‘ಆಲ್ಟರ್‌ನೇಟಿವ್ ಪಾಲಿಟಿಕ್ಸ್’ ಎಂಬ ಹೆಸರಲ್ಲಿ ಅಧಿಕಾರಕ್ಕೆ ಬಂದ ಕೇಜ್ರಿವಾಲ್‌ರ ಆಪ್ ಪಕ್ಷಕ್ಕೆ ದೆಹಲಿ ಚುನಾವಣೆಯಲ್ಲಿ ಸೋಲಾಗಲು ಕಾರಣವೇನು ಎಂಬ ಬಗ್ಗೆ ಟಿ.ವಿ. ಚಾನೆಲ್‌ಗಳು, ಪತ್ರಿಕೆಗಳು ಮತ್ತು ಸೋಶಿಯಲ್ ಮೀಡಿಯಾಗಳು ಚರ್ಚಿಸಿ ಚರ್ಚಿಸಿ ಸುಸ್ತಾಗಿವೆ. ಕೇಜ್ರಿವಾಲ್ ಮಾಡಿರುವ ತಪ್ಪುಗಳು, ದುರಹಂಕಾರ ಎನ್ನಬಹುದಾದ ನಿಲುವುಗಳು, ಮತಗಳ ಮೇಲೆ ಕಣ್ಣಿಟ್ಟು ತೆಗೆದುಕೊಂಡು ಅನ್ಯಾಯದ ನಿರ್ಧಾರಗಳು ಮತ್ತು ಭ್ರಷ್ಟಾಚಾರಗಳು ಇತ್ಯಾದಿ ಸಾಲುಸಾಲು ಕಾರಣಗಳು ಒಂದೊಂದಾಗಿ ಉಲ್ಲೇಖಕ್ಕೆ ಒಳಗಾಗುತ್ತಿವೆ. ಅಲ್ಲದೇ, ಇವಿಎಂ ಮೇಲೆ ಆರೋಪ ಹೊರಿಸದೆಯೇ ಕೇಜ್ರಿವಾಲ್ ಕೂಡಾ ತನ್ನ ಸೋಲನ್ನು ಒಪ್ಪಿಕೊಂಡಿದ್ದಾರೆ. ಈ ಮೂಲಕ ಇವಿಎಂ ಹೊರತಾದ ಕಾರಣಗಳನ್ನೇ ದೆಹಲಿ ಫಲಿತಾಂಶಕ್ಕೆ ಸಂಬಂಧಿಸಿ ಚರ್ಚಿಸಬೇಕಾಗಿದೆ ಎಂಬ ಪರೋಕ್ಷ ಸೂಚನೆಯನ್ನೂ ಅವರು ನೀಡಿದ್ದಾರೆ.
ಬಹುಶಃ, ಕೇಜ್ರಿವಾಲ್ ಸೋಲನ್ನು ಎರಡು ಮಗ್ಗುಲುಗಳಲ್ಲಿ ಚರ್ಚಿಸಬಹುದಾಗಿದೆ.
1. ಅದರ ಹುಟ್ಟು ಯಾಕಾಯಿತೋ ಅಧಿಕಾರ ಸಿಕ್ಕ ಬಳಿಕ ಅದು ತನ್ನ ಹುಟ್ಟನ್ನೇ ಮರೆಯಿತು. 10 ವರ್ಷಗಳ ಹಿಂದೆ ದೆಹಲಿ ಗದ್ದುಗೆಗೇರುವುದಕ್ಕೆ ಅವರಿಗೆ ಊರುಗೋಲು ಆದದ್ದು ಭ್ರಷ್ಟಾಚಾರ. ಅಣ್ಣಾ ಹಜಾರೆಯನ್ನು ಬಳಸಿಕೊಂಡು ಮನ್‌ಮೋಹನ್ ಸಿಂಗ್ ಸರಕಾರದ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಹೋರಾಟ ಸಂಘಟಿಸಿದ್ದ ಕೇಜ್ರಿವಾಲ್, ಆ ಬಳಿಕ ದೆಹಲಿಯ ಕಾಂಗ್ರೆಸ್ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ರಂಗಕ್ಕಿಳಿದರು. ಶೀಲಾರನ್ನು ಮಹಾನ್ ಭ್ರಷ್ಟಾಚಾರಿ ಎಂದರು. 2013ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಶೀಲಾ ದೀಕ್ಷಿತ್ ವಿರುದ್ಧ ಸ್ಪರ್ಧಿಸಿ 25 ಸಾವಿರ ಮತಗಳ ಅಂತರದಿAದ ಜಯಗಳಿಸಿದರು. ಆ ಬಳಿಕ ಭ್ರಷ್ಟಾಚಾರದ ಆರೋಪಗಳು ಒಂದೊAದಾಗಿ ಬಿದ್ದು ಹೋದುವು. 2ಜಿ ಹಗರಣವನ್ನು ಮತ್ತು ಲೋಕಪಾಲ ಜಾರಿಯನ್ನು ಮುಂದಿಟ್ಟುಕೊಂಡು ಇಂಡಿಯಾ ಎಗೈನ್‌ಸ್ಟ್ ಕರಪ್ಶನ್ ಎಂಬ ಧ್ಯೇಯವಾಕ್ಯದಡಿ ಹೋರಾಟ ಸಂಘಟಿಸಿದ್ದ ಕೇಜ್ರಿವಾಲ್ ತಂಡ ಆ ಬಳಿಕ ಅವೆರಡನ್ನೂ ಬಹುತೇಕ ಮರೆತೇ ಬಿಟ್ಟವು. 2ಜಿ ಹಗರಣವೇ ಅಲ್ಲ ಅನ್ನುವುದ ನ್ನು ವರ್ಷಗಳ ಬಳಿಕ ನ್ಯಾಯಾಲಯವೇ ಸಾರಿತು. ಶೀಲಾ ದೀಕ್ಷಿತ್‌ರ ಭ್ರಷ್ಟಾಚಾರ ಏನು ಅನ್ನುವುದನ್ನು ಪತ್ತೆ ಹಚ್ಚಲು ಈವರೆಗೂ ಕೇಜ್ರಿವಾಲ್‌ಗೆ ಸಾಧ್ಯವಾಗಲಿಲ್ಲ. ಲೋಕಪಾಲ್‌ನ ಸ್ಥಿತಿ ಈಗ ಏನಾಗಿದೆ ಅನ್ನುವುದೇ ತಿಳಿದಿಲ್ಲ. ಇದೇವೇಳೆ, ಸ್ವತಃ ಕೇಜ್ರಿವಾಲ್ ಅವರೇ ಭ್ರಷ್ಟಾಚಾರದ ಆರೋಪಕ್ಕೆ ಸಿಲುಕಿದರು. ಜೈಲಿಗೂ ಹೋದರು.
ವಿಶೇಷ ಏನೆಂದರೆ, 2013ರಲ್ಲಿ ಶೀಲಾ ದೀಕ್ಷಿತ್‌ರ ವಿರುದ್ಧ ಭ್ರಷ್ಟಾಚಾರದ ಸುಳ್ಳು ಆರೋಪವನ್ನು ಹೊರಿಸಿ ಗೆದ್ದಿದ್ದ ಕೇಜ್ರಿವಾಲ್‌ರ ಸೋಲಿಗೆ ಅದೇ ಶೀಲಾ ದೀಕ್ಷಿತ್‌ರ ಮಗನೇ ಕಾರಣವಾದದ್ದು. ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೇಜ್ರಿವಾಲ್ ಅವರು 4089 ಮತಗಳ ಅಂತರದಿAದ ಸೋತಿದ್ದಾರೆ. ಇದೇ ಕ್ಷೇತ್ರದಲ್ಲೇ ಕೇಜ್ರಿವಾಲ್ ಅವರು 2013ರಲ್ಲಿ ಶೀಲಾ ದೀಕ್ಷಿತ್‌ರನ್ನು ಸೋಲಿಸಿದ್ದರು. ಈ ಬಾರಿ ಶೀಲಾ ದೀಕ್ಷಿತ್‌ರ ಮಗ ಸಂದೀಪ್ ಸಿಂಗ್ ಅವರು ಕಾಂಗ್ರೆಸ್‌ನಿAದ ಸ್ಪ ರ್ಧಿಸಿ 4566 ಮತಗಳನ್ನು ಪಡೆದು ಮೂರನೇ ಸ್ಥಾನಿಯಾದರು. ಒಂದುವೇಳೆ, ಕಾಂಗ್ರೆಸ್ ಮತ್ತು ಆಪ್ ಮೈತ್ರಿ ಮಾಡಿಕೊಂಡು ಸಂದೀಪ್ ದೀಕ್ಷಿತ್ ಇಲ್ಲಿ ಸ್ಪರ್ಧಿಸದೇ ಇರುತ್ತಿದ್ದರೆ, ಅವರಿಗೆ ಬಿದ್ದಿರುವ 4566 ಮತಗಳು ಕೇಜ್ರಿವಾಲ್‌ಗೆ ಬಿದ್ದು ಅವರು ಗೆಲ್ಲುವ ಸಾಧ್ಯತೆ ಇತ್ತು ಎಂಬ ವಿಶ್ಲೇಷಣೆ ನಡೆಯುತ್ತಿದೆ. ಅಂತೂ 2013ರಲ್ಲಿ ಭ್ರಷ್ಟಾಚಾರದ ಸುಳ್ಳು ಆರೋಪ ಹೊರಿಸಿ ಶೀಲಾ ದೀಕ್ಷಿತ್‌ರನ್ನು ಸೋಲಿಸಿದ್ದ ಕೇಜ್ರಿವಾಲ್‌ರನ್ನು 12 ವರ್ಷಗಳ ಬಳಿಕ ಅದೇ ಶೀಲಾ ದೀಕ್ಷಿತ್‌ರ ಮಗ ಸೋಲಿಸಿದ್ದು ವಿಶೇಷ ಅನ್ನಬೇಕು.
ಅಂದಹಾಗೆ, ಅಧಿಕಾರದಲ್ಲಿರುವಾಗ ಕೇಜ್ರಿವಾಲ್ ಅತ್ಯಂತ ದುರಹಂಕಾರದಿಂದ ಮತ್ತು ಕೋಮುಪಕ್ಷಪಾತದಿಂದ ವರ್ತಿಸಿದರು ಅನ್ನುವುದಕ್ಕೆ ಹಲವು ಉದಾಹರಣೆಗಳಿವೆ. ಸಿಎಎ-ಎನ್‌ಆರ್‌ಸಿ ಹೋರಾಟದ ಸಂದರ್ಭದಲ್ಲಿ ಅವರ ಮಾತು-ಕೃತಿಗಳು ಯಾವ ಕಾರಣಕ್ಕೂ ‘ಆಲ್ಟರ್‌ನೇಟಿವ್ ಪಾಲಿಟಿಕ್ಸ್’ನ ರೂಪದಲ್ಲಿರಲಿಲ್ಲ. ದೆಹಲಿ ಪೊಲೀಸ್ ಇಲಾಖೆ ತನ್ನ ಕೈಯಲ್ಲಿರುತ್ತಿದ್ದರೆ ಒಂದೇ ತಾಸಿನೊಳಗೆ ಶಾಹೀನ್‌ಬಾಗ್ ಪ್ರತಿಭಟನಾಕಾರರನ್ನು ತೆರವು ಮಾಡಿಸುತ್ತಿದ್ದೆ ಎಂದು ಇಂಡಿಯಾ ಟುಡೆ ಚಾನೆಲ್ ಜೊತೆಗಿನ ಸಂವಾದದಲ್ಲಿ ಹೇಳಿದ್ದರು. ಈಗ ಕೇಜ್ರಿವಾಲ್‌ರ ವಿರುದ್ಧ ಯಾರು ಗೆದ್ದಿದ್ದಾರೋ ಅದೇ ಪರ್ವೇಶ್ ವರ್ಮಾ ಅವರು 2020ರಲ್ಲಿ ದೆಹಲಿಯಲ್ಲಿ ಮುಸ್ಲಿಮ್ ದ್ವೇಷ ಭಾಷಣ ಮತ್ತು ಘೋಷಣೆಗಳನ್ನು ಕೂಗುತ್ತಾ ರ‍್ಯಾಲಿ ನಡೆಸಿದ್ದರು. ಅವರ ನೇತೃತ್ವದಲ್ಲಿದ್ದ ದುಷ್ಕರ್ಮಿಗಳ ಗುಂಪು ಮುಸ್ಲಿಮರ ಮೇಲೆ ದಬ್ಬಾಳಿಕೆ, ದೌರ್ಜನ್ಯ, ಹಿಂಸೆಯನ್ನು ಎಸಗಿತ್ತು. ಆದರೆ ಆ ಇಡೀ ಸನ್ನಿವೇಶವನ್ನು ಕೈಕಟ್ಟಿ ನೋಡಿದ್ದ ಕೇಜ್ರಿವಾಲ್, ತನಗೂ ತನ್ನದೇ ಜನತೆ ಅನುಭವಿಸುತ್ತಿರುವ ಸಂಕಷ್ಟಕ್ಕೂ ಸಂಬAಧವೇ ಇಲ್ಲ ಎಂಬAತೆ ನಡೆದುಕೊಂಡಿದ್ದರು. ಆ ನೋವನ್ನು ಈ ಬಾರಿ ಮುಸ್ಲಿಮರು ಮತದಾನದಲ್ಲಿ ವ್ಯಕ್ತ ಪಡಿಸಿದ್ದಾರೆ. 25%ಕ್ಕಿಂತ ಹೆಚ್ಚು ಮುಸ್ಲಿಮ್ ಮತದಾರರಿರುವ ಕ್ಷೇತ್ರಗಳಲ್ಲಿ ಆಪ್ ಕಳೆದಬಾರಿ 61%ಕ್ಕಿಂತ ಹೆಚ್ಚು ಮತಗಳನ್ನು ಪಡೆದಿದ್ದರೆ ಈ ಬಾರಿ ಅದು 50%ಕ್ಕೆ ಕುಸಿದಿದೆ. ಅಂದರೆ 11% ಮತಗಳಿಕೆ ಇಲ್ಲಿ ಕಡಿಮೆಯಾಗಿದೆ. ಹಾಗೆಯೇ, ಮುಸ್ಲಿಮ್ ಮತದಾರರ ಪ್ರಮಾಣ 10ರಿಂದ 25% ಇರುವ ಕ್ಷೇತ್ರಗಳಲ್ಲೂ ಆಪ್ ಈ ಬಾರಿ 7%ಕ್ಕಿಂತಲೂ ಹೆಚ್ಚು ಕಡಿಮೆ ಮತಗಳನ್ನು ಪಡೆದಿದೆ. ಅಲ್ಲದೇ, ದೆಹಲಿಯಲ್ಲಿ ಬಡ ಮುಸ್ಲಿಮರ ಮನೆಗಳನ್ನು ಮತ್ತು ಮಸೀದಿಗಳನ್ನು ಅಕ್ರಮದ ಹೆಸರಲ್ಲಿ ದೆಹಲಿಯ ಬಿಜೆಪಿ ಆಡಳಿತದ ನಗರ ಪಾಲಿಕೆಯು ಬುಲ್ಡೋಜರ್ ಮೂಲಕ ನೆಲಸಮ ಮಾಡುತ್ತಿದ್ದಾಗ ಸುಮ್ಮನಿದ್ದ ಮುಖ್ಯಮಂತ್ರಿ ಅತಿಶಿ ಅವರು ದೇವಸ್ಥಾನದ ಮುಂದೆ ನಿಂತು ಬುಲ್ಡೋಜರ್ ಮಾಡದಂತೆ ಅಬ್ಬರಿಸಿದ್ದೂ ನಡೆದಿತ್ತು. ಜೊತೆಗೇ ದೆಹಲಿ ಸರಕಾರದ ಎಲ್ಲ ಕಚೇರಿಗಳಲ್ಲಿ ಸರಕಾರದ್ದೇ ಖರ್ಚಲ್ಲಿ ಲಕ್ಷ್ಮೀ ಪೂಜೆಯನ್ನೂ ಮಾಡಲಾಗಿತ್ತು. ನೋಟಿನಲ್ಲಿ ಲಕ್ಷ್ಮಿಯ ಚಿತ್ರ ಛಾಪಿಸಬೇಕೆಂದು ಇದೇ ಕೇಜ್ರಿವಾಲ್ ಒಂದು ಸಂದರ್ಭದಲ್ಲಿ ಆಗ್ರಹಿಸಿದ್ದರು. ಒಂದುಕಡೆ, ಮುಸ್ಲಿಮರ ವಿರುದ್ಧ ಬಿಜೆಪಿ ಬಹಿರಂಗ ಸಮರ ಸಾರಿ ಇನ್ನಿಲ್ಲದಂತೆ ತೊಂದರೆ ಕೊಡುತ್ತಿರುವುದನ್ನು ಮೌನವಾಗಿ ನೋಡುತ್ತಾ ಮತ್ತು ಇನ್ನೊಂದು ಕಡೆ ಬಿಜೆಪಿಯ ಮತದಾರರನ್ನು ಸೆಳೆಯುವುದಕ್ಕಾಗಿ ಬಿಜೆಪಿಯಂತೆಯೇ ನಡಕೊಳ್ಳುತ್ತಾ ಆಪ್ ತನ್ನ ಮೂಲವನ್ನೇ ಮರೆತು ನಡಕೊಂಡಿತ್ತು.
ನಿಜವಾಗಿ, ಹರ್ಯಾಣದಲ್ಲಿ ಗೆಲ್ಲಲೇಬೇಕಿದ್ದ ಕಾಂಗ್ರೆಸನ್ನು ಸೋಲಿಸಿದ್ದು ಇದೇ ಕೇಜ್ರಿವಾಲ್ ಪಕ್ಷ. ಹರ್ಯಾಣದಲ್ಲಿ ಯಾವುದೇ ನಿರೀಕ್ಷೆ ಇಲ್ಲದಿದ್ದರೂ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳದೇ ಒಂಟಿಯಾಗಿ ಎಲ್ಲ 90 ಸ್ಥಾನಗಳಿಗೂ ಆಪ್ ಸ್ಪ ರ್ಧಿಸಿತು. ಈ ಮೂಲಕ ಕಾಂಗ್ರೆಸ್ ಸುಮಾರು 17 ಕ್ಷೇತ್ರಗಳಲ್ಲಿ ಸೋಲಲು ನೇರ ಕಾರಣವಾಯಿತು. ಒಂದುವೇಳೆ, ಈ 17 ಸ್ಥಾನಗಳ ಪೈಕಿ 15 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತಿದ್ದರೂ ಹರ್ಯಾಣ ಕಾಂಗ್ರೆಸ್ ಪಾಲಾಗುತ್ತಿತ್ತು. ಇದಕ್ಕೆ ದೆಹಲಿಯಲ್ಲಿ ಕಾಂಗ್ರೆಸ್ ಪ್ರತೀಕಾರವನ್ನು ತೀರಿಸಿಕೊಂಡಿತು. ದೆಹಲಿಯ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸ್ಪರ್ಧಿಸಿತು. ಕನಿಷ್ಠ 12 ಕ್ಷೇತ್ರಗಳಲ್ಲಿ ಆಪ್ ಅಭ್ಯರ್ಥಿಗಳ ಸೋಲಿಗೆ ನೇರ ಕಾರಣವಾಯಿತು. ಹಾಗೆಯೇ, ರಾಹುಲ್ ಗಾಂಧಿ ಸಹಿತ ಪ್ರಮುಖ ನಾಯಕರೇ ದೆಹಲಿಯಲ್ಲಿ ಆಪ್ ವಿರುದ್ಧ ಚುನಾವಣಾ ಭಾಷಣ ಮಾಡಿದರು. ಈ ಭಾಷಣಗಳ ಕಾರಣದಿಂದಲೂ ಆಪ್‌ಗೆ ಬೀಳಬೇಕಿದ್ದ ಸಾವಿರಾರು ಮತಗಳು ಇತರ ಪಕ್ಷಗಳ ಪಾಲಾದುವು. ಒಂದುವೇಳೆ, ದೆಹಲಿಯಲ್ಲಿ ಈ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿರುತ್ತಿದ್ದರೆ ಫಲಿತಾಂಶ ಈ ರೀತಿ ಇರುತ್ತಿರಲಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ನಿಜವಾಗಿ, ದೆಹಲಿಯಲ್ಲಿ ಕೇಜ್ರಿವಾಲ್ ಯಾವೆಲ್ಲ ಉಚಿತಗಳನ್ನು ಈಗಾಗಲೇ ಜಾರಿ ಮಾಡಿದ್ದರೋ ಅವೆಲ್ಲವನ್ನೂ ಹಾಗೆಯೇ ಮುಂದುವರಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಮಾತ್ರವಲ್ಲ, ಕೇಜ್ರಿವಾಲ್ ಕೊಡುವ 200 ಯೂನಿಟ್ ಉಚಿತ ವಿದ್ಯುತ್ ಬದಲಾಗಿ 300 ಯುನಿಟ್ ನೀಡುವುದಾಗಿಯೂ ಬಿಜೆಪಿ ಭರವಸೆಯನ್ನು ನೀಡಿತ್ತು. ಹೀಗಿರುವಾಗ ದೆಹಲಿ ಜನರ ಪಾಲಿಗೆ ಕೇಜ್ರಿವಾಲ್‌ರೇ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದ ಯಾವ ಅಗತ್ಯವೂ ಇರಲಿಲ್ಲ. ತಮಗೆ ಈಗಾಗಲೇ ಸಿಗುವ ಉಚಿತಗಳೆಲ್ಲವೂ ಬಿಜೆಪಿ ಅಧಿಕಾರಕ್ಕೆ ಬಂದರೂ ಲಭ್ಯವಾಗುವುದಾದರೆ ಬದಲಾವಣೆ ಮಾಡಿ ನೋಡುವುದರಲ್ಲಿ ಕಳಕೊಳ್ಳುವುದಕ್ಕೇನಿದೆ ಎಂದವರು ಭಾವಿಸಿರಬಹುದು ಅಥವಾ 2020ರ ಚುನಾವಣೆಯಲ್ಲಿ ಕೇಜ್ರಿವಾಲ್‌ರನ್ನು ಈ ಮತದಾರರು ಕೇವಲ ಉಚಿತಕ್ಕಾಗಿ ಮಾತ್ರ ಬೆಂಬಲಿಸಿರಲೂ ಬಹುದು. ಆಂತರಿಕವಾಗಿ ಬಿಜೆಪಿಯನ್ನು ಬೆಂಬಲಿಸುತ್ತಾ ಕೇವಲ ಉಚಿತಕ್ಕಾಗಿ ಮಾತ್ರ ಅವರು ಕೇಜ್ರಿವಾಲ್‌ಗೆ ಮತ ಹಾಕಿರಬಹುದು. ಲೋಕಸಭಾ ಚುನಾವಣೆಯಲ್ಲಿ 8ರಲ್ಲಿ 8 ಸ್ಥಾ ನವನ್ನೂ ಈ ಮತದಾರರು ಬಿಜೆಪಿಗೆ ನೀಡಿರುವುದನ್ನು ನೋಡಿದರೆ, ಬಿಜೆಪಿ ನೀಡಿರುವ ಉಚಿತದ ಭರವಸೆಯೇ ಕೇಜ್ರಿ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿರಬಹುದು ಎಂದೂ ಹೇಳಬಹುದು.