
ನಿಜವಾಗಿ, ಮದ್ರಸ ಭಯೋತ್ಪಾದನೆ, ಆಶ್ರಮ ಭಯೋತ್ಪಾದನೆ ಮುಂತಾದ ಪದ ಪ್ರಯೋಗಗಳೇ ತಪ್ಪು. ಮದ್ರಸಗಳು, ಆಶ್ರಮಗಳು, ಇಗರ್ಜಿ, ಮಸೀದಿ, ಮಂದಿರಗಳೆಲ್ಲ ಪವಿತ್ರ ಭಾವನೆಯ ಸಂಕೇತಗಳು. ಮಾರುಕಟ್ಟೆಗೆ ಪ್ರವೇಶಿಸಿದಂತೆ ಯಾರೂ ಮಂದಿರಕ್ಕೆ ಪ್ರವೇಶಿಸುವುದಿಲ್ಲ. ಮಸೀದಿಗೆ ತೆರಳುವಾಗ ಇರುವ ಭಕ್ತಿ ಭಾವನೆಯು ಮದುವೆ ಸಭಾಂಗಣಕ್ಕೆ ಹೋಗುವಾಗ ಇರುವುದಿಲ್ಲ. ಆದರೆ ಪತ್ರಿಕೋದ್ಯಮದ ತುರ್ತುಗಳು ಮತ್ತು ಮನುಷ್ಯ ವಿರೋಧಿ ಮನಸುಗಳು ಒಟ್ಟುಗೂಡಿ ಈ ಪವಿತ್ರ ಸಂಕೇತಗಳನ್ನೇ ಭೀತಿಕಾರಕಗೊಳಿಸುವಲ್ಲಿ ಒಂದು ಹಂತದವರೆಗೆ ಇವತ್ತು ಯಶಸ್ವಿಯಾಗಿವೆ. ಈ ದೇಶದ ಯಾವ ಮದ್ರಸದಲ್ಲೂ ಬಾಬಾ ರಾಮ್‍ಪಾಲ್‍ರ ಆಶ್ರಮದಲ್ಲಿ ಸಿಕ್ಕಂತಹ ವಸ್ತುಗಳು ಈ ವರೆಗೂ ಸಿಗದಿದ್ದರೂ ಅವುಗಳನ್ನು ಸೂಜಿಮೊನೆಯಲ್ಲಿ ನಿಲ್ಲಿಸಿರುವುದಕ್ಕೆ ಈ ಕಾರಣಕ್ಕಿಂತ ಹೊರತಾದುದು ಏನೂ ಕಾಣಿಸುತ್ತಿಲ್ಲ. ಅಂದ ಹಾಗೆ, ಈ ದೇಶದ ಹೆಚ್ಚಿನೆಲ್ಲಾ ಮದ್ರಸಗಳ ಸ್ಥಿತಿ ಅತ್ಯಂತ ಶೋಚನೀಯವಾದದ್ದು. ಮೂಲಭೂತ ಸೌಕರ್ಯಗಳು ಇಲ್ಲದ, ಆಟದ ಮೈದಾನಗಳಂತಹ ವಿದ್ಯಾರ್ಥಿಸ್ನೇಹಿ ಪರಿಸರ ಇಲ್ಲದ, ಬಡ ಡೆಸ್ಕು, ಬೆಂಚು, ಕಪ್ಪು ಬೋರ್ಡು, ಚಾಕುಪೀಸುಗಳ ಪುಟ್ಟ ಜಗತ್ತಿನಲ್ಲಿ ಅವು ಉಸಿರಾಡುತ್ತಿವೆ. ಹೆಚ್ಚಿನೆಲ್ಲವೂ `ಬಡತನ ರೇಖೆಗಿಂತ' ಕೆಳಗಿರುವವುಗಳೇ. ಅಲ್ಲಿ ಕಲಿಸುವ ಮೌಲಾನರು ಕೂಡಾ ಬಡತನದ ಹಿನ್ನೆಲೆಯವರೇ. ಆರ್ಥಿಕವಾಗಿ ತೀರಾ ಸೋತು ಹೋಗಿರುವ ಒಂದು ಸಮುದಾಯದ ಕಲಿಕಾ ಕೇಂದ್ರಗಳು (ಮದ್ರಸಗಳು) ಎಲ್ಲ ಆಧುನಿಕ ಸೌಲಭ್ಯಗಳಿಂದ ಸುಸಜ್ಜಿತವಾಗಿರುವುದಕ್ಕೆ ಸಾಧ್ಯವೂ ಇಲ್ಲ. ಸಾಚಾರ್ ಸಮಿತಿಯ ವರದಿಯಲ್ಲಿ ಮುಸ್ಲಿಮರ ಸ್ಥಾನವು ದಲಿತರಿಗಿಂತ ಕೆಳಗಿರುವಾಗ ಆ ಸಮುದಾಯ ನಡೆಸುವ ಮದ್ರಸಗಳಾಗಲಿ ಮಸೀದಿಗಳಾಗಲಿ ಈ ಸ್ಥಾನದಿಂದ ಮೇಲೇರಿ ಗುರುತಿಸಿಕೊಳ್ಳುವುದನ್ನು ಯಾರೂ ಊಹಿಸಲಾರರು. ಒಂದು ರೀತಿಯಲ್ಲಿ, ಈ ದೇಶದ ಹೆಚ್ಚಿನೆಲ್ಲಾ ಮದ್ರಸಗಳಲ್ಲಿ ಕಲಿಸುವ ಮೌಲಾನಗಳಲ್ಲಿ ಮತ್ತು ಅಲ್ಲಿನ ಸೌಲಭ್ಯಗಳಲ್ಲಿ ದೊಡ್ಡದೊಂದು ಬಡತನದ ಛಾಯೆಯಿದೆ. ಇಂತಹ ಸ್ಥಿತಿಯಲ್ಲಿ, ಅವು ಬಾಂಬ್ ತಯಾರಿಕೆಯನ್ನು ಕಲಿಸುತ್ತವೆ ಎಂಬ ಆರೋಪವೇ ಅತ್ಯಂತ ಹೇಯವಾದದ್ದು. ಆದರೂ ದೇಶದಲ್ಲಿ ಅಂಥದ್ದೊಂದು ಆರೋಪವನ್ನು ಯಶಸ್ವಿಯಾಗಿ ಹೊರಿಸಲಾಗಿದೆ. ಕರ್ನಾಟಕದಲ್ಲಿರುವ ಎಲ್ಲ ಮದ್ರಸಗಳ ಒಟ್ಟು ಆಸ್ತಿಗೆ ಸಮಾನವಾಗುವಷ್ಟು ಸಂಪತ್ತನ್ನು ಕೇವಲ ಬಾಬಾ ರಾಮ್‍ಪಾಲ್‍ರ ಆಶ್ರಮವೊಂದೇ ಹೊಂದಿದ್ದರೂ ಮದ್ರಸಗಳು ಭಯೋತ್ಪಾದಕವಾಗಿಯೂ ರಾಮ್‍ಪಾಲ್‍ರ ಆಶ್ರಮ ಕ್ರಿಮಿನಲ್ ಆರೋಪಗಳಿಗಾಗಿಯೂ ಗುರುತಿಸಿಕೊಳ್ಳುತ್ತಿವೆ. ಬಹುಶಃ ಬಡ ಮದ್ರಸಗಳು ಮತ್ತು ಅದರ ಪುಟ್ಟ ಮಕ್ಕಳಿಗಿಲ್ಲದ ಕೆಲವೊಂದು ವಿಶೇಷತೆಗಳು ಇಂಥ ಆಶ್ರಮಗಳಿಗಿರುವುದೇ ಇದಕ್ಕೆ ಕಾರಣ. ಆಶ್ರಮಗಳಿಗಿರುವ ರಾಜಕೀಯ ಪ್ರಭಾವ ಮದ್ರಸಗಳಿಗಿಲ್ಲ. ಬೇಕಾದಾಗ ರಾಜಕೀಯ ಪಕ್ಷಗಳಿಗೆ ಕಪ್ಪುಹಣ ಒದಗಿಸುವ ತಾಕತ್ತೂ ಅವುಗಳಿಗಿಲ್ಲ. ವಿಜೃಂಭಣೆಯ ಕಾರ್ಯಕ್ರಮಗಳನ್ನು ನಡೆಸುವ ಸಂಪತ್ತೂ ಅವುಗಳ ಬಳಿಯಿಲ್ಲ. ಇಷ್ಟೆಲ್ಲ ದೌರ್ಬಲ್ಯಗಳನ್ನು ಹೊಂದಿರುವ ಕೇಂದ್ರಗಳು ವ್ಯವಸ್ಥೆಯ ಅವಕೃಪೆಗಲ್ಲದೇ ಕೃಪೆಗೆ ಪಾತ್ರವಾಗುವುದನ್ನು ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಊಹಿಸುವುದು ತೀರಾ ಕಷ್ಟ.
ಅಂದಹಾಗೆ, ಬಾಬಾ ರಾಮ್‍ಪಾಲ್‍ರ ಆಶ್ರಮದಲ್ಲಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳ ವಿವರಗಳು ಪ್ರಕಟವಾದ ದಿನವೇ ಮದ್ರಸಗಳ ಸ್ಥಿತಿಗತಿಗಳ ಕುರಿತಂತೆ ಸರ್ವೇ ಆಧಾರಿತ ವರದಿ ಬೆಂಗಳೂರಿನಲ್ಲಿ ಬಿಡುಗಡೆಗೊಂಡದ್ದು ಕಾಕತಾಳೀಯವೇ ಆಗಿರಬಹುದು. ಆದರೆ, ಕೆಲವೊಮ್ಮೆ ಅಂಥ ಕಾಕತಾಳೀಯದಲ್ಲೂ ಸೂಕ್ಷ್ಮ ಸಂದೇಶಗಳಿರುತ್ತವೆ. ಮದ್ರಸಗಳನ್ನು ಕೆಲವು ವರ್ಷ ಗಳಿಂದ ಭೂತಗನ್ನಡಿಯಿಟ್ಟು ನೋಡುತ್ತಿದ್ದವರಿಗೆ ರಾಮ್‍ಪಾಲ್ ಒಂದು ಸವಾಲು ಎಸೆದಿದ್ದಾರೆ. ನಿಮ್ಮ ಭೂತಗನ್ನಡಿ ಎಷ್ಟು ಪ್ರಾಮಾಣಿಕವಾಗಿದೆ ಎಂಬುದೇ ಆ ಸವಾಲು. ಮದ್ರಸಗಳ ಮೇಲೆ ಪತ್ತೆದಾರಿ ಕ್ಯಾಮರಾ ಇಟ್ಟವರು ಮತ್ತು ಇಡಬಯಸುವವರು ಈ ಸವಾಲನ್ನು ಅತ್ಯಂತ ಪ್ರಾಮಾಣಿಕತೆಯಿಂದ ಸ್ವೀಕರಿಸಬೇಕಾಗಿದೆ. ಭಯೋತ್ಪಾದನೆ, ಅತ್ಯಾಚಾರ, ಹತ್ಯಾಕಾಂಡ ಕೋಮುವಾದ... ಇವೆಲ್ಲ ಯಾವುದಾದರೊಂದು ಧಾರ್ಮಿಕ ಪಾಠ ಪುಸ್ತಕದ ಉತ್ಪನ್ನವಲ್ಲ. ಅದೊಂದು ಮನಸ್ಥಿತಿ. ಆ ಮನಸ್ಥಿತಿಯ ಹುಟ್ಟಿಗೆ ಮನೆ, ಪರಿಸರ, ಸಹವಾಸ ಮತ್ತಿತರ ಸಂಗತಿಗಳು ಕಾರಣವೇ ಹೊರತು ನಿರ್ದಿಷ್ಟ ಧರ್ಮಗಳೋ ಅದರ ಕಲಿಕಾ ಕೇಂದ್ರಗಳೋ ಅಲ್ಲ. ಬಂಧನದ ಮೂಲಕ ರಾಮ್‍ಪಾಲ್ ಸಾರಿದ ಈ ಸಂದೇಶವನ್ನು ಮದ್ರಸ ಭಯೋತ್ಪಾದನೆ ಎಂಬ ಸುಳ್ಳು ಭೂತವನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಹಬ್ಬಿಸುತ್ತಿರುವ ಎಲ್ಲರೂ ಕೇಳಿಸಿಕೊಳ್ಳಬೇಕು. ಕೆಡುಕುನ್ನು ನಿರ್ದಿಷ್ಟ ಧರ್ಮಕ್ಕೆ ಅಥವಾ ಸಂಕೇತಗಳಿಗೆ ಸೇರಿಸದೆಯೇ ಜಾತ್ಯತೀತವಾಗಿ ನೋಡುವ ಪ್ರಾಮಾಣಿಕತೆ ಬೆಳೆದು ಬರಬೇಕು. ಮದ್ರಸದ ಕುರಿತಾದ ವರದಿಯ ಮೂಲಕ ಇಂಥದ್ದೊಂದು ಅವಲೋಕನಕ್ಕೆ ಪ್ರೇರಣೆ ಕೊಟ್ಟ ಎಸ್.ಐ.ಓ.ವನ್ನು ಅಭಿನಂದಿಸೋಣ. ಹಾಗೆಯೇ ರಾಮ್‍ಪಾಲ್‍ರಿಗೆ ಕೃತಜ್ಞತೆ ಸಲ್ಲಿಸೋಣ.