Wednesday, 8 April 2015

ದ್ವೇಷದ ಗೋಡೆಗೆ ಕನ್ನ ಕೊರೆದು ಭಗವದ್ಗೀತೆ ಓದಿದ ಮರ್ಯಮ್ ಸಿದ್ದೀಕಿ

     ಧರ್ಮಗಳ ನಡುವೆ ಅಧರ್ಮೀಯರು ಎಬ್ಬಿಸಿರುವ ಅನುಮಾನದ ಗೋಡೆಗೆ ಮುಂಬೈಯ ಮರ್ಯಮ್ ಸಿದ್ದಿಕಿ ಎಂಬ 12ರ ಬಾಲೆ ಪುಟ್ಟದೊಂದು ಕನ್ನ ಕೊರೆದು ಅತ್ತ ಜಿಗಿದಿದ್ದಾಳೆ. ಅಲ್ಲಿಂದ ಭಗವದ್ಗೀತೆಯನ್ನು ಎತ್ತಿಕೊಂಡು ಓದಿದ್ದಾಳೆ. ಇಸ್ಕಾನ್ ಸಂಸ್ಥೆಯು ಏರ್ಪಡಿಸಿದ ‘ಗೀತಾ ಚಾಂಪಿಯನ್ಸ್ ಲೀಗ್’ ಎಂಬ ಭಗವದ್ಗೀತಾ ಸ್ಪರ್ಧೆಯಲ್ಲಿ ಭಾಗವಹಿಸಿ 4 ಸಾವಿರ ಮಂದಿಯನ್ನು ಸೋಲಿಸಿ ಪ್ರಥಮ ಬಹುಮಾನ ಪಡೆದಿದ್ದಾಳೆ. ಈ ಬೆಳವಣಿಗೆ ಸಾರ್ವಜನಿಕವಾಗಿ ಎಷ್ಟು ಅಚ್ಚರಿ ಹುಟ್ಟಿಸಿದೆಯೆಂದರೆ, ಈ ಬಾಲೆ ದಿನದ ಬ್ರೇಕಿಂಗ್ ನ್ಯೂಸ್ ಆಗಿದ್ದಾಳೆ. ಮಾಧ್ಯಮಗಳು ಈಕೆಯನ್ನು ಮುಖಪುಟದಲ್ಲಿ ಕೂರಿಸಿ ಗೌರವಿಸಿವೆ. ‘ಧರ್ಮಗ್ರಂಥಗಳು ಮನುಷ್ಯರಿಗಾಗಿವೆ ಮತ್ತು ಅವುಗಳ ಅಧ್ಯಯನವು ನಮ್ಮನ್ನು ಇನ್ನಷ್ಟು ಉತ್ತಮರನ್ನಾಗಿಸುತ್ತದೆ' ಎಂಬ ಆಕೆಯ ಹೇಳಿಕೆಯನ್ನು ಅವು ಹೊಸ ತತ್ವಜ್ಞಾನವೆಂಬಂತೆ ಮಹತ್ವ ಕೊಟ್ಟು ಪ್ರಕಟಿಸಿವೆ. ನಿಜವಾಗಿ, ಈ ಬಾಲೆ ಕಳೆದು ವಾರದ ಹಿರೋಯಿನ್. ಆಕೆ ಕೆಲವು ಸತ್ಯಗಳನ್ನು ಜಗತ್ತಿನ ಮುಂದಿರಿಸಿದ್ದಾಳೆ. ಆ ಸತ್ಯ ಯಾವುದೆಂದರೆ, ಧರ್ಮಗಳ ನಡುವೆ ಪರಸ್ಪರ ವಿಶ್ವಾಸ ಮತ್ತು ಸ್ನೇಹ ಸಾಧ್ಯ ಎಂಬುದು. ದ್ವೇಷದ ಬೇಲಿಯನ್ನು ಕಿತ್ತೊಗೆದು ಧರ್ಮಗಳ ನಡುವೆ ಸೇತುವೆಯನ್ನು ಸ್ಥಾಪಿಸುವಂಥದ್ದು. ಹಿಂದೂ-ಮುಸ್ಲಿಮರ ನಡುವೆ ಸಹಜ ಸಂಬಂಧ ಅಸಾಧ್ಯ ಎಂದು ಪ್ರಚಾರ ಮಾಡುವವರನ್ನು ತರಾಟೆಗೆ ತೆಗೆದುಕೊಳ್ಳುವಂಥದ್ದು. ಈ ಬಾಲೆಯ ಈ ಪ್ರಯತ್ನಕ್ಕೆ ನಾವು ಅಭಿನಂದನೆಯನ್ನು ಸಲ್ಲಿಸಬೇಕಾಗಿದೆ.
 ದುರಂತ ಏನೆಂದರೆ, ಇವತ್ತು ಧರ್ಮದ ಬಗ್ಗೆ ಜ್ಞಾನಿಗಳಿಗಿಂತ ಅಜ್ಞಾನಿಗಳೇ ಹೆಚ್ಚು ಮಾತಾಡುತ್ತಿದ್ದಾರೆ ಅಥವಾ ಸುದ್ದಿಯಲ್ಲಿದ್ದಾರೆ. ಒಂದು ಧರ್ಮದವರ ಹತ್ಯಾಕಾಂಡವನ್ನು ಸಂಭ್ರಮಿಸುವಷ್ಟರ ಮಟ್ಟಿಗೆ ಈ ಅಜ್ಞಾನ ಮೇಲುಗೈಯನ್ನು ಪಡೆದಿದೆ. ಮುಸ್ಲಿಮರ ಬಾಂಗ್ ಅನ್ನು ನಿಷೇಧಿಸಬೇಕು ಎಂದು ಇವರು ಆಗ್ರಹಿಸುತ್ತಾರೆ. ಮದ್ರಸಗಳಲ್ಲಿ ಹಿಂದೂ ವಿರೋಧಿ ಪಾಠಗಳನ್ನು ಹೇಳಿಕೊಡಲಾಗುತ್ತದೆಂದು ಇವರು ಆರೋಪಿಸುತ್ತಾರೆ. ಮುಸ್ಲಿಮರ ಪ್ರತಿ ಚಟುವಟಿಕೆಗಳೂ ಹಿಂದೂ ಧರ್ಮದ ವೈರಿಯಂತೆ ಇಲ್ಲಿ ಬಿಂಬಿಸಲಾಗುತ್ತದೆ. ಅವರ ಜನನವೂ ಅಪಾಯಕಾರಿ. ಅವರ ಶೈಕ್ಷಣಿಕ ವಿೂಸಲಾತಿಯೂ ಅಪಾಯಕಾರಿ. ಅವರ ಆಹಾರ ಕ್ರಮದಿಂದ ಹಿಂದೂ ಧರ್ಮಕ್ಕೆ ತೊಂದರೆಯಿದೆ. ಅವರ ಕೌಟುಂಬಿಕ ರೀತಿ-ನೀತಿಗಳು ಈ ಮಣ್ಣಿಗೆ ಯೋಗ್ಯವಾಗಿಲ್ಲ. ಅವರು ಹಿಂದೂ ಸಂಸ್ಕøತಿಯನ್ನು ಅಳವಡಿಸಿಕೊಳ್ಳಬೇಕು. ಮುಸ್ಲಿಮ್ ಯುವಕರೊಂದಿಗೆ ಹಿಂದೂ ಯುವತಿಯರು ಮಾತಾಡಬಾರದು. ಮುಸ್ಲಿಮ್ ಮಹಿಳೆಯರ ಬುರ್ಖಾಕ್ಕೆ ನಿಷೇಧ ಹೇರಬೇಕು.. ಇಂತಹ ಆಗ್ರಹಗಳು ಹಿಂದೂ ಧರ್ಮದ ರಕ್ಷಕರೆಂದು ಹೇಳಿಕೊಳ್ಳುತ್ತಿರುವವರಿಂದ ಈ ದೇಶದಲ್ಲಿ ಆಗಾಗ ಕೇಳಿ ಬರುತ್ತಲೇ ಇದೆ. ಇವರ ಆಗ್ರಹ ಮತ್ತು ದೇಹಭಾಷೆಗಳು ಎಷ್ಟು ಏಕಪಕ್ಷೀಯವಾಗಿರುತ್ತವೆಯೆಂದರೆ, ಮುಸ್ಲಿಮರ ಮೇಲಾಗುವ ಪ್ರತಿ ಅನ್ಯಾಯವನ್ನೂ ಅವರು ಸಮರ್ಥಿಸಿಕೊಳ್ಳುತ್ತಾರೆ. ಹಿಂದೂ ನಾಮಧಾರಿಗಳು ಮಸೀದಿಯನ್ನು ಧ್ವಂಸ ಮಾಡಿದರೆ ಅಥವಾ ಮುಸ್ಲಿಮ್ ಹತ್ಯಾಕಾಂಡದಲ್ಲಿ ಭಾಗಿಯಾದರೆ ಅಥವಾ ಲೈಂಗಿಕ ಹಲ್ಲೆಯಲ್ಲಿ ಪಾಲ್ಗೊಂಡರೆ ಪ್ರತಿಭಟನೆ ಬಿಡಿ ಕನಿಷ್ಠ ಖಂಡನಾ ಹೇಳಿಕೆಯನ್ನೂ ಹೊರಡಿಸದ ಇವರು ಇದಕ್ಕೆ ತದ್ವಿರುದ್ಧ ಪ್ರಕರಣಗಳು ನಡೆದರೆ ಸಾಲು ಸಾಲು ಪ್ರತಿಭಟನೆಗಳನ್ನು ನಡೆಸುತ್ತಾರೆ. ದ್ವೇಷ ಭಾಷಣಗಳು ಏರ್ಪಾಡಾಗುತ್ತವೆ. ಹಿಂದೂ ಧರ್ಮ ಅಸ್ತಿತ್ವದಲ್ಲಿರುವುದೇ ಇಸ್ಲಾಮನ್ನು ದ್ವೇಷಿಸಲು ಎಂದು ಹೊಸ ತಲೆಮಾರು ಅಂದುಕೊಳ್ಳುವುದಕ್ಕೆ ಪೂರಕವಾದ ವಾತಾವರಣವೊಂದನ್ನು ನಿರ್ಮಿಸಲು ಕೆಲವು ಮಂತ್ರಿಗಳೂ ಸಾಧುಗಳೂ, ಸಾಧ್ವಿಗಳೂ, ವಿದ್ವಾಂಸರೂ, ಕಾರ್ಯಕರ್ತರೂ ಯಶಸ್ವಿಯಾಗುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ಮರ್ಯಮ್ ಸಿದ್ದೀಕಿ ಭಗವದ್ಗೀತೆಯನ್ನು ಎತ್ತಿಕೊಂಡಿದ್ದಾಳೆ. ಅದನ್ನವಳು ಎಷ್ಟು ಸರಾಗವಾಗಿ ಓದಿದಳೆಂದರೆ, ಅದು ಇಸ್ಲಾಮಿನ ವಿರೋಧಿ ಎಂದು ಆಕೆಗೆ ಅನಿಸಿಯೇ ಇಲ್ಲ. ಆಕೆ ಅದನ್ನು ಓದಿದ ಬಳಿಕವೂ ಮುಸ್ಲಿಮಳಾಗಿಯೇ ಉಳಿದಿದ್ದಾಳೆ. ಅಂದರೆ, ಭಗವದ್ಗೀತೆಯು ಮುಸ್ಲಿಮರ ವಿರೋಧಿ ಖಂಡಿತ ಅಲ್ಲ. ಹಾಗಾದರೆ ಭಗವದ್ಗೀತೆಯ ಅನುಯಾಯಿಗಳೆಂದು ಹೇಳಿಕೊಳ್ಳುವವರು ಮುಸ್ಲಿಮರನ್ನು ದ್ವೇಷಿಸುವುದು ಯಾವುದರ ಆಧಾರದಲ್ಲಿ? ಅವರ ಧರ್ಮ ರಕ್ಷಣೆಯ ಅಜೆಂಡಾವನ್ನು ತಯಾರಿಸುವುದು ಯಾರು? ಅವರ ಉದ್ದೇಶವೇನು? ರಾಜಕೀಯ ಅಥವಾ ಇನ್ನಿತರ ಹಿತಾಸಕ್ತಿಗಳು ‘ಹಿಂದೂ ಧರ್ಮದ ರಕ್ಷಣೆ'ಯ ವೇಷದಲ್ಲಿ ಅಡಗಿಕೊಂಡಿವೆಯೇ? ಭಗವದ್ಗೀತೆ ಹೇಳದ ದ್ವೇಷದ ಮಾತುಗಳನ್ನು ಧರ್ಮದ ಹೆಸರಲ್ಲಿ ಹೇಳುತ್ತಾ ಅವರು ತಮ್ಮ ಗುರಿಯೆಡೆಗೆ ಧಾವಿಸುತ್ತಿದ್ದಾರೆಯೇ? ಅವರು ಯಾವ ಧರ್ಮಗ್ರಂಥದ ಪ್ರತಿನಿಧಿಗಳು?
 ‘ಧರ್ಮದಲ್ಲಿ ಬಲಾತ್ಕಾರವಿಲ್ಲ (ಪವಿತ್ರ ಕುರ್‍ಆನ್: 2: 256)’ ಎಂದು ಹೇಳಿದ ಧರ್ಮದಲ್ಲಿ ಗುರುತಿಸಿಕೊಂಡ ಬಾಲೆಯೋರ್ವಳು ಭಗವದ್ಗೀತೆಯನ್ನು ಓದುವ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಅಚ್ಚರಿಯದ್ದೇನೂ ಅಲ್ಲ. ಅದೊಂದು ಸಹಜ ಕ್ರಿಯೆ. ‘ಪವಿತ್ರ ಗ್ರಂಥವನ್ನು ಓದಲು ಬಯಸುವವರಿಗೆ ಅದಕ್ಕೆ ಅವಕಾಶ ಮಾಡಿಕೊಡಬೇಕೆಂದು (ಪವಿತ್ರ ಕುರ್‍ಆನ್ 9:6)’ ಹೇಳುವ ಆಕೆಯ ಧರ್ಮದ ಮಟ್ಟಿಗೆ ಭಗವದ್ಗೀತೆಯು ಅಧ್ಯಯನ ಮಾಡಲೇಬೇಕಾದ ಗ್ರಂಥ. ಅನುಯಾಯಿಗಳು ಸುಳ್ಳು ಹೇಳಬಹುದು, ಭ್ರಷ್ಟಾಚಾರಿ ಆಗಬಹುದು. ಮಸೀದಿ-ಮಂದಿರ, ಚರ್ಚ್‍ಗಳನ್ನು ಧ್ವಂಸಗೊಳಿಸಬಹುದು, ಅತ್ಯಾಚಾರವೆಸಗಬಹುದು. ಆದರೆ ಧರ್ಮಗ್ರಂಥಗಳು ಸುಳ್ಳು ಹೇಳಲಾರವು. ಭ್ರಷ್ಟಾಚಾರವೆಸಗಿದವ ಹಿಂದೂವಾದುದರಿಂದ ಅದು ಸರಿ, ಮುಸ್ಲಿಮ್ ಆದರೆ ತಪ್ಪು ಎಂದು ಭಗವದ್ಗೀತೆ ಹೇಳಲಾರದು. ಅತ್ಯಾಚಾರವೆಸಗಿದವನ ಹೆಸರು ಮುಹಮ್ಮದ್ ಆಗಿರುವುದರಿಂದ ಅದು ಕ್ಷಮಾರ್ಹ, ಗಣೇಶ ಆಗಿರುತ್ತಿದ್ದರೆ ಶಿಕ್ಷಾರ್ಹ ಎಂದು ಪವಿತ್ರ ಕುರ್‍ಆನ್ ಪ್ರತಿಪಾದಿಸದು. ‘ಅನ್ಯರ ಆರಾಧ್ಯರನ್ನು ತೆಗಳಬಾರದು' (ಪವಿತ್ರ ಕುರ್‍ಆನ್ 6:108) ಎಂದು ಹೇಳುವ ಧರ್ಮವು ಭಜನೆಯನ್ನು ವಿರೋಧಿಸಲು ಸಾಧ್ಯವೇ ಇಲ್ಲ. ‘ಧರ್ಮಗ್ರಂಥಗಳು ಬೇರೆ ಬೇರೆಯಾಗಿದ್ದರೂ ಸಮಾನ ವಿಷಯಗಳ ಬಗ್ಗೆ ಕುಳಿತು ಚರ್ಚಿಸೋಣ..’ ಎಂದು ಆಹ್ವಾನಿಸುತ್ತದೆ ಪವಿತ್ರ ಕುರ್‍ಆನ್. ಈ ಆಹ್ವಾನ ಅತ್ಯಂತ ಮುಕ್ತವಾದುದು. ಸಮಾಜದಲ್ಲಿ ಹಿಂದೂ ಮತ್ತು ಮುಸ್ಲಿಮರು ಜೊತೆಯಾಗಿ ವಿರೋಧಿಸಬೇಕಾದ ಅಸಂಖ್ಯ ಕೆಡುಕುಗಳಿವೆ. ಅನಾಚಾರಗಳಿವೆ. ಪವಿತ್ರ ಕುರ್‍ಆನ್ ಮತ್ತು ಭಗವದ್ಗೀತೆ ಸಮಾನವಾಗಿ ಖಂಡಿಸಿದ ಕೃತ್ಯಗಳಿವೆ. ಆದರೆ, ಹಿಂದೂ ಧರ್ಮದ ರಕ್ಷಣೆಯ ಮಾತನ್ನಾಡುವವರಿಗೆ ಇವಾವುವೂ ಕಾಣಿಸುತ್ತಲೇ ಇಲ್ಲ. ಅವರಿಗೆ ಬುರ್ಖಾ, ಗಡ್ಡ, ಮದುವೆ, ಮಕ್ಕಳು, ಮಸೀದಿ, ಆಹಾರ.. ಇವೇ ಕಾಣಿಸುತ್ತಿವೆ. ಇವನ್ನೇ ಹಿಂದೂ ಧರ್ಮದ ಸುರಕ್ಷತೆಗೆ ಅಡ್ಡಿ ಎಂದು ಹೇಳಲಾಗುತ್ತದೆ. ಮುಸ್ಲಿಮರಲ್ಲಿಯೂ ಇದೇ ಬಗೆಯ ತಿಳುವಳಿಕೆಯಿದೆ. ಹಿಂದೂ ಧರ್ಮವನ್ನು ಕೆಲವು ನಿರ್ದಿಷ್ಟ ವಿಷಯಗಳಿಗೆ ಸೀಮಿತಗೊಳಿಸಿ ಅವರು ನೋಡುತ್ತಾರೆ. ನಿಜವಾಗಿ, ಧರ್ಮ ಮತ್ತು ಅದು ಧ್ವನಿಸುವ ಅರ್ಥ ತೀರಾ ವಿಶಾಲವಾದುದು. ಅದು ಅರ್ಥವಾಗಬೇಕಾದರೆ ಧರ್ಮಗ್ರಂಥಗಳನ್ನು ಓದಲೇಬೇಕು. ವಿಷಾದ ಏನೆಂದರೆ, ಧರ್ಮರಕ್ಷಣೆಗಿಳಿದಿರುವ ಹೆಚ್ಚಿನವರು ಧರ್ಮಗ್ರಂಥಗಳನ್ನೇ ಓದಿಲ್ಲ. ಅದರ ವೈಶಾಲ್ಯತೆ ಮತ್ತು ಅದು ಪ್ರತಿಪಾದಿಸುವ ಸಹೋದರತೆ ಅವರಿಗೆ ಅರ್ಥವೂ ಆಗಿಲ್ಲ. ಆದ್ದರಿಂದ ಹಿಂದೂ ಮತ್ತು ಇಸ್ಲಾಮ್ ಧರ್ಮದ ರಕ್ಷಣೆಯೆಂದರೆ ಮಸೀದಿಯನ್ನೋ ಮಂದಿರವನ್ನೋ ಉರುಳಿಸುವುದು ಅಂದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮರ್ಯಮ್ ಸಿದ್ದೀಕಿಯ ಭಗವದ್ಗೀತೆಯನ್ನು ನಾವು ಎತ್ತಿಕೊಳ್ಳಬೇಕು. ಆಕೆ ಈ ಸುಳ್ಳಿನ ಗೋಡೆಗೆ ಕನ್ನ ಕೊರೆದು ಜಿಗಿದಿದ್ದಾಳೆ. ಈ ಕನ್ನದಿಂದ ಆಕೆಯಂತೆ ಇನ್ನಷ್ಟು ಮಂದಿ ಜಿಗಿಯಲಿ. ಕುರ್‍ಆನ್, ಭಗವದ್ಗೀತೆ, ಬೈಬಲ್ ಸಹಿತ ಎಲ್ಲ ಧರ್ಮಗ್ರಂಥಗಳನ್ನೂ ಓದುವ ಸಂದರ್ಭ ಸೃಷ್ಟಿಯಾಗಲಿ. ಮಾತ್ರವಲ್ಲ,  ಧರ್ಮಗಳ ನಡುವೆ ದ್ವೇಷದ ಗೋಡೆಯನ್ನೆಬ್ಬಿಸುವವರಿಗೆ ಸೋಲಾಗಲಿ.

No comments:

Post a Comment