
ನಿಜವಾಗಿ, ಭೈರಪ್ಪ ಮತ್ತು ರುಶ್ದಿಯ ಮಧ್ಯೆ ಹೋಲಿಕೆಗೆ ಸಲ್ಲದ ಅನೇಕಾರು ಸಂಗತಿಗಳಿದ್ದರೂ ಮತ್ತೆ ಮತ್ತೆ ಚರ್ಚಿಸಲೇಬೇಕಾದ ವ್ಯಕ್ತಿತ್ವಗಳಾಗಿ ಅವರು ನಮ್ಮ ನಡುವೆ ಉಳಿದುಕೊಂಡಿದ್ದಾರೆ. ಅನ್ಯ ಧರ್ಮಗಳ ಮೇಲಿನ ಪೂರ್ವಾಗ್ರಹ ಪೀಡಿತ ಆಲೋಚನೆಗಳನ್ನೇ ಕಾದಂಬರಿಯಲ್ಲಿ ಬಳಸಿಕೊಳ್ಳುವ ಭೈರಪ್ಪರಿಗಿಂತ ಭಿನ್ನವಾಗಿ ಜನಪ್ರಿಯತೆಯನ್ನೇ ಮಾನದಂಡವಾಗಿಟ್ಟುಕೊಂಡು ಬರೆಯುವ ಜಾಯಮಾನ ರುಶ್ದಿಯದು. ಪಾಶ್ಚಾತ್ಯ ಜಗತ್ತು ಮತ್ತು ಅಲ್ಲಿನ ಓದುಗರ ತೃಪ್ತಿಯನ್ನು ಗುರಿಯಾಗಿಟ್ಟು ಅದಕ್ಕೆ ತಕ್ಕಂತೆ ಕತೆ ಹೆಣೆಯುವ ಹಾಗೂ ಬೇಕಾದಲ್ಲೆಲ್ಲ ಇಸ್ಲಾಮ್ ಧರ್ಮದ ಕುರಿತು ನಕಾರಾತ್ಮಕ ಅಭಿಪ್ರಾಯಗಳನ್ನು ಮಂಡಿಸುವ ಜಾಣತನವನ್ನು ಅವರು ತೋರ್ಪಡಿಸುತ್ತಿದ್ದಾರೆ. ಸೆಟಾನಿಕ್ ವರ್ಸಸ್ ಎಂಬ ಕೃತಿ ಜನಪ್ರಿಯಗೊಂಡದ್ದು ಈ ಕಾರಣದಿಂದಲೇ. ಸಾಹಿತ್ಯಿಕ ಮೌಲ್ಯಗಳು ಸೆಟಾನಿಕ್ ವರ್ಸಸ್‍ನಲ್ಲಿ ಎಷ್ಟಿವೆ ಎಂಬ ಬಗ್ಗೆ ಲಂಕೇಶ್ ಸಹಿತ ನಮ್ಮ ನಡುವಿನ ಸಾಕಷ್ಟು ಸಾಹಿತಿಗಳು ಈಗಾಗಲೇ ಚರ್ಚಿಸಿದ್ದಾರೆ. ಬೂಕರ್ ಪ್ರಶಸ್ತಿಗೆ ಅರ್ಹವಾಗುವಷ್ಟು ಉನ್ನತಿಯನ್ನು ಆ ಕೃತಿ ಹೊಂದಿತ್ತೇ ಎಂಬ ಬಗ್ಗೆ ಹಲವರು ತಗಾದೆಯನ್ನೂ ಎತ್ತಿದ್ದಾರೆ. ಪ್ರವಾದಿ ಮುಹಮ್ಮದ್‍ರನ್ನು , ಬಹುಪತ್ನಿತ್ವವನ್ನು ಮತ್ತು ಇಸ್ಲಾಮಿನ ವಿಶ್ವಾಸಾಚಾರಗಳನ್ನು ತಮಾಷೆ ಮಾಡುವುದನ್ನೇ ಸಾಹಿತ್ಯ ಅನ್ನುವುದಾದರೆ ಸೆಟಾನಿಕ್ ವರ್ಸಸ್ ಒಂದು ಸಾಹಿತ್ಯ ಕೃತಿ ಎಂದು ಹೇಳಿದವರೂ ಇದ್ದಾರೆ. ಪಾಶ್ಚಾತ್ಯ ಜಗತ್ತನ್ನು ಮತ್ತು ಅಲ್ಲಿನ ಮುಸ್ಲಿಮ್ ಫೋಬಿಯಾ ಮನಸ್ಥಿತಿಯನ್ನು ತಣಿಸುವಂತೆ ಬರೆದುದಕ್ಕಾಗಿ ಬೂಕರ್‍ನಿಂದ ಸನ್ಮಾನಿಸಲಾಗಿದೆ ಎಂಬ ಅಭಿಪ್ರಾಯವನ್ನು ಸಮರ್ಥಿಸುವಂತೆ ರುಶ್ದಿ ಉದ್ದಕ್ಕೂ ನಡಕೊಂಡು ಬಂದಿದ್ದಾರೆ. ಇದರರ್ಥ 1989ರಲ್ಲಿ ಅವರ ವಿರುದ್ಧ ಇರಾನಿನ ಆಯತುಲ್ಲಾ ಖೊಮೇನಿ ಘೋಷಿಸಿದ ಮರಣ ದಂಡನೆ ಫತ್ವ ಸಮರ್ಥನೀಯ ಎಂದಲ್ಲ. ಒಂದು ರೀತಿಯಲ್ಲಿ, ಆ ಕೃತಿಯನ್ನು ಪ್ರಸಿದ್ಧಗೊಳಿಸಿದ್ದೇ ಖೊಮೇನಿ. ಅವರ ಫತ್ವವು ರುಶ್ದಿಗೆ ಜಾಗತಿಕ ವ್ಯಕ್ತಿತ್ವವನ್ನು ಸಂಪಾದಿಸಿಕೊಟ್ಟಿತು. ಮಾತ್ರವಲ್ಲ, ಒಂದು ಸಾಹಿತ್ಯ ಕೃತಿ ಎಂಬ ನೆಲೆಯಲ್ಲಿ ಸೆಟಾನಿಕ್ ವರ್ಸಸ್‍ನ ಮೇಲೆ ನಡೆಯಬೇಕಾಗಿದ್ದ ನಿಷ್ಠುರ ವಿಮರ್ಶೆಯನ್ನೂ ಆ ಫತ್ವ ತಪ್ಪಿಸಿಬಿಟ್ಟಿತು. ಆ ಬಳಿಕ ಫತ್ವಾದ ಸುತ್ತಲೇ ಚರ್ಚೆಗಳು ನಡೆದುವು. ಸೆಟಾನಿಕ್ ವರ್ಸಸ್‍ನಲ್ಲಿ ಅಡಗಿರಬಹುದಾದ ಸಾಹಿತ್ಯಿಕ ಮೌಲ್ಯಗಳು ಮತ್ತು ಅದರ ಪ್ರಸ್ತುತತೆ, ಪೂರ್ವಾಗ್ರಹ, ಪಾಶ್ಚಾತ್ಯ ಓಲೈಕೆ, ಜನಪ್ರಿಯತೆಯ ಹಪಹಪಿತನ, ದ್ವಂದ್ವ.. ಮುಂತಾದುವುಗಳೆಲ್ಲ ವಿಮರ್ಶೆಗೀಡಾಗುವುದರ ಬದಲು ಖೊಮೇನಿಯ ಮನಸ್ಥಿತಿ ಮತ್ತು ಧಾರ್ಮಿಕ ಕರ್ಮಠತನಗಳು ಮುನ್ನೆಲೆಗೆ ಬಂದುವು. ಹೀಗೆ ಒಂದು ಕೃತಿಗೆ ಮತ್ತು ಅದರ ಕರ್ತೃಗೆ ಖೊಮೇನಿ ಹಾಗೂ ಅವರ ಫತ್ವ ಹುತಾತ್ಮ ಪಟ್ಟವನ್ನು ಒದಗಿಸಿದುವು. ದುರಂತ ಏನೆಂದರೆ, ರುಶ್ದಿಯವರು ಆ ನಕಲಿ ಇಮೇಜಿನ ಭ್ರಮೆಯಿಂದ ಇನ್ನೂ ಹೊರಬಂದಿಲ್ಲ. ಬಹುಪತ್ನಿತ್ವವನ್ನು ತಮಾಷೆ ಮಾಡಿದ ಅವರೇ ನಾಲ್ಕು ಬಾರಿ ಮದುವೆಯಾಗಿದ್ದಾರೆ. ಮಾತ್ರವಲ್ಲ, ನಾಲ್ವರಿಗೂ ಸಾಲು ಸಾಲಾಗಿ ವಿಚ್ಛೇದನವನ್ನೂ ನೀಡಿದ್ದಾರೆ. ಬಹುಶಃ, ನೇಮಾಡೆಯವರು ರುಶ್ದಿಯನ್ನು ‘ಪಾಶ್ಚಾತ್ಯ ಓಲೈಕೆಯ ಸಾಹಿತಿ’ ಎಂದಿರುವುದಕ್ಕೆ ಅಥವಾ ‘ಪಶ್ಚಿಮದ ಕೀಳು ಅಭಿರುಚಿಗೆ ತಕ್ಕಂತೆ ಬರೆಯುವ ಸಾಹಿತಿ’ ಎಂದು ಅಭಿಪ್ರಾಯ ಪಟ್ಟಿರುವುದಕ್ಕೆ ರುಶ್ದಿ ಅವಾಚ್ಯ ಪದವನ್ನು ಬಳಸುವಷ್ಟು ಸಿಟ್ಟಾದುದು ಅವರ ಈ ಎಲ್ಲ ದ್ವಂದ್ವ, ಓಲೈಕೆ, ಹಿಪಾಕ್ರಸಿಯ ಕಾರಣದಿಂದಲೇ ಆಗಿರಬಹುದು.
ಸಾಹಿತ್ಯ ಕ್ಷೇತ್ರ ಇವತ್ತು ಎಷ್ಟು ಸ್ವಚ್ಛವಾಗಿದೆ ಮತ್ತು ಪೂರ್ವಗ್ರಹ ಎಂಬ ಮಾರಕ ವೈರಸ್‍ನಿಂದ ಎಷ್ಟಂಶ ಮುಕ್ತವಾಗಿದೆ ಎಂಬುದು ಗಂಭೀರ ಚರ್ಚೆಗೆ ಅರ್ಹವಾದದ್ದು. ಹಾಗಂತ ಭೈರಪ್ಪ ಈ ಚರ್ಚೆಯನ್ನು ಆರಂಭಿಸಿದವರಲ್ಲ. ಆದರೆ ಅವರಿಂದಾಗಿ ಈ ಚರ್ಚೆಗೆ ಹೆಚ್ಚು ಶಕ್ತಿ ಒದಗಿದೆ. ಸಾಹಿತ್ಯ ಕೃತಿಯೊಂದು ಯಾವೆಲ್ಲ ಮೌಲಿಕ ಅಂಶಗಳನ್ನು ಒಳಗೊಳ್ಳಬೇಕಿತ್ತೋ ಅಥವಾ ಯಾವೆಲ್ಲ ಕಾರಣಗಳಿಂದಾಗಿ ಒಂದು ಕೃತಿ ಚರ್ಚೆಗೊಳಗಾಗಬೇಕಿತ್ತೋ ಆ ಎಲ್ಲ ಚೌಕಟ್ಟುಗಳನ್ನು ಉಲ್ಲಂಘಿಸಿ ಬರೆಯ ಹೊರಟವರೇ ಭೈರಪ್ಪ. ಅವರ ಈ ಬಂಡಾಯದಿಂದಾಗಿ ಪೂರ್ವಾಗ್ರಹಗಳೇ ಐತಿಹಾಸಿಕ ಸತ್ಯ ಅನಿಸಿಕೊಂಡವು. ಇತಿಹಾಸದ ತಪ್ಪು ಆಚರಣೆಗಳೇ ಪವಿತ್ರ ಆದುವು. ಒರೆಗೆ ಹಚ್ಚದ ಅಭಿಪ್ರಾಯಗಳೇ ಪಾವಿತ್ರ್ಯತೆ ಪಡೆದವು. ಇತಿಹಾಸವನ್ನು ಅವರು ವಾಸ್ತವದ ಕಣ್ಣಿನಿಂದ ಈವರೆಗೂ ನೋಡಿಲ್ಲ. ರುಶ್ದಿಯವರಿಗೆ ಪಾಶ್ಚಾತ್ಯ ಜಗತ್ತಿನ ಅಹಂ ಅನ್ನು ತೃಪ್ತಿಪಡಿಸುವ ಉದ್ದೇಶವಿದ್ದರೆ ಭೈರಪ್ಪರಿಗೆ ಒಂದು ನಿರ್ದಿಷ್ಟವರ್ಗದ ಪ್ರೀತಿಪಾತ್ರ ಅನಿಸಿಕೊಳ್ಳುವ ತುಡಿತವಿದೆ. ಇಬ್ಬರ ಅಭಿರುಚಿಗಳೇ ಬೇರೆ. ಓದುಗ ವಲಯವೂ ಬೇರೆ. ಬಳಸುವ ಭಾಷೆಯೂ ಬೇರೆ. ಆದರೆ ಆಳದಲ್ಲಿ ಎಲ್ಲೋ ಅವರಿಬ್ಬರೂ ಪರಸ್ಪರ ಸಂಧಿಸುತ್ತಾರೆ. ರುಶ್ದಿ ಮತ್ತು ಭೈರಪ್ಪ ಇಬ್ಬರ ಬರಹಗಳಲ್ಲೂ ಯಾರನ್ನೋ ಮೆಚ್ಚಿಸುವ, ಯಾವುದನ್ನೋ ಬಯಸುವ, ಏನೋ ಆಗಬಯಸುವ ಹಪಹಪಿಕೆಯಿದೆ. ಅದಕ್ಕಾಗಿ ಅವರು ಐತಿಹಾಸಿಕ ಸತ್ಯಗಳನ್ನೇ ತಿದ್ದಬಯಸುತ್ತಾರೆ. ವಾಸ್ತವದ ಬೆನ್ನಿಗೆ ಇರಿದು ಅಸತ್ಯಕ್ಕೆ ಮೆರುಗನ್ನು ನೀಡುತ್ತಿದ್ದಾರೆ. ತಮ್ಮ ಕಾದಂಬರಿಗಳಲ್ಲಿ ವಿವಿಧ ಪಾತ್ರಗಳನ್ನು ಸೃಷ್ಟಿಸಿ ತಮ್ಮ ಮೂಗಿನ ನೇರಕ್ಕೆ ಅವುಗಳನ್ನು ಮಾತಾಡಿಸುತ್ತಾರೆ. ಆವರಣದಲ್ಲಿ ಭೈರಪ್ಪ ಮಾಡಿರುವುದೂ ಇದನ್ನೇ.
No comments:
Post a Comment