎಂದಾದರೆ, ಮಸೀದಿಗೆ ಹೊದಿಸುವಂತೆ ವ್ಯವಸ್ಥೆಯೇ ಕರೆಕೊಡುವ ಸನ್ನಿವೇಶ ಉಂಟಾಗಿಯೂ ಯಾಕೆ ಹಿಂದೂ ಧರ್ಮದ ಯಾರೂ  ಮಾತಾಡುತ್ತಿಲ್ಲ? ತೀರಾ ತೀರಾ ಸಣ್ಣ ಸಣ್ಣ ವಿಷಯಗಳಿಗೂ ಮುಸ್ಲಿಮ್ ಧರ್ಮಗುರುಗಳ ಫತ್ವಾವನ್ನೋ ಸ್ಪಷ್ಟೀಕರಣವನ್ನೋ ಕೇಳಲಾಗುವ ಈ  ದೇಶದಲ್ಲಿ ಮಸೀದಿಗಳನ್ನೇ ಹೊದಿಕೆಯಿಂದ ಮುಚ್ಚಿದ ಘಟನೆಗಳು ನಡೆದ ಬಳಿಕವೂ ಯಾಕೆ ಯಾವ ವಿರೋಧವೂ ವ್ಯಕ್ತವಾಗುತ್ತಿಲ್ಲ?  ಒಂದುವೇಳೆ, ಮೆರವಣಿಗೆ ಆಯೋಜಿಸಿದವರು ಈ ಬೆಳವಣಿಗೆಯ ವಿರೋಧಿಗಳೆಂದಾದರೆ, ಅವರಾದರೂ ಹೇಳಿಕೆ ಕೊಡಬೇಕಿತ್ತಲ್ಲ? ಅಥವಾ  ಮಸೀದಿಗಳಿಗೆ ಟಾರ್ಪಲಿನ್ ಹೊದಿಸುವ ಸನ್ನಿವೇಶಕ್ಕೆ ವಿಷಾದ ಸೂಚಿಸಿ ಮೆರವಣಿಗೆಯನ್ನೇ ರದ್ದುಗೊಳಿಸಬಹುದಿತ್ತಲ್ಲ? ಹಾಗೆ ಮಾಡಿರುತ್ತಿದ್ದರೆ  ಅದು ಈ ಹೋಳಿ ಮೆರವಣಿಗೆ ಆಯೋಚಿಸಿದವರ ಕುರಿತಂತೆ ಗೌರವ ಹೆಚ್ಚಿಸುತ್ತಿತ್ತಲ್ಲವೇ? ದುರಂತ ಏನೆಂದರೆ,

ಹಿಂದೂ  ಧರ್ಮವನ್ನು ಮುಸ್ಲಿಮರ ವೈರಿಯಂತೆ ಬಿಂಬಿಸುವವರ ಕೈ ನಿಧಾನಕ್ಕೆ ಬಲ ಪಡೆಯುತ್ತಿರುವಂತೆ ಕಾಣಿಸುತ್ತಿದೆ. ಮುಸ್ಲಿಮರನ್ನು ನಿಂದಿಸುವ, ಹಿಂಸಿಸುವ ಮತ್ತು ಅವರ ಆರಾಧನೆಗಳಿಗೆ ಅಡ್ಡಿಪಡಿಸುವ ಘಟನೆಗಳೂ ಹೆಚ್ಚಾಗುತ್ತಿವೆ. ಮಾತ್ರವಲ್ಲ, ಈ ಎಲ್ಲವನ್ನೂ ಧಾರ್ಮಿಕ  ಘೋಷಣೆಯ ಜೊತೆಗೇ ಮಾಡಲಾಗುತ್ತಿದೆ. ಆದರೆ, ಇದು ಧರ್ಮವಲ್ಲ, ಅಧರ್ಮ ಎಂದು ಘಂಟಾಘೋಷವಾಗಿ ಹೇಳಬೇಕಾದವರು ಮೌ ನವಾಗಿದ್ದಾರೆ. ಈ ಮೌನವೇ ಈ ಅಧರ್ಮಿಗಳ ಧೈರ್ಯವನ್ನು ಹೆಚ್ಚಿಸುತ್ತಲೂ ಇದೆ. ಮಾತ್ರವಲ್ಲ, ಅವರ ಕೃತ್ಯಗಳು ಮತ್ತು ಘೋಷಣೆಗಳು  ಅವರು ಪ್ರತಿನಿಧಿಸುವ ಧರ್ಮಕ್ಕೆ ಮಸಿ ಬಳಿಯುತ್ತಲೂ ಇವೆ. ಸದ್ಯದ ಅಗತ್ಯ ಏನೆಂದರೆ, ಧಾರ್ಮಿಕ ಘೋಷಣೆಗಳೊಂದಿಗೆ ಧರ್ಮಬಾಹಿರ  ಕೃತ್ಯಗಳನ್ನು ನಡೆಸುವವರ ವಿರುದ್ಧ ಹಿಂದೂ ಧರ್ಮದ ಮುಖಂಡರು ಧ್ವನಿ ಎತ್ತಬೇಕು. ಮುಸ್ಲಿಮರನ್ನು ದ್ವೇಷಿಸುವುದರಿಂದ ಹಿಂದೂ ಧರ್ಮದ  ಉದ್ಧಾರವಾಗದು ಎಂದು ಬಲವಾಗಿ ಸಾರಬೇಕು. ಯಾವುದೇ ಧರ್ಮವು ಇನ್ನೊಂದು ಧರ್ಮವನ್ನು ದ್ವೇಷಿಸುವುದರಿಂದ ಬೆಳೆಯಲಾರದು.  ಆದರೆ ಧರ್ಮದ ಮೌಲ್ಯಗಳನ್ನು ಪಾಲಿಸುವುದರಿಂದ ಬೆಳೆಯಬಲ್ಲುದು. ಹಬ್ಬವಾಗಲಿ ಅದಕ್ಕೆ ಸಂಬಂಧಿಸಿ ಏರ್ಪಡಿಸುವ ಮೆರವಣಿಗೆಗಳಾಗಲಿ  ಧರ್ಮದ ಮೌಲ್ಯಗಳನ್ನು ಬಿತ್ತುವಂತಿರಬೇಕು. ಆ ಮೆರವಣಿಗೆಯು ಆ ಧರ್ಮದ ಅನುಯಾಯಿಗಳಲ್ಲದವರನ್ನೂ ಆಕರ್ಷಿಸಬೇಕು.  ಧರ್ಮವೊಂದು ತನ್ನ ಚೌಕಟ್ಟನ್ನೂ ಮೀರಿ ಬೆಳೆಯುವುದು ಹೀಗೆ. ಹೀಗೆ ಧರ್ಮವೊಂದು ಬೆಳೆಯಬೇಕಾದರೆ ಅದರ ಅನುಯಾಯಿಗಳು ಆ  ಧರ್ಮದ ನಿಜ ರಾಯಭಾರಿಗಳಾಗಬೇಕು. ಬದುಕಿನಲ್ಲಿ ಧರ್ಮದ ಮೌಲ್ಯಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಆಗ ಅನ್ಯಧರ್ಮದ  ನೋಡುಗರ ಮೇಲೂ ಕೇಳುಗರ ಮೇಲೂ ಪ್ರಭಾವವನ್ನು ಬೀರುತ್ತದೆ. ಇದನ್ನು ಬಿಟ್ಟು ಅನುಯಾಯಿಗಳು ಅನ್ಯಧರ್ಮ ದ್ವೇಷವನ್ನೇ  ಮುಖ್ಯವಾಗಿಸಿಕೊಂಡಾಗ ಧರ್ಮ ಎಷ್ಟೇ ಒಳ್ಳೆಯದಿದ್ದರೂ ಪ್ರಾಯೋಗಿಕವಾಗಿ ಅದು ಸೋಲುತ್ತದೆ. ಹಿಂಸೆಯನ್ನು ಅಸ್ತ್ರವಾಗಿಸಿಕೊಳ್ಳುವ ಎಲ್ಲ  ಧರ್ಮೀಯರಲ್ಲೂ ಈ ಎಚ್ಚರಿಕೆ ಇರಬೇಕು.

No comments:

Post a Comment