Tuesday, 14 April 2015

ಪಂಡಿತರ ಮನೆ ನಿರ್ಮಾಣದ ಹೊಣೆಯನ್ನು ಮುಸ್ಲಿಮರೇ ವಹಿಸಿಕೊಳ್ಳಲಿ

ಬಲವಂತದ ವಲಸೆ, ಒಕ್ಕಲೆಬ್ಬಿಸುವಿಕೆ, ಬೆದರಿಕೆ.. ಮುಂತಾದ ಪದಗಳಿಗೆ ಮೇಲ್ನೋಟಕ್ಕೆ ಕಾಣುವ ಅರ್ಥಗಳಷ್ಟೇ ಇರುವುದಲ್ಲ. ಅಂಥ ಪದಗಳೊಳಗೆ ಕಣ್ಣೀರಿರುತ್ತದೆ. ಭಾವುಕತೆಯಿರುತ್ತದೆ. ಕರುಳು ಮಿಡಿಯುವ ಹೃದಯ ವಿದ್ರಾವಕ ಕತೆಗಳಿರುತ್ತವೆ. ಆದರೆ ಇವುಗಳಿಗೆ ‘ಪ್ರತ್ಯೇಕ ವಸತಿ ಪ್ರದೇಶ' ನಿರ್ಮಿಸುವುದು ಪರಿಹಾರವೇ? ಹಾಗಂತ ಬಿಜೆಪಿ ವಾದಿಸುತ್ತಿದೆ. 1990ರಲ್ಲಿ ಕಾಶ್ಮೀರದಿಂದ ದೊಡ್ಡ ಪ್ರಮಾಣದಲ್ಲಿ ದೆಹಲಿ ಮತ್ತಿತರೆಡೆಗೆ ಬಲವಂತದಿಂದ ವಲಸೆ ಹೋದ ಪಂಡಿತರಿಗೆ ಕಾಶ್ಮೀರದಲ್ಲಿಯೇ ಪ್ರತ್ಯೇಕ ವಸತಿ ಪ್ರದೇಶವನ್ನು ನಿರ್ಮಾಣ ಮಾಡಬೇಕೆಂದು ಅದು ವಾದಿಸುತ್ತಿದೆ. ಆದರೆ ಕಾಶ್ಮೀರಿಗಳು ಅದನ್ನು ಒಪ್ಪುತ್ತಿಲ್ಲ. ಅದನ್ನು ಇಸ್ರಲ್ ಮಾದರಿ ಎಂದವರು ಖಂಡಿಸಿದ್ದಾರೆ. ಇಸ್ರೇಲನ್ನು ಮಾದರಿಯಾಗಿ ಪರಿಗಣಿಸಿರುವ ಬಿಜೆಪಿಯು ಕಾಶ್ಮೀರಿ ಪಂಡಿತರ ಸಮಸ್ಯೆಗೆ ಇಸ್ರೇಲನ್ನು ಪರಿಹಾರವಾಗಿ ಕಂಡಿರುವುದರಲ್ಲಿ ಅಚ್ಚರಿ ಏನಿಲ್ಲ. ಫೆಲೆಸ್ತೀನಿಯರನ್ನು ಬಲವಂತದಿಂದ ಒಕ್ಕಲೆಬ್ಬಿಸಿ ಅಲ್ಲಿ ಯಹೂದಿಗಳನ್ನು ನೆಲೆಗೊಳಿಸುವ ಅಕ್ರಮ ಕೃತ್ಯದಲ್ಲಿ ಇಸ್ರೇಲ್ ಇವತ್ತು ತೊಡಗಿಸಿಕೊಂಡಿದೆ. ಮಾತ್ರವಲ್ಲ, ಈ ಭಾಗದಲ್ಲಿ ಬೃಹತ್ ಗೋಡೆಯನ್ನೆಬ್ಬಿಸಿ ಫೆಲೆಸ್ತೀನಿ ಮತ್ತು ಇಸ್ರೇಲಿಗರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಶಾಶ್ವತವಾಗಿ ವಿಭಜಿಸಿಬಿಡುತ್ತಿದೆ. ಯಹೂದಿಗಳಿಗೆ ಒದಗಿಸಲಾಗುವ ಸೌಲಭ್ಯಗಳಲ್ಲಿ ಸಣ್ಣ ಪ್ರಮಾಣವನ್ನೂ ವಿಭಜಿತ ಫೆಲೆಸ್ತೀನಿಗಳಿಗೆ ಅದು ಒದಗಿಸುತ್ತಿಲ್ಲ. ಜಾಗತಿಕವಾಗಿಯೇ ಖಂಡನೆಗೆ ಒಳಗಾಗಿರುವ ಈ ವಸತಿ ನಿರ್ಮಾಣ ಯೋಜನೆಯನ್ನು ಬಿಜೆಪಿ ಇದೀಗ ಕಾಶ್ಮೀರಿ ಪಂಡಿತರಿಗಾಗಿ ಜಾರಿ ಮಾಡುವ ಉಮೇದನ್ನು ವ್ಯಕ್ತಪಡಿಸುತ್ತಿದೆ. ಕಾಶ್ಮೀರದ ಹಿಂದೂಗಳು ಮತ್ತು ಮುಸ್ಲಿಮರು ಬೇರೆ ಬೇರೆ ವಸತಿ ಪ್ರದೇಶಗಳಲ್ಲಿ ಅನ್ಯರಂತೆ ಬದುಕುವ ಯೋಜನೆ ಇದು. ಹಿಂದೂಗಳಿಗೆ ಒಂದು ಪ್ರದೇಶ, ಮುಸ್ಲಿಮರಿಗೆ ಒಂದು ಪ್ರದೇಶ. ಆದರೆ ಈ ಯೋಜನೆ ಇಷ್ಟಕ್ಕೇ ನಿಲ್ಲುವ ಸಾಧ್ಯತೆಯಿಲ್ಲ. ಹಿಂದೂಗಳ ಮೇಲೆ ಮುಸ್ಲಿಮರು ದಾಳಿ ಮಾಡಿದರು ಎಂಬ ಆರೋಪ ಹೊರಿಸಿ ಬಳಿಕ ಇಸ್ರೇಲ್ ಎಬ್ಬಿಸಿದಂತೆ ಪ್ರತ್ಯೇಕತೆಯ ಗೋಡೆಯನ್ನು ಎಬ್ಬಿಸುವ ಉದ್ದೇಶವೂ ಇದರಲ್ಲಿರಬಹುದು. ಮುಸ್ಲಿಮ್ ತೀವ್ರವಾದಿಗಳಿಂದ ಹಿಂದೂಗಳನ್ನು ರಕ್ಷಿಸುವುದಕ್ಕೆ ಇದು ಅನಿವಾರ್ಯ ಎಂದೂ ಸಮರ್ಥಿಸಿಕೊಳ್ಳಬಹುದು. ಹೀಗೆ ಹಿಂದೂ-ಮುಸ್ಲಿಮರನ್ನು ಜೊತೆಯಾಗಿ ಬೆಳೆಸಿದ ಕಾಶ್ಮೀರಿವು ದ್ವೇಷದ ಗೋಡೆಯನ್ನೆಬ್ಬಿಸಿ ಶಾಶ್ವತ ವೈರತ್ವಕ್ಕೆ ನಾಂದಿಯನ್ನೂ ಹಾಡಬಹುದು. ಅಷ್ಟಕ್ಕೂ, ಜನರು ಬಲವಂತದಿಂದ ವಲಸೆ ಹೋಗಿರುವುದು ಕಾಶ್ಮೀರದಿಂದ ಮಾತ್ರವಲ್ಲ, ಗುಜರಾತ್, ಅಸ್ಸಾಮ್, ಉತ್ತರ ಪ್ರದೇಶ.. ಸಹಿತ ಈ ದೇಶದ ಹಲವು ರಾಜ್ಯಗಳು ಇಂಥ ವಲಸೆಗಳಿಗೆ ತುತ್ತಾಗಿವೆ. ಗುಜರಾತ್ ಹತ್ಯಾಕಾಂಡದ ಸಮಯದಲ್ಲಿ ಸಾವಿರಾರು ಮಂದಿ ತಮ್ಮ ಹುಟ್ಟಿದೂರಿನಿಂದ ವಲಸೆ ಹೋದರು. ಮನೆ, ಗದ್ದೆ, ಅಂಗಡಿ ಎಲ್ಲವನ್ನೂ ಕಳಕೊಂಡು ನಿರಾಶ್ರಿತ ಶಿಬಿರಗಳಲ್ಲಿ ವಾಸ ಹೂಡಿದರು. ಅವರನ್ನು ಮರಳಿ ಸ್ವೀಕರಿಸುವುದಕ್ಕೆ ಪರಿಸರದ ಮಂದಿ ಅಡ್ಡಿಪಡಿಸುತ್ತಿದ್ದಾರೆ. ಅವರ ಬೆಲೆಬಾಳುವ ಆಸ್ತಿಗಳು ಇತರರ ಪಾಲಾಗಿವೆ. ಕಾಶ್ಮೀರಿ ಪಂಡಿತರಿಗೆ ಪ್ರತ್ಯೇಕ ವಸತಿ ಪ್ರದೇಶದ ಯೋಜನೆಯನ್ನು ಮುಂದಿಟ್ಟಿರುವ ಬಿಜೆಪಿಇವರ ಕುರಿತೇಕೆ ಮಾತಾಡುತ್ತಿಲ್ಲ?   ಕಳೆದ 13 ವರ್ಷಗಳಿಂದ ಗುಜರಾತ್ ಮತ್ತಿತರೆಡೆ ವಲಸೆ ಜೀವನ ನಡೆಸುತ್ತಿರುವ ಗುಜರಾತಿ ಮುಸ್ಲಿಮರಿಗೆ ಬಿಜೆಪಿಯೇಕೆ ಇಂಥದ್ದೊಂದು ಯೋಜನೆಯನ್ನು ಪ್ರಕಟಿಸಿಲ್ಲ? ಇವರಿಗೆ ಹಿಂದೂ ಎಂಬ ಗುರುತು ಇಲ್ಲ ಎಂಬ ಕಾರಣಕ್ಕೋ? ಕಾಶ್ಮೀರದಲ್ಲಾದರೋ ಸಮ್ಮಿಶ್ರ ಸರಕಾರವಿದೆ. ಬಿಜೆಪಿಗೆ ಸ್ಪಷ್ಟ ಬಹುಮತವಿಲ್ಲ. ಇಷ್ಟಿದ್ದೂ ಇಂಥದ್ದೊಂದು ಯೋಜನೆಯನ್ನು ಅದು ಪ್ರಸ್ತುತಪಡಿಸುತ್ತದೆಂದಾದರೆ ಸ್ಪಷ್ಟ ಬಹುಮತವಿರುವ ಗುಜರಾತ್‍ನಲ್ಲೇಕೆ ಅದನ್ನು ಜಾರಿಗೊಳಿಸಿ ತೋರಿಸಬಾರದು?
 ನಿಜವಾಗಿ, ಕಾಶ್ಮೀರಿ ಪಂಡಿತರಿಗೆ ಮನೆ ನಿರ್ಮಿಸಿಕೊಡಬೇಕಾದದ್ದು ಸರಕಾರ ಅಲ್ಲ, ಕಾಶ್ಮೀರದ ಮುಸ್ಲಿಮರು. ಎಲ್ಲೆಲ್ಲ ಕಾಶ್ಮೀರಿ ಪಂಡಿತರು 25 ವರ್ಷಗಳ ಹಿಂದೆ ವಾಸವಿದ್ದರೋ ಅಲ್ಲೆಲ್ಲ  ಮುಸ್ಲಿಮರು ಮತ್ತೆ ಹೊಸದಾಗಿ ಪಂಡಿತ ಮನೆಗಳನ್ನು ಕಟ್ಟಿಕೊಡಬೇಕಾಗಿದೆ. ಅದಕ್ಕೆ ಸರಕಾರ ಸರ್ವ ರೀತಿಯ ನೆರವು ಮತ್ತು ಪ್ರೇರಣೆಯನ್ನು ನೀಡಬೇಕಾಗಿದೆ. ಹಾಗಂತ ಯಾರೆಲ್ಲ ಮನೆ ನಿರ್ಮಿಸಿ ಕೊಡುತ್ತಾರೋ ಅವರೆಲ್ಲ ಪಂಡಿತರನ್ನು ಓಡಿಸಿದವರು ಎಂದರ್ಥವಲ್ಲ. ಅದೊಂದು ಸೇವೆ. ತಮ್ಮ ಸಹೋದರರಿಗೆ ಕೊಡುವ ಪ್ರೀತಿಯ ಭರವಸೆ ಮತ್ತು ಕಾಣಿಕೆ. ತಮ್ಮ ಮನೆಯ ಪಕ್ಕ ಈ ಹಿಂದೆ ಪಂಡಿತರ ಮನೆಯಿದ್ದಿದ್ದರೆ ಮತ್ತು ವಲಸೆಯಿಂದಾಗಿ ಆ ಪ್ರದೇಶ ಖಾಲಿ ಬಿದ್ದಿದ್ದರೆ ಅಥವಾ ಅದನ್ನು ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ಮರಳಿ ಪಂಡಿತರಿಗೆ ಒಪ್ಪಿಸುವುದು ಬಹಳ ಅಗತ್ಯ. ಆಗಿರುವ ಪ್ರಮಾದಗಳನ್ನು ಪರಸ್ಪರ ಒಪ್ಪಿಕೊಂಡು ಮರಳಿ ಸೌಹಾರ್ದದ ಸೌಧ ಕಟ್ಟುವ ಕೆಲಸ ಎರಡೂ ಕಡೆಯಿಂದ ಆಗಬೇಕಿದೆ. ಇಂಥದ್ದೊಂದು ಆರಂಭ ಮಾತ್ರ ಕಾಶ್ಮೀರಿ ಪಂಡಿತ ಸಮಸ್ಯೆಗೆ ಪರಿಹಾರವೇ ಹೊರತು ಪ್ರತ್ಯೇಕ ವಸತಿ ಪ್ರದೇಶಗಳಲ್ಲ. ಹಿಂದೂ ಮತ್ತು ಮುಸ್ಲಿಮರು ಕಾಶ್ಮೀರದಲ್ಲಿ ಬಿಜೆಪಿಯೋ ಶಿವಸೇನೆ, ಸಂಘಪರಿವಾರವೋ ಹುಟ್ಟಿಕೊಂಡ ಬಳಿಕ ಕಾಣಿಸಿಕೊಂಡವರಲ್ಲ. ಈ ಪ್ರದೇಶದಲ್ಲಿ ಅವರು ಸ್ವಾತಂತ್ರ್ಯ ಪೂರ್ವದಲ್ಲೇ ಬದುಕುತ್ತಿದ್ದಾರೆ. ಕಾಶ್ಮೀರಿಗಳಿಗೆ ಪಂಡಿತರೂ ಹೊಸಬರಲ್ಲ, ಪಂಡಿತರಿಗೆ ಕಾಶ್ಮೀರಿಗಳೂ ಹೊಸಬರಲ್ಲ. ಈ ಸಹಜತೆಗೆ ಬಿಜೆಪಿಯ ಪ್ರತ್ಯೇಕ ವಸತಿ ಯೋಜನೆಯು ಖಂಡಿತ ಮಸಿ ಬಳಿಯುತ್ತದೆ. ಧಾರ್ಮಿಕ ನೆಲೆಯಲ್ಲಿ ಒಂದು ರಾಜ್ಯದ ಜನತೆಯನ್ನು ಆ ಕಡೆ-ಈ ಕಡೆ ಮಾಡಿಬಿಟ್ಟರೆ ಆ ಬಳಿಕ ಅಲ್ಲಿ ದ್ವೇಷದ ಹೊರತು ಶಾಂತಿ ನೆಲೆಗೊಳ್ಳಲು ಸಾಧ್ಯವೇ ಇಲ್ಲ.
 25 ವರ್ಷಗಳ ಹಿಂದೆ ವಲಸೆ ಹೋದ ಪಂಡಿತರಿಗೂ ಅವರ ಈಗಿನ ಹೊಸ ತಲೆಮಾರಿಗೂ ದೊಡ್ಡದೊಂದು ಅಂತರವಿದೆ. ಈ ಹೊಸ ತಲೆಮಾರು ಕಾಶ್ಮೀರಕ್ಕೆ ಭೇಟಿ ಕೊಟ್ಟಿದೆಯೋ ಅಲ್ಲಿ ನೆಲೆಸಲು ಉತ್ಸುಕವಾಗಿದೆಯೋ ಎಂಬುದೂ ಸ್ಪಷ್ಟವಿಲ್ಲ. ಕಾಶ್ಮೀರಿದಲ್ಲಿ ತಮ್ಮ ಭೂಮಿ, ಮನೆ, ಕೃಷಿ ತೋಟಗಳನ್ನು ಕೈ ಬಿಟ್ಟು ಬಂದ ಹಿರಿಯ ಪಂಡಿತರಂಥಲ್ಲ ಅವರ ಮಕ್ಕಳು. ಅವರು ದೆಹಲಿಯಲ್ಲೋ ಇನ್ನಿತರ ಪ್ರದೇಶಗಳಲ್ಲೋ ಹೊಸ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಕಾಶ್ಮೀರಕ್ಕೆ ಹೋಲಿಸಿದರೆ ಅವರು ಈಗ ಬದುಕುತ್ತಿರುವ ಪ್ರದೇಶಗಳು ಹೆಚ್ಚು ಸುರಕ್ಷಿತ. ಅವರು ತಮ್ಮ ಉದ್ಯೋಗ, ಮನೆಯನ್ನು ಬಿಟ್ಟು ಕಾಶ್ಮೀರಕ್ಕೆ ತೆರಳಬಹುದೇ ಎಂಬ ಅನುಮಾನವೊಂದು ಸಹಜವಾಗಿಯೇ ಇದೆ. ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಚಳವಳಿ ಈಗಲೂ ಜೀವಂತವಿದೆ. ಪ್ರವಾಹದ ಭೀತಿಯಿರುತ್ತದೆ. ಮಿಲಿಟರಿ ಮತ್ತು ಜನರ ನಡುವೆ ಆಗಾಗ ಸಂಘರ್ಷದ ವಾತಾವರಣ ನಿರ್ಮಾಣವಾಗುತ್ತದೆ. ಅಲ್ಲಿನ ಅರ್ಥವ್ಯವಸ್ಥೆ ಮತ್ತು ಉದ್ಯೋಗ ಲಭ್ಯತೆಯು ದೆಹಲಿ ಇನ್ನಿತರ ಪ್ರದೇಶಗಳಿಗೆ ಹೋಲಿಸಿದರೆ ಕಡಿಮೆಯೇ. ಇಂಥ ಸ್ಥಿತಿಯಲ್ಲಿ ವಲಸಿಗ ಪಂಡಿತ ಕುಟುಂಬವು ಕಾಶ್ಮೀರಕ್ಕೆ ಮರಳಲು ಮುಂದಾಗಬಹುದೇ? ಪ್ರತ್ಯೇಕ ವಸತಿ ಪ್ರದೇಶದ ಬಗ್ಗೆ ಮಾತಾಡುವವರು ಈ ಬಗ್ಗೆ ಎಷ್ಟಂಶ ಆಲೋಚಿಸಿದ್ದಾರೆ?
 ಕಾಶ್ಮೀರವನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸುವುದು ಪಂಡಿತ ಸಮಸ್ಯೆಗೆ ಪರಿಹಾರ ಅಲ್ಲ,ಸ್ವತ ಅದುವೇ ಒಂದು ಸಮಸ್ಯೆ. ಮುಸ್ಲಿಮರ ನಡುವೆಯೇ ಹಿಂದೂಗಳ ಮನೆ ನಿರ್ಮಾಣವಾಗಬೇಕು. ಅದರ ನೇತೃತ್ವನ್ನು ಮುಸ್ಲಿಮರೇ ವಹಿಸಿಕೊಳ್ಳಬೇಕು. ಅಂಥದ್ದೊಂದು ಸೌಹಾರ್ದದ ವಾತಾವರಣ ನಿರ್ಮಾಣಕ್ಕಾಗಿ ಪ್ರಯತ್ನಗಳು ನಡೆಯಬೇಕು. ಕಾಶ್ಮೀರ ಹಿಂದೂ ಮತ್ತು ಮುಸ್ಲಿಮರದ್ದು. ಅದು ಹಾಗೆಯೇ ಉಳಿಯಲಿ.

No comments:

Post a Comment