Friday 7 September 2018

ಅನ್ಯರನ್ನು ಹತ್ಯೆಗೈದು ರಕ್ಷಿಸಿಕೊಳ್ಳಬೇಕಾದ ವಿಚಾರಧಾರೆಯಾದರೂ ಯಾವುದು?


        ಯಾಸೀನ್ ಭಟ್ಕಳ್ ಯಾರು ಮತ್ತು ಇಂಡಿಯನ್ ಮುಜಾಹಿದೀನ್ ಏನು ಅನ್ನುವ ಪ್ರಶ್ನೆಯನ್ನು ಏಳೆಂಟು ವರ್ಷಗಳ ಹಿಂದೆ ಈ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಎತ್ತಲಾಗಿತ್ತು. ಇಂಡಿಯನ್ ಎಂಬ ಆಂಗ್ಲ ಪದ ಹಾಗೂ ಮುಜಾಹಿದೀನ್ ಎಂಬ ಅರೇಬಿಕ್ ಪದಗಳು ಜೊತೆ ಸೇರಿಕೊಂಡು ಉಂಟಾದ ಇಂಡಿಯನ್ ಮುಜಾಹಿದೀನ್ ಎಂಬ ಸಂಘಟನೆಯ ಫಲಾನುಭವಿಗಳು ಯಾರು, ಮೂಲ ಕೇಂದ್ರ ಎಲ್ಲಿ, ಅದರ ಕಾರ್ಯಚಟುವಟಿಕೆ ಹೇಗೆ, ಯಾವ ಉದ್ದೇಶದಿಂದ ಅದನ್ನು ಹುಟ್ಟು ಹಾಕಲಾಗಿದೆ.. ಎಂಬೆಲ್ಲ ಪ್ರಶ್ನೆಗಳು ಆಗ ಮುಂಚೂಣಿಯಲ್ಲಿತ್ತು. ಬಳಿಕ ಸ್ಪಷ್ಟಗೊಂಡ ಸಂಗತಿ ಏನೆಂದರೆ, ಅದು ದೇಶದಲ್ಲಿ ಯಾವ ಸಮಾಜಸೇವಾ ಕಾರ್ಯವನ್ನೂ ಮಾಡುತ್ತಿಲ್ಲ, ಯಾರ ಪರವಾಗಿಯೂ ಅದು ಹೋರಾಡು(ಮುಜಾಹಿದ್)ತ್ತಿಲ್ಲ ಮತ್ತು ಅದಕ್ಕೊಂದು ನಿಶ್ಚಿತವಾದ ಮೂಲ ನೆಲೆಯೂ ಇಲ್ಲ. ಭಾರತದಲ್ಲಿ ಅಸ್ಥಿರತೆಯನ್ನು ಹುಟ್ಟು ಹಾಕುವುದೇ ಅದರ ಮೂಲ ಗುರಿ ಎಂಬ ಮಾಹಿತಿಯನ್ನು ಈ ದೇಶದ ತನಿಖಾ ಸಂಸ್ಥೆಗಳು ಹೇಳಿಕೊಂಡವು.

ಸದ್ಯ ಈ ಮೇಲಿನ ಪ್ರಶ್ನೆಗಳಿಗೆ ಮತ್ತೊಮ್ಮೆ ಮಹತ್ವ ಲಭ್ಯವಾಗಿದೆ. ಈ ಬಾರಿ ಪ್ರಶ್ನೆಯ ಮೊನೆಗೆ ಸಿಲುಕಿಕೊಂಡಿರುವುದು- ಅಭಿನವ ಭಾರತ, ಸನಾತನ ಸಂಸ್ಥಾ, ಹಿಂದೂ ಜನಜಾಗೃತಿ ಸಮಿತಿ, ಹಿಂದೂ ಮಹಾಸಭಾ ಇತ್ಯಾದಿ ಸಂಘಟನೆಗಳು. ನಿಜಕ್ಕೂ, ಈ ಸಂಘಟನೆಗಳ ಕಾರ್ಯವೈಖರಿ ಏನು, ಸದಸ್ಯತನದ ಬಗೆ ಹೇಗೆ, ಈ ಸಂಘಟನೆಗಳ ಉದ್ದೇಶ, ಗುರಿ, ಬೋಧನೆಗಳು ಏನೇನು ಇತ್ಯಾದಿಗಳು ಈಗ ಪ್ರಶ್ನೆಗೆ ಒಳಗಾಗಿವೆ. ಮೊಟ್ಟಮೊದಲು ಈ ಸಂಘಟನೆಗಳ ಕುರಿತಂತೆ ಇಂಥದ್ದೊಂದು ಪ್ರಶ್ನೆಯನ್ನೆತ್ತಿದ್ದು ಮುಂಬೈಯ ಪೊಲೀಸ್ ಮುಖ್ಯಸ್ಥ ಹೇಮಂತ್ ಕರ್ಕರೆ. ಇಂಡಿಯನ್ ಮುಜಾಹಿದೀನ್‍ನ ಉದ್ದೇಶ ಏನೇನೋ ಅದಕ್ಕೆ ಸಮಾನವಾದ ಉದ್ದೇಶವನ್ನೇ ಈ ಸಂಘಟನೆಗಳು ಹೊಂದಿವೆ ಎಂಬುದನ್ನು ಅವರು ಪತ್ತೆ ಹಚ್ಚಿದ್ದರು. ಸಂಜೋತಾ ಎಕ್ಸ್‍ಪ್ರೆಸ್, ಮಾಲೆಗಾಂವ್ ಸ್ಫೋಟ ಮತ್ತು ಮಕ್ಕಾ ಮಸೀದಿ ಸ್ಫೋಟಗಳ ಆರೋಪದಲ್ಲಿ ಅಭಿನವ್ ಭಾರತ್‍ನೊಂದಿಗೆ ಸಂಬಂಧ ಹೊಂದಿದ್ದ ಸಾಧ್ವಿ ಪ್ರಜ್ಞಾಸಿಂಗ್, ಪುರೋಹಿತ್, ಅಸೀಮಾನಂದ ಸಹಿತ ಹಲವರನ್ನು ಅವರು ಬಂಧಿಸಿದ್ದರು. ಇಂಡಿಯನ್ ಮುಜಾಹಿದೀನ್‍ನ ಇನ್ನೊಂದು ಮುಖವಾಗಿ ಅಭಿನವ್ ಭಾರತ್ ಅನ್ನು ಅವರು ಈ ದೇಶದ ಮುಂದೆ ಅನಾವರಣಗೊಳಿಸಿದ್ದರು. ಈ ನಡುವೆ ಮುಂಬೈ ದಾಳಿಯ ವೇಳೆ ಅವರ ಹತ್ಯೆ ನಡೆಯಿತು. ಆ ಬಳಿಕ ಅವರ ತನಿಖೆಯಲ್ಲೇ ತಪ್ಪುಗಳನ್ನು ಹುಡುಕುವ ಪ್ರಯತ್ನಗಳು ಅತ್ಯಂತ ಯೋಜಿತವಾಗಿ ನಡೆದುವು. ಅವರನ್ನೇ ತಪ್ಪಿತಸ್ಥ ಎಂದು ಘೋಷಿಸುವ ಮಟ್ಟಕ್ಕೆ ವಾದಗಳು ಬೆಳೆದುವು.

ಇದೀಗ ಕರ್ಕರೆಯವರ ಅದೇ ಮಹಾರಾಷ್ಟ್ರದಲ್ಲಿ ಬಂಧನ ಸತ್ರ ನಡೆಯುತ್ತಿದೆ. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್), ಸಿಬಿಐ ಮತ್ತು ಕರ್ನಾಟಕದ ಸಿಟ್ ಈ ಮೂರೂ ಸಂಸ್ಥೆಗಳು ಉಭಯ ರಾಜ್ಯಗಳಲ್ಲಿ ಹಲವರನ್ನು ಬಂಧಿಸಿವೆ. ವಿಶೇಷ ಏನೆಂದರೆ, ಬಂಧಿತರೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಸನಾತನ ಸಂಸ್ಥಾ, ಅಭಿನವ್ ಭಾರತ್, ಶ್ರೀರಾಮ ಸೇನೆ, ಹಿಂದೂ ಜನಜಾಗೃತಿ ಸಮಿತಿ ಇತ್ಯಾದಿಗಳೊಂದಿಗೆ ಗಾಢ ಸಂಬಂಧವನ್ನು ಹೊಂದಿದವರಾಗಿದ್ದಾರೆ. ಇಂಡಿಯನ್ ಮುಜಾಹಿದೀನ್‍ನ ಸ್ಥಾಪಕ ಎಂದು ಹೇಳಲಾದ ಯಾಸೀನ್ ಭಟ್ಕಳ್‍ನ ಹೆಸರು ಅರಬಿ ಮೂಲವಾಗಿದ್ದರೆ ವೈಭವ್ ರಾವತ್, ವಾಘ್ಮೋರೆ ಗಣೇಶ್ ಮಿಸ್ಕಿನ್, ಅಮಿತ್ ಬದ್ದಿ, ಅಮೋಳ್ ಕಾಳೆ, ಭರತ್ ಕುರ್ನೆ, ಶರದ್ ಕಳಾಸ್ಕರ್, ಸಚಿನ್ ಅಂಧುರೆ ಮತ್ತು ಇನ್ನಿತರ ಆರೋಪಿಗಳ ಹೆಸರುಗಳು ಅಚ್ಚ ಭಾರತೀಯ ಮೂಲದವು. ಹೆಸರುಗಳ ಮೂಲದಲ್ಲಿ ಯಾಸೀನ್ ಮತ್ತು ಇವರ ನಡುವೆ ವ್ಯತ್ಯಾಸ ಇದೆಯೇ ಹೊರತು ಮನೋಭಾವದಲ್ಲಿ ಇವರೆಲ್ಲ ಸಮಾನರೇ ಅನ್ನುವುದನ್ನು ತನಿಖಾ ವರದಿಗಳು ಪ್ರತಿದಿನ ಬಹಿರಂಗಪಡಿಸುತ್ತಿವೆ. ದೇಶದ ಹಲವು ಕಡೆ ಬಾಂಬ್ ಸ್ಫೋಟಿಸಿದ ಆರೋಪ ಯಾಸೀನ್ ಭಟ್ಕಳ್‍ನ ಮೇಲಿದ್ದರೆ, ಸನಾತನ ಸಂಸ್ಥಾದೊಂದಿಗೆ ಗುರುತಿಸಿಕೊಂಡಿರುವ ವೈಭವ್ ರಾವತ್‍ನಿಂದ ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಬಿಐ ಮತ್ತು ಕರ್ನಾಟಕದ ಸಿಟ್‍ನಿಂದ ಬಂಧನಕ್ಕೊಳಗಾದವರ ಮೇಲಿರುವ ಆರೋಪವಂತೂ ಇದಕ್ಕಿಂತಲೂ ಗಂಭೀರ. ದಾಬೋಲ್ಕರ್, ಪನ್ಸಾರ್, ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆಯಲ್ಲಿ ಇವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಪಾತ್ರ ನಿರ್ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.


ನಿಜವಾಗಿ, ಸಮಸ್ಯೆ ಇರುವುದು ಹೆಸರುಗಳಲ್ಲಲ್ಲ, ಮನಃಸ್ಥಿತಿಯಲ್ಲಿ. ಯಾಸೀನ್ ಕೆಟ್ಟ ಹೆಸರಲ್ಲ. ಪರಶುರಾಮ ವಾಘ್ಮೋರೆ ಕೂಡಾ ಹಾಗೆಯೇ. ಆದರೆ ಈ ಇಬ್ಬರ ಮನಃಸ್ಥಿತಿಯಿಂದಾಗಿ ಈ ಎರಡೂ ಹೆಸರುಗಳಿಗೆ ಕಳಂಕ ಅಂಟಿಕೊಂಡವು. ಸನಾತನ ಸಂಸ್ಥಾ ಅಥವಾ ಅಭಿನವ್ ಭಾರತ್ ಎಂಬ ಹೆಸರುಗಳು ಕೆಟ್ಟದ್ದೇನಲ್ಲ. ಆದರೆ ಈ ಹೆಸರಿನ ಅಡಿಯಲ್ಲಿ ಒಂದಾಗುವ ವ್ಯಕ್ತಿಗಳು ಯಾವ ಮನಃಸ್ಥಿತಿಯನ್ನು ಹೊಂದಿರುತ್ತಾರೋ ಆ ಮನಃಸ್ಥಿತಿ ಅವಕ್ಕೆ ಕೆಟ್ಟದಾದ ಅಥವಾ ಒಳ್ಳೆಯದಾದ ಹೆಸರುಗಳನ್ನು ಕೊಡಿಸುತ್ತವೆ. ಹಿಂದೂ ಜನಜಾಗೃತಿ ಸಮಿತಿ ಎಂಬ ಹೆಸರು ಬಾಹ್ಯನೋಟಕ್ಕೆ ಅತ್ಯಂತ ಅಂದವಾದುದು ಮತ್ತು ಹಿಂದೂಗಳೇ ಬಹುಸಂಖ್ಯಾತವಾಗಿರುವ ಭಾರತದ ಮಟ್ಟಿಗೆ ಅತ್ಯಂತ ಸೂಕ್ತವಾದುದು. ಆದರೆ ಸಮಸ್ಯೆ ಇರುವುದು ಈ ಸಂಘಟನೆಯ ಉದ್ದೇಶ ಮತ್ತು ಗುರಿಗಳಲ್ಲಿ.
  
 ಕ್ರೌರ್ಯ ಯಾವುದಾದರೊಂದು ನಿರ್ದಿಷ್ಟ ಧರ್ಮದ ಸೊತ್ತಲ್ಲ. ಅದು ಧರ್ಮಾತೀತ ಮತ್ತು ರಾಷ್ಟ್ರಾತೀತ ಮನಃಸ್ಥಿತಿ. ಅದು ಯಾಸೀನ್ ಎಂಬ ಹೆಸರಿನವನಲ್ಲೂ ಇರಬಹುದು ಅಥವಾ ವಾಘ್ಮೋರೆ ಎಂಬ ಹೆಸರಿನವನಲ್ಲೂ ಇರಬಹುದು. ವೈಭವ್ ರಾವತ್ ಎಂಬ ಹೆಸರು, ಆತನ ಹಣೆಯಲ್ಲಿರುವ ನಾಮ, ಹಿಂದೂ ಧರ್ಮದ ಬಗ್ಗೆ ಆತನಿಗಿರುವ ಜ್ಞಾನ ಮತ್ತು ನಿಷ್ಠೆ ಹಾಗೂ ಆತನಲ್ಲಿರುವ ಇನ್ನಿತರ ಧಾರ್ಮಿಕ ಸಂಕೇತಗಳು ಆತನನ್ನು ನಿಷ್ಠಾವಂತ ಹಿಂದೂ ಎನ್ನುವುದಕ್ಕೋ ಅಥವಾ ಹಿಂದೂ ಧರ್ಮದ ನೈಜ ಪ್ರತಿನಿಧಿ ಎಂದು ಸಾರುವುದಕ್ಕೋ ಪುರಾವೆ ಆಗಲಾರದು ಮತ್ತು ಆಗಬಾರದು ಕೂಡಾ. ದಾವೂದ್ ಇಬ್ರಾಹೀಮ್‍ನ ಬಗ್ಗೆ ಅಥವಾ ಕಸಬ್‍ನ ಬಗ್ಗೆಯೂ ಇವೇ ಮಾತುಗಳನ್ನು ಹೇಳಬೇಕು. ವ್ಯಕ್ತಿಯೋರ್ವನ ಬಾಹ್ಯ ಗುರುತುಗಳನ್ನು ನೋಡಿಕೊಂಡು ಆತನ ಧರ್ಮವನ್ನು ವ್ಯಾಖ್ಯಾನಿಸುವುದು ತಪ್ಪು. ಅವರ ತಪ್ಪುಗಳನ್ನು ಅವರ ಖಾತೆಗೆ ಸೇರಿಸುವುದೇ ನಿಜವಾದ ಧರ್ಮ. ಕ್ರೌರ್ಯ ಮನಃಸ್ಥಿತಿ ಯಾವ ಧರ್ಮದವನಲ್ಲೂ ಇರಬಹುದು. ಅಷ್ಟಕ್ಕೂ,

ಕ್ರೌರ್ಯ ಎಂಬುದು ಹತ್ಯೆಯಲ್ಲಿ ಭಾಗಿಯಾಗುವುದೋ ಬಾಂಬ್ ಸ್ಫೋಟಿಸುವುದೋ ಮಾತ್ರವಲ್ಲ, ಅದೊಂದು ಮನಃಸ್ಥಿತಿ. ದ್ವೇಷಿಸುವುದೇ ಅದರ ಪರಮ ನೀತಿ. ಭಾಷಣಗಳಲ್ಲಿ, ಬರಹಗಳಲ್ಲಿ ಕೂಡಾ ಇದು ವ್ಯಕ್ತವಾಗುತ್ತಿರುತ್ತದೆ. ಕೆಲವರು ಶಸ್ತ್ರಾಸ್ತ್ರಗಳ ಮೂಲಕ ಇದನ್ನು ವ್ಯಕ್ತಪಡಿಸುತ್ತಾರೆ. ಸದ್ಯದ ತುರ್ತು ಏನೆಂದರೆ, ಇಂತಹ ಮನಃಸ್ಥಿತಿಯನ್ನು ಪೋಷಿಸುವ ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸಂಘಟನೆಗಳ ಮೇಲೆ ನಿಗಾ ವಹಿಸುವುದು. ಅಂಥ ವಿಚಾರಧಾರೆಯೆಡೆಗೆ ಯುವಕರು ಆಕರ್ಷಿತರಾಗದಂತೆ ಕಾರ್ಯಕ್ರಮಗಳನ್ನು ಸ್ಥಳೀಯ ಮಟ್ಟದಲ್ಲಿ ಸರಕಾರದ ನೇತೃತ್ವದಲ್ಲೇ  ಹಮ್ಮಿಕೊಳ್ಳುವುದು. ಸಾಧ್ಯವಾದರೆ ಎಲ್ಲ ಧಾರ್ಮಿಕ ಕೇಂದ್ರಗಳಲ್ಲೂ ಈ ಬಗ್ಗೆ ಜಾಗೃತಿ ಮೂಡಿಸುವ ಮತ್ತು ನಿಜ ಧರ್ಮವನ್ನು ವಿವರಿಸುವ ಸಂದರ್ಭಗಳನ್ನು ಹುಟ್ಟು ಹಾಕುವುದು. ಧರ್ಮ ಮತ್ತು ಅಧರ್ಮದ ವ್ಯತ್ಯಾಸಗಳನ್ನು ಜನರಿಗೆ ಮನದಟ್ಟು ಮಾಡಿಸುವುದು.

ಯಾರನ್ನಾದರೂ ಹತ್ಯೆಗೈಯುವುದರಿಂದ ಮತ್ತು ಬಾಂಬ್ ಸ್ಫೋಟಿಸಿ ಸಾಯಿಸುವುದರಿಂದ ಧರ್ಮರಕ್ಷಣೆಯಾಗುತ್ತದೆ ಎಂದು ನಂಬುವುದೇ ಅಧರ್ಮ. ಇತರರನ್ನು ಸಾಯಿಸುವ ಮೂಲಕ ಬದುಕಿಕೊಳ್ಳಬೇಕಾದಷ್ಟು ಯಾವ ಧರ್ಮವೂ ದುರ್ಬಲ ಅಲ್ಲ. ಅದು ಸಾಯಿಸುವವರ ದೌರ್ಬಲ್ಯ. ಅವರ ದೌರ್ಬಲ್ಯವನ್ನು ಧರ್ಮದ ಮೇಲೆ ಹೊರಿಸುವುದು ಅತಿದೊಡ್ಡ ಅನ್ಯಾಯ. ಇದರ ವಿರುದ್ಧ ಧರ್ಮಾತೀತ ಜಾಗೃತಿ ಅತ್ಯಗತ್ಯ. ಹಿಂಸೆಯಲ್ಲಿ ನಂಬಿಕೆಯಿಟ್ಟಿರುವವರು ಇಂಡಿಯನ್ ಮುಜಾಹಿದೀನ್‍ನಲ್ಲಿರಲಿ ಅಥವಾ ಅಭಿನವ್ ಭಾರತ್, ಸನಾತನ್ ಸಂಸ್ಥಾದಲ್ಲಿರಲಿ, ಅವರು ಅಧರ್ಮಿಗಳು. ಅವರನ್ನು ಸಮರ್ಥಿಸದಿರುವುದೇ ನಾವು ಧರ್ಮಕ್ಕೆ ನೀಡಬಹುದಾದ ನಿಜವಾದ ಗೌರವ.

No comments:

Post a Comment