Monday 3 February 2020

ಭಾರತದ ತಹ್ರೀರ್ ಚೌಕ್ ಆಗುವ ಹಾದಿಯಲ್ಲಿ ಶಾಹೀನ್‍ ಬಾಗ್





ಸಿಎಎ ಮತ್ತು ಎನ್‍ಆರ್ ಸಿ ವಿರೋಧಿ ಪ್ರತಿಭಟನೆಗೆ ಒಂದು ತಿಂಗಳು ತುಂಬಿದರೂ ಪ್ರತಿಭಟನಾಕಾರರ ಆಕ್ರೋಶ ತಣಿದಿಲ್ಲ. ಮಾತ್ರವಲ್ಲ, ದಿನದಿಂದ ದಿನಕ್ಕೆ ಈ ಪ್ರತಿಭಟನೆ ಬಲಶಾಲಿಯಾಗುತ್ತಲೂ ಇನ್ನಷ್ಟು ಪ್ರದೇಶಗಳಿಗೆ ವ್ಯಾಪಿಸುತ್ತಲೂ ಹೋಗುತ್ತಿದೆ. ಬಹುಶಃ, ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಬ್ರಿಟಿಷರ ವಿರುದ್ಧ ಕಾಣಿಸಿಕೊಂಡ ನಾಗರಿಕ ಆಕ್ರೋಶದ ಮಾದರಿಯೊಂದು ಈ ಬಾರಿ ಕಾಣಿಸಿಕೊಂಡಿದೆ. ಎಲ್ಲೆಡೆಯೂ ಆಕ್ರೋಶ, ಪ್ರಭುತ್ವ ವಿರೋಧಿ ಘೋಷಣೆ. ಡಿಸೆಂಬರ್ 16ರಂದು ದೆಹಲಿಯ ಶಾಹೀನ್‍ ಬಾಗ್‍ನಲ್ಲಿ ಮಹಿಳೆಯರಿಂದ ಆರಂಭವಾದ ಪ್ರತಿಭಟನೆ ನಿರಂತರ ಮುಂದುವರಿದಿದೆ. ದೆಹಲಿಯ ಕಡು ಚಳಿಯನ್ನು ಲೆಕ್ಕಿಸದೇ ಮಹಿಳೆಯರು ದಿನದ 24 ಗಂಟೆಯೂ ಸರದಿಯಲ್ಲಿ ಬಂದು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ಪ್ರತಿಭಟನಾಕಾರರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಇಲ್ಲಿ ಸಂವಿಧಾನ ಪಠಣ, ಭಗವದ್ಗೀತೆ, ಬೈಬಲ್ ಮತ್ತು ಕುರ್‍ಆನ್‍ನ ವಚನಗಳ ಪಠಣ ನಡೆಯುತ್ತಿದೆ. ಹೋಮ-ಹವನಗಳಿಗೂ ಈ ಪ್ರತಿಭಟನಾ ಸಭೆ ಸಾಕ್ಷಿಯಾಗಿದೆ. ಒಂದು ರೀತಿಯಲ್ಲಿ,
ದೆಹಲಿಯ ಶಾಹೀನ್‍ಬಾಗ್ ಅನ್ನುವುದು ಮಿನಿ ಭಾರತವಾಗಿ ಮಾರ್ಪಟ್ಟಿದೆ. ಈ ಪ್ರತಿಭಟನಾಕಾರರನ್ನು ಕೋರ್ಟು ಮೂಲಕ ಅಲ್ಲಿಂದ ತೆರವುಗೊಳಿಸಲು ಪ್ರಯತ್ನಿಸಿದರೂ ಅದು ಯಶಸ್ವಿಯಾಗಲಿಲ್ಲ. ಇದೇ ಮೊದಲ ಬಾರಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‍ಸಿ)ಯು ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿದೆ. ಉತ್ತರ ಭಾರತದಲ್ಲಿ ಅತ್ಯಂತ ಪ್ರಭಾವಿಯಾಗಿರುವ ಬಹುಜನ್ ಕ್ರಾಂತಿ ಮಂಚ್ (ಬಿಕೆಎಂ) ಎಂಬ ದಲಿತ, ಹಿಂದುಳಿದ, ಆದಿವಾಸಿ, ಬುಡಕಟ್ಟು ಜನಸಮೂಹವನ್ನು ಪ್ರತಿನಿಧಿಸುವ ಸಂಘಟನೆಯು ಡಿಸೆಂಬರ್ 20ರಿಂದ ಈ ಸಿಎಎ ಮತ್ತು ಎನ್‍ಆರ್ ಸಿಯ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದೆ. ದೇಶದ 550 ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುವ ಗುರಿಯೊಂದಿಗೆ ಪ್ರತಿದಿನ ರ‌್ಯಾಲಿ ಮತ್ತು ಸಭೆಗಳನ್ನು ಏರ್ಪಡಿಸುತ್ತಿದೆ. ಸಾವಿರಾರು ಮಂದಿ ಈ ಪ್ರತಿಭಟನಾ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಜನವರಿ 29ರಂದು ಭಾರತ್ ಬಂದ್‍ಗೆ ಕರೆಕೊಡುವ ಮೂಲಕ ಈ ಪ್ರತಿಭಟನಾ ಸರಣಿ ಕೊನೆಗೊಳ್ಳಲಿದೆ ಎಂದು ಅದು ಹೇಳಿಕೊಂಡಿದೆ. ವಿಶೇಷ ಏನೆಂದರೆ,
ಡಿಎನ್‍ಎ ಆಧಾರಿತ ಪೌರತ್ವ ಸಾಬೀತಿಗಾಗಿ ಅದು ಒತ್ತಾಯಿಸುತ್ತಿದೆ. ಈ ದೇಶದ ಮೂಲ ನಿವಾಸಿಗಳು ಯಾರು ಮತ್ತು ವಲಸಿಗರು ಯಾರು ಎಂಬುದು ಈ ಮೂಲಕ ನಿರ್ಧಾರವಾಗಲಿ ಎಂದು ಅದು ಆಗ್ರಹಿಸುತ್ತಿದೆ. ವಲಸಿಗರಾದ ಆರ್ಯರನ್ನು ಹೊರಹಾಕಿ ಭಾರತವನ್ನು ಅದರ ಮೂಲ ನಿವಾಸಿಗಳಾದ ದಲಿತರು, ಆದಿವಾಸಿಗಳು, ಬುಡಕಟ್ಟುಗಳು ಸಹಿತ ದಮನಿತ ವರ್ಗಕ್ಕೆ ವರ್ಗಾಯಿಸಬೇಕೆಂಬುದು ಅದರ ಗುರಿ. ತ್ರಿಪುರದಲ್ಲಿ ಬಿಜೆಪಿ ಮಿತ್ರಪಕ್ಷವಾದ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್‍ಟಿ)ವು ಅನಿರ್ದಿಷ್ಟಾವಧಿ ಧರಣಿಯಲ್ಲಿದೆ. ಯಶವಂತ್ ಸಿನ್ಹಾ ಅವರು ಶಾಂತಿಯಾತ್ರೆ ಪ್ರಾರಂಭಿಸಿದ್ದಾರೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶವೂ ಸೇರಿ 5 ರಾಜ್ಯಗಳಲ್ಲಿ ಸಾಗುವ ಈ ಸಿಎಎ-ಎನ್‍ಆರ್ ಸಿ ವಿರೋಧಿ ಶಾಂತಿ ಯಾತ್ರೆಯು ಜನವರಿ 30ರಂದು ದೆಹಲಿಯಲ್ಲಿ ಕೊನೆಗೊಳ್ಳಲಿದೆ. ಸಿಎಎ ಪರ ಪಾರ್ಲಿಮೆಂಟ್‍ನಲ್ಲಿ ಮತ ಚಲಾಯಿಸಿದ ಬಿಜೆಪಿ ಮಿತ್ರ ಪಕ್ಷವಾದ ಅಸ್ಸಾಮ್ ಗಣ ಪರಿಷತ್ ಈಗ ಸಿಎಎ ವಿರೋಧಿ ಪಾಳಯಕ್ಕೆ ಜಿಗಿದಿದೆ. ಸಿಎಎಯನ್ನು ಕಾನೂನು ಬಾಹಿರವೆಂದು ಘೋಷಿಸುವಂತೆ ಕೋರಿ ಅದರ ಅಧ್ಯಕ್ಷ ಪ್ರಫುಲ್ ಕುಮಾರ್ ಮಹಂತ ಅವರು ಸುಪ್ರೀಮ್ ಕೋರ್ಟಿನ ಬಾಗಿಲು ತಟ್ಟಿದ್ದಾರೆ. ನಾಗಾ ಪೀಪಲ್ಸ್ ಫ್ರಂಟ್ (ಎನ್‍ಪಿಎಫ್), ಬೋಡೋ ಪೀಪಲ್ಸ್ ಫ್ರಂಟ್ (ಬಿಪಿಎಫ್), ಮೀಝೋ ನ್ಯಾಶನಲ್ ಫ್ರಂಟ್ (ಎಂಎನ್‍ಎಫ್), ಸಿಕ್ಕಿಂ ಕ್ರಾಂತಿ ಮೋರ್ಚಾ (ಎಸ್‍ಕೆಎಂ) ಇತ್ಯಾದಿ ಈಶಾನ್ಯ ಭಾರತದ ಪ್ರಬಲ ಗುಂಪುಗಳು ಸಿಎಎ-ಎನ್‍ಆರ್‍ಸಿ  ವಿರುದ್ಧ ಹೋರಾಟವನ್ನು ಸಂಘಟಿಸುತ್ತಿವೆ. ಸಿಎಎ ಪರ ಪಾರ್ಲಿಮೆಂಟ್‍ನಲ್ಲಿ ಮತ ಚಲಾಯಿಸಿದುದಕ್ಕಾಗಿ ನಾಗಾ ಪೀಪಲ್ಸ್ ಫ್ರಂಟ್‍ನ ಸದಸ್ಯನಿಗೆ ಶೋಕಾಸ್ ನೋಟೀಸ್ ಜಾರಿಗೊಳಿಸಲಾಗಿದೆ. ಇದೇ ಪಕ್ಷದ ರಾಜ್ಯಸಭಾ ಸದಸ್ಯ ಕೆ.ಜಿ. ಕೀನೇ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಮಿತ್ರಪಕ್ಷವಾದ ಆಲ್ ಜಾರ್ಖಂಡ್ ಸ್ಟೂಡೆಂಟ್ ಯೂನಿಯನ್ ಕೂಡ ಸಿಎಎ-ಎನ್‍ಆರ್ ಸಿ  ವಿರುದ್ಧ ಬೀದಿಗಿಳಿದಿದೆ. ಪಶ್ಚಿಮ ಬಂಗಾಳವಂತೂ ಕೆಂಡದಂತೆ ಉರಿಯುತ್ತಿದೆ. ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಅಲ್ಲಿಂದ ನೇರವಾಗಿ ಸಿಎಎ-ಎನ್‍ಆರ್ ಸಿ ವಿರೋಧಿ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದರು. ಪಶ್ಚಿಮ ಬಂಗಾಳದ ಸ್ಥಿತಿಗತಿ ಹೇಗಿದೆ ಅನ್ನುವುದನ್ನು ಇದು ಸೂಚಿಸುತ್ತದೆ. ಸಿಎಎ ಪರ ಪಾರ್ಲಿಮೆಂಟ್‍ನಲ್ಲಿ ಮತ ಚಲಾಯಿಸಿರುವ ನಿತೀಶ್ ಕುಮಾರ್ ರ ಜೆಡಿಯು, ನವೀನ್ ಪಟ್ನಾಯಕ್‍ರ ಬಿಜೆಡಿ, ಬಿಜೆಪಿ ಮಿತ್ರಪಕ್ಷವಾದ ರಾಮ್ ವಿಲಾಸ್ ಪಾಸ್ವಾನ್‍ರ ಎಲ್‍ಜೆಪಿ, ಅಕಾಲಿ ದಳ, ಎಐಎಡಿಎಂಕೆ ಮುಂತಾದ ರಾಜಕೀಯ ಪಕ್ಷಗಳು ಇದೀಗ ಬಣ್ಣ ಬದಲಾಯಿಸಿ ಹೇಳಿಕೆ ಕೊಡತೊಡಗಿವೆ. ಇವು ಯಾವುವೂ ಸಿಎಎಯ ಪರ ನಿಲ್ಲುತ್ತಿಲ್ಲ. ಅಕಾಲಿದಳವಂತೂ ಪಾಕ್, ಅಫಘಾನ್ ಮತ್ತು ಬಾಂಗ್ಲಾದೇಶಗಳಿಂದ ಭಾರತಕ್ಕೆ ವಲಸೆ ಬಂದ ಮುಸ್ಲಿಮರಿಗೂ ಪೌರತ್ವ ಕೊಡುವಂತೆ ಆಗ್ರಹಿಸಿದೆ. ಬೆಂಗಳೂರಿನಲ್ಲಿ ದಲಿತ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆದಿದೆ. ನ್ಯಾಯವಾದಿಗಳು ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಅಮಥ್ರ್ಯಸೇನ್, ಚೇತನ್ ಭಗತ್, ಅರುಂಧತಿ ರಾಯ್, ದೇವನೂರು ಮಹಾದೇವ, ದೊರೈಸ್ವಾಮಿ, ಬರಗೂರು ರಾಮಚಂದ್ರಪ್ಪ, ಐಎಎಸ್ ಅಧಿಕಾರಿಗಳಾದ ಸಸಿಕಾಂತ್ ಸೆಂಥಿಲ್, ಗೋಪಿನಾಥ್ ಕಣ್ಣನ್, ರಾಮಚಂದ್ರ ಗುಹಾ ಮುಂತಾದ ಸಾವಿರಾರು ಚಿಂತಕರು ಸಿಎಎ ಮತ್ತು ಎನ್‍ಆರ್ ಸಿ ವಿರುದ್ಧ ದನಿಯೆತ್ತಿದ್ದಾರೆ ಮತ್ತು ಬೀದಿಗಿಳಿದು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಐದೂವರೆ ವರ್ಷಗಳ ಅಧಿಕಾರಾವಧಿಯಲ್ಲಿ ಎದುರಿಸುತ್ತಿರುವ ಅತಿದೊಡ್ಡ ನಾಗರಿಕ ಪ್ರತಿಭಟನೆ ಇದು. ನೋಟು ಅಮಾನ್ಯೀಕರಣ, ಜಿಎಸ್‍ಟಿ ಮತ್ತು ತ್ರಿವಳಿ ತಲಾಕ್ ಕಾನೂನು ಜಾರಿಗೆ ತಂದ ಸಮಯದಲ್ಲೂ ಈ ದೇಶದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆದಿರಲಿಲ್ಲ. ಮಾತ್ರವಲ್ಲ, ಆ ಎಲ್ಲ ಸಂದರ್ಭಗಳಲ್ಲಿ ಪ್ರತಿಭಟನಾಕಾರರು ತಂತಮ್ಮ ಸಂಘಟನೆ, ಪಕ್ಷ, ಗುಂಪುಗಳನ್ನು ಪ್ರತಿನಿಧಿಸುವ ರೀತಿಯಲ್ಲಿ ಪ್ರತ್ಯೇಕ ಬಾವುಟ, ಭಿತ್ತಿ ಚಿತ್ರ, ಘೋಷಣೆ ಮತ್ತು ಬ್ಯಾನರುಗಳ ಮೂಲಕ ಗುರುತಿಸಿಕೊಂಡಿದ್ದರು. ಅವರೆಲ್ಲ ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ಪ್ರತಿಭಟಿಸುವವರಾದರೂ ಅಲ್ಲೊಂದು ಪ್ರತ್ಯೇಕತೆಯಿತ್ತು. ಆದರೆ, ಸಿಎಎ, ಎನ್‍ಆರ್ ಸಿ, ಎನ್‍ಪಿಆರ್ ವಿರೋಧಿ ಪ್ರತಿಭಟನೆಯಲ್ಲಿ ಈ ಯಾವ ಪ್ರತ್ಯೇಕತೆಯೂ ಕಾಣಿಸುತ್ತಿಲ್ಲ. ಎಲ್ಲರ ಕೈಯಲ್ಲೂ ಭಾರತದ ತ್ರಿವರ್ಣ ಧ್ವಜ. ಬಾಯಲ್ಲಿ ಆಝಾದಿ ಘೋಷಣೆ ಮತ್ತು ಏಕ ಸಂದೇಶವನ್ನು ಸಾರುವ ಭಿತ್ತಿ ಚಿತ್ರಗಳು. ಒಂದು ರೀತಿಯಲ್ಲಿ, ಸಿಎಎ, ಎನ್‍ಆರ್ ಸಿ ಮತ್ತು ಎನ್‍ಪಿಆರ್ ಗಳು ಈ ದೇಶದ ನಾಗರಿಕರನ್ನು ಬೆಸೆದಿದೆ. ಅವರೊಳಗೆ ಕ್ರಾಂತಿಯ ಕಿಡಿಯನ್ನೆಬ್ಬಿಸಿದೆ. ಪೊಲೀಸ್ ವ್ಯವಸ್ಥೆಯನ್ನು ಬಳಸಿ ಪ್ರಭುತ್ವವು ದಮನಿಸಲು ಪ್ರಯತ್ನಿಸಿದಷ್ಟೂ ಅದು ಇನ್ನಷ್ಟು ಶಕ್ತಿಯೊಂದಿಗೆ ಪುಟಿಯುತ್ತಿದೆ. ಜನದನಿಯನ್ನು ಕೀಳಂದಾಜಿಸಿದುದರ ಪರಿಣಾಮ ಇದು. ಇನ್ನೊಂದು ಕಡೆ ಜಿಡಿಪಿ ಸಾರ್ವಕಾಲಿಕ ಕುಸಿತಕ್ಕೆ ತುತ್ತಾಗಿದೆ. ಅಟೋಮೊಬೈಲ್ ಕ್ಷೇತ್ರದಲ್ಲಿ ದಾರುಣ ಮೌನ ಆವರಿಸಿಕೊಂಡಿದೆ. ಅರ್ಥವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ದಾರಿ ಗೊತ್ತಾಗದೇ ಸರಕಾರ ಚಡಪಡಿಸುತ್ತಿದೆ. ಡಿಸೆಂಬರ್ ಕೊನೆಯ ತ್ರೈಮಾಸಿಕದ ವರದಿ ಪ್ರಕಾರ, ಈ ದೇಶದ ಬ್ಯಾಂಕುಗಳಿಗೆ ವಂಚಿಸಲಾದ ಮೊತ್ತದ ಪ್ರಮಾಣ 1.13 ಲಕ್ಷ ಕೋಟಿ ರೂಪಾಯಿಗೇರಿದೆ. ನಿರೀಕ್ಷಿಸಿದಷ್ಟು ಜಿಎಸ್‍ಟಿ ಸಂಗ್ರಹವಾಗುತ್ತಿಲ್ಲ. ರಾಜ್ಯಗಳಿಗೆ ಕೊಡಬೇಕಾದ ಸಂಪತ್ತಿನ ಪಾಲನ್ನು ಕೊಡುವುದಕ್ಕೂ ಕೇಂದ್ರ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಅದೇವೇಳೆ, ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ತೈಲವೂ ಉರಿಯುತ್ತಿದೆ. ನಿಜವಾಗಿ,
ಇದು ಕೇಂದ್ರ ಸರಕಾರದ ಸ್ವಯಂಕೃತಾಪರಾಧ. ಅಭಿವೃದ್ಧಿಯ ಮೂಲಕ ಗುರುತಿಸಿಕೊಳ್ಳಬೇಕಾದ ಸರಕಾರವೊಂದು ಜನರನ್ನು ಜಾತಿ-ಧರ್ಮಗಳ ಆಧಾರದಲ್ಲಿ ವಿಭಜಿಸಿ ಆಳುವುದಕ್ಕೆ ಆದ್ಯತೆ ಕೊಟ್ಟುದರ ಪರಿಣಾಮ ಇದು. ಇನ್ನೂ ತಿದ್ದಿಕೊಳ್ಳದೇ ಹೋದರೆ ಕೇಂದ್ರ ಸರಕಾರದ ಅಸ್ತಿತ್ವಕ್ಕೆ ಅಪಾಯವಿದೆ. ಹಾಗಾದರೆ, ಈಜಿಪ್ಟ್‍ನ ತಹ್ರೀರ್ ಚೌಕದ ಪ್ರತಿರೂಪವಾಗಿ ದೆಹಲಿಯ ಶಾಹೀನ್‍ ಬಾಗ್ ಮಾರ್ಪಡುವ ಮತ್ತು ಬದಲಾವಣೆಯೊಂದಕ್ಕೆ ಕಾರಣವಾಗುವ ಸಾಧ್ಯತೆಯೂ ಇದೆ.

No comments:

Post a Comment