Wednesday 20 August 2014

‘ಹಿಂದುಸ್ತಾನ’ದ ಭಾಗವತ್‍ರಿಗೆ ಭಾರತೀಯರ ಪ್ರಶ್ನೆಗಳು..

   ಹಿಂದೂರಾಷ್ಟ್ರ, ಹಿಂದೂಗಳು, ಹಿಂದುತ್ವ.. ಮುಂತಾದ ಪದಗಳು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಇದೀಗ ಹೆಚ್ಚೆಚ್ಚು ಕಾಣಿಸಿಕೊಳ್ಳತೊಡಗಿವೆ. ಇವುಗಳ ಸುತ್ತ ಸಣ್ಣ ಮಟ್ಟದಲ್ಲಿ ಚರ್ಚೆಯೂ ಆರಂಭವಾಗಿದೆ. ಆರೆಸ್ಸೆಸ್‍ನ ಸರಸಂಘ ಚಾಲಕ ಮೋಹನ್ ಭಾಗವತ್‍ರು ಹುಟ್ಟು ಹಾಕಿರುವ ಈ ಚರ್ಚೆಯಲ್ಲಿ ಗೋವಾದ ಮುಖ್ಯಮಂತ್ರಿಯಿಂದ ಹಿಡಿದು ಹಲವಾರು ಮಂದಿ ಈಗಾಗಲೇ ಭಾಗವಹಿಸಿದ್ದಾರೆ. ಮೋಹನ್ ಭಾಗವತ್‍ರು ಪ್ರತಿನಿಧಿಸುವ ಸಂಘಟನೆಯ ಅಜೆಂಡಾಗಳೂ ಅದರ ಸಾಂಸ್ಕ್ರಿತಿಕ ರಾಷ್ಟ್ರೀಯವಾದದ ಅಪಾಯಗಳೂ ಈ ಚರ್ಚೆಯ ವ್ಯಾಪ್ತಿಯೊಳಗೆ ಸೇರಿಕೊಳ್ಳುತ್ತಿವೆ. ಸಾವರ್ಕರ್, ಗೋಲ್ವಾಲ್ಕರ್‍ರನ್ನು ಮುಂದಿಟ್ಟುಕೊಂಡು ಈ ಪದಗಳ ವಿಮರ್ಶೆಯನ್ನೂ ನಡೆಸಲಾಗುತ್ತಿದೆ. ‘ಎಲ್ಲ ಭಾರತೀಯರೂ ಹಿಂದೂಗಳು ಮತ್ತು ಈ ದೇಶ ಹಿಂದೂರಾಷ್ಟ್ರ' ಎಂದು ಮೋಹನ್ ಭಾಗವತ್ ವಾದಿಸಿರುವುದರ ಉದ್ದೇಶ ಏನು? ವೇದಗಳಲ್ಲಾಗಲಿ; ರಾಮಾಯಣ, ಮಹಾಭಾರತಗಳಲ್ಲಾಗಲಿ ಉಲ್ಲೇಖವಾಗದ ‘ಹಿಂದೂ' ಪದದ ಮೇಲೆ ಭಾಗವತ್‍ರಿಗೆ ಈ ಮಟ್ಟದ ಅಕ್ಕರೆ ಮೂಡಲು ಕಾರಣ ಏನು? ಇಷ್ಟಕ್ಕೂ ಕೇವಲ ಒಂದು ಪದವಾಗಿ ‘ಹಿಂದೂ' ಎಂಬ ಎರಡು ಅಕ್ಷರಗಳೊಳಗೆ ಯಾವ ಆಕ್ಷೇಪಾರ್ಹ ಅಂಶಗಳೂ ಇಲ್ಲ. ಹಿಂದೂ, ಮುಸ್ಲಿಮ್, ಕ್ರೈಸ್ತ, ಸಿಕ್ಖ್.. ಮುಂತಾದ ಪದಗಳು ಈ ದೇಶದಲ್ಲಿ ಈಗಾಗಲೇ ಧಾರಾಳ ಪ್ರಮಾಣದಲ್ಲಿ ಬಳಕೆಯಲ್ಲಿವೆ. ಆದರೆ ಮೋಹನ್ ಭಾಗವತ್‍ರ ‘ಹಿಂದೂಗಳು’ ಮತ್ತು ‘ಹಿಂದೂಸ್ತಾನ' ಎಂಬ ಪದಗಳು; ನಾವು ಸಾಮಾನ್ಯವಾಗಿ ಬಳಸುವ ‘ಹಿಂದೂಗಳು, ಮುಸ್ಲಿಮರು' ಎಂಬ ಪದಗಳಷ್ಟು ನಿರುಪದ್ರವಿಯೇ?
 ಹಿಂದೂ ಎಂಬ ಪದವು ಸಿಂಧೂ ಎಂಬ ಪರ್ಶಿಯನ್ ಪದದ ವ್ಯತ್ಪತ್ತಿಯಾಗಿದೆ ಎಂದು ಅನೇಕ ಇತಿಹಾಸಕಾರರು ದಾಖಲಿಸಿದ್ದಾರೆ. ಸಿಂಧೂ ನದಿಯ ತೀರದಲ್ಲಿ ವಾಸಿಸುತ್ತಿದ್ದವರಿಗೆ ಮೊದಲು ಪರ್ಶಿಯನ್ನರು ಮತ್ತು ಬಳಿಕ ಗ್ರೀಕರು ಹಿಂದೂ ಎಂಬ ಹೆಸರು ಕೊಟ್ಟರು ಎಂಬ ವಾದಗಳೂ ಇವೆ. ಹಾಗೆ ಅವರು ಹಿಂದೂ ಎಂದು ಸಂಬೋಧಿಸಿದ್ದು ಧರ್ಮಸೂಚಕ ಆಗಿರಲಿಲ್ಲ, ಸ್ಥಳ ಸೂಚಕವಾಗಿತ್ತು. ಒಂದು ಪ್ರದೇಶದ ಜನರನ್ನು ಗುರುತಿಸುವುದಕ್ಕೆ ಅವರು ಈ ಪದವನ್ನು ಪ್ರಯೋಗಿಸಿದ್ದರು. ಆದ್ದರಿಂದಲೇ, ಭಾರತದ ಸಂವಿಧಾನದಲ್ಲಿ ಹಿಂದೂಸ್ತಾನ ಎಂಬ ಪದವೇ ಇಲ್ಲ. ‘ಭಾರತ್' ಮತ್ತು ‘ಇಂಡಿಯಾ' ಎಂಬೆರಡು ಹೆಸರುಗಳಿಂದ ಸಂವಿಧಾನವು ಈ ದೇಶವನ್ನು ಗುರುತಿಸಿದೆ. ಹೀಗಿರುವಾಗ ಮೋಹನ್ ಭಾಗವತ್ ಮತ್ತು ಅವರ ಬೆಂಬಲಿಗರು ಭಾರತದ ಮೇಲೆ ‘ಹಿಂದೂಸ್ತಾನ'ವನ್ನು ಒತ್ತಾಯಪೂರ್ವಕವಾಗಿ ಹೇರುವ ಅನಿವಾರ್ಯತೆಗಳೇನಿವೆ? ಸಂವಿಧಾನವು ಈ ದೇಶದ ಪ್ರಜೆಗಳನ್ನೆಲ್ಲಾ ಭಾರತೀಯರು ಅನ್ನುವಾಗ ಇವರು ‘ಹಿಂದೂಗಳು' ಅನ್ನುತ್ತಿರುವುದೇಕೆ? ಪಾಕಿಸ್ತಾನ, ಅಫಘಾನಿಸ್ತಾನ, ತುರ್ಕ್‍ಮೆನಿಸ್ತಾನಗಳಂತೆ ಭಾರತವೂ ಒಂದು ಸ್ತಾನ್ ಆಗಬೇಕೇ? ಅದರ ಅಗತ್ಯವೇನಿದೆ? ಈಗಿರುವ ಭಾರತದಿಂದ ಆಗಿರುವ ಮತ್ತು ಆಗಲಿರುವ ಹಾನಿಗಳೇನು?
 ನಿಜವಾಗಿ, ಭಾರತೀಯ ಎಂಬ ಪದದಲ್ಲಿ ಒಂದು ಬಗೆಯ ಆಕರ್ಷಣೆಯಿದೆ. ಅದು ಧರ್ಮಸೂಚಕವೋ ಜಾತಿ ಸೂಚಕವೋ ಆಗಿಲ್ಲ. ‘ನಾನು ಭಾರತೀಯ' ಎಂದು ಹೇಳುವುದರಿಂದ ಓರ್ವ ಹಿಂದೂ, ಓರ್ವ ಮುಸ್ಲಿಮ್, ಕ್ರೈಸ್ತ, ದಲಿತ್, ಆದಿವಾಸಿ.. ಯಾರಿಗೂ ಅವಮಾನವೋ ಅಥವಾ ತನ್ನ ಐಡೆಂಟಿಟಿಯನ್ನು ಕಳಕೊಂಡ ಭಾವವೋ ಉಂಟಾಗುವುದಿಲ್ಲ. ಈ ದೇಶದಲ್ಲಿ ವಾಸಿಸುವ ಮತ್ತು ನಾಗರಿಕರೆನಿಸಿಕೊಂಡ ಸರ್ವರನ್ನೂ ಒಳಗೊಳಿಸುವ ಆಪ್ತ ಭಾವವೊಂದು ‘ಭಾರತೀಯ' ಎಂಬ ಪದದೊಳಗೆ ಅಡಗಿಕೊಂಡಿದೆ. ಅಲ್ಲದೇ ಇದು ಸಂವಿಧಾನವೇ ಕೊಟ್ಟ ಹೆಸರು. ಭಾರತೀಯ ಸಂಸ್ಕ್ರಿತಿ, ಭಾರತೀಯ ಉತ್ಪನ್ನ, ಭಾರತೀಯ ಮಾರುಕಟ್ಟೆ, ಭಾರತೀಯ ಮುಸ್ಲಿಮ್, ಹಿಂದೂ, ಕ್ರೈಸ್ತ - ಎಂಬೆಲ್ಲ ಪದಗಳಲ್ಲಿ ಭಾರತವು ಒಂದು ದೇಶವಾಗಿ ಮತ್ತು ಉಳಿದವು ಅಲ್ಲಿನ ನಾಗರಿಕರ ಧರ್ಮವೋ ಉತ್ಪನ್ನವೋ ಸಂಸ್ಕ್ರಿತಿಯೋ ಆಗಿ ಗುರುತಿಸಿಕೊಳ್ಳುತ್ತದೆ. ಇಲ್ಲೆಲ್ಲೂ ಭಾರತ ಎಂಬುದು ಒಂದು ನಿರ್ದಿಷ್ಟ ಧರ್ಮದ ಹೆಸರಾಗಿ ಕಾಣಿಸುವುದೇ ಇಲ್ಲ. ಇಲ್ಲಿ ಹತ್ತು ಹಲವು ಧರ್ಮಗಳು, ಭಾಷೆಗಳು, ಆಚರಣೆಗಳು, ವಿಚಾರ-ನಿಲುವುಗಳೂ ಇರಬಹುದು. ಅವೆಲ್ಲವನ್ನೂ ಪ್ರೀತಿಯಿಂದ ಸಾಕುವ ಮತ್ತು ಸಹಿಸುವ ನಾಗರಿಕ ಭೂಪ್ರದೇಶವೊಂದರ ಹೆಸರಾಗಿಯಷ್ಟೇ ಆ ಸಂಬೋಧನೆ ನಮ್ಮನ್ನು ಸೆಳೆಯುತ್ತದೆ. ಆದರೆ ಹಿಂದೂಸ್ತಾನ ಹಾಗಲ್ಲ. ಈ ಪದವು ಈ ದೇಶವನ್ನು ಒಂದು ನಿರ್ದಿಷ್ಟ ಧರ್ಮದ ಸೊತ್ತಾಗಿಸಿಬಿಡುತ್ತದೆ. ‘ಹಿಂದೂಗಳು' ಅಂದರೆ ಹಿಂದೂ ಧರ್ಮವನ್ನು ಪಾಲಿಸುವವರು ಎಂಬರ್ಥದಲ್ಲಿ ಬಳಸಲಾಗುತ್ತಿದೆ. ಮುಸ್ಲಿಮ್ ಎಂಬ ಪದ ಹೇಗೆ ಧರ್ಮಸೂಚಕವೋ ಹಾಗೆಯೇ ಹಿಂದೂ ಎಂಬ ಪದವೂ ಇವತ್ತಿನ ದಿನಗಳಲ್ಲಿ ಧರ್ಮಸೂಚಕ. ನಿಜವಾಗಿ, ಹಿಂದೂಸ್ತಾನ ಮತ್ತು ಭಾರತ ಎಂಬ ಪದಗಳ ನಡುವಿನ ಅಂತರವಿದು. ನಾವೆಲ್ಲ ಹಿಂದೂಗಳು ಅನ್ನುವಾಗ ಅಲ್ಲಿ ನಿರ್ದಿಷ್ಟ ಧರ್ಮವೊಂದರ ಗುರುತಷ್ಟೇ ಕಾಣಿಸುತ್ತದೆ. ಓರ್ವ ಮುಸ್ಲಿಮ್ ಅಥವಾ ಕ್ರೈಸ್ತ ತನ್ನನ್ನು ಹಿಂದೂ ಎಂದು ಗುರುತಿಸಿಕೊಳ್ಳುವಾಗ ಅವರ ನಿಜ ಧಾರ್ಮಿಕ ಗುರುತು ಹೊರಟು ಹೋಗುತ್ತದೆ. ಆ ಸಂದರ್ಭದಲ್ಲಿ ಹಿಂದೂ ಎಂಬ ಧರ್ಮವೇ ಅವರ ಧರ್ಮವಾಗಿ ಬಿಡುತ್ತದೆ. ಒಂದು ವೇಳೆ ಹಿಂದೂ ಎಂಬ ಪದವು ಧರ್ಮಸೂಚಕ ಆಗದೇ ‘ಭಾರತೀಯ' ಎಂಬಂತೆ ದೇಶಸೂಚಕ ಆಗಿರುತ್ತಿದ್ದರೆ ಇಂಥ ಐಡೆಂಟಿಟಿ ಕ್ರೈಸಿಸ್ ಸಮಸ್ಯೆ ತಲೆದೋರುತ್ತಿರಲಿಲ್ಲ.
   ಇಷ್ಟಕ್ಕೂ, ಈ ದೇಶ ಈಗಿನಂತೆ ಭಾರತ ಆಗಿಯೇ ಮುಂದುವರಿಯುವುದರಿಂದ ಮೋಹನ್ ಭಾಗವತ್‍ರಿಗೆ ಆಗುವ ತೊಂದರೆಗಳೇನು? ಭಾರತವನ್ನು ಹಿಂದೂಸ್ತಾನ ಮಾಡುವುದರಿಂದ ಮತ್ತು ಭಾರತೀಯರನ್ನು ಹಿಂದೂಗಳನ್ನಾಗಿಸುವುದರಿಂದ ರಾಷ್ಟ್ರೀಯವಾಗಿಯೋ ಅಂತಾರಾಷ್ಟ್ರೀಯ ಮಟ್ಟದಲ್ಲೋ ಆಗುವ ಲಾಭಗಳೇನು? ಭಾಗವತ್ ಈ ಬಗ್ಗೆ ಈ ವರೆಗೆ ಏನನ್ನೂ ಹೇಳಿಲ್ಲ. ಒಂದು ಮಹಾ ಬದಲಾವಣೆಗೆ ಒತ್ತಾಯಿಸುವವರು ಮೊತ್ತಮೊದಲು ಅದರ ಅಗತ್ಯತೆಯನ್ನು ಸಮಾಜಕ್ಕೆ ಮನವರಿಕೆ ಮಾಡಿಸಬೇಕಾಗುತ್ತದೆ. ಭಾರತೀಯ ಎಂಬ ಗುರುತಿಗಿಂತ ‘ಹಿಂದೂ' ಎಂಬ ಗುರುತಿನಲ್ಲಿ ಓರ್ವ ಮುಸ್ಲಿಮನಿಗೆ, ಕ್ರೈಸ್ತ, ಸಿಕ್ಖ್, ಜೈನ, ಬೌದ್ಧ..ರಿಗೆ ನಿರೀಕ್ಷೆ ಇಡಲು ಏನೇನಿವೆ? ಹಾಗೆ ಆಗುವುದರಿಂದ ಮುಸ್ಲಿಮರ ಹೆಸರನ್ನು, ಅವರ ಆಚರಣೆಯನ್ನು ಹಿಂದೂಕರಿಸಲಾಗುತ್ತದೆಯೇ? ಕ್ರೈಸ್ತರು, ಸಿಕ್ಖರ ಆರಾಧನಾ ಕ್ರಮಗಳಲ್ಲಿ, ಉಡುಗೆ-ತೊಡುಗೆಯಲ್ಲಿ ‘ಹಿಂದೂಯಿಸಂ’ ಅನ್ನು ಕಡ್ಡಾಯಗೊಳಿಸಲಾಗುತ್ತದೆಯೇ? ಪ್ರತಿಯೊಂದು ಧರ್ಮಕ್ಕೂ ಅದರದ್ದೇ ಆದ ಐಡೆಂಟಿಟಿಯಿದೆ. ಆಚರಣೆ, ಆರಾಧನಾ ಕ್ರಮಗಳಿವೆ. ಉಡುಗೆ-ತೊಡುಗೆ, ಸಾಂಸ್ಕ್ರಿತಿಕ ವೈಶಿಷ್ಟ್ಯತೆಗಳಿವೆ. ನಮಾಝ್‍ಗಿಂತ ಮೊದಲು ಬಾಂಗ್ ಕೊಡುವುದು ಮುಸ್ಲಿಮರ ಪದ್ಧತಿ. ಹಾಗಂತ ಇತರ ಧರ್ಮೀಯರು ಈ ಕ್ರಮವನ್ನು ಅನುಸರಿಸುವುದಿಲ್ಲ. ಮದುವೆಯ ಸಂದರ್ಭದಲ್ಲಿ ಹಿಂದೂಗಳಲ್ಲಿ ಸಪ್ತಪದಿ ಇರುವಂತೆ ಕ್ರೈಸ್ತರಲ್ಲಿಲ್ಲ. ಜೈನರ ದಿಗಂಬರ ಪದ್ಧತಿ ಸಿಕ್ಖರಲ್ಲಿಲ್ಲ.  ಒಂದು ಧರ್ಮದಲ್ಲಿ ವಿಗ್ರಹವನ್ನು ಆರಾಧಿಸುವ ಪದ್ಧತಿ ಇದ್ದರೆ ಇನ್ನೊಂದರಲ್ಲಿ ನಿರಾಕಾರ ಪದ್ಧತಿ ಇದೆ. ಒಂದರಲ್ಲಿ ತಲೆಗೆ ಟೊಪ್ಪಿ, ಗಡ್ಡದ ಗುರುತಿದ್ದರೆ ಇನ್ನೊಂದರಲ್ಲಿ ನಾಮ, ತಿಲಕಗಳಿವೆ. ಈ ಎಲ್ಲ ವೈವಿಧ್ಯತೆಗಳು ‘ಭಾರತೀಯ’ ವೈಶಿಷ್ಟ್ಯವಾಗಿವೆ. ಭಾಗವತ್‍ರ ‘ಹಿಂದೂಸ್ತಾನ' ಈ ಎಲ್ಲ ವೈವಿಧ್ಯತೆಗಳನ್ನು ಅಳಿಸಿ ಏಕ ಸಂಸ್ಕ್ರಿತಿ, ಏಕ ಆಚರಣೆ, ಏಕ ಆರಾಧನೆಗಳನ್ನು ಪ್ರಸ್ತುತಪಡಿಸುತ್ತದೆಯೇ? ಭಾರತೀಯರು ಹಿಂದೂಗಳಾಗಿ ಬದಲಾಗುವಾಗ ಏನೆಲ್ಲ ಬದಲಾಗುತ್ತವೆ? ಹೇಗೆಲ್ಲ ಬದಲಾಗಬೇಕಾಗುತ್ತದೆ? ಭಾಗವತ್‍ರು ಹೇಳದಿದ್ದರೂ ಅವರು ಪ್ರತಿನಿಧಿಸುವ ಸಂಘಟನೆಯ ಈ ವರೆಗಿನ ನಡವಳಿಕೆಗಳಲ್ಲಿ ಈ ಎಲ್ಲಕ್ಕೂ ಉತ್ತರವಿದೆ. ಆದ್ದರಿಂದಲೇ ಈ ದೇಶ ಭಾರತವಾಗಿಯೇ ಇರಲಿ ಮತ್ತು ಇಲ್ಲಿನ ನಾಗರಿಕರು ಭಾರತೀಯರಾಗಿಯೇ ಗುರುತಿಸಿಕೊಳ್ಳಲಿ ಎಂದೇ ಬಯಸಬೇಕಾಗುತ್ತದೆ.

No comments:

Post a Comment