Tuesday 20 June 2023

ಸೌಜನ್ಯ ಪ್ರಕರಣ: ಸಂತೋಷ್ ಅಲ್ಲದಿದ್ದರೆ ಇನ್ನಾರು?


 

2012 ಅಕ್ಟೋಬರ್ 10ರಂದು ಶವವಾಗಿ ಪತ್ತೆಯಾದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ ಪ್ರಕರಣದ ತೀರ್ಪು ಹೊರಬಿದ್ದಿದೆ. ಪ್ರಕರಣ ನಡೆದು 11 ವರ್ಷಗಳ ಬಳಿಕ ಹೊರಬಿದ್ದ ಈ ತೀರ್ಪನ್ನು ಸೌಜನ್ಯ ಕುಟುಂಬ ಸ್ವಾಗತಿಸಿದೆ. ಅಚ್ಚರಿ ಏನೆಂದರೆ, ಈ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಏಕೈಕ ಆರೋಪಿಯಾಗಿ 10 ವರ್ಷಗಳ ಕಾಲ ಜೈಲಲ್ಲಿದ್ದ ಸಂತೋಷ್ ರಾವ್ ಎಂಬವರನ್ನು ಸಿಬಿಐ ನ್ಯಾಯಾಲಯ ಖುಲಾಸೆಗೊಳಿಸಿದುದಕ್ಕೆ ಈ ಕುಟುಂಬದಿಂದ ಯಾವ ಆಕ್ಷೇಪವೇ ವ್ಯಕ್ತವಾಗಿಲ್ಲ. ಮಾತ್ರವಲ್ಲ, ಆತನ ಬಂಧನವನ್ನೇ ಈ ಕುಟುಂಬ ವಿರೋಧಿಸುತ್ತಾ ಬಂದಿತ್ತು. ಸೌಜನ್ಯಳನ್ನು ಹತ್ಯೆ ಮಾಡಿದವ ಈತನಲ್ಲ ಮತ್ತು ನಿಜ ಅಪರಾಧಿಗಳನ್ನು ರಕ್ಷಿಸುವುದಕ್ಕಾಗಿ ಈ ಬಡಪಾಯಿಯನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಈ ಕುಟುಂಬ ವಾದಿಸುತ್ತಲೇ ಬಂದಿತ್ತು. ಇದೀಗ ಸಿಬಿಐ ಕೂಡ ಸಂತೋಷ್ ರಾವ್‌ರನ್ನು ಆರೋಪ ಮುಕ್ತಗೊಳಿಸಿರುವುದರಿಂದ ಸೌಜನ್ಯಳನ್ನು ಕೊಂದವರಾರು ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.

2012 ಅಕ್ಟೋಬರ್ 9ರಂದು ಸಂಜೆ ಕಾಲೇಜಿನಿಂದ ಸೌಜನ್ಯ ಮನೆಗೆ ಬರದೇ ಇದ್ದಾಗ ಆಕೆಗಾಗಿ ಊರಿಗೆ ಊರೇ ಹುಡುಕಾಡಿತ್ತು. ಸುಮಾರು 2000 ಮಂದಿ ಮಧ್ಯರಾತ್ರಿ 2 ಗಂಟೆಯವರೆಗೆ ಈ ಹುಡುಕಾಟದಲ್ಲಿ ಭಾಗಿಯಾಗಿದ್ದರು. ಅಲ್ಲದೇ ಮಳೆಯೂ ಸುರಿಯುತ್ತಿತ್ತು. ಸೌಜನ್ಯಳ ಮಾಹಿತಿ ಸಿಗದೇ ನಿರಾಶರಾಗಿ ಮರಳಿದ ಕುಟುಂಬಕ್ಕೆ ಮರುದಿನ ಬೆಳಿಗ್ಗೆ ಆಘಾತಕಾರಿ ಸುದ್ದಿ ಸಿಕ್ಕಿತ್ತು. ಮೊದಲ ದಿನ ಮಧ್ಯರಾತ್ರಿವರೆಗೆ ಅವರೆಲ್ಲ ಎಲ್ಲಿ ಹುಡುಕಾಡಿದ್ದರೋ ಅದೇ ಸ್ಥಳದಲ್ಲಿ ಸೌಜನ್ಯ ಶವವಾಗಿ ಮಲಗಿದ್ದಳು. ಆಕೆಯ ಕೈ ಕಟ್ಟಿದ ಸ್ಥಿತಿಯಲ್ಲಿತ್ತು. ದೇಹದಲ್ಲಿ ಹಿಂಸೆಯ ಕುರುಹುಗಳಿದ್ದುವು. ವಿಚಿತ್ರ ಏನೆಂದರೆ, ಆಕೆಯ ಬಟ್ಟೆಯಾಗಲಿ ಬ್ಯಾಗ್ ಆಗಲಿ ಅಥವಾ ಬ್ಯಾಗಿನೊಳಗಿದ್ದ ಪುಸ್ತಕಗಳಾಗಲಿ ಒದ್ದೆಯಾಗಿರಲಿಲ್ಲ. ಆದ್ದರಿಂದ ಇದು ಅಪಹರಣ, ಅತ್ಯಾಚಾರ ಮತ್ತು ಹತ್ಯೆ ಪ್ರಕರಣವೆಂದು ಊರಿಗೆ ಊರೇ ಅಭಿಪ್ರಾಯಪಟ್ಟಿತ್ತು. ಆದ್ದರಿಂದ ಈ ಕೃತ್ಯದಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಭಾಗಿಯಾಗಿದ್ದಾರೆ ಎಂಬ ಅನುಮಾನ ಎಲ್ಲರಲ್ಲಿತ್ತು. ಆದರೆ ದಿನಗಳ ಬಳಿಕ ಸಂತೋಷ್ ರಾವ್ ಎಂಬಾತನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆಗಲೇ ಈ ಸೌಜನ್ಯ ಕುಟುಂಬ ಆತ ನಿರಪರಾಧಿ ಎಂದು ಹೇಳಿತ್ತು. ಹಾಗೆಯೇ, 2017ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಬಿ.ಎಸ್. ರೇಖಾ ಅವರು ಸಿಬಿಐ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೇ,

‘ಪೊಲೀಸರು ಸೌಜನ್ಯಳ ರಕ್ತದ ಮಾದರಿ ಮತ್ತು ಆರೋಪಿಯ ಬಟ್ಟೆಯ ಸಾಕ್ಷ್ಯ ಮಾದರಿಯನ್ನು ಸಂಗ್ರಹಿಸಲು ವಿಫಲರಾಗಿದ್ದಾರೆ’ ಎಂದು ಡಿಎನ್‌ಎ ತಜ್ಞ ಡಾ| ವಿನೋದ್ ಜೆ. ಲಕ್ಕಪ್ಪ ವಿಚಾರಣೆಯ ವೇಳೆ ಹೇಳಿದ್ದರು. ಸಿಬಿಐ ಅಧಿಕಾರಿಗಳು ತನಿಖೆಯ ವಿಷಯದಲ್ಲಿ ಗಂಭೀರವಾಗಿಲ್ಲ ಎಂಬ ರೀತಿಯಲ್ಲಿ ನ್ಯಾಯಾಧೀಶೆ ಅಂದು ಅಸಮಾಧಾನ ವ್ಯಕ್ತಪಡಿಸಿದ್ದರು. ನಿಜವಾಗಿ,

ಉತ್ತರ ಪ್ರದೇಶದ ಹತ್ರಾಸ್‌ನಂತೆ ಸೌಜನ್ಯ ಪ್ರಕರಣ ಕೂಡ ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿತ್ತು. ಸರಣಿ ಹೋರಾಟಗಳು ನಡೆದಿದ್ದವು. ಕೇಮಾರು ಶ್ರೀ ಈಶವಿಠಲ ಸ್ವಾಮೀಜಿಯೇ ಈ ಹೋರಾಟದ ಮುಂಚೂಣಿಯಲ್ಲಿದ್ದರು. ಸೌಜನ್ಯಳ ತಾಯಿ ಕುಸುಮಾವತಿ ಮತ್ತು ತಂದೆ ಚಂದಪ್ಪ ಗೌಡ ಪ್ರತೀ ಹೋರಾಟ-ಧರಣಿ-ಹಕ್ಕೊತ್ತಾಯದಲ್ಲೂ ಭಾಗಿಯಾಗಿದ್ದರು. ಈ ಹೋರಾಟದ ಮುಂಚೂಣಿಯಲ್ಲಿದ್ದ ಯಾರಿಗೂ ಸಂತೋಷ್ ರಾವ್‌ನ ಮೇಲೆ ಅನುಮಾನ ಇರಲಿಲ್ಲ. ಆತನನ್ನು ಸಿಲುಕಿಸಲಾಗಿದೆ ಎಂದೇ ಅವರು ಹೇಳುತ್ತಿದ್ದರು. ಆತ ಮಾನಸಿಕ ಅಸ್ವಸ್ಥ ಎಂಬ ಅಭಿಪ್ರಾಯವೂ ಊರವರದ್ದಾಗಿತ್ತು. ಒಂದಕ್ಕಿಂತ ಹೆಚ್ಚು ಮಂದಿ ಸೇರಿಕೊಂಡು ಮಾಡಿರುವ ಕೃತ್ಯ ಎಂಬುದು ಆಕೆಯ ಒದ್ದೆಯಾಗದ ಬಟ್ಟೆ, ಶಾಲಾ ಬ್ಯಾಗು, ಪುಸ್ತಕಗಳು ಹೇಳುತ್ತಿವೆಯಾದರೂ ಸಂತೋಷ್ ರಾವ್‌ನನ್ನು ಮಾತ್ರ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ತನಿಖೆ ನಡೆಸಲು ಕಾರಣವೇನು ಎಂಬ ಪ್ರಶ್ನೆಯನ್ನು 2012ರಿಂದ ಇಂದಿನವರೆಗೆ ಸೌಜನ್ಯ ಕುಟುಂಬ ಮತ್ತು ಹೋರಾಟಗಾರರು ಪ್ರಶ್ನಿಸುತ್ತಾ ಬಂದಿದ್ದಾರೆ. ಇದೀಗ ಅನುಮಾನ ನಿಜವಾಗಿದೆ. ಸಂತೋಷ್ ರಾವ್‌ನನ್ನು 10 ವರ್ಷ ಜೈಲಲ್ಲಿಟ್ಟ ಇದೇ ನ್ಯಾಯಾಲಯ ಆತ ನಿರ್ದೋಷಿ ಎಂದು ಹೇಳಿ ಕೈ ತೊಳೆದುಕೊಂಡಿದೆ. ಹಾಗಿದ್ದರೆ, ಸಂತೋಷ್ ರಾವ್‌ಗೆ ಕಳೆದು ಹೋದ 10 ವರ್ಷವನ್ನು ಮರಳಿಸುವವರು ಯಾರು ಎಂಬ ಪ್ರಶ್ನೆಯ ಜೊತೆಗೇ ಸೌಜನ್ಯಳನ್ನು ಹತ್ಯೆಗೈದವರು ಯಾರು ಎಂಬ ಪ್ರಶ್ನೆಯೂ ಮುನ್ನೆಲೆಗೆ ಬಂದಿದೆ.

ಸೌಜನ್ಯ ಕುಟುಂಬ 2023 ಜನವರಿಯಲ್ಲಿ ಹೊಸ ಮನೆಯನ್ನು ನಿರ್ಮಿಸಿತ್ತು. ಮನೆಯ ಹೆಸರೇ ಸೌಜನ್ಯ. ಸೌಜನ್ಯ ಸಮಾಧಿಯಾದ ಸ್ಥಳದಲ್ಲೇ ಈ ಕುಟುಂಬ ಒಂದು ಗಿಡವನ್ನೂ ನೆಟ್ಟಿದೆ. ಅದೀಗ ಮರವಾಗಿದೆ. ಸೌಜನ್ಯಳನ್ನು ಸ್ಮರಿಸದ ಒಂದೇ ಒಂದು ದಿನ ನಮ್ಮ ಮನೆಯಲ್ಲಿಲ್ಲ ಎಂದು ತಾಯಿ ಹೇಳುತ್ತಾರೆ. ಸೌಜನ್ಯ ಕಾಣೆಯಾದ 2012 ಅಕ್ಟೋಬರ್ 9ರಂದು ಬೆಳಿಗ್ಗೆ ನಾನು ಅಡುಗೆಕೋಣೆಯಲ್ಲಿದ್ದೆ. ಕಾಲೇಜಿಗೆ ಹೊರಟು ಹೋಗುವಾಗ ಮಗಳಿಗೆ ಜಾಗ್ರತೆ ಎಂದು ಹೇಳುವುದಕ್ಕೂ ನನಗಾಗಿರಲಿಲ್ಲ… ಎಂದು ಆ ತಾಯಿ ಈ 11 ವರ್ಷಗಳ ಬಳಿಕವೂ ದುಃಖಿಸುತ್ತಾರೆ. ಸೌಜನ್ಯ ಹುಟ್ಟಿದ ದಿನವಾದ ಅಕ್ಟೋಬರ್ 18ರಂದು ಆಕೆಯ ಸಮಾಧಿ ಬಳಿ ಭಜನೆ ಮಾಡಲಾಗಿದೆ… ಒಂದು ರೀತಿಯಲ್ಲಿ,

ಮಕ್ಕಳು ಮತ್ತು ಹೆತ್ತವರ ನಡುವಿನ ಸಂಬಂಧದ ಆಳ ಇದು. ಹೆಣ್ಣು ಮಗಳೊಬ್ಬಳು ಅತ್ಯಾಚಾರಕ್ಕೊಳಗಾಗಿ ಕ್ರೂರವಾಗಿ ಹತ್ಯೆಗೀಡಾದುದನ್ನು ಸಮಾಜ ನಿಧಾನಕ್ಕೆ ಮರೆಯಬಹುದು. ಆದರೆ, ಹೆತ್ತವರು ಮರೆಯಲಾರರು. ಅಷ್ಟಕ್ಕೂ, ಸೌಜನ್ಯ ಎಂದಲ್ಲ, 2020ರಲ್ಲಿ ನಡೆದ ಹತ್ರಾಸ್ ಪ್ರಕರಣವನ್ನೂ ಪ್ರಭುತ್ವ ದಿಕ್ಕು ತಪ್ಪಿಸಲು ಶತಾಯ ಗತಾಯ ಯತ್ನಿಸಿತ್ತು. ಆ ಹೆಣ್ಣು ಮಗಳ ಶವವನ್ನು ರಾತೋರಾತ್ರಿ ಕದ್ದು ಮುಚ್ಚಿ ದಹಿಸಲಾಗಿತ್ತು. ಕುಟುಂಬವನ್ನು ಅಕ್ಷರಶಃ ಹೊರಜಗತ್ತಿನಿಂದ ಬೇರ್ಪಡಿಸಿ ಇಡಲಾಗಿತ್ತು. ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಕುಟುಂಬದ ಮೇಲೆ ಅಧಿಕಾರಿಗಳೇ ಒತ್ತಡ ಹೇರಿದುದನ್ನು ಸೋರಿಕೆಯಾದ ವೀಡಿಯೋಗಳೇ ಬಹಿರಂಗಪಡಿಸಿದ್ದುವು. ಇದಕ್ಕೆ ಕಾರಣ- ಆರೋಪಿಗಳೆಲ್ಲ ಮೇಲ್ಜಾತಿ ಯುವಕರು. ಅತ್ಯಾಚಾರಕ್ಕೀಡಾಗಿ ಸಾವನ್ನಪ್ಪಿದ ಯುವತಿ ದಲಿತ ಸಮುದಾಯದವಳು. ಪ್ರಕರಣ ದಾಖಲಿಸಿದುದಕ್ಕಾಗಿ ಆ ದಲಿತ ಕುಟುಂಬಕ್ಕೆ ಮೇಲ್ಜಾತಿ ಸಮುದಾಯ ಬಹಿಷ್ಕಾರ ವನ್ನು ಹೇರಿತ್ತು. ಪೊಲೀಸ್ ತನಿಖೆಯ ವಿಷಯದಲ್ಲೂ ಸಾಕಷ್ಟು ಆರೋಪಗಳಿದ್ದುವು. ಎಫ್‌ಐಆರ್ ದಾಖಲಿಸುವಲ್ಲೂ ವಿಳಂಬವಾಗಿತ್ತು. ಅಂತಿಮವಾಗಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ ದರು. ಇವರಲ್ಲಿ ಮೂವರನ್ನು 2023ರಲ್ಲಿ ಕೋರ್ಟು ಖುಲಾಸೆಗೊಳಿಸಿ ಸಂದೀಪ್ ಸಿಸೋಡಿಯಾ ಎಂಬ ಓರ್ವನನ್ನು ಮಾತ್ರ ಅಪರಾಧಿ ಎಂದು ಘೋಷಿಸಿದೆ.

ಅತ್ಯಾಚಾರ ಎಂಬುದು ಕಳ್ಳತನ, ದರೋಡೆ, ಭ್ರಷ್ಟಾಚಾರದಂಥಲ್ಲ. ಅದರಲ್ಲಿ ಪುರುಷ ಅಹಂಕಾರ ಮಾತ್ರ ಇರುವುದಲ್ಲ, ಸಮಾಜ ನೈತಿಕವಾಗಿ ಎಷ್ಟು ಪತನಗೊಂಡಿದೆ ಎಂಬುದರ ಸೂಚನೆಯೂ ಇರುತ್ತದೆ. ಅತ್ಯಾಚಾರಗೈದವ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಬಲಾಢ್ಯನಾಗಿದ್ದರೆ ಕಾನೂನಿನ ಬಲೆಯೊಳಗೆ ಸಿಲುಕದಂತೆ ರಕ್ಷಿಸಿಕೊಳ್ಳುವುದಕ್ಕೆ ಆತನಿಗೆ ನೂರು ದಾರಿಗಳಿವೆ. ದುಬಾರಿ ಶುಲ್ಕ ತೆತ್ತು ನ್ಯಾಯವಾದಿಯನ್ನು ನೇಮಿಸಿಕೊಳ್ಳುವಲ್ಲಿಂದ ಹಿಡಿದು ಪೊಲೀಸರನ್ನು ಬಳಸಿಕೊಂಡು ತನಿಖೆ ಯನ್ನೇ ದಿಕ್ಕು ತಪ್ಪಿಸುವ ಮತ್ತು ಸಾಕ್ಷ್ಯವನ್ನೇ ನಾಶ ಮಾಡುವಲ್ಲಿ ವರೆಗೆ ಸಕಲ ಅವಕಾಶಗಳೂ ಆತನಿಗಾಗಿ ತೆರೆದಿರುತ್ತವೆ. ಇದಕ್ಕೆ ತಾಜಾ ಪುರಾವೆ ಬೇಕೆಂದರೆ, ದೆಹಲಿಯಲ್ಲಿ ನಡೆಯುತ್ತಿದ್ದ ಕುಸ್ತಿಪಟು ಗಳ ಪ್ರತಿಭಟನೆಯನ್ನು ಎತ್ತಿಕೊಳ್ಳಬಹುದು. ಪೋಕ್ಸೋ ಪ್ರಕರಣ ದಾಖಲಿಸಿದರೂ ಆರೋಪಿಯನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. 7 ಮಂದಿ ಕುಸ್ತಿ ತಾರೆಗಳು ಲೈಂಗಿಕ ಕಿರುಕುಳದ ಆರೋಪ ಹೊರಿಸಿಯೂ ಆರೋಪಿಯ ಕೂದಲೂ ಕೊಂಕಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪೋಕ್ಸೋ ಪ್ರಕರಣವನ್ನೇ ಹಿಂಪಡೆದು ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದರು. ಒಂದುವೇಳೆ, ಓರ್ವ ಬಡಪಾಯಿ ಆರೋಪಿಯಾಗಿರುತ್ತಿದ್ದರೆ? ಪೋಕ್ಸೋ ಪ್ರಕರಣ ದಾಖಲಾದ ಕ್ಷಣದಲ್ಲೇ ಆತನನ್ನು ಕೈಕೋಲ ತೊಡಿಸಿ ಮುಖಕ್ಕೆ ಕಪ್ಪು ಬಟ್ಟೆ ತೊಡಿಸಿ ಜೈಲಿಗೆ ಹಾಕಲಾಗುತ್ತಿತ್ತು. ಅಂದಹಾಗೆ,

ಈ ರೀತಿಯ ಆಕ್ರೋಶವೇ ಸೌಜನ್ಯ ಹೆತ್ತವರಲ್ಲೂ ಇದೆ. ಸೌಜನ್ಯ ಇಲ್ಲ ಎಂಬುದಕ್ಕಿಂತ ಆಕೆಯನ್ನು ಅತ್ಯಂತ ಕ್ರೂರವಾಗಿ ತಮ್ಮಿಂದ ಕಸಿದುಕೊಳ್ಳಲಾಗಿದೆ ಎಂಬ ನೋವು ಅವರನ್ನು ಇಂಚಿಂಚೂ ಕಾಡುತ್ತಿದೆ. ಸೌಜನ್ಯಳನ್ನು ಸ್ಮರಿಸಿಕೊಳ್ಳುವಾಗ 2012ರಲ್ಲಿ ಅವರು ಹೇಗೆ ಭಾವುಕರಾಗುತ್ತಿದ್ದರೋ ಈ 11 ವರ್ಷಗಳ ಬಳಿಕವೂ ಅದೇ ಭಾವದಲ್ಲಿದ್ದಾರೆ. 2012ರಲ್ಲಿ ಅವರು ಯಾರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರೋ ಈಗಲೂ ಅದೇ ಅನುಮಾನವನ್ನು ಪುನರಾವರ್ತಿಸುತ್ತಿದ್ದಾರೆ. ಆದ್ದರಿಂದ ಸೌಜನ್ಯ ಪ್ರಕರಣದ ಮರು ತನಿಖೆಯಾಗಬೇಕು. ಸಂತೋಷ್ ರಾವ್ ಅಲ್ಲದಿದ್ದರೆ ಇನ್ನಾರು ಎಂದು ಪ್ರಶ್ನಿಸುವ ಹಕ್ಕು ಆಕೆಯ ಕುಟುಂಬಕ್ಕಿದೆ. ಸರಕಾರ ಉತ್ತರಿಸಲಿ.

No comments:

Post a Comment