Thursday, 17 October 2013

 ಇಂಥ ಗೆಲುವನ್ನು ಈ ಮಗು ಮತ್ತೆ ಮತ್ತೆ ದಾಖಲಿಸುತ್ತಲೇ ಇರಲಿ..

   ನಾರ್ವೆಯ ನೋಬೆಲ್ ಶಾಂತಿ ಪ್ರತಿಷ್ಠಾನವು ಮಲಾಲ ಎಂಬ ಮಗುವನ್ನು ರಣಹದ್ದುಗಳ ಕೈಯಿಂದ ಒಂದು ವರ್ಷದ ಮಟ್ಟಿಗಾದರೂ ರಕ್ಷಿಸಿದೆ. ಮಲಾಲ ಯಾರು, ಆಕೆ ಎಲ್ಲಿದ್ದಾಳೆ, ಯಾವ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾಳೆ.. ಎಂಬುದೆಲ್ಲಾ ಶಾಲೆಯ ಮೆಟ್ಟಲು ಹತ್ತದ ಜನಸಾಮಾನ್ಯರಿಗೂ ಇವತ್ತು ಗೊತ್ತು. ಹಾಗಂತ, ಮಲಾಲ ಅಪಾರ ಪ್ರತಿಭಾವಂತೆ ಏನಲ್ಲ. ಸಣ್ಣ ಪ್ರಾಯದಲ್ಲೇ ಅಸಾಮಾನ್ಯ ಸಾಧನೆ ಮಾಡಿದ ಗುರುತೂ ಆಕೆಗಿಲ್ಲ. ಪಾಕ್ ಮತ್ತು ಅಫಘಾನಿಸ್ತಾನದ ಗಡಿಭಾಗದಲ್ಲಿ ತಣ್ಣಗೆ ಕಲಿಯುತ್ತಿದ್ದ ಈ ಮಗುವಿನ ಮೇಲೆ ಆದ ಗುಂಡಿನ ದಾಳಿಯು ಆಕೆಯನ್ನು ಪ್ರಸಿದ್ಧಿಗೆ ಒಯ್ದಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿಸುವಷ್ಟು, ವೈಟ್ ಹೌಸ್‍ಗೆ ಭೇಟಿ ಕೊಡಿಸುವಷ್ಟು, ಜಾಗತಿಕ ನಾಯಕರ ಜೊತೆ ವೇದಿಕೆ ಹಂಚಿಕೊಳ್ಳುವಷ್ಟು ಆಕೆಯನ್ನು ಅದು ಎತ್ತರಕ್ಕೆ ಏರಿಸಿದೆ. ಪಾಶ್ಚಾತ್ಯ ಯುದ್ಧದಾಹಿ ರಾಷ್ಟ್ರಗಳು ತಮ್ಮ ಮಾತುಗಳನ್ನು ಈ ಮಗುವಿನ ಬಾಯಿಯಲ್ಲಿ ಇವತ್ತು ಹೇಳಿಸುತ್ತಿವೆ. ಜಗತ್ತಿನ ಸಕಲ ಆಗು-ಹೋಗುಗಳ ಬಗ್ಗೆಯೂ ಹೇಳಿಕೆ ಕೊಡುವಂಥ ಸ್ಥಿತಿಗೆ ಅವು ಆ ಮಗುವನ್ನು ನೂಕಿಬಿಟ್ಟಿವೆ. ಪಾಕ್‍ನ ಬೆನಝೀರ್ ಆಗಬೇಕು ಎಂದು ಒಮ್ಮೆ ಆ ಮಗು ಹೇಳಿದರೆ, ಇನ್ನೊಮ್ಮೆ ಪಾಕ್-ಅಫಘನ್ನಿನ ಮಹಿಳೆಯರ ಬಗ್ಗೆ ಮಾತಾಡುತ್ತದೆ. ಮಕ್ಕಳ ಹಕ್ಕು, ಶಿಕ್ಷಣದ ಅಗತ್ಯ, ಮಹಿಳಾ ಸಬಲೀಕರಣ.. ಎಂದೆಲ್ಲಾ ತನ್ನ ವಯಸ್ಸಿಗೆ ವಿೂರಿದ ಮಾತುಗಳನ್ನು ಆ ಮಗು ಹೇಳುತ್ತಿದೆ. ಇಂಥ ಹೊತ್ತಲ್ಲೇ ಆಕೆಯ ಹೆಸರು ನೋಬೆಲ್ ಶಾಂತಿ ಪ್ರಶಸ್ತಿಯ ಪಟ್ಟಿಗೂ ಸೇರ್ಪಡೆಗೊಂಡಿತು. ರಶ್ಯಾದ ಅಧ್ಯಕ್ಷ  ಪುಟಿನ್ ಮತ್ತು ರಾಸಾಯನಿಕ ಅಸ್ತ್ರ ತಡೆ ಸಂಸ್ಥೆ (ಓ.ಪಿ.ಸಿ.ಡಬ್ಲ್ಯು)ಯು ಪ್ರಶಸ್ತಿಯ ಪಟ್ಟಿಯಲ್ಲಿದ್ದರೂ ಮಾಧ್ಯಮಗಳಲ್ಲಿ ಅತ್ಯಂತ ಹೆಚ್ಚು ಚರ್ಚೆಗೊಳಗಾದದ್ದು ಈ ಮಗುವೇ. ಅಷ್ಟಕ್ಕೂ, ನೋಬೆಲ್ ಪ್ರಶಸ್ತಿಯನ್ನು ನೀಡುವುದಕ್ಕೆ ಪರಿಗಣಿಸಲಾಗುವ ಅರ್ಹತೆಗಳೇನು, ಮಲಾಲ ಆ ಪ್ರಶಸ್ತಿಗೆ ಎಷ್ಟು ಅರ್ಹ, ಆಕೆಯ ಯಾವ ಸಾಧನೆಯನ್ನು ಪ್ರಶಸ್ತಿ ಪ್ರತಿಷ್ಠಾನವು ಪರಿಗಣಿಸಬೇಕು.. ಎಂಬೆಲ್ಲ ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸಲು ಮಾಧ್ಯಮಗಳು ಶ್ರಮಿಸಿದ್ದು ತೀರಾ ಕಡಿಮೆ.  ಇದೀಗ ರಾಸಾಯನಿಕ ಅಸ್ತ್ರ ತಡೆ ಸಂಸ್ಥೆಯನ್ನು ನೋಬೆಲ್ ಪ್ರತಿಷ್ಠಾನವು ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಮೂಲಕ ಅದು ಮಾಡಿದ ಅತಿ ದೊಡ್ಡ ಸಾಧನೆಯೇನೆಂದರೆ, ಮಲಾಲಳನ್ನು ರಕ್ಷಿಸಿದ್ದು. ಒಂದು ವೇಳೆ ಶಾಂತಿ ಪ್ರಶಸ್ತಿಗೆ ಮಲಾಲ ಆಯ್ಕೆಯಾಗುತ್ತಿದ್ದರೆ ಆ ಪ್ರಶಸ್ತಿಯ ಮೌಲ್ಯವಷ್ಟೇ ಅಲ್ಲ, ಆ ಮಗುವಿನ ಆಯುಷ್ಯವೂ ಕುಸಿಯುವ ಸಾಧ್ಯತೆಯಿತ್ತು. ಯಾಕೆಂದರೆ, ಆಕೆಯನ್ನು ಸಾಕುತ್ತಿರುವ ರಾಷ್ಟ್ರಗಳಿಗೆ ಆ ಮಗು ಒಂದು ಆಯುಧ. ಆ ಆಯುಧವನ್ನು ಬಳಸಿಕೊಂಡು ಕಳೆದೊಂದು ವರ್ಷದಲ್ಲಿ ಅವು ಪಾಕ್ ಮತ್ತು ಅಫಘಾನ್‍ಗಳ ಮೇಲೆ ಅನೇಕಾರು ಡ್ರೋನ್‍ಗಳನ್ನು ಎಸೆದಿವೆ. ಈ ಮಗುವಿನ ಬೆನ್ನ ಹಿಂದೆ ಕೂತು ಅವು ತಾಲಿಬಾನ್‍ಗಳ ವಿರುದ್ಧ ಬಂದೂಕು ಸಿಡಿಸಿವೆ. ಈ ಎರಡು ರಾಷ್ಟ್ರಗಳಲ್ಲಿ ತಮ್ಮ ಸೈನಿಕರು ಎಸಗಿರುವ ಮತ್ತು ಎಸಗುತ್ತಿರುವ ಮನುಷ್ಯ ವಿರೋಧಿ ಕೃತ್ಯಗಳನ್ನೆಲ್ಲ ಸಮರ್ಥಿಸಿಕೊಳ್ಳಲು ಅವರಿಗೆ ಈ ಮಗು ಬೇಕೇ ಬೇಕು. ಅಫಘನ್ನಿನಲ್ಲೋ ಪಾಕ್‍ನಲ್ಲೋ ಸ್ಫೋಟಗಳು ನಡೆದಾಗಲೆಲ್ಲ ಅವು ಈ ಮಗುವಿನಲ್ಲಿ ಹೇಳಿಕೆಯನ್ನು ಹೊರಡಿಸುತ್ತವೆ. ಆ ಮಗು ಹೇಳಿಕೆ ಕೊಡುವುದು ಶಿಕ್ಷಣದ ಬಗ್ಗೆಯಾದರೂ ಪತ್ರಿಕೆಗಳು ಅದನ್ನು ಪ್ರಕಟಿಸುವಾಗ  ‘ತಾಲಿಬಾನ್ ಗುಂಡನ್ನು’ ಸಹಜವಾಗಿ ಪ್ರಸ್ತಾಪಿಸುತ್ತವೆ. ಟಿ.ವಿ. ಆ್ಯಂಕರ್‍ಗಳು, ‘ಗುಂಡು ಪ್ರಕರಣವನ್ನು’ ಉಲ್ಲೇಖಿಸದೆ ಮತ್ತು ಆಕೆಯನ್ನು ಚಿಕಿತ್ಸೆಗೆ ತುರ್ತಾಗಿ ಇಂಗ್ಲೆಂಡಿಗೆ ಹೊತ್ತೊಯ್ದ ದೃಶ್ಯವನ್ನು ತೋರಿಸದೆ ಸುದ್ದಿಯನ್ನು ಮುಗಿಸುವುದಿಲ್ಲ. ಹೀಗಿರುವಾಗ, ಈ ಮಗುವಿಗೆ ನೋಬೆಲ್ ಬರುತ್ತಿದ್ದರೆ ಪ್ರಚಾರದ ಅಬ್ಬರದಲ್ಲಿ ಅದು ಖಂಡಿತ ಕಳೆದು ಹೋಗುತ್ತಿತ್ತು. ನಿರೀಕ್ಷೆಯ ಭಾರವನ್ನು ಹೊತ್ತುಕೊಳ್ಳಲಾಗದೇ ಮಗು ಕುಸಿದು ಹೋಗುವ ಸಾಧ್ಯತೆಯೂ ಇತ್ತು. ಅಲ್ಲದೆ, ಪ್ರಶಸ್ತಿಯ ಭಾರವನ್ನು ತಡೆಯಲಾಗದೇ ಮಗು ಬಾಡಿ ಹೋಗಿ ಚಲಾವಣೆಗೊಳ್ಳದ ನಾಣ್ಯದಂತಾಗಿದ್ದರೆ ಈ ಯುದ್ಧದಾಹಿಗಳು ತಾವೇ ಗುಂಡು ಪ್ರಕರಣವೊಂದನ್ನು ಸೃಷ್ಟಿಸಿ ಅದನ್ನು ತಾಲಿಬಾನ್‍ಗಳ ತಲೆಗೆ ಕಟ್ಟಿ ಮಗುವನ್ನು ಬಲಿ ಕೊಡುವುದಕ್ಕೂ ಹೇಸುತ್ತಿರಲಿಲ್ಲ.
 ನಿಜವಾಗಿ, ಮಲಾಲ ಎಂಬ ಮಗುವನ್ನು ಪಾಶ್ಚಾತ್ಯ ಯುದ್ಧದಾಹಿಗಳಿಂದ ತುರ್ತಾಗಿ ರಕ್ಷಿಸಬೇಕಾದ ಅಗತ್ಯವಿದೆ. ಆಕೆಯ ಮೇಲೆ ನಡೆದ ಗುಂಡಿನ ದಾಳಿಗಿಂತ ವರ್ಷಗಳ ಮೊದಲೇ ಆ್ಯಡಮ್ ಗಿಲ್ಲಿಕ್ ಎಂಬ ಪತ್ರಕರ್ತ ಮಾರುವೇಷದಲ್ಲಿ ಈ ಕುಟುಂಬವನ್ನು ಸಂಪರ್ಕಿಸಿ ಚಿತ್ರಿಸಿದ ಡಾಕ್ಯುಮೆಂಟರಿಯನ್ನು ನೋಡುವಾಗ ಇಡೀ ಗುಂಡು ಪ್ರಕರಣದ ಬಗ್ಗೆಯೇ ಅನುಮಾನ ಮೂಡುತ್ತದೆ. ತಮ್ಮ ಯೋಜನೆಗಳನ್ನು ಜಾರಿಗೊಳಿಸಲಿಕ್ಕಾಗಿ ಈ ಮಗುವನ್ನು ಬಳಸಿಕೊಳ್ಳಲು ಬೃಹತ್ ರಾಷ್ಟ್ರಗಳು ಮುಂಚಿತವಾಗಿಯೇ ತೀರ್ಮಾನಿಸಿದ್ದುವೇ ಎಂದು ಸಂಶಯವಾಗುತ್ತದೆ. ಬಹುಶಃ, ಆ ಮಗುವಿಗೆ ಈ ವಾಸ್ತವ ಗೊತ್ತಿರಬೇಕೆಂದೇನೂ ಇಲ್ಲ. ತನ್ನ ಪ್ರಾಯೋಜಕರು ಏನೆಂದು ಹೇಳಿಕೊಡುತ್ತಿದ್ದಾರೋ ಅದನ್ನೇ ನಂಬುವಂಥ ವಯಸ್ಸು ಅದು. ತನ್ನ ಮೇಲೆ ತಾಲಿಬಾನ್ ದಾಳಿ ನಡೆಸಿದೆ ಎಂದು ಆ ಮಗು ಬಲವಾಗಿ ನಂಬಿದೆ. ಜಗತ್ತನ್ನೂ ಹಾಗೆಯೇ ನಂಬಿಸಲಾಗಿದೆ. ಅದುವೇ ನಿಜ ಎಂದು ನಾವು ಗಟ್ಟಿಯಾಗಿ ಹೇಳುವಾಗಲೂ ಅನುಮಾನದ ಪುಟ್ಟದೊಂದು ಗೆರೆ ನಮ್ಮಂಥ ಅಸಂಖ್ಯ ಮಂದಿಯ ಎದೆಯಲ್ಲಿ ಹಾದುಹೋಗುತ್ತಿರುವುದು ಸುಳ್ಳೇನೂ ಅಲ್ಲ. ಆಕೆಯನ್ನು ಯಾರು ಇವತ್ತು ಸಾಕುತ್ತಿದ್ದಾರೋ ಅವರು ಈ ಹಿಂದೆ ಮಾಡಿರುವ ವಂಚನೆಗಳನ್ನು ಸ್ಮರಿಸುವಾಗ ಮಲಾಲ ಗುಂಡು ಪ್ರಕರಣವು ಈ ವಂಚನೆಯ ಮುಂದುವರಿದ ಭಾಗವಾಗಿರಬಹುದೇ ಎಂಬ ಸಂಶಯ ಬಂದೇ ಬರುತ್ತದೆ. 1953ರಲ್ಲಿ ಇರಾನಿನ ಪ್ರಜಾತಂತ್ರ ಸರಕಾರವನ್ನು ಉರುಳಿಸುವಲ್ಲಿ ಮತ್ತು ಅಮೇರಿಕನ್ ಪರವಾಗಿದ್ದ ಶಾ ಪಹ್ಲವಿ ಎಂಬವರನ್ನು ರಾಜನಾಗಿ ನೇಮಕ ಮಾಡುವಲ್ಲಿ ಪರದೆಯ ಹಿಂದೆ ಕೆಲಸ ಮಾಡಿದ್ದು ಅಮೇರಿಕವೇ ಎಂದು ಎರಡು ತಿಂಗಳ ಹಿಂದೆ ಅದುವೇ ಒಪ್ಪಿಕೊಂಡಿತ್ತು. ಅಮೇರಿಕವನ್ನು ವಿರೋಧಿಸುತ್ತಿರುವ ಲ್ಯಾಟಿನ್ ಅಮೇರಿಕದ ರಾಷ್ಟ್ರಗಳ ಅಧ್ಯಕ್ಷರುಗಳಿಗೆ ಅದು ಕ್ಯಾನ್ಸರ್ ವೈರಸನ್ನು ಚುಚ್ಚುತ್ತಿದೆ ಎಂಬ ಅನುಮಾನ ಅಲ್ಲಿಯ ಜನರಲ್ಲಿ ಇವತ್ತು ವ್ಯಾಪಕವಾಗಿದೆ. ಹ್ಯೂಗೋ ಚಾವೇಝ್‍ರ ಸಾವು ಈ ಅನುಮಾನವನ್ನು ಇನ್ನಷ್ಟು ಬಲಪಡಿಸಿದೆ. ಕಳೆದ ವಾರವಷ್ಟೇ ಅರ್ಜಂಟೀನಾದ ಅಧ್ಯಕ್ಷೆ ಕ್ರಿಸ್ಟಿನಾ ಕಿರ್ಚನರ್ ಅವರ ಮೆದುಳಿನಲ್ಲಿದ್ದ ಕ್ಯಾನ್ಸರ್‍ಕಾರಕ ಗಡ್ಡೆಯನ್ನು ತೆಗೆದು ಹಾಕಲಾಗಿದೆ. ಹೀಗಿರುವಾಗ, ಮಲಾಲಳನ್ನು 'ತಾಲಿಬಾನ್ ಸಂತ್ರಸ್ತೆ' ಎಂದು ಬಿಂಬಿಸಲು ಅಮೇರಿಕಕ್ಕೆ ಅಸಾಧ್ಯವೆಂದು ಹೇಗೆ ನಂಬುವುದು? ಮಗುವನ್ನು ಮುಂದಿಟ್ಟುಕೊಂಡು ತಮ್ಮ ಯುದ್ಧದಾಹಿ ಕಾರ್ಯಾಚರಣೆಯನ್ನು ಮುಂದುವರಿಸಲು ಈ ಶಕ್ತಿಗಳು ಪ್ರಯತ್ನಿಸಲಾರವು ಎಂದು ಅನುಮಾನಿಸದಿರುವುದು ಹೇಗೆ?
   ಏನೇ ಆಗಲಿ, ಗುಂಡು ಪ್ರಕರಣದಿಂದ ಜರ್ಝರಿತವಾಗಿರುವ ಮಗುವನ್ನು ನೋಬೆಲ್ ಮೂಲಕ ಗಲ್ಲಿಗೇರಿಸುವ ಯುದ್ಧದಾಹಿಗಳ ತಂತ್ರವನ್ನು ವಿಫಲಗೊಳಿಸಿದ್ದಕ್ಕಾಗಿ ನಾವೆಲ್ಲ ನೋಬೆಲ್ ಶಾಂತಿ ಪ್ರತಿಷ್ಠಾನಕ್ಕೆ ಕೃತಜ್ಞತೆ ಸಲ್ಲಿಸಬೇಕಾಗಿದೆ. ನೋಬೆಲ್‍ನ ಹಿನ್ನೆಲೆ, ಅದರ ಮೌಲ್ಯ, ಉದ್ದೇಶ, ಇತಿಹಾಸ.. ಮುಂತಾದುವುಗಳನ್ನೆಲ್ಲ ಅರಗಿಸಿಕೊಳ್ಳುವಷ್ಟು ಪ್ರಬುದ್ಧವಲ್ಲದ ಮಗುವಿನ ಕುತ್ತಿಗೆಗೆ ಅದನ್ನು ನೇತು ಹಾಕುವುದರಿಂದ ಮಗು ಶಾಶ್ವತವಾಗಿ ಬಾಡಿ ಹೋಗುವ ಅವಕಾಶ ಖಂಡಿತ ಇತ್ತು. ಆ ಬಳಿಕ ಅಂಥ ಮಗುವನ್ನು ಸಾಕುವ ಔದಾರ್ಯವನ್ನು ಪಾಶ್ಚಾತ್ಯ ಪೋಷಕರು ತೋರ್ಪಡಿಸುವ ಸಾಧ್ಯತೆಯೂ ಇರಲಿಲ್ಲ.ಇದೀಗ ಮಗು ಗೆದ್ದಿದೆ. ಮಾತ್ರವಲ್ಲ, ಆ ಮಗುವನ್ನು ಬಳಸಿಕೊಂಡು ತನ್ನ ಮನುಷ್ಯ ವಿರೋಧಿ ಯೋಜನೆಗಳನ್ನು ಜಾರಿಗೊಳಿಸುತ್ತಿರುವವರ ತಂತ್ರ ತಾತ್ಕಾಲಿಕವಾಗಿ ವಿಫಲವಾಗಿದೆ. ಈ ವೈಫಲ್ಯ ಇನ್ನೂ ಮುಂದುವರಿಯಲಿ ಮತ್ತು ಈ ಮಗು ಇವರ ವಿರುದ್ಧ ಮತ್ತೆ ಮತ್ತೆ ಇಂಥ ಗೆಲುವನ್ನು ದಾಖಲಿಸುತ್ತಲೇ ಇರಲಿ ಎಂದೇ ಹಾರೈಸೋಣ.

No comments:

Post a Comment