Tuesday 19 October 2021

ಮುಈನುಲ್ ಹಕ್‌ನ ಆತಂಕವನ್ನು ಸಮರ್ಥಿಸಿದ ಲಾಠಿ ಮತ್ತು ಫೋಟೋಗ್ರಾಫರ್




ಶಸ್ತ್ರ  ಸಜ್ಜಿತ 20ರಿಂದ 30ರಷ್ಟು ಪೊಲೀಸರನ್ನು ವಿರೋಧಿಸುತ್ತಾ, ಆಕ್ರೋಶದಿಂದ ಬಿದಿರು ಕೋಲನ್ನು ಹಿಡಿದು ಅವರೆದುರು ಓಡಿ ಬರುವ  ಒಂಟಿ ಸಣಕಲು ಕಾರ್ಮಿಕನನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ? ಆತ ಆ ಬಿದಿರು ಕೋಲಿನಿಂದ ಮೂರು ಡಜನ್ ಬಂದೂಕುಧಾರಿ  ಪೊಲೀಸರನ್ನು ಸಾಯಿಸಲು ಸಮರ್ಥನೇ? ಪೊಲೀಸರ ಕೈಯಲ್ಲಿ ಬಂದೂಕಿದೆ ಎಂಬುದನ್ನು ತಿಳಿದೂ ಆತ ಹಾಗೆ ಓಡಿ ಬರುತ್ತಾನೆಂದರೆ,  ಆತನೊಳಗೆ ಮಡುಗಟ್ಟಿರುವ ಸಂಕಟವೇನು? ಬಿದಿರುಕೋಲು ಮತ್ತು ಬಂದೂಕುಗಳ ನಡುವೆ ಸಮರವಾದರೆ ಬಂದೂಕೇ ಗೆಲ್ಲುತ್ತದೆ  ಎಂಬುದು ಆತನಿಗೆ ಬಿಡಿ, ಪುಟ್ಟ ಮಕ್ಕಳಿಗೆ ಗೊತ್ತು. ಮತ್ತೂ ಯಾಕೆ ಆತ ಆ ದುರ್ಬಲ ಕೋಲನ್ನು ಹಿಡಿದು ಪೊಲೀಸರತ್ತ ನುಗ್ಗಿದ  ಅಂದರೆ,

ಅದು ಆತನ ಅಸ್ತಿತ್ವದ ಪ್ರಶ್ನೆ. ಪುಟ್ಟ ಗುಡಿಸಲು ಕಟ್ಟಿ ಬದುಕುತ್ತಿದ್ದವನ ಕನಸನ್ನು ಪ್ರಭುತ್ವದ ಬುಲ್ಡೋಜರು ನಾಶ ಮಾಡಿದೆ. ಮುಂದೇನು  ಅನ್ನುವುದು ಗೊತ್ತಿಲ್ಲ. ಪತ್ನಿ ಇದ್ದಾಳೆ, ಮಕ್ಕಳಿದ್ದಾರೆ. ಮತ್ತು ಹೀಗೆ ಬುಲ್ಡೋಜರ್‌ಗೆ ಉರುಳಿದ ಮನೆಗಳು 800ರಷ್ಟು ಇವೆ. ನಿರ್ವಸಿತರ  ದಂಡೇ ಸೃಷ್ಟಿಯಾಗಿದೆ. ಮುಂದೇನು ಎಂಬುದನ್ನು ಬುಲ್ಡೋಜರೂ ಹೇಳುತ್ತಿಲ್ಲ. ಬುಲ್ಡೋಜರನ್ನು ಕಳುಹಿಸಿದವರೂ ಹೇಳುತ್ತಿಲ್ಲ.  ಸೋಶಿಯಲ್ ಮೀಡಿಯಾಗಳು ಕೂಡಾ ಇವರನ್ನು ಅಕ್ರಮ ವಾಸಿಗಳು, ಬಾಂಗ್ಲಾದೇಶೀಯರು ಎಂದು ಕರೆಯುತ್ತಿವೆಯೇ ಹೊರತು  ಅವರಿಗೂ ಆ ಮಣ್ಣಿಗೂ ನಡುವಿನ ಸಂಬಂಧ ಮತ್ತು ಅವರ ಸದ್ಯದ ಸಂಕಟಕ್ಕೂ ಧ್ವನಿ ನೀಡುತ್ತಿಲ್ಲ. ಒಂದುಕಡೆ,

ಬಿದಿರುಕೋಲು ಹಿಡಿದು ಓಡಿ ಬಂದ ಮುಈನುಲ್ ಹಕ್ ಮತ್ತು ಆತ ಗುರುತಿಸಿಕೊಂಡಿರುವ ಸಮುದಾಯವನ್ನು ಗುರಿಯಾಗಿಸಿಕೊಂಡೇ  ಎನ್‌ಆರ್‌ಸಿಯನ್ನು ಜಾರಿ ಮಾಡುತ್ತಿರುವ ಪ್ರಭುತ್ವ ಹಾಗೂ ಇನ್ನೊಂದೆಡೆ, ಯಾವ ಪರ್ಯಾಯವನ್ನೂ ಕಲ್ಪಿಸದೆಯೇ ಗುಡಿಸಲುಗಳನ್ನು  ನೆಲಸಮಗೊಳಿಸಿದ ಸ್ಥಳೀಯಾಡಳಿತ- ಇಂಥ ಸನ್ನಿವೇಶದಲ್ಲಿ ಬಿದಿರನ್ನು ಎತ್ತಿಕೊಂಡ ಸಂತ್ರಸ್ತನನ್ನು ಪೊಲೀಸರು ಹೇಗೆ ಸಂಭಾಳಿಸಬೇಕು?  ಆ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಬೇಕಾದ ಫೋಟೋಗ್ರಾಫರ್ ಯಾವುದಕ್ಕೆ ಮಹತ್ವ ನೀಡಬೇಕು? ಅಂದಹಾಗೆ,

ನಿರೀಕ್ಷೆ ಮತ್ತು ಭರವಸೆಗಳನ್ನು ಕಳಕೊಂಡ ಹಾಗೂ ಹತಾಶೆಯ ಪರಮಾವಧಿಗೆ ತಲುಪಿದ ವ್ಯಕ್ತಿ ಮಾತ್ರ ತನ್ನೆದುರು ಯಾರಿದ್ದಾರೆ ಮತ್ತು  ಅವರ ಕೈಗಳಲ್ಲಿ ಏನೇನಿವೆ ಎಂಬುದನ್ನು ಲೆಕ್ಕಿಸದೇ ಮುನ್ನುಗ್ಗಬಲ್ಲ. ಯಾಕೆಂದರೆ, ಬದುಕುವುದಕ್ಕಾಗಿ ಅದವನ ಕೊನೆಯ ಪ್ರಯತ್ನ.  ಆದ್ದರಿಂದ ಯಾಕೆ ಇಂಥದ್ದೊಂದು  ಹತಾಶೆ ಮುಈನುಲ್ ಹಕ್‌ನಲ್ಲಿ ನಿರ್ಮಾಣವಾಗಿರಬಹುದು ಎಂಬ ಬಗ್ಗೆ ಆತನ ಎದೆಗೆ ಗುಂಡು  ಹೊಡೆದವರನ್ನು ಮತ್ತು ಆತನ ಜಡ ಶರೀರದ ಮೇಲೆ ನರ್ತನ ಮಾಡಿದ ಫೋಟೋಗ್ರಾಫರನ್ನು ಸಮರ್ಥಿಸುತ್ತಿರುವವರು ಸ್ವಯಂ  ಪ್ರಶ್ನಿಸಿಕೊಳ್ಳಬೇಕು.

ಅಸ್ಸಾಮ್‌ನಲ್ಲಿರುವ ಮುಸ್ಲಿಮರನ್ನು ಅವಹೇಳನ, ವ್ಯಂಗ್ಯಕ್ಕೆ ಗುರಿಪಡಿಸುವ ಮತ್ತು ಅನ್ಯರೆಂದು ಬಿಂಬಿಸುವ ತಂತ್ರವು ಅಲ್ಲಿ ಮತ್ತು  ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವ್ಯವಸ್ಥಿತವಾಗಿ ನಡೆಯತೊಡಗಿದೆ. ಅಸ್ಸಾಮ್‌ನಲ್ಲಿ 40 ಲಕ್ಷದಷ್ಟು ಅಕ್ರಮ  ಬಾಂಗ್ಲಾದೇಶಿ ವಲಸಿಗರಿದ್ದಾರೆ ಎಂದು ಎನ್‌ಆರ್‌ಸಿಯ ಮೊದಲ ಪಟ್ಟಿಯಲ್ಲಿ ಹೇಳಲಾಗಿತ್ತು. ಹಾಗೆ ಹೇಳುವಾಗ ಅವರೆಲ್ಲ ಮುಸ್ಲಿಮರು  ಎಂಬ ಹುಸಿ ಅರ್ಥವನ್ನು ಅದಕ್ಕೆ ಕೊಡುವ ಪ್ರಯತ್ನ ನಡೆಯಿತು. ಅಸ್ಸಾಮ್‌ನಲ್ಲಿ ಲಕ್ಷಾಂತರ ಮುಸ್ಲಿಮರು ಅಕ್ರಮವಾಗಿ ವಾಸಿಸುತ್ತಿದ್ದು,  ಇದರಿಂದಾಗಿ ಸ್ಥಳೀಯರ ಉದ್ಯೋಗ, ಆಹಾರ, ಅಧಿಕಾರಕ್ಕೆ ಕುತ್ತು ಬರುತ್ತಿದೆ ಎಂಬ ಹುಸಿ ಸುಳ್ಳನ್ನು ಸೋಶಿಯಲ್ ಮೀಡಿಯಾಗಳಲ್ಲಿ  ಮತ್ತು ಮುಖ್ಯವಾಹಿನಿಯ ಟಿ.ವಿ. ಚಾನೆಲ್‌ಗಳಲ್ಲೂ ಸಂದರ್ಭಕ್ಕೆ ತಕ್ಕಂತೆ ಪ್ರಚಾರ ಮಾಡುವ ಪ್ರಕ್ರಿಯೆ  ನಿರಂತರ ನಡೆಯತೊಡಗಿತು.  ಬಿಜೆಪಿ ಅಸ್ಸಾಮ್‌ನಲ್ಲಿ ಚುನಾವಣೆಯನ್ನು ಎದುರಿಸಿರುವುದೇ ಅಕ್ರಮ ಮುಸ್ಲಿಮರು ಎಂಬ ಧ್ಯೇಯದ ಅಡಿಯಲ್ಲಾಗಿರುವುದರಿಂದ ಮತ್ತು  ಅದನ್ನು ಮುಂದಿಟ್ಟು ಸರ್ವ ಮುಸ್ಲಿಮರನ್ನು ಅಪರಾಧಿ ಭಾವದಲ್ಲಿ ಬದುಕುವಂತೆ ಮಾಡುವ ಹುನ್ನಾರದ ಭಾಷಣಗಳು  ಪ್ರತ್ಯಕ್ಷವೋ  ಪರೋಕ್ಷವೋ ನಡೆಯುತ್ತಿದ್ದುದರಿಂದ ಸಾಮಾಜಿಕವಾಗಿ ಮುಸ್ಲಿಮರೆಂದರೆ ಅನ್ಯರು ಎಂಬ ಭಾವ ಸೃಷ್ಟಿಯಾಗುವುದಕ್ಕೆ  ಸಾಧ್ಯವಾಗತೊಡಗಿತು. ಮುಸ್ಲಿಮರ ಮೇಲೆ ನಡೆಯುವ ಯಾವುದೇ ಅನ್ಯಾಯವೂ ‘ಅಕ್ರಮ ವಲಸಿಗ’ ಎಂಬ ಹಣೆಪಟ್ಟಿಯೊಂದಿಗೆ  ನ್ಯಾಯೀಕರಿಸಲ್ಪಡುವ ಸನ್ನಿವೇಶ ನಿರ್ಮಾಣವಾಗತೊಡಗಿತು. ಮುಸ್ಲಿಮರಿಗೆ ಹೊಡೆದಷ್ಟೂ ಓಟುಗಳು ಹೆಚ್ಚಾಗುತ್ತವೆ ಎಂಬ ಅಂಶ ಅಧಿಕಾರಸ್ಥರಿಗೆ ಸ್ಪಷ್ಟವಾಗುವುದರೊಂದಿಗೆ, ಹೊಡೆತವನ್ನು ಸಹಿಸಿಕೊಳ್ಳುವ ಸಂದರ್ಭಗಳೂ ಸೃಷ್ಟಿಯಾಗತೊಡಗಿದುವು. ಎಲ್ಲಿಯವರೆಗೆಂದರೆ,

ಅಂತಿಮ ಹಂತದ ಎನ್‌ಆರ್‌ಸಿ ಪಟ್ಟಿ ಬಿಡುಗಡೆಗೊಂಡು, ಅದರಲ್ಲಿ ಅಕ್ರಮ ವಲಸಿಗರಾಗಿ ಮುಸ್ಲಿಮರಿಗಿಂತ ಹಿಂದೂಗಳ ಸಂಖ್ಯೆಯೇ  ಅಧಿಕವಿರುವುದು ಬಹಿರಂಗವಾದಾಗ ಆ ಇಡೀ ಎನ್‌ಆರ್‌ಸಿ ಪಟ್ಟಿಯನ್ನೇ ತಿರಸ್ಕರಿಸಲು ಅಧಿಕಾರದಲ್ಲಿರುವವರು ಮುಂದಾದರು. ಇಡೀ  ದೇಶದಲ್ಲೇ  ಎನ್‌ಆರ್‌ಸಿ ಮಾಡುವಾಗ ಅಸ್ಸಾಮ್‌ನಲ್ಲೂ ಹೊಸದಾಗಿ ಎನ್‌ಆರ್‌ಸಿ ಮಾಡುವೆವು ಎಂಬ ಅರ್ಥದಲ್ಲಿ ಕೇಂದ್ರ ಗೃಹಸಚಿವರೇ  ಹೇಳಿಕೆಯನ್ನೂ ಕೊಟ್ಟರು. ಹಾಗಂತ,

ಕಳೆದ ಆರೇಳು ವರ್ಷಗಳಲ್ಲಿ ನಡೆದಿರುವ ಬೆಳವಣಿಗೆಗಳು ಇವು. ದಕ್ಷಿಣ ಭಾರತದ ಪಾಲಿಗೆ ಈ ಬೆಳವಣಿಗೆಗಳು ಅಷ್ಟೇನೂ ಪರಿಚಿತ  ಮತ್ತು ಬಹುಚರ್ಚಿತ ಅಲ್ಲವಾಗಿದ್ದರೂ ಉತ್ತರ ಭಾರತದ ಪಾಲಿಗೆ ಹಾಗಿಲ್ಲ. ಅಸ್ಸಾಮ್‌ನ ಮಟ್ಟಿಗಂತೂ ಇದೊಂದು ಸಿಡಿಯಲಿರುವ  ಲಾವಾರಸ. ಅಲ್ಲಿಯ ಮುಸ್ಲಿಮರ ಒಳಗಿನ ಬೇಗುದಿ. ಅವರು ಅನ್ಯ, ಅಕ್ರಮ ವಲಸಿಗ, ಬಾಂಗ್ಲಾದೇಶಿ ಎಂಬೆಲ್ಲಾ ಹೀನೈಕೆಯನ್ನು ಪ್ರತಿನಿತ್ಯ ಅನುಭವಿಸುತ್ತಾ ಬದುಕುವುದು ಸುಲಭ ಸಾಧ್ಯವಲ್ಲ. ತಾವು ಅಕ್ರಮ ವಲಸಿಗರಲ್ಲದಿದ್ದರೂ ಮತ್ತು ತಲೆತಲಾಂತರಗಳಿಂದ ಅದೇ  ಮಣ್ಣಿನಲ್ಲಿ ದುಡಿಯುತ್ತಾ ಬದುಕುತ್ತಿದ್ದರೂ ಹಾಗೂ ಎಲ್ಲರಂತೆ ತೆರಿಗೆ ಪಾವತಿಸುತ್ತಾ ನೆಲದ ಕಾನೂನಿಗೆ ಬದ್ಧವಾಗುತ್ತಾ ಜೀವಿಸುತ್ತಿದ್ದರೂ  ಪ್ರತಿನಿತ್ಯ ಕೇಳಬೇಕಾದ ಕೊಂಕುನುಡಿಗಳನ್ನು ಅವರು ಸಹಿಸಬೇಕು. ಹಾಗಂತ,

ಇಂಥ  ಅಪಪ್ರಚಾರಗಳು ಮುಸ್ಲಿಮರ ಪಾಲಿಗೆ ಹಿಂಸಕವಾದರೆ, ಮುಸ್ಲಿಮೇತರರ ಪಾಲಿಗೆ ಅದು ಅಪಪ್ರಚಾರವಾಗಿ  ಗುರುತಿಸಿಕೊಂಡಿರಬೇಕಾದ ಅಗತ್ಯವೂ ಇಲ್ಲ. ಅವರದನ್ನು ನಿಜ ಎಂದೇ ನಂಬಿರಬಹುದು. ಅಥವಾ ನಂಬಿಸುವಂಥ  ಪ್ರಯತ್ನಗಳು  ವ್ಯವಸ್ಥಿತವಾಗಿ ನಡೆಯುತ್ತಿರಬಹುದು. ಆದ್ದರಿಂದ ಮುಸ್ಲಿಮರನ್ನು ಅವರು ಅಕ್ರಮ ವಲಸಿಗರೆಂದೇ ನಿಜವಾಗಿಯೂ ನಂಬುವ  ವಾತಾವರಣವೂ ಸೃಷ್ಟಿಯಾಗಿರಬಹುದು. ಆ ಕಾರಣಕ್ಕಾಗಿಯೇ ಮುಸ್ಲಿಮರ ಮೇಲೆ ಅಸಂತೋಷವನ್ನು ಹೃದಯದಲ್ಲಿ  ಬಚ್ಚಿಟ್ಟುಕೊಂಡಿರಬಹುದು. ತಮ್ಮ ಉದ್ಯೋಗ, ಭೂಮಿ, ಹಕ್ಕನ್ನು ಕಸಿಯುತ್ತಿರುವವರು ಎಂಬ ಬೇಗುದಿಯೊಂದಿಗೆ ಅವರು  ಬದುಕುತ್ತಿರಬಹುದು. ಅದಕ್ಕೆ ಪೂರಕವಾಗುವ ಸುಳ್ಳು ಚಿತ್ರ ಮತ್ತು ವೀಡಿಯೋಗಳನ್ನು ಶಂಕರ್ ವಿಜಯ್ ಪೂನಿಯಾನಂಥ  ಫೋಟೋಗ್ರಾಫರ್‌ಗಳು ಒದಗಿಸುತ್ತಲೂ ಇರಬಹುದು. ಅಂದಹಾಗೆ, 

ಈಗ ಆ ಬಿದಿರಿನಂಥ ದೇಹದ ಮುಈನುಲ್ ಹಕ್ಕನ್ನು ಮತ್ತೆ  ಕಣ್ಣೆದುರು ತಂದುಕೊಳ್ಳಿ. ಏನನಿಸುತ್ತದೆ? ಆ ಬಿದಿರು ಕೋಲು ಮುಳುಗುತ್ತಿರುವವನ ಪಾಲಿನ ಹುಲ್ಲುಕಡ್ಡಿಯಂತೆ ಕಾಣಿಸದೇ? ಭರವಸೆ  ಇಟ್ಟುಕೊಳ್ಳುವುದಕ್ಕೆ ಏನೇನೂ ಇಲ್ಲದಿರುವಾಗ ಓರ್ವ ನಿರ್ವಸಿತ ಮತ್ತು ಸಂತ್ರಸ್ತ ಬೇರೆ ಏನು ಮಾಡಿಯಾನು? ತನ್ನ ಸುತ್ತಲಿರುವವರು  ತಾನು ಹುಟ್ಟಿ ಬೆಳೆದ ಮಣ್ಣಿನಿಂದ ಹೊರಕ್ಕಟ್ಟುವುದಕ್ಕಾಗಿ ಸಂಚು ನಡೆಸುತ್ತಿದ್ದಾರೆ ಎಂಬುದು ಸ್ಪಷ್ಟವಾದಾಗ ತನ್ನೆದುರು ಇರುವವರಲ್ಲಿ  ಬಂದೂಕಿದೆಯೋ ಬಾಂಬಿದೆಯೋ ಎಂಬುದನ್ನು ಪರಿಗಣಿಸಲಾರರು ಎಂಬುದಕ್ಕೆ ಉದಾಹರಣೆಯಲ್ಲವೇ ಆ ಮುಈನುಲ್ ಹಕ್?  ಗುಂಡೇಟಿನಿಂದ ನೆಲಕ್ಕುರುಳಿದ ಆತನ ಮೇಲೆ 20ರಷ್ಟು ಪೊಲೀಸರು ಲಾಠಿಯಿಂದ ಹೊಡೆದರಲ್ಲ ಮತ್ತು ಆ ಫೋಟೋಗ್ರಾಫರ್ ಆತನ  ಮೇಲೆ ಜಿಗಿದನಲ್ಲ, ಅದು ಈ ಮುಈನುಲ್ ಹಕ್‌ನ ಆತಂಕದ ಸಮರ್ಥನೆಯಲ್ಲವೇ?
ಈ ಮಣ್ಣಿನಲ್ಲಿ ತನ್ನವರೆಂಬುವವರು ಯಾರೂ ಇಲ್ಲ ಎಂಬ ಭಾವ ಆತನಲ್ಲಿ ಸೃಷ್ಟಿಯಾಗಿದ್ದರೆ ಅದು ನಿರಾಧಾರ ಅಲ್ಲ. ಆತನಿಗೆ ಗುಂಡಿಟ್ಟ  ಪೊಲೀಸರು ಮತ್ತು ಆತನ ಮೇಲೆ ನರ್ತನ ಮಾಡಿದವನೇ ಅದಕ್ಕೆ ಪ್ರತ್ಯಕ್ಷ ಆಧಾರ. ಪೊಲೀಸರು ಪ್ರಭುತ್ವವನ್ನು ಪ್ರತಿನಿಧಿಸಿದರೆ,  ಫೋಟೋಗ್ರಾಫರ್ ಮಾಧ್ಯಮವನ್ನು ಪ್ರತಿನಿಧಿಸುತ್ತಾನೆ. ಪ್ರಭುತ್ವ ಮತ್ತು ಮಾಧ್ಯಮ ಕೈಕೈ ಜೋಡಿಸಿದರೆ, ಬೆಕ್ಕೂ ಹುಲಿಯಾದೀತು.  ಪ್ರಾಮಾಣಿಕರೂ ಪರಮ ಪಾಪಿಗಳಾದಾರು.

No comments:

Post a Comment