Monday, 12 November 2012

ಬ್ಯಾಲೆನ್ಸ್ ಡ್ ವರದಿಗಾರರ ಮಧ್ಯೆ ನವೀನ್ ಎಂಬ ಪತ್ರಕರ್ತ..


     ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಹೆಚ್ಚಿನೆಲ್ಲ ಪತ್ರಿಕೆಗಳು ಮಂಗಳೂರಿನಲ್ಲಿ ಮೊರು ತಿಂಗಳ ಹಿಂದೆ ನಡೆದ ಹೋಮ್ ಸ್ಟೇ  ದಾಳಿಯ ಸುದ್ದಿಯನ್ನು ಮುಖಪುಟದಲ್ಲಿ ಪ್ರಕಟಿಸಿದ್ದುವು. ಸಂಪಾದಕೀಯ ಬರೆದಿದ್ದುವು. ಟಿ.ವಿ. ಚಾನೆಲ್ ಗಳಂತೂ ಸುದ್ದಿ ವಿಶ್ಲೇಷಣೆ, ಚಾವಡಿ ಚರ್ಚೆ, ತಜ್ಞರ ಸಂವಾದ ಸಹಿತ ಹತ್ತಾರು ಗಂಟೆಗಳ ಕಾರ್ಯಕ್ರಮವನ್ನು ವಾರಗಳ ತನಕ ಪ್ರಸಾರ ಮಾಡಿದ್ದುವು. ಆದ್ದರಿಂದಲೇ, ಜನಸಾಮಾನ್ಯರಿಂದ ಹಿಡಿದು ಮುಖ್ಯಮಂತ್ರಿಯ ವರೆಗೆ ಆ ಪ್ರಕರಣ ಚರ್ಚೆಗೆ ಒಳಗಾದದ್ದು. ಆರೋಪಿಗಳು ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರೇ ಆಗಿದ್ದರೂ, ಅವರ ಬಂಧನವಾದದ್ದು. ಒಂದು ರೀತಿಯಲ್ಲಿ, ಈ 'ನೈತಿಕ ಪೊಲೀಸ್ ಗಿರಿ'ಯ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆದುವು. ಮಂಗಳೂರಿನಲ್ಲಂತೂ  ತಿಂಗಳ ಕಾಲ ಪ್ರತಿಭಟನೆ ನಡೆಯಿತು. ನಿಜವಾಗಿ, 'ನೈತಿಕ ಪೊಲೀಸರು' ಎಂಬ ಈ ಮನುಷ್ಯ ವಿರೋಧಿ ತಂಡದ ವಿರುದ್ಧ ಸಾರ್ವಜನಿಕರು ಸಿಡಿದೇಳುವಂತೆ, ಹೈಕೋರ್ಟೇ ಪ್ರತಿಕ್ರಿಯಿಸುವಂತೆ ಜಾಗೃತಿ ಮೂಡಿಸಿದ್ದು ನವೀನ್ ಸೂರಿಂಜೆ ಎಂಬ ಯುವ ಪತ್ರಕರ್ತ. ಅವರು ಸಕಾಲಕ್ಕೆ ಘಟನಾ ಸ್ಥಳಕ್ಕೆ ತಲುಪಿ ವರದಿ ತಯಾರಿಸದೇ ಇರುತ್ತಿದ್ದರೆ, ಇವತ್ತು ದಾಳಿ ನಡೆಸಿದವರು ಹೀರೋಗಳಾಗಿಯೂ ದಾಳಿಗೊಳಗಾದವರು, ‘ಮಾದಕ ವ್ಯಸನಿಗಳು’, ಹೆಣ್ಣಿನ ಮಾರಾಟಗಾರರು.. ಎಂಬೆಲ್ಲ ಬಿರುದು ಹೊತ್ತು ಖಳರಾಗಿಯೂ ಗುರುತಿಸಿಕೊಳ್ಳುವ ಎಲ್ಲ ಸಾಧ್ಯತೆಯೂ ಇತ್ತು. ಆದರೆ ಕಳೆದ ವಾರ ಈ ಪತ್ರಕರ್ತನನ್ನೇ ಹೋಮ್ ಸ್ಟೇ  ದಾಳಿಯ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ವಿಷಾದ ಏನೆಂದರೆ, ಸೂರಿಂಜೆ ಬಹಿರಂಗಪಡಿಸಿದ ಸುದ್ದಿಯನ್ನು ಮೊರು ತಿಂಗಳ ಹಿಂದೆ ಮುಖಪುಟದಲ್ಲಿ ಪ್ರಕಟಿಸಿ, ಅದರ ಆಧಾರದಲ್ಲಿ ವಿಶ್ಲೇಷಣೆ, ಚರ್ಚೆಗಳನ್ನು ನಡೆಸಿ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದ ಹೆಚ್ಚಿನ ಪತ್ರಿಕೆಗಳು ಈ ಬಂಧನಕ್ಕೆ ಅಷ್ಟು ಮಹತ್ವ ಕೊಟ್ಟಿಲ್ಲ ಅನ್ನುವುದು. ಸೂರಿಂಜೆಯ ಬಂಧನವನ್ನು ಮುಖಪುಟದ ಮುಖ್ಯ ಸುದ್ದಿಯಾಗಿಸುವಲ್ಲಿ ಅವೆಲ್ಲ ಬಹುತೇಕ ವಿಫಲವಾದುವು. ನಿಜವಾಗಿ, ಸೂರಿಂಜೆಯ ಬಂಧನ ವಿರುದ್ಧ ರಾಜ್ಯದ ಅನೇಕ ಕಡೆ ಪ್ರತಿಭಟನೆಗಳು ನಡೆದಿವೆ. ಪತ್ರಕರ್ತರೇ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಒಂದು ವೇಳೆ ಕನ್ನಡ ಪತ್ರಿಕೆಗಳೆಲ್ಲ ಒಂದು ದಿನದ ಮಟ್ಟಿಗೆ ಕೇಜ್ರಿವಾಲ್ ಗೋ  ಗಡ್ಕರಿಗೋ ಸೋನಿಯಾಗೋ ಒಳಪುಟವನ್ನು ಕರುಣಿಸಿ ಕನಿಷ್ಠ ಈ ಪ್ರತಿಭಟನೆಗಳಿಗೆ ಮುಖಪುಟವನ್ನು ನೀಡುತ್ತಿದ್ದರೆ, ಖಂಡಿತ ಅದು ಕನ್ನಡ ಪತ್ರಿಕೋದ್ಯಮದಲ್ಲಿಯೇ ಅಪೂರ್ವ ಸಾಧನೆಯಾಗುತ್ತಿತ್ತು. ರಾಜ್ಯಪಾಲರಿಂದ ಹಿಡಿದು ಜನಸಾಮಾನ್ಯರ ವರೆಗೆ ಪ್ರಕರಣ ಚರ್ಚೆಗೊಳಗಾಗುತ್ತಿತ್ತು. ಓರ್ವ ಪ್ರಾಮಾಣಿಕ ಪತ್ರಕರ್ತನನ್ನು ವ್ಯವಸ್ಥೆ ಹೇಗೆ ಮಟ್ಟ ಹಾಕುತ್ತದೆ ಎಂಬುದರ ವಿಶ್ಲೇಷಣೆ ನಡೆಯುತ್ತಿತ್ತು. ಅಂದ ಹಾಗೆ, ಹೋಮ್ ಸ್ಟೇ  ದಾಳಿಯನ್ನು ಪತ್ರಿಕೆಗಳು ಮುಖಪುಟದಲ್ಲಿಟ್ಟು ಚರ್ಚಿಸಿರದಿರುತ್ತಿದ್ದರೆ ಅದು ದೇಶದಾದ್ಯಂತ ಚರ್ಚೆಗೊಳಗಾಗುವ ಸಾಧ್ಯತೆ ಇತ್ತೇ? ದಾಳಿಕೋರರು ಬಂಧನಕ್ಕೆ ಒಳಗಾಗುತ್ತಿದ್ದರೇ? ಪ್ರಕರಣ ನಡೆದು 3 ತಿಂಗಳಾದರೂ ಬಂಧಿತ ಆರೋಪಿಗಳು ಇನ್ನೂ ಬಿಡುಗಡೆಗೊಳ್ಳದಿರುವುದಕ್ಕೆ ಆ ವರದಿಗಾರಿಕೆಯೇ ಕಾರಣವಲ್ಲವೇ? ಇಷ್ಟಿದ್ದೂ,  ನವೀನ್ ಸೂರಿಂಜೆಯ ದಿಟ್ಟತನಕ್ಕೆ ಹ್ಯಾಟ್ಸಾಪ್ ಹೇಳುವ ಮತ್ತು ಅವರ ಪರ ಜನಾಭಿಪ್ರಾಯವನ್ನು ರೂಪಿಸುವ  ಅವಕಾಶವನ್ನು ಪತ್ರಿಕೆಗಳೇಕೆ ಬಳಸಿಕೊಳ್ಳಲಿಲ್ಲ? ಪತ್ರಕರ್ತರ ಮೇಲಾದ ಅನ್ಯಾಯವನ್ನು ಮುಂಚೂಣಿಯಲ್ಲಿ ನಿಂತು ಖಂಡಿಸುವುದಕ್ಕೆ ಪತ್ರಿಕೆಗಳಿಗೇ ಸಾಧ್ಯವಾಗದಿದ್ದರೆ ಅದನ್ನು ಬೇಜವಾಬ್ದಾರಿ ಎಂದಲ್ಲದೆ ಇನ್ನೇನೆಂದು ಕರೆಯಬೇಕು?
    ನಿಜವಾಗಿ, ರಾಜ್ಯದ ಕರಾವಳಿ ಭಾಗದಲ್ಲಿ ಹೋಮ್ ಸ್ಟೇ  ದಾಳಿಯಂಥ ಪ್ರಕರಣಗಳು ಈ ಮೊದಲು ಹಲವಾರು ನಡೆದಿವೆ. ಮಾತ್ರವಲ್ಲ, ದಾಳಿಗೆ ಒಳಗಾದವರೆಲ್ಲ ಅಪರಾಧಿಗಳಾಗಿ ಮತ್ತು ದಾಳಿಕೋರರು ಮಹಾನ್ ಸಂಸ್ಕೃತಿ ರಕ್ಷಕರಾಗಿ ಬಿಂಬಿತಗೊಂಡದ್ದೂ ಇದೆ. ಯಾಕೆ ಹೀಗೆ ಅಂದರೆ, ಅಂಥ ಪ್ರಕರಣಗಳನ್ನು ವರದಿ ಮಾಡುವಾಗ ಪತ್ರಕರ್ತ ಅಪಾರ ಜಾಗರೂಕತೆ ವಹಿಸುತ್ತಿದ್ದ. ದಾಳಿಕೋರರ ನಿಜ ಮುಖವನ್ನು ಇದ್ದ ಹಾಗೆ ಬಿಂಬಿಸಿಬಿಟ್ಟರೆ ಎಲ್ಲಿ ಅಪಾಯ ಬಂದೊದಗುತ್ತೋ ಎಂಬ ಭೀತಿಯೂ ಅವನಲ್ಲಿತ್ತು.ಆದ್ದರಿಂದ ವರದಿಗಾರಿಕೆಯಲ್ಲಿ ಸಮತೋಲನ (Balance) ಕಾಯ್ದುಕೊಳ್ಳಲೇ ಬೇಕಾಗಿತ್ತು. ಹೀಗೆ ಒಂದು ಬಗೆಯ ಮುಲಾಜು, ರಾಜಿ ಮನೋಭಾವದೊಂದಿಗೆ ಕರಾವಳಿಯಲ್ಲಿ ನಡೆಯುತ್ತಿದ್ದ ವರದಿಗಾರಿಕೆಯನ್ನು ಜೋರು ದನಿಯಿಂದ ಪ್ರಶ್ನಿಸಿದ್ದೇ ನವೀನ್ ಸೂರಿಂಜೆ. ಕೆಲವು ವರ್ಷಗಳ ಹಿಂದೆ, ಉಡುಪಿ ಜಿಲ್ಲೆಯಲ್ಲಿ ಹಾಜಬ್ಬ, ಹಸನಬ್ಬ ಎಂಬ ತಂದೆ-ಮಗನನ್ನು ಸಂಘಪರಿವಾರದ ಮಂದಿ ದನ ಸಾಗಾಟದ ನೆಪದಲ್ಲಿ ನಡುಬೀದಿಯಲ್ಲಿ ಬೆತ್ತಲುಗೊಳಿಸಿದ್ದರು. ಮೈಯಲ್ಲಿ ಒಂಚೂರೂ ಬಟ್ಟೆಯಿಲ್ಲದೇ ನಡು ಬೀದಿಯಲ್ಲಿ ನಿಂತಿದ್ದ ಆ ತಂದೆ-ಮಗನನ್ನು ಎದುರಿಟ್ಟು ಪತ್ರಿಕೆಗಳು ಮಾಡಿದ ವರದಿಗಾರಿಕೆಯಲ್ಲಿ ಭಾರೀ ಜಾಗರೂಕತೆಯೂ ಇತ್ತು. ಬೆತ್ತಲೆ ಎಂಬ ಪದದ ಆಸುಪಾಸಿನಲ್ಲಿ ದನ ಸಾಗಾಟ ಎಂಬ ಪದ ಬರುವಂತೆ ನೋಡಿಕೊಂಡು ವರದಿಗಾರಿಕೆಯಲ್ಲಿ  ಸಮತೋಲನವನ್ನು  ಕಾಯ್ದುಕೊಳ್ಳಲಾಗಿತ್ತು. ಇದೊಂದೇ ಅಲ್ಲ, ಹಿಂದೂ ಮತ್ತು ಮುಸ್ಲಿಂ ಧರ್ಮಕ್ಕೆ ಸೇರಿದ ಹೆಣ್ಣು - ಗಂಡು ಪರಸ್ಪರ ಮಾತಾಡಿದ ಕಾರಣಕ್ಕಾಗಿ ಆಗುವ ದಾಳಿಗಳ ವರದಿಯಲ್ಲೂ ಇವು ಗೋಚರಿಸುತ್ತಿರುತ್ತವೆ. ಅಂಥ ಮಾತುಕತೆಗಳೇ ತಪ್ಪು ಎಂಬ ಸೂಚನೆಯನ್ನು ಶೀರ್ಷಿಕೆ, ವರದಿಗಾರಿಕೆಯು ಕೊಡುತ್ತಿರುತ್ತದೆ. ಆದರೆ ಇಂಥ ಸಿದ್ಧ ಮಾದರಿಯನ್ನು ಮುರಿದದ್ದೇ ನವೀನ್ ಸೂರಿಂಜೆ. ಅವರ ವರದಿಯಲ್ಲಿ ರಾಜಿ ಇರಲಿಲ್ಲ, ಮುಲಾಜೂ ಇರಲಿಲ್ಲ. ಅವರು ವರದಿ ಮಾಡಿದ್ದಷ್ಟೇ ಅಲ್ಲ, ತಾನು ಹೋಮ್ ಸ್ಟೇಯಲ್ಲಿ ಕಂಡದ್ದನ್ನೆಲ್ಲಾ ಆ ಬಳಿಕ ವಿವಿಧ ಇಂಟರ್ನೆಟ್ ತಾಣಗಳಲ್ಲಿ ಬಹಿರಂಗವಾಗಿಯೇ ಹಂಚಿಕೊಂಡರು. ದಾಳಿಕೋರರಲ್ಲಿ ಹೆಚ್ಚಿನ ಮಂದಿ ಮದ್ಯವ್ಯಸನಿಗಳಾಗಿದ್ದುದು, ಹೆಣ್ಣು ಮಕ್ಕಳನ್ನು ಬೆತ್ತಲೆ ಮಾಡಿದ್ದನ್ನೆಲ್ಲಾ.. ಧೈರ್ಯದಿಂದ ಬರೆದರು. ತನಿಖಾ ತಂಡಗಳ ಮುಂದೆ ಸಾಕ್ಷಿ ನುಡಿಯಲೂ ಸಿದ್ಧ ಅಂದರು. ಮಾತ್ರವಲ್ಲ, ಈ ವರದಿಗಾರಿಕೆಯಿಂದಾಗಿ ಸೂರಿಂಜೆಗೆ ಮಾಧ್ಯಮ ಜಗತ್ತಿನಲ್ಲಿ ದೊಡ್ಡ ಮಟ್ಟದ ಹೆಸರೂ ಬಂತು. ಒಂದು ರೀತಿಯಲ್ಲಿ ಇದು ಸಂಘಪರಿವಾರಕ್ಕೆ ಸೂರಿಂಜೆ ರವಾನಿಸಿದ ಪ್ರಬಲ ಸವಾಲಾಗಿತ್ತು. ಈತನನ್ನು ಹೀಗೆಯೇ ಬಿಟ್ಟರೆ ಮುಂದಿನ ದಿನಗಳಲ್ಲಿ ಇತರ ಪತ್ರಕರ್ತರೂ ಇದೇ ಮಾದರಿಯನ್ನು ಅನುಸರಿಸಬಹುದು ಎಂಬ ಭೀತಿಯೂ ಸಂಘಪರಿವಾರವನ್ನು ಕಾಡಿರಬೇಕು. ಆದ್ದರಿಂದಲೇ ಸೂರಿಂಜೆಯನ್ನು ಬಂಧಿಸಲಾಗಿದೆ. ಈ ಮುಖಾಂತರ ಸಂಘ ಪರಿವಾರಕ್ಕೆ ಎದುರು ನಿಲ್ಲುವ ಪತ್ರಕರ್ತರಿಗೆಲ್ಲ ಅಪಾಯದ ಸೂಚನೆಯನ್ನೂ ರವಾನಿಸಲಾಗಿದೆ.  ಆದ್ದರಿಂದ, ಮುಂದೆ  ತಾವು ಏನಾಗಬೇಕೆಂಬುದನ್ನು ಪತ್ರಕರ್ತರೇ ನಿರ್ಧರಿಸಬೇಕು. ಈ ಸೂಚನೆಗೆ ತಲೆಬಾಗಬೇಕೋ  ಅಥವಾ ಪ್ರತಿಭಟಿಸಬೇಕೋ? ನವೀನ್ ಸೂರಿಂಜೆ ಆಗಬೇಕೋ ಅಥವಾ ಬೆತ್ತಲೆ ಪ್ರಕರಣದ ಬ್ಯಾಲೆನ್ಸ್ ಡ್  ಪತ್ರಕರ್ತ ಆಗಬೇಕೋ? ಆಯ್ಕೆ ಮುಕ್ತವಾಗಿದೆ. ಆದರೆ ಬೆತ್ತಲೆಯನ್ನು ಆಯ್ಕೆ ಮಾಡಿಕೊಳ್ಳಬೇಡಿ ಅನ್ನುವುದಷ್ಟೇ ಸಮಾಜ ಪ್ರೇಮಿಗಳ ಆಸೆ.

No comments:

Post a Comment