Monday 11 February 2019

ನಮ್ಮನ್ನು ಮರುಚಿಂತನೆಗೆ ಒಳಪಡಿಸಬೇಕಾದ ವಾನರ



ರಾಜ್ಯದ ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳ ಮೇಲೆ ಒಂದು ಬಗೆಯ ಮಂಕು ಕವಿದಿದೆ. ಈ ಮಂಕು ಕರಾವಳಿಯ ಉಳಿದ ಭಾಗಗಳ ಮೇಲೂ ಕವಿಯಲಿದೆಯೇ ಎಂಬ ಭಯವೂ ಕಾಡುತ್ತಿದೆ. ಮಂಗನನ್ನು ಆರಾಧಿಸುವ ಮತ್ತು ಆರಾಧಿಸದ ಸಮುದಾಯಗಳಲ್ಲಿ ಏಕ ಪ್ರಕಾರ ಮಂಗ ಭಯ ಢಾಳಾಗಿ ಕಾಣಿಸಿಕೊಂಡಿದೆ. ಸುಮಾರು 60ಕ್ಕಿಂತಲೂ ಅಧಿಕ ಮಂಗಗಳು ಈಗಾಗಲೇ ಸಾವಿಗೀಡಾಗಿವೆ. ಮಂಗಗಳು ಸಾಯುವುದೆಂದರೆ ಕಾಯಿಲೆ ಇನ್ನೂ ಜೀವಂತವಿದೆ ಎಂದರ್ಥ. ಕಂಗಿನ ತೋಟಗಳು ಹುಲುಸಾದ ಬೆಳೆಯೊಂದಿಗೆ ಕೊಯ್ಲಿಗೆ ಸಿದ್ಧವಾಗಿರುವ ಈ ಸಮಯದಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿರುವುದು ಕೃಷಿಕರನ್ನು ಕಂಗಾಲಾಗಿಸಿದೆ. ಕಂಗಿನ ತೋಟಕ್ಕೆ ಸಾಮಾನ್ಯವಾಗಿ ಮಂಗಗಳು ದಾಳಿಯಿಡುತ್ತವೆ. ಆದ್ದರಿಂದ ತೋಟಕ್ಕೆ ಹೋಗಲು ಮಾಲಿಕರಿಂದ ಕೂಲಿಯಾಳುಗಳ ವರೆಗೆ ಎಲ್ಲರಿಗೂ ಭಯ. ಹಾಗಂತ, ಮಂಗನ ಕಾಯಿಲೆ ಸಾಂಕ್ರಾಮಿಕ ರೋಗವಲ್ಲ ಎಂಬುದು ನಿಜವೇ. ಆದರೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಎಷ್ಟು ದೃಢಕಾಯರನ್ನೂ ಅದು ಅಲುಗಾಡಿಸಬಹುದು ಅನ್ನುವುದೂ ನಿಜ. ವೈರಸ್ ಪೀಡಿತ ಉಣುಗು ಕಚ್ಚಿದರೆ ಮಾತ್ರ ಹರಡುವ ಕಾಯಿಲೆ ಇದು. ಉಣುಗಿಗೆ ಕಚ್ಚುವುದಕ್ಕೆ ಪ್ರಾಯ ಭೇದ ಇಲ್ಲ. ಸಂಪತ್ತು ನೋಡಿ ಅದು ಕಚ್ಚುವುದೂ ಇಲ್ಲ. ಆದ್ದರಿಂದ ಡಿಎಂಪಿ (ಡಿ ಮಿಥೈಲ್ ಪ್ಯಾಲೆಟ್) ತೈಲವನ್ನು ಹಚ್ಚಿಕೊಳ್ಳುವಂತೆ ಈ ಭಾಗದ ಜನರಲ್ಲಿ ಜಿಲ್ಲಾಡಳಿತ ಮನವಿ ಮಾಡಿಕೊಳ್ಳುತ್ತಿದೆ. ಸಮಸ್ಯೆ ಏನೆಂದರೆ,
 ಈ ತೈಲವೇ ಈಗ ದುರ್ಲಭ ಎನಿಸಿಕೊಂಡಿದೆ. ಅಲ್ಲದೆ, ಮಂಗನ ಕಾಯಿಲೆಗೆ ಲಸಿಕೆ ತಯಾರಿಸುವ ಕೇಂದ್ರವಿರುವದು ಈ ದೇಶದಲ್ಲಿ ಒಂದೇ ಒಂದು. ಅದೂ ಬೆಂಗಳೂರಿನಲ್ಲಿ. ಅಲ್ಲಿಂದಲೇ ತಮಿಳುನಾಡು, ಕೇರಳ, ಗೋವಾ ಇತ್ಯಾದಿ ರಾಜ್ಯಗಳಿಗೂ ಸರಬರಾಜು ಆಗಬೇಕಾಗಿರುವುದರಿಂದ ಲಸಿಕೆ ಸಕಾಲಕ್ಕೆ ಪೂರೈಸಲು ಸಾಧ್ಯವಾಗದಂಥ ಸ್ಥಿತಿಯಿದೆ. ಆಘಾತಕಾರಿ ಸಂಗತಿ ಏನೆಂದರೆ, ಮಂಗನ ಕಾಯಿಲೆಯನ್ನು ಹರಡುವ ಉಣುಗು ಮನುಷ್ಯನಿಗೆ ಕಚ್ಚಿದ ತಕ್ಷಣ ರೋಗ ಲಕ್ಷಣಗಳು ಕಾಣಿಸುವುದಿಲ್ಲ. ಉಣುಗು ಕಚ್ಚಿದ ವಾರದ ಬಳಿಕ ಮನುಷ್ಯರಲ್ಲಿ ಜ್ವರ, ಚಳಿ ಇತ್ಯಾದಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹಾಗಂತ, ಈ ಲಕ್ಷಣಗಳು ಮಂಗನ ಕಾಯಿಲೆಯ ಲಕ್ಷಣವೇ ಎಂದು ಖಚಿತಪಡಿಸಿಕೊಳ್ಳಬೇಕಾದರೆ, ಕಾಯಿಲೆ ಪೀಡಿತರ ರಕ್ತದ ಮಾದರಿಗಳನ್ನು ತಪಾಸಿಸಬೇಕು. ಆದರೆ ಇಂಥ ಪ್ರಯೋಗಾಲಯ ಕರಾವಳಿ ಭಾಗದಲ್ಲಿ ಇಲ್ಲವೇ ಇಲ್ಲ. ಒಂದೋ ಬೆಂಗಳೂರಿಗೆ ಇಲ್ಲವೇ ಪುಣೆಗೆ ರಕ್ತದ ಮಾದರಿಯನ್ನು ಕಳುಹಿಸಿಕೊಟ್ಟು ಅಲ್ಲಿಂದ ಬರುವ ಫಲಿತಾಂಶಕ್ಕಾಗಿ ಕಾಯಿಲೆ ಪೀಡಿತರು ಕಾಯಬೇಕು. ಇದಕ್ಕೆ ಕನಿಷ್ಠವೆಂದರೆ 10 ದಿನಗಳು  ಬೇಕಾಗುತ್ತವೆ. 1953ರಲ್ಲಿ ಮೊತ್ತ ಮೊದಲು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಅರಣ್ಯ ಅಂಚಿನಲ್ಲಿ ಕಾಣಿಸಿಕೊಂಡ ಈ ಕಾಯಿಲೆಯನ್ನು ಮಂಗನ ಕಾಯಿಲೆಯೆಂದು ಪತ್ತೆ ಹಚ್ಚಿದ್ದೇ 1957ರಲ್ಲಿ. ವಿಶೇಷ ಏನೆಂದರೆ, 1957ರ ಬಳಿಕ ಅತಿದೊಡ್ಡ ಪ್ರಮಾಣದಲ್ಲಿ ಈ ಬಾರಿ ಈ ಕಾಯಿಲೆ ಕಾಣಿಸಿಕೊಂಡಿದೆ.
ಕಾಯಿಲೆಗಳಲ್ಲಿ ಎರಡು ಬಗೆಯಿದೆ. ಒಂದು- ಮನುಷ್ಯ ನಿರ್ಮಿತವಾದರೆ, ಇನ್ನೊಂದು ಪ್ರಾಕೃತಿಕವಾದುದು. ಮಂಗನ ಕಾಯಿಲೆಯನ್ನು ಯಾವ ದೃಷ್ಟಿಯಲ್ಲಿ ಪರಿಶೀಲಿಸಿದರೂ ಅದರ ಹರಡುವಿಕೆಯಲ್ಲಿ ಮನುಷ್ಯನ ಪಾತ್ರವಿದೆಯೆಂದೇ ಅನಿಸುತ್ತದೆ. ಮಂಗನ ಕಾಯಿಲೆಗೂ ಕಾಡಂಚಿನ ಪ್ರದೇಶಗಳಿಗೂ ಸಂಬಂಧ ಇದೆ. ಮಂಗಗಳ ವಾಸ ಸ್ಥಳ ಕಾಡು. ಸಾಮಾನ್ಯವಾಗಿ ‘ಊರಿಗೆ ದಾಳಿಯಿಟ್ಟ ಮಂಗಗಳು’ ಎಂಬ ಸುದ್ದಿಗಳನ್ನು ಮಾಧ್ಯಮಗಳಲ್ಲಿ ನಾವು ಓದುತ್ತಿರುತ್ತೇವೆ. ಇಂತಿಂಥ ಕಡೆ ಕಂಗು, ತೆಂಗು, ಬಾಳೆತೋಟಗಳು ಮಂಗಗಳ ಹಾವಳಿಯಿಂದಾಗಿ ನಾಶವಾಗಿವೆ ಎಂದು ಹೇಳಲಾಗುತ್ತದೆ. ನಿಜವಾಗಿ, ಇಂಥ ಸುದ್ದಿಗಳಲ್ಲಿ ಹೇಳದೇ ಇರುವ ಕೆಲವು ಸತ್ಯಗಳೂ ಇರುತ್ತವೆ. ಮೊದಲು ದಾಳಿಯಿಟ್ಟದ್ದು ಯಾರು ಎಂಬ ಪ್ರಶ್ನೆಯನ್ನು ಇಂಥ ಸುದ್ದಿಗಳು ಖಂಡಿತ ಎತ್ತುತ್ತವೆ. ಮಂಗಗಳು ನಾಡಿಗೆ ದಾಳಿಯಿಡುವ ಮೊದಲು ಮನುಷ್ಯ ಕಾಡಿಗೆ ದಾಳಿಯಿಟ್ಟಿದ್ದಾನೆ. ಕಾಡನ್ನು ನಾಡನ್ನಾಗಿ ಪರಿವರ್ತಿಸಿಕೊಂಡಿದ್ದಾನೆ. ತನ್ನ ವಾಸಸ್ಥಳವು ನಾಶವಾದಾಗ ಪ್ರಾಣಿಗಳು ಸಹಜವಾಗಿ ದಿಕ್ಕು ತಪ್ಪುತ್ತವೆ. ನಾಡಾಗಿ ಪರಿವರ್ತನೆಯಾಗಿರುವ ತಮ್ಮ ಕಾಡಿನಲ್ಲಿ ಮತ್ತು ಕೆಲವೊಮ್ಮೆ ದಿಕ್ಕು ತಪ್ಪಿ ಕಾಡಲ್ಲದ ನಾಡಿನಲ್ಲೂ ಅವು ಅಲೆಯುತ್ತವೆ. ಇದನ್ನೇ ಮನುಷ್ಯ ಬಹಳ ಬುದ್ಧಿವಂತಿಕೆಯಿಂದ ದಾಳಿ ಎಂದು ವ್ಯಾಖ್ಯಾನಿಸುತ್ತಾನೆ. ಮಂಗನ ಕಾಯಿಲೆಗೆ ಸಂಬಂಧಿಸಿಯೂ ಈ ಮಾತು ಅನ್ವಯಿಸುತ್ತದೆ. ಮಂಗನ ಕಾಯಿಲೆ ಎಲ್ಲೆಲ್ಲ  ಕಾಣಿಸಿಕೊಂಡಿವೆಯೋ ಅವೆಲ್ಲ ಕಾಡಂಚಿನಲ್ಲಿರುವ ಪ್ರದೇಶಗಳು. ಈ ಪ್ರದೇಶದ ಮಂದಿ ಅರಣ್ಯವನ್ನು ಒತ್ತುವರಿ ಮಾಡಿಕೊಳ್ಳುವ ಉದ್ದೇಶದಿಂದ ಗುಡ್ಡಗಳಿಗೆ ಬೆಂಕಿ ಕೊಡುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಈ ಪ್ರಕ್ರಿಯೆ ಹಲವು ವರ್ಷಗಳಿಂದ ನಡೆಯುತ್ತಲೂ ಇದೆ. ಅದರಿಂದಾಗಿ ಆಗಿರುವ ಪರಿಣಾಮ ಏನೆಂದರೆ, ಕಾಡಿನ ಸಹಜ ಹುಲ್ಲು ನಾಶವಾಗಿದೆ. ಅದರ ಜಾಗದಲ್ಲಿ ಪೊದೆ ಬೆಳೆದಿದೆ. ಈ ಪೊದೆಗಳಲ್ಲಿಯೇ ಮಂಗನ ಕಾಯಿಲೆ ಹರಡುವ ಉಣುಗುಗಳು ಭಾರೀ ಸಂಖ್ಯೆಯಲ್ಲಿ ಸೇರಿಕೊಂಡಿವೆ. ಅಂದಹಾಗೆ,
ಅಸಂಖ್ಯ ಜೀವಿಗಳ ಪೈಕಿ ಮಂಗ ಒಂದು ಜೀವಿ ಮಾತ್ರ. ಪವಿತ್ರ-ಅಪವಿತ್ರತೆಯ ಆಚೆಗೆ ಅದು ಕೇವಲ ಒಂದು ಪ್ರಾಣಿ. ಈ ಪ್ರಾಣಿ ಯಾಕೆ ಮನುಷ್ಯ ಕಂಟಕವಾಗಿ ಪರಿವರ್ತನೆಯಾಯಿತು ಎಂಬ ಬಗ್ಗೆ ಆಲೋಚಿಸಬೇಕಾದ ಸಮಯ ಇದು. ಮೊದಲನೆಯದಾಗಿ, ಮನುಷ್ಯರು ಆರಾಧನಾ ಭಾವದಿಂದ ನೋಡಬೇಕಾದ ಯಾವ ವಿಶೇಷತೆಯೂ ತನ್ನಲ್ಲಿಲ್ಲ ಎಂಬುದನ್ನು ಸತ್ತು ಬಿದ್ದಿರುವ 60ಕ್ಕಿಂತಲೂ ಅಧಿಕ ಮಂಗಗಳೂ ಬಹಿರಂಗವಾಗಿಯೇ ಸಾರಿವೆ. ಸಾವಿನಿಂದ ತಮ್ಮನ್ನೇ ರಕ್ಷಿಸಿಕೊಳ್ಳಲಾಗದ ಮತ್ತು ಮನುಷ್ಯರನ್ನೇ ಸಾಯಿಸುವ ವೈರಾಣು ತನ್ನ ದೇಹದಲ್ಲಿ ಉತ್ಪತ್ತಿಯಾಗುವುದನ್ನು ತಡೆಯಲಾಗದ ಪ್ರಾಣಿ ಅದು. ಇನ್ನೊಂದು ಸಂಗತಿ ಏನೆಂದರೆ, ಹೆಚ್ಚಿನ ರೋಗಗಳೂ ಮನುಷ್ಯ ನಿರ್ಮಿತವೇ. ಈ ಹಿಂದೆ ಗುಜರಾತ್‍ನಲ್ಲಿ ವ್ಯಾಪಕ ಸಾವು-ನೋವಿಗೆ ಕಾರಣವಾದ ಪ್ಲೇಗ್ ರೋಗದ ಬಗ್ಗೆ ಅನೇಕಾರು ಶಂಕೆಗಳಿದ್ದುವು. ಇದರಲ್ಲಿ ಒಂದು- ಪಾಶ್ಚಾತ್ಯ ರಾಷ್ಟ್ರಗಳು ಪ್ರಯೋಗಾತ್ಮಕವಾಗಿ ಪ್ಲೇಗ್ ವೈರಾಣುವನ್ನು ಗುಜರಾತ್‍ನಲ್ಲಿ ಬಿತ್ತಿದೆ ಎಂಬುದಾಗಿತ್ತು. ಹಾಗಂತ, ಬಡಪಾಯಿ ದೇಶಗಳ ಬಡಪಾಯಿ ಜನರ ಮೇಲೆ ವೈಜ್ಞಾನಿಕ ಪ್ರಯೋಗಗಳು ನಡೆಯುವುದು ಹೊಸತೂ ಅಲ್ಲ, ಸುಳ್ಳೂ ಅಲ್ಲ. ತಮ್ಮ ವೈರಿ ರಾಷ್ಟ್ರದ ಮೇಲೆ ಇನ್ನೊಂದು ರಾಷ್ಟ್ರವು ಜೈವಿಕ ಅಸ್ತ್ರವಾಗಿ ರೋಗಗಳನ್ನು ಬಳಸಿರುವ ಇತಿಹಾಸ ಈ ಜಗತ್ತಿಗಿದೆ. ಆ ಕಾರಣದಿಂದಲೇ, ಈ ಮಂಗನ ಕಾಯಿಲೆಯ ಬಗೆಗೂ ಅನುಮಾನ ವ್ಯಕ್ತವಾಗಿದೆ ಎಂದೇ ಅನಿಸುತ್ತದೆ. ಆದರೂ ಜನದಟ್ಟಣೆಯಿಲ್ಲದ, ಕಾಡಿನಂಚಿನಲ್ಲಿ ವಿರಳವಾಗಿರುವ ಜನರ ಮೇಲೆ ಯಾವುದೇ ರಾಷ್ಟ್ರ ಜೈವಿಕ ಅಸ್ತ್ರವನ್ನು ಪ್ರಯೋಗಿಸುವ ಸಾಧ್ಯತೆ ತೀರಾ ತೀರಾ ಕಡಿಮೆ. ಜೈವಿಕ ಅಸ್ತ್ರವನ್ನು ಪ್ರಯೋಗಿಸುವವರ ಉದ್ದೇಶ ಏನೆಂದರೆ, ದೊಡ್ಡ ಮಟ್ಟದಲ್ಲಿ ಜನರ ಪ್ರಾಣ ಹಾನಿಯಾಗಿಸುವುದು. ಮಂಗನ ಕಾಯಿಲೆ ಸದ್ಯ ಕಾಣಿಸಿಕೊಂಡಿರುವ ಪ್ರದೇಶಗಳನ್ನು ಪರಿಗಣಿಸಿದರೆ, ಅದು ಅಸಾಧ್ಯ. ಆದರೂ ಇವತ್ತಿನ ಕಾಯಿಲೆಗಳಿಗೆ ಕಾಯಿಲೆ ಎಂಬ ಮುಖಕ್ಕಿಂತ ಹೊರತಾದ ಬೇರೆಯದೇ ಆದ ಮುಖವೂ ಇರುತ್ತದೆ ಅನ್ನುವುದು ಸುಳ್ಳಲ್ಲ.
ಮಂಗನ ಕಾಯಿಲೆಯೆಂಬುದು ತಡೆಗಟ್ಟಲು ಸಾಧ್ಯವಿರದ ಅಪಾಯಕಾರಿ ಕಾಯಿಲೆ ಏನಲ್ಲ. ಸ್ಥಳೀಯಾಡಳಿತವು ಮುನ್ನೆಚ್ಚರಿಕೆ ವಹಿಸಿದರೆ ಮತ್ತು ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡರೆ, ಈ ಕಾಯಿಲೆಯ ಭೀತಿಯಿಂದ ಜನರನ್ನು ಮುಕ್ತಗೊಳಿಸಬಹುದು. ಸಾಕಷ್ಟು ಪ್ರಮಾಣದಲ್ಲಿ ಈ ಪ್ರದೇಶಕ್ಕೆ ಔಷಧಗಳನ್ನು ವಿತರಿಸುವುದು, ಸುಸಜ್ಜಿತ ಆಸ್ಪತ್ರೆಯನ್ನು ಈ ಪ್ರದೇಶದಲ್ಲಿ ಸ್ಥಾಪಿಸುವುದು ಮತ್ತು ರಕ್ತದ ಮಾದರಿಯನ್ನು ಪರೀಕ್ಷಿಸುವ ಪ್ರಯೋಗಾಲಯವನ್ನು ನಿರ್ಮಿಸುವುದನ್ನು ಸರಕಾರ ಮಾಡಿದರೆ, ಈ ಕಾಯಿಲೆಯನ್ನು ತಡೆಗಟ್ಟಬಹುದು. ಜೊತೆಗೇ, ಮನುಷ್ಯ ತನ್ನ ದುರಾಸೆಯನ್ನು ಕೈಬಿಟ್ಟು ಪ್ರಕೃತಿಯ ಮಾತುಗಳಿಗೆ ಕಿವಿಗೊಡುವ ಉದಾರತೆಯನ್ನು ತೋರಬೇಕು. ಇತರ ಜೀವಿ, ಜಾಲಗಳಿಗೆ ಜಾಗ ಇರುವ, ಪ್ರಕೃತಿಯ ಸಂವೇದನೆಗೆ ಕಿವಿಯಾಗುವ ಮನಸ್ಸು ಇರಬೇಕು. ಮಂಗನ ಕಾಯಿಲೆಯಲ್ಲಿ ಸಿಗುವ ಪಾಠ ಇದು.

No comments:

Post a Comment