Wednesday 18 February 2015

ಮಾಧ್ಯಮ ಪೂರ್ವಾಗ್ರಹವನ್ನು ಮತ್ತೊಮ್ಮೆ ಚರ್ಚಾರ್ಹಗೊಳಿಸಿದ ಆದಿಲ್ ಹುಸೈನ್

    ಕಾಶ್ಮೀರಿಯೊಬ್ಬ ಈ ದೇಶದಲ್ಲಿ ಎದುರಿಸಬೇಕಾದ ಸವಾಲುಗಳ ಪುಟ್ಟ ಪರಿಚಯವೊಂದನ್ನು ಆದಿಲ್ ಹುಸೈನ್ ಎಂಬ ಕಾಶ್ಮೀರಿ ಯುವಕ ನಮ್ಮ ಮುಂದಿಟ್ಟಿದ್ದಾನೆ. ಗುಜರಾತ್‍ನ ಕಛ್ ವಿಶ್ವವಿದ್ಯಾಲಯದಲ್ಲಿ ಭೂಗರ್ಭಶಾಸ್ತ್ರಕ್ಕೆ ಸಂಬಂಧಿಸಿ ಪಿಎಚ್‍ಡಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿ ಈತ. 2014 ಡಿಸೆಂಬರ್ 13ರಂದು ಗುಜರಾತ್‍ನ ‘ಸಂದೇಶ್’ ಎಂಬ ಪ್ರಮುಖ ದಿನಪತ್ರಿಕೆಯು ಈತನ ಬಗ್ಗೆ ಎಕ್ಸ್ ಕ್ಲೂಸಿವ್ ವರದಿಯೊಂದನ್ನು ಪ್ರಕಟಿಸಿತ್ತು. “ಪಿಹೆಚ್‍ಡಿಯ ನೆಪದಲ್ಲಿ ಕಾಶ್ಮೀರಿ ವಿದ್ಯಾರ್ಥಿಯೊಬ್ಬ ಕಛ್ ಗಡಿಯ ಸರ್ವೇ ನಡೆಸಿದನೇ..” ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಆ ವರದಿಯಲ್ಲಿ ಆದಿಲ್ ಹುಸೈನ್‍ನ ಮೇಲೆ ಕೆಲವು ಅನುಮಾನಗಳನ್ನು ವ್ಯಕ್ತಪಡಿಸಲಾಗಿತ್ತು. ಆತ ಗೂಢಚಾರ (Spy) ಆಗಿರಬಹುದೇ ಎಂಬ ರೀತಿಯಲ್ಲಿ ಪತ್ರಿಕೆ ಸಂದೇಹವನ್ನು ವ್ಯಕ್ತಪಡಿಸಿತ್ತು. ಆತ ಕಾಶ್ಮೀರದ ಶೋಪಿಯಾನ್ ಜಿಲ್ಲೆಯವ ಎಂದು ಹೆಸರಿಸುವುದಕ್ಕೆ ಬದಲು ‘ಭಯೋತ್ಪಾದಕ ಜಿಲ್ಲೆಯವ’ ಎಂದು ಹೆಸರಿಸಿತ್ತು. ಇದರಿಂದಾಗಿ ಗುಜರಾತ್‍ನಲ್ಲಿ ‘ತಲೆಗೊಂದು ಮಾತು’ ಹುಟ್ಟಿಕೊಂಡಿತು. ‘ಆತ ಕಛ್ ಗಡಿಗೆ ಭೇಟಿಕೊಟ್ಟಿದ್ದ ಮತ್ತು ನಿಗೂಢವಾಗಿ ನಾಪತ್ತೆಯಾಗಿದ್ದ’ ಎಂಬ ಪತ್ರಿಕೆಯ ವರದಿಯು ಹಲವಾರು ವಂದತಿಗಳಿಗೂ ಕಾರಣವಾಯಿತು. ಆತ ಭಯೋತ್ಪಾದಕರಿಗಾಗಿ ಕೆಲಸ ಮಾಡುತ್ತಿರಬಹುದೇ ಎಂಬ ಪ್ರಶ್ನೆಗಳೂ ಎದ್ದುವು. ಸಂದೇಶ್ ಪತ್ರಿಕೆಯ ವರದಿಯು ಸಮಾಜದ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿತ್ತೆಂದರೆ ವಿಶ್ವವಿದ್ಯಾಲಯದಲ್ಲಿ ಆದಿಲ್ ಹುಸೈನನಿಗೆ ಒಂಟಿತನದ ಅನುಭವವಾಗ ತೊಡಗಿತು. ಸಹಪಾಠಿಗಳೇ ಆತನಿಂದ ದೂರ ಸರಿಯುವುದಕ್ಕೆ ಪ್ರಯತ್ನಿಸುತ್ತಿರುವಂತೆ ಕಂಡರು. ಇಂಥ ಸಂದರ್ಭದಲ್ಲಿ ಆದಿಲ್ ಹುಸೈನನ ಬೆನ್ನಿಗೆ ನಿಂತವರು ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದ ಮುಖ್ಯಸ್ಥ ಮತ್ತು ಆತನ ಗೈಡ್ ಆಗಿರುವ ಎಂ.ಜಿ. ಥಾಕುರ್ ಅವರು. ಅವರು ಇಡೀ ವರದಿಯನ್ನೇ ಹೊಲಸು (Rubbish) ಅಂದರು. ಆದಿಲ್ ಅತ್ಯಂತ ನಂಬಿಗಸ್ಥ ಮತ್ತು ವಿಧೇಯ ವಿದ್ಯಾರ್ಥಿ ಎಂದರು. ನಿಜವಾಗಿ, 2014 ಸೆಪ್ಟೆಂಬರ್ 17ರಂದು ಗುಜರಾತ್‍ನಿಂದ ಕಾಶ್ಮೀರಕ್ಕೆ ಹೊರಟ ಆತ ಸೆ. 21ರಂದು ಮನೆಗೆ ಮುಟ್ಟಿದ್ದ. ಆ ಬಳಿಕ ತನ್ನ ಪಿಹೆಚ್‍ಡಿ ಕೆಲಸದಲ್ಲಿ ನಿರತನಾದ. ಮಾತ್ರವಲ್ಲ, ಡಿ. 21ರಂದು ಗುಜರಾತ್‍ಗೆ ಹಿಂತಿರುಗಿದ್ದ. ಆತ ಕಾಶ್ಮೀರಕ್ಕೆ ತೆರಳಿರುವುದನ್ನೇ ಪತ್ರಿಕೆಯು ದಿಢೀರ್ ನಾಪತ್ತೆ (Sudden dispperence) ಎಂದು ಉಲ್ಲೇಖಿಸಿತ್ತು. ಈ ಪತ್ರಿಕಾ ವರದಿಗೆ ಆದಿಲ್ ಹುಸೈನ್ ದಿಗ್ಭ್ರಮೆ ವ್ಯಕ್ತಪಡಿಸಿದ. ‘ಪಿಹೆಚ್‍ಡಿ ಅಧ್ಯಯನವನ್ನು ತೊರೆದು ಮನೆಗೆ ಹಿಂತಿರುಗು’ ಎಂದು ತಾಯಿ ಒತ್ತಾಯಿಸುತ್ತಿರುವುದಾಗಿ ಮಾಧ್ಯಮಗಳೊಂದಿಗೆ ಹೇಳಿಕೊಂಡ. ಇದಾದ ಬಳಿಕ ಸಂದೇಶ್ ಪತ್ರಿಕೆಯು ತನ್ನ ವರದಿಗಾಗಿ ಕ್ಷಮೆ ಯಾಚಿಸಿದೆ (Gujarat daily apologises after calling kashmiri student Spy) ಎಂದು ದಿ ಹಿಂದೂ ಪತ್ರಿಕೆ 2014 ಡಿಸೆಂಬರ್ 31ರಂದು ಪ್ರಕಟಿಸಿತ್ತು. ಹೀಗೆ ಒಂದು ಹಂತದವರೆಗೆ ಮುಗಿದು ಹೋಗಿದ್ದ ಈ ಪ್ರಕರಣವನ್ನು ಸಂದೇಶ್ ಪತ್ರಿಕೆಯು ಕಳೆದವಾರ ಮತ್ತೆ ಕೆದಕಿದೆ. ತಾನು ಕ್ಷಮೆ ಕೋರಿಲ್ಲ ಎಂದೂ ಅದು ಹೇಳಿಕೊಂಡಿದೆ. ಕಾಶ್ಮೀರಿ ಯುವಕನೊಬ್ಬ ಭೂಗರ್ಭಶಾಸ್ತ್ರ ಅಧ್ಯಯನ ನಡೆಸಲು ಗುಜರಾತನ್ನು ಆಯ್ಕೆ ಮಾಡಿಕೊಂಡ ಉದ್ದೇಶವನ್ನೇ ಅದು ಈಗ ಪ್ರಶ್ನಿಸಿದೆ. ವಿಷಯವು ಸೂಕ್ಷ್ಮ ಮತ್ತು ಭದ್ರತೆಗೆ ಸಂಬಂಧಿಸಿದ್ದಾಗಿದ್ದು ಕಛ್ ಗಡಿಗೆ ಆತ ಭೇಟಿ ಕೊಟ್ಟದ್ದು ಅನುಮಾನಾಸ್ಪದ ಎಂದು ತನ್ನನ್ನು ಮತ್ತೆ ಸಮರ್ಥಿಸಿಕೊಂಡಿದೆ.
 ಮಾಧ್ಯಮ ವಿಶ್ವಾಸಾರ್ಹತೆಯು ಮತ್ತೆ ಮತ್ತೆ ಪ್ರಶ್ನೆಗೊಳಗಾಗುತ್ತಿರುವ ಇಂದಿನ ದಿನಗಳಲ್ಲಿ ಸಂದೇಶ್ ಪತ್ರಿಕೆಯ ಎಕ್ಸ್ ಕ್ಲೂಸಿವ್ ವರದಿ, ಕ್ಷಮೆಯಾಚನೆ ಮತ್ತು ಅಲ್ಲಗಳೆಯುವಿಕೆಯು ಗಂಭೀರ ಚರ್ಚೆಗೆ ಒಳಗಾಗಬೇಕಾದ ಅಗತ್ಯವಿದೆ. ಅಷ್ಟಕ್ಕೂ, ಕಾಶ್ಮೀರ ಮತ್ತು ಹಿಮಾಲಯನ್ ವಲಯವೂ ಸೇರಿದಂತೆ ಆ ಪ್ರದೇಶದ ವಾತಾವರಣದ ಬದಲಾವಣೆಯನ್ನು ಗುರಿಯಾಗಿಟ್ಟುಕೊಂಡು ಪಿಹೆಚ್‍ಡಿ ಅಧ್ಯಯನಕ್ಕೆ ಹೊರಟಿರುವ ವಿದ್ಯಾರ್ಥಿಯೊಬ್ಬ ಕಛ್ ಗಡಿಗೆ ಭೇಟಿ ಕೊಡುವುದು ಹೊಸತೂ ಅಲ್ಲ, ಅಪರಾಧವೂ ಆಗುವುದಿಲ್ಲ ಎಂಬುದು ಪತ್ರಿಕೆಯೊಂದಕ್ಕೆ ಚೆನ್ನಾಗಿ ಗೊತ್ತು. ಸಂದೇಶ್ ಪತ್ರಿಕೆಯು ಒಂದು ಹಂತದಲ್ಲಿ ಅದನ್ನು ಒಪ್ಪಿಕೊಂಡೂ ಇದೆ. ಹೀಗಿದ್ದೂ ಆತ ಎಕ್ಸ್ ಕ್ಲೂಸಿವ್ ನ್ಯೂಸ್ ಯಾಕಾದ? ಕಾಶ್ಮೀರಿಗನೆಂಬ ಕಾರಣಕ್ಕೋ ಅಥವಾ ಆದಿಲ್ ಹುಸೈನ್ ಆದುದಕ್ಕೋ? ಕಾಶ್ಮೀರವು ಭಾರತದ ಭಾಗವೆಂದ ಮೇಲೆ ಅಲ್ಲಿನ ವಿದ್ಯಾರ್ಥಿಗಳು ಗುಜರಾತ್‍ನಲ್ಲಿ ಅಧ್ಯಯನ ನಡೆಸುವುದನ್ನು ಪತ್ರಿಕೆಯು ಅಪರಾಧದಂತೆ ಬಿಂಬಿಸುವುದರ ಉದ್ದೇಶವೇನು? ಕಾಶ್ಮೀರ ಅಂದರೆ ಆ್ಯಪಲ್, ಮಂಜು, ಸರೋವರಗಳಷ್ಟೇ ಅಲ್ಲವಲ್ಲ. ಅಲ್ಲಿನ ಮನುಷ್ಯರೂ ಭಾರತದವರೇ ಅಲ್ಲವೇ? ಒಂದು ಕಡೆ ಕಾಶ್ಮೀರಿಗಳು ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಬೇಕು ಎಂದು ಒತ್ತಾಯಿಸುವುದು ಮತ್ತು ಇನ್ನೊಂದು ಕಡೆ ಅವರ ಬೆನ್ನಿಗೆ ಸಿಸಿ ಕ್ಯಾಮರಾವನ್ನು ಅಳವಡಿಸುವುದು.. ಇದರ ಅರ್ಥವೇನು?
 ನಿಜವಾಗಿ, ಮಾಧ್ಯಮ ಪೂರ್ವಾಗ್ರಹವೆಂಬುದು ಎಲ್ಲ ಪೂರ್ವಾಗ್ರಹಗಳಿಗಿಂತ ಹೆಚ್ಚು ಅಪಾಯಕಾರಿಯಾದುದು. ಯಾಕೆಂದರೆ, ಅದು ಇಡೀ ಸಮಾಜದ ಮನಸ್ಸನ್ನೇ ಕೆಡಿಸಿಬಿಡುತ್ತದೆ. ಪತ್ರಿಕೆಯೊಂದರ ನಿರ್ಣಾಯಕ ಸ್ಥಾನದಲ್ಲಿರುವವರು ಪೂರ್ವಾಗ್ರಹದಿಂದ ಬಳಲುತ್ತಿದ್ದರೆ ಅಕ್ಷರಗಳು ರೋಗಗ್ರಸ್ಥವಾಗಿ ಬಿಡುತ್ತದೆ. ಆ ಬಳಿಕ ಮುಸ್ಲಿಮನ ಗಡ್ಡವು ಬರೇ ಗಡ್ಡವಾಗಿ ಗುರುತಿಸಿಕೊಳ್ಳುವುದಿಲ್ಲ. ಟೊಪ್ಪಿಯು ಧರ್ಮವೊಂದರ ಆಚರಣೆಯ ಗುರುತಾಗಿ ಉಳಿಯುವುದಿಲ್ಲ ಅಥವಾ ಅಲ್ಲಾಹು ಅಕ್ಬರ್, ಜಿಹಾದ್ ಎಂಬ ಪದಗಳು, ಕುರ್ತಾ-ಪೈಜಾಮದಂಥ ಉಡುಪುಗಳೆಲ್ಲ ಬರೇ ಉಡುಪುಗಳಾಗಿಯೋ ಧಾರ್ಮಿಕ ಪದಗಳಾಗಿಯೋ ಬಿಂಬಿತವಾಗುವುದಿಲ್ಲ. ಅವುಗಳಿಗೆ ಭಿನ್ನ ಭಿನ್ನ ವ್ಯಾಖ್ಯಾನಗಳನ್ನು ಕೊಡಲಾಗುತ್ತದೆ. ಟೊಪ್ಪಿಗೊಂದು ಗಡ್ಡಕ್ಕೊಂದು, ಜಿಹಾದ್‍ಗೊಂದು ಕಲ್ಪಿತ ಅರ್ಥಗಳನ್ನು ಕೊಟ್ಟು ಸುಳ್ಳುಗಳನ್ನು ತೇಲಿ ಬಿಡಲಾಗುತ್ತದೆ. ಸದ್ಯದ ದಿನಗಳಲ್ಲಂತೂ ಈ ರೀತಿಯ ಪತ್ರಿಕೋದ್ಯಮವನ್ನು ವಿವರಿಸಿ ಹೇಳಬೇಕಿಲ್ಲ. ಸಾಕಷ್ಟು ಬಹಿರಂಗವಾಗಿಯೇ ಈ ರೀತಿಯ ಪೂರ್ವಾಗ್ರಹಗಳು ಮಾಧ್ಯಮ ಕ್ಷೇತ್ರವನ್ನು ಇವತ್ತು ಆವರಿಸಿಕೊಂಡು ಬಿಟ್ಟಿದೆ. ಗುಜರಾತ್‍ನ ಸಂದೇಶ್ ಪತ್ರಿಕೆಯಂತೂ ಈ ಬಗೆಯ ಪೂರ್ವಾಗ್ರಹಕ್ಕೆ ಕುಖ್ಯಾತಿಯನ್ನು ಪಡೆದುಕೊಂಡಿದೆ. ಗುಜರಾತ್‍ನಲ್ಲಿ ನಡೆದ ಗೋಧ್ರಾ ಹತ್ಯಾಕಾಂಡ ಮತ್ತು ಆ ಬಳಿಕದ ಗಲಭೆಯ ಸಂದರ್ಭದಲ್ಲಿ ಈ ಪತ್ರಿಕೆಯು ಮಾಧ್ಯಮ ನೀತಿಯನ್ನು (Ethics) ಸಂಪೂರ್ಣವಾಗಿ ಉಲ್ಲಂಘಿಸಿದೆ ಎಂದು ‘ಭಾರತೀಯ ಸಂಪಾದಕರ ಮಂಡಳಿ'ಯು (Editors Guild of India) ಅಭಿಪ್ರಾಯಪಟ್ಟಿತ್ತು. ಟೈಮ್ಸ್ ಆಫ್ ಇಂಡಿಯಾದ ಖ್ಯಾತ ಪತ್ರಕರ್ತ ದಿಲೀಪ್ ಪಡ್ಗಾಂವ್‍ಕರ್, ಮಿಡ್‍ಡೇ ಮುಂಬೈ ಪತ್ರಿಕೆಯ ಆಕಾರ್ ಪಟೇಲ್ ಮತ್ತು ಹಿಂದೂಸ್ತಾನ್ ಟೈಮ್ಸ್ ನ ಮಾಜಿ ಸಂಪಾದಕ ಬಿ.ಜಿ. ವರ್ಗೀಸ್‍ರು 2002 ಮಾರ್ಚ್‍ನ ಕೊನೆಯಲ್ಲಿ ಗುಜರಾತ್‍ಗೆ ಭೇಟಿ ಕೊಟ್ಟು 254 ಪುಟಗಳ ಸತ್ಯಶೋಧನಾ ವರದಿಯನ್ನು ತಯಾರಿಸಿದ್ದರು. ಆ ವರದಿಯಲ್ಲಿ ಸಂದೇಶ್ ಪತ್ರಿಕೆಯನ್ನು ತೀವ್ರವಾಗಿ ತರಾಟೆಗೆ ಎತ್ತಿಕೊಂಡಿದ್ದರು. ಗಲಭೆಗೆ ಪ್ರಚೋದನೆ ನೀಡಿದ ಮತ್ತು ಬೇಜವಾಬ್ದಾರಿಯುತವಾಗಿ ವರದಿ ಮಾಡಿದ ಆರೋಪವನ್ನೂ ಹೊರಿಸಿದ್ದರು. ಮಾತ್ರವಲ್ಲ, ಪತ್ರಿಕೆಯ ವಿರುದ್ಧ ನ್ಯಾಯಾಂಗ ತನಿಖೆಯಾಗಬೇಕೆಂದೂ ಆಗ್ರಹಿಸಿದ್ದರು. ಇದೀಗ ಅದೇ ಪತ್ರಿಕೆಯ ವಿಶ್ವಾಸಾರ್ಹತೆ ಮತ್ತೊಮ್ಮೆ ಪ್ರಶ್ನೆಗೀಡಾಗಿದೆ.
 ಏನೇ ಆಗಲಿ, ಪತ್ರಿಕೆಯೊಂದರ ಬೇಜವಾಬ್ದಾರಿಯಿಂದಾಗಿ ಕಾಶ್ಮೀರಿ ವಿದ್ಯಾರ್ಥಿಯೊಬ್ಬ ‘ಗೂಢಚಾರ'ನಾಗಿ ಬಿಂಬಿತಗೊಂಡಿದ್ದಾನೆ. ಮಾತ್ರವಲ್ಲ, ಕ್ಷಮೆ ಕೋರಬೇಕಾದ ಪತ್ರಿಕೆಯು ತನ್ನನ್ನು ಸಮರ್ಥಿಸಿಕೊಳ್ಳುವ ನಿರ್ಲಜ್ಜತನವನ್ನು ಪ್ರದರ್ಶಿಸಿದೆ. ಇಂಥ ಸ್ಥಿತಿಯಲ್ಲಿ ಓದುಗರು ಎಚ್ಚೆತ್ತುಕೊಳ್ಳಬೇಕು. ತಪ್ಪನ್ನು ತಪ್ಪೆಂದು ಒಪ್ಪಿಕೊಳ್ಳುವ ಕನಿಷ್ಠ ಸೌಜನ್ಯವನ್ನೂ ತೋರದ ಮಾಧ್ಯಮ ನೀತಿಯನ್ನು ಪ್ರಶ್ನಿಸಬೇಕು. ಪೂರ್ವಾಗ್ರಹ ಪೀಡಿತ ಸುದ್ದಿ-ವರದಿಗಳ ವಿರುದ್ಧ ಪ್ರತಿಭಟನೆಯ ಅಸ್ತ್ರವನ್ನು ಪ್ರಯೋಗಿಸಬೇಕು. ಮಾಧ್ಯಮ ಕ್ಷೇತ್ರ ಎಂದೂ ಸರ್ವಾಧಿಕಾರಿಯಾಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಎಲ್ಲ ಓದುಗರು ಮತ್ತು ವೀಕ್ಷಕರ ಮೇಲಿದೆ. ಇಲ್ಲದಿದ್ದರೆ ಆದಿಲ್ ಹುಸೈನ್‍ನಂಥವರು ಮತ್ತೆ ಮತ್ತೆ ಭಯೋತ್ಪಾದಕರಾಗುತ್ತಲೇ ಇರುತ್ತಾರೆ.

No comments:

Post a Comment