Monday 17 December 2012

4 ರೂಪಾಯಿಯ `ಶ್ರೀಮಂತರೂ’ ಸಂಸ್ಕೃತಿ ರಕ್ಷಿಸುವ ಪ್ರತಿಭಟನಾಕಾರರೂ...


  ಬಡತನವನ್ನು ವಸ್ತುವಾಗಿಟ್ಟುಕೊಂಡು ಈ ಜಗತ್ತಿನಲ್ಲಿ ಅಸಂಖ್ಯ ಕತೆ, ಕಾದಂಬರಿಗಳು; ನಾಟಕ, ಸಿನಿಮಾಗಳು ಬಂದಿವೆ. ಮನುಷ್ಯರು ಮಾತ್ರವಲ್ಲ, ಪ್ರಾಣಿಗಳ ಹಸಿವನ್ನೂ ಕತೆ-ಕಾದಂಬರಿಗಳಿಗೆ ಬಳಸಿಕೊಳ್ಳಲಾಗಿದೆ. ಆದರೆ ಯಾವ ಕತೆಯಲ್ಲೂ, ಸಿನೆಮಾದಲ್ಲೂ ಬಡತನವನ್ನು ವಿಡಂಬನೆಗೆ ಒಳಪಡಿಸಲಾಗಿಲ್ಲ. ಬಡವರನ್ನು ಜೋಕರ್‍ಗಳಂತೆ ಬಿಂಬಿಸಲಾಗಿಲ್ಲ. ಇಷ್ಟಕ್ಕೂ, ಹಾಗೆ ಮಾಡದಿರುವುದಕ್ಕೆ ಕಾರಣ, ಬಡವರು ಪ್ರತಿಭಟಿಸಿಯಾರು ಎಂದಲ್ಲ. ಹೊಟ್ಟೆ ತುಂಬಿಸಿಕೊಳ್ಳುವುದಕ್ಕೇ ಸಾಮರ್ಥ್ಯ ಇಲ್ಲದವರು ಇನ್ನು, ಪ್ರತಿಭಟಿಸುವುದಾದರೂ ಹೇಗೆ? ನಿಜವಾಗಿ, ಬಡತನವನ್ನು ಮತ್ತು ಹಸಿವನ್ನು ಅವಮಾನಕ್ಕೆ ಒಳಪಡಿಸುವುದು ಅಮಾನವೀಯ ಎಂಬೊಂದು ಕಾಮನ್‍ಸೆನ್ಸು ಕತೆ, ಕಾದಂಬರಿಕಾರರಲ್ಲಿ ಇದ್ದಿರುವುದೇ ಇದಕ್ಕೆ ಕಾರಣ. ಆದರೆ ರಾಜಕಾರಣಿಗಳಿಗೆ ಕನಿಷ್ಠ ಈ ಕಾಮನ್‍ಸೆನ್ಸೂ ಇಲ್ಲ. ಬಹುಶಃ ಬಡತನಕ್ಕೆ ಅವರು 'ವಿರೋಧ ಪಕ್ಷ' ಎಂಬ ಅರ್ಥ ಕೊಟ್ಟಿರಬೇಕು. ಆದ್ದರಿಂದಲೇ, ತಮ್ಮ ವಿರೋಧಿಗಳನ್ನು ಅಗ್ಗದ ಭಾಷೆಯಲ್ಲಿ ಹೀಯಾಳಿಸುವಂತೆಯೇ ಅವರು 'ಬಡತನ'ವನ್ನೂ ಹೀಯಾಳಿಸುತ್ತಿದ್ದಾರೆ. ಇಲ್ಲದಿದ್ದರೆ, ಓರ್ವ ವ್ಯಕ್ತಿಯ ದಿನದ ಖರ್ಚಿಗೆ ನಾಲ್ಕು ರೂಪಾಯಿ ಧಾರಾಳ ಸಾಕು ಎಂದು ದಿಲ್ಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್  ಹೇಳಲು ಸಾಧ್ಯವೇ? ಒಂದು ವೇಳೆ ಶೀಲಾ ದೀಕ್ಷಿತ್‍ರಿಗೆ 120 ರೂಪಾಯಿ ಕೊಟ್ಟು, ‘ನೀವು ಈ ಹಣದಲ್ಲಿ ಒಂದು ತಿಂಗಳು ಬದುಕಿ ತೋರಿಸಿ..’ ಅಂಥ ಹೇಳಿದರೆ ಅವರ ಪ್ರತಿಕ್ರಿಯೆಯಾದರೂ ಹೇಗಿದ್ದೀತು? ಯೋಜನಾ ಆಯೋಗದ ಉಪಾಧ್ಯಕ್ಷ  ಮಾಂಟೆಕ್ ಸಿಂಗ್ ಅಹ್ಲುವಾಲಿಯಾರು ಈ ಮೊದಲು ಶೀಲಾ ದೀಕ್ಷಿತ್‍ರಂತೆಯೇ ಮಾತಾಡಿದ್ದರು. ನಗರ ಪ್ರದೇಶದ ವ್ಯಕ್ತಿ ದಿನವೊಂದರಲ್ಲಿ 32 ರೂಪಾಯಿ ಮತ್ತು ಗ್ರಾಮೀಣ ವ್ಯಕ್ತಿ 26 ರೂಪಾಯಿಯಲ್ಲಿ ಜೀವನ ಸಾಗಿಸಬಹುದು ಎಂದಿದ್ದರು. ಆದರೆ ಈ ಹೇಳಿಕೆಯ ಕೆಲವು ದಿನಗಳಲ್ಲೇ ಅವರು ತಮ್ಮ ಕಚೇರಿಯ ಶೌಚಾಲಯದ ರಿಪೇರಿಗೆ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದ್ದರು.
  ನಿಜವಾಗಿ, ನಾವು ಸದ್ಯ ಒಪ್ಪಿಕೊಂಡಿರುವ ವ್ಯವಸ್ಥೆಯಲ್ಲೇ ಸಾಕಷ್ಟು ಗೊಂದಲ ಇದೆ. ಅನೇಕ ವೈರುಧ್ಯಗಳಿವೆ. ಬಡತನವನ್ನು ಇಲ್ಲವಾಗಿಸಲು ಯಾರು ವಿಧಾನಸಭೆ ಇಲ್ಲವೇ ಪಾರ್ಲಿಮೆಂಟಲ್ಲಿ ಕಾರ್ಯತಂತ್ರಗಳನ್ನು ರೂಪಿಸಬೇಕೋ ಅವರಿಗೆ ಬಡತನದ ಕಾವು ಬಹುತೇಕ ತಟ್ಟಿರುವುದೇ ಇಲ್ಲ. ಅವರು ಬೆಳೆದಿರುವುದೇ ತುಂಬಿದ ಅನ್ನದ ಬಟ್ಟಲನ್ನು ನೋಡಿಕೊಂಡು. ಬಟ್ಟೆ ಒಗೆಯುವ ಸಾಬೂನನ್ನು ಸ್ನಾನಕ್ಕೆ ಬಳಸಿ ಅವರಿಗೆ ಗೊತ್ತಿರುವುದೇ ಇಲ್ಲ. ಬಿಸಿ ಊಟವಾಗಲಿ, ಹರಿದ ಬಟ್ಟೆ ತೊಟ್ಟು ಬರಿಗಾಲಲ್ಲಿ ನಡೆದ ಅನುಭವವಾಗಲಿ ಅವರಿಗೆ ಇರುವುದೂ ಇಲ್ಲ. ಅವರು ಶಾಲೆಗೆ ಹೋದದ್ದು ಕಾರಲ್ಲಿ. ಧರಿಸಿದ್ದು ಬಹುಬ್ರಾಂಡ್‍ಗಳ ಉಡುಪುಗಳನ್ನು. ಮನೆ ಮನೆಗೆ ಹಾಲು ಹಾಕಿಯೋ, ಪೇಪರ್ ಕೊಟ್ಟೋ ಅಥವಾ ಶಾಲಾ ರಜೆಯ ಸಂದರ್ಭದಲ್ಲಿ ದುಡಿದೋ ಗೊತ್ತಿಲ್ಲದೇ ಬೆಳೆದ ಇಂಥ ಮಂದಿಯೇ ಚುನಾವಣೆಗಳಲ್ಲಿ ಸ್ಪರ್ಧಿಸೋದು. ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುವ ಸಾಮರ್ಥ್ಯ  ಇದ್ದವರಿಗೆ ಮಾತ್ರ ನಮ್ಮ ರಾಜಕೀಯ ಕ್ಷೇತ್ರವು ಮೀಸಲಾಗಿರುವುದರಿಂದ ಶೀಲಾ ದೀಕ್ಷಿತ್‍ರ '4 ರೂಪಾಯಿಯ ಶ್ರೀಮಂತ' ಸ್ಪರ್ಧಿಸುವುದು ಬಿಡಿ, ಅಭ್ಯರ್ಥಿಯ ಕೈ ಕುಲುಕುವುದಕ್ಕೂ ಅನರ್ಹನಾಗಿರುತ್ತಾನೆ.
  ರಾಜಕಾರಣಿ, ಇಂಜಿನಿಯರ್, ಡಾಕ್ಟರ್ ಏನೇ ಆಗಿದ್ದರೂ ಮನುಷ್ಯ ಎಂಬ ನೆಲೆಯಲ್ಲಿ ಕೆಲವು ಮೂಲಭೂತ ಗುಣಗಳು ನಮ್ಮಲ್ಲಿ ಇದ್ದೇ ಇರುತ್ತವೆ. ಬಡತನವನ್ನು ರೋಗ ಎಂದು ಚಿತ್ರಿಸಿ ಯಾರೂ ನಾಟಕ ರಚಿಸುವುದಿಲ್ಲ. ರೋಗಿಗಳನ್ನು 'ಪೀಡೆ' ಎಂದು ಬಿಂಬಿಸಿ ಯಾರೂ ಸಿನಿಮಾ ಮಾಡುವುದಿಲ್ಲ. ವೃದ್ಧರನ್ನು ದ್ವೇಷಿಸುವ, ಭ್ರಷ್ಟಾಚಾರವನ್ನು ಪ್ರೀತಿಸುವ, ಸಿನಿಮಾ, ಕಾದಂಬರಿಗಳೆಲ್ಲ ರಚನೆ ಆಗುವುದೂ ಇಲ್ಲ. ಭ್ರಷ್ಟಾಚಾರದಿಂದ ಕೋಟಿಗಟ್ಟಲೆ ದುಡ್ಡು ಮಾಡಿದವ ಕೂಡ ವೇದಿಕೆಯೇರಿ ಮಾತಾಡುವ ಪ್ರಸಂಗ ಎದುರಾದರೆ ಭ್ರಷ್ಟಾಚಾರದ ವಿರುದ್ಧವೇ ಮಾತಾಡುತ್ತಾನೆ. ರೋಗಿಯನ್ನು ಸುಲಿಯುವುದೇ ವೈದ್ಯ ಧರ್ಮ ಅಂತ ತಿಳಿದ ವೈದ್ಯನೂ ಮಾತಾಡುವಾಗ ಸುಲಿಗೆ ಧರ್ಮಕ್ಕೆ ವಿರುದ್ಧವಾಗಿಯೇ ಮಾತಾಡುತ್ತಾನೆ. ಯಾಕೆ ಹೀಗೆ ಅಂದರೆ, ಮನುಷ್ಯನ ಪ್ರಕೃತಿಯೇ ಹಾಗೆ. ಸುಳ್ಳು, ವಂಚನೆ, ವ್ಯಂಗ್ಯ, ಬೂಟಾಟಿಕೆಗಳನ್ನೆಲ್ಲ 'ಅಮೌಲ್ಯ'ದ ಪಟ್ಟಿಯಲ್ಲಿಡುವಂತೆ ಪ್ರಕೃತಿಯೇ ಆತನಿಗೆ ಕಲಿಸಿರುತ್ತದೆ. ಆದರೂ ಕೆಲವೊಮ್ಮೆ ರಾಜಕಾರಣಿಗಳ ವರ್ತನೆ ನೋಡಿದರೆ, ಅವರು ಪ್ರಕೃತಿ ಕಲಿಸುವ ಈ ಮೊಲಭೂತ ಪಾಠಗಳಿಂದಲೂ ತಪ್ಪಿಸಿಕೊಂಡಿರಬಹುದೇ ಎಂಬ ಅನುಮಾನ ಮೂಡುತ್ತದೆ. ಹುತಾತ್ಮ ಯೋಧರಿಗಾಗಿ ಸಿದ್ಧಪಡಿಸಲಾದ ಶವ ಮಂಚದಿಂದಲೂ ಅವರು ದುಡ್ಡು ಕಸಿಯುತ್ತಾರೆ. ವರ್ಷಂಪ್ರತಿ ತಮ್ಮ ಭತ್ತೆ, ಸಂಬಳಗಳನ್ನು ತಾವೇ ಏರಿಸಿಕೊಳ್ಳುತ್ತಾರೆ. ಮೊರು ಹೊತ್ತಿನ ಊಟಕ್ಕೂ ಗತಿಯಿಲ್ಲದೇ ಬಡತನ ರೇಖೆಗಿಂತ ಕೆಳಗೆ ಎಂಬ ಪಟ್ಟಿಯಲ್ಲಿ ಗುರುತಿಸಿಕೊಂಡಿರುವವರನ್ನು 4 ರೂಪಾಯಿಯ ಸಿದ್ಧಾಂತ ಮಂಡಿಸಿ ಬಡವರಲ್ಲ ಅಂದುಬಿಡುತ್ತಾರೆ.. ಇಂಥ ವೈರುಧ್ಯಗಳು ನೂರಾರು ಇವೆ. ದುರಂತ ಏನೆಂದರೆ, ಹೆಣ್ಣು ಗಂಡು ಮಾತಾಡಿದ ನೆಪದಲ್ಲಿ, ದನ ಸಾಗಾಟದ ನೆಪದಲ್ಲಿ ಅಥವಾ ಇಂಥ ಇನ್ನೇನೋ ಜನಪ್ರಿಯ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ, ಘೋಷಣೆಗಳನ್ನು ಹಮ್ಮಿಕೊಳ್ಳುವವರೆಲ್ಲ  ಬಡವರ ಇಂಥ ವಿಷಯಗಳ ಬಗ್ಗೆ  ಮಾತೇ ಆಡುವುದಿಲ್ಲ ಅನ್ನುವುದು. ಅಹ್ಲುವಾಲಿಯಾರ 26 ರೂಪಾಯಿ ಅಥವಾ ದೀಕ್ಷಿತ್‍ರ 4 ರೂಪಾಯಿ ಸಿದ್ಧಾಂತವನ್ನು ಖಂಡಿಸಿ ನಮ್ಮಲ್ಲಿ ಎಷ್ಟು ಪ್ರತಿಭಟನೆಗಳಾಗಿವೆ? ಜಿಲ್ಲಾಧಿಕಾರಿಗಳಿಗೆ, ರಾಜ್ಯಪಾಲರಿಗೆಲ್ಲ ಎಷ್ಟು ಮಂದಿ ಮನವಿ ಸಲ್ಲಿಸಿದ್ದಾರೆ? ಸಂಸ್ಕೃತಿ ಅಂದರೆ ದನ ಒಂದೇ ಅಲ್ಲವಲ್ಲ. ಬಡವರೂ ಸಂಸ್ಕೃತಿಯ ಭಾಗವೇ ಅಲ್ಲವೇ? ಆದರೆ ಸಂಸ್ಕೃತಿಯ ಹೆಸರಲ್ಲಿ ಬಡವರನ್ನು ಮತ್ತು ಮಧ್ಯಮ ವರ್ಗವನ್ನು ಪ್ರತಿ ಪ್ರತಿಭಟನೆಗಳಲ್ಲೂ ಬಳಸಿಕೊಳ್ಳುವ ಮಂದಿಯೇ ಬಡವರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಒಂದೇ ಒಂದು ಪ್ರತಿಭಟನೆಯನ್ನೂ ಆಯೋಜಿಸುವುದಿಲ್ಲವಲ್ಲ, ಯಾಕೆ? ರಾಜಕಾರಣಿಗಳಂತೆಯೇ ಈ ವರ್ಗವೂ ಬಡವರ ವಿರೋಧಿಯಾಗಿ ಮಾರ್ಪಟ್ಟಿವೆ ಅನ್ನುವುದಕ್ಕೆ ಇದು ಪುರಾವೆಯಲ್ಲವೇ?
  4 ರೂಪಾಯಿಯ ಸಿದ್ಧಾಂತವನ್ನು ಶೀಲಾ ದೀಕ್ಷಿತ್ ಮಂಡಿಸುವಾಗ ಅವರ ಪಕ್ಕವೇ ಸೋನಿಯಾ ಗಾಂಧಿಯೂ ಇದ್ದರು. ಆದ್ದರಿಂದ ಇದನ್ನು  ಕಾಂಗ್ರೆಸ್ ಪಕ್ಷದ ನಿಲುವು ಎಂದೇ  ಹೇಳಬೇಕಾಗುತ್ತದೆ. ಹೀಗಿರುವಾಗ, ಇಂಥ ಪಕ್ಷ  ಬಡವರಿಂದ ಅಗ್ಗದ ಸಿಲಿಂಡರು, ಡೀಸೆಲ್ಲು, ಸೀಮೆ ಎಣ್ಣೆಯನ್ನು ಕಸಿದುಕೊಂಡದ್ದರಲ್ಲಿ ಅಚ್ಚರಿಯಾದರೂ ಏನಿದೆ? ಅಂದಹಾಗೆ, ಜನಪ್ರಿಯ ವಿಷಯಗಳ ಸುತ್ತ ಪ್ರತಿಭಟನೆಗಳನ್ನು  ಆಯೋಚಿಸುವವರೆಲ್ಲ ಇಂಥ ರಾಜಕೀಯದ ವಿರುದ್ಧ ಜನಜಾಗೃತಿ ಮೊಡಿಸದಿದ್ದರೆ ಭವಿಷ್ಯದಲ್ಲಿ, 'ಬಡತನ' ಎಂಬ ಪದವನ್ನೇ ರಾಜಕಾರಣಿಗಳು  ನಾಪತ್ತೆ ಮಾಡಿಯಾರು.

No comments:

Post a Comment