Wednesday, 25 March 2015

ನೀರು ಪಾಲಾಗುವ ಮಕ್ಕಳು ಮತ್ತು ದಡದಲ್ಲಿ ನಿಂತು ಕಾರಣ ಹುಡುಕುವ ನಾವು..

    ಮಕ್ಕಳು ಅತ್ಯಂತ ಹೆಚ್ಚು ಒತ್ತಡವನ್ನು ಎದುರಿಸುವುದು ಪರೀಕ್ಷೆಯ ಸಂದರ್ಭದಲ್ಲಿ. ಪರೀಕ್ಷೆ ಎಂಬುದು ಮಕ್ಕಳ ಪ್ರತಿಭೆಯ ಅಳತೆಗೋಲಷ್ಟೇ ಅಲ್ಲ, ಅವರ ಭವಿಷ್ಯವನ್ನು ಬರೆಯುವ ನಿರ್ಣಾಯಕ ಘಟ್ಟ ಕೂಡ. ಆದ್ದರಿಂದಲೇ, ಪರೀಕ್ಷೆ ಬರೆಯುವುದು  ಮಕ್ಕಳಾದರೂ ಅದಕ್ಕಾಗಿ ತಯಾರಿ ನಡೆಸುವವರಲ್ಲಿ ಮಕ್ಕಳಷ್ಟೇ ಇರುವುದಲ್ಲ. ಹೆತ್ತವರು, ಶಿಕ್ಷಕರು, ಸಮಾಜ ಎಲ್ಲರೂ ಇರುತ್ತಾರೆ. ಹೆತ್ತವರು ತಮ್ಮ ಮಕ್ಕಳ ಪರೀಕ್ಷೆಯನ್ನು ಗಮನದಲ್ಲಿರಿಸಿಕೊಂಡು ಕಾರ್ಯಕ್ರಮಗಳನ್ನು ನಿಗದಿಪಡಿಸುತ್ತಾರೆ. ಮದುವೆ-ಮುಂಜಿ ಕಾರ್ಯಕ್ರಮಗಳಿಂದ ತಪ್ಪಿಸಿಕೊಳ್ಳುತ್ತಾರೆ. ಟಿ.ವಿ. ಆಫ್ ಆಗುತ್ತದೆ. ಶಿಕ್ಷಕರು ಹೆಚ್ಚುವರಿಯಾಗಿ ದುಡಿಯುತ್ತಾರೆ. ತಮ್ಮ ಕಾಲೇಜಿಗೆ ಹೆಚ್ಚಿನ ಫಲಿತಾಂಶ ಬರಬೇಕೆಂಬ ಉಮೇದೂ ಅವರಲ್ಲಿರುತ್ತದೆ.. ಹೀಗೆ ಹಲವರ ನಿರೀಕ್ಷೆಗಳನ್ನು ನಿಜಗೊಳಿಸುವುದಕ್ಕಾಗಿ ಮಗುವೊಂದು ಅಕ್ಷರಗಳ ಜೊತೆಗೆ ಹೋರಾಟಕ್ಕಿಳಿಯಬೇಕಾಗುತ್ತದೆ. ತನ್ನ ಮಗು ಸಾಫ್ಟ್ ವೇರ್ ಇಂಜಿನಿಯರೋ ಡಾಕ್ಟರೋ ಇನ್ನೇನೋ ಆಗಬೇಕೆಂದು ಅಪ್ಪ ಬಯಸಿರುತ್ತಾನೆ. ಅಮ್ಮನ ಆಸೆಯೇ ಬೇರೆ. ಸಂಬಂಧಿಕರು ಮಗುವಿನ ಬಗ್ಗೆ ಇನ್ನಾವುದೋ ಕಣಿಯನ್ನು ಹೇಳಿರುತ್ತಾರೆ. ಈ ಎಲ್ಲರ ಭಾರವನ್ನು ಹರೆಯದ ಮಗುವೊಂದು ಹೊತ್ತುಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಪಠ್ಯಪುಸ್ತಕಗಳ ವಿರುದ್ಧ ಯುದ್ಧ ಹೂಡಬೇಕಾಗುತ್ತದೆ. ಇಂಥ ಒತ್ತಡದ ಸಂದರ್ಭದಲ್ಲಿ ಮಗುವೊಂದು ಎಡವಟ್ಟು ಮಾಡಿಕೊಳ್ಳುವ ಅಪಾಯವೂ ಇರುತ್ತದೆ. ಓದಿನ ಮೇಲಿನ ಗಮನವು ಕೆಲವೊಮ್ಮೆ ಸ್ವಶರೀರದ ಮೇಲೆಯೇ ಗಮನ ಕೊಡದಷ್ಟು ಅಥವಾ ಅಪಾಯವನ್ನು ಗಂಭೀರವಾಗಿ ಪರಿಗಣಿಸದಷ್ಟು ಆಳವಾಗಿರುತ್ತದೆ. ಮೊನ್ನೆ ನದಿದಂಡೆಯಲ್ಲಿ ಕುಳಿತು ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದ ಮಕ್ಕಳ ಪೈಕಿ ಇಬ್ಬರು ನೀರು ಪಾಲಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಪರಿಸರದ ಈ ಮಕ್ಕಳಿಗೆ ಈಜು ಬರುತ್ತಿಲ್ಲ ಎಂದಲ್ಲ. ನೀರಿನ ಸೆಳೆತದ ಬಗ್ಗೆ ಅರಿವಿರದ ಮಕ್ಕಳೂ ಇವಲ್ಲ. ಹೀಗಿದ್ದೂ ಈ ಮಕ್ಕಳು ನೀರು ಪಾಲಾದರೆಂದರೆ, ಪರೀಕ್ಷೆಯ ಒತ್ತಡವು ಆ ಸಂದರ್ಭದ ಅಪಾಯವನ್ನು ಕಡೆಗಣಿಸಿಬಿಡುವಷ್ಟು ತೀವ್ರವಾಗಿತ್ತೇನೋ ಎಂದು ಅನುಮಾನಿಸಬೇಕಾಗುತ್ತದೆ. ಹಾಗಂತ, ಇಂಥ ಸಾವುಗಳನ್ನು ನಾವು ಯಾವುದಾದರೊಂದು ಜಿಲ್ಲೆಗೆ ಸೀಮಿತಗೊಳಿಸಬೇಕಾಗಿಲ್ಲ. ಕಳೆದ ವರ್ಷ ಬಾವಿಕಟ್ಟೆಯಲ್ಲಿ ಕುಳಿತು ಪಿಯುಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮಗುವೊಂದು ಆಯತಪ್ಪಿ ಬಾವಿಯೊಳಗೆ ಬಿದ್ದು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿತ್ತು. ಆದ್ದರಿಂದ ಹೆತ್ತವರು ಮಕ್ಕಳ ಪರೀಕ್ಷಾ ತಯಾರಿಯ ಸಂದರ್ಭದಲ್ಲಿ ಅತ್ಯಂತ ಜಾಗರೂಕರಾಗಿರಬೇಕು. ಪರೀಕ್ಷಾ ಸಿದ್ಧತೆಗಾಗಿ ಅವರು ಆಯ್ದುಕೊಳ್ಳುವ ಸ್ಥಳ, ಅವರ ಓಡಾಟ, ಹಾವ-ಭಾವಗಳ ಮೇಲೆ ಕಣ್ಣಿಟ್ಟಿರಬೇಕು. ಅಪಾಯಕ್ಕೆ ಅವಕಾಶವಾಗಬಲ್ಲ ಪರಿಸರವನ್ನು ಸಿದ್ಧತೆಗೆ ಆಯ್ದುಕೊಳ್ಳದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕು.
 ಮಕ್ಕಳು ಸಾಮಾನ್ಯವಾಗಿ ಮಾಧ್ಯಮಗಳ ಮುಖಪುಟದಲ್ಲಿ ಬರುವುದು ಒಂದೋ ಪರೀಕ್ಷೆಗೆ ಸಿದ್ಧತೆ ನಡೆಸುವ ಸಂದರ್ಭದಲ್ಲಿ ಅಥವಾ ಪರೀಕ್ಷೆಯ ನಂತರ. ಇವೆರಡೂ ಒತ್ತಡದ ಸಂದರ್ಭಗಳು. ಪರೀಕ್ಷೆಯ ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಿದ ಮಗು ಕೆಲವೊಮ್ಮೆ ಆ ಬಳಿಕದ ಫಲಿತಾಂಶದ ಒತ್ತಡವನ್ನು ಎದುರಿಸುವುದರಲ್ಲಿ ವಿಫಲವಾಗುವುದಿದೆ. ಮಾಧ್ಯಮಗಳಂತೂ ಅಂಥ ಸಾವುಗಳನ್ನು ಮುಖಪುಟದಲ್ಲಿಟ್ಟು ಹಿಂದಿನ ವರ್ಷಕ್ಕೂ ಆ ವರ್ಷಕ್ಕೂ ಆತ್ಮಹತ್ಯೆಯ ಅಂಕಿಸಂಖ್ಯೆಗಳಲ್ಲಿ ಎಷ್ಟು ವ್ಯತ್ಯಾಸಗಳಿವೆ ಎಂಬ ಲೆಕ್ಕಾಚಾರದಲ್ಲಿ ತೊಡಗುತ್ತವೆ. ರಾಜಕಾರಣಿಗಳು ಹೇಳಿಕೆಗಳನ್ನು ಕೊಡುವುದರಲ್ಲಿ ಬ್ಯುಸಿಯಾಗುತ್ತಾರೆ. ಒಂದು ನಿರ್ದಿಷ್ಟ ಅವಧಿಯೊಳಗೆ ಕ್ಷಿಪ್ರವಾಗಿ ನಡೆಯುವ ಈ ಎಲ್ಲ ಬೆಳವಣಿಗೆಗಳ ಬಳಿಕ ಎಲ್ಲವೂ ತಣ್ಣಗಾಗುತ್ತದೆ. ದುರಂತ ಏನೆಂದರೆ, ಮಕ್ಕಳು ನಮ್ಮ ಚರ್ಚೆಯ ವ್ಯಾಪ್ತಿಗೆ ಬರಬೇಕೆಂದರೆ ಅವರು ಸಾಯಲೇಬೇಕು ಎಂಬ ಅಲಿಖಿತ ನಿಯಮವೊಂದನ್ನು ನಾವೆಲ್ಲ ಮಾಡಿಟ್ಟುಕೊಂಡಿರುವಂತಿದೆ. ಆದ್ದರಿಂದಲೇ, ಮಕ್ಕಳ ಬಗ್ಗೆ, ಅವರ ಮೇಲಿನ ಒತ್ತಡದ ಕುರಿತು, ಸಮಾಜ ಅವರ ಮೇಲೆ ಇರಿಸುವ ಅಸಮರ್ಪಕ ನಿರೀಕ್ಷೆಗಳ ಕುರಿತು.. ಚರ್ಚಿಸುವುದಕ್ಕೆ ನಮ್ಮ ಪತ್ರಿಕೆಗಳು ಮತ್ತು ಚಾನೆಲ್‍ಗಳು ತಮ್ಮ ಪ್ರೈಮ್ ಟೈಮ್‍ಗಳನ್ನೋ ಪೇಜ್‍ಗಳನ್ನೋ ವಿೂಸಲಿಡುವುದೇ ಇಲ್ಲ. ಮಗು ಕಲಿಯುತ್ತದೆ, ಪರೀಕ್ಷೆ ಬರೆಯುತ್ತದೆ, ಮುಂದಿನ ವ್ಯಾಸಂಗಕ್ಕೆ ಸೇರಿಕೊಳ್ಳುತ್ತದೆ.. ಎಂಬಂತಹ ಉಡಾಫೆಯ ವಾತಾವರಣವೊಂದು ಪ್ರೌಢರ ಜಗತ್ತಿನಲ್ಲಿದೆ. ಈ ಬಗೆಯ ಉಡಾಫೆಯೇ ಇಂದು ನಮ್ಮ ನಡುವಿನ ಮಕ್ಕಳು ಕಳೆದು ಹೋಗುವುದಕ್ಕೆ ಕಾರಣವಾಗುತ್ತಿದೆ.
 ನಿಜವಾಗಿ, ಇವತ್ತಿನ ಸಾಮಾಜಿಕ ವಾತಾವರಣ ಎಷ್ಟು ಪೈಪೋಟಿಯಿಂದ ಕೂಡಿದೆಯೆಂದರೆ, ಮಗುವೊಂದು ನಿರಾಳವಾಗಿ ಉಸಿರಾಡುವಂತಹ ವಾತಾವರಣವೇ ಇಲ್ಲ. ಪ್ರಕೃತಿಯೊಂದಿಗೆ ಆಡಿ, ಅನುಭವಿಸಿ ಓದುವ ವಾತಾವರಣವೂ ಇಲ್ಲ. ಲೈಂಗಿಕ ದೌರ್ಜನ್ಯದಿಂದ ಹಿಡಿದು ‘ಅಕ್ಷರ ದೌರ್ಜನ್ಯಗಳ' ವರೆಗೆ ವಿವಿಧ ರೀತಿಯ ದೌರ್ಜನ್ಯಗಳು ಮಕ್ಕಳನ್ನು ಇವತ್ತು ಸುತ್ತುವರಿದು ಬಿಟ್ಟಿವೆ. ಶಾಲೆಗಳು ಅಕ್ಷರಗಳನ್ನು ಉರು ಹೊಡೆವ ಯಂತ್ರಗಳನ್ನು ತಯಾರಿಸುತ್ತಿದ್ದರೆ ಮನೆಯಲ್ಲೂ ಮಕ್ಕಳಿಗೆ ಸುಖವಿಲ್ಲ. ಸಂಜೆ ಶಾಲೆಯಿಂದ ಮರಳಿದ ಮಗುವನ್ನು ಹೆತ್ತವರು ನೇರ ಟ್ಯೂಷನ್‍ಗೆ ಕಳುಹಿಸುತ್ತಾರೆ. ಅಲ್ಲಿಂದ ಮರಳಿದ ಮೇಲೆ ಪುನಃ ಓದುವ ಶಿಕ್ಷೆ. ಮಗುವಂತೂ ‘ಓದು, ಓದು ಮತ್ತೂ ಓದು..' ಎಂಬ ಒತ್ತಡದ ಕುಲುಮೆಯಲ್ಲಿ ಬೇಯುತ್ತಾ ಬೆಳೆಯುತ್ತಿರುತ್ತದೆ. ಹೀಗೆ ಓದಿಸದಿದ್ದರೆ ಮುಂದೆ ಸ್ಪರ್ಧೆಯನ್ನು ಎದುರಿಸುವುದು ಹೇಗೆ ಎಂಬ ಭೀತಿ ಹೆತ್ತವರದ್ದು. ಇಂಥ ಸ್ಥಿತಿಯಲ್ಲಿ, ಮಗುವಿನ ಮುಂದೆ ಹೆಚ್ಚು ಆಯ್ಕೆಗಳಿರುವುದಿಲ್ಲ. ಆಡುವ ಹಾಗೂ ಟಿ.ವಿ. ವೀಕ್ಷಿಸುವ ಆಸೆಗಳನ್ನೆಲ್ಲ ಹೆತ್ತವರು ಮತ್ತು ಶಿಕ್ಷಕರ ಮರ್ಜಿಗೆ ಬಿಟ್ಟುಕೊಡಬೇಕಾಗುತ್ತದೆ. ನಿಜವಾಗಿ, ಇದೂ ಒಂದು ರೀತಿಯ ಕ್ರೌರ್ಯವೇ. ಮಗುವಿಗೆ ಮಗುವಿನದ್ದೇ ಆದ ಒಂದು ಲೋಕವಿದೆ. ಅಲ್ಲಿ ಸ್ಪರ್ಧೆ, ಅಸೂಯೆ, ಒತ್ತಡ, ಭೀತಿಗಳೇನೂ ಇಲ್ಲ. ಇತರ ಮಕ್ಕಳೊಂದಿಗೆ ಸ್ವಚ್ಛಂದವಾಗಿ ಬೆಳೆಯಲು ಮಕ್ಕಳು ಇಷ್ಟಪಡುತ್ತವೆ. ಆದರೆ ಹೆತ್ತವರು ಮತ್ತು ಸಮಾಜ ಇಂಥ ಮಕ್ಕಳ ಮೇಲೆ ತಮ್ಮ ಬಯಕೆಗಳನ್ನು ಹೇರಿಬಿಡುತ್ತವೆ. ತಾವು ಏನಾಗಬೇಕೆಂದು ಬಯಸಿವೆಯೋ ಅದಾಗುವಂತೆ ಮಕ್ಕಳನ್ನು ಅವು ಬಲವಂತಪಡಿಸುತ್ತವೆ. ಒಂದು ರೀತಿಯಲ್ಲಿ, ಮಕ್ಕಳು ಅನುಭವಿಸುವ ಒತ್ತಡಕ್ಕೆ ಮಕ್ಕಳು ಕಾರಣವಲ್ಲ. ಹೆತ್ತವರು ಮತ್ತು ಶಿಕ್ಷಕರೇ ಅದಕ್ಕೆ ಕಾರಣವಾಗಿದ್ದಾರೆ. ಅವರು ತಮ್ಮ ಉದ್ದೇಶಕ್ಕಾಗಿ ಮಕ್ಕಳನ್ನು ಸಿದ್ಧಪಡಿಸುವಾಗ ಉಂಟಾಗುವ ಘರ್ಷಣೆಯೇ ಈ ಒತ್ತಡ. ಆದರೆ, ಬುದ್ಧಿವಂತರಾದ ನಾವು ಈ ಸತ್ಯವನ್ನು ಅಡಗಿಸಿಟ್ಟು ಮಕ್ಕಳನ್ನೇ ಆ ಒತ್ತಡಕ್ಕೆ ಹೊಣೆಗಾರರನ್ನಾಗಿ ಮಾಡುತ್ತೇವೆ. ಓದಿನ ನಿರ್ಲಕ್ಷ್ಯವನ್ನು ಅದಕ್ಕೆ ಕಾರಣವಾಗಿ ಮುಂದಿಡುತ್ತೇವೆ. ಕೊನೆಗೆ ಮಗುವೊಂದು ಈ ಎಲ್ಲ ಒತ್ತಡದಿಂದಾಗಿ ಬಾಡಿ ಹೋದರೆ ವ್ಯವಸ್ಥೆಯನ್ನೋ ಇನ್ನಾರನ್ನೋ ತಪ್ಪಿತಸ್ಥರನ್ನಾಗಿಸಿ ತಪ್ಪಿಸಿಕೊಳ್ಳುತ್ತೇವೆ.  
    ಮಗುವೊಂದು ಈ ಸಮಾಜದಲ್ಲಿ ಗೌರವದಿಂದ ಬಾಳುವುದಕ್ಕೆ ಪರೀಕ್ಷೆಯ ಫಲಿತಾಂಶವೊಂದೇ ಮಾನದಂಡವಲ್ಲ. ಮಗುವಿನ ಬುದ್ಧಿವಂತಿಕೆಯನ್ನು ಅಳೆಯುವುದಕ್ಕೆ ಅದು ಅಂತಿಮ ಆಧಾರವೂ ಅಲ್ಲ. ಮಗು ಓದಲಿ, ಪರೀಕ್ಷೆ ಬರೆಯಲಿ. ಅದರ ಜೊತೆಗೇ ಆಡುವ, ಟಿ.ವಿ. ವೀಕ್ಷಿಸುವ ಮತ್ತಿತರ ಹವ್ಯಾಸಗಳಲ್ಲೂ ತೊಡಗಿಸಿಕೊಳ್ಳಲಿ. ಓದು, ಪರೀಕ್ಷೆಗಳು ಅವರ ನಿರ್ಮಲ ಮನಸ್ಸಿನ ಮೇಲೆ ಗಾಯ ಮಾಡದಿರಲಿ. ಉಳ್ಳಾಲದಲ್ಲಿ ನೀರು ಪಾಲಾದ ಆದಿತ್ಯ ನಾಯಕ್, ಚಿರಾಗ್ ಬಂಗೇರ ಎಂಬ ವಿದ್ಯಾರ್ಥಿಗಳಿಗೆ ಸಂತಾಪ ವ್ಯಕ್ತಪಡಿಸುತ್ತಲೇ ಇಂಥ ಇತರ ಮಕ್ಕಳನ್ನು ಉಳಿಸುವುದಕ್ಕಾಗಿ ಒತ್ತಡ ರಹಿತ ಪರಿಸರವೊಂದನ್ನು ನಿರ್ಮಿಸುವ ಪ್ರತಿಜ್ಞೆಯನ್ನು ನಾವೆಲ್ಲ ಕೈಗೊಳ್ಳಬೇಕಾಗಿದೆ.

No comments:

Post a Comment