
ಅಷ್ಟಕ್ಕೂ, ಸಂಘಪರಿವಾರವು ಅದ್ದೂರಿಯಾಗಿ ಆರಂಭಿಸಿರುವ ಘರ್ ವಾಪಸಿಯ ಹಿಂದೆ ಇರುವ ನಿಜವಾದ ಉದ್ದೇಶ ಮತಾಂತರ ಎಂದು ಖಚಿತವಾಗಿ ಹೇಳುವಂತಿಲ್ಲ. ಒಂದುಕಡೆ, ದನದ ಮಾಂಸವನ್ನು ಬಹಿರಂಗವಾಗಿಯೇ ಸೇವಿಸುವ ಪ್ರತಿಭಟನಾ ಕಾರ್ಯಕ್ರಮಗಳು ಹಿಂದೂ ಧರ್ಮದಲ್ಲಿ ಗುರುತಿಸಿಕೊಂಡವರಿಂದಲೇ ಏರ್ಪಡುತ್ತಿವೆ. ತಾಳಿ ಕಿತ್ತೊಗೆಯುವ ಪ್ರತಿಭಟನೆಗಳು ನಡೆಯುತ್ತಿವೆ. ಪಂಕ್ತಿಬೇಧ, ಮಡೆಸ್ನಾನ ಸಹಿತ ಅಸ್ಪೃಶ್ಯತಾ ಆಚರಣೆಗಳ ವಿರುದ್ಧ ವಿರೋಧದ ಧ್ವನಿಗಳು ತೀವ್ರವಾಗುತ್ತಿವೆ. ಅಲ್ಲದೇ, ಮೋದಿಯವರ ಆಡಳಿತದಲ್ಲಿ ಹೇಳಿಕೊಳ್ಳಬಹುದಾದ ಸುಖದ ಅನುಭವವೂ ಜನರಿಗೆ ಆಗಿಲ್ಲ. ಕಪ್ಪು ಹಣ ಇನ್ನೂ ವಾಪಸಾಗಿಲ್ಲ. ಅತ್ಯಾಚಾರವೂ ನಿಂತಿಲ್ಲ. ಮಠ, ಮಂದಿರಗಳು ತಪ್ಪಾದ ಕಾರಣಕ್ಕೆ ಸುದ್ದಿಯಾಗುತ್ತಿವೆ. ಇಂಥ ಸಂದರ್ಭದಲ್ಲಿ ಜನರು ವಿಚಲಿತಗೊಳ್ಳದಂತೆ ನೋಡಿಕೊಳ್ಳಬೇಕಾದರೆ ಘರ್‍ವಾಪಸಿ, ಗೋಹತ್ಯೆಯಂಥ ಕಾರ್ಯಕ್ರಮಗಳನ್ನು ಚರ್ಚಾ ವಸ್ತುವಾಗಿ ಮುನ್ನೆಲೆಗೆ ತರಬೇಕಾದ ಅಗತ್ಯ ಬಹಳವೇ ಇದೆ. ಘರ್‍ವಾಪಸಿಯಲ್ಲಿ ಜನರು ಗಮನ ನೆಟ್ಟರೆ ‘ಹಣ ವಾಪಸಿ' ಮರೆತು ಹೋಗುತ್ತದೆ. ಗೋವನ್ನು ಕೇಂದ್ರೀಕರಿಸಿ ಚರ್ಚೆ ಆರಂಭಿಸಿದರೆ ಮುಸ್ಲಿಮ್ ವಿರೋಧಿ ವಾತಾವರಣವೊಂದನ್ನು ಕಟ್ಟಿ ಬೆಳೆಸುವುದಕ್ಕೆ ಸುಲಭವಾಗುತ್ತದೆ. ಬಿಜೆಪಿಯ ಸಂಸದರು ಆಗಾಗ ವಿವಾದಾತ್ಮಕ ಹೇಳಿಕೆಗಳನ್ನು ಕೊಡುತ್ತಾ ಇರುವುದರ ಹಿಂದೆ ಇಂಥದ್ದೊಂದು ರಹಸ್ಯ ಉದ್ದೇಶ ಇರಬಹುದೋ ಎಂಬ ಅನುಮಾನ ಕಾಡುವುದು ಈ ಎಲ್ಲ ಕಾರಣಗಳಿಂದಲೇ. ಈ ರಾಜಕಾರಣಿಗಳು ತಲೆಗೊಂದು ಮಾತಾಡುತ್ತಿರುವಂತೆಯೇ ಮೋದಿ ಸರಕಾರವು ತೈಲ ಮಾರುಕಟ್ಟೆಯನ್ನು ಮುಕ್ತಗೊಳಿಸಿತು. ಅವಸರವಸರವಾಗಿ ಭೂಸ್ವಾಧೀನ ಕಾಯ್ದೆಯನ್ನು ತಯಾರಿಸಿತು. ಭಾರತಕ್ಕೆ ಮಾರಕ ಆಗಬಹುದಾದ ರೀತಿಯಲ್ಲಿ ಅಮೇರಿಕದೊಂದಿಗೆ ಅಣು ಒಪ್ಪಂದಕ್ಕೆ ಸಹಿ ಹಾಕಿತು. ಅಲ್ಲದೇ ಇದೀಗ, ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ ನೂರಾರು ವರ್ಷಗಳಿಂದ ಸಂಗ್ರಹವಾಗಿರುವ ಟನ್ನುಗಟ್ಟಲೆ ಚಿನ್ನವನ್ನು ಬ್ಯಾಂಕುಗಳಲ್ಲಿ ಡಿಪಾಸಿಟ್ ಇಟ್ಟು ಅದರ ಬದಲಿಗೆ ದೇವಸ್ಥಾನಗಳಿಗೆ ಸುವರ್ಣ ಸರ್ಟಿಫಿಕೇಟು ಕೊಡುವ ಮತ್ತು ಆ ಭಾರೀ ಚಿನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಚಿನ್ನದ ಆಮದನ್ನು ಕಡಿಮೆ ಮಾಡುವ ಯೋಜನೆಯನ್ನೂ ಅದು ತಯಾರಿಸಿದೆ. ನಿಜವಾಗಿ, ದೇವಸ್ಥಾನಗಳ ಚಿನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಈ ಏಕೈಕ ಯೋಜನೆಯೇ ಬಿಜೆಪಿಯನ್ನು ಹಿಂದೂ ವಿರೋಧಿ ಎಂದು ಘೋಷಿಸುವುದಕ್ಕೆ ಧಾರಾಳ ಸಾಕು. ಒಂದು ವೇಳೆ, ಕಾಂಗ್ರೆಸ್ ಆಡಳಿತಾವಧಿಯಲ್ಲಿ ಇಂಥದ್ದೊಂದು ಯೋಜನೆ ರೂಪ ಪಡೆಯುತ್ತಿದ್ದರೆ ಈ ದೇಶದ ಸರ್ವ ದೇವಸ್ಥಾನಗಳನ್ನೂ ಬಿಜೆಪಿ ಒಟ್ಟುಗೂಡಿಸುತ್ತಿತ್ತು. ಸಂಘಪರಿವಾರ ಬೀದಿಗಿಳಿಯುತ್ತಿತ್ತು. ಆದರೆ ಈಗ ಹಾಗೆ ಮಾಡುವಂತಿಲ್ಲ. ಮಾತ್ರವಲ್ಲ, ಇವು ದೇಶದ ಗಮನ ಸೆಳೆಯದಂತೆ ನೋಡಿಕೊಳ್ಳಬೇಕಾದ ತುರ್ತೂ ಇದೆ. ಬಹುಶಃ ಘರ್‍ವಾಪಸಿ, ಗೋ ಹತ್ಯೆಯಂಥ ವಿಷಯಗಳು ಭಾರೀ ಸದ್ದಿನೊಂದಿಗೆ ಅಖಾಡಕ್ಕೆ ಇಳಿದಿರುವುದರ ಹಿಂದೆ ಇಂಥ ಸಾಧ್ಯತೆಗಳು ಖಂಡಿತ ಇವೆ.
ಹಾಗಂತ, ಧರ್ಮದಲ್ಲಿ ಬಲಾತ್ಕಾರವಿಲ್ಲ (2:256) ಎಂಬ ವಚನವನ್ನು ಪವಿತ್ರ ಕುರ್‍ಆನ್‍ಗೆ ಮಾತ್ರ ಸೀಮಿತಗೊಳಿಸಿ ನೋಡಬೇಕಿಲ್ಲ. ಅಂಥದ್ದೊಂದು ಆಶಯ ಸರ್ವ ಧರ್ಮಗಳದ್ದು. ಭಾರತಕ್ಕೆ ಇಸ್ಲಾಮ್ ಖಡ್ಗದೊಂದಿಗೆ ಆಗಮಿಸಿತು ಎಂದು ಹೇಳುವವರಿಗೂ ಖಡ್ಗವೊಂದು ಧರ್ಮವನ್ನು ಪ್ರಸಾರ ಮಾಡಲಾರದೆಂಬ ಸತ್ಯ ಖಂಡಿತ ಗೊತ್ತು. ಖಡ್ಗದೆದುರು ವಿಶ್ವಾಸ ಬದಲಿಸಿದವ ಖಡ್ಗದ ಮೊನೆ ಸರಿದಾಗ ಮತ್ತೆ ತನ್ನ ಸಹಜ ವಿಶ್ವಾಸಕ್ಕೆ ಮರಳುತ್ತಾನೆ. ಖಡ್ಗದ ವಿರುದ್ಧ ಬಂಡಾಯವೇಳುತ್ತಾನೆ. ಇದು ಮನುಷ್ಯ ಪ್ರಕೃತಿ. ಈ ಪ್ರಕೃತಿಗೆ ವಿರುದ್ಧವಾಗಿ ಈ ಹಿಂದಿನ ಭಾರತೀಯರು ಬದುಕಿದ್ದರು ಎಂದು ಹೇಳುವುದು ಅವರಿಗೆ ಮಾಡುವ ಅವಮಾನವಾಗುತ್ತದೆ. ನಿಜವಾಗಿ, ಈ ದೇಶದಲ್ಲಿ ಆಚರಣೆಯಲ್ಲಿದ್ದ ಅಸ್ಪೃಶ್ಯ ಪದ್ಧತಿಯೇ ಇಸ್ಲಾಮನ್ನೋ ಕ್ರೈಸ್ತ ಧರ್ಮವನ್ನೋ ಬೌದ್ಧ, ಬಸವ ಪಥವನ್ನೋ ಜನರು ಆರಿಸಿಕೊಳ್ಳಲು ಕಾರಣವಾಯಿತು. ಅಸ್ಪೃಶ್ಯತೆಯ ವಿರುದ್ಧ ಜನರು ಪ್ರಕೃತಿ ಸಹಜವಾಗಿಯೇ ಬಂಡೆದ್ದರು. ಈ ಬಂಡಾಯ ಇವತ್ತೂ ಮುಂದುವರಿದಿದೆ. ವಿಧವೆಯರು ತೇರು ಎಳೆದದ್ದು, ಅರ್ಚಕಿಯರಾದದ್ದು, ತಾಳಿ, ದನದ ಮಾಂಸ, ದೇವಸ್ಥಾನ ಬಹಿಷ್ಕಾರ... ಮುಂತಾದ ರೂಪಗಳಲ್ಲಿ ಅದು ಹೊರಹೊಮ್ಮುತ್ತಲೂ ಇವೆ. ಆದರೆ ಈ ಸತ್ಯವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಮಂದಿ ಖಡ್ಗ ಮತ್ತು ಬಲಾತ್ಕಾರವನ್ನು ತೋರಿಸುತ್ತಿರುತ್ತಾರೆ. ಆದ್ದರಿಂದಲೇ, ರಾಂಪುರದ ಘಟನೆ ಮುಖ್ಯವಾಗುತ್ತದೆ. ಘರ್‍ವಾಪಸಿಗೆ ಸುಂದರ ಮಾದರಿಯನ್ನು ತೋರಿಸಿಕೊಟ್ಟ ಮುಸ್ಲಿಮ್ ವಿದ್ವಾಂಸರನ್ನು ಅಭಿನಂದಿಸಬೇಕೆನಿಸುತ್ತದೆ.
No comments:
Post a Comment