Friday 22 December 2023

ಮುಸ್ಲಿಮ್ ಸಮುದಾಯದ ಚರ್ಚೆಗೆ ಹೊಸ ಸಾಧ್ಯತೆ ತೆರೆದುಕೊಟ್ಟ ಆಶಿಕ್




ದ.ಕ. ಜಿಲ್ಲೆಯ 24ರ ಯುವಕ ರಾಷ್ಟ್ರ ಮಟ್ಟದಲ್ಲಿ ಸುದ್ದಿಗೀಡಾಗಿದ್ದಾರೆ. ಸೋನಿ ಟಿ.ವಿ. ನಡೆಸಿಕೊಡುವ ಮಾಸ್ಟರ್ ಶೆಫ್ ಇಂಡಿಯಾ ಎಂಬ  ಬಹುಪ್ರಸಿದ್ಧ ಅಡುಗೆ ಸ್ಪರ್ಧೆಯಲ್ಲಿ ಮಂಗಳೂರಿನ ಈ ಮುಹಮ್ಮದ್ ಆಶಿಕ್ ದೇಶದಾದ್ಯಂತದ 30 ಸಾವಿರ ಸ್ಪರ್ಧಾಳುಗಳನ್ನು ಹಿಂದಿಕ್ಕಿ  ಪ್ರಥಮ ಸ್ಥಾನ ಪಡೆದು ಅದ್ಭುತ ಸಾಧನೆ ಮಾಡಿದ್ದಾರೆ. ಕಳೆದ ವರ್ಷವೂ ಸೋನಿ ಟಿ.ವಿ.ಯ ಸ್ಪರ್ಧೆಯಲ್ಲಿ ಈ ಆಶಿಕ್ ಸ್ಪರ್ಧಿಸಿದ್ದರು.  ಆದರೆ ವಿಫಲರಾಗಿದ್ದರು. ಈ ಬಾರಿ ಮತ್ತೆ ಸ್ಪರ್ಧಿಸಿದರು. ಹೊಟೇಲ್ ಮ್ಯಾನೇಜ್‌ಮೆಂಟ್ ಕಲಿಯಬೇಕೆಂಬ ಬಯಕೆ ಇಟ್ಟುಕೊಂಡರೂ  ಆರ್ಥಿಕ ಪರಿಸ್ಥಿತಿಯಿಂದಾಗಿ ಅದನ್ನು ಕೈಬಿಟ್ಟ ಯುವಕನೋರ್ವ ಸ್ವಪ್ರಯತ್ನದಿಂದ ಅದ್ಭುತ ಸಾಧಕನಾಗಿ ಮೂಡಿ ಬಂದಿರುವುದನ್ನು ಒಟ್ಟು  ಸಮಾಜ ಅದರಲ್ಲೂ ಮುಸ್ಲಿಮ್ ಸಮುದಾಯ ಅವಲೋಕನಕ್ಕೆ ಒಳಪಡಿಸುವುದು ಸಕಾಲಿಕವಾದುದು.

ದಕ್ಷಿಣ  ಕನ್ನಡವನ್ನು ಕೋಮುಸೂಕ್ಷ್ಮ  ಜಿಲ್ಲೆ ಎಂದು ಕರೆಯುವುದಿದೆ. ಈ ಹೆಸರು ವಿನಾಕಾರಣ ಬಂದಿಲ್ಲ. ಅನೈತಿಕ ಪೊಲೀಸ್‌ಗಿರಿ, ಗುಂಪು  ಥಳಿತ, ದ್ವೇಷಭಾಷಣ, ಕೋಮುಗಲಭೆಗಳನ್ನು ಒಡಲಲ್ಲಿ ಇಟ್ಟುಕೊಂಡು ಆಗಾಗ ಅಷ್ಟಿಷ್ಟು ಹೊರಚೆಲ್ಲಿ ದಾವಾಗ್ನಿ ಸೃಷ್ಟಿಸುವ ಜಿಲ್ಲೆ ಇದು.  ಇದರ ಪರಿಣಾಮ ಇಲ್ಲಿನ ಜನಜೀವನದ ಮೇಲೂ ಆಗಿದೆ. ಮುಖ್ಯವಾಗಿ, ಮುಸ್ಲಿಮ್ ಸಮುದಾಯದ ಮೇಲೆ ಈ ವಾತಾವರಣ ಸಾಕಷ್ಟು  ಅಡ್ಡ ಪರಿಣಾಮವನ್ನೂ ಬೀರಿದೆ. ಸಮುದಾಯದ ಮಂದಿ ಒಂದುಕಡೆ ಒಟ್ಟು ಸೇರಿದರೆ ರಾಜಕೀಯ ಮಾತನಾಡದೇ ಮತ್ತು  ರಾಜಕಾರಣಿಗಳ ಕೋಮುದ್ವೇಷದ ಮಾತುಗಳನ್ನು ಉಲ್ಲೇಖಿಸಿ ಚರ್ಚಿಸದೇ ವಿರಮಿಸುವುದು ಕಡಿಮೆ. ವಾಟ್ಸಪ್ ಗ್ರೂಪ್‌ಗಳಲ್ಲೂ  ಇಂಥವುಗಳದ್ದೇ  ಕಾರುಬಾರು. ದ್ವೇಷಭಾಷಣಗಳನ್ನು ಖಂಡಿಸುವುದು, ರಾಜಕಾರಣಿಯ ಮುಸ್ಲಿಮ್ ದ್ವೇಷಿ ಹೇಳಿಕೆಯನ್ನು ಪ್ರಶ್ನಿಸುವುದು,  ಮುಸ್ಲಿಮ್ ಸಮುದಾಯ ರಾಜಕೀಯವಾಗಿ ಏನು ಮಾಡಬೇಕೆಂದು ಚರ್ಚಿಸುವುದು, ಯಾವ ರಾಜಕಾರಣಿ ಮತ್ತು ರಾಜಕೀಯ ಪಕ್ಷ  ಮುಸ್ಲಿಮರಿಗೆ ಅನಾನುಕೂಲ ಎಂದೆಲ್ಲಾ ವಿಶ್ಲೇಷಿಸುವುದನ್ನೇ ಮುಸ್ಲಿಮ್ ಸಮುದಾಯದ ಹೆಚ್ಚಿನ ವಾಟ್ಸಪ್ ಗ್ರೂಪ್‌ಗಳಲ್ಲಿ  ಮಾಡಲಾಗುತ್ತಿದೆ. ಇವುಗಳು ತಪ್ಪು ಎಂದಲ್ಲ. ಆದರೆ ಮುಸ್ಲಿಮ್ ಸಮುದಾಯದ ಆದ್ಯತೆಯೇ ಇದಾಗಿಬಿಟ್ಟರೆ, ಅದರ ನಕಾರಾತ್ಮಕ  ಪರಿಣಾಮವನ್ನು ಹೊಸ ತಲೆಮಾರು ಅನುಭವಿಸಬೇಕಾಗುತ್ತದೆ. ಇಂಥ ವಾಟ್ಸಾಪ್ ಚರ್ಚೆಗಳು ಅಲ್ಲೇ  ಉಳಿಯದೇ ಆ ಬಳಿಕ ಮನೆಯಲ್ಲೂ ಪ್ರಸ್ತಾಪವಾಗುತ್ತದೆ. ಪದೇಪದೇ ಇಂಥದ್ದೇ  ಚರ್ಚೆ-ವಿಶ್ಲೇಷಣೆಯನ್ನು ಓದುತ್ತಾ ಓದುತ್ತಾ ವ್ಯಕ್ತಿ ಅನಗತ್ಯ ಆತಂಕ ಮತ್ತು  ಗುಂಗಿಗೆ ಬೀಳಬಹುದು. ನಿಜವಾಗಿ,

ಅಭದ್ರತೆಯೇ ಬದುಕಾಗುವುದು ಅಪಾಯಕಾರಿ. ಎಲ್ಲೋ  ನಡೆಯುವ ದ್ವೇಷ ಭಾಷಣ, ಅಮಾನವೀಯ ಕೃತ್ಯಗಳನ್ನು ಇನ್ನೆಲ್ಲೋ  ಕುಳಿತು  ದಿನಾ ಚರ್ಚಿಸುವುದರಿಂದ ನಿರ್ಮಾಣಾತ್ಮಕ ಆಲೋಚನೆಗೆ ತಡೆ ಬೀಳಬಹುದು. ಅದು ಮನೆಯ ಮಕ್ಕಳ ಮೇಲೂ ಪರಿಣಾಮ  ಬೀರಬಹುದು. ಸ್ವತಂತ್ರ ಆಲೋಚನೆಗಳೊಂದಿಗೆ, ಸಮೃದ್ಧವಾಗಿ ಬೆಳೆಯಬೇಕಾದ ಮಕ್ಕಳು ಆತಂಕ, ಅನುಮಾನ ಮತ್ತು ನಕಾರಾತ್ಮಕ  ಧೋರಣೆಯೊಂದಿಗೆ ಬೆಳೆಯಬಹುದು. ಮುಹಮ್ಮದ್ ಆಶಿಕ್‌ನ ಸಾಧನೆ ಈ ಎಲ್ಲ ಹಿನ್ನೆಲೆಯಲ್ಲಿ ಮುಖ್ಯವಾಗುತ್ತದೆ. ಈ ಯುವಕ ಈ  ಮಟ್ಟಕ್ಕೆ ಬೆಳೆದುದು ಪವಾಡದಿಂದಲ್ಲ. ಸ್ಪಷ್ಟ ಗುರಿ, ಅಪಾರ ಬದ್ಧತೆ ಮತ್ತು ಛಲವೇ ಈ ಆಶಿಕ್‌ನನ್ನು ದೇಶ-ವಿದೇಶದ ತೀರ್ಪುಗಾರರು  ಮಾಸ್ಟರ್ ಶೆಫ್ ಆಫ್ ಇಂಡಿಯಾವಾಗಿ ಗುರುತಿಸಿದ್ದಾರೆ. ಮನೆಯಲ್ಲೇ  ಶುಚಿ-ರುಚಿಯಾದ ಆಹಾರ ತಯಾರಿಸಿ ಕೊಡುವಲ್ಲಿಂದ  ಆರಂಭವಾದ ಈ ಯುವಕನ ಪ್ರಯಾಣವು, ಕಾಲೇಜುಗಳ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಸ್ವತಃ ಸ್ಟಾಲ್ ಹಾಕಿ ವ್ಯಾಪಾರ ಮಾಡುವಲ್ಲಿ  ವರೆಗೆ ಮತ್ತು ಅಲ್ಲಿಂದ ಕುಲ್ಕಿ ಶರ್ಬತ್ ಎಂಬ ಪಾನೀಯ ಮಾರಾಟದವರೆಗೂ ಬೆಳೆಯಿತು. ದ್ವಿತೀಯ ಪಿಯುಸಿಯ ಬಳಿಕ ಆರ್ಥಿಕ  ಅಡಚಣೆಯಿಂದ ಕಲಿಕೆ ಮುಂದುವರಿಸಲಾಗದೇ ಸೇಲ್ಸ್ಮ್ಯಾನ್ ಕೆಲಸಕ್ಕೆ ಸೇರಿಕೊಂಡ ಆಶಿಕ್, 20ರ ಹರೆಯಲ್ಲೇ  `ಕುಲ್ಕಿ ಹಬ್' ಎಂಬ  ವಿವಿಧ ಪಾನೀಯಗಳ ಅಂಗಡಿ ತೆರೆದರು. ತಾನು ಶೆಫ್ ಆಗಬೇಕು ಎಂಬ ಕನಸನ್ನು ಎಂದೂ ಬಿಟ್ಟು ಕೊಡದ ಛಲದ ಸುಖವನ್ನು  ಇಂದು ಈ ಆಶಿಕ್ ಅನುಭವಿಸುತ್ತಿದ್ದಾರೆ. ಅಂದಹಾಗೆ,

ಕೋಮು ಸಂಬಂಧಿ  ವಿಷಯಗಳಿಗಾಗಿಯೇ ರಾಷ್ಟ್ರ ಮಟ್ಟದಲ್ಲಿ ಆಗಾಗ ಸುದ್ದಿಗೀಡಾಗುವ ಜಿಲ್ಲೆಯ ತರುಣನೋರ್ವ ಅತ್ಯಂತ  ಚೇತೋಹಾರಿ ಮತ್ತು ಪ್ರೇರಣದಾಯಿ ಸಂಗತಿಗಾಗಿ ರಾಷ್ಟçಮಟ್ಟದಲ್ಲಿ ಸುದ್ದಿಗೀಡಾಗುವುದು ಮುಸ್ಲಿಮ್ ಸಮುದಾಯದ ಚರ್ಚೆಯ ದಿಕ್ಕನ್ನು  ಬದಲಿಸುವುದಕ್ಕೆ ಪ್ರೇರಣೆಯಾಗಬೇಕು. ಈ ಮುಹಮ್ಮದ್ ಆಶಿಕ್ ಒಂದಷ್ಟು ಸಮಯದವರೆಗೆ ಸಮುದಾಯದ ವಾಟ್ಸಪ್ ಚರ್ಚೆಗಳಲ್ಲಿ  ಸ್ಥಾನ ಪಡೆಯಬೇಕು. ಪ್ರತಿ ಮನೆ ಮನೆಗಳಲ್ಲೂ ಈ ಆಶಿಕ್ ಚರ್ಚಾವಸ್ತುವಾಗಬೇಕು. ಹೊಸ ತಲೆಮಾರು ಇಂಥ ಸಾಧಕರ ಕತೆಗಳನ್ನು  ಕೇಳಿಕೊಂಡು ಬೆಳೆಯಬೇಕು. ದಿನವಿಡೀ ಕಾಂಗ್ರೆಸ್ಸು, ಬಿಜೆಪಿ, ಅದು, ಇದು ಎಂದು ಚರ್ಚಿಸುವುದಕ್ಕಿಂತ ಬೆಳೆಯುತ್ತಿರುವ ಪೀಳಿಗೆಯನ್ನು  ಅತ್ಯಂತ ನಿರ್ಮಾಣಾತ್ಮಕವಾಗಿ ಬೆಳೆಸುವುದು ಹೇಗೆ, ಅವರನ್ನು ಸಾಧಕರಾಗಿ ಪರಿವರ್ತಿಸುವುದು ಹೇಗೆ ಎಂಬ ಬಗ್ಗೆ ಗಂಭೀರ  ಅವಲೋಕನಗಳು ಸೋಶಿಯಲ್ ಮೀಡಿಯಾದಲ್ಲಿ ನಡೆಯಬೇಕು. ಅಷ್ಟೇ ತೀವ್ರವಾಗಿ ಇಂಥ ಚರ್ಚೆ ಗಳು ಪ್ರತಿ ಮನೆಮನೆಯಲ್ಲೂ  ನಡೆಯಬೇಕು. ಮಕ್ಕಳು ಈ ಚರ್ಚೆಯನ್ನು ಕೇಳಿ ಬೆಳೆಯುವುದರಿಂದ ಅವರಲ್ಲೂ ನಕಾರಾತ್ಮಕ ಭಾವಗಳು ಹೊರಟು ಹೋಗಿ ಆಶಾವಾದ  ತುಂಬಿಕೊಳ್ಳುತ್ತದೆ. ತಾವೂ ಆಶಿಕ್ ಆಗಬೇಕು ಅಥವಾ ಸಾಧಕರಾಗಿ ಗುರುತಿಸಿಕೊಳ್ಳಬೇಕು ಎಂಬ ಛಲ ತುಂಬುತ್ತದೆ. 

ಈ ಬಾರಿಯ  ನೀಟ್ ಪರೀಕ್ಷೆಯಲ್ಲಿ ಮುಸ್ಲಿಮ್ ಸಮುದಾಯದ ವ್ಯಕ್ತಿ ಮೊದಲ 100 ರ‍್ಯಾಂಕಲ್ಲೂ ಕಾಣಿಸಿಕೊಂಡಿಲ್ಲ. ಅಬ್ದುಲ್ ಬಾಸಿತ್ ಅನ್ನುವ  ಪ್ರತಿಭಾವಂತ ಪಡೆದಿರುವ 113ನೇ ರ‍್ಯಾಂಕೇ ಸಮುದಾಯದ ಪಾಲಿನ ಕಿರೀಟ. ತಮಿಳುನಾಡಿನ ಪ್ರಬಂಜನ್ ಮತ್ತು ಆಂಧ್ರದ ವರುಣ್  ಚಕ್ರವರ್ತಿ ಒಟ್ಟು 720 ಅಂಕಗಳಲ್ಲಿ 720 ಅಂಕಗಳನ್ನೂ ಪಡೆದು ಮೊದಲ ಸ್ಥಾನ ಪಡೆದಿದ್ದರು. ಈ ಬಗೆಯ ಪೈಪೋಟಿಯತ್ತ ಮುಸ್ಲಿಮ್  ಸಮುದಾಯದ ಮಕ್ಕಳನ್ನು ತರಬೇತುಗೊಳಿಸಬೇಕು. ಐಐಟಿ, ಐಐಐಟಿ, ಐಐಎಸ್‌ಇ, ಎನ್‌ಐಟಿ ಮತ್ತು ಐಐಎಂಗಳಲ್ಲಿ ಮುಸ್ಲಿಮ್  ಸಮುದಾಯದ ಅನುಪಾತ 1.92% ಎಂಬುದು ಈಗಿನ ಲೆಕ್ಕಾಚಾರ. ಈ ಅಂಕಿಅಂಶಗಳನ್ನು ಎತ್ತಿ ಉತ್ತಮಗೊಳಿಸುವುದಕ್ಕೆ ಪೂರಕ  ಯೋಚನೆ ಮತ್ತು ಯೋಜನೆಗಳಿಗೆ ಸಮುದಾಯ ಚಾಲನೆ ನೀಡಬೇಕು. ಅದಕ್ಕೆ ಪ್ರಥಮ ಹೆಜ್ಜೆಯಾಗಿ ಸಕಾರಾತ್ಮಕ ಆಲೋಚನೆಗಳಿಗೆ  ಆದ್ಯತೆ ನೀಡಬೇಕು. ಮುಸ್ಲಿಮ್ ಸಮುದಾಯ ಬರಹ, ಭಾಷಣ, ಸೋಶಿಯಲ್ ಮೀಡಿಯಾ ಚರ್ಚೆ ಗಳು ಮತ್ತು ಮನೆಯ  ಮಾತುಕತೆಗಳೆಲ್ಲವೂ ಹೊಸ ಪೀಳಿಗೆಯ ಪಾಲಿಗೆ ಆಸಕ್ತಿಕರವಾಗುವಂತೆ ಮತ್ತು ಸಾಧನೆಗೆ ಪ್ರೇರಣೆಯಾಗುವಂತೆ ಇರಬೇಕು. ಭಾರತದ  ಚಂದ್ರಯಾನದ ಯಶಸ್ಸಿನಲ್ಲಿ ಪಾತ್ರಧಾರಿಗಳಾಗಿರುವ ಸನಾ ಫೈರೋಝï, ಯಾಸಿರ್ ಅಮ್ಮಾರ್, ಮುಹಮ್ಮದ್ ಶಬೀರ್ ಆಲಂ, ಅರೀಬ್  ಅಹ್ಮದ್, ಅಖ್ತದಾರ್ ಅಬ್ಬಾಸ್, ಇಶ್ರತ್ ಜಮಾಲ್, ಖುಶ್ಬೂ ಮಿರ್ಝಾ ಮುಂತಾದ ವಿಜ್ಞಾನಿಗಳನ್ನು ಸಂದರ್ಭಾ ನುಸಾರ ಮಕ್ಕಳ  ಮುಂದೆ ಪ್ರಸ್ತಾಪಿಸಿ ಕನಸು ಕಟ್ಟಬೇಕು. ಇದೇನೂ ಅಸಾಧ್ಯವಲ್ಲ. ಪ್ರತಿ ಮಗುವೂ ವಿಶಿಷ್ಟ. ಸಾಹಸ ಮತ್ತು ಸಾಧನೆ ಮಕ್ಕಳನ್ನು  ಆಕರ್ಷಿಸುವಷ್ಟು ಇನ್ನಾವುದೂ ಆಕರ್ಷಿಸುವುದಿಲ್ಲ. ಒಂದುವೇಳೆ, ಮನೆಯನ್ನು ಸಾಧಕರ ಕುರಿತಾದ ಮಾತಿನ ಮಂಟಪವಾಗಿಸಿಬಿಟ್ಟರೆ  ಮತ್ತು ಕಠಿಣ ಸವಾಲುಗಳನ್ನೂ ಎದುರಿಸಿ ವಿಜಯಿಯಾದವರ ಸಾಹಸಗಾಥೆಗೆ ಮೀಸಲಾಗಿಸಿದರೆ ಅದನ್ನು ಆಲಿಸುತ್ತಾ ಬೆಳೆಯುವ ಮಗು  ಅದನ್ನೇ ಕನಸುತ್ತದೆ. ಅಂಥದ್ದೇ  ಬದುಕು ರೂಪಿಸಿಕೊಳ್ಳಲು ಹವಣಿಸುತ್ತದೆ. ಸದ್ಯ,

ಮುಹಮ್ಮದ್ ಆಶಿಕ್ ಪ್ರತಿ ಮನೆಯ ಬೆರಗಾಗಿ ಚರ್ಚೆಗೆ ಒಳಗಾಗುವುದರಿಂದ ಬೆಳೆಯುವ ಪೀಳಿಗೆಯಲ್ಲಿ ಹೊಸ ಕನಸು ಹುಟ್ಟಲು  ಅವಕಾಶ ಒದಗಿಸುತ್ತದೆ. ಬರೇ ಧರ್ಮ ದ್ವೇಷ ಹೇಳಿಕೆಗಳು ಮತ್ತು ಪ್ರತಿ ಹೇಳಿಕೆಗಳನ್ನೇ ಇಡೀ ದಿನ ಚರ್ಚಿಸುತ್ತಾ ಅದನ್ನೇ ಮುಸ್ಲಿಮ್  ಸಮುದಾಯದ ಆದ್ಯತಾ ವಿಷಯವಾಗಿ ಮಾರ್ಪಡಿಸುವುದರಿಂದ ಮುಸ್ಲಿಮ್ ಸಮುದಾಯ ದೂರ ನಿಲ್ಲಬೇಕಾಗಿದೆ. ಮುಸ್ಲಿಮ್  ಸಮುದಾಯದ ಆದ್ಯತೆಗಳನ್ನು ಮುಸ್ಲಿಮ್ ಸಮುದಾಯವೇ ನಿರ್ಧರಿಸಬೇಕು. ಇನ್ನಾರೋ ಹಾಕಿ ಕೊಡುವ ರಂಗಸ್ಥಳದಲ್ಲಿ ನಿಂತು ಅವರ  ಆದೇಶದಂತೆ ಕುಣಿಯುವುದರಿಂದ ಸಮುದಾಯಕ್ಕೆ ಯಾವ ಲಾಭವೂ ಇಲ್ಲ. ಈ ಕುಣಿತವನ್ನೇ ಬೆಳೆಯುವ ಪೀಳಿಗೆಗಳೂ ಕಲಿಯುತ್ತವೆ  ಮತ್ತು ಅವೂ ಅದನ್ನೇ ಮುಂದುವರಿಸುತ್ತವೆ. ಭಯಪಡುವವರು ಇರುವವರೆಗೆ ಭಯಪಡಿಸುವವರು ಇದ್ದೇ  ಇರುತ್ತಾರೆ. ಇದೊಂದು  ಮುಗಿಯದ ನಾಟಕ. ಮುಸ್ಲಿಮ್ ಸಮುದಾಯ ಇಂಥ ನಕಾರಾತ್ಮಕ ಚರ್ಚೆಗಳಿಂದ ಹೊರಬಂದು ಸಕಾರಾತ್ಮಕ ಚರ್ಚೆಗಳಿಗೆ  ಹೊರಳಬೇಕು. ಪ್ರತಿ ಮನೆಯಲ್ಲೂ ಮುಹಮ್ಮದ್ ಆಶಿಕ್‌ನಂಥ ಸಾಧಕರು ಚರ್ಚಾ ವಿಷಯವಾಗಬೇಕು. ಹೊಸ ಪೀಳಿಗೆ ಇಂಥ  ಚರ್ಚೆಗಳನ್ನೇ ಆಲಿಸಿ ಬೆಳೆಯಬೇಕು. ಇದು ಖಂಡಿತ ಸಾಧ್ಯ. ತನ್ನ ಅಪೂರ್ವ ಛಲ ಮತ್ತು ಆತ್ಮವಿಶ್ವಾಸದಿಂದ ಅಮೋಘ ಸಾಧನೆ  ಮಾಡಿದ ಆಶಿಕ್‌ಗೆ ಅಭಿನಂದನೆಗಳು.

No comments:

Post a Comment