Monday, 2 March 2015

ಮಸೀಹಳ ಫೇಸ್‍ಬುಕ್ ಪೇಜ್ ಮತ್ತು ಪಾಶ್ಚಾತ್ಯರ ಇಬ್ಬಂದಿತನ

    ಕಳೆದವಾರ ಮಾಧ್ಯಮಗಳಲ್ಲಿ ಎರಡು ಗಮನಾರ್ಹ ಸುದ್ದಿಗಳು ಒಂದೇ ದಿನ ಪ್ರಕಟವಾದುವು. ‘ಶಿರವಸ್ತ್ರ ಕಳಚಿ ಪೋಟೋ ಕಳುಹಿಸಿ' ಎಂಬ ಫೇಸ್‍ಬುಕ್ ಪುಟವನ್ನು ತೆರೆದು ಪ್ರಚಾರದಲ್ಲಿರುವ ಇರಾನ್ ಮೂಲದ  ಪತ್ರಕರ್ತೆ ಮಸೀಹ ಅಲಿ ನೆಜಾದ್‍ಗೆ ಮಾನವ ಹಕ್ಕು ಪ್ರಶಸ್ತಿ ಸಿಕ್ಕಿರುವುದು ಒಂದಾದರೆ, ಇನ್ನೊಂದು-  ಬ್ರಿಟನ್ನಿನಲ್ಲಿ ‘ಬಿಬಿಸಿ ರೇಡಿಯೋ 4' ನಡೆಸಿರುವ ಮುಸ್ಲಿಮ್ ಸವಿೂಕ್ಷೆ. ಹೊರ ನೋಟಕ್ಕೆ ಇವೆರಡೂ ಪರಸ್ಪರ ಸಂಬಂಧವಿಲ್ಲದ ಒಂಟಿ ಸುದ್ದಿಗಳಂತೆ ಕಾಣಿಸಬಹುದು. ಆಯ್ಕೆ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ ಮಸೀಹ ಅಲಿ ನೆಜಾದ್‍ಗೂ ಅಭದ್ರತೆಯನ್ನು ತೋಡಿಕೊಂಡ ಬ್ರಿಟನ್ನಿನ ಮುಸ್ಲಿಮರಿಗೂ ನಡುವೆ ಏನು ಸಂಬಂಧ ಎಂದು ಪ್ರಶ್ನಿಸಬಹುದು. ಆದರೆ, ಇವೆರಡನ್ನೂ ಮುಖಾಮುಖಿಗೊಳಿಸಿ ವಿಶ್ಲೇಷಿಸತೊಡಗಿದರೆ ಪ್ರಶ್ನೆಗಳು ಸಹಜವಾಗಿ ಕರಗುತ್ತಾ ಹೋಗುತ್ತವೆ. ಇವೆರಡೂ ಆಳದಲ್ಲಿ ಎಲ್ಲೋ ಪರಸ್ಪರ ಸಂಧಿಸುವಂತೆ ಕಾಣಿಸುತ್ತದೆ. ಹಾಗಂತ, ಮಸೀಹಳ ಫೇಸ್‍ಬುಕ್ ಪುಟವು ಪ್ರಶ್ನಾರ್ಹ ಎಂದಲ್ಲ. ಇರಾನ್‍ನಲ್ಲಿರುವ ಶಿರವಸ್ತ್ರ ನಿಯಮವನ್ನು ಪ್ರಶ್ನಿಸುವುದಕ್ಕಾಗಿ ಆಕೆ ಕಳೆದ ವರ್ಷ ‘ಶಿರವಸ್ತ್ರ ಕಳಚಿದ ಪೋಟೋವನ್ನು ಕಳುಹಿಸಿ ಕೊಡಿ' ಎಂಬ ಅಭಿಯಾನವನ್ನು ಆರಂಭಿಸಿದ್ದಳು. ಶಿರವಸ್ತ್ರವನ್ನು ಬಲವಂತದಿಂದ ಹೇರಬೇಡಿ ಅನ್ನುವ ಒತ್ತಾಯ ಆಕೆಯದು. ಕಳೆದ ಮೇ ತಿಂಗಳಲ್ಲಿ ಲಂಡನ್ನಿನ ಪ್ರಸಿದ್ಧ ಗಾರ್ಡಿಯನ್ ಪತ್ರಿಕೆಯು ಈ ಕುರಿತಂತೆ ಸುದ್ದಿ ಪ್ರಕಟಿಸಿತ್ತು. ಕಳೆದವಾರ ಜಿನೇವಾದಲ್ಲಿ ಸೇರಿದ ಮಾನವ ಹಕ್ಕುಗಳಿಗಾಗಿರುವ ಸರಕಾರೇತರ 20 ಸಂಘಟನೆಗಳ ಗುಂಪು ಮಸೀಹಳಿಗೆ ಪ್ರಶಸ್ತಿಯನ್ನು ನೀಡುವುದಾಗಿ ಘೋಷಿಸಿತು. ಇದೇ ವೇಳೆ, ಬ್ರಿಟನ್ನಿನ ಮುಸ್ಲಿಮರನ್ನು ಗುರಿ ಮಾಡಿ ಬಿಬಿಸಿಯು ಒಂದು ಸವಿೂಕ್ಷೆಯನ್ನು ಕೈಗೊಂಡಿತ್ತು. ಬ್ರಿಟನ್‍ನ ಮುಸ್ಲಿಮರ ಮನದಿಂಗಿತವನ್ನು ಅರಿತುಕೊಳ್ಳುವ ಉದ್ದೇಶದಿಂದ ನಡೆಸಲಾದ ಈ ಸವಿೂಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಅಭದ್ರತೆಯ ಭಾವನೆಯನ್ನು ತೋಡಿಕೊಂಡರು. ಅದರಲ್ಲೂ ಮಹಿಳೆಯರು ಪುರುಷರಿಗಿಂತ ಹೆಚ್ಚೇ ಈ ಭಾವನೆಯನ್ನು ವ್ಯಕ್ತಪಡಿಸಿದರು. ಬ್ರಿಟನ್‍ನಲ್ಲಿ ತಮ್ಮ ವಿಶ್ವಾಸದಂತೆ ಬದುಕುವುದಕ್ಕೆ ತಡೆ ಒಡ್ಡಲಾಗುತ್ತಿದೆ ಎಂಬ ನೋವನ್ನೂ ತೋಡಿಕೊಂಡರು.
 ಸಿರಿಯಾದಲ್ಲಿ ಸಕ್ರಿಯವಾಗಿರುವ ಐಸಿಸ್‍ನ (ಇಸ್ಲಾಮಿಕ್ ಸ್ಟೇಟ್ಸ್) ಪ್ರತಿ ಚಟುವಟಿಕೆಯೂ ಇವತ್ತು ಬ್ರಿಟನ್‍ನಲ್ಲಿ ದೊಡ್ಡ ಸದ್ದಿನೊಂದಿಗೆ ಸುದ್ದಿಯಾಗುತ್ತಿದೆ. ಬ್ರಿಟನ್ನಿನ ಮೂವರು ಕಾಲೇಜು ತರುಣಿಯರು ಐಸಿಸ್ ಸೇರುವುದಕ್ಕಾಗಿ ಸಿರಿಯಾಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂಬೊಂದು ವದಂತಿ ಇತ್ತೀಚೆಗೆ ಹರಡಿಕೊಂಡಿತ್ತು. ಐಸಿಸ್ ಈಗಾಗಲೇ ಬಿಡುಗಡೆಗೊಳಿಸಿರುವ ಕತ್ತು ಸೀಳುವ ವೀಡಿಯೋಗಳಲ್ಲಿ ಕಾಣಿಸಿಕೊಂಡಿರುವವ (ಜಿಹಾದಿ ಜಾನ್) ಬ್ರಿಟನ್ ಪ್ರಜೆ ಎಂದು ಹೇಳಲಾಗುತ್ತಿದೆ. ಅಂದಹಾಗೆ, ಈ ಪಾತಕ ಕೃತ್ಯಗಳಿಗೆ ಮುಸ್ಲಿಮರು ಹೊಣೆ ಅಲ್ಲದೇ ಇರಬಹುದು. ಆದರೆ ಫ್ರಾನ್ಸ್ ನಲ್ಲಿರುವಂತೆ ತೀವ್ರ ಬಲಪಂಥೀಯರು ಬ್ರಿಟನ್‍ನಲ್ಲೂ ಅಸಹನೆಯ ವಾತಾವರಣವನ್ನು ಸೃಷ್ಟಿ ಮಾಡುತ್ತಿದ್ದಾರೆ. ಬಿಬಿಸಿ ಸವಿೂಕ್ಷೆ ಕೈಗೊಳ್ಳುವುದಕ್ಕೆ ಇದ್ದ ಪ್ರಮುಖ ಕಾರಣವೂ ಇದುವೇ. ಇನ್ನೊಂದು ಕಡೆ, ಮಸೀಹರಂತಹವರು ಮಾನವ ಹಕ್ಕುಗಳ ಹೆಸರಲ್ಲೋ ಅಭಿವ್ಯಕ್ತಿ ಸ್ವಾತಂತ್ರ್ಯದ ನೆಲೆಯಲ್ಲೋ ಪಾಶ್ಚಾತ್ಯರ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ. ‘ಇಸ್ಲಾಮಿನ ವಿರುದ್ಧ ನಾವು ಯುದ್ಧ ಮಾಡುತ್ತಿಲ್ಲ’ ಎಂದು ವಾರಗಳ ಹಿಂದೆ ಅಮೇರಿಕದ ಅಧ್ಯಕ್ಷ ಒಬಾಮ ಹೇಳಿರುವುದೇ ಸದ್ಯದ ಮುಸ್ಲಿಮ್ ಜಗತ್ತಿನ ಭಾವನೆಗಳೇನು ಎಂಬುದಕ್ಕೆ ಉತ್ತಮ ಉದಾಹರಣೆ. ಅಮೇರಿಕವು ಆರಂಭಿಸಿರುವ ಭಯೋತ್ಪಾದನಾ ವಿರೋಧಿ ಹೋರಾಟದ ಒಳಗುರಿ ಇಸ್ಲಾಮ್ ಎಂಬ ಭಾವನೆ ದೊಡ್ಡ ಮಟ್ಟದಲ್ಲಿದೆ. ಅದು ಎಷ್ಟು ತೀವ್ರವಾಗಿದೆಯೆಂದರೆ ಸ್ವತಃ ಒಬಾಮರೇ ಆ ಬಗ್ಗೆ ಸ್ಪಷ್ಟೀಕರಣ ಕೊಡಬೇಕಾಗಿ ಬಂದಿದೆ. ಇಸ್ಲಾಮಿನ ವಿರುದ್ಧ ಬಂಡಾಯ ಸಾರುವವರನ್ನು, ನಿಂದಿಸುವವರನ್ನು ಪಾಶ್ಚಾತ್ಯ ಜಗತ್ತು ಮುದ್ದಿಸುತ್ತದೆ ಎಂಬ ವಾದ ಮುಸ್ಲಿಮ್ ಜಗತ್ತಿನಲ್ಲಿದೆ. ಚಾರ್ಲಿ ಹೆಬ್ಡೋದ ನಿಂದನಾತ್ಮಕ ಕಾರ್ಟೂನುಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಬೆಂಬಲಿಸುವವರೇ ಹಾಲೋಕಾಸ್ಟ್(ಯಹೂದಿ ಹತ್ಯಾಕಾಂಡ)ನ ಬಗ್ಗೆ ಅನುಮಾನಿಸಿ ಹೇಳಿಕೆ ಕೊಡುವುದನ್ನೋ ಬರೆಯುವುದನ್ನೋ ಶಿಕ್ಷಾರ್ಹ ಅಪರಾಧವಾಗಿ ಕಾಣುತ್ತಾರೆ.  ಅಣ್ವಸ್ತ್ರ ಹೊಂದಬಾರದೆಂದು ಇರಾನ್ ನ ಮೇಲೆ ದಿಗ್ಬಂಧನ ಹಾಕುವವರೇ ಇಸ್ರೇಲ್‍ನ ಅಣ್ವಸ್ತ್ರಕ್ಕೆ ರಕ್ಷಣೆ ಒದಗಿಸುತ್ತಾರೆ.ಮಾನವ ಹಕ್ಕುಗಳ ಕುರಿತಂತೆ ಇತರರಿಗೆ ಭೋದಿಸುವವರೇ ಇಸ್ರೇಲನ್ನು ಸಮರ್ಥಿಸುತ್ತಾರೆ. ಅದರ ಪರವಾಗಿ ವಿಶ್ವಸಂಸ್ಥೆಯಲ್ಲಿ ವೀಟೋ ಚಲಾಯಿಸುತ್ತಾರೆ. ಇಂಥದ್ದೊಂದು ವಾತಾವರಣದಲ್ಲಿ ಮಸೀಹಳಿಗೆ ಸಂದ ಗೌರವವು ಕೆಲವೊಂದು ಅನುಮಾನಗಳನ್ನು ಸಹಜವಾಗಿಯೇ ಹುಟ್ಟು ಹಾಕುತ್ತದೆ. ಹಾಗಂತ, ಮುಸ್ಲಿಮರ ಶಿರವಸ್ತ್ರ, ಪರ್ದಾ, ಕುರ್‍ಆನ್, ಸಾಮಾಜಿಕ ನಿಯಮಗಳೆಲ್ಲ ಚರ್ಚೆಗೆ ಒಳಗಾಗಬಾರದು ಎಂದಲ್ಲ. ಮಸೀಹ ಸಹಿತ ಯಾರಿಗೂ ಆ ಕುರಿತಂತೆ ಪ್ರಶ್ನೆಗಳನ್ನೆತ್ತಬಹುದು. ಶಿರವಸ್ತ್ರ ಧಾರ್ಮಿಕ ಅಗತ್ಯವೋ ಅಥವಾ ವೈಯಕ್ತಿಕ ಆಯ್ಕೆಯೋ? ಧಾರ್ಮಿಕ ನಿಯಮಗಳನ್ನು ಎಲ್ಲಿ, ಯಾವ ವಾತಾವರಣದಲ್ಲಿ, ಎಷ್ಟರ ಮಟ್ಟಿಗೆ ಜಾರಿಗೊಳಿಸಬಹುದು? ಅದರಲ್ಲಿ ಬಲವಂತಕ್ಕೆ ಎಷ್ಟು ಅವಕಾಶವಿದೆ? ಆಯ್ಕೆಯ ಸ್ವಾತಂತ್ರ್ಯಕ್ಕೆ ಏನೇನೆಲ್ಲ ಮಿತಿಗಳಿವೆ? ಒಂದು ರಾಷ್ಟ್ರವಾಗಿ ಇರಾನ್‍ನ ಮಿತಿಗಳು ಏನೆಲ್ಲ.. ಮುಂತಾದುವುಗಳೆಲ್ಲ ಚರ್ಚೆಗೆ ಒಳಪಡುವುದು ಒಳ್ಳೆಯದೇ. ಮಸೀಹಳ ಫೇಸ್‍ಬುಕ್ ಪುಟ ಈ ಬಗೆಯ ಚರ್ಚೆಯ ಒಂದು ಭಾಗ ಎಂದೇ ವಾದಿಸುವುದಾದರೂ ಆ ವಾದ ಅಲ್ಲಿಗೇ ನಿಲ್ಲುವುದಿಲ್ಲ. ಒಂದು ವೇಳೆ, ‘ವ್ಯಾಟಿಕನ್ ನೀಡುವ ಸಂತ ಪದವಿಯನ್ನು ಪ್ರಶ್ನಿಸಿ ವೀಡಿಯೋವನ್ನು ರವಾನಿಸಿ’ ಎಂದು ಹೇಳುತ್ತಾ ಓರ್ವರು ಫೇಸ್‍ಬುಕ್ ಪೇಜ್ ತೆರೆದರೆ ಹೇಗಿರಬಹುದು? ‘ಹಾಲೋಕಾಸ್ಟನ್ನು ಅಲ್ಲಗಳೆದು ವೀಡಿಯೋ ಕಳುಹಿಸಿ' ಎಂಬ ಫೇಸ್‍ಬುಕ್ ಪೇಜ್‍ಗೆ ಇಸ್ರೇಲ್ ಸಹಿತ ಪಾಶ್ಚಾತ್ಯ ಜಗತ್ತು ಹೇಗೆ ಪ್ರತಿಕ್ರಿಯಿಸಬಹುದು? ಬ್ರಿಟನ್ನಿನ ರಾಣಿ ಸಂಪ್ರದಾಯವನ್ನು ಪ್ರಶ್ನಿಸುವ ಫೇಸ್‍ಬುಕ್ ಪೇಜ್‍ಗೆ ಯಾವ ಉತ್ತರ ಸಿಗಬಹುದು? ಹೀಗೆ ಮಾಡಿದವರಿಗೆಲ್ಲ ಪುರಸ್ಕಾರಗಳು ಸಿಗಬಹುದೇ ಅಥವಾ ಅತಿರೇಕ  ಎಂದು ತಿರಸ್ಕೃತಗೊಳ್ಳಬಹುದೇ? ಜರ್ಮನಿ, ಫ್ರಾನ್ಸ್ ಸಹಿತ ಯುರೋಪಿಯನ್ ರಾಷ್ಟ್ರಗಳಲ್ಲಿ ಹಾಲೋಕಾಸ್ಟನ್ನು ಅಲ್ಲಗಳೆಯುವುದು ಶಿಕ್ಷಾರ್ಹ ಅಪರಾಧ. ಹಿಟ್ಲರ್ ಯಹೂದಿಯರನ್ನು  ಸಾಮೂಹಿಕ ಹತ್ಯೆಗೆ ಒಳಪಡಿಸಿರುವುದನ್ನು ‘ಇಲ್ಲ' ಅನ್ನಬಾರದೆಂಬ ತಾಕೀತು ಈ ಎಲ್ಲ ರಾಷ್ಟ್ರಗಳಲ್ಲಿವೆ. ಆ ಬಗ್ಗೆ ಪ್ರಶ್ನೆಗಳನ್ನೇ ಎತ್ತಬಾರದಂತೆ. ಇಲ್ಲೆಲ್ಲಾ ಏಳದ ಅಭಿವ್ಯಕ್ತಿ ಸ್ವಾತಂತ್ರ್ಯದ್ದೋ ಆಯ್ಕೆ ಸ್ವಾತಂತ್ರ್ಯದ್ದೋ ಕೂಗು ಇರಾನ್ ಮತ್ತಿತರ ರಾಷ್ಟ್ರಗಳ ಸುತ್ತ ಏಳುವುದೇಕೆ? ಶಿರವಸ್ತ್ರವು ಮಾನವ ಹಕ್ಕು ಹರಣದ ಸಂಕೇತವಾಗಿ ಫೇಸ್‍ಬುಕ್ ಪೇಜ್‍ಗೆ ವಸ್ತುವಾಗುವುದೂ ಪುರಸ್ಕಾರಕ್ಕೆ ಯೋಗ್ಯವಾಗುವುದೆಲ್ಲ ಏತಕ್ಕೆ?
 ಮಾನವ ಹಕ್ಕು ಮತ್ತು ಸ್ವಾತಂತ್ರ್ಯ ಎಂಬ ಪದಗಳು ಎಷ್ಟು ವಿಶಾಲಾರ್ಥವನ್ನು ಹೊಂದಿವೆಯೋ ಅಷ್ಟೇ ವಿಶಾಲ ಮನೋಭಾವ ಅವನ್ನು ಪ್ರತಿಪಾದಿಸುವ ಮತ್ತು ಅದಕ್ಕಾಗಿ ಪ್ರಶಸ್ತಿಗಳನ್ನು ಸ್ಥಾಪಿಸಿ ಹಂಚುವವರಲ್ಲಿವೆಯೇ ಎಂಬ ಪ್ರಶ್ನೆಯೊಂದು ಇತ್ತೀಚಿನ ವರ್ಷಗಳಲ್ಲಂತೂ ಗಂಭೀರವಾಗಿಯೇ ಎದುರಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಆಯ್ಕೆ ಸ್ವಾತಂತ್ರ್ಯ, ವೈಯಕ್ತಿಕ ಹಕ್ಕು, ವೈಚಾರಿಕ ಸ್ವಾತಂತ್ರ್ಯ ಮುಂತಾದುವುಗಳೆಲ್ಲ ಸಂದರ್ಭಕ್ಕೆ ತಕ್ಕಂತೆ ವಿರೂಪಗೊಂಡೋ ದುರುಪಯೋಗಕ್ಕೀಡಾಗಿಯೋ ಬಳಕೆಯಾಗುತ್ತಿರುವುದೇ ಹೆಚ್ಚು. ಸೆಟಾನಿಕ್ ವರ್ಸಸನ್ನು ಬರೆದ ಸಲ್ಮಾನ್ ರುಶ್ದಿಯವರಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನೇಮಾಡೆಯವರ ಟೀಕೆಯನ್ನು ಸಹಿಸಲಾಗಲಿಲ್ಲ ಎಂಬುದೇ ಇದಕ್ಕಿರುವ ಇತ್ತೀಚಿನ ದೊಡ್ಡ ಪುರಾವೆ. ಪ್ರವಾದಿಯವರನ್ನು(ಸ) ನಿಂದಿಸುವ ಧಾಟಿಯಲ್ಲಿ ಕಾರ್ಟೂನನ್ನು ಪ್ರಕಟಿಸಿದ ಚಾರ್ಲಿ ಹೆಬ್ಡೋವು ಮೌರಿಸ್ ಸಿನೆ ಎಂಬ ತನ್ನ ವ್ಯಂಗ್ಯ ಚಿತ್ರಕಾರನನ್ನು ಯಹೂದಿ ವಿರೋಧಿ ಕಾರ್ಟೂನ್ ರಚಿಸಿದ್ದಕ್ಕಾಗಿ ಕೆಲಸದಿಂದಲೇ ತೆಗೆದು ಹಾಕಿದ್ದು ಇದಕ್ಕೆ ಇನ್ನೊಂದು ಪುರಾವೆ. ಇಂಥ ಇಬ್ಬಂದಿತನಗಳ ವಾತಾವರಣದಲ್ಲಿ ನಾವು ಬ್ರಿಟನ್ ಮುಸ್ಲಿಮರ ಅಭದ್ರತೆಯನ್ನೂ ಮಸೀಹಳಿಗೆ ಸಂದ ಪ್ರಶಸ್ತಿಯನ್ನೂ ಜೊತೆಗಿಟ್ಟು ನೋಡಬೇಕಾಗಿದೆ. ಮಸೀಹಳ ಫೇಸ್‍ಬುಕ್ ಪೇಜ್‍ನ ಉದ್ದೇಶ ಏನೇ ಇರಲಿ, ಆ ಬಗ್ಗೆ ಚರ್ಚೆಯಾಗುವುದನ್ನು ಸ್ವಾಗತಿಸುತ್ತಲೇ ಇಸ್ಲಾಮೊಫೋಬಿಯಾ(ಇಸ್ಲಾಮ್ ಭೀತಿ)ಯನ್ನು ಹರಡುವವರು ಮತ್ತು ಅದನ್ನು ಉತ್ಪಾದಿಸಿ ಮಾರುವವರ ಕುರಿತೂ ಚರ್ಚೆಯಾಗುವಂತೆ ನೋಡಿಕೊಳ್ಳಬೇಕಾಗಿದೆ. ಅಂಥದ್ದೊಂದು ಫೋಬಿಯಾ ಯಾರಿಗೆ ಅಗತ್ಯವಿದೆ? ಅವರ ಉದ್ದೇಶವೇನು? ಅಲ್ ಖಾಯ್ದಾ, ಐಸಿಸ್ ಮುಂತಾದುವುಗಳೆಲ್ಲ ಯಾರ ಸೃಷ್ಟಿ, ಇವುಗಳ ಹಣಕಾಸು-ಶಸ್ತ್ರಾಸ್ತ್ರ ಮೂಲಗಳು ಎಲ್ಲಿವೆ.. ಎಲ್ಲವೂ ಚರ್ಚೆಗೆ ಒಳಪಡಲಿ. ಸಾಧ್ಯವಾಗುವುದಾದರೆ ಮಸೀಹಳೇ ಈ ಚರ್ಚೆಯನ್ನು ಪ್ರಾರಂಭಿಸಲಿ.

No comments:

Post a Comment