Saturday 4 April 2015

ಅವರಲ್ಲದಿದ್ದರೆ ಇನ್ನಾರು ಯುವರ್ ಆನರ್?

     1987ರಲ್ಲಿ ಉತ್ತರ ಪ್ರದೇಶದ ವಿೂರತ್ ಜಿಲ್ಲೆಯ ಹಶೀಂಪುರ ಮತ್ತು ಪಕ್ಕದ ಮಲಿಯಾನ ಗ್ರಾಮಗಳಲ್ಲಿ ನಡೆದ ಹತ್ಯಾಕಾಂಡಗಳ ಪೈಕಿ ಒಂದರ ತೀರ್ಪು ಹೊರಬಿದ್ದಿದೆ. ಈ ತೀರ್ಪು ಎಷ್ಟು ಆಘಾತಕಾರಿಯಾಗಿದೆಯೆಂದರೆ, ತೀರ್ಪನ್ನು ಆಲಿಸಿದ ಸಂತ್ರಸ್ತರು ಬೀದಿಗಿಳಿದರು. ಕ್ಯಾಂಡಲ್ ಬೆಳಗಿಸಿ ವಿೂರತ್‍ನ ಬೀದಿಯಲ್ಲಿ ಮೌನ ಪ್ರತಿಭಟನೆ ನಡೆಸಿದರು. ಮನೆಯ ಬಾಗಿಲುಗಳಿಗೆ ಕಪ್ಪು ಬಾವುಟವನ್ನು ತೂಗು ಹಾಕಿದರು. ಇನ್ನು, ಮಲಿಯಾನ ಹತ್ಯಾಕಾಂಡದ ವಿಚಾರಣಾ ಪ್ರಕ್ರಿಯೆಯನ್ನು ನೋಡುವಾಗ, ಅಲ್ಲಿಗೂ ಈ ಕ್ಯಾಂಡಲ್‍ನ ಅಗತ್ಯ ಬರಬಹುದೆಂದೆನಿಸುತ್ತದೆ. ಕಪ್ಪು ಬಾವುಟವನ್ನು ತೂಗು ಹಾಕುವ ದಿನಗಳಿಗಾಗಿ ಅಲ್ಲಿನ ಬಾಗಿಲುಗಳು ಕಾಯುತ್ತಿರುವಂತೆ ಕಾಣಿಸುತ್ತಿದೆ. ಅಪರಾಧಿಗಳು ನ್ಯಾಯಾಲಯದಿಂದ ನಗುತ್ತಾ ಹೊರಬಂದ ಮತ್ತು ಸಂತ್ರಸ್ತರು ಕ್ಯಾಂಡಲ್ ಬೆಳಗಿಸಿ ಅಳುತ್ತಾ ಬೀದಿಯಲ್ಲಿ ನಡೆದ ಅಪರೂಪದ ಘಟನೆಯಿದು. ನ್ಯಾಯ ನಿರಾಕರಣೆಯ ಈ ಬೆಳವಣಿಗೆಗೆ ಏನೆನ್ನಬೇಕು? ಯಾರನ್ನು ಹೊಣೆ ಮಾಡಬೇಕು? ನ್ಯಾಯ ಪ್ರಕ್ರಿಯೆಯನ್ನೋ, ಅಧಿಕಾರಿಗಳನ್ನೋ, ರಾಜಕಾರಣಿಗಳನ್ನೋ ಅಥವಾ ಸಂತ್ರಸ್ತರನ್ನೋ?
 1987ರಲ್ಲಿ ಬಿಜೆಪಿಯ ರಾಮ ಜನ್ಮಭೂಮಿ ಆಂದೋಲನವು ಉತ್ತರ ಪ್ರದೇಶವನ್ನು ಸಾಕಷ್ಟು ಆವರಿಸಿತ್ತು. ಸಮಾಜವನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುತ್ತಾ ಧ್ರುವೀಕರಣದ ವಾತಾವರಣವನ್ನು ಹುಟ್ಟು ಹಾಕಿತ್ತು. ಅಲ್ಲಲ್ಲಿ ಸಣ್ಣ-ಪುಟ್ಟ ಕೋಮು ಘರ್ಷಣೆಗಳು ನಡೆಯುತ್ತಿದ್ದುವು. ವಿೂರತ್ ನಗರದಲ್ಲಿ ಈ ಕಾರಣದಿಂದಾಗಿ ಕಫ್ರ್ಯೂವನ್ನು ಹೇರಲಾಗಿತ್ತು. ಇಂಥ ಸ್ಥಿತಿಯಲ್ಲಿ ಮಾರ್ಚ್ 22ರಂದು ಮುಸ್ಲಿಮ್ ಬಾಹುಳ್ಯದ ಹಶೀಂಪುರಕ್ಕೆ ಪೊಲೀಸರು (PAC) ದಾಳಿ ಮಾಡಿ 50ರಷ್ಟು ಮಂದಿಯನ್ನು ಎತ್ತಿಕೊಂಡು ಹೋದರು. ಹಳದಿ ಬಣ್ಣದ ತಮ್ಮದೇ ಟ್ರಕ್‍ನಲ್ಲಿ ಅವರೆಲ್ಲರನ್ನೂ ತುಂಬಿಸಿಕೊಂಡು ನೇರ ಗಾಝಿಯಾಬಾದ್ ಜಿಲ್ಲೆಯ ಗಂಗಾ ಕಾಲುವೆಯ ಬಳಿ ನಿಲ್ಲಿಸಿ ಎಲ್ಲರಿಗೂ ಗುಂಡಿಕ್ಕಿದರು. ಬಳಿಕ ಕಾಲುವೆಗೆಸೆದರು. ಇದರಲ್ಲಿ 42 ಮಂದಿ ಸಾವಿಗೀಡಾದರು. ದುರಂತ ಏನೆಂದರೆ, ಈ ಪ್ರಕರಣದ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇ 9 ವರ್ಷಗಳ ಬಳಿಕ! ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾದದ್ದೋ 2000ದಲ್ಲಿ - ಅಂದರೆ 13 ವರ್ಷಗಳ ಬಳಿಕ! ಈ 13 ವರ್ಷಗಳಲ್ಲಿ ಈ ಆರೋಪಿ ಪೊಲೀಸರು ಅವೇ ಠಾಣೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಭಡ್ತಿ ಹೊಂದಿದ್ದಾರೆ. ಸರಕಾರವು ಇವರನ್ನು ಆರೋಪದ ಹಿನ್ನೆಲೆಯಲ್ಲಿ ವಜಾ ಮಾಡಿದ್ದೋ ಶಿಸ್ತು ಕ್ರಮ ಕೈಗೊಂಡಿದ್ದೋ ಇಲ್ಲವೇ ಇಲ್ಲ. ಈ ನಡುವೆ ಪ್ರಕರಣದ ವಿಚಾರಣೆಯನ್ನು ವಿೂರತ್‍ನಿಂದ 2002ರಲ್ಲಿ ದೆಹಲಿಯ ಸ್ಥಳೀಯ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು. ಪುನಃ ಆರೋಪಪಟ್ಟಿ ಸಲ್ಲಿಕೆಗೆ 4 ವರ್ಷಗಳು ತಗುಲಿದುವು. ಹೀಗೆ ಘಟನೆ ನಡೆದು 28 ವರ್ಷಗಳಾದ ಬಳಿಕ ಮೊನ್ನೆ ಮಾರ್ಚ್ 23ರಂದು ಎಲ್ಲ 16 ಆರೋಪಿ ಪೊಲೀಸರನ್ನೂ ಬಿಡುಗಡೆಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ. ವಿಚಾರಣಾ ಪ್ರಕ್ರಿಯೆಯು ಎಷ್ಟು ನಾಟಕೀಯವಾಗಿತ್ತೆಂದರೆ, ಪ್ರಮುಖ ಸಾಕ್ಷ್ಯಗಳೇ ದಿಢೀರ್ ಕಾಣೆಯಾಗಿದ್ದುವು. ಅನೇಕ ಪೊಲೀಸ್ ದಾಖಲೆಗಳು, ಹತ್ಯಾಕಾಂಡಕ್ಕೆ ಬಳಸಲಾದ ಶಸ್ತ್ರಾಸ್ತ್ರಗಳು ಮುಂತಾದ ಅನೇಕ ಪ್ರಬಲ ಸಾಕ್ಷ್ಯಗಳು ಕಾಣೆಯಾದ (Missing) ಪಟ್ಟಿಯಲ್ಲಿದ್ದುವು. ಹೀಗಿರುತ್ತಾ ಹಶೀಂಪುರದ ಮಂದಿ ಕ್ಯಾಂಡಲ್ ಹಿಡಿದು ತಲೆ ತಗ್ಗಿಸಿ ನಡೆಯುವುದರ ಹೊರತು ತೀರ್ಪನ್ನು ಸ್ವಾಗತಿಸುವ ಪ್ಲೇಕಾರ್ಡ್ ಹಿಡಿಯುವುದಕ್ಕೆ ಸಾಧ್ಯವೇ ಇರಲಿಲ್ಲ. ಅಂದಹಾಗೆ, ಈ ತೀರ್ಪಿನಿಂದ ತೀವ್ರ ನಿರಾಶೆಗೆ ಒಳಗಾಗಿರುವವರೆಂದರೆ ಮರಿಯಾನ ಗ್ರಾಮದ ಸಂತ್ರಸ್ತರು. ಅವರು ಸದ್ಯ ನ್ಯಾಯದ ಸರ್ವ ನಿರೀಕ್ಷೆಯನ್ನೂ ಕೈಬಿಟ್ಟು ಮಾಧ್ಯಮಗಳೊಂದಿಗೆ ಮಾತಾಡಿದ್ದಾರೆ. ಹಶೀಂಪುರ ಹತ್ಯಾಕಾಂಡದ ಮರುದಿನ ಮಾರ್ಚ್ 23ರ ರಾತ್ರಿ 2ರ ಹೊತ್ತಿಗೆ ಪೊಲೀಸರು ಗಲಭೆಕೋರ ಗುಂಪಿನೊಂದಿಗೆ ಮುಸ್ಲಿಮ್ ಬಾಹುಳ್ಯದ ಮಲಿಯಾನಕ್ಕೆ ದಾಳಿ ಮಾಡಿದರು. ಗ್ರಾಮವನ್ನು ಸಂಪರ್ಕಿಸುವ 5 ದಾರಿಗಳನ್ನೂ ಮುಚ್ಚಿದರು. ಬಳಿಕ ಪೊಲೀಸರು ಗುಂಡೆಸೆಯತೊಡಗಿದರು. ಗುಂಪು ಮನೆಗಳಿಗೆ ಬೆಂಕಿ ಇಕ್ಕಿತು. ಮನೆಯಿಂದ ಹೊರಬಂದವರನ್ನು ಇರಿಯಿತು. ಹೀಗೆ 87 ಮಂದಿ ಸಾವಿಗೀಡಾದರು. ವ್ಯಂಗ್ಯ ಏನೆಂದರೆ, ಈ ಪ್ರಕರಣದ ವಿಚಾರಣಾ ಪ್ರಕ್ರಿಯೆಯು ಇನ್ನೂ ಪ್ರಥಮ ಹಂತವನ್ನೇ ದಾಟಿಲ್ಲ. ಕಳೆದ 28 ವರ್ಷಗಳಲ್ಲಿ 800 ಬಾರಿ ವಿಚಾರಣೆಗಾಗಿ ದಿನಾಂಕವನ್ನು ಗೊತ್ತುಪಡಿಸಲಾಗಿದೆ. ಒಟ್ಟು 35 ಸಾಕ್ಷಿಗಳ ಪೈಕಿ ವಿಚಾರಣೆಗೊಳಗಾದದ್ದು ಮೂವರು ಮಾತ್ರ. ಅಲ್ಲದೇ 2011ರಲ್ಲಿ ಎಫ್.ಐ.ಆರ್. ದಿಢೀರ್ ಆಗಿ ಕಾಣೆಯಾಯಿತು. ಇದು 87 ಮಂದಿಯ ಹತ್ಯಾಕಾಂಡ ಪ್ರಕರಣದ ಸದ್ಯದ ಸ್ಥಿತಿ! ಇದಕ್ಕೆ ಏನೆನ್ನಬೇಕು? ಸಂತ್ರಸ್ತರ ಕೈಗೆ ಕ್ಯಾಂಡಲ್ ಕೊಟ್ಟು ತಲೆ ತಗ್ಗಿಸಿ ನಡೆದಾಡಿಸುವ ಈ ಸ್ಥಿತಿಯಿಂದ ವ್ಯವಸ್ಥೆಯನ್ನು ಯಾರು ಮತ್ತು ಹೇಗೆ ಮೇಲೆತ್ತಬೇಕು?
 ಒಂದು ಕಡೆ ದ್ವೇಷದ ಭಾಷೆಯಲ್ಲಿ ರಾಜಕಾರಣಿಗಳು ಮಾತಾಡುತ್ತಿದ್ದಾರೆ. ಇನ್ನೊಂದು ಕಡೆ ಈ ಭಾಷೆಯಲ್ಲಿ ಮತ್ತು ಅದು ಧ್ವನಿಸುವ ವಿಭಜನಕಾರಿ ಸಿದ್ಧಾಂತದಲ್ಲಿ ನಂಬಿಕೆಯಿಟ್ಟವರು ಪೊಲೀಸು ಠಾಣೆಗಳಲ್ಲಿ ತುಂಬಿಕೊಳ್ಳುತ್ತಿದ್ದಾರೆ. ಸಣ್ಣ-ಪುಟ್ಟ ಘರ್ಷಣೆಗಳಿಂದ ಹಿಡಿದು ಹತ್ಯಾಕಾಂಡಗಳ ವರೆಗೆ ಪೊಲೀಸರ ಪಾತ್ರವೇ ಶಂಕಿತಗೊಳ್ಳುತ್ತದೆ. ಗುಜರಾತ್ ಹತ್ಯಾಕಾಂಡ ಪ್ರಕರಣದಲ್ಲಂತೂ ಇಡೀ ಪೊಲೀಸ್ ಇಲಾಖೆಯೇ ಅನುಮಾನದ ಮೊನೆಯಲ್ಲಿದೆ. ಹಾಗಂತ ಇದು ನಿರ್ದಿಷ್ಟ ರಾಜ್ಯಕ್ಕೆ ಅಂಟಿದ ಕಾಯಿಲೆಯಲ್ಲ. ನಮ್ಮ ರಾಜ್ಯದಲ್ಲಿಯೇ ಗೋಸಾಗಾಟ, ನೈತಿಕ ಪೊಲೀಸ್ ಗಿರಿ, ಕೋಮು ಘರ್ಷಣೆಯಂತಹ ಸಂದರ್ಭಗಳಲ್ಲಿ ಪೊಲೀಸರ ಪಾತ್ರ ಅನೇಕ ಬಾರಿ ಪ್ರಶ್ನೆಗೊಳಗಾಗಿವೆ. ತಮ್ಮ ಹೊಣೆಗಾರಿಕೆಯನ್ನು ಖಾಸಗಿ ಗುಂಪುಗಳಿಗೆ ವಹಿಸಿಕೊಟ್ಟಿರುವರೋ ಎಂದು ಅನುಮಾನಿಸುವ ರೀತಿಯಲ್ಲಿ ಅವರು ವರ್ತಿಸಿದ್ದಾರೆ. ಸಮಾಜ ವಿರೋಧಿ ಗುಂಪುಗಳು ಯಾವ ಭಯವೂ ಇಲ್ಲದೇ ಕಾನೂನು ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಪೊಲೀಸರ ಮೇಲಿನ ಶಂಕೆಯನ್ನು ದಿನೇ ದಿನೇ ಹೆಚ್ಚಿಸುತ್ತಿದೆ. ಇಂಥ ಸನ್ನಿವೇಶದಲ್ಲಿ ಹಶೀಂಪುರ ಹತ್ಯಾಕಾಂಡದ ಬಗೆಗಿನ ತೀರ್ಪು ಸಂತ್ರಸ್ತರ ಪರ ಇರಲೇಬೇಕಾದ ಮತ್ತು ಆರೋಪಿ ಪೊಲೀಸರಿಗೆ ಶಿಕ್ಷೆ ಆಗಲೇಬೇಕಾದ ಅಗತ್ಯ ಬಹಳವೇ ಇತ್ತು. ಹಾಗೆ ಆಗಿರುತ್ತಿದ್ದರೆ ಸಂತ್ರಸ್ತರಲ್ಲಿ ನ್ಯಾಯದ ಬಗ್ಗೆ ನಿರೀಕ್ಷೆ ಹುಟ್ಟಿಕೊಳ್ಳುವುದಷ್ಟೇ ಅಲ್ಲ, ಹತ್ಯಾಕಾಂಡ ಮನಸ್ಥಿತಿಯ ಪೊಲೀಸರಲ್ಲಿ ಶಿಕ್ಷೆಯ ಬಗ್ಗೆ ಭಯವೂ ಮೂಡುತ್ತಿತ್ತು. ಆದರೆ ಹಶೀಂಪುರದ ತೀರ್ಪು ಈ ನಿರೀಕ್ಷೆಯನ್ನೇ ಸಾಯಿಸಿಬಿಟ್ಟಿದೆ. ಪೊಲೀಸ್ ಇಲಾಖೆ ಮತ್ತು ರಾಜಕಾರಣಿಗಳು ಮನಸ್ಸು ಮಾಡಿದರೆ ಯಾವ ಭೀಕರ ಕ್ರೌರ್ಯವೂ ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ ಎಂಬ ಅಪಾಯಕಾರಿ ಸಂದೇಶವನ್ನು ರವಾನಿಸಿದೆ. ಹಶೀಂಪುರ ಹತ್ಯಾಕಾಂಡದ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದುದು ಕಾಂಗ್ರೆಸ್ ಸರಕಾರ. ಆ ಬಳಿಕ ಉತ್ತರ ಪ್ರದೇಶವನ್ನು ಬಹುಜನ ಸಮಾಜವಾದಿ ಪಕ್ಷ, ಸಮಾಜವಾದಿ ಸಹಿತ ಜಾತ್ಯತೀತರೆಂದು ಘೋಷಿಸಿಕೊಂಡ ಎಲ್ಲರೂ ಆಳಿದ್ದಾರೆ. ಆದರೆ, ಅವರಾರಿಗೂ ಹಶೀಂಪುರದ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲ. 42 ಮಂದಿಯನ್ನು ಆ ಪೊಲೀಸರು ಕೊಂದಿಲ್ಲವಾದರೆ ಕೊಂದವರಾರು ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಆದ್ದರಿಂದಲೇ, ವಿೂರತ್‍ನ ಬೀದಿಯಲ್ಲಿ ಮಾರ್ಚ್ 23ರಂದು ಕಾಣಿಸಿಕೊಂಡ ಕ್ಯಾಂಡಲ್‍ಗಳು ಮುಖ್ಯವಾಗುತ್ತವೆ ನ್ಯಾಯಾಲಯದ ತೀರ್ಪು ಸಂತ್ರಸ್ತರ ಪಾಲಿಗೆ ಕೆಲವೊಮ್ಮೆ ಹತ್ಯಾಕಾಂಡದಷ್ಟೇ ಬರ್ಬರವಾಗಬಹುದು ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲುತ್ತದೆ. ಇದು ಖಂಡಿತ ಆಘಾತಕಾರಿ.

No comments:

Post a Comment