Wednesday 4 February 2015

ಲಕ್ಷ್ಮಣ್‍ರ ರೇಖೆಯಲ್ಲಿ ಮೋದಿ ಮತ್ತು ಪೌಲಿನಾ ಹೇಗೆ ಕಾಣಿಸುತ್ತಿದ್ದರು?

    ಜನವರಿ 27ರ ಪತ್ರಿಕೆಗಳಲ್ಲಿ ಮೂರು ಸುದ್ದಿಗಳು ಜೊತೆ ಜೊತೆಗೇ ಪ್ರಕಟವಾಗಿದ್ದುವು. ಈ ಮೂರೂ ಸುದ್ದಿಗಳು ಎಷ್ಟು ಮಹತ್ವಪೂರ್ಣವಾದವು ಎಂಬುದಕ್ಕೆ ಪತ್ರಿಕೆಗಳು ಇವುಗಳಿಗೆ ಕೊಟ್ಟ ಜಾಗವೇ ಪುರಾವೆಯಾಗಿತ್ತು. ಹೊರನೋಟಕ್ಕೆ, ಈ ಸುದ್ದಿಗಳು ಪರಸ್ಪರ ಯಾವ ಸಂಬಂಧವೂ ಇಲ್ಲದ ಮತ್ತು ಹೋಲಿಕೆಯನ್ನೂ ಮಾಡಲಾಗದ ಬಿಡಿ ಸುದ್ದಿಗಳಾಗಿ ಕಾಣಿಸಬಹುದಾದರೂ ಇದರ ಮೇಲೆ ತುಸು ಹೊತ್ತು ಕಣ್ಣಿರಿಸಿದರೆ, ಇವು ಪರಸ್ಪರ ಹೋಲಿಸಲೇಬೇಕಾದ ಹಾಗೂ ಆಂತರಿಕ ಸಂಬಂಧವುಳ್ಳ ಸುದ್ದಿಗಳಾಗಿ ಗೋಚರಿಸಬಹುದು. ಈ ಮೂರರಲ್ಲಿ ಒಂದು- ‘ಖ್ಯಾತ ವ್ಯಂಗ್ಯ ಚಿತ್ರಕಾರ ಆರ್.ಕೆ. ಲಕ್ಷ್ಮಣ್‍ ನಿಧನರಾದ ಸುದ್ದಿಯಾದರೆ’ ಇನ್ನೊಂದು, ‘ಅಮೇರಿಕದಲ್ಲಿ ನಡೆದ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಕೊಲಂಬಿಯದ ಪೌಲಿನಾ ವೇಗಾ ವಿಜಯಿಯಾದದ್ದು’. ಮತ್ತೊಂದು, ‘10 ಲಕ್ಷ   ರೂಪಾಯಿ ಖರ್ಚು ಮಾಡಿ ‘ನರೇಂದ್ರ ದಾಮೋದರ ದಾಸ್ ಮೋದಿ' ಎಂದು ಛಾಪಿಸಲಾದ ಕುರ್ತಾವನ್ನು ಧರಿಸಿ ಪ್ರಧಾನಿ ನರೇಂದ್ರ ಮೋದಿಯವರು ಅಮೇರಿಕದ ಅಧ್ಯಕ್ಷ  ಒಬಾಮರನ್ನು ಭೇಟಿಯಾದದ್ದು’. ಒಂದು ವೇಳೆ ಆರ್.ಕೆ. ಲಕ್ಷ್ಮಣ್‍ ಅವರು ವ್ಯಂಗ್ಯ ಚಿತ್ರ ರಚಿಸುವಷ್ಟು ಆರೋಗ್ಯವಂತರಾಗಿರುತ್ತಿದ್ದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮಿಸ್ ಯುನಿವರ್ಸ್ ಪೌಲಿನಾ ವೇಗರ ನಡುವೆ ಯಾವ ಬಗೆಯ ಹೋಲಿಕೆಯನ್ನು ಕಾಣುತ್ತಿದ್ದರು? ಅವರ ‘ಕಾಮನ್‍ಮ್ಯಾನ್' ಈ ಇಬ್ಬರನ್ನು ನೋಡಿ ಏನೆಂದು ಉದ್ಗರಿಸುತ್ತಿದ್ದ? ಆತನಲ್ಲಿ ಮೂಡಬಹುದಾದ ಅಚ್ಚರಿಯೋ ಆಘಾತವೋ ಭೀತಿಯೋ ಹೇಗಿರುತ್ತಿತ್ತು? ನಿಜವಾಗಿ, ಮಿಸ್ ಯೂನಿವರ್ಸ್‍ನಂಥಲ್ಲ ಪ್ರಧಾನಿಯ ವ್ಯಕ್ತಿತ್ವ. ಪ್ರಧಾನಿ ಎಂಬ ಪದಕ್ಕೆ ಅದರದ್ದೇ ಆತ ಸ್ಥಾನಮಾನ, ಗೌರವ, ಘನತೆಯಿದೆ. ಅವರು ದೇಶದ ಭಾವನೆಗಳ ಪ್ರತಿನಿಧಿ. ಅವರ ಉಡುಪು, ಅವರ ನಡೆ, ಮಾತು, ಅಂಗಚಲನೆ.. ಎಲ್ಲದರಲ್ಲೂ ದೇಶವನ್ನು ಅಳೆಯಲಾಗುತ್ತದೆ. ಒಂದು ದೇಶದ ಸಂಸ್ಕ್ರತಿಯನ್ನು ಆ ದೇಶದ ಸಾಂಸ್ಕ್ರತಿಕ ಕಾರ್ಯಕ್ರಮಗಳಷ್ಟೇ ಕಟ್ಟಿಕೊಡುವುದಲ್ಲ. ಪ್ರಧಾನಿಯವರು ಒಂದು ದೇಶದ ಎಲ್ಲ ವೈವಿಧ್ಯತೆಗಳನ್ನೂ ಪ್ರತಿನಿಧಿಸುವ ಸಂಕೇತ ಆಗಿರುತ್ತಾರೆ. ಉಡುಪು ಕೂಡ ಅದರ ಒಂದು ಭಾಗವೇ. ಈಜಿಪ್ಟ್ ನ ಸರ್ವಾಧಿಕಾರಿಯಾಗಿದ್ದ ಹುಸ್ನಿ ಮುಬಾರಕ್‍ರು ತನ್ನದೇ ಹೆಸರನ್ನು ಛಾಪಿಸಲಾದ ಬಟ್ಟೆಯನ್ನು ಧರಿಸಿದ್ದುದು ಈ ಹಿಂದೆ ಸುದ್ದಿಯಾಗಿತ್ತು. ಮಾತ್ರವಲ್ಲ, ಜಗತ್ತಿನಲ್ಲಿರುವ ಸರ್ವಾಧಿಕಾರಿಗಳ ವಿವಿಧ ಬಗೆಯ ಆಸಕ್ತಿಗಳ ಕುರಿತಂತೆ ಚರ್ಚಿಸುವುದಕ್ಕೂ ಅದು ಕಾರಣವಾಗಿತ್ತು. ನರೇಂದ್ರ ಮೋದಿಯವರು ಸರ್ವಾಧಿಕಾರಿಯಲ್ಲ. ಜನರ ಪ್ರತಿನಿಧಿ. ಮುಬಾರಕ್‍ರಿಗೂ ನರೇಂದ್ರ ಮೋದಿಯವರಿಗೂ ನಡುವೆ ಇರುವ ಪ್ರಮುಖ ವ್ಯತ್ಯಾಸ ಇದು. ಮುಬಾರಕ್ ಏನನ್ನು ಧರಿಸಿದರೂ ಅದು ಈಜಿಪ್ಟ್ ಜನತೆಯನ್ನು ಪ್ರತಿನಿಧಿಸುವುದಿಲ್ಲ. ಯಾಕೆಂದರೆ, ಅವರನ್ನು ಈಜಿಪ್ಟ್ ಜನತೆ ಚುನಾಯಿಸಿಯೇ ಇಲ್ಲ ಆದ್ದರಿಂದಲೇ, ಅವರ ಆಸಕ್ತಿ ಮತ್ತು ಹವ್ಯಾಸಗಳನ್ನು ಜನರೊಂದಿಗೆ ಹೋಲಿಕೆ ಮಾಡಿ ನೋಡಲೂ ಆಗುವುದಿಲ್ಲ. ಆದರೆ ನರೇಂದ್ರ ಮೋದಿ ಹಾಗಲ್ಲವಲ್ಲ. ಓರ್ವ ಚಾಯ್‍ವಾಲಾ ಆಗಿ ನರೇಂದ್ರ ಮೋದಿಯವರ ಡ್ರೆಸ್‍ಸೆನ್ಸ್ ಹೇಗಿರಬೇಕಿತ್ತು ಮತ್ತು ಯಾರನ್ನು ಪ್ರತಿನಿಧಿಸುವಂತಿರಬೇಕಿತ್ತು? ತನ್ನನ್ನೇ ವೈಭವೀಕರಿಸುವ 10 ಲಕ್ಷ  ರೂಪಾಯಿಯ ಕುರ್ತಾವನ್ನು ಧರಿಸಿ ಓರ್ವರು ಚಾ ಮಾರಾಟ ಮಾಡುವ ಸನ್ನಿವೇಶವನ್ನೊಮ್ಮೆ ಕಲ್ಪಿಸಿಕೊಳ್ಳಿ. ಆ ವ್ಯಕ್ತಿಯ ಚಾ ಎಷ್ಟು ದುಬಾರಿಯಾಗಿರಬಹುದು? ಮೋದಿಯವರು ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಓರ್ವ ಬಡ ಚಾಯ್‍ವಾಲಾನಾಗಿ ತನ್ನನ್ನು ಪರಿಚಯಿಸಿಕೊಂಡಿದ್ದರು. ದೇಶದಾದ್ಯಂತ ಚಾಯ್‍ಪೆ ಚರ್ಚಾ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಬೀದಿ ಬೀದಿಗಳಲ್ಲಿ ಅವರ ಅಭಿಮಾನಿಗಳು ಚಾವನ್ನು ವಿತರಿಸುವ ವ್ಯವಸ್ಥೆಯನ್ನೂ ಮಾಡಿದ್ದರು. ಹೀಗೆ, ತಾನೋರ್ವ ಸಾಮಾನ್ಯ ಎಂದೇ ಹೇಳಿಕೊಂಡು ಬಂದ ಮೋದಿ, ಈ ಮಟ್ಟದಲ್ಲಿ ಸ್ವ ವೈಭವೀಕರಣಕ್ಕೆ ಏಕೆ ಮುಂದಾದರು? ಅವರಲ್ಲಿ ಸರ್ವಾಧಿಕಾರಿ ಮನೋಭಾವವಿದೆ ಎಂಬುದು ಈ ಹಿಂದೆಯೇ ಚರ್ಚೆಗೊಳಗಾಗಿತ್ತು. ಪ್ರಧಾನಿಯನ್ನು ಬಿಟ್ಟರೆ ಉಳಿದಂತೆ ಸಚಿವ ಸಂಪುಟದ ಇನ್ನಾರೂ ಮುಖ್ಯಧಾರೆಯಲ್ಲಿ ಕಾಣಿಸಿಕೊಳ್ಳದಂತೆ ಅಥವಾ ಅವರ ಅಸ್ತಿತ್ವ ನಗಣ್ಯವಾಗುವಂತೆ ಅವರು ನಡಕೊಳ್ಳುತ್ತಾರೆ ಎಂಬ ಅನುಮಾನವನ್ನೂ ವ್ಯಕ್ತಪಡಿಸಲಾಗಿತ್ತು. ಇದೀಗ ಅದನ್ನು ಸಾಬೀತುಪಡಿಸುವಂತೆ ಮೋದಿ ವರ್ತಿಸಿದ್ದಾರೆ. ಈ ಏಕವ್ಯಕ್ತಿ ವಿಜೃಂಭಣೆ ಪ್ರಜಾತಂತ್ರಕ್ಕೆ ಸಹ್ಯವೇ?
    ಕಾಕತಾಳೀಯವೇನೆಂದರೆ, ಮೋದಿಯವರು ಈ ಸ್ವ ವೈಭವೀಕರಣದ ಕುರ್ತಾವನ್ನು ಧರಿಸಿದ ಅದೇ ದಿನ ಆರ್.ಕೆ. ಲಕ್ಷ್ಮಣ್‍ರು ನಿಧನರಾದರು. ಈ ದೇಶದ ರಾಜಕಾರಣಿಗಳ ಎಲ್ಲ ಬಗೆಯ ಎಡೆಬಿಡಂಗಿತನವನ್ನೂ ತನ್ನ ಮೊನಚು ರೇಖೆಗಳಲ್ಲಿ ಹಿಡಿದಿಡುತ್ತಿದ್ದ ಲಕ್ಷ್ಮಣ್‍ರು ಮೋದಿಯವರ ಈ ಕುರ್ತಾವನ್ನು ಕಂಡು ‘ಇನ್ನು ಬದುಕಿರಲು ಸಾಧ್ಯವಿಲ್ಲ'ವೆಂಬಂತೆ ಹೊರಟು ಹೋದರು. ಒಂದು ರೀತಿಯಲ್ಲಿ, ಲಕ್ಷ್ಮಣ್‍ರ ಸಾವು ಮೋದಿಯವರ ಸ್ವ ವೈಭವೀಕರಣಕ್ಕೆ ಸಲ್ಲಿಸಲಾದ ಸಾತ್ವಿಕ ಪ್ರತಿಭಟನೆ. ಈ ಹಿಂದೆ ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಹೇರಿದಾಗ ಲಕ್ಷ್ಮಣ್‍ ಅದನ್ನು ಪ್ರಬಲವಾಗಿ ಖಂಡಿಸಿದ್ದರು. ಸರ್ವಾಧಿಕಾರಿ ಧೋರಣೆಯನ್ನು ಎಂದೂ ಒಪ್ಪದ ಅವರು ಮೋದಿಯವರ ಈ ಸ್ವ ವೈಭವೀಕರಣವನ್ನು ಸಮರ್ಥಿಸುವುದಕ್ಕೆ ಸಾಧ್ಯವೇ ಇರಲಿಲ್ಲ.
 ಅಂದಹಾಗೆ, ಈ ದೇಶದ ಪ್ರಧಾನಿಯಾಗಿ ಮೋದಿಯವರ ಮುಂದೆ ಅನೇಕಾರು ಸವಾಲುಗಳಿವೆ. ಇವತ್ತು ಅವರದೇ ಸಂಪುಟದ ಸಹೋದ್ಯೋಗಿಗಳು ಪತ್ರಿಕೆಗಳ ಮುಖಪುಟದಿಂದ ಕೊನೆ ಪುಟಕ್ಕಾಗುವಷ್ಟು ವಿವಾದಾತ್ಮಕವಾಗಿ ನಡಕೊಳ್ಳುತ್ತಿದ್ದಾರೆ. ಅವರನ್ನು ಬೆಳೆಸಿದ ಸಂಘ ಪರಿವಾರವಂತೂ ದಿನಕ್ಕೊಂದು ಯೋಜನೆಗಳೊಂದಿಗೆ ಈ ದೇಶವನ್ನು ಆತಂಕಕ್ಕೆ ತಳ್ಳುತ್ತಿದೆ. ಇಂಥ ಸಂದರ್ಭಗಳಲ್ಲಿ ಮೋದಿಯವರು ಆತ್ಮಸ್ತುತಿಯ ವರ್ತನೆಗಿಂತ ಹೊರತಾದ ಕಾರಣಕ್ಕಾಗಿ ಈ ದೇಶದಲ್ಲಿ ಸುದ್ದಿಯಲ್ಲಿರಬೇಕಾಗುತ್ತದೆ. ಅಷ್ಟಕ್ಕೂ, ದೇಶದ ಬಗ್ಗೆ ಕನಸುಗಳನ್ನು ಬಿತ್ತುವುದಕ್ಕೆ ನರೇಂದ್ರ ಮೋದಿಯವರೇ ಬೇಕಿಲ್ಲ. ಅದನ್ನು ಮಾತುಗಾರರಾದ ಯಾರೂ ಮಾಡಬಹುದು. ಈ ಬಾರಿಯ ಮಿಸ್ ಯುನಿವರ್ಸ್ ಪೌಲಿನಾ ವೇಗಾ ಕೂಡಾ ಮಿಸ್ ಯೂನಿವರ್ಸ್ ಆದ ಖುಷಿಯಲ್ಲಿ ಕೊಲಂಬಿಯಾದ ಬಗ್ಗೆ ಮಾತಾಡಿದ್ದಾರೆ. ನನ್ನ ಗೆಲುವು ಕೊಲಂಬಿಯಾವನ್ನು ವಿಶ್ವದ ನಕಾಶೆಯಲ್ಲಿ ಎತ್ತರಕ್ಕೇರಿಸಬಹುದು ಎಂಬ ಕನಸು ಕಂಡಿದ್ದಾರೆ. ನನ್ನ ಗೆಲುವು 47 ಮಿಲಿಯನ್ ಕೊಲಂಬಿಯನ್ನರ ಗೆಲುವು, ನಾನು ಕೊಲಂಬಿಯನ್ ಎಂಬುದಕ್ಕಾಗಿ ಹೆಮ್ಮೆ ಪಡುತ್ತೇನೆ.. ಎಂದೂ ಹೇಳಿದ್ದಾರೆ. ಆದರೆ, ಆ ಹೇಳಿಕೆ ಮತ್ತು ಉತ್ಸಾಹಗಳು ಪ್ರಾಯೋಗಿಕವಾಗಿ ಯಾವ ಸಾಧನೆಯನ್ನು ಮಾಡಬಲ್ಲುದು ಎಂಬುದು ಎಲ್ಲರಿಗೂ ಗೊತ್ತಿದೆ. ಬ್ಯೂಟಿ ಕಿರೀಟವನ್ನು ಧರಿಸಿ ವೇದಿಕೆಯಿಂದ ಕೆಳಗಿಳಿಯುವುದರೊಂದಿಗೆ ಆ ಮಾತಿನ ಮಹತ್ವವೂ ಕಳೆದುಹೋಗುತ್ತದೆ. ಆ ಬಳಿಕ ಆಕೆ ಧರಿಸಿದ ಡ್ರೆಸ್ಸು, ಅದರ ವೆಚ್ಚ, ಅದರ ವಿನ್ಯಾಸಗಾರ, ಆಕೆಯ ಆಂಗಿಕ ಅಭಿವ್ಯಕ್ತಿ, ನಗು, ಮೈಮಾಟಗಳೆಲ್ಲ ಸುದ್ದಿಯ ಕೇಂದ್ರವಾಗಿ ಉಳಿದುಕೊಳ್ಳುತ್ತದೆ. ಆದ್ದರಿಂದಲೇ ನರೇಂದ್ರ ಮೋದಿಯವರ ಕುರ್ತಾ ಮತ್ತು ಅದರ ಸುತ್ತ ಆಗುತ್ತಿರುವ ಚರ್ಚೆಗಳಿಗೆ ಮಹತ್ವ ಬರುವುದು. ಮೋದಿಯವರು ‘ಪೌಲಿನಾ ವೇಗಾ'ಳ ಮಿತಿಯನ್ನು ದಾಟಿ ಪ್ರಾಯೋಗಿಕ ವ್ಯಕ್ತಿಯಾಗಿ
ಗುರುತಿಸಿಕೊಳ್ಳಬೇಕಾದವರಾಗಿದ್ದಾರೆ. ಅವರ ಕುರ್ತಾ, ಅದರ ವಿನ್ಯಾಸಗಾರ, ಅದಕ್ಕೆ ಮಾಡಲಾದ ಖರ್ಚು, ಎಂಬ್ರಾಯಿಡರಿ ವಿಶೇಷತೆಗಳಾಚೆಗೆ ಅವರು ಓರ್ವ ಪ್ರಧಾನಿಯಾಗಿ ಚರ್ಚೆಗೊಳಗಾಗಬೇಕು. ಅವರ ಎದೆಯ ಉದ್ದ, ಅಗಲ, ಅವರ ಎತ್ತರ, ಗಡ್ಡದ ಶೈಲಿಗಳೆಲ್ಲ ಪದೇ ಪದೇ ಸಾರ್ವಜನಿಕ ಚರ್ಚಾ ಕೇಂದ್ರಗಳಾಗುತ್ತದೆಂದರೆ ಅವರನ್ನು ಬ್ಯೂಟಿ ಸ್ಪರ್ಧೆಯ ಸ್ಪರ್ಧಾಳುವಿನಂತೆ ಜನರು ಪರಿಗಣಿಸತೊಡಗಿದ್ದಾರೆ ಎಂದರ್ಥ. ಪ್ರಧಾನಿಗದು ಭೂಷಣವಲ್ಲ. ಅವರಿದನ್ನು ವಿೂರಲೇಬೇಕಾಗಿದೆ.



.



No comments:

Post a Comment