Tuesday 20 June 2023

ಆರೆಸ್ಸೆಸ್ ಸಂವಾದ: ಜಮಾಅತೆ ಇಸ್ಲಾಮಿಯ ನಿಲುವೇನು?

 



ಸನ್ಮಾರ್ಗ ವಿಶೇಷ ಸಂಪಾದಕೀಯ 

‘RSS makes fresh minority outreach, key leaders meet Muslim representatives - ಮುಸ್ಲಿಮ್ ಪ್ರತಿನಿಧಿಗಳನ್ನು ಭೇಟಿಯಾದ ಆರೆಸ್ಸೆಸ್ ನಾಯಕರು -’ ಎಂಬ ಶೀರ್ಷಿಕೆಯಲ್ಲಿ ದಿ ಹಿಂದೂ ಪತ್ರಿಕೆ 2023 ಜನವರಿ 26ರಂದು ಮೂರು ಕಾಲಮ್‌ನಲ್ಲಿ ಸಾಕಷ್ಟು ಮಹತ್ವ ಕೊಟ್ಟೇ ಮತ್ತು ವಿವರವಾಗಿಯೇ ಸುದ್ದಿಯನ್ನು ಪ್ರಕಟಿಸಿತ್ತು. ದೆಹಲಿ ಕೇಂದ್ರಿತ ಮುಖ್ಯವಾಹಿನಿಯ ಇನ್ನಿತರ ಟೈಮ್ಸ್ ಆಫ್  ಇಂಡಿಯಾ ಸಹಿತ  ಹಿಂದಿ ಮತ್ತು ಇಂಗ್ಲಿಷ್ ಪತ್ರಿಕೆಗಳೂ ಈ ಸುದ್ದಿಯನ್ನು ಪ್ರಕಟಿಸಿದ್ದುವು. ಜಾಮಿಯಾ ಮಿಲ್ಲಿಯಾ ವಿವಿಯ ಮಾಜಿ ಉಪಕುಲಪತಿ ಮತ್ತು ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರ ದೆಹಲಿ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಆರೆಸ್ಸೆಸ್ ಕಡೆಯಿಂದ ಇಂದ್ರೇಶ್ ಕುಮಾರ್ ಮತ್ತು ರಾಮ್ ಲಾಲ್ ಕೃಷ್ಣಕುಮಾರ್ ಭಾಗವಹಿಸಿದ್ದರೆ, ಮುಸ್ಲಿಮ್ ಮುಖಂಡರಾಗಿ ಜಮಾಅತೆ ಇಸ್ಲಾಮೀ ಹಿಂದ್ ಅಖಿಲ ಭಾರತ ಕಾರ್ಯದರ್ಶಿ ಮಲಿಕ್ ಮುಅತಸಿಮ್ ಖಾನ್, ಜಮೀಅತೆ ಉಲಮಾಯೆ ಹಿಂದ್‌ನ ಮುಖಂಡರಾದ ಮೌಲಾನಾ ನಿಯಾಜ್  ಅಹ್ಮದ್ ಫಾರೂಖಿ, ಮೌಲಾನಾ ಫಝಲರ‍್ರಹ್ಮಾನ್ ಮತ್ತು ಅರ್ಶದ್ ಮದನಿ, ಅಜ್ಮೀರ್ ದರ್ಗಾದ ಸಲ್ಮಾನ್ ಚಿಶ್ತಿ ಮತ್ತಿತರರು ಭಾಗವಹಿಸಿದ್ದರು. ಅಲ್ಲದೇ, 

2022 ಆಗಸ್ಟ್ ನಲ್ಲಿ  ಮುಸ್ಲಿಮ್ ಮುಖಂಡರೊಂದಿಗೆ  ಆರೆಸ್ಸೆಸ್ ಇಂಥದ್ದೇ  ಸಭೆಯನ್ನು ನಡೆಸಿತ್ತು. ಅದರಲ್ಲಿ ಭಾಗಿಯಾಗಿದ್ದ ಮಾಜಿ ಚುನಾವಣಾ ಆಯುಕ್ತ ಎಸ್.ವೈ. ಖುರೇಶಿ, ಪತ್ರಕರ್ತ ಶಾಹಿದ್ ಸಿದ್ದೀಕಿ ಮತ್ತಿತರ ಮುಖಂಡರೂ  ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯ ಬೆನ್ನಿಗೇ ಜಮಾಅತೆ ಇಸ್ಲಾಮೀ ಹಿಂದ್‌ನ ಪ್ರತಿನಿಧಿ ಮಲಿಕ್ ಮುಅತಸಿಮ್ ಖಾನ್‌ರು ಸಭೆಯ ವಿವರಗಳನ್ನು ವೀಡಿಯೋ ಮೂಲಕ ಸಾರ್ವಜನಿಕವಾಗಿ ಹಂಚಿಕೊಂಡಿದ್ದರು. ಇದಾಗಿ,

ಮೂರೂವರೆ ವಾರಗಳ ಬಳಿಕ ಜಮಾಅತೆ ಇಸ್ಲಾಮೀ ಹಿಂದನ್ನು ಕಟಕಟೆಯಲ್ಲಿ ನಿಲ್ಲಿಸುವ,  ಕದ್ದು ಮುಚ್ಚಿ ಮಾಡಿದ ಸಭೆ ಅನ್ನುವ ಮತ್ತು ಸಮುದಾಯ ದ್ರೋಹಿಯಂತೆ ಬಿಂಬಿಸುವ ಚರ್ಚೆಗಳು ಮುಖ್ಯವಾಗಿ ಕೇರಳ ಮತ್ತು ಕರ್ನಾಟಕದಲ್ಲಿ ಅದರಲ್ಲೂ ಕರಾವಳಿ ಭಾಗದಲ್ಲಿ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಫೇಸ್‌ಬುಕ್ ಹೇಳಿಕೆಯನ್ನು ಕೂಡಾ ಹಂಚಿಕೊಳ್ಳಲಾಗುತ್ತಿದೆ. ಸಭೆಯ ವಿವರವನ್ನು ಜಮಾಅತೆ ಇಸ್ಲಾಮೀ ಹಿಂದ್ ಬಹಿರಂಗಪಡಿಸಬೇಕು ಮತ್ತು ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುವ ಹಕ್ಕನ್ನು ಜಮಾಅತ್‌ಗೆ ಕೊಟ್ಟವರು ಯಾರು ಎಂಬುದು ಪಿಣರಾಯಿ ಅವರ ಪ್ರಶ್ನೆ. ತಮಾಷೆ ಏನೆಂದರೆ,

ಪಿಣರಾಯಿ ವಿಜಯನ್‌ರಿಂದ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯವನ್ನು ಹಂಚಿಕೊಳ್ಳುವವರ ವರೆಗೆ, ಯಾರೂ ಕೂಡಾ ಆ ಸಭೆಯಲ್ಲಿ ಭಾಗಿಯಾದ ಇತರ ಮುಸ್ಲಿಮ್ ಸಂಘಟನೆಗಳು ಮತ್ತು ಮುಖಂಡರ ಬಗ್ಗೆ ಒಂದು ಗೆರೆಯ ಉಲ್ಲೇಖವನ್ನೂ ಮಾಡುತ್ತಿಲ್ಲ.

1919ರಲ್ಲಿ ಸ್ಥಾಪನೆಯಾದ ಮತ್ತು ಭಾರತೀಯ ಮುಸ್ಲಿಮರ ವಿಷಯದಲ್ಲಿ ಸದಾ ಧ್ವನಿಯೆತ್ತುತ್ತಿರುವ ಜಮೀಯತೆ ಉಲಮಾಯೆ ಹಿಂದ್‌ನ ಮೂವರು ಉನ್ನತ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದ್ದಾರೆ. ಒಂದು ಕೋಟಿಗಿಂತಲೂ ಅಧಿಕ ಸದಸ್ಯರಿರುವ ಮತ್ತು ಅದಕ್ಕಿಂತಲೂ ಹೆಚ್ಚು ಅನುಯಾಯಿಗಳಿರುವ ದೇವಬಂದಿ ಪರಂಪರೆಯ ಈ ವಿದ್ವಾಂಸರ ವೇದಿಕೆಗೆ ದೇಶಾದ್ಯಂತ ಬಲವಾದ ಹಿಡಿತ ಇದೆ ಮತ್ತು ಈ ಸಂಘಟನೆಯನ್ನು ಹೊರಗಿಟ್ಟು ಮುಸ್ಲಿಮ್ ಸಮುದಾಯಕ್ಕೆ ಸಂಬಂಧಿಸಿ ಯಾವುದೇ ನಿರ್ಧಾರವನ್ನು ಕೈಗೊಳ್ಳಲಾಗದಷ್ಟು ಇದು ವರ್ಚಸ್ಸನ್ನು ಹೊಂದಿದೆ. ಮುಸ್ಲಿಮ್ ಸಂಘಟನೆ ಗಳಲ್ಲೇ  ಅತ್ಯಂತ ಸಶಕ್ತ ಮತ್ತು ಪರಿಣಾಮಕಾರಿ ಲೀಗಲ್ ಸೆಲ್ ಅನ್ನು ಹೊಂದಿರುವ ಸಂಘಟನೆ ಇದು. ಭಯೋತ್ಪಾದನೆಯ ಹೆಸರಲ್ಲಿ ಬಂಧನಕ್ಕೀಡಾಗುತ್ತಿರುವ ದುರ್ಬಲ ಮುಸ್ಲಿಮ್ ಆರೋಪಿಗಳು ಮತ್ತು ಅವರ ಕುಟುಂಬಕ್ಕೆ ಕಾನೂನಾತ್ಮಕವಾಗಿ ನೆರವಾಗುತ್ತಿರುವ ಸಂಘಟನೆಯೂ ಇದುವೇ. ಟಾಡಾ, ಯುಎಪಿಎ ಕಾಯ್ದೆಯಡಿ ಬಂಧನಕ್ಕೀಡಾದ ಸುಮಾರು 175ಕ್ಕಿಂತಲೂ ಅಧಿಕ ಮಂದಿ ಆರೋಪಿಗಳನ್ನು ಬಿಡುಗಡೆಗೊಳಿಸುವಲ್ಲಿ ಈ ಜಮೀಅತೆ ಉಲೆಮಾಯೆ ಹಿಂದ್ ಯಶಸ್ವಿಯಾಗಿದೆ. ಇದರ ಹೊರತಾಗಿ ಈ ದೇಶದ ಪ್ರಮುಖ ದರ್ಗಾವಾದ ಅಜ್ಮೀರ್ ಶರೀಫ್‌ನ ಹೊಣೆಗಾರರೂ ಈ ಸಭೆಯಲ್ಲಿ ಭಾಗವಹಿಸಿದ್ದಾರೆ. ಈ ಎಲ್ಲ ವಿವರವನ್ನು ಜನವರಿ 26ರ ದಿ ಹಿಂದೂ ಮತ್ತು ಇತರ ಪತ್ರಿಕೆಗಳೂ ಪ್ರಕಟಿಸಿವೆ. ಹಾಗಿದ್ದೂ ಇವೆಲ್ಲವುಗಳನ್ನು ಅಡಗಿಸಿಟ್ಟು ಕೇವಲ ಜಮಾಅತೆ ಇಸ್ಲಾಮಿಯನ್ನು ಮಾತ್ರ ಪ್ರಶ್ನೆಯ ಮೊನೆಯಲ್ಲಿ ನಿಲ್ಲಿಸುವುದರ ಉದ್ದೇಶವೇನು? ಅಜ್ಮೀರ್ ಚಿಶ್ತಿಯನ್ನು ಯಾಕೆ ಇವರು ಪ್ರಶ್ನಿಸುತ್ತಿಲ್ಲ? ಜಮೀಅತೆ ಉಲೆಮಾಯೆ ಹಿಂದನ್ನು ಯಾಕೆ ಪ್ರಶ್ನಿಸುತ್ತಿಲ್ಲ? ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುವುದಕ್ಕೆ ಜಮೀಅತೆ ಉಲೆಮಾಯೆ ಹಿಂದ್‌ಗೆ ಏನರ್ಹತೆಯಿದೆ, ಚಿಶ್ತಿಗೆ ಏನು ಹಕ್ಕು ಇದೆ ಎಂದೇಕೆ ಯಾರೂ ಪ್ರಶ್ನಿಸುತ್ತಿಲ್ಲ? ಸತ್ಯವನ್ನು ಅಡಗಿಸುತ್ತಿರುವವರು ಯಾರು? ಸಭೆಯ ಬಗ್ಗೆ ಸುಳ್ಳುಮಿಶ್ರಿತ ಮತ್ತು ಅನುಮಾನಿತ ಸುದ್ದಿಯನ್ನು ಹರಡಿ ಸಮುದಾಯ ದ್ರೋಹಿಯಂತೆ ವರ್ತಿಸುತ್ತಿರುವವರು ಯಾರು? ಈ ಸಭೆಯ ಬಳಿಕ ಜಮಾಅತೆ ಇಸ್ಲಾಮೀ ಹಿಂದ್‌ನ ಪ್ರತಿನಿಧಿ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಹಂಚಿಕೊಂಡ  ಬಳಿಕವೂ ಮತ್ತು ಮಾಧ್ಯಮಗಳು ಸುದ್ದಿ ಪ್ರಕಟಿಸಿದ ಹೊರತಾಗಿಯೂ ಜಮಾಅತ್ ರಹಸ್ಯವಾಗಿ ಸಭೆ ನಡೆಸಿದೆ ಮತ್ತು ಆರೆಸ್ಸೆಸ್ ಪ್ರಭಾವದಿಂದಾಗಿಯೇ ಮಾಧ್ಯಮಗಳು ಈ ಸುದ್ದಿಯನ್ನು ಪ್ರಕಟಿಸಿಲ್ಲ ಎಂದೆಲ್ಲ ಹೇಳುವುದರಲ್ಲಿ ದುರುದ್ದೇಶವಲ್ಲದೇ ಇನ್ನೇನಿದೆ? ಅಂದಹಾಗೆ,

ಜಮಾಅತೆ ಇಸ್ಲಾಮೀ ಹಿಂದ್ ಸಂವಾದದಲ್ಲಿ ನಂಬಿಕೆಯಿರಿಸಿರುವ ಆಂದೋಲನ. ಅದು ವಿಚಾರಗಳನ್ನು ವಿರೋಧಿಸುತ್ತದೆಯೇ ಹೊರತು ಅದನ್ನು ಪ್ರತಿಪಾದಿಸುವ ವ್ಯಕ್ತಿಗಳನ್ನಲ್ಲ. ಸಮಸ್ಯೆಯ ಪರಿಹಾರಕ್ಕೆ ಇರುವ ಹಲವು ದಾರಿಗಳಲ್ಲಿ ಸಂವಾದವೂ ಒಂದು ಎಂದು ಜಮಾಅತ್ ಬಲವಾಗಿ ನಂಬಿದೆ.

ಈ ಜಗತ್ತಿನ ಫ್ಯಾಸಿಸ್ಟ್ ಗಳ  ಗುರುವಾಗಿರುವ ಫರೋವನ ಬಳಿಗೆ ಪ್ರವಾದಿ ಮೂಸಾ(ಅ)ರನ್ನು ಕಳುಹಿಸಿದ ಅಲ್ಲಾಹನ ಗ್ರಂಥದ ಮೇಲೆ ಅದು ಅಚಂಚಲ ವಿಶ್ವಾಸವನ್ನು ಇರಿಸಿದೆ. ಆ ಫ್ಯಾಸಿಸ್ಟ್ ನ ಜೊತೆ ನಿರರ್ಗಳವಾಗಿ ಮಾತಾಡುವಂತಾಗಲು ತನ್ನ ನಾಲಗೆಯ ತೊಡಕನ್ನು ನೀಗಿಸು...’ ಎಂದಷ್ಟೇ ಮೂಸಾ(ಅ) ಅಲ್ಲಾಹನಲ್ಲಿ ಪ್ರಾರ್ಥಿಸಿದ್ದರು. ಫರೋವನ ಶಿಷ್ಯನಂತಿದ್ದ 6ನೇ ಶತಮಾನದ ಫ್ಯಾಸಿಸ್ಟ್ ನಾಯಕ ಅಬೂಜಹಲ್‌ನ ಬಳಿಗೆ ಪ್ರವಾದಿ ಮುಹಮ್ಮದರು(ಸ) ನೂರಾರು ಬಾರಿ ಹೋಗಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಜಮಾಅತ್ ಈ ಪರಂಪರೆಯನ್ನು ಮುಂದುವರಿಸಲು ಬಯಸುತ್ತದೆ ಮತ್ತು ಸಂವಾದದ ಬಾಗಿಲು ಯಾರಿಗೂ ಯಾವತ್ತೂ ಮುಚ್ಚಿಕೊಳ್ಳಬಾರದೆಂದು ದೃಢವಾಗಿ ಪ್ರತಿಪಾದಿಸುತ್ತದೆ. ಈ ಕಾರಣದಿಂದಾಗಿಯೇ ಜಮಾಅತ್ ಆರೆಸ್ಸೆಸ್ ಕರೆದ ಸಭೆಯಲ್ಲಿ ಭಾಗಿಯಾಗಿದೆ ಮತ್ತು ಅದನ್ನು ಬಹಿರಂಗವಾಗಿಯೇ ಹೇಳಿಕೊಂಡಿದೆ. ಮುಂದೆಯೂ ಸಂವಾದದ ಸಂದರ್ಭ ಎದುರಾದಾಗಲೆಲ್ಲ ಪರಿಸ್ಥಿತಿಯನ್ನು ಅನುಸರಿಸಿಕೊಂಡು ಸಮುದಾಯದ ಹಿತದೃಷ್ಟಿಯಿಂದ ಆರೆಸ್ಸೆಸ್ ಸಹಿತ ಎಲ್ಲರ ಜೊತೆಗೂ ಸಂವಾದ ನಡೆಸಲು ಜಮಾಅತ್ ಸಿದ್ಧವಾಗಿದೆ. ಯಾವುದೇ ವ್ಯಕ್ತಿ, ಸಂಘಟನೆ ಅಥವಾ ಪಕ್ಷದ ಜೊತೆ ಸಂವಾದ ನಡೆಸುವುದನ್ನು ಜಮಾಅತೆ ಇಸ್ಲಾಮೀ ಹಿಂದ್ ಅಪರಾಧವಾಗಿ ಎಂದೂ ಪರಿಗಣಿಸಿಲ್ಲ. ಸಮುದಾಯದ ಹಿತದೃಷ್ಟಿಯಿಂದ ಸಂದರ್ಭಾನುಸಾರ ಯಾವುದು ಸೂಕ್ತವೋ ಆ ದಾರಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅದು ಹಿಂಜರಿಯುವುದೂ ಇಲ್ಲ. ಅಷ್ಟಕ್ಕೂ,

ಜಮಾಅತ್ ಏಕವ್ಯಕ್ತಿ ಆಂದೋಲನವಲ್ಲ. ಅದು ಶೂರಾ ಅಥವಾ ಪಾರ್ಲಿಮೆಂಟರಿ ವ್ಯವಸ್ಥೆಯನ್ನು ಅವಲಂಬಿಸಿಕೊಂಡಿದೆ. ಇಂಥ ಪಾರ್ಲಿಮೆಂಟ್ ವ್ಯವಸ್ಥೆ ಸ್ಥಳೀಯ ಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದ  ವರೆಗೆ ಅತ್ಯಂತ ಕ್ರಮಬದ್ಧವಾಗಿ ನಡೆಯುತ್ತಲೂ ಇದೆ. ಕೇಂದ್ರ ಪಾರ್ಲಿಮೆಂಟ್‌ಗೆ ಮತದಾನದ ಮೂಲಕ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳುಹಿಸಲಾಗುತ್ತದೆ. ಆರೆಸ್ಸೆಸ್ ಕರೆದ ಸಭೆಯಲ್ಲಿ ಭಾಗವಹಿಸುವುದೂ ಸೇರಿದಂತೆ ಈ ಪಾರ್ಲಿಮೆಂಟ್‌ನಲ್ಲಿ ಚರ್ಚಿಸಿಯೇ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಇದು ಜಮಾಅತೆ ಇಸ್ಲಾಮೀ ಹಿಂದ್ ತನ್ನ ಕಾರ್ಯಚಟುವಟಿಕೆಗೆ ಆಯ್ದುಕೊಂಡಿರುವ ದಾರಿ. ಹಾಗಂತ,
ತಾನು ಪ್ರತಿಪಾದಿಸುತ್ತಿರುವ ಪರಿಹಾರ ಕ್ರಮವೇ ಅಂತಿಮ ಮತ್ತು ಅದಕ್ಕಿಂತ ಭಿನ್ನ ರೀತಿಯ ಪರಿಹಾರ ಮಾರ್ಗವನ್ನು ಪ್ರತಿಪಾದಿಸುವವರೆಲ್ಲ ಸಮುದಾಯ ದ್ರೋಹಿಗಳು ಎಂದು ಜಮಾಅತೆ ಇಸ್ಲಾಮೀ ಹಿಂದ್ ಎಂದೂ ಘೋಷಿಸಿಲ್ಲ. ಮುಸ್ಲಿಮ್ ಸಮುದಾಯ ಸದ್ಯ ಎದುರಿಸುತ್ತಿರುವ ಸವಾಲುಗಳು ಮತ್ತು ಆತಂಕಗಳ ನಿವಾರಣೆಯಲ್ಲಿ ಒಂದಕ್ಕಿಂತ  ಹೆಚ್ಚು ಪರಿಹಾರ ದಾರಿಗಳು ಇರಬಹುದು ಎಂಬುದರಲ್ಲಿ ಜಮಾಅತ್‌ಗೆ ಆಕ್ಷೇಪವೂ ಇಲ್ಲ. ತನ್ನ ನಿಲುವಿನೊಂದಿಗೆ ಯಾರಿಗೆಲ್ಲ ಸಹಮತ ಇದೆಯೋ ಅವರನ್ನು ಸೇರಿಸಿಕೊಂಡು ಸಮಾಜ ಮತ್ತು ಸಮುದಾಯದ ಒಳಿತಿಗಾಗಿ ಕೆಲಸ ಮಾಡುವುದೇ ಜಮಾಅತ್‌ನ ಗುರಿ. ಹಾಗಂತ,

ತನ್ನ ಜೊತೆ ಸೇರುವಂತೆ ಮತ್ತು ತನ್ನ ನಿಲುವನ್ನೇ ಪ್ರತಿಪಾದಿಸುವಂತೆ ಯಾರನ್ನೂ ಯಾವ ಸಂಘಟನೆಯನ್ನೂ ಅದು ಬಲವಂತಪಡಿಸುತ್ತಿಲ್ಲ. ತಾನು ನೆಚ್ಚಿಕೊಂಡ ಆದರ್ಶದಂತೆ ಯೋಜನೆಗಳನ್ನು ರೂಪಿಸಿಕೊಂಡು ಕೆಲಸ ಮಾಡುತ್ತಾ ಮತ್ತು ಭಿನ್ನ ನಿಲುವುಗಳನ್ನು ಭಿನ್ನಮತದ ಜೊತೆಗೇ ಗೌರವಿಸುವುದನ್ನೇ ಅದು ಧೋರಣೆಯಾಗಿ ಪಾಲಿಸಿಕೊಂಡೂ ಬಂದಿದೆ, ಮುಂದೆಯೂ ಹಾಗೆಯೇ.  ಅಂದಹಾಗೆ,

ಕಳೆದ 75 ವರ್ಷಗಳ ದೀರ್ಘ ಅನುಭವದಲ್ಲಿ ಈ ಸಮಾಜ ಮತ್ತು ಈ ಸಮುದಾಯ ಏನು ಎಂಬುದನ್ನು ಜಮಾಅತ್ ಚೆನ್ನಾಗಿಯೇ ಅರಿತಿದೆ ಮತ್ತು ಪರಿಹಾರ ದಾರಿಗಳ ಬಗ್ಗೆಯೂ ಅದಕ್ಕೆ ಸ್ಪಷ್ಟತೆಯಿದೆ. ಹಾಗೆಯೇ, ಸತ್ಯವನ್ನು ಅಡಗಿಸುವ ಮತ್ತು ಸುಳ್ಳನ್ನು ವಿಜೃಂಭಿಸಿ ಹೇಳುವ ಸಂಚುಗಳೂ  ಹಿಂದೆ ನಡೆದಿದೆ. ಅಲ್ಲಾಹನ ಅನುಗ್ರಹದಿಂದ ಅವನ್ನು ಯಶಸ್ವಿಯಾಗಿ ಎದುರಿಸಿದ ಇತಿಹಾಸವೂ ಜಮಾಅತ್‌ಗಿದೆ. ಆರೆಸ್ಸೆಸ್ ಜೊತೆಗಿನ ಸಂವಾದವನ್ನೂ ಜಮಾಅತ್ ಸಕಾರಾತ್ಮಕವಾಗಿಯೇ ಪರಿಗಣಿಸುತ್ತದೆ ಮತ್ತು ದುರುದ್ದೇಶ ರಹಿತ ಅಭಿಪ್ರಾಯಗಳನ್ನು ಅಷ್ಟೇ ಸಕಾರಾತ್ಮಕವಾಗಿ ಸ್ವೀಕರಿಸುತ್ತದೆ.

No comments:

Post a Comment