ಎರಡ್ಮೂರು ತಿಂಗಳ ಹಿಂದೆ ಭಾರೀ ವಿಜೃಂಭಣೆಯಿಂದ ಉದ್ಘಾಟನೆಗೊಂಡ ‘ವಕ್ಫ್’ ವಿಷಯ ನಿಧಾನಕ್ಕೆ ತನ್ನೆಲ್ಲಾ ಆಕರ್ಷಣೆಯನ್ನು ಕಳಕೊಂಡು ಮುಗಿದ ಅಧ್ಯಾಯವಾಗುವ ಹಂತಕ್ಕೆ ಬಂದು ನಿಂತಿದೆ.
ಅಸ್ತಿತ್ವದಲ್ಲಿರುವ ವಕ್ಫ್ ಕಾಯ್ದೆಗೆ ತಿದ್ದುಪಡಿ ಮಾಡುವುದಾಗಿ ಬ್ಯಾಂಡು-ಮದ್ದಳೆಯೊಂದಿಗೆ ಘೋಷಿಸಿದ ಕೇಂದ್ರ ಸರಕಾರ, ವಕ್ಫ್ ತಿದ್ದುಪಡಿ ಮಸೂದೆಯನ್ನು ಪಾರ್ಲಿಮೆಂಟ್‌ನಲ್ಲೂ ಮಂಡಿಸಿತು. ಆ ಕ್ಷಣದಿಂದ ಮಾಧ್ಯಮಗಳಲ್ಲಿ ಕಟ್ಟುಕತೆಗಳ ಕಂತೆ ಕಂತೆ ಸುಳ್ಳುಗಳು ಪ್ರಸಾರವಾಗತೊಡಗಿದುವು. ಸ್ವಾತಂತ್ರ‍್ಯ ಲಭಿಸಿ 75 ವರ್ಷಗಳ ವರೆಗೆ ವಿವಾದವೇ ಆಗದಿದ್ದ ಮತ್ತು ಹಿಂದೂಗಳ ಆಸ್ತಿಗಳಿಗೆ ಸಂಚಕಾರವೆಂದು ಗುರುತಿಸಿಕೊಳ್ಳದಿದ್ದ ವಕ್ಫ್ ಕಾಯ್ದೆಯು ದಿಢೀರ್ ಆಗಿ ಕೋರೆ ಹಲ್ಲುಗಳುಳ್ಳ, ಚೂಪು ಉಗುರುಗಳು ಮತ್ತು ರಾಕ್ಷಸ ಗುಣಗಳುಳ್ಳ ಹಿಂದೂ ವಿರೋಧಿ ಕಾಯ್ದೆಯಾಗಿ ಗುರುತಿಸಿಕೊಂಡಿತು. ಟಿವಿ ಚಾನೆಲ್‌ಗಳ ಆ್ಯಂಕರ್‌ಗಳು ಎಲ್ಲಿಯವರೆಗೆ ಭೀತಿಯನ್ನು ಹುಟ್ಟಿಸಿದರೆಂದರೆ, ‘ಓರ್ವ ಮುಸ್ಲಿಮ್ ವ್ಯಕ್ತಿ ಹಿಂದೂ ವ್ಯಕ್ತಿಯ ಮನೆಯ ಅಂಗಳದಲ್ಲಿ ನಿಂತು, ‘ಇದು ವಕ್ಫ್ ಭೂಮಿ’ ಎಂದು ಹೇಳಿದರೆ ಸಾಕು, ಅದು ವಕ್ಫ್ ಆಸ್ತಿಯಾಗಿ ಮಾರ್ಪಡುತ್ತದೆ..’ ಎಂದು ಹೇಳಿದರು. ಇದನ್ನೇ ರಾಜಕಾರಣಿಗಳೂ ಹೇಳತೊಡಗಿದರು. ವಕ್ಫ್ ಟ್ರಿಬ್ಯೂನಲ್ ಅನ್ನು ‘ಖಾಝಿ ನ್ಯಾಯಾಲಯದಂತೆ’ ಬಿಂಬಿಸಿದರು. ಮುಸ್ಲಿಮರಿಂದ ಮುಸ್ಲಿಮರಿಗೆ ಮತ್ತು ಮುಸ್ಲಿಮರಿಗೋಸ್ಕರ ಇರುವ ನ್ಯಾಯಾಲಯ ಎಂದು ವಕ್ಫ್ ಟ್ರಿಬ್ಯೂನಲ್ ಅನ್ನು ವ್ಯಾಖ್ಯಾನಿಸಿದರು. ಈ ದೇಶದಲ್ಲಿ ಅತೀ ಹೆಚ್ಚು ಭೂಮಿ ರೈಲ್ವೆ ಇಲಾಖೆಯಲ್ಲಿದ್ದರೆ ನಂತರದ ಸ್ಥಾನ ವಕ್ಫ್ ಇಲಾಖೆಯದ್ದು ಎಂದೂ ಪ್ರಚಾರ ಮಾಡಿದರು.
ವಕ್ಫ್ ತಿದ್ದುಪಡಿ ಮಸೂದೆಯನ್ನು ಪಾರ್ಲಿಮೆಂಟಲ್ಲಿ ಮಂಡಿಸುವ ಕೇಂದ್ರ ಸರಕಾರದ ಹಿಂದಿನ ಉದ್ದೇಶವೂ ಇಂಥ ಚರ್ಚೆಗಳನ್ನು ಹುಟ್ಟು ಹಾಕುವುದೇ ಇದ್ದಿರಬೇಕು. ಮುಸ್ಲಿಮರನ್ನು ಹಿಂದೂ ವಿರೋಧಿಗಳಂತೆ ಮತ್ತು ಈ ದೇಶದ ಯಾವ ಕಾನೂನೂ ಅನ್ವಯವಾಗದ ವಿಶೇಷ ದರ್ಜೆಯ ಸಮುದಾಯದಂತೆ ಬಿಂಬಿಸುವುದನ್ನು ಕೇಂದ್ರ ಬಯಸಿರಬೇಕು. ಮಸೂದೆಯನ್ನು ಪಾರ್ಲಿಮೆಂಟಲ್ಲಿ ಮಂಡಿಸುವ ಮೂಲಕ ಕೇಂದ್ರ ಸರಕಾರ ಈ ತಂತ್ರದಲ್ಲಿ ಯಶಸ್ಸನ್ನೂ ಪಡೆಯಿತು.
ಮುಸ್ಲಿಮ್ ಸಮುದಾಯದ ಪಾಲಿಗೆ ಇದು ದಿಢೀರ್ ಸವಾಲಾಗಿತ್ತು. ಮಾಧ್ಯಮಗಳು ಮತ್ತು ರಾಜಕಾರಣಿಗಳು ಹರಿಯಬಿಡುತ್ತಿರುವ ಮಾಹಿತಿಗಳು ಮತ್ತು ವ್ಯಾಖ್ಯಾನಗಳಿಗೆ ತರ್ಕಬದ್ಧ ಮತ್ತು ಆಧಾರರಹಿತ ಉತ್ತರ ನೀಡುವುದಕ್ಕೆ ಮಾಹಿತಿಗಳನ್ನು ಕಲೆ ಹಾಕಬೇಕಿತ್ತು. ಅಸ್ತಿತ್ವದಲ್ಲಿರುವ ವಕ್ಫ್ ಕಾಯ್ದೆಯಲ್ಲಿ ಏನೇನಿದೆ ಮತ್ತು ತಿದ್ದುಪಡಿ ಕಾಯ್ದೆಯಲ್ಲಿ ಏನೇನು ಇದೆ ಎಂಬುದನ್ನು ಅಧ್ಯಯನ ನಡೆಸಬೇಕಿತ್ತು. ಸೋಶಿಯಲ್ ಮೀಡಿಯಾವೂ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಭಾರೀ ಬಿರುಸಿನಿಂದ ಹಂಚಿಕೆಯಾಗುತ್ತಿರುವ ಸುದ್ದಿಗಳಲ್ಲಿ ಸತ್ಯವೆಷ್ಟು ಮತ್ತು ಸುಳ್ಳೆಷ್ಟು ಎಂಬುದನ್ನು ಜರಡಿ ಹಿಡಿದು ವಿಭಜಿಸಬೇಕಿತ್ತು. ಮುಸ್ಲಿಮ್ ಸಮುದಾಯದ ಮುಂದಿದ್ದ ಈ ಸವಾಲಿನ ಸಣ್ಣ ಅವಧಿಯನ್ನು ಮುಸ್ಲಿಮ್ ದ್ವೇಷಿಗಳು ಚೆನ್ನಾಗಿ ಬಳಸಿಕೊಂಡರು. ಇದೇವೇಳೆ,
ಕೇಂದ್ರ ಸರಕಾರ ವಕ್ಫ್ ತಿದ್ದುಪಡಿ ಮಸೂದೆಯ ಪರಿಶೀಲನೆಗಾಗಿ ಜಂಟಿ ಪಾರ್ಲಿಮೆಂಟರಿ ಸಮಿತಿ(ಜೆಪಿಸಿ)ಯನ್ನು ರಚಿಸಿತು. ನಿಜವಾಗಿ, ಕೇಂದ್ರ ಸರಕಾರಕ್ಕೆ ಈ ಜೆಪಿಸಿ ರಚನೆ ಇಷ್ಟವಿರಲಿಲ್ಲ. ತರಾತುರಿಯಿಂದ ಕಾಯ್ದೆಯನ್ನು ಅಂಗೀಕರಿಸಿ ಮುಸ್ಲಿಮ್ ಸಮುದಾಯವನ್ನು ಕೆರಳಿಸುವ ಉದ್ದೇಶ ಇತ್ತೋ ಏನೋ? ಆದರೆ ವಿರೋಧ ಪಕ್ಷಗಳ ಒತ್ತಡ ಮತ್ತು ಮೈತ್ರಿ ಪಕ್ಷಗಳ ಪರೋಕ್ಷ ಒತ್ತಡಗಳಿಗೆ ಮಣಿದು ಜೆಪಿಸಿಯನ್ನು ರಚಿಸಿತು. ಇದು ಅಸ್ತಿತ್ವದಲ್ಲಿರುವ ವಕ್ಫ್ ಕಾಯ್ದೆಯನ್ನು ಮತ್ತು ಮಾಧ್ಯಮಗಳು ಹಾಗೂ ರಾಜಕಾರಣಿಗಳು ಹರಡುತ್ತಿರುವ ಸುಳ್ಳುಗಳನ್ನು ಜನರ ಮುಂದಿಡುವುದಕ್ಕೆ ಮುಸ್ಲಿಮರಿಗೆ ಅವಕಾಶವನ್ನು ಒದಗಿಸಿತು. ಒಂದು ಕಡೆ,
ಜೆಪಿಸಿಯ ಸದಸ್ಯರು ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿರುವ ಲೋಪಗಳನ್ನು ಬಹಿರಂಗಕ್ಕೆ ತಂದರೆ ಇನ್ನೊಂದು ಕಡೆ ವಿವಿಧ ಮುಸ್ಲಿಮ್ ಸಂಘಟನೆಗಳು ವಕ್ಫ್ ನ ಹಿನ್ನೆಲೆ ಮತ್ತು ಅದರ ಮಹತ್ವವನ್ನು ಸಾರ್ವಜನಿಕವಾಗಿ ವಿವರಿಸತೊಡಗಿದರು. ಈ ದೇಶದ ಸಾವಿರಾರು ಮಂದಿ ಸೋಶಿಯಲ್ ಮೀಡಿಯಾದ ಮೂಲಕ ವಕ್ಫ್ ನ ಸುತ್ತ ಅಧ್ಯಯನ ಆಧಾರಿತ ಮಾಹಿತಿಗಳನ್ನು ಹಂಚಿಕೊಳ್ಳತೊಡಗಿದರು. ಹೀಗೆ ಸುಳ್ಳಿಗೆ ಸತ್ಯದ ಮೂಲಕ ಒಂದೊಂದೇ ಏಟುಗಳು ಬೀಳತೊಡಗಿದಂತೆಯೇ ಚರ್ಚೆಯನ್ನು ಹುಟ್ಟು ಹಾಕಿದವರೇ ಮುಕ್ತಾಯಕ್ಕೆ ಅವಸರಿಸತೊಡಗಿದರು. ನಿಜವಾಗಿ,
ವಕ್ಫ್ ಟ್ರಿಬ್ಯೂನಲ್ ಎಂಬುದು ಕುಟುಂಬ ನ್ಯಾಯಾಲಯದಂತೆ ಶೀಘ್ರ ನ್ಯಾಯ ವಿತರಣೆಗಾಗಿ ಮಾಡಿಕೊಂಡ ವ್ಯವಸ್ಥೆಯೇ ಹೊರತು ಅವೇನೂ ಮುಸ್ಲಿಮರ ನ್ಯಾಯಾಲಯವಲ್ಲ. ಈ ಟ್ರಿಬ್ಯೂನಲ್‌ಗೆ ನ್ಯಾಯಾಧೀಶರನ್ನು ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರೇ ನೇಮಿಸುತ್ತಾರೆ. ಬೆಂಗಳೂರಿನಲ್ಲಿರುವ ವಕ್ಫ್ ಟ್ರಿಬ್ಯೂನಲ್‌ನ ನ್ಯಾಯಾಧೀಶರಾಗಿ ಸುಧಾ ಸೀತಾರಾಂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ವಕ್ಫ್ ಟ್ರಿಬ್ಯೂನಲ್‌ನ ಗುಲ್ಬರ್ಗಾ ಪೀಠದ ನ್ಯಾಯಾಧೀಶರಾಗಿ ಶ್ರೀನಿವಾಸನ್ ಹೊಣೆಗಾರಿಕೆ ನಿರ್ವಹಿಸುತ್ತಿದ್ದಾರೆ. ಕಠಿಯಾಣಿಯವರು ಬೆಂಗಳೂರು ಪೀಠದ ನ್ಯಾಯಾಧೀಶರಾಗಿದ್ದಾರೆ. ಗುರುರಾಜ್ ಅವರು ಮೈಸೂರು ಟ್ರಿಬ್ಯೂನಲ್ ಪೀಠದ ನ್ಯಾಯಾಧೀಶರಾಗಿದ್ದಾರೆ. ಇವರೆಲ್ಲ ಆಯಾ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದಹಾಗೆ,
ಈ ದೇಶದಲ್ಲಿ ಎಲ್ಲೆಲ್ಲ ವಕ್ಫ್ ಭೂಮಿ ಇದೆ ಎಂಬುದನ್ನು ತೀರ್ಮಾನಿಸಿದ್ದು ಮುಸ್ಲಿಮರಲ್ಲ ಅಥವಾ ಯಾವುದೇ ಸಚಿವರೋ ಶಾಸಕರೋ ಅಲ್ಲ. ಕಂದಾಯ ಇಲಾಖೆಯ ಅಧಿಕಾರಿಗಳು ಸರ್ವೇ ಮಾಡಿ ಸರಕಾರಿ ಗಜೆಟೆಡ್ ನೋಟಿಫಿಕೇಶನ್ ಬಂದ ಬಳಿಕ ಅದು ದಾಖಲೀಕರಣಗೊಂಡು ಆಗಿರುವ ಬೆಳವಣಿಗೆ ಇದು. ಈ ಇಡೀ ಪ್ರಕ್ರಿಯೆಯಲ್ಲಿ ಮುಸ್ಲಿಮರ ಪಾತ್ರ ಶೂನ್ಯಾತಿಶೂನ್ಯ. ಹೀಗೆ ಸರಕಾರವೇ ಜಾರಿ ಮಾಡಿದ ಗಜೆಟೆಡ್ ನೋಟಿಫಿಕೇಶನ್‌ನ ಆಧಾರದಲ್ಲಿ ಕಂದಾಯ ಇಲಾಖೆ ನೋಟೀಸು ಜಾರಿ ಮಾಡುತ್ತದೆಯೇ ಹೊರತು ಯಾವುದೇ ಸಚಿವರು ಅಥವಾ ಶಾಸಕರಿಗೆ ಹಾಗೆ ಮಾಡುವುದಕ್ಕೆ ಅವಕಾಶವೂ ಇಲ್ಲ. ಯಾವ ಭೂಮಿಯನ್ನು ಕಂದಾಯ ಇಲಾಖೆ ವಕ್ಫ್ ಎಂದು ನೋಟೀಸು ಮಾಡಿದೆಯೋ ಅದನ್ನು ರಕ್ಷಿಸುವ ಜವಾಬ್ದಾರಿ ಮಾತ್ರ ವಕ್ಫ್ ಇಲಾಖೆಯದ್ದು. ಅದರಾಚೆಗೆ ಅದಕ್ಕೆ ಸ್ವಯಂ ನೋಟೀಸು ಕಳುಹಿಸುವ ಅಥವಾ ಆಸ್ತಿ ಕಬಳಿಸುವ ಯಾವ ಅಧಿಕಾರವೂ ಇಲ್ಲ. ನಮ್ಮದೇ ರಾಜ್ಯದಲ್ಲಿ ಸರಕಾರಿ ಗಜೆಟೆಡ್ ನೋಟಿಫಿಕೇಶನ್‌ನ ಪ್ರಕಾರ ಒಂದು ಲಕ್ಷದ 80 ಸಾವಿರ ಎಕ್ರೆ ವಕ್ಫ್ ಆಸ್ತಿಯಿದೆ. ಆದರೆ, ಈಗ ವಕ್ಫ್ ಬೋರ್ಡಿನ ಅಧೀನದಲ್ಲಿರುವುದು ಕೇವಲ 20 ಸಾವಿರದ 400 ಎಕ್ರೆ ಆಸ್ತಿ ಮಾತ್ರ. ಉಳಿದ ಅಷ್ಟೂ ಆಸ್ತಿಗಳು ಇನಾಮ್ ಅಬಾಲಿಷನ್ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಸರಕಾರಿ ಒತ್ತುವರಿ ಮತ್ತು ಖಾಸಗಿ ವ್ಯಕ್ತಿಗಳ ಒತ್ತುವರಿಯಿಂದಾಗಿ ಕಣ್ಮರೆಯಾಗಿದೆ. ಹಾಗಂತ,
ವಕ್ಫ್ ಇಲಾಖೆಯು ಸರಕಾರಿ ಒತ್ತುವರಿಯ ಭೂಮಿಯನ್ನಾಗಲಿ, ಭೂಸುಧಾರಣೆಯಿಂದಾಗಿ ಕಳಕೊಂಡ ಭೂಮಿಯನ್ನಾಗಲಿ ಅಥವಾ ಇನಾಮ್ ಅಬಾಲಿಷನ್ ಕಾಯ್ದೆಯಿಂದ ಕಳಕೊಂಡ ಭೂಮಿಯನ್ನಾಗಲಿ ಈವರೆಗೂ ಕೇಳಿಲ್ಲ. ಅದು ಈಗ ನೋಟೀಸು ಕಳುಹಿಸಿರುವುದು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ಮಾತ್ರ. ಅದರಲ್ಲೂ ಹೀಗೆ ಕಂದಾಯ ಇಲಾಖೆ ನೋಟೀಸು ಕಳುಹಿಸುವ ಮೊದಲು ವಕ್ಫ್ ಅದಲಾತ್ ಅನ್ನು ನಡೆಸಲಾಗುತ್ತದೆ. ಈ ಅದಾಲತ್‌ನಲ್ಲಿ ರಾಜ್ಯದ ಅಲ್ಪಸಂಖ್ಯಾತ ಸಚಿವರು ಮಾತ್ರ ಇರುವುದಲ್ಲ. ಉಪ ಜಿಲ್ಲಾಧಿಕಾರಿ, ಕಂದಾಯ ಅಧಿಕಾರಿಗಳು, ಆಯಾ ಜಿಲ್ಲೆಯ ಎಲ್ಲ ಶಾಸಕರೂ ಇರುತ್ತಾರೆ. ಅವರೆಲ್ಲರ ಸಮ್ಮುಖದಲ್ಲಿ ಅದಾಲತ್ ನಡೆಸಿದ ಬಳಿಕ ವಕ್ಫ್ ಭೂಮಿಯನ್ನು ಒತ್ತುವರಿ ಮಾಡಿಕೊಂಡವರಿಗೆ ನೋಟೀಸು ಕಳುಹಿಸಲಾಗುತ್ತದೆ. ಇದರಲ್ಲೂ ಮುಸ್ಲಿಮರ ಪಾತ್ರ ಶೂನ್ಯ ಅನ್ನುವಷ್ಟು ಕಡಿಮೆ. ಬಸವರಾಜ್ ಬೊಮ್ಮಾಯಿ ಸರಕಾರದ ಅವಧಿಯಲ್ಲಿ ನಡೆಸಲಾದ ವಕ್ಫ್ ಅದಾಲತ್‌ನ ನೇತೃತ್ವವನ್ನು ಸಚಿವೆ ಶಶಿಕಲಾ ಜೊಲ್ಲೆ ನಿರ್ವಹಿಸಿದ್ದರು. ವಕ್ಫ್ ಆಸ್ತಿಯನ್ನು ಒತ್ತುವರಿ ಮಾಡಿಕೊಂಡವರಿಗೆ 2 ಸಾವಿರಕ್ಕಿಂತಲೂ ಅಧಿಕ ನೋಟೀಸುಗಳನ್ನು ಆ ಸಮಯದಲ್ಲಿ ಕಳುಹಿಸಲಾಗಿತ್ತು. ಹಾಗಂತ, ಈ ನೋಟೀಸೇ ಅಂತಿಮವಲ್ಲ. ವಕ್ಫ್ ಟ್ರಿಬ್ಯೂನಲ್‌ನಲ್ಲಿ ತೀರ್ಪು ತಮ್ಮ ಪರ ಬರದೇ ಇದ್ದರೆ ಅದನ್ನು ಪ್ರಶ್ನಿಸಿ ಹೈಕೋರ್ಟು ಮತ್ತು ಸುಪ್ರೀಮ್ ಕೋರ್ಟಿಗೆ ಹೋಗುವ ಎಲ್ಲ ಅವಕಾಶಗಳೂ ಕಕ್ಷಿದಾರರಿಗೆ ಮುಕ್ತವಾಗಿರುತ್ತದೆ. ಒಂದುರೀತಿಯಲ್ಲಿ,
ಜನಸಾಮಾನ್ಯರ ಪಾಲಿಗೆ ಅಪರಿಚಿತವಾಗಿದ್ದ ವಕ್ಫ್ ವಿಷಯವನ್ನು ಪರಿಚಿತಗೊಳಿಸುವುದಕ್ಕೆ ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಮಸೂದೆ ದೊಡ್ಡದೊಂದು ಕೊಡುಗೆಯನ್ನು ನೀಡಿದೆ. ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸಬೇಕೆಂದು ತಂತ್ರ ಹೆಣೆದವರು ನಿಧಾನಕ್ಕೆ ಸ್ವಯಂ ಕಟಕಟೆಯಲ್ಲಿ ನಿಲ್ಲ ತೊಡಗಿದ್ದಾರೆ.