ನಿಜವಾಗಿ,
ಇದು ವೀಡಿಯೋ ಮಾಡಿ ಹಂಚಿಕೊಳ್ಳುವಷ್ಟು ಅಪರೂಪದಲ್ಲಿ ಅಪರೂಪದ ಘಟನೆ ಏನಲ್ಲ. ಸೋಶಿಯಲ್ ಮೀಡಿಯಾಕ್ಕಿಂತ ಮೊದಲಿನ ಕಾಲದಲ್ಲೂ ಇಂಥ ಘಟನೆಗಳು ನಡೆಯುತ್ತಿದ್ದುವು. ಸೋಶಿಯಲ್ ಮೀಡಿಯಾದ ಈ ಕಾಲದಲ್ಲೂ ಇಂಥವು ನಡೆಯುತ್ತಲೇ ಇವೆ. ಆದರೆ, ಇವತ್ತೇಕೆ ಇಂಥ ವೀಡಿಯೋಗಳು ಬಿಸಿ ಬಿಸಿ ದೋಸೆಯಂತೆ ಹಂಚಿಕೆಯಾಗುತ್ತಿವೆ ಎಂದರೆ, ಅದಕ್ಕೆ ನಾವು ನೆಟ್ಟು ಬೆಳೆಸುತ್ತಿರುವ ದ್ವೇಷವೆಂಬ ಸಸಿಯೇ ಕಾರಣ.
ಈ ಹಿಂದೆ ಸೋಶಿಯಲ್ ಮೀಡಿಯಾ ಇರಲಿಲ್ಲ. ಆ ಕಾರಣದಿಂದಲೋ ಏನೋ ದ್ವೇಷ ಪ್ರಚಾರಕ್ಕೆ ಅವಕಾಶವೂ ಸೀಮಿತವಾಗಿತ್ತು. ಜನರು ಪರಸ್ಪರ ಧರ್ಮ ನೋಡದೇ ಮರುಗುತ್ತಾ, ಸಹಕರಿಸುತ್ತಾ ತಮ್ಮ ಪಾಡಿಗೇ ಬದುಕುತ್ತಿದ್ದರು. ಆದರೆ, ಯಾವಾಗ ಸೋಶಿಯಲ್ ಮೀಡಿಯಾದ ಆಗಮನವಾಯಿತೋ ದ್ವೇಷ ಪ್ರಚಾರದ ಭರಾಟೆಯೂ ಹೆಚ್ಚಾಯಿತು. ಹಿಂದೂ ಮತ್ತು ಮುಸ್ಲಿಮರನ್ನು ಎರಡು ಧ್ರುವಗಳಂತೆ ವ್ಯಾಖ್ಯಾನಿಸುವ ಕೈ ಮತ್ತು ಬಾಯಿಗಳು ದೇಶದೆಲ್ಲೆಡೆ ತುಂಬಿಕೊಳ್ಳತೊಡಗಿದವು. ದಿನನಿತ್ಯ ಪತ್ರಿಕೆ, ಟಿ.ವಿ. ಚಾನೆಲ್ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಈ ದ್ವೇಷದ್ದೇ ಪ್ರಾಬಲ್ಯ. ‘ಮುಸ್ಲಿಮನಿಂದ ಹಿಂದೂ ಯುವಕನಿಗೆ ಚೂರಿ’, ‘ಮುಸ್ಲಿಮ್ ಯುವಕನನ್ನು ಥಳಿಸಿ ಹತ್ಯೆ ಮಾಡಿದ ಹಿಂದೂ’, ‘ಅಕ್ರಮ ಗೋಸಾಗಾಟ: ಇಬ್ಬರು ಮುಸ್ಲಿಮರ ಬಂಧನ’, ‘ಮುಸ್ಲಿಮ್ ಯುವಕನೊಂದಿಗೆ ಹಿಂದೂ ಯುವತಿ ಪರಾರಿ’, ‘ಹಿಂದೂ ಯುವಕನೊಂದಿಗೆ ಮುಸ್ಲಿಮ್ ಯುವತಿ ಮದುವೆ’, ‘ಮತಾಂತರ’, ‘ಕಾಫಿರ್’, ‘ಜಿಹಾದ್’, ‘ಮಂದಿರ ಒಡೆದು ಮಸೀದಿ ನಿರ್ಮಾಣ’, ‘ಇಷ್ಟನೇ ಇಸವಿಗೆ ಮುಸ್ಲಿಮರು ಬಹುಸಂಖ್ಯಾತ ರಾಗುವರು’, ‘ಹಿಂದೂಗಳ ಭೂಮಿ ಕಬಳಿಸುತ್ತಿರುವ ಮುಸ್ಲಿಮರು’, ‘ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ’, ‘ಹಿಂದೂ ಧರ್ಮ ಅಪಾಯದಲ್ಲಿದೆ’, ‘ಹಿಂದೂ-ಮುಸ್ಲಿಮರು ಜೊತೆಯಾಗಿ ಬದುಕಲು ಸಾಧ್ಯವಿಲ್ಲ...’ ಹೀಗೆ ಭಯಪಡಿಸುವ, ಹಿಂದೂ-ಮುಸ್ಲಿಮರನ್ನು ವಿಭಜಿಸುವ ಮತ್ತು ಅಪರಾಧಕ್ಕಿಂತ ಅಪರಾಧಿಗಳ ಧರ್ಮವನ್ನೇ ಎತ್ತಿ ಹೇಳುವ ರೀತಿಯ ಸುದ್ದಿ ನಿರೂಪಣೆ ಮತ್ತು ಶೀರ್ಷಿಕೆಗಳು ನಿಧಾನಕ್ಕೆ ಜನರ ಮನಸ್ಸನ್ನು ಕಲಕತೊಡಗಿದುವು. ಒಂದುಕಡೆ ಪತ್ರಿಕೆಗಳು ಇಂಥ ಸುದ್ದಿಗಳ ಬೆನ್ನು ಬೀಳುತ್ತಿದ್ದರೆ ಇನ್ನೊಂದು ಕಡೆ ರಾಜಕಾರಣಿಗಳು ಇದಕ್ಕಿಂತಲೂ ಪ್ರಚೋದನಕಾರಿಯಾಗಿ ಮಾತಾಡತೊಡಗಿದರು. ಈ ಎಲ್ಲವೂ ಸೇರಿಕೊಂಡು ಒಂದು ಬಗೆಯ ಅನುಮಾನ ಮತ್ತು ಭಯದ ವಾತಾವರಣವನ್ನು ನಿರ್ಮಿಸತೊಡಗಿದುವು. ಹಾಗಂತ,
ಪಕ್ಕದ ಫ್ಲಾಟಿನಲ್ಲಿರುವ ಹಿಂದೂವಿನ ಬಗ್ಗೆ ಮುಸ್ಲಿಮನು ಯಾವುದೇ ತಕರಾರು ವ್ಯಕ್ತಪಡಿಸುವುದಿಲ್ಲ. ಹಾಗೆಯೇ ಮುಸ್ಲಿಮನ ಬಗ್ಗೆ ಹಿಂದೂವಿಗೂ ಯಾವುದೇ ದೂರುಗಳಿರುವುದಿಲ್ಲ. ಇದು ನಗರಕ್ಕೆ ಸಂಬಂಧಿಸಿ ಮಾತ್ರ ಅಲ್ಲ, ಹಳ್ಳಿ, ಗ್ರಾಮೀಣ ಪ್ರದೇ ಶಗಳ ಪರಿಸ್ಥಿತಿಯೂ ಹೀಗಿಯೇ. ಅಕ್ಕಪಕ್ಕದಲ್ಲಿ ಮನೆ ಮಾಡಿಕೊಂಡು ಬದುಕುತ್ತಿರುವ ಹಿಂದೂವಿಗಾಗಲಿ ಮುಸ್ಲಿಮರಿಗಾಗಲಿ ಪರಸ್ಪರ ದೂರುಗಳಿಲ್ಲ. ಹಾಗಿದ್ದರೆ ಹಿಂದೂಗಳಿಗೆ ಅಪಾಯಕಾರಿಯಾದ ಮುಸ್ಲಿಮ್ ಮತ್ತು ಮುಸ್ಲಿಮರಿಗೆ ಅಪಾಯಕಾರಿಯಾದ ಹಿಂದೂ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರೆ ಎಲ್ಲರೂ ತಮಗೆ ಗೊತ್ತಿಲ್ಲದ ಇನ್ನೊಂದು ಊರಿನತ್ತ ಬೆಟ್ಟು ಮಾಡುತ್ತಾರೆ. ತನ್ನ ಪಕ್ಕದ ಮುಸ್ಲಿಮ್ ಒಳ್ಳೆಯವ, ಆದರೆ, ಆ ಬಿಹಾರದ ಮುಸ್ಲಿಮ್ ಇದ್ದಾರಲ್ಲ, ಅವರು ಕೆಟ್ಟವರು ಎಂಬ ಸಮರ್ಥನೆ ಸಿಗುವುದಿದೆ. ಅಂದಹಾಗೆ,
ಆ ಬಿಹಾರದ ಮುಸ್ಲಿಮನನ್ನು ಈ ವ್ಯಕ್ತಿ ನೋಡಿರುವುದಿಲ್ಲ, ಮಾತಾಡಿಸಿರುವುದಿಲ್ಲ. ಮತ್ತೆ ಹೇಗೆ ಬಿಹಾರ ಮುಸ್ಲಿಮರು ಕೆಟ್ಟವರಾಗಿದ್ದಾರೆ ಅಂದರೆ, ಅದಕ್ಕೆ ಈ ಮಾಧ್ಯಮಗಳು ಮತ್ತು ಭಾಷಣಗಾರರೇ ಕಾರಣ. ಎಲ್ಲೋ ಏನೋ ಘಟನೆ ನಡೆದಿದೆ ಎಂಬ ಆಧಾರದಲ್ಲಿ ಇಡೀ ಮುಸ್ಲಿಮ್ ಸಮುದಾಯವನ್ನೇ ಕಟಕಟೆಯಲ್ಲಿ ನಿಲ್ಲಿಸುವ ರೀತಿಯ ಸುದ್ದಿ ಭಯೋತ್ಪಾದನೆಯನ್ನು ಇವರೆಲ್ಲ ಹರಡುತ್ತಿದ್ದಾರೆ. ನಿಜವಾಗಿ,
ಹಿಂದೂಗಳಾಗಲಿ ಮುಸ್ಲಿಮರಾಗಲಿ ಈ ಮಣ್ಣಿನಲ್ಲೇ ಬೆಳೆದವರು. ಹಿಂದೂ ಮುಸ್ಲಿಮರ ಸಾಮರಸ್ಯದ ಬದುಕಿಗೆ ಇಲ್ಲಿ ಸಾವಿರ ವರ್ಷಗಳಿಗಿಂತಲೂ ಅಧಿಕ ಇತಿಹಾಸವಿದೆ. ಹಿಂದೂವಿಗೆ ಮುಸ್ಲಿಮ್ ನೆರವಾಗುವುದು ಮತ್ತು ಮುಸ್ಲಿಮರಿಗೆ ಹಿಂದೂ ನೆರವಾಗುವುದೆಲ್ಲ ಸುದ್ದಿ ಮಾಡಿ ದಣಿಯುವಷ್ಟು ಈ ದೇಶದಲ್ಲಿ ಪ್ರತಿದಿನ ನಡೆಯುತ್ತಿದೆ. ಬಹುತೇಕ ಇಂಥ ಘಟನೆಗಳನ್ನು ಜನರು ವೀಡಿಯೋ ಮಾಡುವುದಿಲ್ಲ. ಸಹಜವೆಂಬಂತೆ ಇವೆಲ್ಲ ಬದುಕಿನ ಭಾಗವಾಗಿ ನಡೆದುಕೊಂಡು ಹೋಗುತ್ತಿದೆ. ಮಾತ್ರವಲ್ಲ, ಮಾಧ್ಯಮಗಳಿಗೂ ಇಂಥವುಗಳಲ್ಲಿ ಆಸಕ್ತಿ ಕಡಿಮೆ. ದ್ವೇಷ ಬಿತ್ತುವ ರಾಜಕಾರಣಿಗಳಂತೂ ಇಂಥ ಘಟನೆಗಳನ್ನೇ ದ್ವೇಷಿಸುವ ಸಾಧ್ಯತೆ ಇದೆ. ಆದರೆ, ನಕಾರಾತ್ಮಕ ಸುದ್ದಿಗಳು ಹೀಗಲ್ಲ. ಅವುಗಳಿಗೆ ಬಹುಬೇಗ ಪ್ರಚಾರ ಸಿಗುತ್ತವೆ. ಇವತ್ತಿನ ದಿನಗಳಲ್ಲಿ ಇಂಥ ಸುದ್ದಿಗಳಿಗೆ ಬಹುದೊಡ್ಡ ಮಾರುಕಟ್ಟೆಯಿದೆ. ಆ ಕಾರಣದಿಂದಲೇ,
ಈಶ್ವರಮಂಗಲದಲ್ಲಿ ನಡೆದಂಥ ಘಟನೆಗಳು ಹೆಚ್ಚೆಚ್ಚು ಚರ್ಚೆಯಾಗಬೇಕು ಮತ್ತು ಪ್ರತಿ ಘಟನೆಯೂ ಚಿತ್ರೀಕರಣಗೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗಬೇಕು ಅನ್ನುವುದು. ನಕಾರಾತ್ಮಕ ಸುದ್ದಿಗಳನ್ನು ತೆರೆಮರೆಗೆ ಸರಿಸಬೇಕಾದರೆ ಅಥವಾ ಅವುಗಳ ಪ್ರಭಾವವನ್ನು ಕಡಿಮೆಗೊಳಿಸ ಬೇಕಾದರೆ ಸಕಾರಾತ್ಮಕ ಸುದ್ದಿಗಳು ಮುನ್ನೆಲೆಗೆ ಬರಬೇಕಾಗುತ್ತದೆ. ಜನರು ಸಿದ್ಧಾಂತದ ಮಾತುಗಳಿಗಿಂತ ಪ್ರಾಯೋಗಿಕ ಘಟನೆಗಳಿಗೆ ಬೇಗ ಆಕರ್ಷಿತರಾಗುತ್ತಾರೆ. ರಘುರಾಮ್ ಭಟ್‌ರನ್ನು ಮುಸ್ಲಿಮ್ ಯುವಕ ಮಸೀದಿ ವರಾಂಡದಲ್ಲಿ ಕೂರಿಸಿ ಉಪಚರಿಸಿದ ವೀಡಿಯೋ ಚಿತ್ರೀಕರಣಗೊಳ್ಳದೇ ಇರುತ್ತಿದ್ದರೆ ಅದು ಪ್ರಭಾವ ಶಾಲಿ ಸುದ್ದಿ ಆಗುವ ಸಾಧ್ಯತೆ ಕಡಿಮೆ ಇತ್ತು. ಸುದ್ದಿಯೇ ಆಗದೇ ತೆರೆಮರೆಗೆ ಸರಿಯುವ ಸಾಧ್ಯತೆಯೂ ಇತ್ತು. ಆದರೆ ಯಾವಾಗ ಆ ಇಡೀ ಘಟನೆ ಕ್ಯಾಮರಾದಲ್ಲಿ ಸೆರೆಯಾಯಿತೋ ಜನಸಾಮಾನ್ಯರು ಅದರಲ್ಲಿ ತಮ್ಮನ್ನು ಕಂಡರು. ಮುಸ್ಲಿಮರನ್ನು ದ್ವೇಷಿಸುತ್ತಿದ್ದ ವ್ಯಕ್ತಿಗಳೇ ಈ ದೃಶ್ಯವನ್ನು ಮೆಚ್ಚಿಕೊಂಡರು. ನೆರವಾದ ಆ ಮುಸ್ಲಿಮ್ ಯುವಕನಿಗೆ ಧನ್ಯವಾದ ಸಲ್ಲಿಸಿದರು. ಮಾತ್ರವಲ್ಲ, ಅಪಪ್ರಚಾರ ಮತ್ತು ದ್ವೇಷ ಪ್ರಚಾರದ ಸುದ್ದಿ ಮತ್ತು ಭಾಷಣವನ್ನು ವಾಟ್ಸಾಪ್ ಗ್ರೂಪ್‌ಗಳಲ್ಲಿ ಯಾರಾದರೂ ಹಂಚಿಕೊಂಡಾಗ ಅದಕ್ಕೆ ಪ್ರತಿಕ್ರಿಯೆಯಾಗಿ ಈ ವೀಡಿಯೋವನ್ನು ಹಂಚಿಕೊಳ್ಳುವುದೂ ನಡೆಯಿತು.
ಸದ್ಯದ ಅಗತ್ಯ ಏನೆಂದರೆ, ಸಾಧ್ಯವಾದಷ್ಟೂ ಸಕಾರಾತ್ಮಕ ಸುದ್ದಿ ಮತ್ತು ವೀಡಿಯೋಗಳನ್ನು ಹಂಚಿಕೊಳ್ಳುವುದು. ಆ ಮೂಲಕ ನಕಾರಾತ್ಮಕ ಸುದ್ದಿಗಳ ಪ್ರಭಾವವನ್ನು ತಗ್ಗಿಸುವುದು. ಸಾಮಾನ್ಯ ಜನರು ಎಂದೂ ಪ್ರತೀಕಾರ ಭಾವದಿಂದ ಬದುಕುವುದಿಲ್ಲ. ಅವರೊಳಗೆ ಅಂಥ ಭಾವವನ್ನು ಪದೇ ಪದೇ ತುಂಬಿಸಲಾಗುತ್ತದೆ. ಒಂದುವೇಳೆ, ಅವರಿಗೆ ಸಕಾರಾತ್ಮಕ ಸುದ್ದಿಗಳು ಮತ್ತು ವೀಡಿಯೋಗಳು ಲಭಿಸಿದರೆ ಅವರು ದ್ವೇಷ ಸಾಧಕರ ಟೂಲ್ ಆಗುವುದಕ್ಕೆ ಸಾಧ್ಯವೂ ಇಲ್ಲ. ಈ ಹಿನ್ನೆಲೆಯಲ್ಲಿ ಈಶ್ವರ ಮಂಗಲದ ಅರ್ಚಕರ ವೀಡಿಯೋ ಮುಖ್ಯವಾಗುತ್ತದೆ. ಅದನ್ನು ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡವರನ್ನು ಶ್ಲಾಘಿಸಬೇಕಾಗುತ್ತದೆ. ನಕಾರಾತ್ಮಕ ಸುದ್ದಿಗಳೇ ತುಂಬಿ ಹೋಗಿರುವ ಮಾರುಕಟ್ಟೆಗೆ ಇಂಥ ಸಕಾರಾತ್ಮಕ ಸುದ್ದಿಗಳು ಲಗ್ಗೆ ಇಡುತ್ತಾ ಹೋದರೆ ನಿಧಾನಕ್ಕೆ ಇವುಗಳೇ ಈ ಮಾರುಕಟ್ಟೆಯನ್ನು ಆಳಬಹುದು ಮತ್ತು ಆಳಬೇಕು.
ಅರ್ಚಕ ರಘುರಾಮ್ ಭಟ್‌ರನ್ನು ಮಸೀದಿ ವರಾಂಡಕ್ಕೆ ಕೊಂಡೊಯ್ದು ಉಪಚರಿಸಿದ ಆ ಒಳ್ಳೆಯ ಮನಸ್ಸುಗಳಿಗೆ ಧ ನ್ಯವಾದ.