Tuesday 20 June 2023

ಪ್ರಧಾನಿಯ ಮೌನವನ್ನು ಪ್ರಶ್ನಿಸುತ್ತಿರುವ ಹಲ್‌ದ್ವಾನಿಯ ಫೋಟೋ

 11-1-2023

ದ್ವೇಷ ಭಾಷಣ, ಸುಳ್ಳು ಪ್ರಚಾರ ಮತ್ತು ಮುಸ್ಲಿಮರನ್ನು ನಿರ್ಲಕ್ಷಿಸುವ ಪ್ರಕ್ರಿಯೆ ಬಿರುಸು ಪಡೆದುಕೊಂಡಿದೆ. ಶಿವಮೊಗ್ಗದಲ್ಲಿ ಡಿಸೆಂಬರ್ 18ರಂದು ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಆಡಿರುವ ಮಾತುಗಳು ಈ ದ್ವೇಷ ಭಾಷಣದ ಪಟ್ಟಿಗೆ ಇತ್ತೀಚಿನ ಸೇರ್ಪಡೆ. ಉತ್ತರಾಖಂಡದ ಹಲ್‌ದ್ವಾನಿಯಲ್ಲಿ ಪ್ರತಿಭಟನಾ ನಿರತ ಮುಸ್ಲಿಮರ ಬಗ್ಗೆ ಜನವರಿ 8ರಂದು ಸುಳ್ಳು ಫೋಟೋವೊಂದನ್ನು ಹರಿಯಬಿಟ್ಟು ಅಪಪ್ರಚಾರದಲ್ಲಿ ತೊಡಗಿಸಿಕೊಂಡಿರುವುದು ಈ ದ್ವೇಷದ ಇನ್ನೊಂದು ತುದಿ. ಈ ಎರಡರ ನಡುವೆ ದ್ವೇಷ ಪ್ರಚಾರದ ಇನ್ನಷ್ಟು ಪ್ರಕರಣಗಳೂ ನಡೆದಿವೆ. ಗೃಹಸಚಿವ ಆರಗ ಜ್ಞಾನೇಂದ್ರ ಸಹಿತ ಹಲವು ಸಚಿವರು ಮತ್ತು ಬಿಜೆಪಿ ಮುಖಂಡರ ಎದುರೇ ಜಗದೀಶ್ ಕಾರಂತ್ ಎಂಬವ ಕಡು ದ್ವೇಷದ ಭಾಷಣ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕರೆಯಂತೂ ಸದ್ಯ ಕುಖ್ಯಾತವಾಗಿದೆ. ‘ರಸ್ತೆ, ಚರಂಡಿ, ಮೂಲಭೂತ ಸೌಲಭ್ಯಗಳ ಬಗ್ಗೆ ಪ್ರಶ್ನಿಸಬೇಡಿ, ಲವ್ ಜಿಹಾದ್‌ನ ಬಗ್ಗೆ ಚರ್ಚಿಸಿ...’ ಎಂದು ಹೇಳುವ ಮೂಲಕ ಮುಸ್ಲಿಮ್ ಸಮುದಾಯದ ಬಗ್ಗೆ ಭೀತಿಯ ಸಂದೇಶವನ್ನು ಹರಡಿದ್ದಾರೆ. ಇದರ ನಡುವೆಯೇ, ಪಿಎಸ್‌ಐ ಹಗರಣದ ಮುಖ್ಯ ರೂವಾರಿಯಾಗಿ 9 ತಿಂಗಳ ಕಾಲ ಜೈಲಲ್ಲಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡ ದಿವ್ಯಾ ಹಾಗರಗಿಯನ್ನು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸ್ವಾಗತಿಸಿದ್ದಾರೆ.

ಉತ್ತರಾಖಂಡದ ಹಲ್‌ದ್ವಾನಿಯಲ್ಲಿರುವ ಸುಮಾರು 50 ಸಾವಿರ ಮಂದಿಯನ್ನು ತೆರವುಗೊಳಿಸುವಂತೆ ಡಿಸೆಂಬರ್ 20ರಂದು ಉತ್ತರಾಖಂಡ್ ಹೈಕೋರ್ಟ್ ಆದೇಶಿಸಿತ್ತು. ಸುಮಾರು 4 ಸಾವಿರ ಕುಟುಂಬಗಳು ವಾಸವಾಗಿರುವ ಈ ಪ್ರದೇಶವು ರೈಲ್ವೆ ಇಲಾಖೆಯದ್ದು ಎಂಬ ತೀರ್ಪನ್ನೂ ಅದು ನೀಡಿತ್ತು. ಇಲ್ಲಿನ ನಿವಾಸಿಗಳಲ್ಲಿ ಹೆಚ್ಚಿನವರೂ ಮುಸ್ಲಿಮರು. ಇಲ್ಲಿ ಸರ್ಕಾರಿ ಶಾಲೆ, ಕಾಲೇಜು, ಆಸ್ಪತ್ರೆ ಇತ್ಯಾದಿ ಎಲ್ಲವೂ ಇವೆ. ಈ ಆದೇಶದ ವಿರುದ್ಧ ಅಲ್ಲಿನ ನಿವಾಸಿಗಳು ಪ್ರತಿಭಟನೆಗೆ ಇಳಿದರು. ಜೊತೆಗೇ ಸುಪ್ರೀಮ್ ಕೋರ್ಟ್ನ ಬಾಗಿಲು ಬಡಿದರು. ಹೈಕೋರ್ಟ್‌ನ ಆದೇಶಕ್ಕೆ ಸುಪ್ರೀಮ್ ಕೋರ್ಟು ತಡೆಯಾಜ್ಞೆಯನ್ನೂ ನೀಡಿತು. ಈ ತಡೆಯಾಜ್ಞೆಗೆ ನಿವೃತ್ತ ಮೇಜರ್ ಜನರಲ್ ಸುರೇಂದ್ರ ಪೂನಿಯಾ ಎಂಬವರು ಅತ್ಯಂತ ವ್ಯಂಗ್ಯಾತ್ಮಕವಾಗಿ ಟ್ವೀಟರ್‌ನಲ್ಲಿ ಪ್ರತಿಕ್ರಿಯಿಸಿದರು. ಮಾತ್ರವಲ್ಲ, ‘ಹಲ್‌ದ್ವಾನಿ ಅತಿಕ್ರಮಣ’ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ರೈಲ್ವೆ ಹಳಿಯಲ್ಲಿ ತಮ್ಮ ಸಾಮಾನು ಸರಂಜಾಮುಗಳನ್ನು ಇಟ್ಟು ಕುಳಿತಿರುವ ದೊಡ್ಡ ಜನರ ಗುಂಪಿನ ಫೋಟೋವನ್ನು ಹಂಚಿಕೊಂಡರು. ಹಲ್‌ದ್ವಾನಿಯ ಪ್ರತಿಭಟನಾ ನಿರತ ಜನರ ಚಿತ್ರ ಎಂದು ಬಿಂಬಿಸುವುದು ಅವರ ಉದ್ದೇಶ. ಇದೇ ಚಿತ್ರವನ್ನು ಆ ಬಳಿಕ ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಹಂಚಿಕೊಂಡರಲ್ಲದೇ, ‘ಸುಪ್ರೀಮ್ ಕೋರ್ಟು ಸಕ್ರಮ ಮಾಡಿರುವುದು ಇದನ್ನೇ...’ ಎಂಬ ತಲೆಬರಹವನ್ನೂ ಕೊಟ್ಟರು. ಆ ಬಳಿಕ ಉತ್ತರ ಪ್ರದೇಶದ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಪ್ರಭಾ ಉಪಾಧ್ಯಾಯ, ತೆಲಂಗಾಣ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರುತಿ ಬಂಗಾರು ಕೂಡಾ ಇದೇ ಚಿತ್ರವನ್ನು ಹಂಚಿಕೊಂಡರು. ಆದರೆ,

ಈ ಚಿತ್ರಕ್ಕೂ ಹಲ್‌ದ್ವಾನಿಯ ಪ್ರತಿಭಟನಾ ನಿರತರಿಗೂ ಯಾವುದೇ ಸಂಬಂಧ ಇಲ್ಲ ಎಂಬುದಾಗಿ ಸತ್ಯಶೋಧನೆ ನಡೆಸುವ ಸಂಸ್ಥೆಯಾದ ಆಲ್ಟ್ ನ್ಯೂಸ್ ಸಾಕ್ಷ್ಯ ಸಮೇತ ಬಹಿರಂಗಪಡಿಸಿತು. ಹಲ್‌ದ್ವಾನಿಯದ್ದೆಂದು ಹೇಳಿ ಇವರೆಲ್ಲ ಹಂಚಿಕೊಂಡ ಚಿತ್ರ 2013 ಡಿಸೆಂಬರ್ 13ರದ್ದು ಮತ್ತು ಕೊಲ್ಕತ್ತಾದ್ದು. ಪ್ರಯಾಣಿಕರ ರೈಲು ಹಾದುಹೋದ ಬಳಿಕ ಈ ಹಳಿಯ ಪಕ್ಕದಲ್ಲಿರುವ ಕೊಳೆಗೇರಿಯ ಜನರು ತಮ್ಮ ನಿತ್ಯದ ಬದುಕಿನಲ್ಲಿ ತೊಡಗಿಸಿಕೊಂಡಿರುವ ಚಿತ್ರ ಅದಾಗಿತ್ತು. ಅಷ್ಟಕ್ಕೂ,

ಇಂಥ ಸುಳ್ಳು ಚಿತ್ರವನ್ನು ಬಿಜೆಪಿ ನಾಯಕರು ಜಿದ್ದಿಗೆ ಬಿದ್ದಂತೆ ಹಂಚಿಕೊಳ್ಳಲು ಕಾರಣವೇನು? ಪ್ರತಿಭಟನಾ ನಿರತರು ಮುಸ್ಲಿಮರು ಎಂಬುದನ್ನು ಹೊರತುಪಡಿಸಿ ಬೇರೆ ಯಾವ ಉದ್ದೇಶ ಅದಕ್ಕಿದೆ? 50 ಸಾವಿರದಷ್ಟು ಬೃಹತ್ ಜನಸಂಖ್ಯೆಯನ್ನು 7 ದಿನಗಳೊಳಗೆ ತೆರವುಗೊಳಿಸುವಂತೆ ಹೈಕೋರ್ಟು ಆದೇಶಿಸಿರುವುದನ್ನು ಪ್ರಶ್ನಿಸದ ಇವರೆಲ್ಲ, ತೆರವುಗೊಳಿಸದಂತೆ ಹೇಳಿದ ಸುಪ್ರೀಮ್‌ನ ಆದೇಶವನ್ನು ವ್ಯಂಗ್ಯ ಮಾಡಿದ್ದೇಕೆ? 50 ಸಾವಿರ ಮಂದಿ ನೆಲೆಸಿರುವ ಈ ಪ್ರದೇಶವು ರೈಲ್ವೆಯದ್ದು ಹೌದೋ ಅಲ್ಲವೋ ಎಂಬ ಪ್ರಶ್ನೆಯ ಆಚೆಗೆ, 7 ದಿನಗಳೊಳಗೆ ಇವರನ್ನೆಲ್ಲ ತೆರವುಗೊಳಿಸಿದರೆ ಉಂಟಾಗುವ ಮಾನವೀಯ ಬಿಕ್ಕಟ್ಟಿನ ಬಗ್ಗೆ ಯಾಕೆ ಈ ನಾಯಕರು ಒಂದು ಮಾತನ್ನೂ ಆಡಿಲ್ಲ?

ಈ ದ್ವೇಷ ಇಲ್ಲಿಗೇ ನಿಂತಿಲ್ಲ. ಇದು ಸರಣಿ ರೂಪದಲ್ಲಿ ಮುಂದುವರಿಯುತ್ತಾ ಇದೆ-

‘ಮನೆಯಲ್ಲಿ ಹರಿತವಾದ ಚಾಕು-ಚೂರಿಗಳನ್ನು ಇಟ್ಟುಕೊಳ್ಳಿ, ಇವು ತರಕಾರಿಗಳನ್ನು ಕತ್ತರಿಸಿದಂತೆ ನಮ್ಮ ವೈರಿಗಳ ತಲೆಗಳನ್ನು ಕತ್ತರಿಸಬಲ್ಲುದು...’ ಎಂದು ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಕರೆಕೊಟ್ಟಿದ್ದಾರೆ. ಜಗದೀಶ್ ಕಾರಂತ್ ಎಂಬವರ ಮಾತುಗಳಂತೂ ಅತ್ಯಂತ ಪ್ರಚೋದನಕಾರಿಯಾಗಿತ್ತು. ಇವರ ಜೊತೆಗೇ ಬಿಜೆಪಿಯ ಇನ್ನಿತರ ಹಲವು ನಾಯಕರೂ ಆಗಾಗ ದ್ವೇಷಭಾಷಣವನ್ನು ಮಾಡುತ್ತಾ ಚಪ್ಪಾಳೆ ಗಿಟ್ಟಿಸುತ್ತಿದ್ದಾರೆ. ಇದಿಷ್ಟೇ ಅಲ್ಲ, ಅನೈತಿಕ ಪೊಲೀಸ್‌ಗಿರಿಯ ಪ್ರಕರಣಗಳೂ ದಿನದಿಂದ ದಿನಕ್ಕೆ ಹೆಚ್ಚುತ್ತಲೂ ಇವೆ. ಈ ಎಲ್ಲ ಪ್ರಕರಣಗಳಲ್ಲೂ ಬಿಜೆಪಿ ಬೆಂಬಲಿಗರೇ ಆರೋಪಿಗಳಾಗುತ್ತಿದ್ದಾರೆ. ಬಿಜೆಪಿ ಎಂಬುದು ನಿರ್ದಿಷ್ಟ ಧರ್ಮದ ಪರವಾಗಿರುವ ಮತ್ತು ಮುಸ್ಲಿಮ್ ವಿರೋಧಿಯಾಗಿರುವ ರಾಜಕೀಯ ಪಕ್ಷ ಎಂಬುದನ್ನು ದಿನೇದಿನೇ ಇಂಥ ಪ್ರಕರಣಗಳು ಸ್ಪಷ್ಟಪಡಿಸುತ್ತಲೂ ಇವೆ. ಕನಿಷ್ಠ ರಾಜ್ಯದ ಮುಖ್ಯಮಂತ್ರಿಯಾಗಲಿ ಅಥವಾ ಪ್ರಧಾನಿ ನರೇಂದ್ರ ಮೋದಿಯಾಗಲಿ ಇಂಥ ಬೆಳವಣಿಗೆಗಳ ಬಗ್ಗೆ ಒಂದೇ ಒಂದು ಮಾತನ್ನೂ ಆಡುತ್ತಿಲ್ಲ. ತನ್ನದೇ ಸಂಸದರು ಅತ್ಯಂತ ಪ್ರಚೋದನಕಾರಿಯಾಗಿ ಮಾತಾಡಿಯೂ ಪ್ರಧಾನಿ ಗಾಢ ಮೌನಕ್ಕೆ ಜಾರುತ್ತಾರೆ. ಹಲ್‌ದ್ವಾನಿಯ ವಿಷಯದಲ್ಲಿ ಬಿಜೆಪಿಯ ಪ್ರಮುಖ ನಾಯಕರೇ ಸುಳ್ಳು ಫೋಟೋವನ್ನು ಹಂಚಿಕೊಂಡು ಮುಸ್ಲಿಮ್ ತೇಜೋವಧೆಯಲ್ಲಿ ತೊಡಗಿಸಿಕೊಂಡಿರುವುದರ ಹೊರತಾಗಿಯೂ ಪ್ರಧಾನಿಯಾಗಲಿ ಬಿಜೆಪಿ ಅಧ್ಯಕ್ಷ ನಡ್ಡಾ ಅವರಾಗಲಿ ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ. ಇದೇವೇಳೆ, ರಾಜ್ಯದಲ್ಲಿ ಮುಸ್ಲಿಮ್ ವ್ಯಾಪಾರಿಗಳನ್ನು ಜಾತ್ರೆಯಿಂದ ಹೊರಗಿಡುವ ಸರಣಿ ಪ್ರಕ್ರಿಯೆಗಳು ನಡೆಯುತ್ತಿವೆ. ಕುಕ್ಕೆ ಸುಬ್ರಹ್ಮಣ್ಯ ಜಾತ್ರೆ ಇದಕ್ಕೆ ಇತ್ತೀಚಿನ ಸೇರ್ಪಡೆ. ಸರ್ವರನ್ನೂ ಪೊರೆಯಬೇಕಾದ ಮುಖ್ಯಮಂತ್ರಿಗಳು ಈ ಬಗ್ಗೆ ಪ್ರಜ್ಞೆಯೇ ಇಲ್ಲದವರಂತೆ ವರ್ತಿಸುತ್ತಿದ್ದಾರೆ. ಹಾಗಂತ, ಮುಸ್ಲಿಮ್ ವಿರೋಧಿ ಧೋರಣೆ ಇಲ್ಲಿಗೇ ಸೀಮಿತಗೊಂಡಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಮುಸ್ಲಿಮ್ ನಿರ್ಲಕ್ಷ್ಯ ವ್ಯಾಪಿಸಿರುವುದು ಈ ಬಾರಿ ತೀವ್ರ ಚರ್ಚೆಗೂ ಒಳಗಾಯಿತು. ಬಿಜೆಪಿ ಒಲವಿನ ಮಹೇಶ್ ಜೋಷಿಯು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವುದೇ ಈ ನಿರ್ಲಕ್ಷ್ಯಕ್ಕೆ ಕಾರಣ ಎಂದು ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗಳೂ ನಡೆದುವು. ಕನ್ನಡದ ಪ್ರಮುಖ ಸಾಹಿತಿಗಳೂ ಹೋರಾಟಗಾರರೂ ಈ ಬಗ್ಗೆ ಧನಿಯೆತ್ತಿದರು. ಮಾತ್ರವಲ್ಲ, ಬೆಂಗಳೂರಿನಲ್ಲಿ ಪ್ರತಿರೋಧ ಸಮ್ಮೇಳನವೂ ನಡೆಯಿತು.

ಈ ಎಲ್ಲವನ್ನೂ ನೋಡಿದರೆ, ಮುಸ್ಲಿಮ್ ದ್ವೇಷ ಎಂಬುದು ಆಡಳಿತಾತ್ಮಕ ನೀತಿಯಾಗಿ ಮಾರ್ಪಡುತ್ತಿರುವುದು ಸ್ಪಷ್ಟವಾಗುತ್ತಿದೆ. ಮುಸ್ಲಿಮ್ ದ್ವೇಷ ಎಂಬುದು ಅನುದ್ದೇಶಿತ ಮತ್ತು ಪೂರ್ವ ನಿರ್ಧರಿತವಲ್ಲದ ಬೆಳವಣಿಗೆಯಲ್ಲ. ಈ ಇಡೀ ಪ್ರಕ್ರಿಯೆ ನಿರ್ದಿಷ್ಟ ಧೋರಣೆ ಮತ್ತು ಕಾರ್ಯಕ್ರಮದ ಭಾಗವಾಗಿಯೇ ನಡೆಯುತ್ತಿರುವಂತಿದೆ. ಈ ದ್ವೇಷ ಭಾಷಣ, ಥಳಿತ, ಅನೈತಿಕ ಗೂಂಡಾಗಿರಿಗಳೆಲ್ಲ ಮೊದಲೇ ಬರೆದಿರುವ ಚಿತ್ರಕತೆಯ ಪ್ರಯೋಗ ರೂಪದಂತಿದೆ. ಬಿಜೆಪಿ ಇಂಥ ದ್ವೇಷ, ಅನೈತಿಕ ಗೂಂಡಾಯಿಸಂ ಅನ್ನು ಬಯಸುತ್ತಿರುವಂತಿದೆ. ಮುಸ್ಲಿಮರನ್ನು ಗುರಿ ಮಾಡಿಕೊಂಡು ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರಬೇಕು ಎಂದು ಅದು ನಿರ್ಧರಿಸಿದಂತಿದೆ. ಮುಸ್ಲಿಮರನ್ನು ಇರಿದಷ್ಟೂ ತಮ್ಮ ಓಟುಗಳು ಹೆಚ್ಚುತ್ತಿರುತ್ತವೆ ಎಂದು ಅದು ಭಾವಿಸಿದಂತಿದೆ. ನಿಜಕ್ಕೂ ಈ ಬೆಳವಣಿಗೆ ಅತ್ಯಂತ ಖೇದಕರ ಮತ್ತು ಅಪಾಯಕಾರಿ. ಯಾವುದೇ ಸಮುದಾಯವನ್ನು ಹಿಂಸಿಸಿ, ಅವಮಾನಿಸಿ ಮತ್ತು ಅಪಪ್ರಚಾರಕ್ಕೆ ಒಳಪಡಿಸಿ ಶಾಶ್ವತವಾಗಿ ಅಂಚಿಗೆ ತಳ್ಳಲು ಸಾಧ್ಯವಿಲ್ಲ. ಇಂಥ ಹಿಂಸಾತ್ಮಕ ಧೋರಣೆಯ ಆಯುಷ್ಯ ಕಡಿಮೆ. ಕೊನೆಗೆ ಸತ್ಯ, ನ್ಯಾಯ ಮತ್ತು ಸಮಾನತಾ ಧೋರಣೆಗಳೇ ಶಾಶ್ವತ ವಿಜಯವನ್ನು ಹೊಂದುತ್ತವೆ. ಇದಕ್ಕೆ ಜರ್ಮನಿಯೊಂದೇ ಉದಾಹರಣೆಯಲ್ಲ. ಈ ದೇಶದಲ್ಲಿ ದಲಿತ-ದಮನಿತ ಸಮುದಾಯವೂ ಒಂದು ಪ್ರಬಲ ಉದಾಹರಣೆ. 1947ರಲ್ಲಿ ಈ ದೇಶದ ದಲಿತ ಸಮುದಾಯವನ್ನು ಹೇಗೆ ನಡೆಸಿಕೊಳ್ಳಲಾಗಿತ್ತು ಮತ್ತು ಇವತ್ತು ಇದೇ ಸಮುದಾಯ ಹೇಗೆ ಶೋಷಕರ ವಿರುದ್ಧ ಜಯ ಸಾಧಿಸುತ್ತಿದೆ ಎಂಬುದನ್ನು ಅವಲೋಕಿಸಿದರೂ ಇದು ಸ್ಪಷ್ಟವಾಗುತ್ತದೆ. ಶೋಷಕರ ನಗುವಿನ ಆಯುಷ್ಯ ತೀರಾ ಸಣ್ಣದು. ಸಮಾನತಾವಾದಿಗಳು ಮತ್ತು ನ್ಯಾಯ ಪಾಲಕರ ನಗುವೇ ಶಾಶ್ವತ. ಸತ್ಯಕ್ಕೆ ಸೋಲಿಲ್ಲ ಎಂಬ ಮಾತು ಸಾರ್ವಕಾಲಿಕ ಸತ್ಯ. ಈ ಹಿಂದೆ ದಲಿತರನ್ನು ಹಿಂಸಾತ್ಮಕವಾಗಿ ನಡೆಸಿಕೊಂಡವರೇ ಇವತ್ತು ಮುಸ್ಲಿಮರ ವಿರುದ್ಧ ದ್ವೇಷ ಹರಡುತ್ತಿದ್ದಾರೆ. ಸುಳ್ಳು ಸೋಲಲಿದೆ ಮತ್ತು ಸತ್ಯ ಜಯಿಸಲಿದೆ ಎಂಬ ಶಾಶ್ವತ ಸತ್ಯದ ಮೇಲೆ ನಂಬಿಕೆಯಿಡೋಣ.

No comments:

Post a Comment