Monday, 23 December 2024

ವಕ್ಫ್: ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸಲು ಹೋಗಿ ಸ್ವಯಂ ಕಟಕಟೆಗೇರಿದವರ ಕತೆ





ಎರಡ್ಮೂರು ತಿಂಗಳ ಹಿಂದೆ ಭಾರೀ ವಿಜೃಂಭಣೆಯಿಂದ  ಉದ್ಘಾಟನೆಗೊಂಡ ‘ವಕ್ಫ್’ ವಿಷಯ ನಿಧಾನಕ್ಕೆ ತನ್ನೆಲ್ಲಾ  ಆಕರ್ಷಣೆಯನ್ನು ಕಳಕೊಂಡು ಮುಗಿದ ಅಧ್ಯಾಯವಾಗುವ ಹಂತಕ್ಕೆ ಬಂದು ನಿಂತಿದೆ.

ಅಸ್ತಿತ್ವದಲ್ಲಿರುವ ವಕ್ಫ್ ಕಾಯ್ದೆಗೆ ತಿದ್ದುಪಡಿ ಮಾಡುವುದಾಗಿ ಬ್ಯಾಂಡು-ಮದ್ದಳೆಯೊಂದಿಗೆ ಘೋಷಿಸಿದ ಕೇಂದ್ರ ಸರಕಾರ,  ವಕ್ಫ್ ತಿದ್ದುಪಡಿ ಮಸೂದೆಯನ್ನು ಪಾರ್ಲಿಮೆಂಟ್‌ನಲ್ಲೂ ಮಂಡಿಸಿತು. ಆ ಕ್ಷಣದಿಂದ ಮಾಧ್ಯಮಗಳಲ್ಲಿ ಕಟ್ಟುಕತೆಗಳ ಕಂತೆ  ಕಂತೆ ಸುಳ್ಳುಗಳು ಪ್ರಸಾರವಾಗತೊಡಗಿದುವು. ಸ್ವಾತಂತ್ರ‍್ಯ ಲಭಿಸಿ 75 ವರ್ಷಗಳ ವರೆಗೆ ವಿವಾದವೇ ಆಗದಿದ್ದ ಮತ್ತು  ಹಿಂದೂಗಳ ಆಸ್ತಿಗಳಿಗೆ ಸಂಚಕಾರವೆಂದು  ಗುರುತಿಸಿಕೊಳ್ಳದಿದ್ದ ವಕ್ಫ್ ಕಾಯ್ದೆಯು ದಿಢೀರ್ ಆಗಿ ಕೋರೆ ಹಲ್ಲುಗಳುಳ್ಳ,  ಚೂಪು ಉಗುರುಗಳು ಮತ್ತು ರಾಕ್ಷಸ ಗುಣಗಳುಳ್ಳ ಹಿಂದೂ ವಿರೋಧಿ ಕಾಯ್ದೆಯಾಗಿ ಗುರುತಿಸಿಕೊಂಡಿತು. ಟಿವಿ ಚಾನೆಲ್‌ಗಳ ಆ್ಯಂಕರ್‌ಗಳು ಎಲ್ಲಿಯವರೆಗೆ ಭೀತಿಯನ್ನು ಹುಟ್ಟಿಸಿದರೆಂದರೆ, ‘ಓರ್ವ ಮುಸ್ಲಿಮ್ ವ್ಯಕ್ತಿ ಹಿಂದೂ ವ್ಯಕ್ತಿಯ ಮನೆಯ ಅಂಗಳದಲ್ಲಿ ನಿಂತು, ‘ಇದು ವಕ್ಫ್ ಭೂಮಿ’ ಎಂದು ಹೇಳಿದರೆ ಸಾಕು, ಅದು ವಕ್ಫ್ ಆಸ್ತಿಯಾಗಿ ಮಾರ್ಪಡುತ್ತದೆ..’  ಎಂದು ಹೇಳಿದರು. ಇದನ್ನೇ ರಾಜಕಾರಣಿಗಳೂ ಹೇಳತೊಡಗಿದರು. ವಕ್ಫ್ ಟ್ರಿಬ್ಯೂನಲ್ ಅನ್ನು ‘ಖಾಝಿ  ನ್ಯಾಯಾಲಯದಂತೆ’ ಬಿಂಬಿಸಿದರು. ಮುಸ್ಲಿಮರಿಂದ ಮುಸ್ಲಿಮರಿಗೆ ಮತ್ತು ಮುಸ್ಲಿಮರಿಗೋಸ್ಕರ ಇರುವ ನ್ಯಾಯಾಲಯ  ಎಂದು ವಕ್ಫ್ ಟ್ರಿಬ್ಯೂನಲ್ ಅನ್ನು ವ್ಯಾಖ್ಯಾನಿಸಿದರು. ಈ ದೇಶದಲ್ಲಿ ಅತೀ ಹೆಚ್ಚು ಭೂಮಿ ರೈಲ್ವೆ ಇಲಾಖೆಯಲ್ಲಿದ್ದರೆ  ನಂತರದ ಸ್ಥಾನ ವಕ್ಫ್ ಇಲಾಖೆಯದ್ದು ಎಂದೂ ಪ್ರಚಾರ ಮಾಡಿದರು.
ವಕ್ಫ್ ತಿದ್ದುಪಡಿ ಮಸೂದೆಯನ್ನು ಪಾರ್ಲಿಮೆಂಟಲ್ಲಿ ಮಂಡಿಸುವ ಕೇಂದ್ರ ಸರಕಾರದ ಹಿಂದಿನ ಉದ್ದೇಶವೂ ಇಂಥ  ಚರ್ಚೆಗಳನ್ನು ಹುಟ್ಟು ಹಾಕುವುದೇ ಇದ್ದಿರಬೇಕು. ಮುಸ್ಲಿಮರನ್ನು ಹಿಂದೂ ವಿರೋಧಿಗಳಂತೆ ಮತ್ತು ಈ ದೇಶದ ಯಾವ  ಕಾನೂನೂ ಅನ್ವಯವಾಗದ ವಿಶೇಷ ದರ್ಜೆಯ ಸಮುದಾಯದಂತೆ ಬಿಂಬಿಸುವುದನ್ನು ಕೇಂದ್ರ ಬಯಸಿರಬೇಕು.  ಮಸೂದೆಯನ್ನು ಪಾರ್ಲಿಮೆಂಟಲ್ಲಿ ಮಂಡಿಸುವ ಮೂಲಕ ಕೇಂದ್ರ ಸರಕಾರ ಈ ತಂತ್ರದಲ್ಲಿ ಯಶಸ್ಸನ್ನೂ ಪಡೆಯಿತು.  

ಮುಸ್ಲಿಮ್ ಸಮುದಾಯದ ಪಾಲಿಗೆ ಇದು ದಿಢೀರ್ ಸವಾಲಾಗಿತ್ತು. ಮಾಧ್ಯಮಗಳು ಮತ್ತು ರಾಜಕಾರಣಿಗಳು  ಹರಿಯಬಿಡುತ್ತಿರುವ ಮಾಹಿತಿಗಳು ಮತ್ತು ವ್ಯಾಖ್ಯಾನಗಳಿಗೆ ತರ್ಕಬದ್ಧ ಮತ್ತು ಆಧಾರರಹಿತ ಉತ್ತರ ನೀಡುವುದಕ್ಕೆ  ಮಾಹಿತಿಗಳನ್ನು ಕಲೆ ಹಾಕಬೇಕಿತ್ತು. ಅಸ್ತಿತ್ವದಲ್ಲಿರುವ ವಕ್ಫ್ ಕಾಯ್ದೆಯಲ್ಲಿ ಏನೇನಿದೆ ಮತ್ತು ತಿದ್ದುಪಡಿ ಕಾಯ್ದೆಯಲ್ಲಿ ಏನೇನು  ಇದೆ ಎಂಬುದನ್ನು ಅಧ್ಯಯನ ನಡೆಸಬೇಕಿತ್ತು. ಸೋಶಿಯಲ್ ಮೀಡಿಯಾವೂ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಭಾರೀ  ಬಿರುಸಿನಿಂದ ಹಂಚಿಕೆಯಾಗುತ್ತಿರುವ ಸುದ್ದಿಗಳಲ್ಲಿ ಸತ್ಯವೆಷ್ಟು ಮತ್ತು ಸುಳ್ಳೆಷ್ಟು ಎಂಬುದನ್ನು ಜರಡಿ ಹಿಡಿದು  ವಿಭಜಿಸಬೇಕಿತ್ತು. ಮುಸ್ಲಿಮ್ ಸಮುದಾಯದ ಮುಂದಿದ್ದ ಈ ಸವಾಲಿನ ಸಣ್ಣ ಅವಧಿಯನ್ನು ಮುಸ್ಲಿಮ್ ದ್ವೇಷಿಗಳು ಚೆನ್ನಾಗಿ  ಬಳಸಿಕೊಂಡರು. ಇದೇವೇಳೆ,

ಕೇಂದ್ರ ಸರಕಾರ ವಕ್ಫ್ ತಿದ್ದುಪಡಿ ಮಸೂದೆಯ ಪರಿಶೀಲನೆಗಾಗಿ ಜಂಟಿ ಪಾರ್ಲಿಮೆಂಟರಿ ಸಮಿತಿ(ಜೆಪಿಸಿ)ಯನ್ನು  ರಚಿಸಿತು. ನಿಜವಾಗಿ, ಕೇಂದ್ರ ಸರಕಾರಕ್ಕೆ ಈ ಜೆಪಿಸಿ ರಚನೆ ಇಷ್ಟವಿರಲಿಲ್ಲ. ತರಾತುರಿಯಿಂದ ಕಾಯ್ದೆಯನ್ನು ಅಂಗೀಕರಿಸಿ  ಮುಸ್ಲಿಮ್ ಸಮುದಾಯವನ್ನು ಕೆರಳಿಸುವ ಉದ್ದೇಶ ಇತ್ತೋ ಏನೋ? ಆದರೆ ವಿರೋಧ ಪಕ್ಷಗಳ ಒತ್ತಡ ಮತ್ತು ಮೈತ್ರಿ  ಪಕ್ಷಗಳ ಪರೋಕ್ಷ ಒತ್ತಡಗಳಿಗೆ ಮಣಿದು ಜೆಪಿಸಿಯನ್ನು ರಚಿಸಿತು. ಇದು ಅಸ್ತಿತ್ವದಲ್ಲಿರುವ ವಕ್ಫ್ ಕಾಯ್ದೆಯನ್ನು ಮತ್ತು  ಮಾಧ್ಯಮಗಳು ಹಾಗೂ ರಾಜಕಾರಣಿಗಳು ಹರಡುತ್ತಿರುವ ಸುಳ್ಳುಗಳನ್ನು ಜನರ ಮುಂದಿಡುವುದಕ್ಕೆ ಮುಸ್ಲಿಮರಿಗೆ ಅವಕಾಶವನ್ನು ಒದಗಿಸಿತು. ಒಂದು ಕಡೆ,
ಜೆಪಿಸಿಯ ಸದಸ್ಯರು ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿರುವ ಲೋಪಗಳನ್ನು ಬಹಿರಂಗಕ್ಕೆ ತಂದರೆ ಇನ್ನೊಂದು ಕಡೆ ವಿವಿಧ  ಮುಸ್ಲಿಮ್ ಸಂಘಟನೆಗಳು ವಕ್ಫ್ ನ  ಹಿನ್ನೆಲೆ ಮತ್ತು ಅದರ ಮಹತ್ವವನ್ನು ಸಾರ್ವಜನಿಕವಾಗಿ ವಿವರಿಸತೊಡಗಿದರು. ಈ  ದೇಶದ ಸಾವಿರಾರು ಮಂದಿ ಸೋಶಿಯಲ್ ಮೀಡಿಯಾದ ಮೂಲಕ ವಕ್ಫ್ ನ  ಸುತ್ತ ಅಧ್ಯಯನ ಆಧಾರಿತ ಮಾಹಿತಿಗಳನ್ನು  ಹಂಚಿಕೊಳ್ಳತೊಡಗಿದರು. ಹೀಗೆ ಸುಳ್ಳಿಗೆ ಸತ್ಯದ ಮೂಲಕ ಒಂದೊಂದೇ  ಏಟುಗಳು ಬೀಳತೊಡಗಿದಂತೆಯೇ ಚರ್ಚೆಯನ್ನು ಹುಟ್ಟು ಹಾಕಿದವರೇ ಮುಕ್ತಾಯಕ್ಕೆ ಅವಸರಿಸತೊಡಗಿದರು. ನಿಜವಾಗಿ,

ವಕ್ಫ್ ಟ್ರಿಬ್ಯೂನಲ್ ಎಂಬುದು ಕುಟುಂಬ ನ್ಯಾಯಾಲಯದಂತೆ ಶೀಘ್ರ ನ್ಯಾಯ ವಿತರಣೆಗಾಗಿ ಮಾಡಿಕೊಂಡ ವ್ಯವಸ್ಥೆಯೇ  ಹೊರತು ಅವೇನೂ ಮುಸ್ಲಿಮರ ನ್ಯಾಯಾಲಯವಲ್ಲ. ಈ ಟ್ರಿಬ್ಯೂನಲ್‌ಗೆ ನ್ಯಾಯಾಧೀಶರನ್ನು ಹೈಕೋರ್ಟ್ ನ  ಮುಖ್ಯ  ನ್ಯಾಯಾಧೀಶರೇ ನೇಮಿಸುತ್ತಾರೆ. ಬೆಂಗಳೂರಿನಲ್ಲಿರುವ ವಕ್ಫ್ ಟ್ರಿಬ್ಯೂನಲ್‌ನ ನ್ಯಾಯಾಧೀಶರಾಗಿ ಸುಧಾ ಸೀತಾರಾಂ  ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ವಕ್ಫ್ ಟ್ರಿಬ್ಯೂನಲ್‌ನ ಗುಲ್ಬರ್ಗಾ ಪೀಠದ ನ್ಯಾಯಾಧೀಶರಾಗಿ ಶ್ರೀನಿವಾಸನ್  ಹೊಣೆಗಾರಿಕೆ ನಿರ್ವಹಿಸುತ್ತಿದ್ದಾರೆ. ಕಠಿಯಾಣಿಯವರು ಬೆಂಗಳೂರು ಪೀಠದ ನ್ಯಾಯಾಧೀಶರಾಗಿದ್ದಾರೆ. ಗುರುರಾಜ್  ಅವರು ಮೈಸೂರು ಟ್ರಿಬ್ಯೂನಲ್ ಪೀಠದ ನ್ಯಾಯಾಧೀಶರಾಗಿದ್ದಾರೆ. ಇವರೆಲ್ಲ ಆಯಾ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದಹಾಗೆ,

ಈ ದೇಶದಲ್ಲಿ ಎಲ್ಲೆಲ್ಲ ವಕ್ಫ್ ಭೂಮಿ ಇದೆ ಎಂಬುದನ್ನು ತೀರ್ಮಾನಿಸಿದ್ದು ಮುಸ್ಲಿಮರಲ್ಲ ಅಥವಾ ಯಾವುದೇ ಸಚಿವರೋ  ಶಾಸಕರೋ ಅಲ್ಲ. ಕಂದಾಯ ಇಲಾಖೆಯ ಅಧಿಕಾರಿಗಳು ಸರ್ವೇ ಮಾಡಿ ಸರಕಾರಿ ಗಜೆಟೆಡ್ ನೋಟಿಫಿಕೇಶನ್ ಬಂದ  ಬಳಿಕ ಅದು ದಾಖಲೀಕರಣಗೊಂಡು ಆಗಿರುವ ಬೆಳವಣಿಗೆ ಇದು. ಈ ಇಡೀ ಪ್ರಕ್ರಿಯೆಯಲ್ಲಿ ಮುಸ್ಲಿಮರ ಪಾತ್ರ ಶೂನ್ಯಾತಿಶೂನ್ಯ. ಹೀಗೆ ಸರಕಾರವೇ ಜಾರಿ ಮಾಡಿದ ಗಜೆಟೆಡ್ ನೋಟಿಫಿಕೇಶನ್‌ನ ಆಧಾರದಲ್ಲಿ ಕಂದಾಯ ಇಲಾಖೆ  ನೋಟೀಸು ಜಾರಿ ಮಾಡುತ್ತದೆಯೇ ಹೊರತು ಯಾವುದೇ ಸಚಿವರು ಅಥವಾ ಶಾಸಕರಿಗೆ ಹಾಗೆ ಮಾಡುವುದಕ್ಕೆ ಅವಕಾಶವೂ ಇಲ್ಲ. ಯಾವ ಭೂಮಿಯನ್ನು ಕಂದಾಯ ಇಲಾಖೆ ವಕ್ಫ್ ಎಂದು ನೋಟೀಸು ಮಾಡಿದೆಯೋ ಅದನ್ನು ರಕ್ಷಿಸುವ  ಜವಾಬ್ದಾರಿ ಮಾತ್ರ ವಕ್ಫ್ ಇಲಾಖೆಯದ್ದು. ಅದರಾಚೆಗೆ ಅದಕ್ಕೆ ಸ್ವಯಂ ನೋಟೀಸು ಕಳುಹಿಸುವ ಅಥವಾ ಆಸ್ತಿ ಕಬಳಿಸುವ  ಯಾವ ಅಧಿಕಾರವೂ ಇಲ್ಲ. ನಮ್ಮದೇ ರಾಜ್ಯದಲ್ಲಿ ಸರಕಾರಿ ಗಜೆಟೆಡ್ ನೋಟಿಫಿಕೇಶನ್‌ನ ಪ್ರಕಾರ ಒಂದು ಲಕ್ಷದ 80  ಸಾವಿರ ಎಕ್ರೆ ವಕ್ಫ್ ಆಸ್ತಿಯಿದೆ. ಆದರೆ, ಈಗ ವಕ್ಫ್ ಬೋರ್ಡಿನ ಅಧೀನದಲ್ಲಿರುವುದು ಕೇವಲ 20 ಸಾವಿರದ 400 ಎಕ್ರೆ  ಆಸ್ತಿ ಮಾತ್ರ. ಉಳಿದ ಅಷ್ಟೂ ಆಸ್ತಿಗಳು ಇನಾಮ್ ಅಬಾಲಿಷನ್ ಕಾಯ್ದೆ, ಭೂ  ಸುಧಾರಣಾ ಕಾಯ್ದೆ, ಸರಕಾರಿ ಒತ್ತುವರಿ  ಮತ್ತು ಖಾಸಗಿ ವ್ಯಕ್ತಿಗಳ ಒತ್ತುವರಿಯಿಂದಾಗಿ ಕಣ್ಮರೆಯಾಗಿದೆ. ಹಾಗಂತ,

ವಕ್ಫ್ ಇಲಾಖೆಯು ಸರಕಾರಿ ಒತ್ತುವರಿಯ ಭೂಮಿಯನ್ನಾಗಲಿ, ಭೂಸುಧಾರಣೆಯಿಂದಾಗಿ ಕಳಕೊಂಡ ಭೂಮಿಯನ್ನಾಗಲಿ  ಅಥವಾ ಇನಾಮ್ ಅಬಾಲಿಷನ್ ಕಾಯ್ದೆಯಿಂದ ಕಳಕೊಂಡ ಭೂಮಿಯನ್ನಾಗಲಿ ಈವರೆಗೂ ಕೇಳಿಲ್ಲ. ಅದು ಈಗ  ನೋಟೀಸು ಕಳುಹಿಸಿರುವುದು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ಮಾತ್ರ. ಅದರಲ್ಲೂ ಹೀಗೆ  ಕಂದಾಯ ಇಲಾಖೆ ನೋಟೀಸು ಕಳುಹಿಸುವ ಮೊದಲು ವಕ್ಫ್ ಅದಲಾತ್ ಅನ್ನು ನಡೆಸಲಾಗುತ್ತದೆ. ಈ ಅದಾಲತ್‌ನಲ್ಲಿ  ರಾಜ್ಯದ ಅಲ್ಪಸಂಖ್ಯಾತ ಸಚಿವರು ಮಾತ್ರ ಇರುವುದಲ್ಲ. ಉಪ ಜಿಲ್ಲಾಧಿಕಾರಿ, ಕಂದಾಯ ಅಧಿಕಾರಿಗಳು, ಆಯಾ ಜಿಲ್ಲೆಯ ಎಲ್ಲ  ಶಾಸಕರೂ ಇರುತ್ತಾರೆ. ಅವರೆಲ್ಲರ ಸಮ್ಮುಖದಲ್ಲಿ ಅದಾಲತ್ ನಡೆಸಿದ ಬಳಿಕ ವಕ್ಫ್ ಭೂಮಿಯನ್ನು ಒತ್ತುವರಿ  ಮಾಡಿಕೊಂಡವರಿಗೆ ನೋಟೀಸು ಕಳುಹಿಸಲಾಗುತ್ತದೆ. ಇದರಲ್ಲೂ ಮುಸ್ಲಿಮರ ಪಾತ್ರ ಶೂನ್ಯ ಅನ್ನುವಷ್ಟು ಕಡಿಮೆ.  ಬಸವರಾಜ್ ಬೊಮ್ಮಾಯಿ ಸರಕಾರದ ಅವಧಿಯಲ್ಲಿ ನಡೆಸಲಾದ ವಕ್ಫ್ ಅದಾಲತ್‌ನ ನೇತೃತ್ವವನ್ನು ಸಚಿವೆ ಶಶಿಕಲಾ ಜೊಲ್ಲೆ  ನಿರ್ವಹಿಸಿದ್ದರು. ವಕ್ಫ್ ಆಸ್ತಿಯನ್ನು ಒತ್ತುವರಿ ಮಾಡಿಕೊಂಡವರಿಗೆ 2 ಸಾವಿರಕ್ಕಿಂತಲೂ ಅಧಿಕ ನೋಟೀಸುಗಳನ್ನು ಆ  ಸಮಯದಲ್ಲಿ ಕಳುಹಿಸಲಾಗಿತ್ತು. ಹಾಗಂತ, ಈ ನೋಟೀಸೇ ಅಂತಿಮವಲ್ಲ. ವಕ್ಫ್ ಟ್ರಿಬ್ಯೂನಲ್‌ನಲ್ಲಿ ತೀರ್ಪು ತಮ್ಮ ಪರ  ಬರದೇ ಇದ್ದರೆ ಅದನ್ನು ಪ್ರಶ್ನಿಸಿ ಹೈಕೋರ್ಟು ಮತ್ತು ಸುಪ್ರೀಮ್ ಕೋರ್ಟಿಗೆ ಹೋಗುವ ಎಲ್ಲ ಅವಕಾಶಗಳೂ  ಕಕ್ಷಿದಾರರಿಗೆ ಮುಕ್ತವಾಗಿರುತ್ತದೆ. ಒಂದುರೀತಿಯಲ್ಲಿ,


ಜನಸಾಮಾನ್ಯರ ಪಾಲಿಗೆ ಅಪರಿಚಿತವಾಗಿದ್ದ ವಕ್ಫ್ ವಿಷಯವನ್ನು ಪರಿಚಿತಗೊಳಿಸುವುದಕ್ಕೆ ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಮಸೂದೆ ದೊಡ್ಡದೊಂದು ಕೊಡುಗೆಯನ್ನು ನೀಡಿದೆ. ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸಬೇಕೆಂದು ತಂತ್ರ  ಹೆಣೆದವರು ನಿಧಾನಕ್ಕೆ ಸ್ವಯಂ ಕಟಕಟೆಯಲ್ಲಿ ನಿಲ್ಲ ತೊಡಗಿದ್ದಾರೆ.

Wednesday, 18 December 2024

ಬಲಿಷ್ಠ ಅಸದ್‌ರನ್ನೇ ಪದಚ್ಯುತಗೊಳಿಸಿದ ಈ ಜುಲಾನಿ ಯಾರು?




ಕಳೆದ 24 ವರ್ಷಗಳಿಂದ ಅಧ್ಯಕ್ಷರಾಗಿದ್ದ ಸಿರಿಯದ ಬಶ್ಶಾರುಲ್ ಅಸದ್ ಅವರ ಯುಗ ಕೊನೆಗೊಂಡಿದೆ. ಇರಾಕ್‌ನ ಕುಪ್ರಸಿದ್ಧ ಅಬೂ ಗುರೈಬ್ ಸೇರಿದಂತೆ ಕ್ಯಾಂಪ್ ಬುಕ್, ಕ್ಯಾಂಪ್ ಕ್ರೋಪ್ಟರ್, ಅಲ್ ತಜ್ಜಿ ಮುಂತಾದ ಅತಿಕ್ರೂರ ಜೈಲುಗಳಲ್ಲಿ 5 ವರ್ಷಗಳ ಕಾಲ ಇದ್ದು, ತನ್ನ ತಲೆಗೆ ಅಮೆರಿಕದಿಂದ 10 ಬಿಲಿಯನ್ ಡಾಲರ್ ಘೋಷಿಸಲ್ಪಟ್ಟ ಅಬೂ ಮುಹಮ್ಮದ್ ಅಲ್ ಜುಲಾನಿ ಎಂಬ ಮಧ್ಯ ವಯಸ್ಸಿನ ವ್ಯಕ್ತಿ ಇದೀಗ ಸಿರಿಯದ ಹೀರೋ ಆಗಿ ಹೊರಹೊಮ್ಮಿದ್ದಾರೆ. ಈ ಜುಲಾನಿ ನೇತೃತ್ವದ ಹಯಾತ್ ತಹ್ರೀರ್ ಅಲ್ ಶಾಂ (HTS) ಎಂಬ ಸಶಸ್ತ್ರ  ಹೋರಾಟಗಾರರ ಗುಂಪು ಸಿರಿಯಾದಲ್ಲಿ ವಿಜಯ ಪತಾಕೆ ಹಾರಿಸಿದೆ. ಅಸದ್‌ರಿಂದ ಸಿರಿಯಾವನ್ನು ವಿಮೋಚನೆಗೊಳಿಸಿದೆ. ಈ ಜುಲಾನಿಯನ್ನು ತಾನು ಹತ್ಯೆ ಮಾಡಿರುವುದಾಗಿ ಈ ವಿಮೋಚನೆಗಿಂತ ಎರಡು ವಾರಗಳ ಮೊದಲು ರಷ್ಯಾ ಘೋಷಿಸಿತ್ತು. ಜುಲಾನಿಯ ಚಿತ್ರವನ್ನೂ ಬಿಡುಗಡೆಗೊಳಿಸಿತ್ತು. ಆದರೆ, ಇಂಥ ಹತ್ತು ಹಲವು ಅಡೆತಡೆಗಳು ಮತ್ತು ಸುಳ್ಳುಗಳನ್ನು ದಾಟಿ ಜುಲಾನಿ ಇದೀಗ ಕ್ರಾಂತಿಯೊಂದಕ್ಕೆ ಯಶಸ್ವಿ ನೇತೃತ್ವ ನೀಡಿದ ದಂಡನಾಯಕನಾಗಿ ಗುರುತಿಸಿಕೊಂಡಿದ್ದಾರೆ.

2011ರಲ್ಲಿ ಟುನೀಷ್ಯಾದಲ್ಲಿ ಅರಬ್ ಕ್ರಾಂತಿ ಪ್ರಾರಂಭವಾಯಿತು. ಬಹು ಬೇಗನೇ ಅದು ಈಜಿಪ್ಟಿಗೂ ಕಾಲಿಟ್ಟಿತು. ಸ್ವೇಚ್ಛಾಧಿಪತಿಗಳಿಂದ ತಮ್ಮ ನಾಡನ್ನು ವಿಮೋಚನೆಗೊಳಿಸುವುದು ಈ ಕ್ರಾಂತಿಯ ಗುರಿಯಾಗಿತ್ತು. 23 ವರ್ಷಗಳಿಂದ ಅಧಿಕಾರದಲ್ಲಿದ್ದ ಝೈನುಲ್ ಆಬಿದೀನ್ ವಿರುದ್ಧ ಟುನೀಷ್ಯಾದಲ್ಲಿ 2010 ಡಿ. 17 ರಂದು ಪ್ರತಿಭಟನೆ ಆರಂಭವಾಯಿತು. ಬೆಲೆ ಏರಿಕೆ ಮತ್ತು ನಿರುದ್ಯೋಗದಿಂದ ಜನರು ತೀವ್ರವಾಗಿ ಕಂಗೆಟ್ಟಿದ್ದರು. ಇದೇವೇಳೆ, ರಸ್ತೆ ಬದಿ ಹಣ್ಣು-ಹಂಪಲು ಮಾರುತ್ತಿದ್ದ ಅಬ್ದುಲ್ ಅಝೀಝ್ ಎಂಬ ಪದವೀಧರ ಯುವಕನನ್ನು ಪೊಲೀಸರು ಥಳಿಸಿದರು. ಈ ಥಳಿತವೇ ಪ್ರಭುತ್ವ ವಿರೋಧಿ ಹೋರಾಟಕ್ಕೆ ಕಿಚ್ಚನ್ನು ಹಚ್ಚಿತು. ಕೇವಲ 27 ದಿನಗಳೊಳಗೆ ಅಧ್ಯಕ್ಷ ಝೈನುಲ್ ಆಬಿದೀನ್ ಟುನೀಷ್ಯಾದಿಂದ ಸೌದಿ ಅರೇಬಿಯಾಕ್ಕೆ ಪಲಾಯನ ಮಾಡಿದರು. ಇದೇ ಸಂದರ್ಭದಲ್ಲಿ,

ಸಿರಿಯಾದಲ್ಲಿ 14 ವರ್ಷದ ಮೌವಲಿಯ ಮತ್ತು ಆತನ ಗೆಳೆಯನನ್ನು ಪೊಲೀಸರು ಬಂಧಿಸಿ ತೀವ್ರವಾಗಿ ಹಿಂಸಿಸಿದರು. ಈ ಹುಡುಗರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಬೀದಿಗಿಳಿದ ಹೆತ್ತವರು ಮತ್ತು ಬಂಧುಗಳ ವಿರುದ್ಧ ಪೊಲೀಸರು ಲಾಠಿಚಾರ್ಚ್, ರಬ್ಬರ್ ಗುಂಡು ಮತ್ತು ಅಶ್ರುವಾಯು ಪ್ರಯೋಗಿಸಿದರು. ಹೀಗೆ ಪ್ರತಿಭಟನೆಯನ್ನು ಮಟ್ಟಹಾಕಿದ ಪೊಲೀಸರು ಬಂಧನದ 26 ದಿನಗಳ ಬಳಿಕ ಹುಡುಗರನ್ನು ಬಿಡುಗಡೆಗೊಳಿಸಿದರು. ಈ ಘಟನೆ ನಡೆದಿರುವುದು ಪಶ್ಚಿಮ ಸಿರಿಯದ ದಾರಾ ನಗರದಲ್ಲಿ. ಬಿಡುಗಡೆಗೊಂಡ ಬಳಿಕ ಅಧ್ಯಕ್ಷ ಅಸದ್‌ರನ್ನು ಗುರಿಯಾಗಿಸಿ ದಾರಾ ನಗರದ ಮುಖ್ಯ ಗೋಡೆಯಲ್ಲಿ ಈ ಮೌವಲಿಯ, `ಇದು ನಮ್ಮ ವಿಶ್ವಾಸ (ಈಮಾನ್) ಡಾಕ್ಟರ್...' ಎಂಬ ಬರಹವನ್ನು ಬರೆದ. ಅಧ್ಯಕ್ಷ ಬಶ್ಶಾರುಲ್ ಅಸದ್ ಕಣ್ಣಿನ ವೈದ್ಯರಾಗಿದ್ದರು. `ನಾವು ಹೆದರಲ್ಲ, ಬಗ್ಗಲ್ಲ' ಎಂಬ ಅರ್ಥದ ಈ ಬರಹ ಕ್ಷಣ ಮಾತ್ರದಲ್ಲಿ ವೈರಲ್ ಆಯಿತು. ಮಾಧ್ಯಮಗಳು ಅದನ್ನು ಎತ್ತಿಕೊಂಡವು. ಸೋಶಿಯಲ್ ಮೀಡಿಯದಲ್ಲೂ ಹಂಚಿಕೆಯಾಯಿತು. ಇದುವೇ ಅಸದ್ ರಾಜೀನಾಮೆಯನ್ನು ಒತ್ತಾಯಿಸಿ 2011 ಮಾರ್ಚ್ ನಲ್ಲಿ  ನಡೆದ ಪ್ರಥಮ ಪ್ರತಿಭಟನೆಗೆ ಕಾರಣವೂ ಆಯಿತು. 2011ರ ಜುಲೈಯಲ್ಲಿ `ಫ್ರೀ ಸಿರಿಯನ್ ಆರ್ಮಿ' ಎಂಬ ವಿಮೋಚನಾ ಗುಂಪು ರಚನೆಗೊಂಡಿತು. ಇದೇ ಸಂದರ್ಭದಲ್ಲಿ 5 ವರ್ಷಗಳ ಕಾಲ ಅಮೆರಿಕದ ಜೈಲಲ್ಲಿದ್ದು ಬಿಡುಗಡೆಗೊಂಡು ಇರಾಕ್‌ನಲ್ಲಿದ್ದ ಜುಲಾನಿ ನೇರ ಸಿರಿಯಕ್ಕೆ ಬಂದು ವಿಮೋಚನಾ ಪ್ರತಿಭಟನೆಯಲ್ಲಿ ಸೇರಿಕೊಂಡ.

ಈ ಜುಲಾನಿಗೆ ಒಂದು ಕ್ರಾಂತಿಕಾರಿ ಹಿನ್ನೆಲೆಯಿದೆ. ಈ ಜುಲಾನಿ ಹುಟ್ಟಿದ್ದು 1982ರಲ್ಲಿ, ಸೌದಿ ಅರೇಬಿಯಾದಲ್ಲಿ. ಹಾಗಂತ, ಈತ ಸೌದಿ ಅರೇಬಿಯದವರಲ್ಲ. ಈ ಜುಲಾನಿಯ ತಂದೆಯ ಕುಟುಂಬ ಸಿರಿಯದ ಗೋಲಾನ್ ಬೆಟ್ಟದಲ್ಲಿ ವಾಸವಾಗಿತ್ತು. 1967ರಲ್ಲಿ ಇಸ್ರೇಲ್ ಜೊತೆ ನಡೆದ 6 ದಿನಗಳ ಯುದ್ಧದಲ್ಲಿ ಗೋಲಾನ್ ಬೆಟ್ಟ ಇಸ್ರೇಲ್‌ನ ವಶವಾಯಿತು. ಜುಲಾನಿಯ ತಂದೆಯ ಹೆತ್ತವರು ಈ ಗೋಲಾನ್ಸಿ ಬೆಟ್ಟದಿಂದ ಸಿರಿಯದ ಇತರ ಭಾಗಕ್ಕೆ ವಲಸೆ ಬಂದರು. ಬಳಿಕ ಸರಕಾರದ ವಿರುದ್ಧ ಪ್ರತಿಕ್ರಾಂತಿಗೆ ಪ್ರಚೋದಿಸಿದರೆಂದು ಹೇಳಿ ಆಗಿನ ಬಾತಿಸ್ಟ್ ಪಕ್ಷದ ಆಡಳಿತ ಜುಲಾನಿಯ ತಂದೆ ಅಹ್ಮದ್ ಹುಸೈನ್ ಅಲ್ ಶರಾಂರನ್ನು ಬಂಧಿಸಿತು. ಜೈಲಿನಿಂದ ತಪ್ಪಿಸಿಕೊಂಡ ಅವರು ನೇರ ಇರಾಕಿಗೆ ತೆರಳಿ ಅಲ್ಲಿ ಪದವಿ ಶಿಕ್ಷಣವನ್ನು ಮುಗಿಸಿದರು. ಆಗ ಇಸ್ರೇಲ್ ವಿರುದ್ಧ ಯಾಸಿರ್ ಅರಫಾತ್ ನೇತೃತ್ವದ ಪಿಎಲ್‌ಓ ಹೋರಾಟದಲ್ಲಿ ಸಕ್ರಿಯವಾಗಿತ್ತು. ಅದಕ್ಕೆ ಬೆಂಬಲ ಸಾರಿ ಅವರು ಜೋರ್ಡಾನ್‌ಗೆ ಹೋದರು. 1970ರಲ್ಲಿ ಮರಳಿ ಸಿರಿಯಕ್ಕೆ ಬಂದರು. ಇದೀಗ ಪದಚ್ಯುತಗೊಂಡ ಬಶ್ಶಾರುಲ್ ಅಸದ್ ಅವರ ತಂದೆ ಹಾಫಿಝ್ ಅಸದ್‌ರು ಆಗ ಸಿರಿಯದ ಅಧ್ಯಕ್ಷರಾಗಿದ್ದರು. ಅವರ ಆಡಳಿತದ ವಿರುದ್ಧ ಹೋರಾಟ ಸಂಘಟಿಸಿದ ಕಾರಣಕ್ಕಾಗಿ ಬಂಧನಕ್ಕೀಡಾದರು. ಬಿಡುಗಡೆಯ ಬಳಿಕ ನೇರ ಸೌದಿಗೆ ಹೋಗಿ ಅಲ್ಲಿನ ತೈಲ ಕಂಪೆನಿಯಲ್ಲಿ ಎಂಜಿನಿಯರ್ ಆಗಿ ದುಡಿಯುತ್ತಿದ್ದ ವೇಳೆ 1982ರಲ್ಲಿ ಈ ಜುಲಾನಿಯ ಜನನವಾಯಿತು. 1989ರಲ್ಲಿ ಈ ಕುಟುಂಬ ಸಿರಿಯಾಕ್ಕೆ ಮರಳಿತು.

`ಇಸ್ರೇಲ್ ವಿರುದ್ಧ ಹಮಾಸ್ ಕೈಗೊಂಡ ಎರಡನೇ ಇಂತಿಫಾದ ಹೋರಾಟದ ವೇಳೆ ತನಗೆ 18 ವರ್ಷವಾಗಿತ್ತು ಮತ್ತು ಫೆಲೆಸ್ತೀನಿನ ಸಂತ್ರಸ್ತರಿಗೆ ತಾನೇನು ಮಾಡಬಲ್ಲೆ ಎಂಬ ಯೋಚನೆ ತನ್ನಲ್ಲಿ ಹುಟ್ಟಿಕೊಂಡಿತ್ತು...' ಎಂದು ಇದೇ ಜುಲಾನಿ ಅಮೆರಿಕ `ಫ್ರಂಟ್ ಲೈನ್' ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಈ ಹಿಂದೆ ಹೇಳಿದ್ದಿದೆ. ಅಮೆರಿಕದ ವಿರುದ್ಧ ಹೋರಾಟ ನಡೆಸುವುದಕ್ಕಾಗಿ 2003ರಲ್ಲಿ ಇರಾಕ್‌ಗೆ ಹೋದ ಈ ಜುಲಾನಿ ಅಲ್ ಕಾಯಿದಾ ಸೇರಿದ. 2006ರಲ್ಲಿ ಅಮೆರಿಕನ್ ಸೇನೆ ಈ ಜುಲಾನಿಯನ್ನು ಬಂಧಿಸಿತಲ್ಲದೇ ಕುಪ್ರಸಿದ್ಧ ಅಬೂ ಗುರೈಬ್ ಸೇರಿದಂತೆ ವಿವಿಧ ಜೈಲಲ್ಲಿಟ್ಟು ಹಿಂಸಿಸಿತು. 2011ರಲ್ಲಿ ಬಿಡುಗಡೆಗೊಂಡಾಗ ಸಿರಿಯದಲ್ಲಿ ಅಸದ್ ಆಡಳಿತದ ವಿರುದ್ಧ ಪ್ರತಿಭಟನೆ ಪ್ರಾರಂಭವಾಗಿತ್ತು. ಇರಾಕ್‌ನಿಂದ ನೇರ ಸಿರಿಯಾದ ಇದ್ಲಿಬ್ ನಗರಕ್ಕೆ ಬಂದ ಈ ಜುಲಾನಿ, ಅಲ್ಲಿ ಅಲ್ ಕಾಯಿದಾವನ್ನು ಗಟ್ಟಿಗೊಳಿಸಿದ. ಐಸಿಸ್‌ನ ಅಬೂಬಕರ್ ಅಲ್ ಬಗ್ದಾದಿ ಜೊತೆ ಸೇರಿ ಕೆಲಸ ಪ್ರಾರಂಭಿಸಿದ. 2013ರಲ್ಲಿ ಅಲ್ ಕಾಯಿದಾದ ಜೊತೆ ಸಂಬಂಧ ಕಡಿದುಕೊಂಡ ಅಲ್ ಬಗ್ದಾದಿಯು ಇನ್ನು  ತನ್ನ ಗಮನ ಕೇವಲ ಸಿರಿಯಕ್ಕೆ ಮಾತ್ರ ಎಂದು ಘೋಷಿಸಿದ. ಐಎಸ್‌ಐಎಲ್ ಎಂಬ ಹೊಸ ಸಂಘಟನೆಯನ್ನೂ  ಸ್ಥಾಪಿಸಿದ. ಜುಲಾನಿ ಇದನ್ನು ಒಪ್ಪಲಿಲ್ಲ. ಬಗ್ದಾದಿಯಿಂದ ದೂರ ನಿಂತ. 

2016ರಲ್ಲಿ ಸಿರಿಯ ಅಧ್ಯಕ್ಷ ಅಸದ್‌ರ ಸೇನೆಯು ಪ್ರಮುಖ ಅಲೆಪ್ಪೋ ನಗರವನ್ನು ಬಂಡಕೋರರಿಂದ  ವಶಪಡಿಸಿಕೊಂಡಿತು. ಆಗ ಅಲ್ಲಿದ್ದ ವಿವಿಧ ಸಂಘಟನೆಗಳ ಸಾವಿರಾರು ಬಂಡುಕೋರರು ಇದ್ಲಿಬ್‌ಗೆ ಪಲಾಯನ ಮಾಡಿದರು. ಇಲ್ಲಿ ಅದಾಗಲೇ ಇದ್ದ ಜುಲಾನಿ ಈ ಎಲ್ಲಾ ಬಂಡುಕೋರ ಗುಂಪುಗಳ ಹೋರಾಟಗಾರರನ್ನು ಒಟ್ಟು ಸೇರಿಸಿ `ಹಯಾತ್ ಅಲ್ ತಹ್ರೀರ್ ಅಲ್ ಶಾಂ' (HTS) ಎಂಬ ಏಕ ಗುಂಪನ್ನು ರಚಿಸಿದ ಮತ್ತು  ಅಲ್ ಕಾಯಿದಾದಿಂದ ಸಂಪೂರ್ಣ ಅಂತರವನ್ನು ಕಾಯ್ದುಕೊಂಡ. 2017ರಲ್ಲಿ ಈ ಇದ್ಲಿಬ್ ನಗರವನ್ನು ಸಂಪೂರ್ಣ ವಶಪಡಿಸಿಕೊಂಡ ಜುಲಾನಿ ಇಲ್ಲಿ ಶಿಕ್ಷಣ, ಆರೋಗ್ಯ, ನಾಗರಿಕ ಸೇವೆ, ನ್ಯಾಯಾಂಗ ಮತ್ತು ಮೂಲ ಸೌಲಭ್ಯಗಳನ್ನು ಒದಗಿಸಲು ಪ್ರಾರಂಭಿಸಿದ. ಈ HTS ನಿಧಾನಕ್ಕೆ ಬೆಳೆಯುತ್ತಾ ಹೋಯಿತಲ್ಲದೇ, ಅಲ್ ಕಾಯಿದಾವನ್ನು ಮೂಲೆಗುಂಪು ಮಾಡುತ್ತಾ ಸಿರಿಯನ್ ಜನರ ವಿಶ್ವಾಸವನ್ನೂ ಗಳಿಸಿತು. ಇದ್ಲಿಬ್‌ನಲ್ಲಿ ನಡೆಸುತ್ತಿರುವ ಆಡಳಿತವೂ ಜನರ ಗಮನ ಸೆಳೆಯಿತು. 

`ಅಲ್ ಕಾಯಿದಾದ ಜೊತೆಗಿದ್ದ ಕಾಲದಲ್ಲಿಯ ನನ್ನ ನಿಲುವುಗಳಿಂದ ತಾನು ಹಿಂದಕ್ಕೆ ಬಂದಿದ್ದರೂ ಮತ್ತು ತಾನು ಸಿರಿಯಾದ ವಿಮೋಚನೆಯನ್ನಷ್ಟೇ ಗುರಿಯಾಗಿಸಿಕೊಂಡಿದ್ದರೂ ತನ್ನನ್ನು ವಿದೇಶಿ ರಾಷ್ಟ್ರಗಳು ಭಯೋತ್ಪಾದಕ ಎಂದು ಕರೆಯುತ್ತಿರುವುದಕ್ಕೆ ವಿಷಾದವಾಗುತ್ತಿದೆ...' ಎಂದು ಜುಲಾನಿ ಈ ಹಿಂದೆ ಹೇಳಿದ್ದ. ಈ ಜುಲಾನಿಗೆ ಅಮೆರಿಕ, ವಿಶ್ವಸಂಸ್ಥೆ, ಟರ್ಕಿ, ಯುರೋಪ್ಯನ್ ರಾಷ್ಟ್ರಗಳೂ ಸೇರಿ ಹಲವು ದೇಶಗಳು ಭಯೋತ್ಪಾದಕ ಎಂಬ ಹಣೆಪಟ್ಟಿಯನ್ನು ಹಚ್ಚಿವೆ. ಇಂಥ ಜುಲಾನಿ ಕೇವಲ ಎರಡೇ ಎರಡು ವಾರಗಳೊಳಗೆ ಅಸದ್‌ರನ್ನು ಹೇಗೆ ಪದಚ್ಯುತಗೊಳಿಸಿದ ಎಂಬ ಪ್ರಶ್ನೆಯಿದೆ. ನಿಜವಾಗಿ,

ಅಸದ್‌ರ ಶಕ್ತಿಯೇ ಇರಾನ್, ಹಿಝ್ಬುಲ್ಲಾ ಮತ್ತು ರಷ್ಯಾವಾಗಿತ್ತು. ಈ ವರೆಗೆ ಬಂಡುಕೋರ ಪಡೆಗಳನ್ನು ಮಟ್ಟ ಹಾಕಿದ್ದೇ ಈ ಮೂರು ರಾಷ್ಟ್ರಗಳು. ಆದರೆ, ಇದೀಗ ಹಿಝ್ಬುಲ್ಲಾ ಮತ್ತು ಇರಾನ್‌ಗಳು ಇಸ್ರೇಲ್‌ನತ್ತ ಗಮನ ಹರಿಸಿರುವುದು ಮತ್ತು ಯುಕ್ರೇನ್‌ನತ್ತ ರಷ್ಯಾ ಗಂಭೀರವಾಗಿರುವುದು ಈ ಜುಲಾನಿ ಪಡೆಗೆ ವರವಾಗಿ ಪರಿಣಮಿಸಿತು. ತಕ್ಷಣ ನೆರವು ಒದಗಿಸಲು ಈ ಮೂರೂ ಶಕ್ತಿಗಳಿಗೆ ಸಾಧ್ಯವಾಗದಿರುವುದೇ ಜುಲಾನಿಯ ಯಶಸ್ವಿಗೆ ಕಾರಣ ಎಂದು ಹೇಳಲಾಗುತ್ತಿದೆ.

ಅಂತೂ, ಅಸದ್ ಕುಟುಂಬದ 53 ವರ್ಷಗಳ ಆಡಳಿತ ಕೊನೆಗೊಂಡಿದೆ. 24 ವರ್ಷಗಳ ಕಾಲ ಈ ಬಶ್ಶಾರುಲ್ ಅಸದ್ ಸಿರಿಯವನ್ನು ಆಳಿದರೆ ಇವರ ತಂದೆ ಹಾಫಿಝ್ ಅಸದ್‌ರು 29 ವರ್ಷಗಳ ಕಾಲ ಆಳಿದ್ದರು. ಬಶ್ಶಾರುಲ್ ಅಸದ್ ಅಂತೂ ಪ್ರತಿಭಟನಾಕಾರರ ವಿರುದ್ಧ ಎಷ್ಟು ಬರ್ಬರವಾಗಿ ನಡಕೊಂಡರೆಂದರೆ, ಐದೂವರೆ ಲಕ್ಷ ಸಿರಿಯನ್ನರು ಪ್ರಾಣತೆತ್ತರು. ಒಂದು ಕೋಟಿ 30 ಲಕ್ಷ ಮಂದಿ ಸಿರಿಯ ಬಿಟ್ಟು ಪಲಾಯನ ಮಾಡಿದರು. ಸಾವಿರಾರು ಮಂದಿಯನ್ನು ಜೈಲಲ್ಲಿಟ್ಟು ಪೀಡಿಸಿದರು. ಇದೀಗ ಅಸದ್ ಯುಗ ಕೊನೆಗೊಂಡಿದೆ. ಆದರೆ ಜುಲಾನಿ ಯುಗ ಹೇಗಿರುತ್ತದೆ ಎಂಬ ಬಗ್ಗೆ ಜಗತ್ತು ಕುತೂಹಲದಲ್ಲಿದೆ.

Monday, 9 December 2024

ದುಶ್ಯಂತ್ ದವೆ ಕಣ್ಣೀರಲ್ಲಿ ಪ್ರತಿಫಲಿಸಿದ ಭಾರತೀಯ ಮುಸ್ಲಿಮರ ನೋವು





ಮುಸ್ಲಿಮರ ಮೇಲಿನ ದಾಳಿ, ಅಪಪ್ರಚಾರ ಮತ್ತು ವ್ಯವಸ್ಥಿತ ದಬ್ಬಾಳಿಕೆಗೆ ಮರುಗಿ ಈ ದೇಶದ ಪ್ರಸಿದ್ಧ ನ್ಯಾಯವಾದಿ ದುಶ್ಯಂತ್ ದವೆ ಕಣ್ಣೀರು ಹಾಕಿದ್ದಾರೆ. ‘ದ ವಯರ್’ ಡಿಜಿಟಲ್ ಚಾನೆಲ್‌ನಲ್ಲಿ ಕರಣ್ ಥಾಪರ್ ನಡೆಸಿಕೊಡುವ  ಕಾರ್ಯಕ್ರಮದಲ್ಲಿ ಭಾವನೆಗಳನ್ನು ಹಂಚಿಕೊಳ್ಳುತ್ತಾ ಹೀಗೆ ಭಾವುಕರಾಗಿದ್ದಾರೆ. ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಐವರು  ಮುಸ್ಲಿಮರ ಸಾವಿಗೆ ಕಾರಣವಾದ ಮಸೀದಿ ಸಮೀಕ್ಷೆಯ ಒಳ-ಹೊರಗನ್ನು ವಿಶ್ಲೇಷಿಸುತ್ತಾ ಇಡೀ ಪ್ರಕ್ರಿಯೆಗೆ ನಿವೃತ್ತ  ಸುಪ್ರೀಮ್ ಮುಖ್ಯ ನ್ಯಾಯಾ ಧೀಶ ಚಂದ್ರಚೂಡ್ ಹೇಗೆ ಹೊಣೆಗಾರರಾಗಿದ್ದಾರೆ ಎಂಬುದನ್ನೂ ವಿವರಿಸಿದ್ದಾರೆ. ಇದೇ  ಸಮಯದಲ್ಲಿ ಇನ್ನೆರಡು ಘಟನೆಗಳೂ ನಡೆದಿವೆ. ಮಾಂಸವನ್ನು ಕೊಂಡೊಯ್ಯುತ್ತಿದ್ದಾರೆಂದು  ಹೇಳಿ ಸುಮಾರು 70  ವರ್ಷದ ಮುಸ್ಲಿಮ್ ವೃದ್ಧರನ್ನು ಮಹಾರಾಷ್ಟ್ರದಲ್ಲಿ ಗುಂಪೊಂದು ಯದ್ವಾತದ್ವಾ ಥಳಿಸಿದೆ. ಇದರ ವೀಡಿಯೋ ಸೋಶಿಯಲ್  ಮೀಡಿಯಾದಲ್ಲಿ ಹಂಚಿಕೆಯಾಗಿದೆ. ಪುಟ್ಟ ಬ್ಯಾಗ್‌ನಲ್ಲಿರುವ ಮಾಂಸವನ್ನೂ ವೀಡಿಯೋದಲ್ಲಿ ತೋರಿಸಲಾಗಿದೆ. ಈ ಘಟನೆಗಿಂತ ದಿನಗಳ ಮೊದಲು ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಸ್ವಾಮೀಜಿಯೋರ್ವರು, ‘ಮುಸ್ಲಿಮರಿಂದ ಮತದಾನದ ಹಕ್ಕ ನ್ನು ಕಸಿದುಕೊಳ್ಳಬೇಕೆಂದು’ ಆಗ್ರಹಿಸಿದ್ದಾರೆ. ಹೀಗೆ ಆಗ್ರಹಿಸಿದ 24 ಗಂಟೆಗಳ ಬಳಿಕ ಅವರು ತಮ್ಮ ಮಾತಿಗೆ ವಿಷಾದ  ಸೂಚಿಸಿದ್ದಾ ರಾದರೂ ಅವರು ಆಡಿರುವ ಮಾತಿನ ವೀಡಿಯೋ ಈ ವಿಷಾದದ ಬಳಿಕವೂ ಸೋಶಿಯಲ್ ಮೀಡಿಯಾದಲ್ಲಿ  ಧಾರಾಳ ಹಂಚಿಕೆಯಾಗುತ್ತಿವೆ.

ನಿಜವಾಗಿ, ದುಶ್ಯಂತ್ ದವೆ ಅವರ ಕಣ್ಣೀರು ಈ ದೇಶದ ಕೋಟ್ಯಂತರ ಮುಸ್ಲಿಮರ ಸಂಕಟವನ್ನು ಪ್ರತಿನಿಧಿಸುತ್ತದೆ ಎಂಬ  ಕಾರಣಕ್ಕಾಗಿಯೇ ಮುಖ್ಯವಾಗುತ್ತದೆ. ದವೆ ಅವರು ಮುಸ್ಲಿಮ್ ಸಮುದಾಯದ ವ್ಯಕ್ತಿಯಲ್ಲ, ರಾಜಕಾರಣಿಯಲ್ಲ ಅಥವಾ  ಪ್ರಭುತ್ವ ವಿರೋಧಿ ಸಂಸ್ಥೆಗಳ ಫಲಾನುಭವಿಯೂ ಅಲ್ಲ. ಅವರೇಕೆ ಮಾತಾಡುತ್ತಾ ಭಾವುಕರಾದರು ಅನ್ನುವುದನ್ನು ಸಮಾಜ  ವಿಶ್ಲೇಷಣೆಗೆ ಒಳಪಡಿಸಬೇಕು.

ಮುಸ್ಲಿಮರ ಮೇಲೆ ದಾಳಿ ಮಾಡುವುದನ್ನೇ ಹಿಂದೂ ಧರ್ಮದ ರಕ್ಪಣೆ ಎಂದು ಅಂದುಕೊಂಡಿರುವ ಒಂದು ಗುಂಪು ಮತ್ತು  ಆ ಗುಂಪನ್ನು ರಕ್ಷಿಸುವ ರಾಜಕೀಯ ಪಕ್ಷ ಇವತ್ತು ಅಧಿಕಾರದಲ್ಲಿದೆ. ದೇಶದಾದ್ಯಂತ ಈ ಗುಂಪು ನಡೆಸುತ್ತಿರುವ ಮುಸ್ಲಿಮ್  ದ್ವೇಷಿ ಚಟುವಟಿಕೆಗಳನ್ನು ಈ ರಾಜಕೀಯ ಪಕ್ಷದ ನೇತಾರರು ವಿವಿಧ ನೆಪಗಳನ್ನೊಡ್ಡಿ ಸಮರ್ಥಿಸುತ್ತಿದ್ದಾರೆ. ಇನ್ನೊಂದು  ಕಡೆ ಇದೇ ಗುಂಪಿನ ಜನರು ನ್ಯಾಯಾಲಯಗಳಿಗೆ ಅರ್ಜಿ ಹಾಕಿ ಮಸೀದಿಗಳ ವೈಜ್ಞಾನಿಕ ಸಮೀಕ್ಷೆಗೆ ಮನವಿ  ಮಾಡುತ್ತಿದ್ದಾರೆ. ಎಲ್ಲ ಅರ್ಜಿಗಳಲ್ಲೂ ಒಂದು ಸಾಮಾನ್ಯ ಉಲ್ಲೇಖ ಇರುತ್ತದೆ. ಅದೇನೆಂದರೆ, ಮಂದಿರವನ್ನು ಒಡೆದು  ಮಸೀದಿಯನ್ನು ನಿರ್ಮಿಸಲಾಗಿದೆ ಎಂದು. ಇದರ ಹೊಚ್ಚ ಹೊಸ ಅವತಾರವಾಗಿ ಅಜ್ಮೀರ್‌ನ ಖ್ವಾಜಾ ಮುಈನುದ್ದೀನ್  ಚಿಶ್ತಿ ದರ್ಗಾ ಗುರುತಿಸಿಕೊಂಡಿದೆ. ಅದು ಪೂರ್ವದಲ್ಲಿ ಶಿವಮಂದಿರವಾಗಿತ್ತು ಮತ್ತು ಅದನ್ನು ಒಡೆದು ದರ್ಗಾ  ಮಾಡಲಾಗಿದೆ ಎಂದು ವಿಷ್ಣುಗುಪ್ತ ಎಂಬವರು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರೆ. ಹಾಗಂತ,

ಇಂಥ ಅರ್ಜಿಗಳ ಕಾನೂನು ಬದ್ಧತೆಯ ಬಗ್ಗೆ ಈ ದೇಶದ ಅಸಂಖ್ಯ ಜನರಲ್ಲಿ ಹಲವು ಗೊಂದಲಗಳಿವೆ. ಬಾಬರಿ ಮಸೀದಿ  ಧ್ವಂಸವಾಗುವುದಕ್ಕಿಂತ  ಎರಡು ತಿಂಗಳ ಮೊದಲು, ‘ಆರಾಧನಾ ಕೇಂದ್ರಗಳ ಸಂರಕ್ಷಣಾ ಕಾಯ್ದೆ 1991’ ಎಂಬ ಕಾನೂನನ್ನು  ಈ ದೇಶದ ಪಾರ್ಲಿಮೆಂಟು ಅಂಗೀಕರಿಸಿತ್ತು. ‘1947 ಆಗಸ್ಟ್ 15ರಂದು ಈ ದೇಶದ ಮಸೀದಿ, ಮಂದಿರ, ಚರ್ಚ್  ಸೇರಿದಂತೆ ಆರಾಧನಾ ಕೇಂದ್ರಗಳು ಯಾವ ಸ್ವರೂಪದಲ್ಲಿತ್ತೋ ಅವುಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗುವುದು ಮತ್ತು  ಅದರಲ್ಲಿ ಯಾವುದೇ ಮಾರ್ಪಾಡು ಸಲ್ಲ..’ ಎಂಬುದನ್ನು ಈ ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು. ಆದರೆ, ಬಾಬರಿ  ಮಸೀದಿಯನ್ನು ಈ ಕಾಯ್ದೆಯ ವ್ಯಾಪ್ತಿಂಯಿಂದ  ಹೊರಗಿಡಲಾಗಿತ್ತು. ಹಾಗಂತ, ಈ ಕಾನೂನು ಊರ್ಜಿತದಲ್ಲಿದ್ದಾಗ್ಯೂ  2023ರಲ್ಲಿ ಗ್ಯಾನ್‌ವಾಪಿ ಮಸೀದಿಯ ಬಗ್ಗೆ ಸಮೀಕ್ಷೆ ನಡೆಯಿತು. ಆ ಬಳಿಕ ಮಥುರಾದ ಶಾಹಿ ಈದ್ಗಾ ಮಸೀದಿ ಮತ್ತು  ಮಧ್ಯಪ್ರದೇಶದ ಕಮಲ್ ಮೌಲಾ ಮಸೀದಿ, ಸಂಭಾಲ್‌ನ ಜಾಮಾ ಮಸೀದಿಯ ವೈಜ್ಞಾನಿಕ ಸಮೀಕ್ಷೆಗಳೂ ನಡೆದುವು. ಇದು  ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗೆ ಉತ್ತರವೇ ನಿವೃತ್ತ ಮುಖ್ಯ ನ್ಯಾಯಾಧೀಶ ಚಂದ್ರಚೂಡ್.

ಮಂದಿರವನ್ನು ಒಡೆದು ಗ್ಯಾನ್‌ವಾಪಿ ಮಸೀದಿಯನ್ನು ಕಟ್ಟಲಾಗಿದೆ ಮತ್ತು ಅದರ ದೃಢೀಕರಣಕ್ಕಾಗಿ ಸರ್ವೇ ನಡೆಸಬೇಕು  ಎಂಬ ಅರ್ಜಿಯನ್ನು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟಿಗೆ ಸಲ್ಲಿಸಲಾ ಗಿತ್ತು. ಆ ಬಳಿಕ ಅದು ಸುಪ್ರೀಮ್  ಕೋರ್ಟ್ ಗೆ  ಬಂತು. ಅದನ್ನು ವಿಚಾರಣೆಗೆ ಎತ್ತಿಕೊಂಡದ್ದೇ  ಚಂದ್ರಚೂಡ್ ನೇತೃತ್ವದ ವಿಚಾರಣಾ ಪೀಠ. ಅವರು, ‘1991ರ  ಆರಾಧನಾ ಕೇಂದ್ರಗಳ ಸಂರಕ್ಷಣಾ ಕಾಯ್ದೆ’ಗೆ ವಿಚಿತ್ರ ವ್ಯಾಖ್ಯಾನ ಬರೆದರು. 'ಈ ಕಾಯ್ದೆಯು 1947 ಆಗಸ್ಟ್ 15ರಂದು ಇದ್ದ  ಆರಾಧನಾ ಕೇಂದ್ರಗಳನ್ನು ಯಥಾಸ್ಥಿತಿಯನ್ನು ಕಾಪಾಡಬೇಕು, ಕಟ್ಟಡಗಳ ಸ್ವರೂಪವನ್ನು ಬದಲಿಸಬಾರದೆಂದು ಹೇಳಿದೆಯೇ  ಹೊರತು ಕಟ್ಟಡದ ಸರ್ವೇ ನಡೆಸಬಾರದೆಂದು ಹೇಳಿಲ್ಲ..’ ಎಂದು ತೀರ್ಪಿತ್ತರು. ಆ ಒಂದು ತೀರ್ಪೇ ಆ ಬಳಿಕ ಸರ್ವೇ  ಬಯಸಿ ಸರಣಿ ಅರ್ಜಿಗಳನ್ನು ಸಲ್ಲಿಸುವುದು ಕಾರಣವಾಯಿತು. ನಿಜವಾಗಿ,

ಚಂದ್ರಚೂಡ್ ಅವರು 1991ರ ಕಾಯ್ದೆಯನ್ನು ಅಕ್ಷರಗಳಲ್ಲಿ ಓದಿದ್ದಾರೆ ಎಂದು ಹೇಳಿದರೇನೇ ಸರಿ. ಅಷ್ಟಕ್ಕೂ, ಆರಾಧನಾ  ಕೇಂದ್ರಗಳ ಯಥಾಸ್ಥಿತಿಯನ್ನು ಉಳಿಸಿಕೊಳ್ಳಬೇಕು, ಬದಲಿಸಬಾರದು ಎಂದು ಹೇಳುವುದರ ಉದ್ದೇಶವೇನು? ಬಾಬರಿ  ಮಸೀದಿಯಂತೆ ಇನ್ನಾವುದೇ ಆರಾಧನಾ ಕೇಂದ್ರವನ್ನೂ ವಿವಾದವನ್ನಾಗಿ ಮಾಡಬಾರದು ಎಂದೇ ಅಲ್ಲವೇ? ಹಾಗಿದ್ದ  ಮೇಲೆ ಸರ್ವೇ ಮಾಡುವುದರ ಅಗತ್ಯವೇನಿದೆ? ಪೂರ್ವ ಕಾಲದಲ್ಲಿ ಒಂದು ಆರಾಧನಾ ಕೇಂದ್ರ ಮಸೀದಿಯಾಗಿತ್ತೋ  ಮಂದಿರವಾಗಿತ್ತೋ ಎಂದು ಖಚಿತಪಡಿಸಿಕೊಂಡು ಆಗುವುದಕ್ಕೇನಿದೆ? ಅದರಿಂದ ಲಾಭ ಏನು? ಆರಾಧನಾ ಕೇಂದ್ರಗಳ  ಯಥಾಸ್ಥಿತಿಯನ್ನು ಉಳಿಸಿಕೊಳ್ಳುವುದಕ್ಕಿರುವ ಸರಿಯಾದ ವಿಧಾನ ಏನೆಂದರೆ, ಅವುಗಳ ಸರ್ವೇ ನಡೆಸದೇ ಇರುವುದು.  ಸರ್ವೇಗೆ ಅವಕಾಶ ಕೊಡುವುದೆಂದರೆ, ವಿವಾದಕ್ಕೆ ಅವಕಾಶ ಮಾಡಿಕೊಡುವುದು ಎಂದೇ ಅರ್ಥ. ‘1991ರ ಆರಾಧನಾ  ಕೇಂದ್ರಗಳ ಕಾಯ್ದೆ’ಯ ಆಶಯ ಇದುವೇ ಆಗಿತ್ತು ಅನ್ನುವುದು ಅದನ್ನು ಓದಿದವರಿಗೆ ಖಂಡಿತ ಗೊತ್ತಾಗುತ್ತದೆ. ಆದರೆ  ಅದರ ಮೇಲೆ ಸೂಕ್ಷ್ಮದರ್ಶಕವನ್ನು ಹಿಡಿದು, ಅದರಲ್ಲಿರುವ ಲೋಪವನ್ನು ಹುಡುಕುವುದೇ ಉದ್ದೇಶವಾದರೆ ಏನಾದರೊಂದು  ಲೋಪ ಸಿಕ್ಕೇ ಸಿಗುತ್ತದೆ. ಚಂದ್ರಚೂಡ್ ಅವರು ಕಾನೂನಿನಲ್ಲಿರುವ ಇಂಥ ಲೋಪಗಳನ್ನೇ ಎತ್ತಿಕೊಂಡು ಮಸೀದಿ  ಸಮೀಕ್ಷೆಗೆ ಅನುಮತಿ ನೀಡಿದ್ದಾರೆ. ಗ್ಯಾನ್‌ವಾಪಿಗೆ ಸಂಬಂಧಿಸಿ ಅವರು ನೀಡಿರುವ ಆ ಒಂದು ಆದೇಶವು ಕಂಡ ಕಂಡ  ಮಸೀದಿಯನ್ನು ಮಂದಿರ ಎಂದು ವಾದಿಸುವ ಮತ್ತು ಸರ್ವೇಗೆ ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಹಾಕುವ ಲ್ಲಿವರೆಗೆ ತಲುಪಿದೆ. ಅಷ್ಟಕ್ಕೂ,

ಈ ಅರ್ಜಿ ಹಾಕುವ ಪ್ರಕ್ರಿಯೆಯ ಹಿಂದೆ ಒಂದು ನಿರ್ದಿಷ್ಟ ಗುಂಪು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ ಅನ್ನುವುದಕ್ಕೆ ಗ್ಯಾ ನ್‌ವಾಪಿಯಿಂದ ಸಂಭಾಲ್ ಜಾಮಾ ಮಸೀದಿಯ ವರೆಗೆ ಅರ್ಜಿ ಹಾಕಿದವರ ವಿವರವನ್ನು ನೋಡಿದಾಗ ಸ್ಪಷ್ಟವಾಗುತ್ತದೆ.  ಹರಿಶಂಕರ್ ಜೈನ್ ಮತ್ತು ಅವರ ಮಗ ನ್ಯಾಯವಾದಿ ವಿಷ್ಣುಶಂಕರ್ ಜೈನ್ ಎಂಬವರೇ ಈ ಎಲ್ಲ ಮಸೀದಿಗಳ  ಸಮೀಕ್ಷೆಯನ್ನು ಕೋರಿ ಬೇರೆ ಬೇರೆ ನ್ಯಾಯಾಲಯಗಳಲ್ಲಿ ಅರ್ಜಿಯನ್ನು ಹಾಕಿದವರಾಗಿದ್ದಾರೆ. ಈ ಎಲ್ಲ ಮಸೀದಿಗಳ  ಪೂರ್ವಾಪರಗಳ ಬಗ್ಗೆ ಈ ಇಬ್ಬರಲ್ಲಿ ಇಷ್ಟೊಂದು ಆಸಕ್ತಿ ಹುಟ್ಟಿದ್ದು ಹೇಗೆ? ಯಾವುದೇ ಕಾನೂನು ಪ್ರಕ್ರಿಯೆಗೂ ದುಬಾರಿ  ಹಣದ ಅಗತ್ಯ ಇರುತ್ತದೆ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದರಿಂದ ಹಿಡಿದು ಪ್ರಕರಣ ಒಂದು ವೇಳೆ ಸುಪ್ರೀಮ್  ಕೋರ್ಟ್ ವರೆಗೆ ಸಾಗಿದರೆ ಅಲ್ಲಿಯವರೆಗೆ ಅಪಾರ ಹಣ ಖರ್ಚು ಮಾಡಬೇಕಾಗುತ್ತದೆ. ಈ ಇಬ್ಬರು ಇಷ್ಟೊಂದು ಹಣವನ್ನು ಖರ್ಚು ಮಾಡುವುದಕ್ಕೆ ಯಾವ ಕಾರಣಕ್ಕಾಗಿ ಸಿದ್ಧವಾಗಿದ್ದಾರೆ? ಇವರಿಗೆ ಈ ಹಣವನ್ನು ಒದಗಿಸುವ ಬೇರೆ  ಶಕ್ತಿಗಳಿವೆಯೇ? ಅವರು ಯಾರು? ಅವರ ಉದ್ದೇಶ ಏನು? ಅವರೇಕೆ ಮಸೀದಿಗಳ ಹಿಂದೆ ಬಿದ್ದಿದ್ದಾರೆ?... ಇಂಥ ಅನೇಕ  ಪ್ರಶ್ನೆಗಳಿಗೆ ಈವರೆಗೂ ಉತ್ತರ ಸಿಕ್ಕಿಲ್ಲ. ಅಂದಹಾಗೆ,

ದುಶ್ಯಂತ್  ದವೆ ಅವರ ಕಣ್ಣೀರು ಚಂದ್ರಚೂಡ್ ಅವರನ್ನು ತಲುಪಿದೆಯೋ ಗೊತ್ತಿಲ್ಲ. ಒಂದುವೇಳೆ ತಲುಪಿದ್ದರೂ ಅವರಲ್ಲಿ  ತಮ್ಮ ತೀರ್ಪಿಗಾಗಿ ಪಶ್ಚಾತ್ತಾಪ ಭಾವ ಮೂಡಿಸಿದೆಯೋ, ಅದೂ ಗೊತ್ತಿಲ್ಲ. ಆದರೆ, ಈ ದೇಶದ ಮುಸ್ಲಿಮರ ಸಹಿತ ಶಾಂತಿ,  ಸಾಮರಸ್ಯವನ್ನು ಬಯಸುವ ದೊಡ್ಡದೊಂದು ಜನಸಮೂಹ ಅವರ ಈ ತೀರ್ಪನ್ನು ಎಂದೂ ಮರೆಯಲಾರದು ಎಂಬುದು  ನಿಜ. ಹಿಂದೂ ಮುಸ್ಲಿಮರನ್ನು ವಿಭಜಿಸಿ, ಧರ್ಮ ದ್ವೇಷವನ್ನು ಸದಾ ಜೀವಂತದಲ್ಲಿಡ ಬಯಸಿರುವ ಗುಂಪಿಗೆ ಅತ್ಯುತ್ತಮ  ಅಸ್ತ್ರವನ್ನು ನೀಡಿದ ಅವರನ್ನು ಇತಿಹಾಸ ಎಂದೂ ಕ್ಷಮಿಸದು.

Monday, 2 December 2024

ಕಡುಕೋಳ: ಮತಾಂಧರ ವಿರುದ್ಧ ಯುಎಪಿಎ ದಾಖಲಿಸಿ



ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಡುಕೋಳ ಗ್ರಾಮದಲ್ಲಿ ನಡೆದಿರುವ ಹಿಂಸಾಚಾರದ ಬಗ್ಗೆ ಮಾಧ್ಯಮಗಳು  ಬೆಳಕು ಚೆಲ್ಲಿದ್ದು ಶೂನ್ಯ ಅನ್ನುವಷ್ಟು ಕಡಿಮೆ. ಅಲ್ಲೇನು ನಡೆದಿದೆ ಎಂಬುದು ಕಡುಕೋಳವನ್ನು ಬಿಟ್ಟರೆ ರಾಜ್ಯದ ಉಳಿದ  ಭಾಗಗಳಿಗೆ ಬಹಳ ಕಡಿಮೆಯಷ್ಟೇ ಗೊತ್ತಿದೆ. ಇಲ್ಲಿಯ ಸುಮಾರು 70ರಷ್ಟು ಮುಸ್ಲಿಮ್ ಕುಟುಂಬಗಳು ಊರು ತೊರೆದಿವೆ.  ಘಟನೆ ನಡೆದು ಎರಡು ವಾರಗಳು ಕಳೆದರೂ ಈ ಕುಟುಂಬಗಳು ಮರಳಿ ತಮ್ಮ ಮನೆಗಳಿಗೆ ಮರಳಲು ಹೆದರುತ್ತಿವೆ.  ಎರಡು ವಾರಗಳ ಹಿಂದೆ ರಾತ್ರಿ ಏಕಾಏಕಿ ಮನೆಗೆ ನುಗ್ಗಿ ಥಳಿಸಿದವರು, ದಾಂಧಲೆ ನಡೆಸಿದವರು ಮತ್ತು ಸೊತ್ತುಗಳನ್ನು  ನಾಶ ಮಾಡಿದವರು ಮರಳಿ ಬಂದು ಅದನ್ನೇ ಪುನರಾವರ್ತಿಸಲಾರರು ಎಂದು ಹೇಳುವುದು ಹೇಗೆ ಎಂಬ ಭಯ ಅವರಲ್ಲಿ  ಆವರಿಸಿದೆ. ಸನ್ಮಾರ್ಗ ತಂಡ ಆ ಇಡೀ ಪ್ರದೇಶಕ್ಕೆ ಭೇಟಿ ಕೊಟ್ಟು ಸಂತ್ರಸ್ತರನ್ನು ಮಾತನಾಡಿಸಿದಾಗ ಸಿಕ್ಕ ಮಾಹಿತಿಗಳು  ಆಘಾತಕಾರಿಯಾಗಿವೆ. ತಾವೇಕೆ ದಾಳಿಗೊಳಗಾಗಿದ್ದೇವೆ ಎಂಬ ಸ್ಪಷ್ಟ ತಿಳುವಳಿಕೆಯೇ ಸಂತ್ರಸ್ತರಿಗಿಲ್ಲ. ಯಾವ ತಪ್ಪೂ  ಮಾಡದೇ ದಾಳಿಗೊಳಗಾಗುವುದೆಂದರೆ, ಭವಿಷ್ಯವೇನು ಎಂಬ ಆತಂಕ ಅವರೆಲ್ಲರನ್ನೂ ಕಾಡತೊಡಗಿದೆ. ಮುಸ್ಲಿಮ್  ದ್ವೇಷವನ್ನು ಅಮಲಾಗಿ ಏರಿಸಿಕೊಂಡವರನ್ನು ಮಟ್ಟ ಹಾಕದಿದ್ದರೆ ರಾಜ್ಯ ಎಂಥ ಅನಾಹುತಕಾರಿ ಪರಿಸ್ಥಿತಿಗೆ  ಸಾಕ್ಷಿಯಾಗಬೇಕಾದೀತು ಎಂಬುದಕ್ಕೆ ಈ ಕಡುಕೋಳ ಒಂದು ಪುರಾವೆ ಅನ್ನಬಹುದು.

ವಕ್ಫ್ ಹೆಸರಲ್ಲಿ ರಾಜ್ಯದಲ್ಲಿ ಮೊದಲ ಹಿಂಸಾಚಾರ ನಡೆದ ಗ್ರಾಮ ಕಡುಕೋಳ. ಹಾಗಂತ, ಈ ಗ್ರಾಮದ ರೈತರಿಗಾಗಲಿ  ಜಮೀನುದಾರರಿಗಾಗಲಿ ಕಂದಾಯ ಇಲಾಖೆಯಿಂದ ನೋಟೀಸೇ ಬಂದಿಲ್ಲ. ನಿಮ್ಮ ಜಮೀನು ವಕ್ಫ್ ಗೆ  ಸೇರಿದ್ದಾಗಿದೆ ಎಂದು  ಯಾವ ಮುಸ್ಲಿಂ ರಾಜಕಾರಣಿಯೂ ಕಡುಕೋಳ ಗ್ರಾಮದ ರೈತರಲ್ಲಿ ಹೇಳಿಲ್ಲ. ಯಾವ ಅಧಿಕಾರಿಯೂ ಅಲ್ಲಿ ಸರ್ವೇ ನಡೆಸಿಲ್ಲ.  ನಿಮ್ಮನ್ನು ಒಕ್ಕಲೆಬ್ಬಿಸುವುದಾಗಿ ಯಾವ ಮುಸ್ಲಿಮರೂ ರೈತರಿಗೆ ಹೇಳಿಲ್ಲ. ಮಸೀದಿಯಿಂದ ಅಂಥದ್ದೊಂದು  ಘೋಷಣೆಯೂ  ನಡೆದಿಲ್ಲ. ಹೀಗಿದ್ದ ಮೇಲೂ ಏಕಾಏಕಿ ಮುಸ್ಲಿಮ್ ಮನೆಗಳಿಗೆ ದಾಳಿಯಾಗಲು ಕಾರಣವೇನು? ಬಿಜೆಪಿ ಪ್ರಣೀತ  ವಿಚಾರಧಾರೆ ಎಷ್ಟು ಮನುಷ್ಯ ವಿರೋಧಿ ಅನ್ನುವುದನ್ನೇ ಇಲ್ಲಿಯ ಹಿಂಸಾಚಾರ ಹೇಳುತ್ತದೆ. ನಿಮ್ಮ ಭೂಮಿ ವಕ್ಫ್  ಇಲಾಖೆಯ ಪಾಲಾಗುತ್ತದೆ ಎಂಬ ಭಯವನ್ನು ಬಿಜೆಪಿ ಈ ಕಡುಕೋಳದ ಹಿಂದೂಗಳಲ್ಲಿ ಮೂಡಿಸಿದೆ. ಮುಸ್ಲಿಮರನ್ನು  ಹಿಂದೂಗಳ ವೈರಿಗಳಂತೆ ನಿರಂತರ ಬಿಂಬಿಸತೊಡಗಿದೆ. ವಿಜಯಪುರದಲ್ಲಿ ರೈತರಿಗೆ ನೀಡಲಾದ ನೋಟೀಸನ್ನು  ಎತ್ತಿಕೊಂಡು ಹಿಂದೂಗಳಲ್ಲಿ ಅಸ್ತಿತ್ವದ ಭಯವನ್ನು ಹುಟ್ಟು ಹಾಕಿದೆ. ಮುಸ್ಲಿಮರು ನಿಮ್ಮ ಜಮೀನು ಕಸಿಯಲು ಹೊಂಚು  ಹಾಕುತ್ತಿರುವ ವೈರಿಗಳು ಎಂಬಂತೆ  ಬಿಂಬಿಸಿದೆ. ಈ ಎಲ್ಲದರ ಒಟ್ಟು ಪರಿಣಾಮವೇ ಈ ದಾಳಿ ಎಂಬುದು ಅಲ್ಲಿಯ ಒಟ್ಟು  ಪರಿಸ್ಥಿತಿಯನ್ನು ಅವಲೋಕಿಸಿದಾಗ ಅರಿವಾಗುತ್ತದೆ. ಅಲ್ಲಿನ ಮಸೀದಿಯ ಅಧ್ಯಕ್ಷ ಮೌಲಾಸಾಬ್ ನದಾಫ್ ಎಂಬ ಸರಿಯಾಗಿ  ದೃಷ್ಟಿಯೂ ಕಾಣಿಸದ ವಯೋ ವೃದ್ಧರನ್ನೂ ಅವರ ಮನೆಯ ಮಹಿಳೆಯರು, ಮಕ್ಕಳನ್ನೂ ಕ್ರೂರಿಗಳು ಥಳಿಸಿದ್ದಾರೆ. ಅಪ್ಪಟ  ಕೃಷಿಕರಾದ ಮತ್ತು ಮನೆಯಲ್ಲಿ ಗೋವುಗಳನ್ನು ಸಾಕುತ್ತಿರುವ ಅವರಿಗೆ ಈ ಗಾಯ ಬದುಕನ್ನಿಡೀ ಕಾಡಲಿದೆ ಎಂಬುದಕ್ಕೆ  ಅವರ ನೋವುಭರಿತ ಮಾತುಗಳೇ ಸಾಕ್ಷಿ. ಹಲವು ಮನೆಗಳ ಮೇಲೆ ದಾಳಿಯಾಗಿವೆ. ಧರ್ಮದ್ವೇಷಿ ಅಮಲನ್ನು  ಏರಿಸಿಕೊಂಡವರ ದಾಳಿಗೆ ಒಂದಿಬ್ಬರು ತೀವ್ರ ಗಾಯಗೊಂಡಿದ್ದಾರೆ. ಮನೆ, ಪೀಠೋಪಕರಣಗಳು ನಾಶವಾಗಿವೆ. ಎರಡು  ವಾರಗಳಿಂದ ಇಲ್ಲಿನ ಮಸೀದಿ ಬಾಗಿಲು ಮುಚ್ಚಿದೆ. ಈ ಎಲ್ಲವೂ ಯಾಕೆ ನಡೆಯಿತು ಎಂಬ ಪ್ರಶ್ನೆಗೆ ವಕ್ಫ್ ಅನ್ನು  ತೋರಿಸಲಾಗುತ್ತದೆ. ಅಂದಹಾಗೆ,

ಈ ವಕ್ಫ್ ವಿಷಯಕ್ಕೂ ಮುಸ್ಲಿಮರಿಗೂ ಏನು ಸಂಬಂಧ? ವಿಜಯಪುರದ ರೈತರಿಗಾಗಲಿ ಇತರರಿಗಾಗಲಿ ಮುಸ್ಲಿಮರು  ನೋಟೀಸು ಕಳುಹಿಸಿದ್ದಾರಾ? ಅಥವಾ ನೋಟೀಸು ಕಳುಹಿಸುವಂತೆ ಪ್ರತಿಭಟನೆ ನಡೆಸಿದ್ದಾರಾ? ರೈತರ ಜಮೀನಿನಲ್ಲಿ  ನಿಂತು ಇದು ನಮ್ಮದು ಎಂದು ಹಕ್ಕು ಮಂಡಿಸಿದ್ದಾರಾ? ಮುಸ್ಲಿಮರು ತಮ್ಮ ಪಾಡಿಗೆ ತಾವು ಬದುಕುತ್ತಿರುವಾಗ ವಕ್ಫ್ನ  ಹೆಸರಲ್ಲಿ ಮುಸ್ಲಿಮರ ಮನೆಗಳಿಗೆ ದಾಳಿ ನಡೆಸಿರುವುದೇಕೆ? ಇದನ್ನು ವಕ್ಫ್ ಪ್ರೇರಿತ ದಾಳಿ ಎನ್ನುವುದು ಎಷ್ಟು ಸರಿ? ಇದು  ಶುದ್ಧ ರಾಜಕೀಯ ಪ್ರೇರಿತ ಧರ್ಮದ್ವೇಷದ ದಾಳಿಯಲ್ಲವೇ? ಮುಸ್ಲಿಮರನ್ನು ಹೇಗೆ ನಡೆಸಿಕೊಂಡರೂ ನಡೆಯುತ್ತದೆ ಎಂಬ  ಭಂಡ ಧೈರ್ಯದ ಕೃತ್ಯವಲ್ಲವೇ? ರಾಜ್ಯ ಸರಕಾರ ಯಾಕೆ ಈ ಘಟನೆಯನ್ನು ಕ್ಷುಲ್ಲಕವಾಗಿ ಕಂಡಿದೆ? ದೂರು ಕೊಡಲೂ  ಹಿಂಜರಿಯುವ ಈ ಸಂತ್ರಸ್ತರ ಬೆನ್ನಿಗೆ ನಿಂತು ಮತಾಂಧರನ್ನು ಮಟ್ಟ ಹಾಕಬೇಕಾದ ಸರಕಾರ ಯಾಕೆ ತೇಪೆ ಹಚ್ಚುವ  ಪ್ರಯತ್ನಕ್ಕಿಳಿದಿದೆ? ಸಂತ್ರಸ್ತರಿಗೆ, ಒಮ್ಮೆ ಮನೆಗೆ ಮರಳಿದರೆ ಸಾಕು ಎಂಬ ಅನಿವಾರ್ಯತೆಯಿದೆ. ಯಾಕೆಂದರೆ, ಅವರೆಲ್ಲ  ದುಡಿದು ತಿನ್ನುವ ಬಡಪಾಯಿಗಳು. ಆದರೆ, ಇಂಥ ಅನಿವಾರ್ಯತೆಗಳನ್ನೇ ಮತಾಂಧರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.  ರಾಜಿ ಮಾತುಕತೆಯಲ್ಲಿ ಮುಗಿಸುವ ಒತ್ತಡ ಹೇರತೊಡಗುತ್ತಾರೆ. ನಿರ್ದಿಷ್ಟ ರಾಜಕೀಯ ಚಿಂತನೆಯೇ ಇಂಥ ಕ್ರೌರ್ಯಗಳ  ಹಿಂದಿರುವುದರಿAದ ರಾಜಕೀಯ ಒತ್ತಡಗಳೂ ಬೀಳುತ್ತವೆ. ಅಂತಿಮವಾಗಿ,

ದೂರು ದಾಖಲಾಗಿಲ್ಲ ಎಂಬ ಪಿಳ್ಳೆ ನೆಪ ಇಟ್ಟುಕೊಂಡು ಸರಕಾರ ತಪ್ಪಿಸಿಕೊಂಡರೆ, ಊರಿಗೆ ಮರಳಬೇಕಾದರೆ ದೂರು  ದಾಖಲಿಸಬೇಡಿ ಎಂಬ ಒತ್ತಡ ಹಾಕಿ ಈ ದುರುಳರು ತಪ್ಪಿಸಿಕೊಳ್ಳುತ್ತಾರೆ. ಇದೇ ಧೈರ್ಯದಿಂದ ಮತ್ತೊಂದು ಮತಾಂಧ  ಕೃತ್ಯಕ್ಕೆ ಸಂಚು ನಡೆಸುತ್ತಾರೆ. ಕಾಂಗ್ರೆಸ್ ಬಂದರೂ ಬಿಜೆಪಿ ಬಂದರೂ ಮುಸ್ಲಿಮರ ಕುರಿತಾದ ಧೋರಣೆಯಲ್ಲಿ ಅಂಥ  ವ್ಯತ್ಯಾಸವೇನಿಲ್ಲ ಎಂಬ ಆರೋಪಕ್ಕೆ ಪೂರಕವಾಗಿಯೇ ಸರಕಾರ ನಡಕೊಳ್ಳುತ್ತಿದೆ ಎಂದೇ ಹೇಳಬೇಕಾಗುತ್ತದೆ. ಅಂದಹಾಗೆ,

ರೈತರಿಗೆ ನೋಟೀಸು ಕಳುಹಿಸಿರುವುದು ಸರಕಾರದ ಅಧೀನದಲ್ಲಿರುವ ಕಂದಾಯ ಇಲಾಖೆ. ವಕ್ಫ್ ಸಚಿವಾಲಯ  ಇರುವುದು ಸರಕಾರದ ಅಧೀನದಲ್ಲಿ. ವಕ್ಫ್ ಸಚಿವರ ನೇಮಕದಿಂದ ಹಿಡಿದು ವಕ್ಫ್ ಇಲಾಖೆ, ಕಂದಾಯ ಇಲಾಖೆ ಸಹಿತ  ಈ ಇಡೀ ಪ್ರಕ್ರಿಯೆ ನಡೆಯುವುದೂ ಸರಕಾರದ ಅಧೀನದಲ್ಲೇ. ವಕ್ಫ್ ಇಲಾಖೆಯಲ್ಲಿ ವಕ್ಫ್ ಟ್ರಿಬ್ಯೂನಲ್ ಎಂಬ  ನ್ಯಾಯಾಂಗ ವ್ಯವಸ್ಥೆ ಇದೆ. ಅದನ್ನು ರಚಿಸಿರುವುದೂ ಈ ದೇಶದ್ದೇ  ಸರಕಾರಗಳು. ಹೈಕೋರ್ಟು ನ್ಯಾಯಾಧೀಶರೇ ಈ  ಟ್ರಿಬ್ಯೂನಲ್‌ಗೆ ನ್ಯಾಯಾಧೀಶರನ್ನು ಆಯ್ಕೆ ಮಾಡುತ್ತಾರೆ. ಈ ಟ್ರಿಬ್ಯೂನಲ್ ಕೂಡಾ ಸಂವಿಧಾನದ ಅಡಿಯಲ್ಲೇ  ಇದೆ. ಈ  ದೇಶದಲ್ಲಿ ವಕ್ಫ್ ನಿಯಮಾವಳಿಯನ್ನು ಮುಸ್ಲಿಮರು ರಚಿಸಿಲ್ಲ. ಅದನ್ನು ರಚಿಸಿದ್ದು ಮತ್ತು ಪಾರ್ಲಿಮೆಂಟ್‌ನಲ್ಲಿ  ಅಂಗೀಕರಿಸಿಕೊಂಡದ್ದೂ ಇಲ್ಲಿನ ಸರಕಾರಗಳೇ. ಈವರೆಗಿನ ಕಾಂಗ್ರೆಸ್ ಸರಕಾರ, ಬಿಜೆಪಿ ಸರಕಾರ, ಜನತಾ ಸರಕಾರ ಮತ್ತು  ಇನ್ನಿತರ ಸರಕಾರಗಳು ಈ ವಕ್ಫ್ ನಿಯಮಾವಳಿಗಳನ್ನು ಒಪ್ಪಿಕೊಳ್ಳುತ್ತಾ ಅಗತ್ಯ ಕಂಡಾಗ ತಿದ್ದುಪಡಿ ಮಾಡಿಕೊಳ್ಳುತ್ತಾ ಮತ್ತು  ಜಾರಿಮಾಡಿಕೊಳ್ಳುತ್ತಾ ಬಂದಿವೆ. ಈ ಎಲ್ಲದರಲ್ಲೂ ಮುಸ್ಲಿಮರ ಪಾತ್ರ ತೀರಾತೀರಾ ಅತ್ಯಲ್ಪ. ಶಾಸಕಾಂಗ, ನ್ಯಾಯಾಂಗ  ಮತ್ತು ಕಾರ್ಯಾಂಗಗಳಲ್ಲಿ ಜುಜುಬಿ ಅನ್ನುವಷ್ಟೇ ಪ್ರಾತಿನಿಧ್ಯವಿರುವ ಮತ್ತು ಏನೇನೂ ಪ್ರಭಾವಿಯಾಗಿಲ್ಲದ ಮುಸ್ಲಿಮ್  ಸಮುದಾಯಕ್ಕೆ ಈ ಎಲ್ಲ ಪ್ರಕ್ರಿಯೆಗಳಲ್ಲಿ ಪ್ರಭಾವ ಬೀರುವ ಸಾಮರ್ಥ್ಯವೂ ಇಲ್ಲ. ಇಷ್ಟೆಲ್ಲಾ ಇದ್ದೂ ವಕ್ಫ್ ಹೆಸರಲ್ಲಿ ಬಿಜೆಪಿ  ಮತ್ತು ಅವರ ಬೆಂಬಲಿಗರು ಮುಸ್ಲಿಮರನ್ನೇ ಕಟಕಟೆಯಲ್ಲಿ ನಿಲ್ಲಿಸಿ ದಿನಾ ಪ್ರಚೋದನೆ ಮಾಡುತ್ತಿ ರುವುದೆಂದರೆ ಏನರ್ಥ?  ಮುಸ್ಲಿಮರನ್ನು ತೋರಿಸಿ ಹೊಟ್ಟೆ ಹೊರೆಯುವುದಕ್ಕೆ ಇವರಿಗೆ ನಾಚಿಕೆಯೂ ಆಗುವುದಿಲ್ಲವೇ? ಈ ದರಿದ್ರ ರಾಜಕೀಯಕ್ಕೆ  ಸಾಮಾನ್ಯ ಜನರು ಯಾಕೆ ಇನ್ನೂ ಮರುಳಾಗುತ್ತಿದ್ದಾರೆ?

ಕಡುಕೋಳದಲ್ಲಿ ಏನು ನಡೆದಿದೆಯೋ ಅದು ಈ ರಾಜ್ಯದಲ್ಲಿ ಧರ್ಮದ್ವೇಷಕ್ಕೆ ಇನ್ನೂ ಮಾರುಕಟ್ಟೆಯಿದೆ ಎಂಬುದನ್ನು ಸಾರಿ  ಹೇಳಿದ ಪ್ರಸಂಗವಾಗಿದೆ. ಮುಸ್ಲಿಮರ ಮೇಲೆ ದಾಳಿ ಮಾಡುವುದಕ್ಕೆ ಕಾರಣಗಳೇ ಬೇಕಿಲ್ಲ ಎಂದು ಘಂಟಾಘೋಷವಾಗಿ  ಸಾರಿದ ಸಂದರ್ಭವಾಗಿದೆ. ಮುಸ್ಲಿಮರನ್ನು ಹೇಗೆ ಬೇಕಾದರೂ ನಡೆಸಿಕೊಳ್ಳಬಲ್ಲೆವು, ಅಗತ್ಯ ಕಂಡರೆ ಊರಿಂದಲೇ  ಓಡಿಸಬಲ್ಲೆವು ಎಂಬ ಕಾಡು ನ್ಯಾಯವನ್ನು ಪ್ರಾಮಾಣಿಕವಾಗಿ ಜಾರಿ ಮಾಡಿ ತೋರಿಸಿದ ಘಟನೆಯಾಗಿದೆ. ಇದು  ಮುಂದುವರಿಯಬಾರದು. ಕಡುಕೋಳದ ಸಂತ್ರಸ್ತರು ದೂರು ಕೊಟ್ಟಿದ್ದಾರೋ ಇಲ್ಲವೋ, ಆದರೆ ಮುಸ್ಲಿಮರನ್ನು ಊರಿ ನಿಂದ ಪಲಾಯನ ಮಾಡುವಂತೆ ದಾಳಿ ನಡೆಸಲಾದದ್ದು ನಿಜ. ಅವರು ಸಂತ್ರಸ್ತ ರಾಗಿ ಪಕ್ಕದ ಊರಲ್ಲಿ ನೆಲೆಸಿರುವುದೂ  ನಿಜ. ಆದ್ದರಿಂದ, ಇಂಥ ಸ್ಥಿತಿಗೆ ಕಾರಣರಾದ ಮತಾಂಧರನ್ನು ಹೆಡೆಮುರಿ ಕಟ್ಟಿ ಜೈಲಿಗಟ್ಟಬೇಕು. ದೇಶದಲ್ಲಿ ಗಲಭೆ ಎಬ್ಬಿಸಲು  ಪ್ರಚೋದಿಸುವ ಯುಎಪಿಎ ಕಾನೂನಿನಡಿ ಕೇಸು ದಾಖಲಿಸಿ ಪಾಠ ಕಲಿಸಬೇಕು.

Monday, 11 November 2024

ಬಿಜೆಪಿ 10 ವರ್ಷಗಳಿಂದ ಅಧಿಕಾರದಲ್ಲಿದ್ದೂ ಹಿಂದೂ ಅಪಾಯದಲ್ಲಿರುವುದೇಕೆ?

 




ಬಿಜೆಪಿ ಮತ್ತು ಅವರ ಬೆಂಬಲಿಗ ಪಡೆ ಹರಡುತ್ತಾ ಇರುವ ಸುಳ್ಳುಗಳು ಸಮಾಜದ ಮೇಲೆ ಯಾವ ರೀತಿಯಲ್ಲಿ ಪ್ರಭಾವ  ಬೀರುತ್ತಿದೆ ಅನ್ನುವುದಕ್ಕೆ ವಿಜಯಪುರ ಜಿಲ್ಲೆಯ ಹೊನವಾಡ ಗ್ರಾಮವೇ ಸಾಕ್ಷಿ. ಈ ಗ್ರಾಮದ 15 ಸಾವಿರ ಎಕ್ರೆ ಭೂಮಿಯನ್ನು ಸರಕಾರ ವಕ್ಫ್ ಇಲಾಖೆಗೆ ಬರೆದು ಕೊಡಲು ಹೊರಟಿದೆ ಎಂಬ ಸುಳ್ಳನ್ನು ಸಂಸದ ತೇಜಸ್ವಿ ಸೂರ್ಯ, ಶಾಸಕ  ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಇತರರು ಹಬ್ಬಿಸಿದ್ದಾರೆ. ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಅವರು ಈ  ವಿಜಯಪುರಕ್ಕೆ ಭೇಟಿ ಕೊಟ್ಟು ವಕ್ಫ್ ಅದಾಲತ್‌ನಲ್ಲಿ ಭಾಗಿಯಾದುದು ಮತ್ತು ವಕ್ಫ್ ಭೂಮಿಯ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದನ್ನೇ ಬಿಜೆಪಿ ನಾಯಕರು ತಮ್ಮ ಸುಳ್ಳಿನ ಪ್ರಚಾರಕ್ಕಾಗಿ ಬಳಸಿಕೊಂಡಿದ್ದಾರೆ. ಇದನ್ನು  ನಂಬಿದ ಸ್ಥಳೀಯ ರೈತರು ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಕಂದಾಯ ಇಲಾಖೆಯಿಂದ ನೋಟೀಸು ಬಂದಿದ್ದು, ಅದರಲ್ಲಿ ವಕ್ಫ್ ಬೋರ್ಡ್ ಬೆಂಗಳೂರು ಎಂದು ಬರೆದಿರುವುದಾಗಿ ಅವರು ಹೇಳಿದ್ದಾರೆ. ರೈತರನ್ನು ಹೀಗೆ  ಪ್ರಚೋದಿಸಿದ ಬಿಜೆಪಿ, ಸರಣಿ ಹೇಳಿಕೆಗಳನ್ನೂ ನೀಡಿ ರೈತರ ಭೂಮಿ ವಕ್ಫ್ ಪಾಲಾಗಲಿದೆ ಎಂಬ ಭೀತಿಯನ್ನು ಹುಟ್ಟು  ಹಾಕಿದೆ. ಇದಾದ ಬಳಿಕ ಜಿಲ್ಲಾಧಿಕಾರಿ ಸ್ಪಷ್ಟೀಕರಣ ನೀಡಿದ್ದಾರೆ. ‘ಯಾವುದೇ ರೈತರಿಗೆ ಸರಕಾರ ನೋಟೀಸು ನೀಡಿಲ್ಲ’  ಎಂದು ಅವರು ಹೇಳಿದ್ದಾರೆ. ಕಂದಾಯ ಇಲಾಖೆಗೆ ಜಮೀನು ವರ್ಗಾವಣೆ ಮಾಡುವ ಅಧಿಕಾರವೇ ಇಲ್ಲ ಎಂದೂ ಅವರು  ಹೇಳಿದ್ದಾರೆ. ಇನ್ನು, ಯಾರಿಗೇ ಆಗಲಿ ನೋಟೀಸು ಬರುವುದು ಅಪರಾಧ ಅಲ್ಲ, ನಿಮ್ಮಲ್ಲಿರುವ ದಾಖಲೆಯನ್ನು ಮಂಡಿಸಿ  ಭೂಮಿಯ ಒಡೆತನವನ್ನು ಜಾಹೀರುಪಡಿಸಿದರೆ ಎಲ್ಲವೂ ಮುಗಿಯುತ್ತದೆ...  ಎಂದವರು ಹೇಳಿದ್ದಾರೆ. ಇದರ ಬೆನ್ನಿಗೇ ಸಚಿವ  ಎಂ.ಬಿ. ಪಾಟೀಲ್ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಹೊನವಾಡದಲ್ಲಿ 11 ಎಕ್ರೆ ವಕ್ಫ್ ಭೂಮಿ ಮಾತ್ರವೇ ಇದ್ದು, ಇದರ ಪೈಕಿ 10  ಎಕ್ರೆ ಜಾಗದಲ್ಲಿ ಕಬರಸ್ತಾನ ಮತ್ತು ಮಸೀದಿಗಳಿವೆ ಎಂದೂ ಅವರು ಹೇಳಿದ್ದಾರೆ.

ಅಂದಹಾಗೆ, ಹೊನವಾಡ ಎಂಬ ಗ್ರಾಮದಲ್ಲಿ 15 ಸಾವಿರ ಎಕರೆ ಭೂಮಿ ಇರುವುದೇ ಅನುಮಾನ. ಯಾವುದೇ ಗ್ರಾಮ 15  ಸಾವಿರ ಎಕರೆಯಷ್ಟು ವಿಸ್ತಾರವಾಗುವುದಕ್ಕೆ ಸಾಧ್ಯವೂ ಇಲ್ಲ. ಇನ್ನು, ಅಕ್ಕಪಕ್ಕದ ಪ್ರದೇಶಗಳನ್ನೆಲ್ಲ ಸೇರಿಸಿಕೊಂಡೇ ಈ ಹೊನವಾಡ ಗ್ರಾಮವನ್ನು ಲೆಕ್ಕ ಹಾಕಿದರೂ 15 ಸಾವಿರ ಎಕ್ರೆ ಭೂಮಿ ಇರುವುದು ಕಷ್ಟಸಾಧ್ಯ. ಬಿಜೆಪಿಯ ಆರೋಪಗಳು  ಎಂದೂ ವಾಸ್ತವವನ್ನು ಆಧರಿಸಿ ಇರುವುದಿಲ್ಲ ಅನ್ನುವುದಕ್ಕೆ ಇದೊಂದು ಸಾಕ್ಷ್ಯ  ಅಷ್ಟೇ. ಈಗಿನ ಸಿದ್ದರಾಮಯ್ಯ ಸರಕಾರಕ್ಕಿಂತ  ಮೊದಲು ರಾಜ್ಯದಲ್ಲಿ ಬಿಜೆಪಿ ಸರಕಾರವಿತ್ತು. ಆಗಲೂ ಈ ಹೊನವಾಡ ಗ್ರಾಮ ಇತ್ತು ಮತ್ತು ವಕ್ಫ್ ಇಲಾಖೆ, ಕಂದಾಯ  ಇಲಾಖೆ ಮತ್ತು ಜಿಲ್ಲಾಧಿಕಾರಿ ಕಚೇರಿಯೂ ಇತ್ತು. ಅಲ್ಲದೇ, ಹೊನವಾಡದಲ್ಲಿ ಎಷ್ಟು ವಕ್ಫ್ ಭೂಮಿ ಇದೆ ಎಂಬ ಬಗ್ಗೆ  ಆಗಲೇ ಗಜೆಟೆಡ್ ವರದಿಯೂ ಇತ್ತು. ಒಂದುವೇಳೆ, ರೈತರ ಭೂಮಿಯನ್ನು ವಕ್ಫ್ ಇಲಾಖೆ ಕಬಳಿಸುತ್ತಿದೆ ಎಂದಾದರೆ,  ಅದನ್ನು ಆಗಲೇ ತಡೆಯಬಹುದಿತ್ತಲ್ಲವೇ? ಹೊನವಾಡ ಸಹಿತ ಇಡೀ ವಿಜಯಪುರದಲ್ಲಿ ಎಷ್ಟು ವಕ್ಫ್ ಭೂಮಿಯಿದೆಯೋ  ಅವು ಯಾವುವೂ ಸಿದ್ದರಾಮಯ್ಯ ಸರಕಾರ ಬಂದ ಬಳಿಕ ದಿಢೀರನೇ ಉದ್ಭವವಾಗಿರುವುದೇನಲ್ಲವಲ್ಲ. ರಾತ್ರಿ  ಬೆಳಗಾಗುವುದರೊಳಗಾಗಿ ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿಯಾಗಿ ಘೋಷಿಸಲು ಸಾಧ್ಯವೂ ಇಲ್ಲವಲ್ಲ. ಒಂದು ಆಸ್ತಿ  ವಕ್ಫ್ ಆಸ್ತಿಯಾಗಿ ನೋಂದಾಯಿತವಾಗಬೇಕಾದರೆ ನಿರ್ದಿಷ್ಟ ಕಾನೂನು ನಿಯಮಗಳಿವೆ. ಯಾರೇ ಆಗಲಿ, ಒಂದು ಜಮೀನಿನಲ್ಲಿ ನಿಂತು, ಇದು ವಕ್ಫ್ ಜಮೀನು ಅಂದರೆ ಅದು ವಕ್ಫ್ ಆಸ್ತಿ ಆಗುವುದಕ್ಕೆ ಸಾಧ್ಯವೇ ಇಲ್ಲ. ಹೀಗಿರುವಾಗ,

 2019ರಿಂದ  2023ರ ವರೆಗೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಗೆ ಹೊನವಾಡದ ಸಂಗತಿ ಗೊತ್ತಿರಲಿಲ್ಲವೇ? ಅಲ್ಲಿ 15 ಸಾವಿರ ಎಕ್ರೆ  ಭೂಮಿಯಿದೆ ಎಂದು ವಕ್ಫ್ ಇಲಾಖೆ ಹೇಳುತ್ತಿದೆಯೆಂದಾಗಿದ್ದರೆ ಮತ್ತು ಈ ಭೂಮಿಯೆಲ್ಲಾ ರೈತರದ್ದು ಎಂದಾಗಿದ್ದರೆ  ಯಾಕೆ ಬೊಮ್ಮಾಯಿ ಆಗಲಿ ಯಡಿಯೂರಪ್ಪರಾಗಲಿ ಕ್ರಮ ಕೈಗೊಳ್ಳಲಿಲ್ಲ? ಆಗ ಇಲ್ಲದೇ ಇರುವ ಸಮಸ್ಯೆ ಈಗ ದಿಢೀರನೇ  ಹುಟ್ಟಿಕೊಂಡದ್ದು ಹೇಗೆ?

ನಿಜವಾಗಿ, ಬಿಜೆಪಿ ಭಾವನಾತ್ಮಕ ವಿಷಯದ ಕೊರತೆಯಿಂದ ಬಳಲುತ್ತಿದೆ. ಈ ಮೊದಲು ಬಾಬರಿ ಮಸೀದಿಯಿತ್ತು. ಅದು  ಮುಕ್ತಾಯಗೊಂಡ ಬಳಿಕ ಇಡೀ ಭಾರತವನ್ನು ಏಕಪ್ರಕಾರವಾಗಿ ಪ್ರಭಾವಿಸಬಲ್ಲ ಭಾವನಾತ್ಮಕ ವಿಷಯದ ಕೊರತೆ ಅದಕ್ಕೆ  ಎದುರಾಯಿತು. ಉತ್ತರ ಭಾರತದಲ್ಲಿ ಒಂದೆರಡು ಮಸೀದಿಗಳನ್ನು ಆ ಬಳಿಕ ಮುನ್ನೆಲೆಗೆ ತರಲಾಯಿತು. ಆದರೆ,  ಅದು ಬಾಬರಿ ಮಸೀದಿ ರೀತಿಯಲ್ಲಿ ದೇಶದ ಜನರನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವುದರಲ್ಲಿ  ಸೋಲುಂಡಿತು.  ಬಹುತೇಕ ಉತ್ತರ ಭಾರತದ ಸ್ಥಳೀಯ ಸಂಗತಿಯಾಗಿ ಅದು ಮಾರ್ಪಟ್ಟ ಕಾರಣ ಬಿಜೆಪಿ ಅನ್ಯ ಸಂಗತಿಗಳತ್ತ ಕೈ  ಹಾಕಲೇಬೇಕಾಯಿತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗಾದ ಹಿನ್ನಡೆಯು, ಇನ್ನು ಮುಂದೆ ಮಂದಿರ  ಮಸೀದಿಗಳು ಮತ ತಂದುಕೊಡಲ್ಲ ಅನ್ನುವುದನ್ನು ಬಿಜೆಪಿಗೆ ಮನವರಿಕೆ ಮಾಡಿಸಿತು. ಆದರೆ, ಹಿಂದೂಗಳನ್ನು ಸದಾ  ಭಯದ ನೆರಳಲ್ಲಿ ಉಳಿಸುವುದರಲ್ಲೇ  ತಮ್ಮ ಅಧಿಕಾರದ ಗುಟ್ಟು ಇದೆ ಎಂಬುದು ಬಿಜೆಪಿಗೆ ಗೊತ್ತು. ಮುಸ್ಲಿಮರನ್ನು  ಹಿಂದೂಗಳ ವೈರಿಗಳು ಎಂದು ಬಿಂಬಿಸುವುದನ್ನೇ ಬಿಜೆಪಿ ರಾಜಕೀಯ ತಂತ್ರವಾಗಿಸಿಕೊಂಡಿದೆ. ಆದ್ದರಿಂದಲೇ, ಈ ವಕ್ಫ್  ವಿಷಯವನ್ನು ಅದು ಮುನ್ನೆಲೆಗೆ ತಂದಿದೆ. ವಕ್ಫ್ ಆಸ್ತಿ ಎಂಬುದು ಮುಸ್ಲಿಮರು ಎಲ್ಲೆಲ್ಲ ಇದ್ದಾರೋ ಅಲ್ಲೆಲ್ಲಾ  ಇರುವುದರಿಂದ ಬಾಬರಿ ಮಸೀದಿಯಂತೆ ಇಡೀ ದೇಶವನ್ನೇ ಈ ವಿಷಯದ ಮೂಲಕ ಪ್ರಭಾವಿಸಬಹುದು ಎಂದು ಅದು  ಭಾವಿಸಿದಂತಿದೆ. ಇದು ಮುಗಿದರೆ ಸಮಾನ ನಾಗರಿಕ ಸಂಹಿತೆಯನ್ನು ಬಿಜೆಪಿ ಎತ್ತಿಕೊಳ್ಳುವ ಸಾಧ್ಯತೆಯೂ ಇದೆ.

ವಕ್ಫ್ ಕಾಯ್ದೆಯ ಬಗ್ಗೆ ಮತ್ತು ವಕ್ಫ್ ಟ್ರಿಬ್ಯೂನಲ್ ಬಗ್ಗೆ ಈಗಾಗಲೇ ಬಿಜೆಪಿ ರಾಷ್ಟ್ರಾದ್ಯಂತ ತನ್ನ ಐಟಿ ಸೆಲ್ ಮೂಲಕ  ಸುಳ್ಳುಗಳನ್ನು ವ್ಯವಸ್ಥಿತವಾಗಿ ಪ್ರಚಾರ ಮಾಡುತ್ತಿದೆ. ವಕ್ಫ್ ಟ್ರಿಬ್ಯೂನಲ್‌ನ ಅಗತ್ಯ ಏನು ಎಂದು ಅದು ಪ್ರಶ್ನಿಸುತ್ತಿದೆ. ಜಮೀನು ವಿವಾದವನ್ನು ಸಾಮಾನ್ಯ ಸಿವಿಲ್ ಕೋರ್ಟ್ ಗಳಲ್ಲೇ  ಪರಿಹರಿಸಬಾರದೇ ಎಂದೂ ಜನರನ್ನು ಗೊಂದಲಕ್ಕೆ ದೂಡುತ್ತಿದೆ. 

ಅಂದಹಾಗೆ, ಆರಂಭದಲ್ಲಿ ವಕ್ಫ್ ವಿವಾದವು ಸಾಮಾನ್ಯ ಸಿವಿಲ್ ನ್ಯಾಯಾಲಯಗಳಲ್ಲೇ  ವಿಚಾರಣೆಗೆ ಒಳಗಾಗುತ್ತಿತ್ತು. ಆದರೆ, ನ್ಯಾಯ  ವಿತರಣೆಯಲ್ಲಾಗುವ ವಿಳಂಬವನ್ನು ಪರಿಗಣಿಸಿ ಸರಕಾರಗಳೇ ವಕ್ಫ್ ಟ್ರಿಬ್ಯೂನಲ್ ಅನ್ನು ರಚಿಸಿವೆ. ಇದರ ನ್ಯಾಯಾಧೀಶರು ಮುಸ್ಲಿಂ ಧರ್ಮಗುರುಗಳೋ ಕಾಜಿಗಳೋ ಅಲ್ಲ.  ಹೈಕೋರ್ಟು ಮತ್ತು ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರೇ ಇಲ್ಲೂ ನ್ಯಾಯಾಧೀಶರಾಗಿರುತ್ತಾರೆ. ಹಾಗಂತ, ಈ ಟ್ರಿಬ್ಯೂನಲ್‌ನಲ್ಲಿ  ಯಾವ ತೀರ್ಪು ಬರುತ್ತೋ ಅದುವೇ ಅಂತಿಮವಲ್ಲ. ಅಲ್ಲಿಂದ ಹೈಕೋರ್ಟ್ ಮತ್ತು ಸುಪ್ರೀಮ್ ಕೋರ್ಟ್ ಗೆ  ಹೋಗುವ  ಅವಕಾಶ ಕಕ್ಷಿದಾರರಿಗೆ ಇದ್ದೇ  ಇದೆ. ಆದರೆ ಬಿಜೆಪಿ ಈ ಸತ್ಯವನ್ನು ಅಡಗಿಸಿಟ್ಟು ಅಪಪ್ರಚಾರದಲ್ಲಿ ನಿರತವಾಗಿದೆ. ಈ ದೇಶದಲ್ಲಿ ಟ್ರಿಬ್ಯೂನಲ್ ಎಂಬುದು ವಕ್ಫ್ ಗೆ  ಸಂಬಂಧಿಸಿ ಮಾತ್ರವೇ ಇದೆ ಎಂಬಂತೆ  ಬಿಂಬಿಸುತ್ತಿದೆ. ನಿಜವಾಗಿ, ಅಸ್ಸಾಮ್‌ನ ಲ್ಲಿರುವ ಫಾರಿನರ್ಸ್ ಟ್ರಿಬ್ಯೂನಲ್ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಪ್ರತ್ಯೇಕ ಟ್ರಿಬ್ಯೂನಲ್‌ಗಳಿವೆ. ಕಾನೂನು ಪ್ರಕ್ರಿಯೆ  ಸುಲಭ ಮತ್ತು ಶೀಘ್ರಗೊಳಿಸುವುದಕ್ಕಾಗಿ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿ ಮಾಡಲಾಗುವ ವ್ಯವಸ್ಥೆ ಇದುವೇ ಹೊರತು  ಮುಸ್ಲಿಮರಿಗೆ ಮಾತ್ರ ರಚಿಸಲಾದ ವ್ಯವಸ್ಥೆ ಇದಲ್ಲ.

ಜನರನ್ನು ಭಾವನಾತ್ಮಕವಾಗಿ ಪೀಡಿಸುವುದೇ ಬಿಜೆಪಿಯ ರಾಜಕೀಯ ಮಂತ್ರ. ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು  ಸದಾ ಬಿಂಬಿಸುತ್ತಾ ಬರುವುದೇ ಅದರ ರಾಜಕೀಯ ತಂತ್ರ. ನಿಜವಾಗಿ, 20%ದಷ್ಟೂ ಇಲ್ಲದ ಸಮುದಾಯವೊಂದು  80%ದಷ್ಟಿರುವ ಬೃಹತ್ ಸಮುದಾಯದ ಪಾಲಿಗೆ ಅಪಾಯಕಾರಿಯಾಗಿದೆ ಎಂದು ಹೇಳುವುದೇ  80%ದಷ್ಟಿರುವ  ಸಮುದಾಯಕ್ಕೆ ಮಾಡುವ ಬಹುದೊಡ್ಡ ಅವಮಾನ. ಹೀಗೆ ಭಯವನ್ನು ಬಿತ್ತಿಯೇ ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ  ಬಿಜೆಪಿ ಅಧಿಕಾರದಲ್ಲಿದೆ. ಆದರೂ ಇನ್ನೂ ಭಯ ಹೊರಟು ಹೋಗಿಲ್ಲ ಎಂದರೆ, ಈ ಭಯ ವಾಸ್ತವವಲ್ಲ ಎಂದೇ ಅರ್ಥ.  ಇದು ರಾಜಕೀಯ ಲಾಭಕ್ಕಾಗಿ ಕೃತಕವಾಗಿ ಸೃಷ್ಟಿ ಮಾಡಲಾದ ಭಯ. ನಿಜಕ್ಕೂ ಈ ದೇಶದಲ್ಲಿ ಭಯದಲ್ಲಿ ಇರಬೇಕಾದವರು  ಮುಸ್ಲಿಮರು. ಯಾಕೆಂದರೆ, ಆಡಳಿತದಲ್ಲಿರುವ ಪಕ್ಷವೇ ಅವರ  ವಿರುದ್ಧ ಬಹಿರಂಗವಾಗಿಯೇ ನಿಂತಿರುವಾಗಲೂ ಅವರು ಭಯವನ್ನು ಹಂಚದೇ ಸುಮ್ಮನಿದ್ದಾರೆ. ಇದು ರಾಜಕೀಯ  ತಂತ್ರವೆಂದು  ಅವರಿಗೆ ಗೊತ್ತಿದೆ. ಆದರೆ ಬಿಜೆಪಿ ಹಿಂದೂಗಳನ್ನು ಪದೇ ಪದೇ ಮೂರ್ಖರನ್ನಾಗಿಸುವ ಪ್ರಯತ್ನ ನಡೆಸುತ್ತಲೇ  ಇದೆ.

Thursday, 24 October 2024

ಅರಾಜಕ ಸ್ಥಿತಿಯ ಮುನ್ನೆಚ್ಚರಿಕೆ ನೀಡುತ್ತಿರುವ ಬೆಳವಣಿಗೆಗಳು

 


ದೇಶದ ಭದ್ರತಾ ವ್ಯವಸ್ಥೆ ದೊಡ್ಡ ಮಟ್ಟದಲ್ಲಿ ಕುಸಿದಿರುವುದನ್ನು ಸಾಲು ಸಾಲು ಪ್ರಕರಣಗಳು ಸಾಬೀತುಪಡಿಸುತ್ತಿವೆ. ಕಳೆದ  ಒಂದು ವಾರದಲ್ಲಿ ಸುಮಾರು 100ರಷ್ಟು ವಿಮಾನಗಳಿಗೆ ಬಾಂಬ್ ಬೆದರಿಕೆಯ ಕರೆ ಬಂದಿದೆ. ರೈಲು ಹಳಿಗಳನ್ನು ತಪ್ಪಿಸುವ  ಪ್ರಕರಣಗಳು ಮತ್ತು ಅದರಿಂದಾಗಿ ಅಪಘಾತಗಳಾಗುತ್ತಿರುವ ಸುದ್ದಿಗಳು ತಿಂಗಳುಗಳಿಂದ  ವರದಿಯಾಗುತ್ತಲೇ ಇವೆ. ಇನ್ನೊಂದೆಡೆ ಲಾರೆನ್ಸ್ ಬಿಷ್ಣೋಯ್ ಎಂಬ ಘಾತುಕ ಗ್ಯಾಂಗನ್ನು ಕೇಂದ್ರ ಸರಕಾರವೇ ಪೋಷಿಸುತ್ತಿದೆಯೇನೋ ಎಂಬ ಅ ನುಮಾನ ಎಲ್ಲೆಡೆ ವ್ಯಕ್ತವಾಗುತ್ತಿದೆ. ಕೆನಡಾದಲ್ಲಿದ್ದ  ಖಲಿಸ್ತಾನಿ ಪರ ನಾಯಕ ನಿಜ್ಜರ್ ನನ್ನು ಹತ್ಯೆಗೈಯಲು ಕೇಂದ್ರ ಸರಕಾರ ಈತನನ್ನು ಬಳಸಿಕೊಂಡಿದೆಯೇ ಎಂಬ ಚರ್ಚೆಯೂ ನಡೆಯುತ್ತಿದೆ. ಕಳೆದ ಜೂನ್ 18ರಂದು ಹರ್ದೀಪ್ ಸಿಂಗ್ ನಿಜ್ಜರ್  ಎಂಬ ಸಿಕ್ಖ್ ಪ್ರತ್ಯೇಕತಾವಾದಿ ನಾಯಕನನ್ನು ಕೆನಡಾದಲ್ಲಿ ಹತ್ಯೆಗೈಯಲಾಗಿತ್ತು. ಈತನನ್ನು ಭಯೋತ್ಪಾದಕ ಎಂದು  2020ರಲ್ಲಿ ಭಾರತ ಘೋಷಿಸಿತ್ತು. ಭಾರತ ಸರಕಾರದ ಬೆಂಬಲದಿಂದಲೇ ಈತನನ್ನು ಹತ್ಯೆ ಮಾಡಲಾಗಿದೆ ಎಂದು ಕೆನಡಾ  ನೇರವಾಗಿ ಆರೋಪಿಸಿದೆ. ಮಾತ್ರವಲ್ಲ, ಭಾರತೀಯ ರಾಯಭಾರಿಯನ್ನು ತನಿಖಿಸಲೂ ಮುಂದಾಗಿದೆ. ಇದರ ಬೆನ್ನಿಗೇ  ಬಿಷ್ಣೋಯ್ ಗ್ಯಾಂಗ್‌ನ ಪಾತ್ರದ ಬಗ್ಗೆ ಚರ್ಚೆಗಳೂ ನಡೆಯುತ್ತಿವೆ.

ಲಾರೆನ್ಸ್ ಬಿಷ್ಣೋಯ್ ಗುಜರಾತ್‌ನ ಜೈಲಿನಲ್ಲಿದ್ದಾನೆ. ಈತನನ್ನು ಜೈಲಿನಿಂದ ಹೊರಗೆ ತನಿಖೆಗಾಗಿ ಕರೆದುಕೊಂಡು  ಹೋಗದಂತೆ ಕೇಂದ್ರ ಸರಕಾರವೇ ತಡೆಯನ್ನು ವಿಧಿಸಿದೆ. ಮಹಾರಾಷ್ಟ್ರದಲ್ಲಿ ಬಾಬಾ ಸಿದ್ದೀಕಿಯನ್ನು ಇತ್ತೀಚೆಗೆ  ಹತ್ಯೆಗೈಯಲಾಯಿತು. ಈತನದೇ ಗ್ಯಾಂಗ್‌ನ ಶಾರ್ಪ್ ಶೂಟರ್‌ಗಳು ಈ ಹತ್ಯೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.  ಆದರೆ, ಈತನನ್ನು ತನಿಖೆಗಾಗಿ ಮುಂಬೈಗೆ ಕರೆತರುವುದಕ್ಕೆ ಸಾಧ್ಯವಾಗುತ್ತಿಲ್ಲ. ಪೊಲೀಸರು ಗುಜರಾತ್ ಜೈಲಿನಲ್ಲಿ ಮಾತ್ರ  ಈತನನ್ನು ವಿಚಾರಣೆ ನಡೆಸಬೇಕಾದ ಸ್ಥಿತಿ ಉಂಟಾಗಿದೆ. ಕೇಂದ್ರ ಸರಕಾರ ಈತನಿಗಾಗಿ ಇಂಥದ್ದೊಂದು ನಿಯಮ ಜಾರಿ  ಮಾಡಿರುವುದೇಕೆ ಎಂಬ ಪ್ರಶ್ನೆಯೂ ಇದೆ. ಇದು ಈತನನ್ನು ಕಾನೂನು ಕ್ರಮಗಳಿಂದ ರಕ್ಷಿಸುವ ದುರುದ್ದೇಶದಿಂದ  ಮಾಡಲಾದ ರಕ್ಷಣಾ ಕವಚ ಎಂಬ ಅಭಿಪ್ರಾಯವೂ ಇದೆ. ಇದರ ನಡುವೆಯೇ,

ಉತ್ತರ ಭಾರತದ ಹಲವು ಕಡೆ ಮುಸ್ಲಿಮ್ ವಿರೋಧಿ ಮತ್ತು ಪ್ರವಾದಿ ನಿಂದನೆಯ ಘಟನೆಗಳು ವರದಿಯಾಗುತ್ತಲೇ ಇವೆ.  ಉತ್ತರಾಖಂಡದ ಕಾನ್ವಾರ್ ಪ್ರದೇಶದ ವ್ಯಾಪಾರಿಗಳ ಸಂಘವು ಮುಸ್ಲಿಮರಿಗೆ ಜೀವ ಬೆದರಿಕೆ ಹಾಕಿದೆ. ಈ ವರ್ಷದ ಅಂತ್ಯಕ್ಕೆ  ಜಾಗ ಖಾಲಿ ಮಾಡುವಂತೆ ಎಚ್ಚರಿಕೆ ನೀಡಿದೆ. ಮುಸ್ಲಿಮರಿಗೆ ಬಾಡಿಗೆಗೆ ಮನೆ ನೀಡಿದ ಮಾಲಕರಿಗೂ ಧಮಕಿ ಹಾಕಿದೆ.  ಮುಸ್ಲಿಮರಿಗೆ ಮನೆ ಬಾಡಿಗೆ ನೀಡಿರುವ ಮಾಲಕರು ಮುಸ್ಲಿಮರನ್ನು ಹೊರಹಾಕದಿದ್ದರೆ 10 ಸಾವಿರ ರೂಪಾಯಿ ದಂಡ  ವಿಧಿಸುವುದಾಗಿ ಬೆದರಿಕೆ ಹಾಕಿದೆ. ಇನ್ನೊಂದೆಡೆ ಯತಿ ನರಸಿಂಗಾನಂದ  ಎಂಬವರು ಸುಪ್ರೀಮ್ ಕೋರ್ಟ್ ನ  ಆದೇಶಕ್ಕೆ  ಕಿಂಚಿತ್ ಬೆಲೆಯನ್ನೂ ನೀಡದೇ ಪ್ರವಾದಿ ನಿಂದನೆ ಮತ್ತು ಮುಸ್ಲಿಮ್ ನಿಂದನೆಯನ್ನು ಮಾಡುತ್ತಲೇ ಇದ್ದಾರೆ.

ಸದ್ಯ ದೇಶದಲ್ಲಿ ದ್ವೇಷ ಭಾಷಣವೆಂಬುದು ಸಹಜ ಬೆಳವಣಿಗೆಯಾಗುತ್ತಿದೆ. ಉತ್ತರ ಪ್ರದೇಶದ ಬಹ್ರೆಚ್  ನಲ್ಲಿ ನಡೆದ  ಕೋಮುಗಲಭೆಯ ಬಳಿಕ ಆರೋಪಿ ಮುಸ್ಲಿಮರ ಮನೆಗಳನ್ನು ಧ್ವಂಸಗೊಳಿಸಲಾದ ದೃಶ್ಯಗಳು ಸೋಶಿಯಲ್  ಮೀಡಿಯಾದಲ್ಲಿ ಹರಿದಾಡುತ್ತಿವೆ. ಆರೋಪಿಗಳ ಮನೆ ಧ್ವಂಸ ಮಾಡುವುದನ್ನು ಕಾನೂನುಬಾಹಿರ ಎಂದು ಸುಪ್ರೀಮ್  ಕೋರ್ಟ್ ತೀರ್ಪಿತ್ತ ಬಳಿಕ ನಡೆದಿರುವ ಈ ಘಟನೆಯು ನ್ಯಾಯಾಂಗದ ಮಹತ್ವ ಕಡಿಮೆಯಾಗುತ್ತಿರುವುದನ್ನು  ಸೂಚಿಸುವಂತಿದೆ. ಅಂದಹಾಗೆ,

ಬಾಂಬ್  ಬೆದರಿಕೆ ಎಂಬುದು ವಿಮಾನಯಾನ ಕಂಪೆನಿಗಳ ಪಾಲಿಗೆ ಅತೀ ದುಬಾರಿ ಖರ್ಚಿನ ಸಂಗತಿಯಾಗಿದೆ. ನಿಲ್ದಾಣದಿಂದ ಹೊರಟುಹೋದ ವಿಮಾನವು ಬಾಂಬ್ ಬೆಂದರಿಕೆಯ ಕಾರಣದಿಂದ ತುರ್ತು ಭೂಸ್ಪರ್ಶ ಮಾಡುವುದಕ್ಕೆ, ಅಪಾರ  ಇಂಧನವನ್ನು ಖಾಲಿ ಮಾಡಬೇಕಾಗುತ್ತದೆ. ಮುಂಬೈಯಿಂದ  ಅಮೇರಿಕಾದ ನ್ಯೂಯಾರ್ಕ್ ಗೆ  ತೆರಳುತ್ತಿದ್ದ ಎಐ117 ವಿಮಾನವು ಕಳೆದವಾರ ಬಾಂಬ್ ಬೆದರಿಕೆಯ ಕಾರಣ ತುರ್ತು ಭೂಸ್ಪರ್ಶ ಮಾಡಿತ್ತು. ಪ್ರಯಾಣಿಕರೂ ಅವರ ಲಗೇಜ್‌ಗಳೂ  ಸೇರಿದಂತೆ ಇಂಥ ವಿಮಾನಗಳ ತೂಕ 450 ಟನ್‌ನಷ್ಟಿರುತ್ತದೆ. ಅದು ತುರ್ತು ಭೂಸ್ಪರ್ಶ ಮಾಡಬೇಕೆಂದರೆ, 100 ಟನ್  ಇಂಧನವನ್ನು ಖಾಲಿ ಮಾಡಬೇಕಾಗುತ್ತದೆ. ಪ್ರತೀ ಟನ್ ಇಂಧನಕ್ಕೆ ಒಂದು ಲಕ್ಷ ರೂಪಾಯಿ ಬೆಲೆಯಿದೆ. ಕೇವಲ ಇಂಧನ  ಖರ್ಚನ್ನೇ ಲೆಕ್ಕ ಹಾಕಿದರೂ ತುರ್ತು ಭೂಸ್ಪರ್ಶದಿಂದಾಗಿ ಒಂದು ಕೋಟಿ ರೂಪಾಯಿ ನಷ್ಟವಾಗುತ್ತದೆ. ಇದಲ್ಲದೇ ವಿಮಾನವನ್ನು ತಪಾಸಿಸಬೇಕೆಂದರೆ ಅದರಲ್ಲಿರುವ ಪ್ರಯಾಣಿಕರನ್ನು ಇಳಿಸಿ ವಿವಿಧ ಹೊಟೇಲುಗಳಿಗೆ ರವಾನಿಸಬೇಕಾಗುತ್ತದೆ.  ಪ್ರಯಾಣಿಕರಿಗೆ ಆಹಾರದ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ. ಅಲ್ಲದೇ, ಬೇರೆ ವಿಮಾನದ ವ್ಯವಸ್ಥೆಯನ್ನೂ  ಮಾಡಬೇಕಾಗುತ್ತದೆ. ಇವೆಲ್ಲವೂ ಸೇರಿದರೆ ಒಂದು ಬಾಂಬ್ ಬೆದರಿಕೆಯಿಂದ ವಿಮಾನಯಾನ ಸಂಸ್ಥೆಗೆ ಆಗುವ ಖರ್ಚು  ಮೂರು ಕೋಟಿಯನ್ನೂ ಮೀರಿದ್ದು ಎಂದು ಹೇಳಲಾಗುತ್ತಿದೆ. ಇದು ಒಂದು ವಿಮಾನದಿಂದಾಗುವ ನಷ್ಟ. ಹಾಗಿದ್ದರೆ 100 ವಿಮಾನಗಳಿಗೆ ಹಾಕಲಾದ ಬಾಂಬ್ ಬೆದರಿಕೆಯಿಂದ ವಿಮಾನಯಾನ ಸಂಸ್ಥೆಗೆ ಆಗಿರುವ ನಷ್ಟ ಎಷ್ಟಿರಬಹುದು? ಪದೇಪದೇ  ಇಂಥ ಬಾಂಬ್ ಬೆದರಿಕೆಯ ಕರೆ ಬರಲು ಕಾರಣವೇನು? ಕಳೆದವಾರ ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ  ಹಾಗೂ ಬಿ.ಎಂ.ಎಸ್. ಕಾಲೇಜುಗಳಿಗೆ ಬಾಂಬ್ ಬೆದರಿಕೆಯ ಈಮೇಲ್ ಬಂದಿತ್ತು. ಬಳಿಕ ಪೊಲೀಸರು ಪಶ್ಚಿಮ ಬಂಗಾಳದ  ಡಾರ್ಜಿಲಿಂಗ್ ಜಿಲ್ಲೆಯ ದೀಪಾಂಜನ್ ಮಿಶ್ರಾನನ್ನು ಬಂಧಿಸಿದರು. ನಿರುದ್ಯೋಗದ ಹತಾಶೆ ಇಂಥದ್ದನ್ನು ಯುವಸಮೂಹ ದಿಂದ ಮಾಡಿಸುತ್ತಿದೆಯೇ?

ದೇಶದ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬ ಭಾವ ಹರಡತೊಡಗುವುದೆಂದರೆ, ಅಪರಾಧ ಪ್ರಕರಣಗಳಿಗೆ ವೇದಿಕೆ  ಸಿದ್ಧಗೊಳ್ಳುವುದು ಎಂದರ್ಥ. ಹೀಗಾದರೆ ಸಮಾಜಘಾತುಕರು ಮತ್ತೆ ತಲೆ ಎತ್ತುತ್ತಾರೆ. ಕಾನೂನು ಭಂಜಕ  ಕೃತ್ಯಗಳಿಗಿಳಿಯುತ್ತಾರೆ. ಇದರಿಂದ ಜನಸಾಮಾನ್ಯರು ಭಯದಲ್ಲೇ  ಬದುಕಬೇಕಾಗುತ್ತದೆ. ಬಿಷ್ಣೋಯ್ ಗ್ಯಾಂಗ್‌ನ ಸುತ್ತ  ಕೇಳಿಬರುತ್ತಿರುವ ಸುದ್ದಿಗಳನ್ನು ನೋಡುವಾಗ ವ್ಯವಸ್ಥೆಯೇ ಈ ಅರಾಜಕ ಸ್ಥಿತಿಗೆ ವೇದಿಕೆ ಸಜ್ಜು ಮಾಡುತ್ತಿರುವಂತೆ  ಕಾಣಿಸುತ್ತದೆ. ಸಿಕ್ಖ್ ಪ್ರತ್ಯೇಕತಾವಾದಿ ನಾಯಕನಾಗಿದ್ದ ಬಿಂದ್ರನ್ ವಾಲೆಯನ್ನು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರೂ  ಹೀಗೆಯೇ ಬಳಸಿಕೊಂಡಿದ್ದರು ಎಂಬ ಅಭಿಪ್ರಾಯವಿದೆ. ಅಂತಿಮವಾಗಿ ಆತ ಸರಕಾರಕ್ಕೆ ತಲೆ ನೋವಾಗುವಂತೆ ಬೆಳೆದ.  ಕೊನೆಗೆ ಬ್ಲೂಸ್ಟಾರ್ ಕಾರ್ಯಾಚರಣೆಯ ಮೂಲಕ ಆತನ ಹತ್ಯೆಗೆ ಇಂದಿರಾ ಕಾರಣವಾದರು. ಆದರೆ ಅದೇ ಕಾರಣಕ್ಕಾಗಿ  ಆತನ ಬೆಂಬಲಿಗರು ಇಂದಿರಾ ಗಾಂಧಿಯನ್ನೂ ಹತ್ಯೆಗೈದರು. ಅಪರಾಧಿಗಳನ್ನು ವ್ಯವಸ್ಥೆ ಸ್ವಲಾಭಕ್ಕೆ ಬಳಸಿಕೊಳ್ಳತೊಡಗಿದರೆ  ಅಂತಿಮವಾಗಿ ಅವರು ವ್ಯವಸ್ಥೆಯ ಮೇಲೆಯೇ ಸವಾರಿ ನಡೆಸುತ್ತಾರೆ ಎಂಬುದಕ್ಕೆ ಇದನ್ನು ಉದಾಹರಣೆಯಾಗಿ ಎತ್ತಿಕೊಳ್ಳ  ಬಹುದು.

ಒಂದುಕಡೆ, ನಾಗರಿಕ ಸಂಘರ್ಷಕ್ಕೆ ಅಥವಾ ಕೋಮುಗಲಭೆಗೆ ಪ್ರಚೋದನೆ ನೀಡುವ ಬೆಳವಣಿಗೆಗಳು ನಡೆಯುತ್ತಿರುವುದು  ಮತ್ತು ಇನ್ನೊಂದು ಕಡೆ, ಕಾನೂನಿನ ಭಯವೇ ಇಲ್ಲದೇ ಬಾಂಬ್ ಬೆದರಿಕೆಯ ಕರೆಗಳು ಬರುತ್ತಿರುವುದು ಸಂಭಾವ್ಯ ಅಪಾಯದ ಸೂಚನೆಯನ್ನು ನೀಡುತ್ತಿದೆ. ಅತ್ಯಂತ ಸುರಕ್ಷಿತವೆನ್ನಲಾಗುತ್ತಿರುವ ರೈಲು ಹಳಿಗಳಿಗೂ ಈಗ ಭಯ ಆವರಿಸಿದೆ.  ಇವೆಲ್ಲ ಕ್ಷುಲ್ಲಕ ಘಟನೆ ಗಳಲ್ಲ. ಅರಾಜಕ ಸ್ಥಿತಿಯೊಂದರ ಮುನ್ಸೂಚನೆಯಂತೆ ಇವನ್ನೆಲ್ಲ ನೋಡಬೇಕಾಗಿದೆ. ತನ್ನ ಗುರಿ  ಸಾಧನೆಗಾಗಿ ಪ್ರಭುತ್ವವೇ ಘಾತಕ ಗ್ಯಾಂಗ್‌ಗಳನ್ನು ಸಾಕುವುದು ಹೇಗೆ ಅಪಾಯಕಾರಿಯೋ ದೇಶದೊಳಗೆ ಧರ್ಮದ್ವೇಷವನ್ನು  ಬಿತ್ತುತ್ತಾ ಮತ್ತು ಗಲಭೆಗೆ ಪ್ರಚೋದನೆ ಕೊಡುತ್ತಾ ಸಾಗುವ ಬೆಳವಣಿಗೆಗಳೂ ಅಪಾಯಕಾರಿಯೇ. ಇವೆರಡೂ  ಅಂತಿಮವಾಗಿ ನಾಗರಿಕ ಸಮಾಜದ ಮೇಲೆ ಪ್ರಭುತ್ವದ ಹಿಡಿತವನ್ನು ಸಡಿಲಗೊಳಿಸುತ್ತದೆ. ಹಾಗಾದಾಗ ಕಾನೂನು  ಸುವ್ಯವಸ್ಥೆಗಾಗಿ ಖಜಾನೆಯಲ್ಲಿರುವ ಹಣವನ್ನು ಖರ್ಚು ಮಾಡಬೇಕಾದ ಒತ್ತಡವನ್ನು ತಂದಿಡುತ್ತದೆ. ಇದರಿಂದ ಅಭಿವೃದ್ಧಿ  ಕುಂಠಿತಗೊಂಡು  ಉತ್ಪಾದನೆ ಸ್ಥಗಿತಗೊಳುತ್ತದೆ. ಸದಾ ಭೀತಿಯಲ್ಲಿರುವ ಸಮೂಹದಿಂದ ನಿರ್ಮಾಣಾತ್ಮಕ ಆಲೋಚನೆ  ಸಾಧ್ಯವೂ ಇಲ್ಲ.

ಆದ್ದರಿಂದ ಕಾನೂನು ಸುವ್ಯವಸ್ಥೆಗೆ ತೊಡಕಾಗುವವರನ್ನು ಸರಕಾರ ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಬೇಕು. ಸಮಾಜದಲ್ಲಿ  ಭಯಮುಕ್ತ ಮತ್ತು ದ್ವೇಷ ಮುಕ್ತ ವಾತಾವರಣವನ್ನು ಉಂಟು ಮಾಡಬೇಕು.

Friday, 18 October 2024

ಇಸ್ರೇಲ್, ಹಮಾಸ್ ಮತ್ತು ವಿಮೋಚನಾ ಹೋರಾಟ

 



ನಿಯಮಗಳಿರುವುದೇ ಮುರಿಯುವುದಕ್ಕೆ ಎಂಬ ದುರಹಂಕಾರಿ ನೀತಿಯನ್ನು ಇಸ್ರೇಲ್ ಅಳವಡಿಸಿಕೊಂಡು ದಶಕಗಳಾದುವು. 1948ರಲ್ಲಿ ಇಸ್ರೇಲ್ ರಾಷ್ಟ್ರ  ಸ್ಥಾಪನೆಯಾಗುವ ಹಿಂದಿನ ದಿನದಿಂದಲೇ ಈ ನೀತಿಯನ್ನು ಅದು  ಅಳವಡಿಸಿಕೊಂಡೇ ಬಂದಿದೆ. ಇದೀಗ ಈ ದುರಹಂಕಾರ ಎಲ್ಲಿಗೆ ಬಂದು ತಲುಪಿದೆಯೆಂದರೆ, ಲೆಬನಾನ್‌ನಲ್ಲಿ  ವಿಶ್ವಸಂಸ್ಥೆಯೇ ನಿಯೋಜಿಸಿರುವ ಶಾಂತಿ ಪಾಲನಾ ಪಡೆಯ ಮೇಲೆ ದಾಳಿ ನಡೆಸಿದೆ. ಸುಮಾರು 50 ರಾಷ್ಟ್ರಗಳ 10  ಸಾವಿರ ಯೋಧರು ಲೆಬನಾನ್‌ನ ದಕ್ಷಿಣ ಭಾಗದಲ್ಲಿದ್ದಾರೆ. ಇದರಲ್ಲಿ ಇಟಲಿಯ ಸಾವಿರ ಯೋಧರಿದ್ದಾರೆ. ಫ್ರಾನ್ಸ್ನ 700  ಯೋಧರಿದ್ದಾರೆ. 1978ರ ಬಳಿಕದಿಂದ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ ಲೆಬನಾನ್‌ನ ದಕ್ಷಿಣ ಭಾಗದಲ್ಲಿ ಬೀಡುಬಿಟ್ಟಿದೆ.  

1982ರಲ್ಲಿ ಲೆಬನಾನ್‌ನ ಮೇಲೆ ದಾಳಿ ಮಾಡಿದ ಇಸ್ರೇಲ್ ದಕ್ಷಿಣ ಲೆಬನಾನನ್ನು ವಶಪಡಿಸಿಕೊಂಡಿತ್ತು. ಈ ಬಗೆಯ  ದಾಳಿಯನ್ನು ಪ್ರತಿರೋಧಿಸಿಯೇ ಹಿಝ್ಬುಲ್ಲಾ ಹುಟ್ಟಿಕೊಂಡಿತು. ದಕ್ಷಿಣ ಲೆಬನಾನನ್ನು ಮರಳಿ ವಶಪಡಿಸುವುದಕ್ಕಾಗಿ ಅದು  ನಿರಂತರ ಪ್ರತಿರೋಧವನ್ನು ಒಡ್ಡುತ್ತಾ ಬಂತು. 2000ನೇ ಇಸವಿಯಲ್ಲಿ ಇಸ್ರೇಲ್ ಈ ಜಾಗದಿಂದ ಹಿಂದೆ ಸರಿಯಿತು.  2006ರಲ್ಲಿ ಇಸ್ರೇಲ್ ಮತ್ತು ಹಿಝ್ಬುಲ್ಲಾ ನಡುವೆ 5 ವಾರಗಳ ತನಕ ಸಂಘರ್ಷ ನಡೆಯಿತು ಮತ್ತು ಆ ಸಂದರ್ಭದಲ್ಲಿ  ಮಧ್ಯಸ್ಥಿಕೆ ವಹಿಸಿ ಸಂಘರ್ಷ ಕೊನೆಗೊಳಿಸಿದ್ದೇ  ಈ ಶಾಂತಿ ಪಾಲನಾ ಪಡೆ. ಈ ಭಾಗದಲ್ಲಿ ಇಸ್ರೇಲ್ ಮತ್ತು ಲೆಬನಾನ್  ನಡುವೆ ಘರ್ಷಣೆ ಉಂಟಾಗದಂತೆ  ನೋಡಿಕೊಳ್ಳುವುದೇ ಈ ಪಡೆಯ ಜವಾಬ್ದಾರಿ. ಇದೀಗ ಈ ಪಡೆಯ ಮೇಲೆಯೇ  ಇಸ್ರೇಲ್ ದಾಳಿ ನಡೆಸುವ ಸಾಹಸ ಮಾಡಿದ್ದು, ವಿಶ್ವಸಂಸ್ಥೆ ಖಂಡಿಸಿದೆ. ಇಸ್ರೇಲ್‌ನ ಪ್ರಬಲ ಬೆಂಬಲಿಗ ರಾಷ್ಟçವಾದ ಇಟಲಿ  ಇದೇ ಮೊದಲ ಬಾರಿಯೆಂಬಂತೆ  ಇಸ್ರೇಲ್ ಪ್ರಧಾನಿ ನೇತನ್ಯಾಹು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ  ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಕಡೆ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುಟೆರಸ್ ಅವರಿಗೆ ಇಸ್ರೇಲ್  ಪ್ರವೇಶ ನಿರ್ಬಂಧ ಹೇರಿದೆ. ಬಹುಶಃ ವಿಶ್ವಸಂಸ್ಥೆಯ ಇತಿಹಾಸದಲ್ಲೇ  ಮೊದಲ ಬಾರಿ ಇಂಥದ್ದೊಂದು  ಘಟನೆ ನಡೆದಿದೆ  ಎಂದು ಹೇಳಲಾಗುತ್ತಿದೆ. ವಿಶ್ವಸಂಸ್ಥೆಯ ನಿಯಮಗಳನ್ನಷ್ಟೇ ಉಲ್ಲಂಘಿಸುವುದಲ್ಲ, ಜೊತೆಗೇ ವಿಶ್ವಸಂಸ್ಥೆಯ ಪ್ರಧಾನ  ಕಾರ್ಯದರ್ಶಿಯನ್ನೇ ತಿರಸ್ಕರಿಸುವ ದಾರ್ಷ್ಟ್ಯವನ್ನು ಇಸ್ರೇಲ್ ತೋರಿದೆ. ಇನ್ನೊಂದೆಡೆ,

ಜೆರುಸಲೇಮ್‌ನಿಂದ  ಸಿರಿಯಾದ ರಾಜಧಾನಿ ಡಮಾಸ್ಕಸ್ ವರೆಗೆ ವ್ಯಾಪಿಸಿರುವ ವಿಶಾಲ ಯಹೂದಿ ರಾಷ್ಟ್ರ  ಸ್ಥಾಪನೆಯೇ  ನಮ್ಮ ಅಂತಿಮ ಗುರಿ ಎಂದು ಇಸ್ರೇಲ್ ಹಣಕಾಸು ಸಚಿವ ಬೆಝಾಲೆಲ್ ಸ್ಮಾಟ್ರಿಚ್ ಹೇಳಿದ್ದಾರೆ. ಈ ವಿಶಾಲ ಯಹೂದಿ  ರಾಷ್ಟ್ರದಲ್ಲಿ ಫೆಲೆಸ್ತೀನ್ ಸಂಪೂರ್ಣ ಒಳಗೊಳ್ಳಲಿದೆ ಎಂದೂ ಅವರು ಹೇಳಿದ್ದಾರೆ. ಹಾಗೆಯೇ, ಲೆಬನಾನ್, ಇರಾನ್, ಈಜಿ ಪ್ಟ್ ಮತ್ತು ಸೌದಿ ಅರೇಬಿ ಯಾದ ವಿವಿಧ ಭಾಗಗಳು ಈ ರಾಷ್ಟ್ರದ ವ್ಯಾಪ್ತಿಯೊಳಗೆ ಬರಲಿದೆ ಎಂದೂ ಅವರು ಹೇಳಿದ್ದಾರೆ.  ಸದ್ಯ ಪಶ್ಚಿಮೇಶ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ನೋಡಿದರೆ, ಇಸ್ರೇಲ್ ತನ್ನ ಈ ವಿಶಾಲ ರಾಷ್ಟçದ ಗುರಿಯೆಡೆಗೆ  ದೃಷ್ಟಿ ನೆಟ್ಟಿದೆ ಎಂಬುದನ್ನೇ ಹೇಳುತ್ತದೆ. ಅದು ಒಂದುಕಡೆ ಅತಿಥಿಯಾಗಿ ಇರಾನ್‌ಗೆ ಆಗಮಿಸಿದ್ದ ಹಮಾಸ್ ನಾಯಕ  ಇಸ್ಮಾಈಲ್ ಹನಿಯ್ಯರನ್ನು ಮೋಸದಿಂದ ಹತ್ಯೆ ಮಾಡಿದೆ. ಇರಾನಿನ ಉನ್ನತ ಕಮಾಂಡರ್‌ಗಳನ್ನು ಲೆಬನಾನ್ ಮತ್ತು  ಸಿರಿಯಾದಲ್ಲಿ ಹತ್ಯೆ ಮಾಡಿದೆ. ಅಝರ್ ಬೈಜಾನ್‌ನಿಂದ ಹಿಂತಿರುಗುತ್ತಿದ್ದ ವೇಳೆ ಇರಾನ್‌ನ ಅಧ್ಯಕ್ಷ ಇಬ್ರಾಹೀಮ್  ರಈಸಿಯು ನಿಗೂಢವಾಗಿ ಸಾವಿಗೀಡಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನವಾಗಿರುವುದು ತೋರಿಕೆಯ  ಕಾರಣವಾಗಿದ್ದರೂ ಆಂತರಿಕವಾಗಿ ಈ ಪತನದ ಹಿಂದೆ ಇಸ್ರೇಲ್‌ನ ಸಂಚು ಇದೆ ಎಂಬ ಅಭಿಪ್ರಾಯ ಇದೆ. ಇರಾನ್  ಅಧ್ಯಕ್ಷರು ಪೇಜರ್ ಬಳಸುತ್ತಿದ್ದರು ಮತ್ತು ಅದನ್ನು ಇಸ್ರೇಲ್ ಸ್ಫೋಟಿಸಿರುವುದೇ ಹೆಲಿಕಾಪ್ಟರ್ ಪತನಕ್ಕೆ ಕಾರಣ  ಎಂಬುದಾಗಿ ಇರಾನ್‌ನ ಪ್ರಮುಖ ನಾಯಕರೇ ಶಂಕಿಸಿದ್ದಾರೆ. ಇದಕ್ಕೆ ಆಧಾರವಾಗಿ, ಲೆಬನಾನ್‌ನಲ್ಲಿ ಸಾವಿರಾರು  ಪೇಜರ್‌ಗಳು ಸ್ಫೋಟಗೊಂಡದ್ದು ಮತ್ತು ಹಿಝ್ಬುಲ್ಲಾಯೋಧರಿಗೆ ಭಾರೀ ಪ್ರಮಾಣದಲ್ಲಿ ಹಾನಿ ತಟ್ಟಿದ್ದನ್ನು  ಉದಾಹರಣೆಯಾಗಿ ನೀಡಲಾಗುತ್ತಿದೆ. ಈ ಪೇಜರ್ ಸ್ಫೋಟದಲ್ಲಿ ಲೆಬನಾನ್‌ನಲ್ಲಿರುವ ಇರಾನಿನ ರಾಯಭಾರಿಗೂ  ಗಾಯವಾಗಿತ್ತು. ಇದರ ಜೊತೆಜೊತೆಗೇ ಸಿರಿಯಾದ ಮೇಲೆ ಇಸ್ರೇಲ್ ಆಗಾಗ ವೈಮಾನಿಕ ದಾಳಿ ನಡೆಸುತ್ತಲೇ ಬಂದಿದೆ.  ಫೆಲೆಸ್ತೀನಿಯರನ್ನಂತೂ ಕಳೆದ 7 ದಶಕಗಳಿಂದ ಕೈದಿಗಳಂತೆ ನಡೆಸಿಕೊಳ್ಳುತ್ತಿದೆ. ಫೆಲೆಸ್ತೀನಿ ಭೂಭಾಗವನ್ನು ಕಬಳಿಸುತ್ತಾ  ಮತ್ತು ಆ ಕಬಳಿಸಿದ ಜಾಗದಲ್ಲಿ ಯಹೂದಿಯರಿಗೆ ಮನೆ ನಿರ್ಮಿಸಿಕೊಟ್ಟು ವಾಸ ಮಾಡಿಸುತ್ತಾ ದೇಶ ವಿಸ್ತರಣೆಯಲ್ಲಿ  ತೊಡಗಿಸಿಕೊಂಡಿದೆ. ಇದನ್ನು ವಿರೋಧಿಸಿ ವಿಶ್ವಸಂಸ್ಥೆ ಪಾಸು ಮಾಡಿದ ನಿರ್ಣಯಗಳಿಗೆ ಲೆಕ್ಕಮಿತಿಯಿಲ್ಲ. ಆದರೆ, 

ಪ್ರತಿ  ನಿರ್ಣಯವನ್ನು ಇಸ್ರೇಲ್ ಕಾಲ ಕಸದಂತೆ ಪರಿಗಣಿಸುತ್ತಲೇ ಬಂದಿದೆ. ಕಳೆದ ಒಂದು ವರ್ಷದಲ್ಲಂತೂ ಅದು ಫೆಲೆಸ್ತೀನ್  ಮೇಲೆ ಮಾಡಿರುವ ದಾಳಿ ಅತಿಕ್ರೂರ ಮತ್ತು ಹೇಯವಾದುದು ಅನ್ನುವುದಕ್ಕೆ ಪುರಾವೆಗಳ ಅಗತ್ಯವೇ ಇಲ್ಲ. 2023  ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ ಬಳಿಕದಿಂದ ಇಸ್ರೇಲ್ 42 ಸಾವಿರ ಫೆಲೆಸ್ತೀನಿಯರನ್ನು  ಹತ್ಯೆಗೈದಿದೆ. ಸುಮಾರು ಒಂದು ಲಕ್ಷದಷ್ಟು ಮಂದಿ ಗಾಯಗೊಂಡಿದ್ದಾರೆ. ಲಕ್ಷಾಂತರ ಮಂದಿ ನಿರ್ವಸಿತರಾಗಿದ್ದಾರೆ. ಕೇವಲ  ಒಂದೇ ವರ್ಷದೊಳಗೆ ಇಸ್ರೇಲ್ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಫೆಲೆಸ್ತೀನಿಯರ ಹತ್ಯಾಕಾಂಡ ನಡೆಸಿರಬಹುದಾದರೆ, ಕಳೆದ 7  ದಶಕಗಳಲ್ಲಿ ಅದು ಇನ್ನೆಷ್ಟು ಸಾವು-ನೋವಿಗೆ ಕಾರಣವಾಗಿರಬಹುದು? ಅದು ಫೆಲೆಸ್ತೀನ್ ಎಂಬ ರಾಷ್ಟ್ರ ಸ್ಥಾಪನೆಯನ್ನೇ  ಒಪ್ಪಿಕೊಳ್ಳುತ್ತಿಲ್ಲ. ಈ ದುರಹಂಕಾರವನ್ನು ಪ್ರತಿಭಟಿಸಿಯೇ ಫೆಲೆಸ್ತೀನಿಯರು ವಿವಿಧ ಪ್ರತಿರೋಧ ತಂಡಗಳನ್ನು ಕಟ್ಟಿಕೊಂಡು  ಹೋರಾಡುತ್ತಾ ಬಂದಿದ್ದಾರೆ. ಯಾಸಿರ್ ಅರಫಾತ್ ನೇತೃತ್ವದ ಫೆಲೆಸ್ತೀನ್ ವಿಮೋಚನಾ ಸಂಘಟನೆ ಇದರಲ್ಲಿ ಒಂದಾದರೆ,  ಶೈಕ್ ಯಾಸೀನ್ ನೇತೃತ್ವದ ಹಮಾಸ್ ಇನ್ನೊಂದು. ಫೆಲೆಸ್ತೀನನ್ನು ಇಸ್ರೇಲ್‌ನಿಂದ ವಿಮೋಚನೆಗೊಳಿಸುವುದನ್ನೇ ಈ  ಎರಡೂ ಗುಂಪುಗಳು ತಮ್ಮ ಗುರಿಯಾಗಿಸಿಕೊಂಡಿದೆ. ಆ ಕಾರಣದಿಂದಲೇ,

 ಈ ಎರಡೂ ಗುಂಪುಗಳು ಇಸ್ರೇಲ್‌ನ  ಜೊತೆಗಲ್ಲದೇ ಜಗತ್ತಿನ ಇನ್ನಾವ ರಾಷ್ಟ್ರದ ವಿರುದ್ಧವೂ ಹೋರಾಡಿಲ್ಲ. ಇಸ್ರೇಲ್‌ನ ಹಿಡಿತದಿಂದ ಫೆಲೆಸ್ತೀನನ್ನು ವಿಮೋಚ ನೆಗೊಳಿಸುವುದಕ್ಕಾಗಿ ಇವು ಸಂದರ್ಭಾನುಸಾರ ಶಸ್ತ್ರಾಸ್ತ್ರವನ್ನೂ ಬಳಸಿವೆ, ಸತ್ಯಾಗ್ರಹವನ್ನೂ ನಡೆಸಿವೆ. ಆದರೆ, ಇಸ್ರೇಲ್  ಬರೇ ಶಸ್ತ್ರಾಸ್ತ್ರದ ಮೂಲಕವೇ ಉತ್ತರಿಸುತ್ತಾ ಬಂದಿದೆ. ತಮ್ಮ ತಾಯ್ನಾಡಿನ ವಿಮೋಚನೆಗಾಗಿ ಹೋರಾಡಿದವರನ್ನೇ  ಭಯೋತ್ಪಾದಕರು ಎಂದು ಮುದ್ರೆಯೊತ್ತುತ್ತಾ ಮತ್ತು ಜಗತ್ತನ್ನು ಹಾಗೆಯೇ ನಂಬಿಸುತ್ತಲೂ ಇದೆ. ಫೆಲೆಸ್ತೀನ್ ಭೂಭಾಗದಲ್ಲಿ  1948ರಲ್ಲಿ ದಿಢೀರ್ ಆಗಿ ಉದ್ಭವವಾದ ಇಸ್ರೇಲ್ ಆ ಬಳಿಕ ಫೆಲೆಸ್ತೀನಿಯರನ್ನು ಹೊರದಬ್ಬುವುದನ್ನೇ ಘೋಷಿತ  ನೀತಿಯಾಗಿ ಸ್ವೀಕರಿಸಿರುವಾಗ, ಅದನ್ನು ಪ್ರತಿಭಟಿಸಿ ನಡೆಯುವ ಹೋರಾಟಗಳಲ್ಲಿ ವೈವಿಧ್ಯತೆ ಇರಬಾರದು ಎಂದು  ನಿರೀಕ್ಷಿಸುವುದಕ್ಕೆ ಅರ್ಥವೂ ಇಲ್ಲ. ಬ್ರಿಟಿಷರ ವಿರುದ್ಧ ನಮ್ಮದೇ ನೆಲದಲ್ಲಿ ಹುಟ್ಟಿಕೊಂಡ ವಿಮೋಚನಾ ಹೋರಾಟದಲ್ಲೂ ಈ  ವೈವಿಧ್ಯತೆಗಳಿದ್ದುವು. ಗಾಂಧೀಜಿ ಆ ಹೋರಾಟದ ಒಂದು ಮುಖವಾದರೆ, ಬೋಸ್, ಭಗತ್‌ಸಿಂಗ್ ಅದರ ಇನ್ನೊಂದು  ಮುಖ. ಇವರಾರೂ ಭಾರತೀಯರ ಪಾಲಿಗೆ ಭಯೋತ್ಪಾದಕರಲ್ಲ. ಹೆಮ್ಮೆಯ ಸ್ವಾತಂತ್ರ‍್ಯ ಯೋಧರು. ಆದರೆ ಬ್ರಿಟಿಷರು  ಇದೇ ಭಗತ್ ಸಿಂಗ್, ರಾಮ್ ಪ್ರಸಾದ್ ಬಿಸ್ಮಿಲ್ ಮುಂತಾದ ಅನೇಕರನ್ನು ಭಯೋತ್ಪಾದಕರೆಂದು ಕರೆದು ನೇಣಿಗೆ  ಹಾಕಿದರು. ಇದೇ ಬ್ರಿಟಿಷರ ವಿರುದ್ಧ ಹೋರಾಡುವುದಕ್ಕೆ ಸುಭಾಷ್ ಚಂದ್ರ ಬೋಸ್‌ರು ಸೇನೆಯನ್ನೇ ಕಟ್ಟಿದರು. ಫೆಲೆಸ್ತೀನ್  ವಿಮೋಚನೆಗಾಗಿ ಹೋರಾಡುತ್ತಿರುವ ವಿವಿಧ ಗುಂಪುಗಳು ತಮ್ಮ ಗುರಿ ಸಾಧನೆಗಾಗಿ ಭಿನ್ನ ಭಿನ್ನ ದಾರಿಗಳನ್ನು  ಅವಲಂಬಿಸಿದೆ. ಈ ದಾರಿಗಳ ಬಗ್ಗೆ ಭಿನ್ನಾಭಿಪ್ರಾಯ ತಾಳುವುದು ತಪ್ಪಲ್ಲದಿದ್ದರೂ ಆ ವಿಮೋಚನಾ ಹೋರಾಟವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಮತ್ತು ಇಸ್ರೇಲನ್ನು ಬೆಂಬಲಿಸುವುದು ಪರೋಕ್ಷವಾಗಿ ಭಾರತೀಯ ಸ್ವಾತಂತ್ರ‍್ಯ  ಹೋರಾಟವನ್ನೇ ಕಟಕಟೆಯಲ್ಲಿ ನಿಲ್ಲಿಸಿದಂತೆ. ಹಮಾಸನ್ನು ತೋರಿಸಿ ಇಸ್ರೇಲ್ ತನ್ನ ಕ್ರೌರ್ಯವನ್ನು ಸಮರ್ಥಿಸುತ್ತಿದೆ. ಆದರೆ,

  1948ರಲ್ಲಿ ಇಸ್ರೇಲ್ ರಾಷ್ಟ್ರ  ಸ್ಥಾಪನೆಯಾಗುವಾಗ ಹಮಾಸ್ ಹುಟ್ಟಿಕೊಂಡೇ ಇರಲಿಲ್ಲ. ಇಸ್ರೇಲ್‌ನ ಅನ್ಯಾಯವನ್ನು ಮತ್ತು  ಫೆಲೆಸ್ತೀನಿಯರ ಅಸಹಾಯಕತೆಯನ್ನು ಕಂಡೂ ಕಂಡೂ ರೋಸಿ ಹೋಗಿ ಸುಮಾರು 4 ದಶಕಗಳ ಬಳಿಕ 1987ರ  ಹೊತ್ತಿಗೆ ಸ್ಥಾಪನೆಯಾದ ಗುಂಪು ಇದು. ಫೆಲೆಸ್ತೀನಿಯರ ಸ್ವತಂತ್ರ ರಾಷ್ಟ್ರದ ಹಕ್ಕನ್ನು ಇಸ್ರೇಲ್ ಮಾನ್ಯ ಮಾಡಿರುತ್ತಿದ್ದರೆ ಈ  ಹಮಾಸ್‌ನ ಸೃಷ್ಟಿ ಆಗುತ್ತಲೇ ಇರಲಿಲ್ಲ. ಆದರೆ, ಇಸ್ರೇಲ್ ತನ್ನ ಪ್ರಚಾರ ಬಲದಿಂದ ಫೆಲೆಸ್ತೀನ್ ವಿಮೋಚನಾ  ಹೋರಾಟವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ತಂತ್ರ ಹೆಣೆದಿದೆ. ಆದರೆ, ಇಸ್ರೇಲ್ ಮಾಡುತ್ತಿರುವುದು ಪರಮ ಅನ್ಯಾಯ  ಅನ್ನುವುದನ್ನು ವಿಶ್ವಸಂಸ್ಥೆಯ ನೂರಾರು ಠರಾವುಗಳೇ ಹೇಳುತ್ತಿವೆ.

Thursday, 3 October 2024

ಸುಳ್ಳು ಸುದ್ದಿಗಳ ಉತ್ಪಾದನೆಗೆ ಬೀಗ ಬೀಳಲಿ...

 



ಸನ್ಮಾರ್ಗ ಸಂಪಾದಕೀಯ


ಕರ್ನಾಟಕ ಹೈಕೋರ್ಟ್ ನ  ನ್ಯಾಯಾಧೀಶ ವೇದವ್ಯಾಸಾಚಾರ್ ಮತ್ತು ಅಲಹಾಬಾದ್ ಹೈಕೋರ್ಟ್ ನ  ನ್ಯಾಯಾಧೀಶ  ರೋಹಿತ್ ರಂಜನ್ ಅಗರ್ವಾಲ್ ಅವರ ಅಭಿಪ್ರಾಯಗಳಿಗೆ ಸುಪ್ರೀಮ್ ಕೋರ್ಟ್ ಅಸಂತೋಷ ವ್ಯಕ್ತಪಡಿಸಿದೆ. ಮಾತ್ರವಲ್ಲ,  ಅವರ ಹೇಳಿಕೆಗಳನ್ನು ಅಳಿಸಿ ಹಾಕಿದೆ. ಬೆಂಗಳೂರಿನ ಮುಸ್ಲಿಮ್ ಬಾಹುಳ್ಯ ಪ್ರದೇಶವನ್ನು ಈ ವೇದವ್ಯಾಸಾಚಾರ್  ಪಾಕಿಸ್ತಾನಕ್ಕೆ ಹೋಲಿಸಿದ್ದರು. ಹಾಗೆಯೇ, ಧಾರ್ಮಿಕ ಮತಾಂತರವನ್ನು ನಿಲ್ಲಿಸದಿದ್ದರೆ ಮುಂದೊಂದು  ದಿನ  ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುತ್ತಾರೆ ಎಂದು ರೋಹಿತ್ ರಂಜನ್ ಅಗರ್ವಾಲ್ ಹೇಳಿದ್ದರು. ಅಷ್ಟಕ್ಕೂ,

ಸುಪ್ರೀಮ್ ಕೋರ್ಟ್ ಏನೋ ಇವರಿಗೆ ಬುದ್ಧಿ ಹೇಳಿದೆ. ಆದರೆ, ಬುದ್ಧಿ ಹೇಳಿಸಿಕೊಳ್ಳಬೇಕಾದ ಸ್ಥಾನವೇ ಅದು?  ಹೈಕೋರ್ಟ್ ನ್ಯಾಯಾಧೀಶರೆಂದರೆ ಅವರಲ್ಲಿ ಅಪಾರ ಅನುಭವ ಇರುತ್ತದೆ. ಪ್ರಕರಣವನ್ನು ಮತ್ತು ಸಮಾಜವನ್ನು ಅತ್ಯಂತ  ಸೂಕ್ಷ್ಮವಾಗಿ  ಅವಲೋಕಿಸುವ ಜಾಣ್ಮೆಯೂ ಇರುತ್ತದೆ. ಹೀಗಿದ್ದೂ ಇಷ್ಟೊಂದು ಸಡಿಲ ಹೇಳಿಕೆಯನ್ನು ಇವರು ನೀಡಲು  ಸಾಧ್ಯವಾದದ್ದು ಹೇಗೆ? ಸೋಶಿಯಲ್ ಮೀಡಿಯಾದ ಪ್ರಭಾವಕ್ಕೆ ಅರಿವಿಲ್ಲದೆಯೇ ಇವರು ಒಳಗಾಗುತ್ತಿದ್ದಾರೆಯೇ?  ಮುಸ್ಲಿಮ್ ಸಮುದಾಯದ ಬಗ್ಗೆ ಸುಳ್ಳಿನ ಕಾರ್ಖಾನೆಯಲ್ಲಿ ಪ್ರತಿದಿನ ಉತ್ಪಾದಿಸಿ ಹಂಚಲಾಗುತ್ತಿರುವ ಸುದ್ದಿಗಳು  ನ್ಯಾಯಾಲಯಗಳ ಮೇಲೂ ಪ್ರಭಾವ ಬೀರತೊಡಗಿದೆಯೇ?

ಇತ್ತೀಚೆಗೆ ಬೆಂಗಳೂರಿನಲ್ಲಿ ಮಹಾಲಕ್ಷ್ಮಿ ಎಂಬವರ ಹತ್ಯೆ ನಡೆಯಿತು. ಆಕೆಯ ದೇಹವನ್ನು 50 ತುಂಡುಗಳನ್ನಾಗಿ ಕತ್ತರಿಸಿ  ಫ್ರಿಡ್ಜ್ನಲ್ಲಿ ಇಡಲಾಗಿತ್ತು. ಈ ಕ್ರೌರ್ಯ ಬೆಳಕಿಗೆ ಬಂದ ತಕ್ಷಣ ಮುಸ್ಲಿಮ್ ದ್ವೇಷಿಗಳು ಚುರುಕಾದರು. ಅಶ್ರಫ್ ಎಂಬವ  ಈಕೆಯನ್ನು ಹತ್ಯೆ ಮಾಡಿದ್ದಾನೆ ಎಂದು ಪುಕಾರು ಹಬ್ಬಿಸಿದರು. ರಾಜ್ಯ ಬಿಜೆಪಿಯ ಅಧಿಕೃತ ಸೋಶಿಯಲ್ ಮೀಡಿಯಾ  ಖಾತೆಯಲ್ಲೇ  ಈ ಸುಳ್ಳು ಸುದ್ದಿ ಪ್ರಕಟವಾಯಿತು. ‘ಕಾಂಗ್ರೆಸ್ ಸರಕಾರದ ಓಲೈಕೆ ನೀತಿಯಿಂದಾಗಿ ರಾಜ್ಯದಲ್ಲಿ ಕಾನೂನು  ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಅಶ್ರಫ್‌ನಿಂದ ನಡೆದಿರುವ ಮಹಾಲಕ್ಷ್ಮಿಯ ಹತ್ಯೆಯು ಕನ್ನಡಿಗರು ಇಲ್ಲಿ ಸುರಕ್ಷಿತರಲ್ಲ ಅನ್ನುವುದನ್ನು ಸಾಬೀತುಪಡಿಸಿದೆ’ ಎಂದು ಬಿಜೆಪಿ ಕರ್ನಾಟಕ ಎಂಬ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆಯಲಾಗಿದೆ. ಪ್ರಮುಖ  ಟಿವಿ ಚಾನೆಲ್ ನ್ಯೂಸ್ 18ನ ನಿರೂಪಕ ಅಮನ್ ಚೋಪ್ರಾ ಅಂತೂ ಅಶ್ರಫ್‌ನಿಂದಲೇ ಮಹಾಲಕ್ಷ್ಮಿಯ ಹತ್ಯೆ ನಡೆದಿದೆ  ಎಂಬುದನ್ನು ಕಣ್ಣಾರೆ ಕಂಡಂತೆ  ವಾದಿಸಿದ್ದೂ ನಡೆಯಿತು. ಈ ಸುದ್ದಿ ಎರಡ್ಮೂರು ದಿನಗಳ ಕಾಲ ಸೋಶಿಯಲ್  ಮೀಡಿಯಾದಲ್ಲಿ ಮತ್ತು ಟಿವಿ ಚಾನೆಲ್‌ಗಳಲ್ಲಿ ಎಗ್ಗಿಲ್ಲದೇ ಹರಿದಾಡಿದ ಬಳಿಕ ಕೊಲೆಗಾರ ಅಶ್ರಫ್ ಅಲ್ಲ ಅನ್ನುವುದು ಬೆಳಕಿಗೆ  ಬಂತು. ಒಡಿಸ್ಸಾದ ಮುಕ್ತಿ ರಂಜನ್ ರಾಯ್  ಎಂಬಾತ ಈ ಹತ್ಯೆ ನಡೆಸಿದ್ದ. ಮಾತ್ರವಲ್ಲ, ಹತ್ಯೆ ನಡೆಸಿದ ಬಳಿಕ ನೇರ  ಒಡಿಸ್ಸಾಕ್ಕೆ ತೆರಳಿದ ಆತ, ಒತ್ತಡ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದ.

ಇಂಥದ್ದು ಪ್ರತಿದಿನವೆಂಬಂತೆ  ಈ ದೇಶದಲ್ಲಿ ನಡೆಯುತ್ತಿದೆ. ಮುಸ್ಲಿಮರನ್ನು ಕಳ್ಳರು, ದೇಶದ್ರೋಹಿಗಳು, ಹಿಂದೂ ವಿರೋ ಧಿಗಳು, ಮತಾಂತರಿಗಳು, ಪಾಕಿಸ್ತಾನಿಗಳು, ಜಿಹಾದಿಗಳು.. ಎಂದು ಮುಂತಾಗಿ ತರತರದ ಪ್ರಚಾರಗಳನ್ನು  ನಡೆಸಲಾಗುತ್ತಿದೆ. ಹೆಚ್ಚಿನ ಎಲ್ಲ ಆರೋಪಗಳು ಸುಳ್ಳೆಂದು ಸಾಬೀತಾದರೂ ಮತ್ತೆ ಮತ್ತೆ ಸುಳ್ಳನ್ನು ಉತ್ಪಾದಿಸಿ  ಹಂಚಲಾಗುತ್ತಿದೆ. ಸತ್ಯಸುದ್ದಿ ಬಹಿರಂಗಕ್ಕೆ ಬರುವಾಗ ದಿನಗಳು ಕಳೆಯುತ್ತವೆ ಮತ್ತು ಅಷ್ಟು ಅವಧಿಯೊಳಗೆ ಸುಳ್ಳು ತಲು ಪಬೇಕಾದವರಿಗೆಲ್ಲ ತಲುಪಿರುತ್ತದೆ ಎಂಬ ಭರವಸೆಯೇ ಈ ಸುಳ್ಳನ್ನು ಉತ್ಪಾದಿಸಿ ಹಂಚುವವರದ್ದಾಗಿದೆ ಎನ್ನುವುದಕ್ಕೆ  ಪುರಾವೆಗಳ ಅಗತ್ಯ ಇಲ್ಲ. 140 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಅಪರಾಧ ಕೃತ್ಯಗಳು ನಡೆಯುವುದು ಆಶ್ಚರ್ಯದ  ಸಂಗತಿಯಲ್ಲ. ಇದುವೇ ಸುಳ್ಳಿನ ಕಾರ್ಖಾನೆ ನಡೆಸುತ್ತಿರುವವರ ಪಾಲಿನ ಆಮ್ಲಜನಕ. ಇಂಥವುಗಳಲ್ಲಿ ನಿರ್ದಿಷ್ಟ ಘಟನೆಯ ನ್ನು ಎತ್ತಿಕೊಂಡು ಅದಕ್ಕೆ ಮುಸ್ಲಿಮ್ ಬಣ್ಣವನ್ನು ಬಳಿದು ಸೋಶಿಯಲ್ ಮೀಡಿಯಾದಲ್ಲಿ ಹಂಚುವುದು ಇವರ ತಂತ್ರ.  ಆದರೆ,

ಈ ಅಪರಾಧಕ್ಕೆ ಶಿಕ್ಷೆ ಏನು? ಈ ಕಾರ್ಖಾನೆಗಳಿಗೆ ಬೀಗ ಜಡಿಯುವವರು ಯಾರು? ತಮ್ಮನ್ನು ಕಾನೂನು ಕಟ್ಟಿಹಾಕುವುದಿಲ್ಲ  ಎಂಬ ಭಂಡ ಧೈರ್ಯವೇ ಇಂಥ ಸುಳ್ಳನ್ನು ಹರಡುವವರ ಮೂಲ ಬಂಡವಾಳ. ಸೋಶಿಯಲ್ ಮೀಡಿಯಾದಲ್ಲಿ ಏನು  ಬರೆದು ಹಾಕಿದರೂ ನಡೆಯುತ್ತದೆ ಎಂಬ ಭಾವನೆ ನಿರ್ದಿಷ್ಟ ಗುಂಪಿನಲ್ಲಿದೆ. ಇದನ್ನು ಸುಳ್ಳು ಮಾಡಬೇಕಾದ ವ್ಯವಸ್ಥೆ  ಕೈಕಟ್ಟಿಕೊಂಡಂತಿದೆ. ಈ ಮಹಾಲಕ್ಷ್ಮಿ ಪ್ರಕರಣವನ್ನೇ ಎತ್ತಿಕೊಳ್ಳಿ. 

ಎರಡ್ಮೂರು ದಿನಗಳ ಕಾಲ ಸುಳ್ಳನ್ನು ಹರಡಿದವರ ಮೇಲೆ  ಈವರೆಗೂ ಯಾವ ಕ್ರಮವನ್ನೂ ಕೈಗೊಳ್ಳಲಾಗಿಲ್ಲ. ಇದು ಸುಳ್ಳು ಹರಡುವವರಲ್ಲಿ ಧೈರ್ಯವನ್ನು ಮೂಡಿಸುತ್ತದೆ.  ಮತ್ತೊಂದು ಸುಳ್ಳನ್ನು ಉತ್ಪಾದಿಸಿ ಹಂಚುವುದಕ್ಕೂ ಪ್ರೇರಣೆ ನೀಡುತ್ತದೆ. ನಿರಂತರ ಹೀಗೆ ಸುಳ್ಳನ್ನು ಉತ್ಪಾದಿಸಿ  ಹಂಚುವುದರಿಂದ  ಒಟ್ಟು ಸಮಾಜದ ಮೇಲೆ ಪ್ರಭಾವ ಬಿದ್ದೇ  ಬೀಳುತ್ತದೆ. ಮುಸ್ಲಿಮರನ್ನು ಅಪರಾಧಿಗಳಂತೆ ನೋಡುವುದಕ್ಕೆ  ಇಂಥ ಸುಳ್ಳುಗಳು ಸಮಾಜವನ್ನು ಸಜ್ಜುಗೊಳಿಸುತ್ತದೆ. ದೇಶದಲ್ಲಿ ಈಗಾಗಲೇ ಮುಸ್ಲಿಮ್ ವಿರೋಧಿ ಭಾವನೆಗಳು  ದಟ್ಟವಾಗಿರುವುದರ ಹಿಂದೆ ಇಂಥ ಸುಳ್ಳುಗಳ ಪಾತ್ರ ಬಹಳವಿದೆ. ಇದೇ ಮಹಾಲಕ್ಷ್ಮಿ ಹತ್ಯೆಯ ಬಗ್ಗೆ ಪಶ್ಚಿಮ ಬಂಗಾಳದಲ್ಲಿ  ಸುಳ್ಳು ಸುದ್ದಿಯನ್ನು ಹರಡಲಾಗಿತ್ತು ಎಂಬುದೇ ಈ ಸುಳ್ಳಿನ ವ್ಯಾಪ್ತಿಯನ್ನು ಹೇಳುತ್ತದೆ. ಘಟನೆ ಬೆಂಗಳೂರಿನಲ್ಲಿ ನಡೆದಿದೆಯಾದರೂ ಸುಳ್ಳು ಸುದ್ದಿಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಬಿಜೆಪಿ ಐಟಿ ಸೆಲ್‌ಗಳು ಈ ಸುಳ್ಳನ್ನು  ದೇಶದಾದ್ಯಂತ ಹರಡುವಂತೆ ನೋಡಿಕೊಳ್ಳುತ್ತಿದೆ. ಆದ್ದರಿಂದ ಈ ಸುಳ್ಳನ್ನು ಕೇವಲವಾಗಿ ಕಾಣುವುದು ದೇಶದ ಆಂತರಿಕ  ಭದ್ರತೆಯ ದೃಷ್ಟಿಯಿಂದ ಅಪಾಯಕಾರಿ. ಮುಸ್ಲಿಮರ ವಿರುದ್ಧ ಯಾವ ಸಂದರ್ಭದಲ್ಲೂ ದಂಗೆ ಎಬ್ಬಿಸುವುದಕ್ಕೆ ಪೂರಕ  ವಾತಾವರಣವನ್ನು ನಿರ್ಮಿಸಲು ಒಂದು ನಿರ್ದಿಷ್ಟ ಗುಂಪು ಯತ್ನಿಸುತ್ತಿದೆ. ಇದು ಬರೇ ರಾಜಕೀಯ ಹಿತಾಸಕ್ತಿಯ  ದೃಷ್ಟಿಯಿಂದ ಮಾತ್ರ ನಡೆಯುತ್ತಿರುವ ಸಂಚಲ್ಲ. ರಾಜಕೀಯ ಲಾಭದಾಚೆಗೆ ಒಂದು ಸಮುದಾಯದ ಅಸ್ತಿತ್ವವನ್ನೇ ಅಪಾಯಕ್ಕೆ  ಒಡ್ಡುವ ತಂತ್ರವೂ ಇರುವಂತಿದೆ.

ಸದ್ಯ ಪ್ರಭುತ್ವ ಎರಡು ಪ್ರಮುಖ ಅಂಶಗಳತ್ತ ಗಮನ ಹರಿಸಬೇಕು. 1. ಸುಳ್ಳು ಸುದ್ದಿಗಳನ್ನು ನಿಯಂತ್ರಿಸುವುದು. 2. ಸುಳ್ಳು  ಸುದ್ದಿಯನ್ನು ಉತ್ಪಾದಿಸಿ ಹಂಚುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದು. ಕನಿಷ್ಠ 6 ತಿಂಗಳ ಅವಧಿಗಾದರೂ  ಜಾಮೀನು ದೊರೆಯದಂಥ ಸೆಕ್ಷನ್‌ಗಳಡಿ ಕ್ರಮ ಕೈಗೊಳ್ಳುವ ನಿಷ್ಠುರತೆಯನ್ನು ಸರಕಾರ ಪ್ರದರ್ಶಿಸಬೇಕು. ಒಮ್ಮೆ ಸರಕಾರ  ಇಂಥ ಸಾಹಸಕ್ಕೆ ಕೈ ಹಾಕಿದರೆ, ಸುಳ್ಳಿನ ಕಾರ್ಖಾನೆಗಳು ತನ್ನಿಂತಾನೇ ಬಾಗಿಲು ಹಾಕಲು ಶುರು ಮಾಡುತ್ತದೆ. ಇದು ಸದ್ಯದ  ತುರ್ತು ಅಗತ್ಯವೂ ಹೌದು. ಬಹುಶಃ, ಸುಳ್ಳಿನ ಕುರಿತು ಸರಕಾರಗಳ ಮೃದು ನೀತಿಯೇ ಸುಳ್ಳಿನ ವಿಜೃಂಭಣೆಗೆ ಮೂಲ  ಕಾರಣ ಎನ್ನಬೇಕು. ಮುಖ್ಯವಾಗಿ, ಪ್ರಭುತ್ವದಲ್ಲಿರುವವರಿಗೆ ಮುಸ್ಲಿಮರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು  ಸಾಧ್ಯವಾಗದಿರುವುದು ಈ ಉದಾಸೀನ ನೀತಿಗೆ ಕಾರಣವಾಗಿರಬಹುದು. ಸುಳ್ಳನ್ನು ತಡೆಯುವುದಕ್ಕೆ ಕ್ರಮ ಕೈಗೊಳ್ಳಬೇಕಾದ  ಕೇಂದ್ರ ಸರಕಾರದ ಸಚಿವ ಸಂಪುಟದಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಪ್ರತಿನಿಧಿ ಇಲ್ಲ. ಮುಸ್ಲಿಮರನ್ನು ವೈರಿಗಳಂತೆ  ಬಿಂಬಿಸಿಯೇ ಕೇಂದ್ರದ ಈಗಿನ ಸರಕಾರ ಅಧಿಕಾರ ಪಡೆದಿದೆ. ಆದ್ದರಿಂದ ಸುಳ್ಳು ಸುದ್ದಿಗಳು ಅವರ ಪಾಲಿಗೆ ವರವೇ  ಹೊರತು ಶಾಪವಲ್ಲ. ಆದ್ದರಿಂದ ಕೇಂದ್ರದಿಂದ  ಸಮರ್ಪಕ ನೀತಿ ಪ್ರಕಟವಾದೀತು ಎಂದು ಹೇಳುವಂತಿಲ್ಲ. ಒಂದುವೇಳೆ,  ಸುಳ್ಳು ಸುದ್ದಿಗಳ ಮೇಲೆ ಕ್ರಮ ಕೈಗೊಳ್ಳುವ ನೀತಿ ಜಾರಿಗೊಳಿಸಿದರೂ ಅದು ಎಷ್ಟು ಪಕ್ಷಪಾತಿ ರಹಿತವಾಗಿರಬಹುದು  ಎಂಬ ಬಗ್ಗೆ ಅನುಮಾನವಿದೆ. ಆದರೂ,

ಸುಳ್ಳುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲೇಬೇಕು. ನಿರಂತರ ಒಂದು ನಿರ್ದಿಷ್ಟ ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸುತ್ತಾ ಇರುವುದರಿಂದ ಸಮಾಜವೇ ಅದನ್ನು ನಂಬಿಬಿಡುತ್ತದೆ. ಸರಕಾರಿ ಅಧಿಕಾರಿಗಳಾಗಲಿ, ಪೊಲೀಸ್ ಇಲಾಖೆಯಾಗಲಿ  ಎಲ್ಲರೂ ಈ ಸಮಾಜದ ಭಾಗವೇ ಆಗಿರುವುದರಿಂದ ಅವರನ್ನು ಈ ಸುಳ್ಳುಗಳು ಪ್ರಭಾವಿಸದೆ ಇರಲು ಸಾಧ್ಯವೇ ಇಲ್ಲ.  ಮುಸ್ಲಿಮರ ಬಗ್ಗೆ ನ್ಯಾಯಾಧೀಶರೇ ಆಕ್ಷೇಪಾರ್ಹ ರೀತಿಯಲ್ಲಿ ಹೇಳಿಕೆ ನೀಡುತ್ತಾರೆಂದ ಮೇಲೆ ಉಳಿದವರ ಬಗ್ಗೆ  ಹೇಳುವುದಕ್ಕೇನಿದೆ? ಆದ್ದರಿಂದ, ಸುಳ್ಳು ಸುದ್ದಿಗಳ ವಿರುದ್ಧ ಧರ್ಮ ನೋಡದೇ ಕ್ರಮ ಕೈಗೊಳ್ಳುವ ಬಗ್ಗೆ ವ್ಯವಸ್ಥೆ ಗಂಭೀರ  ಚಿಂತನೆ ನಡೆಸಲಿ.
ಈ ಸುಳ್ಳುಗಳೆಲ್ಲ ಉದ್ದೇಶರಹಿತ ಮತ್ತು ಅಚಾನಕ್ ಬೆಳವಣಿಗೆಗಲ್ಲ. ಅದರ ಹಿಂದೆ ವ್ಯವಸ್ಥಿತ ತಂತ್ರವಿದೆ. ಅದನ್ನು ಬಯಲಿಗೆಳೆದು ಸಮಾಜದ ಆರೋಗ್ಯವನ್ನು ಕಾಪಾಡಬೇಕಾದ ಹೊಣೆಗಾರಿಕೆ ಸರಕಾರದ ಮೇಲಿದೆ.

ಜಮಾಅತೆ ಇಸ್ಲಾಮೀ ನಾಯಕರನ್ನು ನೇಣಿಗೇರಿಸಿದ್ದ ಹಸೀನಾಗೆ ನೇಣು ಭೀತಿ






‘ಯುದ್ಧಾಪರಾಧ ನ್ಯಾಯ ಮಂಡಳಿ’ಯನ್ನು ರಚಿಸಿ 5 ಮಂದಿ ಜಮಾಅತೆ ಇಸ್ಲಾಮೀ  ನಾಯಕರನ್ನು ನೇಣಿಗೇರಿಸಿದ್ದ  ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಇದೀಗ ಸ್ವತಃ ನೇಣು ಶಿಕ್ಷೆಯ ಭೀತಿಯನ್ನು  ಎದುರಿಸುತ್ತಿದ್ದಾರೆ. ಅವರ ವಿರುದ್ಧ ಬಾಂಗ್ಲಾದೇಶದಲ್ಲಿ ಹತ್ಯೆ, ಹತ್ಯಾ ಪ್ರಚೋದನೆ ಸಹಿತ ವಿವಿಧ ಕಲಂಗಳಡಿ ಪ್ರಕರಣ  ದಾಖಲಿಸಲಾಗಿದೆ.

 2001 ರಿಂದ 2006ರ ವರೆಗೆ ಅಧಿಕಾರದಲ್ಲಿದ್ದ ಬೇಗಂ ಖಲೀದಾ ಝಿಯಾ ಅವರ ಸರಕಾರದ  ಪಾಲುದಾರನಾಗಿ ಜಮಾಅತೆ ಇಸ್ಲಾಮಿಯು ಬಾಂಗ್ಲಾ ದೇಶದ ನಾಗರಿಕರ ಗಮನ ಸೆಳೆದಿತ್ತು. ಜಮಾಅತ್ ಅಧ್ಯಕ್ಷರಾಗಿದ್ದ  ಮೌಲಾನಾ ಮುತೀರ‍್ರಹ್ಮಾನ್ ನಿಝಾಮಿ ಅವರು ಕೃಷಿ ಮತ್ತು ಉದ್ಯಮ ಸಚಿವರಾಗಿ ಆಯ್ಕೆಯಾದುದಲ್ಲದೆ, ತನ್ನ  ಭ್ರಷ್ಟರಹಿತ ಪಾರದರ್ಶಕ ನೀತಿಯಿಂದ ಜನಪ್ರಿಯರಾದರು. ಇವರೂ ಸಹಿತ 2001ರಲ್ಲಿ ಪಾರ್ಲಿಮೆಂಟ್‌ಗೆ ಆಯ್ಕೆಯಾಗಿದ್ದ  ಜಮಾಅತ್‌ನ ಎಲ್ಲಾ 18 ಮಂದಿ ಸಂಸದರಲ್ಲಿ ಯಾರೊಬ್ಬರೂ ಭ್ರಷ್ಟಾಚಾರದಲ್ಲಿ ಸಿಲುಕಿಕೊಳ್ಳಲಿಲ್ಲ. ಅದೇವೇಳೆ,

2006ರ ಚುನಾವಣೆಯಲ್ಲಿ ಖಲೀದಾ ಝಿಯಾ ಸರ್ಕಾರ ಪತನಗೊಳ್ಳುವುದಕ್ಕೆ ಭ್ರಷ್ಟಾಚಾರವೂ ಒಂದು ಪ್ರಬಲ  ಕಾರಣವಾಗಿತ್ತು. ಈ ಚುನಾವಣೆಯಲ್ಲಿ ಶೇಖ್ ಹಸೀನಾ ಅವರ ಅವಾಮೀ ಲೀಗ್ ಪಕ್ಷ ಬಹುಮತ ಪಡಕೊಂಡಿತಾದರೂ  ಜಮಾಅತೆ ಇಸ್ಲಾಮಿಯನ್ನು ಬಾಂಗ್ಲಾದೇಶಿಯರು ಭವಿಷ್ಯದ ಆಡಳಿತ ಪಕ್ಷವಾಗಿ ಸ್ವೀಕರಿಸುವ ಸೂಚನೆಯನ್ನು ನೀಡಿದ್ದರು.  ಆಡಳಿತ ವಿರೋಧಿ ಅಲೆಯಿಂದಾಗಿ ಜಮಾಅತ್ ಗಣನೀಯ ಸಂಖ್ಯೆಯಲ್ಲಿ ಪಾರ್ಲಿಮೆಂಟ್ ಸೀಟನ್ನು ಕಳಕೊಂಡರೂ  ತಳಮಟ್ಟದಲ್ಲಿ ಅದು ತನ್ನ ಜಾಲವನ್ನು ವಿಸ್ತರಿಸಿಕೊಂಡಿತ್ತು. ಶಿಕ್ಷಣ, ಆರೋಗ್ಯ ಮತ್ತು ನಾಗರಿಕ ಸೌಲಭ್ಯ ಕ್ಷೇತ್ರಗಳಲ್ಲಿ ಅದು  ಬಾಂಗ್ಲಾದೇಶೀಯರ ಮನೆ-ಮನಕ್ಕೆ ತಲುಪಿತ್ತು. ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಶೇಖ್ ಹಸೀನಾ ಅವರಿಗೆ  ಕಂಟಕವಾಗುವ ಎಲ್ಲ ಸೂಚನೆಯನ್ನೂ ಅದು ನೀಡಿತ್ತು. ಭ್ರಷ್ಟಾಚಾರ ಮತ್ತು ಜನಾಕ್ರೋಶಕ್ಕೆ ತುತ್ತಾಗಿದ್ದ ಖಾಲಿದಾ ಝಿಯಾ  ಅವರ ಪಕ್ಷವನ್ನು ಎದುರಿಸುವಷ್ಟು ಸುಲಭವಾಗಿ ಬೇರುಮಟ್ಟ ದಲ್ಲಿ ಕಾರ್ಯಕರ್ತರನ್ನು ಹೊಂದಿರುವ ಜಮಾಅತೆ  ಇಸ್ಲಾಮಿಯನ್ನು ಎದುರಿಸಲು ಸಾಧ್ಯವಿಲ್ಲ ಎಂಬುದನ್ನು ಹಸೀನಾ ತಿಳಿದುಕೊಂಡರು. 2006ರ ಚುನಾವಣಾ ಪ್ರಚಾರದಲ್ಲೇ  ಇದು ಅವರಿಗೆ ಮನವರಿಕೆ ಯಾಗಿತ್ತು. ಆದ್ದರಿಂದಲೇ, ‘ಅಧಿಕಾರಕ್ಕೆ ಬಂದರೆ ಯುದ್ಧಾಪರಾಧ ನ್ಯಾಯಮಂಡಳಿ’  ರಚಿಸುವುದಾಗಿ ಘೋಷಿಸಿದ್ದರು. 2009ರಲ್ಲಿ ಅವರು ಯುದ್ಧಾಪರಾಧ ನ್ಯಾಯಮಂಡಳಿಯನ್ನು ರಚಿಸಿದರು. ನಿಜವಾಗಿ,

ಯುದ್ಧಾಪರಾಧಗಳನ್ನು ತನಿಖಿಸುವುದೇ ಅವರ ಉದ್ದೇಶವಾಗಿದ್ದರೆ 1996ರಿಂದ 2001ರ ವರೆಗೆ ಪ್ರಧಾನಿಯಾಗಿದ್ದಾಗಲೇ  ಅವರಿಗೆ ಈ ನ್ಯಾಯಮಂಡಳಿಯನ್ನು ರಚಿಸಬಹುದಿತ್ತು. ಅಲ್ಲದೇ 1996ರ ಪಾರ್ಲಿಮೆಂಟ್ ಚುನಾವಣೆಯಲ್ಲಿ ಶೇಖ್  ಹಸೀನಾರನ್ನು ಜಮಾಅತೆ ಇಸ್ಲಾಮೀ ಬೆಂಬಲಿಸಿತ್ತು ಮತ್ತು ಖಲೀದಾ ಝಿಯಾಗೆ ವಿರುದ್ಧವಾಗಿ ನಿಂತಿತ್ತು. ಆದರೆ ಶೇಖ್  ಹಸೀನಾ ಸರಕಾರದಲ್ಲಿ ಜಮಾಅತ್ ಭಾಗಿಯಾಗಲಿಲ್ಲ ಮತ್ತು 1998ರಲ್ಲಿ ಖಲೀದಾ ಝಿಯಾರ ಜೊತೆ ಮೈತ್ರಿ  ಮಾಡಿಕೊಂಡಿತು. ಇದಕ್ಕಿಂತ ಮೊದಲು ಶೇಖ್ ಹಸೀನಾರ ತಂದೆ ಶೇಖ್ ಮುಜೀಬರ‍್ರಹ್ಮಾನ್‌ರು 1971ರಲ್ಲಿ ಹೊಸದಾಗಿ  ರಚನೆಗೊಂಡ ಬಾಂಗ್ಲಾದೇಶದ ಪ್ರಪ್ರಥಮ ಪ್ರಧಾನಿಯಾಗಿದ್ದರು. ಅವರನ್ನು ಬಾಂಗ್ಲಾದ ರಾಷ್ಟ್ರ ಪಿತ ಎಂದು ಕರೆಯಲಾಗು  ತ್ತದೆ. ಪ್ರತ್ಯೇಕ ಬಾಂಗ್ಲಾದೇಶದ ರಚನೆಗಾಗಿ 1971ರಲ್ಲಿ ಮುಜೀಬರ‍್ರಹ್ಮಾನ್ ನೇತೃತ್ವದಲ್ಲಿ ನಡೆದ ಹೋರಾಟದ ವೇಳೆ ನಡೆದ  ನಾಗರಿಕರ ನರಮೇಧವನ್ನು ಶೇಖ್ ಹಸೀನಾ ಅವರು ಯುದ್ಧಾಪರಾಧ ಎಂದು ಕರೆಯುತ್ತಿದ್ದಾರೆ. ಜಮಾಅತೆ ಇಸ್ಲಾಮೀ  ಇದರಲ್ಲಿ ಭಾಗಿಯಾಗಿದೆ ಎಂಬುದು ಅವರ ಆರೋಪ. ಆದರೆ,

ಈ ವಿಷಯದಲ್ಲಿ ಅತೀ ಹೆಚ್ಚು ತಿಳಿದವರು ಶೇಖ್ ಮುಜೀಬರ‍್ರಹ್ಮಾನ್. ಪ್ರಧಾನಿಯಾಗಿದ್ದ ಮತ್ತು ಬಾಂಗ್ಲಾದ `ಗಾಂಧೀಜಿ'ಯಾಗಿದ್ದ ಅವರಿಗೆ ಇಂಥದ್ದೊಂದು  ನ್ಯಾಯಮಂಡಳಿ ರಚಿಸುವುದಕ್ಕೆ ಸರ್ವ ಸ್ವಾತಂತ್ರ್ಯವೂ ಇತ್ತು. ಆದರೂ ಅವರು  ರಚಿಸಲಿಲ್ಲ. ಪಾಕಿಸ್ತಾನದ ವಿಭಜನೆಗೆ ಜಮಾಅತೆ ಇಸ್ಲಾಮಿಯ ಬೆಂಬಲ ಇರಲಿಲ್ಲವಾದರೂ ಮತ್ತು ಪೂರ್ವ ಮತ್ತು ಪಶ್ಚಿಮ  ಪಾಕಿಸ್ತಾನವನ್ನು ಸ್ವಾಯತ್ತ ಪ್ರದೇಶವಾಗಿ, ಪ್ರತ್ಯೇಕ ಕರೆನ್ಸಿ, ಪ್ರತ್ಯೇಕ ಪಾಲಿಮೆಂಟ್‌ನ ರಚನೆಗಾಗಿ ಮುಜೀಬರ‍್ರಹ್ಮಾನ್ ನಡೆಸಿದ್ದ  ಹೋರಾಟವನ್ನು ವಿರೋಧಿಸಿತ್ತಾದರೂ ಅದು ಎಂದೂ ನಾಗರಿಕ ಹತ್ಯೆಯಲ್ಲಿ ಭಾಗಿಯಾಗಿರಲಿಲ್ಲ ಎಂಬುದೇ ಸತ್ಯ. ಇಲ್ಲದಿದ್ದರೆ  ಮುಜೀಬರ‍್ರಹ್ಮಾನ್‌ರು ಖಂಡಿತ ಯುದ್ಧಾಪರಾಧ ನ್ಯಾಯ ಮಂಡಳಿಯನ್ನು ರಚಿಸುತ್ತಿದ್ದರು. ಆದರೆ,

2009ರಲ್ಲಿ ಪ್ರಧಾನಿ ಶೇಖ್ ಹಸೀನಾ ಯುದ್ಧಾಪರಾಧ ನ್ಯಾಯ ಮಂಡಳಿಯನ್ನು ರಚಿಸಿದರು. ಜಮಾಅತೆ ಇಸ್ಲಾಮಿಯನ್ನು  ಹಣಿಯುವುದೇ ಅವರ ಉದ್ದೇಶವಾಗಿತ್ತು. ಈ ನ್ಯಾಯಮಂಡಳಿ ಎಷ್ಟು ಏಕಮುಖವಾಗಿ ವಿಚಾರಣೆ ನಡೆಸಿತ್ತೆಂದರೆ,  ಇಂಟರ್‌ನ್ಯಾಶನಲ್ ಬಾರ್ ಅಸೋಸಿಯೇಶನ್, ನೋ ಪೀಸ್ ವಿದೌಟ್ ಜಸ್ಟಿಸ್, ಅಮೇರಿಕದ ಪಾರ್ಲಿಮೆಂಟ್ ಸದಸ್ಯರು,  ಬ್ರಿಟಿಷ್ ಪಾರ್ಲಿಮೆಂಟ್ ಸದಸ್ಯರು, ಬ್ರಿಟನ್ ಮತ್ತು ವೇಲ್ಸ್ ಮಾನವ ಹಕ್ಕು ಸಮಿತಿ, ಆಮ್ನೆಸ್ಟಿ ಇಂಟರ್‌ನ್ಯಾಶನಲ್‌ಗಳು  ನ್ಯಾಯ ಮಂಡಳಿಯ ಉದ್ದೇಶಶುದ್ಧಿಯನ್ನೇ ಪ್ರಶ್ನಿಸಿದುವು. ಆದರೆ, ಹಸೀನಾ ಇವಾವುದನ್ನೂ ಕಿವಿಗೆ ಹಾಕಿ ಕೊಳ್ಳಲೇ ಇಲ್ಲ.  ಜಮಾಅತ್‌ನ ಪ್ರಮುಖ ನಾಯಕರಾದ ಅಲಿ ಅಹ್ಸನ್ ಮುಜಾಹಿದ್, ಅಬ್ದುಲ್ ಕಾದರ್ ಮುಲ್ಲಾ, ಮುಹಮ್ಮದ್  ಕಮರುಝ್ಝಮಾನ್, ಅಲಿ ಕಾಸಿಂ ಮತ್ತು ಖಲೀದಾ ಝಿಯಾ ಸರಕಾರದಲ್ಲಿ ಸಚಿವರಾಗಿದ್ದ ಮುತೀವುರ‍್ರಹ್ಮನ್  ನಿಝಾಮಿಯನ್ನು ಗಲ್ಲಿಗೇರಿಸಿತು. ಈ ತೀರ್ಪುಗಳನ್ನು ಸುಪ್ರೀಮ್ ಕೋರ್ಟ್ನಲ್ಲಿ ಪ್ರಶ್ನಿಸಲಾಯಿತಾದರೂ ಪ್ರಯೋಜ ನವಾಗಲಿಲ್ಲ. ಅಂದಹಾಗೆ, ಇತ್ತೀಚೆಗೆ ಹಸೀನಾ ಪದಚ್ಯುತಿಗೆ ಕಾರಣವಾದ ವಿದ್ಯಾರ್ಥಿ ಹೋರಾಟಗಾರರು ಸುಪ್ರೀಮ್  ಕೋರ್ಟನ್ನು ಸುತ್ತುವರಿದಿದ್ದಲ್ಲದೇ, ಮುಖ್ಯ ನ್ಯಾಯಾಧೀಶ ರಾಜೀನಾಮೆ ಕೊಡುವಂತೆ ಮಾಡಿದ್ದು ಇಲ್ಲಿ ಸ್ಮರಣಾರ್ಹ.  ಕೋರ್ಟ್ ನ  ಉಳಿದ ಐವರು ನ್ಯಾಯಾಧೀಶರ ರಾಜೀನಾಮೆಯನ್ನೂ ಈ ಹೋರಾಟಗಾರರು ಆಗ್ರಹಿಸಿದ್ದರು ಎಂಬುದೂ  ಇಲ್ಲಿ ಮುಖ್ಯ. ರಾಜೀನಾಮೆ ನೀಡಿದ ಮುಖ್ಯ ನ್ಯಾಯಾಧೀಶರು ಹಸೀನಾ ಅವರ ಆಪ್ತರೂ ಬಂಧುವೂ ಆಗಿದ್ದರು  ಎಂಬುದನ್ನು ಪರಿಗಣಿಸಿದರೆ, ಒಟ್ಟು ನ್ಯಾಯಾಂಗ ವ್ಯವಸ್ಥೆಯನ್ನು ಹಸೀನಾ ಹೇಗೆ ದುರ್ಬಳಕೆ ಮಾಡಿಕೊಂಡಿದ್ದರು  ಎಂಬುದು ಮನದಟ್ಟಾಗುತ್ತದೆ. ಆಘಾತಕಾರಿ ಸಂಗತಿ ಏನೆಂದರೆ,

ಹೆದರಿಸಿ, ಬೆದರಿಸಿ, ಅಪಹರಿಸಿ ಸಾಕ್ಷಿಗಳಿಂದ ಸಾಕ್ಷ್ಯ  ಪಡೆಯಲಾಗಿತ್ತು ಎಂಬುದು. ಪಶ್ಚಿಮ ಪಾಕಿಸ್ತಾನದ ಬೋಶುಗೋರಿ  ಗ್ರಾಮದಲ್ಲಿ ನಡೆದ 450 ಮಂದಿಯ ಹತ್ಯೆಗೆ ನಿಝಾಮಿ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗಿತ್ತು. ಆ ಹತ್ಯಾಕಾಂಡ  ನಡೆಸಲು ನಿಝಾಮಿ ಅವರು ಪಾಕ್ ಸೈನಿಕರಿಗೆ ಗ್ರಾಮದ ದಾರಿ ತೋರಿಸಿದ್ದರು ಎಂಬುದು ಆರೋಪ. ಇದೇ ಆರೋಪದಲ್ಲಿ ಅವರನ್ನು ಗಲ್ಲಿಗೇರಿಸಲಾಗಿತ್ತು. ಆ ಹತ್ಯಾಕಾಂಡದಲ್ಲಿ ಬದುಕುಳಿದಿದ್ದ ಏಕೈಕ ವ್ಯಕ್ತಿಯನ್ನು ಹೇಗೆ ಬಂದೂಕಿನ ಮೊನೆಯಲ್ಲಿಟ್ಟು ಸಾಕ್ಷ್ಯ  ಪಡೆಯಲಾಗಿತ್ತು ಎಂಬುದನ್ನು ಆ ಬಳಿಕದ ಸ್ಟಿಂಗ್ ಆಪರೇಶನ್ ಹೇಳಿತ್ತು. ಇದರ ಆಧಾರದಲ್ಲೇ  ಲಂಡ ನ್‌ನ ದಿ ಟೆಲಿಗ್ರಾಫ್ ಪತ್ರಿಕೆಯು ನಿಝಾಮಿ ವಿಚಾರಣಾ ಪ್ರಕ್ರಿಯೆಯನ್ನೇ ಬೋಗಸ್ ಎಂದು ಹೇಳಿತ್ತು. ಆ ಸ್ಟಿಂಗ್ ಆಪರೇ ಶನ್‌ನಲ್ಲಿ ಆ ವ್ಯಕ್ತಿ ತನ್ನನ್ನು ಪೊಲೀಸರು ಅಪಹರಿಸಿದ್ದು, ಮಂತ್ರಿಯ ಬಳಿಗೆ ಕೊಂಡೊಯ್ದದ್ದು ಮತ್ತು ಜೀವಬೆದರಿಕೆ  ಹಾಕಿದ್ದನ್ನೆಲ್ಲಾ ಹೇಳಿಕೊಂಡಿದ್ದ. ಅಲ್ಲದೇ, ಚುನಾವಣೆಯಲ್ಲಿ ತಾನು ಜಮಾಅತೆ ಇಸ್ಲಾಮಿಗೆ ಓಟು ಹಾಕಿದ್ದೆ  ಎಂದೂ ಹೇಳಿದ್ದ.  ಪಾಕ್ ಸೇನೆಗೆ ದಾರಿ ತೋರಿಸಿದವನ ಹೆಸರು ಅಸದ್ ಎಂದಾಗಿದ್ದು, ಆತನನ್ನು ಸ್ವಾತಂತ್ರ‍್ಯ ಹೋರಾಟಗಾರರು ಬಂಧಿಸಿದರಲ್ಲದೇ ಜನತಾ ನ್ಯಾಯಾಯಲದಲ್ಲಿ ವಿಚಾರಣೆಗೆ ಒಳಪಡಿಸಿ ನೇಣಿಗೇರಿಸಿದ್ದರು ಎಂದೂ ಆತ ಸ್ಟಿಂಗ್ ಆಪರೇಶನ್ ನಲ್ಲಿ ಹೇಳಿದ್ದ. ನಿಝಾಮಿ ವಿರುದ್ಧ ತಾನು ಸಾಕ್ಷ್ಯ  ನುಡಿಯದಿದ್ದರೆ ಪೊಲೀಸ್ ಇಲಾಖೆಯಲ್ಲಿರುವ ತನ್ನ ಮಗನ ಕೆಲಸ  ಹೋಗಲಿದೆ ಎಂಬ ಭೀತಿಯನ್ನೂ  ಆತ ವ್ಯಕ್ತಪಡಿಸಿದ್ದ.

ಬಾಂಗ್ಲಾದ ಯುದ್ಧಾಪರಾಧ ನ್ಯಾಯ ಮಂಡಳಿಯ ವಿವಿಧ ಪ್ರಕ್ರಿಯೆಯನ್ನು ಅಧ್ಯಯನ ನಡೆಸಿದರೆ, ಹಸೀನಾ ಎಂಥ  ಸರ್ವಾಧಿಕಾರಿ ಮನಸ್ಥಿತಿಯನ್ನು ಹೊಂದಿದ್ದರು ಅನ್ನುವುದು ಗೊತ್ತಾಗುತ್ತದೆ. ಚುನಾವಣೆಯಲ್ಲಿ ಸ್ಪರ್ಧಿಸದಂತೆ ಜಮಾಅತೆ  ಇಸ್ಲಾಮೀ ವಿರುದ್ಧ ನಿಷೇಧ ಹೊರಡಿಸುವುದಕ್ಕೂ ಅವರು ಸಫಲವಾದರು. ತನ್ನ ವಿರುದ್ಧದ ಪ್ರತಿ ಧ್ವನಿಯನ್ನೂ ಹತ್ತಿಕ್ಕಿದರು.  ಜಮಾಅತೆ ಇಸ್ಲಾಮಿಯ ಸಾವಿರಾರು ಕಾರ್ಯಕರ್ತರು ತಲೆಮರೆಸಿಕೊಂಡೋ ನಿರಾಶ್ರಿತರಾಗಿಯೋ ಬದುಕಿದರು. ಅವರ  ನಾಯಕರನ್ನು ಜೈಲಿಗಟ್ಟಿದರು. ಅದರ ಚಟುವಟಿಕೆಗಳನ್ನು ಹತ್ತಿಕ್ಕಿದರು. ಇದರಿಂದ ನಾಗರಿಕರು ಎಷ್ಟು  ರೋಸಿಹೋದರೆಂದರೆ, 2022ರ ಪಾರ್ಲಿಮೆಂಟ್ ಚುನಾವಣೆಯನ್ನು ಬಹುತೇಕ  ಬಹಿಷ್ಕರಿಸಿದರು. ಕೇವಲ  40% ಮಂದಿಯಷ್ಟೇ ಮತದಾನ ಮಾಡಿದರು. ಹಸೀನಾರ ದಮನ ನೀತಿಯನ್ನು ಸ್ವತಃ ಅಮೇರಿಕವೇ ವಿರೋಧಿಸಿತು.  ಈಗಿನ ಮಧ್ಯಂತರ ಸರಕಾರದ ಪ್ರಧಾನಿ ಮುಹಮ್ಮದ್ ಯೂನುಸ್ ವಿರುದ್ಧವೇ 200ರಷ್ಟು ಕೇಸ್‌ಗಳನ್ನು ದಾಖಲಿಸಿ ಈ  ಹಸೀನಾ ಬಾಂಗ್ಲಾದಿಂದಲೇ ಓಡಿಸಿದ್ದರು. ಇದೀಗ,

ಅಂಥ ಹಸೀನಾರೇ ಮರಣ ದಂಡನೆ ಭೀತಿಯನ್ನು ಎದುರಿಸುತ್ತಿದ್ದಾರೆ. ಭಾರತ ಸರ್ಕಾರ ಒಂದೊಮ್ಮೆ ಹಸೀನಾರನ್ನು ಬಾಂಗ್ಲಾಕ್ಕೆ ಹಸ್ತಾನ್ತರಿಸಿದರೆ ಅವರಿಗೆ ಗಲ್ಲು ಶಿಕ್ಷೆ ಜಾರಿಯಾಗುವ ಸಾಧ್ಯತೆಯೂ ಇದೆ. ಕೆಲವೊಮ್ಮೆ ಕಾಲ ಅತ್ಯಂತ ಶೀಘ್ರವಾಗಿ ಮತ್ತು  ಕಟುವಾಗಿ ಪ್ರತಿಕ್ರಿಯಿಸುತ್ತದೆ, ಅಲ್ಲವೇ?

Wednesday, 14 August 2024

ಮೌಲಾನರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಲು ಕಾರಣವೇನು?





ಸ್ವಾತಂತ್ರ‍್ಯ ಅಂದರೆ ಬಿಡುಗಡೆ. ಒಂದರ್ಥದಲ್ಲಿ ವಿಮೋಚನೆ. 1947 ಆಗಸ್ಟ್ 15 ಈ ದೇಶದ ಪಾಲಿಗೆ ಯಾಕೆ ಮುಖ್ಯ  ಅಂದರೆ, ಆವತ್ತು ಈ ದೇಶ ಬ್ರಿಟಿಷರಿಂದ ಬಿಡುಗಡೆಗೊಂಡಿತು. ಇತಿಹಾಸದ ಉದ್ದಕ್ಕೂ ಇಂಥ ವಿಮೋಚನೆಗಳು ನಡೆದಿವೆ  ಮತ್ತು ಇಂಥ ಇಸವಿಗಳನ್ನು ದಪ್ಪಕ್ಷರಗಳಲ್ಲಿ ಬರೆದಿಡಲಾಗಿದೆ. ಮುಸ್ಲಿಮರ ಮಟ್ಟಿಗೆ ಈ ‘ಬಿಡುಗಡೆ’ ಎಂಬ ಪದ ಹೊಸತಲ್ಲ.  ಮದ್ರಸ ಕಲಿಕೆಯ ಸಂದರ್ಭದಲ್ಲೇ  ಅವರು ಈ ಪದವನ್ನು ಮತ್ತು ಅದರ ಭಾವ-ಬೇಡಿಕೆಗಳನ್ನು ಅರಿತಿರುತ್ತಾರೆ. ಭಾರತದ  ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಮುಸ್ಲಿಮರು ಮಹತ್ವಪೂರ್ಣ ಪಾತ್ರ ನಿಭಾಂಯಿಸಿರುವುದಕ್ಕೆ ಅವರ ಈ ಮದ್ರಸಾ ಕಲಿಕೆಯ  ಪಾತ್ರವೂ ಬಹಳಷ್ಟಿದೆ. ಜೈ ಹಿಂದ್ ಎಂಬ ಘೋಷಣೆಯನ್ನು ಈ ದೇಶಕ್ಕೆ ಅರ್ಪಿಸಿದ ಆಬಿದ್ ಹಸನ್ ಸಫ್ರಾನಿಯಿಂದ  ಹಿಡಿದು ದೇಶದ ಮೊದಲ ಶಿಕ್ಷಣ ಮಂತ್ರಿ ಮೌಲಾನಾ ಅಬುಲ್ ಕಲಾಂ ಆಝಾದ್‌ರ ವರೆಗೆ, ಬೇಗಂ ಹಝ್ರತ್  ಮಹಲ್‌ರಿಂದ ತೊಡಗಿ ಬ್ರಿಟಿಷರಿಂದ ಬಂಧಿತರಾಗಿ ಅಂಡಮಾನ್ ಜೈಲಿನಲ್ಲಿ 25 ವರ್ಷಗಳ ಕರಾಳ ಶಿಕ್ಷೆಯನ್ನು ಪಡೆದು  ಸಾವಿಗೀಡಾದ ಮೌಲವಿ ಸೈಯದ್ ಅಲ್ಲಾವುದ್ದೀನ್‌ವರೆಗೆ ಇಂಥವರ ಪಟ್ಟಿ ಬಹಳ ಉದ್ದವೂ ಇದೆ.

ಸೈಯದ್ ಎಂಬುದು ಪ್ರವಾದಿ ಮುಹಮ್ಮದ್(ಸ)ರ ಕುಟುಂಬ ಪರಂಪರೆಯಲ್ಲಿ ಬೆಳೆದು ಬಂದವರ ಗುರುತು. ಆ ಪರಂಪರೆಯಲ್ಲಿ ಗುರುತಿಸಿಕೊಂಡವರಿಗೆ ಮುಸ್ಲಿಮ್ ಸಮುದಾಯದಲ್ಲಿ ವಿಶೇಷ ಗೌರವ ವಿದೆ. ಅಂಥವರೇ ಭಾರತೀಯ ಸ್ವಾತಂತ್ರ‍್ಯ  ಸಂಗ್ರಾಮದಲ್ಲಿ ಭಾಗಿಯಾಗಿದ್ದಾರೆ ಮತ್ತು ದೇಶಕ್ಕಾಗಿ ಹುತಾತ್ಮ ರಾಗಿದ್ದಾರೆ ಎಂದರೆ ಅದರ ಹಿಂದೆ ಪ್ರವಾದಿಗಳ ವಿಮೋಚನೆಯ ಹೋರಾಟದ ಪ್ರಭಾವ ಖಂಡಿತ ಇದೆ. ಮೌಲಾನಾ ಸೈಯದ್ ಮುಹಮ್ಮದ್ ಮಿಯಾ ದೇವ್‌ಬಂದಿ ಕೂಡಾ ಇವರಲ್ಲಿ  ಒಬ್ಬರು. ಅದೇವೇಳೆ, ಬ್ರಿಟಿಷರ ವಿರುದ್ಧ ಶಸ್ತ್ರಾಸ್ತ್ರ ಹೋರಾಟಕ್ಕಾಗಿ ಸುಭಾಸ್‌ಚಂದ್ರ ಬೋಸ್‌ಗಿಂತ ಮೊದಲೇ 1877ರಲ್ಲಿ  ಸಮರತ್ತುತ್ತರ್ಬಿಯಾ ಎಂಬ ಹೆಸರಲ್ಲಿ ಮೌಲಾನಾ ಮುಹಮ್ಮದುಲ್ ಹಸನ್‌ರ ನೇತೃತ್ವದಲ್ಲಿ ಸಂಘಟನೆ ಉದಯವಾಗಿತ್ತು.  ಸುಮಾರು 3 ದಶಕಗಳ ಕಾಲ ಬ್ರಿಟಿಷರ ವಿರುದ್ಧ ಈ ಸಂಘಟನೆ ಹೋರಾಡಿತ್ತು. ಬಳಿಕ 1909ರಲ್ಲಿ ಇದೇ ಸಂಘಟನೆಯು  ಜಮೀಯತುಲ್ ಅನ್ಸಾರ್ ಎಂಬ ಹೆಸರಲ್ಲಿ ಮರುರೂಪ ಪಡೆಯಿತು ಹಾಗೂ ಮೌಲಾನಾ ಉಬೈದುಲ್ಲಾ ಸಿಂಧಿ  ನಾಯಕತ್ವವನ್ನೂ ವಹಿಸಿಕೊಂಡರು. 1913ರಲ್ಲಿ ಬ್ರಿಟಿಷ್ ಸರಕಾರ ಈ ಜಮೀಯತುಲ್ ಅನ್ಸಾರ್ ಮೇಲೆ ನಿಷೇಧ ಹೇರಿತು.  ಆದರೆ,

ಈ ಮೌಲಾನಾ ಎದೆಗುಂದಲಿಲ್ಲ. ನಝರತುಲ್ ಮಆರಿಫ್ ಎಂಬ ಹೆಸರಲ್ಲಿ ಮರುಸಂಘಟಿತರಾದರು. ಅದೇವರ್ಷ  ಮೌಲಾನಾ ಮಹ್‌ಮೂದುಲ್ ಮದನಿ, ಮೌಲಾನಾ ಉಬೈದುಲ್ಲಾ ಸಿಂಧಿ ಮತ್ತು ಮೌಲಾನಾ ಅಬುಲ್ ಕಲಾಂ ಆಝಾದ್‌ರ  ನೇತೃತ್ವದಲ್ಲಿ ರೇಶ್ಮಿ ರುಮಾಲ್ ತಹ್‌ರೀಕ್ ಎಂಬ ಹೆಸರಲ್ಲಿ ಹೊಸ ಸ್ವಾತಂತ್ರ‍್ಯ ಚಳವಳಿ ಹುಟ್ಟಿಕೊಂಡಿತು. ತುರ್ಕಿ, ಜರ್ಮನಿ  ಮತ್ತು ಅಫಘಾನಿಸ್ತಾನದ ನೆರವಿನೊಂದಿಗೆ ಬ್ರಿಟಿಷರ ವಿರುದ್ಧ ಹೋರಾಡುವುದು ಈ ಚಳವಳಿಯ ಉದ್ದೇಶವಾಗಿತ್ತು. ಇದು  ಬ್ರಿಟಿಷರ ವಿರುದ್ಧ ಬರಹ ಚಳವಳಿಯಾಗಿತ್ತು. 1916ರಲ್ಲಿ ಮೌಲಾನಾ ಉಬೈದುಲ್ಲಾ ಸಿಂಧಿ ಅವರ ಬಂಧನದೊಂದಿಗೆ ಈ  ಚಳವಳಿಯ ಮೂಲವನ್ನು ಬ್ರಿಟಿಷರು ಪತ್ತೆ ಹಚ್ಚಿದರು ಮತ್ತು ದೇಶದಾದ್ಯಂತದ ಸುಮಾರು 220ಕ್ಕಿಂತಲೂ ಅಧಿಕ ಮೌಲಾನಾಗಳನ್ನು ಬಂಧಿಸಿದರು. ಬ್ರಿಟಿಷರು ಈ ಮೌಲಾನಾಗಳ ವಿರುದ್ಧ ಎಷ್ಟರ ವರೆಗೆ ಬೆನ್ನು ಬಿದ್ದಿದ್ದರೆಂದರೆ ಮಕ್ಕಾದಲ್ಲಿದ್ದ  ಮೌಲಾನಾ ವಹೀದ್ ಅಹ್ಮದ್ ಫೈಝಾಬಾದಿ, ಮೌಲಾನಾ ಮಹಮೂದ್ ಹಸನ್, ಮೌಲಾನಾ ಅಝೀಝï ಗುಲ್,  ಮೌಲಾನಾ ಹುಸೈನ್ ಅಹ್ಮದ್ ಮದನಿ ಮುಂತಾದವರನ್ನು ಮಕ್ಕಾದಲ್ಲಿ ಬಂಧಿಸಿದರು ಮತ್ತು ಮಾಲ್ಟಾದಲ್ಲಿ ವರ್ಷಗಳ ಕಾಲ  ಜೈಲಲ್ಲಿರಿಸಿದರು. ಇದರ ಬಳಿಕ 1919ರಲ್ಲಿ ಜಮೀಯತುಲ್ ಉಲಮಾಯೆ ಹಿಂದ್ ಸ್ಥಾಪನೆಯಾಯಿತಲ್ಲದೇ ಭಾರತೀಯ  ಸ್ವಾತಂತ್ರ‍್ಯ ಸಂಗ್ರಾಮದ ಅತಿದೊಡ್ಡ ಮುಸ್ಲಿಮ್ ಶಕ್ತಿಯಾಗಿ ಪರಿವರ್ತನೆಯಾಯಿತು. ಅಂದಹಾಗೆ,

ಮೌಲಾನಾಗಳೆಂದರೆ, ಧಾರ್ಮಿಕವಾಗಿ ಪಾಂಡಿತ್ಯವನ್ನು ಹೊಂದಿರುವವರು ಮತ್ತು ಮುಸ್ಲಿಮ್ ಸಮುದಾಯಕ್ಕೆ ಧಾರ್ಮಿಕ  ನೇತೃತ್ವವನ್ನು ನೀಡುವವರು. ಭಾರತೀಯ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಈ ಮೌಲಾನಾ ಗಳು ಕಾಣಿಸಿಕೊಂಡಷ್ಟು ಇನ್ನಾವ  ಧರ್ಮದ ಧರ್ಮಗುರುಗಳೂ ಕಾಣಿಸಿಕೊಂಡಿಲ್ಲ. ಆಗಿನ ಕಾಲದಲ್ಲಿ ಮುಸ್ಲಿಮ್ ಸಮುದಾಯದ ಸಂಖ್ಯೆ ಕಡಿಮೆಯಿತ್ತು. ಈ  ಕಡಿಮೆ ಸಂಖ್ಯೆಯ ಸಮುದಾಯದಿಂದ ಭಾರೀ ಪ್ರಮಾಣದಲ್ಲಿ ಮೌಲಾನಾಗಳು ಸ್ವಾತಂತ್ರ‍್ಯ ಚಳವಳಿಯಲ್ಲಿ ಭಾಗಿಯಾಗಲು  ಕಾರಣವೇನು? 

ಇವೆಲ್ಲದರ ಹಿಂದೆ ಮದ್ರಸ ಕಲಿಕೆಯ ಬಹಳ ದೊಡ್ಡ ಪಾತ್ರವಿದೆ. ಪ್ರವಾದಿಗಳು ಈ ಭೂಮಿಗೆ  ಆಗಮಿಸಿರುವುದೇ ಮನುಷ್ಯರನ್ನು ವಿಮೋಚನೆಗೊಳಿಸುವುದಕ್ಕೆ ಎಂದೇ ಹೇಳಲಾಗಿದೆ. ಪ್ರವಾದಿ ನೂಹ್ ರಿಂದ ಹಿಡಿದು  ಪ್ರವಾದಿ ಮುಹಮ್ಮದ್(ಸ)ರವರೆಗೆ ವಿಮೋಚನೆಯ ಸಾಲು ಸಾಲು ದೃಷ್ಟಾಂತಗಳೂ ಮದ್ರಸ ಪಠ್ಯಗಳಲ್ಲಿವೆ. ಈಜಿಪ್ಟ್  ದೊರೆ ಫರೋವನ ಆಡಳಿತದಲ್ಲಿ ತೀವ್ರ ದೌರ್ಜನ್ಯಕ್ಕೆ ಒಳಗಾಗಿದ್ದ ಇಸ್ರಾಈಲ್ ಎಂಬ ಸಮುದಾಯವನ್ನು ವಿಮೋಚಿಸಿ  ಪ್ರವಾದಿ ಮೂಸಾರು(ಅ) ಫೆಲೆಸ್ತೀನ್‌ಗೆ ಕರೆತಂದ ಘಟನಾವಳಿಯನ್ನು ಮದ್ರಸ ವಿದ್ಯಾರ್ಥಿಗಳು ಕಲಿಯಲೇಬೇಕಾಗುತ್ತದೆ.  ಇಸ್ರಾಈಲ್ ಸಮುದಾಯದಿಂದ ತನ್ನ ರಾಜಪ್ರಭುತ್ವಕ್ಕೆ ಕಂಟಕ ಇದೆ ಎಂದು ಭಯಪಟ್ಟಿದ್ದ ದೊರೆ ಫರೋವ ಆ  ಸಮುದಾಯದ ಗಂಡು ಮಕ್ಕಳನ್ನೆಲ್ಲ ವಧಿಸಲು ಆದೇಶಿಸಿದ್ದ. ಇದನ್ನು ವಿರೋಧಿಸಿದ ಪ್ರವಾದಿ ಮೂಸಾ(ಅ) ಇಸ್ರಾಈಲ್  ಸಮುದಾಯದ ವಿಮೋಚನೆಗೆ ನೇತೃತ್ವ ನೀಡಿದರು. ಇದರ ನಡುವೆ ದೇಶಭ್ರಷ್ಟ ಜೀವನ ನಡೆಸಿದರು. ಪ್ರವಾದಿ  ಮುಹಮ್ಮದ್(ಸ)ರಂತೂ ತನ್ನ ವಿಮೋಚನಾ ಹೋರಾಟದ ದಾರಿಯಲ್ಲಿ ತೀವ್ರ ವಿರೋಧವನ್ನು ಎದುರಿಸಿದರು. ಕೊನೆಗೆ  ಹುಟ್ಟೂರು ಮಕ್ಕಾ ತೊರೆದು ಮದೀನಾಕ್ಕೆ ವಲಸೆ ಹೋದರು. ಆದರೆ, ತನ್ನ ವಿಮೋಚನಾ ಹೋರಾಟದಿಂದ ಪ್ರವಾದಿ(ಸ)  ಹಿಂಜರಿಯಲಿಲ್ಲ. ಅವರು ಮರಳಿ ಮಕ್ಕಾಕ್ಕೆ ಬಂದರು ಮತ್ತು ಜನತಾ ವಿಮೋಚನೆಯಲ್ಲಿ ಭಾಗಿಯಾದರು. ಮದ್ರಸಾ  ವಿದ್ಯಾರ್ಥಿಗಲೆಲ್ಲ ಈ ಇತಿಹಾಸ ವನ್ನು ಕಲಿತೇ ಬೆಳೆಯುತ್ತಾರೆ. ಮನುಷ್ಯರನ್ನು ಗುಲಾಮರಂತೆ ಮತ್ತು ಇನ್ನೊಬ್ಬರ  ಅಡಿಯಾಳುಗಳಂತೆ ನಡೆಸಿಕೊಳ್ಳುವ ಯಾವುದೇ ವ್ಯವಸ್ಥೆಯನ್ನು ಒಪ್ಪಿಕೊಳ್ಳದಂತೆ ಹಾಗೂ ಅದರಿಂದ ಜನರನ್ನು ವಿಮೋಚನೆಗೊಳಿಸುವುದಕ್ಕೆ ಹೋರಾಡುವಂತೆ ಇಸ್ಲಾಮೀ ಇತಿಹಾಸ ಕರೆಕೊಡುತ್ತದೆ. ಭಾರತೀಯ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ  ಮುಸ್ಲಿಮರು ಮಹತ್ವಪೂರ್ಣ ಪಾತ್ರ ನಿಭಾಯಿಸಿರುವುದಕ್ಕೆ ಈ ಚರಿತ್ರೆಯೇ ಪ್ರೇರಣೆಯಾಗಿದೆ. ಈ ಕಾರಣದಿಂದಲೇ,  ಬ್ರಿಟಿಷರು ಈ ದೇಶವನ್ನು ವಿಭಜಿಸುವ ಸಂಚು ನಡೆಸಿರಬಹುದೇ ಎಂಬ ಅನುಮಾನವೂ ಇದೆ.

ಸ್ವಾತಂತ್ರ‍್ಯ ಚಳವಳಿಯಲ್ಲಿ ಮೌಲಾನಾಗಳೂ ಸೇರಿದಂತೆ ಭಾರೀ ಸಂಖ್ಯೆಯಲ್ಲಿ ಮುಸ್ಲಿಮರು ಭಾಗಿಯಾದುದರಿಂದ ಸಿಟ್ಟಾದ  ಬ್ರಿಟಿಷರು ಹಿಂದೂ-ಮುಸ್ಲಿಮರನ್ನು ವಿಭಜಿಸುವುದಕ್ಕೆ ಮುಂದಾಗಿರಲೂ ಬಹುದು. ಆ ಮೂಲಕ ಮುಸ್ಲಿಮರಲ್ಲಿ  ಅಭದ್ರತೆಯನ್ನು ಸಿಲುಕಿಸುವುದು ಮತ್ತು ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವುದೇ ಈ ದ್ವಿರಾಷ್ಟ್ರ  ಸಿದ್ಧಾಂತದ  ಉದ್ದೇಶವಾಗಿರಬಹುದು. ಹೀಗೆ ಸಂದೇಹ ಪಡುವುದಕ್ಕೆ ಇನ್ನೊಂದು ಕಾರಣವೇನೆಂದರೆ, ಈ ಮೌಲಾನಾಗಳು ಭಾರತೀಯ  ರಾಷ್ಟ್ರೀಯ ಕಾಂಗ್ರೆಸ್‌ನ ನೇತೃತ್ವದಲ್ಲಿ ನಡೆಯುತ್ತಿದ್ದ ಸ್ವಾತಂತ್ರ‍್ಯ ಚಳವಳಿಯನ್ನು ಪ್ರಬಲವಾಗಿ ಬೆಂಬಲಿಸುತ್ತಿದ್ದುದು. ಮಹಾತ್ಮಾ  ಗಾಂಧಿಗೆ ಬೆನ್ನೆಲುಬಾಗಿ ನಿಂತಿದ್ದುದು. ಅರಬಿ ಭಾಷೆಯ ಕುರ್‌ಆನನ್ನು ಉರ್ದು ಭಾಷೆಗೆ ಅನುವಾದಿಸಿ ಅದಕ್ಕೆ ವ್ಯಾಖ್ಯಾನ  ಬರೆಯುವಷ್ಟು ಅಮೋಘ ಪಾಂಡಿತ್ಯವನ್ನು ಹೊಂದಿದ್ದ ಮೌಲಾನಾ ಅಬುಲ್ ಕಲಾಂ ಆಝಾದ್‌ರೇ ಕಾಂಗ್ರೆಸ್‌ನ  ಮುಂಚೂಣಿ ನಾಯಕರೂ ಆಗಿದ್ದುರು. 

ಭಾರತೀಯ ಹಿಂದೂಗಳೊಂದಿಗೆ ಈ ಮೌಲಾನಾಗಳು ತೋರಿದ ಒಗ್ಗಟ್ಟು ಮತ್ತು ಸಾಮರಸ್ಯ ನೀತಿಯು ಸ್ವಾತಂತ್ರ‍್ಯ  ಚಳವಳಿಯ ಯಶಸ್ಸಿಗೆ ಮಹತ್ವಪೂರ್ಣ ಕೊಡುಗೆಯನ್ನೂ ನೀಡಿದೆ. ಒಂದುವೇಳೆ, ಬಹುದೇವಾರಾಧಕರಾದ ಹಿಂದೂಗಳನ್ನು  ಏಕದೇವಾರಾಧಕರಾದ ಮುಸ್ಲಿಮರು ಬೆಂಬಲಿಸುವುದಾಗಲಿ, ಅವರ ಜೊತೆ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಭಾಗವಹಿಸುವುದಾಗಲಿ  ಧರ್ಮವಿರೋಧಿ ಎಂಬ ಹೇಳಿಕೆಯನ್ನು ಓರ್ವ ಮೌಲಾನಾ ನೀಡಿರುತ್ತಿದ್ದರೆ ಬ್ರಿಟಿಷರು ಅದನ್ನು ಪಾರಿತೋಷಕಗಳೊಂದಿಗೆ  ಸ್ವಾಗತಿಸುತ್ತಿದ್ದರು. ಯಾಕೆಂದರೆ, ಭಾರತವನ್ನು ಇನ್ನೊಂದು ಶತಮಾನಗಳ ಕಾಲ ದರೋಡೆ ಮಾಡುವುದಕ್ಕೆ ಈ ವಿಭಜನವಾದಿ ಹೇಳಿಕೆಯು ನೀರು-ಗೊಬ್ಬರ ಒದಗಿಸುತ್ತಿತ್ತು. ಮಾತ್ರವಲ್ಲ, ಮೌಲಾನಗಳಿಂದ ಇಂಥದ್ದೊಂದು  ಫತ್ವ ಹೊರಡಿಸುವುದಕ್ಕೆ  ಬ್ರಿಟಿಷರು ಲಂಚದ ಆಮಿಷ ಒಡ್ಡಿರಲೂ ಬಹುದು. ಆದರೆ, ಮೌಲಾನಾ ನೇತೃತ್ವದಲ್ಲಿ ಒಗ್ಗಟ್ಟಾಗಿದ್ದ ಮತ್ತು ಬ್ರಿಟಿಷ್  ಭಾಷೆಯನ್ನೇ ತಿರಸ್ಕರಿಸುವಷ್ಟು ಪ್ರಬಲವಾಗಿದ್ದ ಮುಸ್ಲಿಮರನ್ನು ಓಲೈಸಲು ಬ್ರಿಟಿಷರಿಗೆ ಸಾಧ್ಯವಾಗಲಿಲ್ಲ. ಈ ಮುಖಭಂಗದ  ಸೇಡನ್ನು ತೀರಿಸುವುದಕ್ಕಾಗಿಯೇ ಅವರು ದ್ವಿರಾಷ್ಟ್ರ  ಸಿದ್ಧಾಂತವನ್ನು ಮುನ್ನೆಲೆಗೆ ತಂದಿರಬಹುದು ಮತ್ತು ಅವಕಾಶವಾದಿ  ಹಿಂದೂ-ಮುಸ್ಲಿಮ್ ನಾಯಕರ ಬಾಯಿಯಿಂದ ಅದನ್ನು ಹೇಳಿಸಿರಬಹುದು. ಇವು ಏನೇ ಇದ್ದರೂ,

77ನೇ ಸ್ವಾತಂತ್ರ‍್ಯೋತ್ಸವದ ಈ ಸಂದರ್ಭದಲ್ಲಿ ನಿಂತು ಅವಲೋಕಿಸುವಾಗ ಹಿಂದೂ ಮುಸ್ಲಿಮರನ್ನು ಒಡೆಯುವ ಬ್ರಿಟಿಷರ  ಸಂಚು ಒಂದು ಹಂತದವರೆಗೆ ಯಶಸ್ವಿಯಾಗಿದೆ ಎಂದೇ ಹೇಳಬಹುದು.

ವಯನಾಡ್ ಬಿಚ್ಚಿಟ್ಟ SKSSF, SSF, ಜಮಾಅತೆ ಇಸ್ಲಾಮೀ ಹಿಂದ್.. ನಡುವಿನ ವಿಚಾರಭೇದದ ಮಿತಿ




ಭೂಕುಸಿತಕ್ಕೆ ಒಳಗಾಗಿರುವ ವಯನಾಡ್‌ನಿಂದ ಬರುತ್ತಿರುವ ಸುದ್ದಿಗಳಲ್ಲಿ ಎರಡು ಬಗೆಯಿದೆ. ಒಂದು, ದುರಂತದ  ಕತೆಯಾದರೆ, ಇನ್ನೊಂದು ಚೇತೋಹಾರಿಯಾದ ಕತೆ. ಪ್ರಕೃತಿ ಮುಂದೆ ಮನುಷ್ಯ ಎಷ್ಟು ದುರ್ಬಲ ಮತ್ತು ಯಕ್‌ಶ್ಚಿತ್ ಜೀವಿ  ಎಂಬುದನ್ನು ದುರಂತ ಕತೆಗಳು ತಿಳಿಸಿದರೆ, ಚೇತೋಹಾರಿ ಕತೆಗಳು ಮನುಷ್ಯ ಎಷ್ಟು ಒಳ್ಳೆಯವ ಎಂಬುದನ್ನು ಹೇಳುತ್ತಿವೆ.

‘ದುರಂತದಲ್ಲಿ ಅನಾಥವಾಗಿರುವ ಶಿಶುಗಳಿದ್ದರೆ ತಾನು ಎದೆಹಾಲು ಉಣಿಸುವುದಾಗಿ’ ಅಲೀಬಾ ಎಂಬ ತಾಯಿ ಹೇಳುತ್ತಾರೆ.  ಸೋಶಿಯಲ್ ಮೀಡಿಯಾದ ಮೂಲಕ ವಯನಾಡಿಗೆ ಈ ಸುದ್ದಿ ತಲುಪುತ್ತದೆ. ಭಾವನಾ ಎಂಬ ತಾಯಿ ತನ್ನೆರಡು ಪುಟ್ಟ  ಮಕ್ಕಳನ್ನು ಎತ್ತಿಕೊಂಡು ವಯನಾಡಿಗೆ ಬರುತ್ತಾರೆ. ಭೂಕುಸಿತಕ್ಕೆ ಸಿಕ್ಕು ಅನಾಥವಾದ ಕಂದಮ್ಮಗಳಿದ್ದರೆ ಎದೆಹಾಲು  ಉಣಿಸುವುದು ಈ ತಾಯಿಯ ಉದ್ದೇಶ. ಎಲ್ಲವನ್ನೂ ಕಳಕೊಂಡು ಬರಿಗೈಯಲ್ಲಿರುವ ಸಂತ್ರಸ್ತರಿಗಾಗಿ ವ್ಯಾಪಾರಿಯೋರ್ವ  ತನ್ನ ಬಟ್ಟೆ ಅಂಗಡಿಯನ್ನೇ ಬಿಟ್ಟುಕೊಡುತ್ತಾರೆ. ಯಾವ ಡ್ರೆಸ್ಸು ಬೇಕೋ ಅವೆಲ್ಲವನ್ನೂ ಯಾವ ಮುಲಾಜೂ ಇಲ್ಲದೇ  ಕೊಂಡುಹೋಗಿ ಎಂದವರು ಹೇಳುತ್ತಾರೆ. ಇನ್ನೋರ್ವ ತಾಯಿ ವಯನಾಡ್‌ನಲ್ಲಿರುವ ತನ್ನ 40 ಸೆಂಟ್ಸ್ ಜಾಗವನ್ನೇ  ಸಂತ್ರಸ್ತರ ಮನೆ ನಿರ್ಮಾಣಕ್ಕಾಗಿ ಬಿಟ್ಟು ಕೊಡುತ್ತಾರೆ. ಇದರ ನಡುವೆ ಪ್ರತಿದಿನ ಉಚಿತವಾಗಿ ಊಟ ತಯಾರಿಸಿ ಕೊಡುವ  ಹೊಟೇಲಿಗರು, ಸಹೃದಯಿಗಳು ಧಾರಾಳ ಇದ್ದಾರೆ. ಮೃತಪಟ್ಟವರ ಪೋಸ್ಟ್ ಮಾರ್ಟಮ್‌ ಗಾಗಿ ದುರಂತ ಭೂಮಿ ಪಕ್ಕದ  ಮದ್ರಸವೊಂದು ತನ್ನ ಹಾಲನ್ನೇ ಬಿಟ್ಟುಕೊಟ್ಟಿದೆ. ಇದು ಒಂದು ಬಗೆಯದ್ದಾದರೆ, ಇನ್ನೊಂದು ರಕ್ಷಣೆ ಮತ್ತು ಪರಿಹಾರ  ಕಾರ್ಯ. ಇದಂತೂ ಅಭೂತಪೂರ್ವ ಸಂದೇಶವನ್ನು ಸಮಾಜಕ್ಕೆ ರವಾನಿಸುತ್ತಿದೆ.

ದುರಂತ ಭೂಮಿಯಲ್ಲಿ ಸುಮಾರು 500ರಷ್ಟು ಸೇನಾ ಯೋಧರು ಸೇವಾ ಕಾರ್ಯಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.  ಆದರೆ, ಇದರ ನಾಲ್ಕೈದು ಪಟ್ಟು ಹೆಚ್ಚು ಸ್ವಯಂ ಸೇವಕರೂ ಅಲ್ಲಿದ್ದಾರೆ. ಇದರಲ್ಲಿ ಕೇರಳ ಜಮಾಅತೆ ಇಸ್ಲಾಮೀ ಹಿಂದ್‌ನ  ಅಂಗಸಂಸ್ಥೆಯಾದ ಐಡಿಯಲ್ ರಿಲೀಫ್ ವಿಂಗ್‌ನ (IRW) ಸುಮಾರು 700ರಷ್ಟು ಕಾರ್ಯಕರ್ತರೂ ಸೇರಿದ್ದಾರೆ. ಕರ್ನಾಟಕ ಜಮಾಅತೆ ಇಸ್ಲಾಮೀ ಹಿಂದ್‌ನ ಅಂಗಸಂಸ್ಥೆಯಾಗಿರುವ ಹ್ಯೂಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ  (HRS) ಕಾರ್ಯಕರ್ತರೂ ಈ ದುರಂತ ಭೂಮಿಯಲ್ಲಿದ್ದಾರೆ. ಇವರಲ್ಲದೇ, SKSSFನ ಅಂಗಸಂಸ್ಥೆಯಾದ  ವಿಖಾಯ ಮತ್ತು  SSF ನ ಕಾರ್ಯಕರ್ತರೂ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. SDPI ಮತ್ತು WPIಗೆ ಸಂಬಂಧಿಸಿದ  ಸೇವಾ ತಂಡಗಳೂ ದುರಂತ ಭೂಮಿಯಲ್ಲಿ ಸಕ್ರಿಯವಾಗಿವೆ. ಇವುಗಳ ಹೊರತಾಗಿ ವಿವಿಧ ಸರಕಾರೇತರ ಸಂಸ್ಥೆಗಳ ಪ್ರತಿನಿಧಿಗಳೂ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ನಿಜವಾಗಿ,

ದುರಂತಗಳು ಒಂದುಕಡೆ ಸಾವು-ನೋವು, ಕಣ್ಣೀರು, ಭಯ, ಆತಂಕ, ಆಘಾತ, ಅನಿಶ್ಚಿತ ಬದುಕಿನ ಅಸಂಖ್ಯ ಕತೆಗಳನ್ನು  ಹೇಳುವಾಗ, ಇನ್ನೊಂದು ಕಡೆ ಮನುಷ್ಯತ್ವದ ಮತ್ತು ಅತಿ ಉನ್ನತ ಮಾನವ ಒಗ್ಗಟ್ಟಿನ ಕತೆಯನ್ನೂ ಹೇಳುತ್ತವೆ.  ವೈಚಾರಿಕವಾಗಿ SSF ಗೂ  SKSSF ಗೂ ನಡುವೆ ಭಿನ್ನಾಭಿಪ್ರಾಯಗಳಿವೆ. ಈ ಕಾರಣದಿಂದಲೇ ಇವೆರಡೂ ದುರಂತ  ಭೂಮಿಯಲ್ಲಿ ಬೇರೆಬೇರೆಯಾಗಿ ಗುರುತಿಸಿಕೊಂಡೇ ಸೇವಾನಿರತವಾಗಿವೆ. ಈ ಎರಡೂ ಸಂಘಟನೆಗಳಿಗೂ ಪ್ರತ್ಯಪ್ರತ್ಯೇಕ  ಅಧ್ಯಕ್ಷರಿದ್ದಾರೆ. ಪ್ರತ್ಯಪ್ರತ್ಯೇಕ ಮದರಸಗಳಿವೆ. ಹಾಗೆಯೇ ಈ ಎರಡೂ ಸಂಘಟನೆಗಳಿಗೂ ಜಮಾಅತೆ ಇಸ್ಲಾಮೀ  ಹಿಂದ್‌ಗೂ ವೈಚಾರಿಕವಾಗಿ ಭಿನ್ನಾಭಿಪ್ರಾಯಗಳಿವೆ. ಇವುಗಳ ಕಾರ್ಯ ಯೋಜನೆಗಳೂ ಭಿನ್ನವಾಗಿವೆ. ಚಟುವಟಿಕೆಗಳ  ಸ್ವರೂಪವೂ ಭಿನ್ನವಾಗಿವೆ.SKSSF ನ ಮುಖಂಡರಾದ ಸೈಯದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್  ಅವರು ಜಮಾಅತೆ ಇಸ್ಲಾಮೀ ಹಿಂದ್‌ನ ರಾಷ್ಟ್ರೀಯ ಅಧ್ಯಕ್ಷರಾದ ಸೈಯದ್ ಸಆದತುಲ್ಲಾ ಹುಸೈನಿಯವರನ್ನು ಅಧಿಕೃತವಾಗಿ  ಭೇಟಿಯಾದದ್ದೋ  ಜಮಾಅತ್‌ನ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದೋ  ನಡೆದಿಲ್ಲ. ಹಾಗೆಯೇ, ಸುಲ್ತಾನುಲ್ ಉಲಮಾ  ಎ.ಪಿ. ಅಬೂಬಕರ್ ಮುಸ್ಲಿಯಾರ್‌ರು ಸೈಯದ್ ಸಆದತುಲ್ಲಾ  ಹುಸೈನಿಯವರನ್ನು ಅಧಿಕೃತವಾಗಿ ಭೇಟಿಯಾದದ್ದೋ  ಕಚೇರಿಗೆ ಭೇಟಿ ನೀಡಿದ್ದೋ  ನಡೆದಿಲ್ಲ. ಹಾಗೆಯೇ ಇವುಗಳಿಗೆ ತದ್ವಿರುದ್ಧ ಬೆಳವಣಿಗೆಗಳೂ ನಡೆದಿಲ್ಲ. ಹಾಗಂತ,

ಇವರೆಲ್ಲರ ನಡುವೆ ಪರಸ್ಪರ ಶತ್ರುತ್ವ ಇದೆ ಎಂದು ಇದರ ಅರ್ಥವಲ್ಲ. ಇವರು ಪರಸ್ಪರ ಮಾತನಾಡಲಾರದಂಥ ಸ್ಥಿತಿಯಲ್ಲಿ  ಇದ್ದಾರೆ ಅಥವಾ ಹಾಗೆ ನಿರ್ಧರಿಸಿಕೊಂಡಿದ್ದಾರೆ ಎಂದೂ ಅಲ್ಲ. ವೈಚಾರಿಕ ಭಿನ್ನಾಭಿಪ್ರಾಯಗಳು ಒಂದು ಹಂತದ ವರೆಗೆ  ಈ ಎಲ್ಲ ನಾಯಕರ ನಡುವೆ ತೆಳುವಾದ ಗೆರೆಯೊಂದನ್ನು ಎಳೆದಿದೆ. ಅನಧಿಕೃತವಾಗಿ ಇವರು ಕುಶಲ  ವಿಚಾರಿಸಿಕೊಂಡಿರಬಹುದಾದರೂ ಬಯಸಿಯೋ ಬಯಸದೆಯೋ ಪುಟ್ಟದೊಂದು ಅಂತರ ಇಲ್ಲೆಲ್ಲೋ  ಇದೆ. ಹಾಗಂತ,  ಇವರು ಪರಸ್ಪರ ನಿಂದಿಸಿಕೊಂಡಿದ್ದೋ  ಅಪಹಾಸ್ಯ ಮಾಡಿದ್ದೋ  ನಡೆದೂ ಇಲ್ಲ. ಆದರೆ, ವಯನಾಡ್ ದುರಂತಭೂಮಿ ಈ  ವ್ಯತ್ಯಾಸಗಳ ಸ್ವರೂಪ ಎಷ್ಟು ತೆಳುವಾದುದು ಎಂಬುದನ್ನು ಬಿಚ್ಚಿಟ್ಟಿದೆ. ಅಲ್ಲಿ ಜಮಾಅತೆ ಇಸ್ಲಾಮೀ ಹಿಂದ್, SSF,  SKSSF ಕಾರ್ಯಕರ್ತರ ನಡುವೆ ಯಾವ ವ್ಯತ್ಯಾಸವೂ ಇಲ್ಲ. ಜೊತೆಯಾಗಿಯೇ ಉಣ್ಣುತ್ತಾರೆ, ಉಡುತ್ತಾರೆ. ಪರಸ್ಪರ  ಸಹಾಯ ಮಾಡುತ್ತಾರೆ. ಜೊತೆಯಾಗಿಯೇ ಪ್ರಾರ್ಥನೆ ಸಲ್ಲಿಸುತ್ತಾರೆ. ಪೀಡಿತರಿಗೆ ನೆರವಾಗುವುದಕ್ಕಾಗಿ ತಮ್ಮೆಲ್ಲವನ್ನೂ  ಧಾರೆಯೆರೆಯುತ್ತಾರೆ. ಅಂದಹಾಗೆ,

ದುರಂತ ಭೂಮಿಯಲ್ಲಿ ಪರಿಹಾರ ಕಾರ್ಯ ನಡೆಸುವುದು ಸುಲಭ ಅಲ್ಲ. ಭೂಮಿ ಸಿಡಿದು ಎಲ್ಲವನ್ನೂ ಕೊಚ್ಚಿಕೊಂಡು  ಹೋಗಿರುತ್ತದೆ. ಕಲ್ಲು, ಮುಳ್ಳು, ಮರ, ಬೇರುಗಳು, ಚೂಪಾದ ವಸ್ತುಗಳೆಲ್ಲವೂ ಕೆಸರು ಮಣ್ಣಿನಲ್ಲಿ ಹೂತುಹೋಗಿರುತ್ತದೆ.  ದುರಂತ ಭೂಮಿಯ ಪರಿಚಯವೇ ಇಲ್ಲದ ಹೊರ ನಾಡಿನ ಸೇವಾ ಕಾರ್ಯಕರ್ತರ ಪಾಲಿಗೆ ಇದು ಅತ್ಯಂತ ಸವಾಲಿನ  ಸಂದರ್ಭ. ಯಾವ ಸಂದರ್ಭದಲ್ಲೂ ಗಾಯಗೊಳ್ಳಬಹುದು. ಪುಟ್ಟ ಕಲ್ಲೆಂದು  ಅಂದುಕೊಂಡದ್ದು ಬಂಡೆಯಾಗಿರಬಹುದು,  ಎತ್ತಲು ಹೋದವರ ಮೇಲೆಯೇ ಅದು ಉರಳಿ ಬೀಳಬಹುದು. ಕೆಸರಿನಲ್ಲಿ ಕಾಲು ಹೂತುಹೋಗಬಹುದು. ಕಾಲಿಗೆ  ಚೂಪಾದ ವಸ್ತುಗಳು ಚುಚ್ಚಬಹುದು. ತಿನ್ನುವುದಕ್ಕೋ ಕುಡಿಯುವುದಕ್ಕೋ ಸೂಕ್ತ ಸೌಲಭ್ಯ ಇಲ್ಲದಿರಬಹುದು. ಅಲ್ಲದೇ,  ಇನ್ನೊಮ್ಮೆ ಭೂಕುಸಿತ ಆಗಬಹುದಾದ ಅಪಾಯವೂ ಇದ್ದಿರಬಹುದು. ಈ ಎಲ್ಲ ಸವಾಲುಗಳ ಮಧ್ಯೆಯೇ ಸೇವಾ  ಕಾರ್ಯದಲ್ಲಿ ನಿರತವಾಗುವುದೆಂದರೆ, ಅದಕ್ಕೆ ಅಪಾರ ಛಲ, ಧೈಯ, ದೇವನಿಷ್ಠೆ ಮತ್ತು ನಿಸ್ವಾರ್ಥತೆಯ ಅಗತ್ಯ ಇದೆ. ಇಂಥ  ಸಂದರ್ಭಗಳಲ್ಲಿ ಗಾಯಗೊಂಡ ಸೇವಾಕಾರ್ಯಕರ್ತರನ್ನು SSFನವರೋ SKSSFನವರೋ ಜಮಾಅತ್‌ನವರೋ  ಎಂದು ನೋಡದೇ ಅಥವಾ ಅಂಥದ್ದೊಂದು  ಆಲೋಚನೆಯನ್ನೇ ಮಾಡದೇ ಪರಸ್ಪರ ಸಹಾಯ ಮಾಡುತ್ತಾರೆ. ಇಂಥ  ನೆರವಿನ ಹಲವು ಚೇತೋಹಾರಿ ಸುದ್ದಿಗಳು ದುರಂತ ಭೂಮಿಯಿಂದ ವರದಿಯಾಗುತ್ತಲೂ ಇವೆ. ಒಂದುರೀತಿಯಲ್ಲಿ,

ವಯನಾಡ್ ದುರಂತಭೂಮಿ ಕೆಲವು ಸತ್ಯಗಳನ್ನು ನಾಗರಿಕ ಸಮಾಜಕ್ಕೆ ರವಾನಿಸಿದೆ. ಸಂಘಟನಾತ್ಮಕ ಭಿನ್ನಾಭಿಪ್ರಾಯಗಳು  ಎಷ್ಟು ತೆಳುವಾದುದು ಎಂಬುದನ್ನು ಇದು ಮುಸ್ಲಿಮ್ ಸಮುದಾಯಕ್ಕೆ ಸಾರಿ ಹೇಳಿದೆ. ಪರಸ್ಪರ ಬೈದಾಡಿಕೊಂಡೋ  ಅವಹೇಳಿಸಿಕೊಂಡೋ ಅಥವಾ ನಿಂದಿಸಿಕೊಂಡೋ  ಇರಬೇಕಾ ದಷ್ಟು ಸಮುದ್ರ ಭಾರವಾದ ಭಿನ್ನಾಭಿಪ್ರಾಯಗಳು  ಸಂಘಟನೆಗಳ ನಡುವೆ ಇಲ್ಲ ಎಂಬುದನ್ನು ಈ ಎಲ್ಲ ಬೆಳವಣಿಗೆಗಳು ಸೂಚಿಸುತ್ತಿವೆ. ಪರಸ್ಪರ ಮಾತನಾಡುವ, ಸಹಕರಿಸುವ,  ಜೊತೆಗೇ ಉಣ್ಣುವ, ಉಡುವ, ಪ್ರಾರ್ಥಿಸುವ ಮತ್ತು ಸುಖ-ದುಃಖಗಳಲ್ಲಿ ಭಾಗಿಯಾಗುವಷ್ಟು ನಿಕಟ ಸಂಬಂಧ  ಇಟ್ಟುಕೊಳ್ಳು ವುದಕ್ಕೆ ಸಂಘಟನಾತ್ಮಕ ಭಿನ್ನಾಭಿಪ್ರಾಯಗಳು ಅಡ್ಡಿಯಾಗಿಲ್ಲ. ಆದರೆ, ಅನೇಕ ಬಾರಿ ಕಾರ್ಯಕರ್ತರು  ಇಂಥವುಗಳನ್ನು ಮರೆತಂತೆ ವರ್ತಿಸುತ್ತಾರೆ. ದುರಂತ ಭೂಮಿಯ ದುರಂತಗಳು ಮನಸ್ಸಿನಿಂದ ಮಾಸಿ ಹೋದ ಬಳಿಕ  ಸಂಘಟನಾತ್ಮಕ ಭಿನ್ನಾಭಿಪ್ರಾಯವನ್ನು ಶತ್ರುತ್ವವಾಗಿ ಕಾಣುತ್ತಾರೆ. ನಿಂದನೆ, ಭರ್ತ್ಸನೆ, ಅವಹೇಳನ, ಪಂಥಾಹ್ವಾನಗಳೆಲ್ಲ  ಆರಂಭವಾಗುತ್ತದೆ. ಮತ್ತೊಂದು ದುರಂತದ ಮೂಲಕ ಪ್ರಕೃತಿ ಮತ್ತಮ್ಮೆ ಒಗ್ಗಟ್ಟಿನ ಪಾಠವನ್ನು ಹೇಳಿಕೊಡುವ ವರೆಗೆ ಇದು  ಮುಂದುವರಿಯುತ್ತದೆ. ಹಾಗಂತ,

ವೈಚಾರಿಕ ಭಿನ್ನಾಭಿಪ್ರಾಯಕ್ಕೆ ಮಾನವ ಉಗಮದಷ್ಟೇ ಪುರಾತನ ಇತಿಹಾಸವಿದೆ. ಒಂದೇ ಮನೆಯ 5 ಮಂದಿ ಐದು  ರೀತಿಯ ವಿಚಾರವನ್ನು ಪ್ರತಿನಿಧಿಸುವುದಿದೆ. ಇಲ್ಲಿನ ಹತ್ತು ಹಲವು ಸಂಘಟನೆಗಳ ಹುಟ್ಟಿಗೆ, ಪಕ್ಷಗಳ ಹುಟ್ಟಿಗೆ, ಅಸಂಖ್ಯ  ಎನ್‌ಜಿಓಗಳ ಹುಟ್ಟಿಗೆ ಈ ವಿಚಾರಭೇದವೇ ಮುಖ್ಯ ಕಾರಣ. ಆದ್ದರಿಂದ ಈ ವಿಚಾರಭೇದವನ್ನು ಅಳಿಸಲು ಸಾಧ್ಯವಿಲ್ಲ.  ಆದರೆ, ಈ ವಿಚಾರಭೇದವನ್ನು ಇಟ್ಟುಕೊಂಡೇ ಅತ್ಯುತ್ತಮ ಮನುಷ್ಯರಾಗಿ ಬಾಳುವುದಕ್ಕೆ ಸಾಧ್ಯವಿದೆ. ಎಷ್ಟರವರೆಗೆಂದರೆ,  ವಯನಾಡ್ ದುರಂತ ಭೂಮಿಯಲ್ಲಿ ಎಲ್ಲ ಸಂಘಟನೆಗಳ ಕಾರ್ಯಕರ್ತರು ತಂತಮ್ಮ ಟೀಶರ್ಟ್ ನ  ಹೊರತಾಗಿ ಬೇರೆ  ಬೇರೆಯೆಂದು ಗುರುತಿಸಲೂ ಸಾಧ್ಯವಾಗದಷ್ಟು ಹತ್ತಿರವಿರಲು ಸಾಧ್ಯವಾಗಿದೆಯೋ ಅಷ್ಟರವರೆಗೆ. ಇಂಥದ್ದೊಂದು  ಸಾಧ್ಯತೆಯನ್ನು ಪ್ರಾಯೋಗಿಕವಾಗಿ ತೆರೆದಿಟ್ಟ ಎಲ್ಲ ಸಂಘಟನೆಗಳ ಸಹೃದಯಿಗಳಿಗೆ ಅಭಿನಂದನೆಗಳು.