Tuesday 20 June 2023

ಇಮ್ರಾನ್ ಖೇಡಾವಾಲಾ ಮುನ್ನೆಲೆಗೆ ತಂದ ಮುಸ್ಲಿಮ್ ಮೀಸಲಾತಿ ಚರ್ಚೆ

16-12-2022

 ಗುಜರಾತ್ ವಿಧಾನ ಸಭೆಯ 182 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಇಮ್ರಾನ್ ಖೇಡಾ ವಾಲಾ ಎಂಬ ಏಕೈಕ ಮುಸ್ಲಿಮ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಕಳೆದ ವಿಧಾನಸಭೆಯಲ್ಲಿ ಮೂವರು ಮುಸ್ಲಿಮ್ ಶಾಸಕರಿದ್ದರು. ಮೂವರೂ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಈ ಬಾರಿ ಈ ಮೂವರು ಶಾಸಕರೂ ಸೇರಿದಂತೆ ಆರು ಮಂದಿ ಮುಸ್ಲಿಮ್ ಅಭ್ಯರ್ಥಿಗಳನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಇವರಲ್ಲಿ ಇಮ್ರಾನ್ ಖೇಡಾವಾಲಾ ಮಾತ್ರ ಆಯ್ಕೆಯಾಗಿದ್ದಾರೆ. ವಿಶೇಷ ಏನೆಂದರೆ,

ಗುಜರಾತ್‌ನಲ್ಲಿ ಮುಸ್ಲಿಮ್ ಬಾಹುಳ್ಯದ 17 ಕ್ಷೇತ್ರಗಳಿವೆ. ಶಾಸಕ ಯಾರಾಗಬೇಕೆಂಬುದನ್ನು ನಿರ್ಧರಿಸುವಷ್ಟು ಸಾಮರ್ಥ್ಯ ಈ ಕ್ಷೇತ್ರಗಳ ಮುಸ್ಲಿಮರಿಗಿದೆ. ಈ 17 ಕ್ಷೇತ್ರಗಳೂ ಸೇರಿದಂತೆ ಗುಜರಾತ್‌ನ ವಿಧಾನಸಭೆಯ ಒಟ್ಟು 182 ಕ್ಷೇತ್ರಗಳ ಪೈಕಿ ಒಂದೇ ಒಂದು ಕ್ಷೇತ್ರದಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಿಲ್ಲ. 2011ರ ಜನಗಣತಿ ಪ್ರಕಾರ, ಗುಜರಾತ್‌ನಲ್ಲಿ 10% ಮುಸ್ಲಿಮರಿದ್ದಾರೆ. ಸುಮಾರು 59 ಲಕ್ಷ ಮಂದಿ. ಕಳೆದ 11 ವರ್ಷಗಳಲ್ಲಿ ಈ ಸಂಖ್ಯೆಯಲ್ಲಿ ಏನಿಲ್ಲವೆಂದರೂ ಎರಡರಿಂದ ಮೂರು ಶೇಕಡಾ ಹೆಚ್ಚಾಗಿರಬಹುದು. ಇಷ್ಟೊಂದು ಬೃಹತ್ ಸಂಖ್ಯೆಯ ಸಮುದಾಯವನ್ನು ಬಿಜೆಪಿ ಸಾರಾಸಗಟಾಗಿ ತಿರಸ್ಕರಿಸಿ ಚುನಾವಣೆಯನ್ನು ಎದುರಿಸಿತ್ತು. ಅಲ್ಲದೇ, ‘ಗಲಭೆಕೋರರಿಗೆ ನಾವು 2002ರಲ್ಲಿ ಪಾಠ ಕಲಿಸಿದ್ದೇವೆ’ ಎಂದು ಚುನಾವಣಾ ಪ್ರಚಾರದ ವೇಳೆ ಗೃಹಸಚಿವ ಅಮಿತ್ ಶಾ ಹೇಳಿದ್ದರು. ಇದರ ಹೊರತಾಗಿಯೂ ಮುಸ್ಲಿಮ್ ಬಾಹುಳ್ಯದ 17 ಕ್ಷೇತ್ರಗಳ ಪೈಕಿ 12ರಲ್ಲಿ ಬಿಜೆಪಿ ಜಯ ಗಳಿಸಿದೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಹೊರತಾಗಿ ಕೇಜ್ರಿವಾಲ್ ಪಕ್ಷ 16 ಕಡೆ ಸ್ಪರ್ಧಿಸಿತ್ತು ಮತ್ತು 13 ಕ್ಷೇತ್ರಗಳಲ್ಲಿ ಓವೈಸಿ ಪಕ್ಷ ಸ್ಪರ್ಧಿಸಿತ್ತು. ಅಷ್ಟಕ್ಕೂ,

182 ಸ್ಥಾನಗಳ ವಿಧಾನಸಭೆಯಲ್ಲಿ ಏಕೈಕ ಮುಸ್ಲಿಮ್ ಅಭ್ಯರ್ಥಿ ಇರುವುದನ್ನು ಹೇಗೆ ಪರಿಗಣಿಸ ಬಹುದು? ಸುಮಾರು 60 ಲಕ್ಷಕ್ಕಿಂತಲೂ ಅಧಿಕ ಇರುವ ಸಮುದಾಯದಲ್ಲಿ ಶಾಸಕರಾಗುವುದಕ್ಕೆ ಇಮ್ರಾನ್ ಖೇಡಾವಾಲಾರ ಹೊರತು ಇನ್ನಾರೂ ಅರ್ಹರಿಲ್ಲವೇ? 155ಕ್ಕಿಂತಲೂ ಅಧಿಕ ಸ್ಥಾನಗಳನ್ನು ಪಡೆದಿರುವ ಬಿಜೆಪಿಯಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಶಾಸಕ ಇಲ್ಲ. ಆಳುವ ಪಕ್ಷದಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಶಾಸಕ ಇಲ್ಲ ಎಂಬುದು ಕಾನೂನು ಪ್ರಕಾರ ತಪ್ಪಲ್ಲದೇ ಇರಬಹುದು. ಆದರೆ, ಪ್ರಜಾತಂತ್ರದ ನಿಜವಾದ ಉದ್ದೇಶಕ್ಕೆ ಇದು ಪೂರಕವೇ? ಕರ್ನಾಟಕ ವಿಧಾನಸಭೆಯಲ್ಲಿ ಸದ್ಯ 7 ಮಂದಿ ಮುಸ್ಲಿಮ್ ಶಾಸಕರಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಿಯೇ ಇರಲಿಲ್ಲ. ಮುಸ್ಲಿಮರಿಗೇ ಸಂಬಂಧಿಸಿದ ವಕ್ಫ್ ಮತ್ತು ಹಜ್ಜ್ ಖಾತೆಯನ್ನು ಈಗ ಶಶಿಕಲಾ ಜೊಲ್ಲೆ ನಿರ್ವಹಿಸುತ್ತಿದ್ದಾರೆ. ಒಂದುವೇಳೆ, ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಮುಜರಾಯಿ ಖಾತೆಯನ್ನು ಮುಸ್ಲಿಮ್ ಶಾಸಕನಿಗೆ ನೀಡಿರುತ್ತಿದ್ದರೆ ಬಿಜೆಪಿಯ ಪ್ರತಿಕ್ರಿಯೆ ಹೇಗಿರುತ್ತಿತ್ತು? ಸದ್ಯ,

ರಾಜ್ಯ ವಿಧಾನಸಭೆಯಲ್ಲಿ 7 ಮಂದಿ ಮುಸ್ಲಿಮ್ ಶಾಸಕರು ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಸೇರಿದವರಾಗಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಸಂಖ್ಯೆಯಲ್ಲೂ ಇಳಿಕೆಯಾಗುವ ಸಾಧ್ಯತೆಗಳೇ ಹೆಚ್ಚು. ಯಾಕೆಂದರೆ, ಬಿಜೆಪಿಯಂತೂ ಮುಸ್ಲಿಮರಿಗೆ ಟಿಕೆಟ್ ನೀಡುವ ಸಾಧ್ಯತೆ ಇಲ್ಲ. ಅಷ್ಟು ಮಾತ್ರವಲ್ಲ, ಮುಸ್ಲಿಮ್ ವಿರೋಧಿ ಪ್ರಚಾರವನ್ನೇ ಅದು ಮತಬೇಟೆಯ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಎಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ನಿಲ್ಲಿಸಲಾಗುತ್ತದೋ ಅಲ್ಲಿ ಮುಸ್ಲಿಮೇತರ ಮತಗಳ ಧ್ರುವೀಕರಣಕ್ಕೂ ಅದು ಮುಂದಾಗುತ್ತದೆ. ಅಲ್ಲದೇ, ದಿಢೀರ್ ಆಗಿ ಹಲವು ಪಕ್ಷೇತರ ಮುಸ್ಲಿಮ್ ಅಭ್ಯರ್ಥಿಗಳೂ ಕಣಕ್ಕಿಳಿಯುವುದೂ ನಡೆಯುತ್ತದೆ. ಈ ಮೂಲಕ ಮುಸ್ಲಿಮ್ ಮತಗಳ ವಿಭಜನೆಯೂ ನಡೆಯುತ್ತದೆ. ಜಿಗ್ನೇಶ್ ಮೇವಾನಿ ಸ್ಪರ್ಧಿಸಿದ್ದ ಗುಜರಾತ್‌ನ ಮಡ್‌ಗಾಂವ್ ಕ್ಷೇತ್ರದಲ್ಲಿ ಇಂಥದ್ದೇ ಬೆಳವಣಿಗೆ ನಡೆದಿತ್ತು. ಮುಸ್ಲಿಮರು ಸಾಕಷ್ಟು ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಓವೈಸಿ ಪಕ್ಷ ಮುಸ್ಲಿಮ್ ಅಭ್ಯರ್ಥಿಯನ್ನು ಕಳಕ್ಕಿಳಿಸಿತ್ತು. ಮಾತ್ರವಲ್ಲ, ‘ಮುಸ್ಲಿಮ್ ಅಭ್ಯರ್ಥಿಗೆ ಮತ ಹಾಕಿ ಒಗ್ಗಟ್ಟು ಪ್ರದರ್ಶಿಸುವಂತೆ’ ಮುಸ್ಲಿಮರನ್ನು ಪ್ರಚೋದಿಸುವ ಪ್ರಯತ್ನಗಳು ಬಿಜೆಪಿಯಿಂದಲೇ ನಡೆದಿತ್ತು ಎಂಬ ಮಾತುಗಳೂ ಇವೆ. ಇದೊಂದು ರಾಜಕೀಯ ತಂತ್ರ. ವಿರೋಧಿ ಮತಗಳನ್ನು ವಿಭಜಿಸಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಪ್ರಯತ್ನ. ಅಂದಹಾಗೆ,

ಮುಸ್ಲಿಮರಿಗೆ ಟಿಕೆಟ್ ನೀಡದೇ ಇರುವ ನೀತಿಯನ್ನು ಬಹಿರಂಗವಾಗಿಯೇ ಬಿಜೆಪಿ ಪಾಲಿಸುತ್ತಾ ಬರುತ್ತಿರುವುದು ಇತರ ಪಕ್ಷಗಳ ಪಾಲಿಗೂ ಸವಾಲಾಗಿ ಪರಿಣಮಿಸುವುದಕ್ಕೆ ಅವಕಾಶ ಇದೆ. ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ, ಆ ಕ್ಷೇತ್ರದ ಮುಸ್ಲಿಮೇತರ ಮತಗಳನ್ನು ಧ್ರುವೀಕರಿಸುವ ಕೃತ್ಯಕ್ಕೆ ಬಿಜೆಪಿ ಖಂಡಿತ ಇಳಿಯುತ್ತದೆ. ಮಾತ್ರವಲ್ಲ, ಮುಸ್ಲಿಮ್ ಮತಗಳ ವಿಭಜನೆಗೂ ಅದು ತಂತ್ರ ಹೆಣೆಯುತ್ತದೆ. ಇದರಿಂದಾಗಿ ಅಚ್ಚರಿಯ ಫಲಿತಾಂಶಗಳಿಗೆ ಅವಕಾಶ ತೆರೆದುಕೊಳ್ಳುತ್ತದೆ. ಗುಜರಾತ್‌ನ 17 ಮುಸ್ಲಿಮ್ ಬಾಹುಳ್ಯ ಕ್ಷೇತ್ರಗಳ ಪೈಕಿ 12ರಲ್ಲಿ ಬಿಜೆಪಿ ಗೆದ್ದಿರುವುದು ಇದಕ್ಕೆ ತಾಜಾ ಉದಾಹರಣೆ. ಆದ್ದರಿಂದ, ಬಿಜೆಪಿಯೇತರ ರಾಜಕೀಯ ಪಕ್ಷಗಳೂ ಮುಸ್ಲಿಮರನ್ನು ನಿಧಾನಕ್ಕೆ ನಿರ್ಲಕ್ಷಿಸುವ ಸಾಧ್ಯತೆಯೂ ಹೆಚ್ಚಲಿದೆ. ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ನೀಡುವ ರಾಜಕೀಯ ಪಕ್ಷವನ್ನು ‘ಮುಸ್ಲಿಮ್ ಓಲೈಕೆಯ’ ಪಟ್ಟಿಯಲ್ಲಿಟ್ಟು ಅಪಪ್ರಚಾರ ಮಾಡುವುದರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದಲೂ ಇಂಥ ನಿರ್ಲಕ್ಷ್ಯವನ್ನು ಮಾಡಬಹುದು. ಅಂತಿಮವಾಗಿ ಮುಸ್ಲಿಮರಿಲ್ಲದ ವಿಧಾನಸಭೆಯಾಗುವತ್ತ ಕರ್ನಾಟಕವೂ ಸಾಗಬಹುದು. ಇಂಥ ಸಾಧ್ಯತೆಯನ್ನು ತಡೆಯುವುದು ಹೇಗೆ? ಕರ್ನಾಟಕದಲ್ಲಿ ಒಂದು ಕೋಟಿಗಿಂತಲೂ ಅಧಿಕ ಮುಸ್ಲಿಮರಿದ್ದಾರೆ. ಆದರೆ, ರಾಜ್ಯವನ್ನಾಳುವ ಪಕ್ಷದಲ್ಲಿ ಮುಸ್ಲಿಮರಿಗೆ ಸ್ಥಾನವಿಲ್ಲ. ಆಡಳಿತ ಪಕ್ಷವೊಂದು ಮುಸ್ಲಿಮ್ ರಹಿತ ನೀತಿಯನ್ನು ಅಳವಡಿಸಿಕೊಳ್ಳುವುದೆಂದರೆ, ಅದು ಆಘಾತಕಾರಿ ಮತ್ತು ಅಪಾಯಕಾರಿ. ಸದ್ಯ,

ಈ ದೇಶದಲ್ಲಿ ದಲಿತರಿಗೆ ಮೀಸಲು ಕ್ಷೇತ್ರವಿದೆ. ಆದ್ದರಿಂದ ಯಾವ ರಾಜಕೀಯ ಪಕ್ಷಕ್ಕೂ ದಲಿತರನ್ನು ನಿರ್ಲಕ್ಷಿಸಿ ಚುನಾವಣೆಯನ್ನು ಎದುರಿಸಲು ಸಾಧ್ಯವಿಲ್ಲ. ಉಳಿದ ಕ್ಷೇತ್ರದಲ್ಲಿ ದಲಿತರಿಗೆ ಟಿಕೆಟ್ ನೀಡದಿದ್ದರೂ ಮೀಸಲು ಕ್ಷೇತ್ರದಲ್ಲಿ ನೀಡಲೇಬೇಕಾದ ಅನಿವಾರ್ಯತೆ ಎಲ್ಲ ಪಕ್ಷಗಳಿಗೂ ಇದೆ. ಅಪ್ಪಟ ದಲಿತ ವಿರೋಧಿ ರಾಜಕೀಯ ಪಕ್ಷವೂ ದಲಿತರಿಗೆ ಟಿಕೆಟ್ ನೀಡಲೇಬೇಕಾದ ವ್ಯವಸ್ಥೆಯೊಂದನ್ನು ಸಾಂವಿಧಾನಿಕವಾಗಿಯೇ ಒದಗಿಸಿಕೊಡಲಾಗಿದೆ. ಬಹುಶಃ, ಮುಂದಿನ ದಿನಗಳಲ್ಲಿ ಮುಸ್ಲಿಮರು ಮೀಸಲು ಕ್ಷೇತ್ರಕ್ಕೆ ಒತ್ತಾಯಿಸಬೇಕಾದ ಅಗತ್ಯ ಸೃಷ್ಟಿಯಾಗಿದೆ. ಅಲ್ಪಸಂಖ್ಯಾತ ಎಂಬ ಪರಿಧಿಯೊಳಗೆ ಕ್ರೈಸ್ತ, ಮುಸ್ಲಿಮ್, ಜೈನ, ಸಿಕ್ಖ ಮುಂತಾಗಿ ಎಲ್ಲರೂ ಒಳಗೊಳ್ಳುವುದರಿಂದ ಅಲ್ಲೂ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ಸಿಗುವ ಮತ್ತು ಸಿಕ್ಕರೂ ಗೆಲ್ಲುವ ಸಾಧ್ಯತೆಗಳು ಕಡಿಮೆ ಇವೆ. ಯಾಕೆಂದರೆ, ಮುಸ್ಲಿಮರಿಗೆ ಟಿಕೆಟ್ ಕೊಡುವುದಿಲ್ಲ ಎಂಬ ನೀತಿಯನ್ನು ಅಳವಡಿಸಿಕೊಂಡ ಪಕ್ಷವು ಅಲ್ಲೂ ಸಿಕ್ಖ್, ಜೈನ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದು ಮತ್ತು ಎಂದಿನ ಮತ ವಿಭಜನೆಯ ತಂತ್ರ ಹೆಣೆದು ಯಶಸ್ವಿಯಾಗಲೂ ಬಹುದು. ಆದ್ದರಿಂದ, ನಿರ್ದಿಷ್ಟವಾಗಿ ಮುಸ್ಲಿಮ್ ಮೀಸಲು ಕ್ಷೇತ್ರವನ್ನು ಸೃಷ್ಟಿ ಮಾಡಿ, ನಿರ್ದಿಷ್ಟ ಸಂಖ್ಯೆಯ ಮುಸ್ಲಿಮ್ ಪ್ರತಿನಿಧಿಗಳು ಶಾಸನ ಸಭೆ ಪ್ರವೇಶಿಸುವಂತೆ ಮಾಡುವ ಬಗ್ಗೆ ಚಿಂತನ-ಮಂಥನ ನಡೆಯಬೇಕಿದೆ. ಹಾಗಂತ,

ಇಂಥ ಬೇಡಿಕೆಗೆ ಮುಸ್ಲಿಮ್ ಸಮುದಾಯ ಖಂಡಿತ ಕಾರಣ ಅಲ್ಲ. ಮುಸ್ಲಿಮ್ ಸಮುದಾಯಕ್ಕೆ ಟಿಕೆಟ್ ನೀಡಲ್ಲ ಎಂದು ಘೋಷಿಸುವ ಮತ್ತು ಅದನ್ನು ರಾಜಕೀಯ ನೀತಿಯಾಗಿ ಅಳವಡಿಸಿಕೊಂಡಿರುವ ಪಕ್ಷವೇ ಇದಕ್ಕೆ ಕಾರಣ. ಒಂದು ದೊಡ್ಡ ಸಮುದಾಯವನ್ನು ಸಾರಾಸಗಟು ನಿರ್ಲಕ್ಷಿಸುವ ರಾಜಕೀಯ ನೀತಿಯನ್ನು ಪಕ್ಷವೊಂದು ಕೈಗೊಂಡಾಗ ಆ ಸಮುದಾಯಕ್ಕೆ ಮೀಸಲು ಕ್ಷೇತ್ರದ ಮೊರೆ ಹೋಗದೇ ಬೇರೆ ದಾರಿಯಿಲ್ಲ. ಪ್ರಜಾತಂತ್ರವೆಂಬುದು ನಿರ್ದಿಷ್ಟ ಜಾತಿ, ಧರ್ಮ, ಪಂಗಡಗಳ ಪಗಡೆಯಾಟವಲ್ಲ. ಧರ್ಮ ಮತ್ತು ಜಾತಿರಹಿತವಾಗಿ ಎಲ್ಲರನ್ನೂ ಒಳಗೊಳ್ಳುವ ವ್ಯವಸ್ಥೆ ಇದು. ಈ ವ್ಯವಸ್ಥೆಯಲ್ಲಿ ಪ್ರಮುಖ ರಾಜಕೀಯ ಪಕ್ಷವೊಂದು ಮುಸ್ಲಿಮರಿಗೆ ಪ್ರವೇಶವಿಲ್ಲ ಎಂದು ಘೋಷಿಸುವುದು ಪ್ರಜಾತಂತ್ರದ ನಿಜಸ್ಫೂರ್ತಿಗೆ ವಿರೋಧವಾದುದು. ಇದು ಮುಸ್ಲಿಮ್ ಸಮುದಾಯದ ಮೇಲೆ ಬೀರುವ ಪರಿಣಾಮ ಕೂಡ ಅಗಾಧವಾದುದು. ಈ ವ್ಯವಸ್ಥೆಯಲ್ಲಿ ತಮಗೆ ಭದ್ರತೆ ಇಲ್ಲ ಎಂಬ ಭಾವ ನಿಧಾನಕ್ಕೆ ಅವರೊಳಗೆ ತುಂಬಿಕೊಳ್ಳುವುದಕ್ಕೆ ಇಂಥ ನೀತಿಯಿಂದ ಸಾಧ್ಯವಾಗುತ್ತದೆ. ರಾಜಕೀಯ ಲಾಭಕ್ಕಾಗಿ ಒಂದು ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿರಿಸುವುದು ಮತ್ತು ನಿರಂತರ ಅಪಪ್ರಚಾರಕ್ಕೆ ಒಳಪಡಿಸುವುದು ದೇಶದ ಹಿತದೃಷ್ಟಿಯಿಂದಲೂ ಕೆಟ್ಟದು. ಇಂಥ ಬೆಳವಣಿಗೆಯು ಆ ಸಮುದಾಯದ ಅಭಿವೃದ್ಧಿಗೂ ತೊಡಕಾಗಬಹುದು ಮತ್ತು ದೇಶದ ಅಭಿವೃದ್ಧಿಯನ್ನೂ ಇದು ತಡೆಯಬಹುದು. ಈ ಹಿನ್ನೆಲೆಯಲ್ಲಿ, ಗಂಭೀರ ಅವಲೋಕನ ಅತ್ಯಗತ್ಯ.

No comments:

Post a Comment