Saturday 21 October 2017

ಹಾಲಿವುಡ್‍ನ ಹೆಣ್ಣು ಎತ್ತಿರುವ ಪ್ರಶ್ನೆ

     ಕಳೆದ ಅಕ್ಟೋಬರ್ 12ರಂದು ದಿ ಹಿಂದೂ ಪತ್ರಿಕೆ ಎರಡು ಸುದ್ದಿಗಳನ್ನು ಒತ್ತು ಕೊಟ್ಟು ಪ್ರಕಟಿಸಿತು. ಒಂದು - ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಮತ್ತು ಸಚಿನ್ ತೆಂಡುಲ್ಕರ್ ಅವರು ಜೊತೆಯಾಗಿ ಭಾಗವಹಿಸಿದ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದ್ದರೆ, ಇನ್ನೊಂದು - ಆಸ್ಕರ್ ಪ್ರಶಸ್ತಿ ವಿಜೇತ ಖ್ಯಾತ ಹಾಲಿವುಡ್ ಚಿತ್ರ ನಿರ್ಮಾಪಕ ಹಾರ್ವೆ ವೆನ್‍ಸ್ಟಿನ್‍ಗೆ ಸಂಬಂಧಿಸಿದ್ದು. ‘ಹೆಣ್ಣು ಸಮಸ್ಯೆಯಲ್ಲ, ಪರಿಹಾರ, ಆಕೆ ಸಮಾಜದ ಆಸ್ತಿ..’ ಎಂದೆಲ್ಲ ಸಚಿನ್ ಹೆಣ್ಣನ್ನು ಹೊಗಳಿದರು. `ಅಂತಾರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆಯ’ ಪ್ರಯುಕ್ತ ನಡೆದ ಕಾರ್ಯಕ್ರಮವೆಂಬ ನೆಲೆಯಲ್ಲಿ ಆ ಇಡೀ ಕಾರ್ಯಕ್ರಮದ ಕೇಂದ್ರ ಬಿಂದು ಹೆಣ್ಣು ಆಗಿದ್ದಳು. ಅದೇ ವೇಳೆ, ಈ ಸುದ್ದಿಯ ತುಸು ಕೆಳಗೆ ಇಟಲಿಯ ಖ್ಯಾತ ನಟಿ ಆಸಿಯಾ ಅರ್ಜೆಂಟೋ ಮತ್ತು ಇತರ 10ಕ್ಕಿಂತಲೂ ಹೆಚ್ಚು ನಟಿಯರ ಮೇಲೆ ಹಾರ್ವೆ ವೆನ್‍ಸ್ಟಿನ್ ನಡೆಸಿದ ಲೈಂಗಿಕ ದೌರ್ಜನ್ಯದ ಸುದ್ದಿ ಇತ್ತು. ನ್ಯೂಯಾರ್ಕ್ ಪತ್ರಿಕೆಯ ವರದಿಗಾರ ರೋನನ್ ಫೆರ್ರೋ ಎಂಬವ 10 ತಿಂಗಳ ಕಾಲ ವಿವಿಧ ನಟಿಯರೊಂದಿಗೆ ಸಂದರ್ಶನ ನಡೆಸಿ ಈ ವರದಿಯನ್ನು ತಯಾರಿಸಿದ್ದ. ಈ ವರದಿ ಪ್ರಕಟಣೆಗಿಂತ ಕೆಲವು ಸಮಯಗಳ ಮೊದಲು ಹಾಲಿವುಡ್‍ನ ಖ್ಯಾತ ನಟಿಯರಾದ ಆ್ಯಂಜೆಲಿನಾ ಜೋಲಿ, ರೋಸನ್ನಾ ಅಕ್ರ್ವೆಟ್, ಗೆನೆತ್ ಪಾಲ್ಟ್ರೋ.. ಮುಂತಾದವರು ಹಾಲಿವುಡ್‍ನಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಬಾಯಿ ತೆರೆದಿದ್ದರು. ವಿಶೇಷ ಏನೆಂದರೆ, ಹಾರ್ವೆ ವೆನ್‍ಸ್ಟಿನ್‍ರ ಮೇಲೆ ಗಂಭೀರ ಲೈಂಗಿಕ ಪೀಡನೆಯ ಆರೋಪ ಹೊರಿಸಿದ ನಟಿ ಆಸಿಯಾ ಅರ್ಜೆಂಟೋಗೆ ಈಗ 42 ವರ್ಷ. ಆಕೆಯ ತಂದೆಯಾದರೋ ಖ್ಯಾತ ಚಿತ್ರ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಡಾರಿಯೋ ಅರ್ಜೆಂಟೋ. 20 ವರ್ಷವಿz್ದÁಗಲೇ ಹಾರ್ವೆ ವೆನ್‍ಸ್ಟಿನ್ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಎಂದು ಆಸಿಯಾ ಅರ್ಜೆಂಟೋ ಹೇಳಿದ್ದಾರೆ. ಈ ವರೆಗೂ ಈ ವಿಷಯವನ್ನು ಬಹಿರಂಗಗೊಳಿಸದೇ ಇದ್ದುದಕ್ಕೆ ಆತನ ಭಯ ಕಾರಣ ಎಂದೂ ಆಕೆ ಹೇಳಿದ್ದಾರೆ. ಆಶ್ಚರ್ಯವಾಗುವುದೂ ಇಲ್ಲೇ. ಮಹಿಳಾ ಸಮಾನತೆ, ಸ್ವಾತಂತ್ರ್ಯ, ಸ್ವೇಚ್ಛೆ, ಸ್ವಾಭಿಮಾನ ಇತ್ಯಾದಿ ಇತ್ಯಾದಿಗಳ ಬಗ್ಗೆ ಗಟ್ಟಿ ದನಿಯಲ್ಲಿ ಮಾತಾಡುವ ಕ್ಷೇತ್ರದಲ್ಲೂ ಹೆಣ್ಣು ಶೋಷಿತಳೇ? ಶೋಷಣೆಯನ್ನು 20 ವರ್ಷಗಳ ಕಾಲ ಮುಚ್ಚಿಡುವಷ್ಟು ಆ ಕ್ಷೇತ್ರ ಆಕೆಯ ಪಾಲಿಗೆ ಅಪಾಯಕಾರಿಯೇ? ನಾಗರಿಕ ಸಮಾಜದಲ್ಲಿ ಇರುವಂತೆಯೇ ಅಲ್ಲೂ ಹೆಣ್ಣು ಭಯದಿಂದಲೇ ಬದುಕುತ್ತಿರುವಳೇ? ಹಾಗಿದ್ದರೆ ಆ ಕ್ಷೇತ್ರ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ ತಯಾರಿಸುವ ಸಿನಿಮಾಗಳು ಮತ್ತು ಆ ಸಿನಿಮಾಗಳಲ್ಲಿ ಶೋಷಣೆಯ ವಿರುದ್ಧ ಮಾತಾಡುವ ಹಿರೋಯಿನ್‍ಗಳ ನಿಜ ಸ್ಥಿತಿ ಏನು?
      ಮಹಿಳಾ ಶೋಷಣೆಯ ವಿರುದ್ಧ ಸರಕಾರಗಳು ಎಷ್ಟು ಕಾನೂನುಗಳನ್ನು ರಚಿಸಿವೆಯೋ ಅವೆಲ್ಲಕ್ಕಿಂತ ಎಷ್ಟೋ ಪಟ್ಟು ಅಧಿಕ ಶೋಷಣೆ ವಿರೋಧಿ ಚಿತ್ರಗಳನ್ನು ಸಿನಿಮಾ ಕ್ಷೇತ್ರ ತಯಾರಿಸಿವೆ. ನಿಜವಾಗಿ, ಸರಕಾರದ ಕಾನೂನುಗಳಿಗಿಂತ ಹೆಚ್ಚು ಸಮಾಜವನ್ನು ಆಕರ್ಷಿಸುವುದು ಸಿನಿಮಾಗಳು. ಹೆಣ್ಣನ್ನು ಆಸ್ತಿಯೆಂದೋ ಪುರುಷರಿಗೆ ಸಮಾನವೆಂದೋ ಪ್ರತಿಭಾ ಸಂಪನ್ನಳೆಂದೋ ಓರ್ವ ರಾಜಕಾರಣಿ ಹೇಳುವುದಕ್ಕೂ ಸಿನಿಮಾ ನಿರ್ದೇಶಕ ಹೇಳುವುದಕ್ಕೂ ತುಂಬಾ ವ್ಯತ್ಯಾಸ ಇದೆ. ಅಲ್ಲೊಂದು ಕತೆ ಇರುತ್ತದೆ. ಪಾತ್ರಧಾರಿಗಳಿರುತ್ತಾರೆ. ಕ್ಯಾಮರಾ ಕೈ ಚಳಕವಿರುತ್ತದೆ. ಡಯಲಾಗ್‍ಗಳಿರುತ್ತವೆ. ಎಲ್ಲಕ್ಕಿಂತ ಮಿಗಿಲಾಗಿ ಒಂದು ದೊಡ್ಡ ತಂಡದ ಶ್ರಮ ಇರುತ್ತದೆ. ನಾಗರಿಕ ಸಮಾಜದಲ್ಲಿ ಹೆಣ್ಣು ಅನುಭವಿಸುತ್ತಿರುವ ಯಾತನೆ, ಹಕ್ಕು ಹರಣ, ಅಸ್ವಾತಂತ್ರ್ಯ, ಶೋಷಣೆಗಳನ್ನೆಲ್ಲ ಅತ್ಯಂತ ಸೊಗಸಾಗಿ ಹೇಳುವ ಮಾಧ್ಯಮವಾಗಿ ಸಿನಿಮಾ ಕ್ಷೇತ್ರ ಇವತ್ತು ಬೆಳೆದು ಬಿಟ್ಟಿದೆ. ವಿಶೇಷ ಏನೆಂದರೆ, ಸಿನಿಮಾ ಕ್ಷೇತ್ರದಿಂದ ಬಿಡುಗಡೆಯಾಗುವ ಚಿತ್ರಗಳು ಮಹಿಳಾ ವಿರೋಧಿ ಅನ್ನಿಸಿಕೊಂಡದ್ದು ಬಹಳ ಬಹಳ ಕಡಿಮೆ. ಭಾಷಾವಾರು ಚಿತ್ರಗಳು ಕೆಲವೊಮ್ಮೆ ಇಂಥ ಅಪವಾದಗಳನ್ನು ಹೊತ್ತಿರಬಹುದು. ಆದರೆ ಬಾಲಿವುಡ್ ಮತ್ತು ಹಾಲಿವುಡ್‍ಗಳು ಯಾವತ್ತೂ ಹೆಣ್ಣಿನ ಸ್ವಾತಂತ್ರ್ಯ, ಸ್ವೇಚ್ಛೆ, ಸ್ವಾಭಿಮಾನ, ಹಕ್ಕು, ಧೈರ್ಯಗಳ ಪರವೇ ನಿಂತಿದೆ. ಅತ್ಯಾಚಾರ ಯತ್ನದ ಸಮಯದಲ್ಲಿ ಆಕೆ ಹೇಗೆ ತಪ್ಪಿಸಿಕೊಳ್ಳಬೇಕು, ಬೆದರಿಕೆಗಳನ್ನು ಹೇಗೆ ಮೆಟ್ಟಿ ನಿಲ್ಲಬೇಕು, ಶೋಷಣೆಯನ್ನು ಹೇಗೆ ಎದುರಿಸಬೇಕು, ಕೋರ್ಟ್‍ನಲ್ಲಿ ಹೇಗೆ ವಾದಿಸಬೇಕು, ಅಧಿಕಾರಿಯಾಗಿ ಹೇಗೆ ಒತ್ತಡಗಳನ್ನು ಮೀರಿ ಹೊಣೆ ನಿಭಾಯಿಸಬೇಕು, ಶೋಷಕರನ್ನು ಹೇಗೆ ದಂಡಿಸಬೇಕು.. ಇಂಥ ನೂರಾರು ಪಾಠಗಳನ್ನು ಅವು ಹೇಳಿ ಕೊಟ್ಟಿವೆ ಮತ್ತು ಈಗಲೂ ಹೇಳಿ ಕೊಡುತ್ತಿವೆ. ಆದ್ದರಿಂದಲೇ, ಸಾಮಾನ್ಯ ಜನರು ಇವತ್ತಿಗೂ ಸಿನಿಮಾ ಕ್ಷೇತ್ರಗಳಲ್ಲಿರುವ ಹೆಣ್ಣನ್ನು ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಪಡೆಯುತ್ತಿರುವ ಬಲಶಾಲಿಗಳು ಎಂದೇ ತಿಳಿದುಕೊಂಡಿದ್ದಾರೆ. ಅವರು ಶೋಷಣೆಗೆ ಒಳಗಾಗಲ್ಲ ಅಂದುಕೊಂಡಿದ್ದಾರೆ. ಒಂದು ವೇಳೆ, ಯಾರಾದರೂ ಆಕೆಯನ್ನು ಶೋಷಿಸುವ ಪ್ರಯತ್ನ ಮಾಡಿದಲ್ಲಿ ಆಕೆ ಸಿಡಿಯುವಳು ಎಂದೂ ನಂಬಿದ್ದಾರೆ.. ದುರಂತ ಏನೆಂದರೆ, ಪರದೆಯಲ್ಲಿ ಅದ್ಭುತವಾಗಿ ಮಹಿಳಾ ಹಕ್ಕಿನ ಬಗ್ಗೆ ಮಾತಾಡುವ ಹೀರೋಯಿನ್ ಪರದೆಯ ಹಿಂದೆ ಮೌನ ವಹಿಸುತ್ತಾಳೆ ಅಥವಾ ಮೌನಿಯಾಗಲೇಬೇಕಾದ ಭಯದ ವಾತಾವರಣ ಇದೆ. ಅಲ್ಲೂ ಲೈಂಗಿಕ ಶೋಷಣೆ ಇದೆ ಎಂಬುದನ್ನು ಇತ್ತೀಚೆಗಷ್ಟೇ ಕೇರಳದ ಪ್ರಮುಖ ನಟಿಯೊಬ್ಬರು ಬಹಿರಂಗಪಡಿಸಿದ್ದರು. ಇದು ಪರದೆಯಲ್ಲಿ ಹೀರೋಯಿನ್ ಆಗಿ ಮೆರೆಯುವ ಹೆಣ್ಣಿನ ಬದುಕು. ಹಾಲಿವುಡ್ ಅನ್ನುವುದು ಅಂತಾರಾಷ್ಟ್ರೀಯ ಸಿನಿಮಾ ಕ್ಷೇತ್ರ. ಆ ಕ್ಷೇತ್ರದಲ್ಲೇ ಇಷ್ಟು ಪ್ರಮಾಣದ ಮಹಿಳಾ ಶೋಷಣೆ ಇದೆ ಎಂದರೆ ಮತ್ತು ಅದನ್ನು ಹೇಳಿಕೊಳ್ಳಲಾಗದಷ್ಟು ಭಯದ ವಾತಾವರಣ ಇದೆ ಎಂದರೆ ಇನ್ನು ಈ ಸಮಾಜದ ಬಗ್ಗೆ ಹೇಳುವುದಕ್ಕೇನಿದೆ?     
       ನಿಜವಾಗಿ, ಈ ಜಗತ್ತು ಹೆಣ್ಣಿನ ಪಾಲಿಗೆ ಶೋಷಣೆ ಮುಕ್ತ ಮತ್ತು ಭಯಮುಕ್ತವಾಗಬೇಕಾಗಿದೆ. ಪುರುಷ ಹೇಗೆ ಶೋಷಣೆ ಮುಕ್ತ ವಾತಾವರಣವನ್ನು ಬಯಸುತ್ತಾನೋ ಹಾಗೆಯೇ ಹೆಣ್ಣೂ ಬಯಸುತ್ತಾಳೆ. ದುರಂತ ಏನೆಂದರೆ, ಹೆಣ್ಣನ್ನು ಬಳಸಿಕೊಂಡು ಶೋಷಣೆಮುಕ್ತ ಸಂದೇಶವನ್ನು ನೀಡುವ ವ್ಯಕ್ತಿಯೇ ಆಕೆಯನ್ನು ಶೋಷಿಸುತ್ತಾನೆ. ಚರ್ಚೆ ಹುಟ್ಟಿಕೊಳ್ಳಬೇಕಾದುದು ಇಲ್ಲೇ. ಹೆಣ್ಣಿನ ಸುರಕ್ಷಿತತೆಗೆ ಯಾರು ಅಡ್ಡಿ? ಯಾವುದು ಅಡ್ಡಿ? ಎಲ್ಲಿ ಅಡ್ಡಿ? ಶೋಷಣೆಯ ಬೇರುಗಳು ಎಲ್ಲೆಲ್ಲಿ ಇವೆ? ಅವನ್ನು ಗುರುತಿಸುವುದು ಹೇಗೆ? ಕಾನೂನು ಕಟ್ಟಳೆಗಳು ಹೆಣ್ಣಿನ ಪಾಲಿಗೆ ಒಂದು ಹಂತದ ವರೆಗೆ ನೆಮ್ಮದಿಯನ್ನು ಕೊಡಬಹುದು. ಆದರೆ, ಸಾಮಾಜಿಕ ಮನಸ್ಥಿತಿಯನ್ನು ಸಂಪೂರ್ಣವಾಗಿ ಅವು ಬದಲಿಸಲಾರವು. ಆದ್ದರಿಂದ ಹೆಣ್ಣು ಸ್ವತಃ ತನ್ನೊಳಗೆ ಕೆಲವು ಪ್ರಶ್ನೆಗಳನ್ನು ಹಾಕಿಕೊಳ್ಳಬೇಕು. ತಾನು ಯಾಕೆ ಅಸುರಕ್ಷಿತೆ? ತನ್ನನ್ನು ಅಸುರಕ್ಷಿತೆಯನ್ನಾಗಿ ಮಾಡಿದುದು ಯಾರು? ಯಾವುದು? ಹೆಣ್ಣಿನಿಂದ ಶೋಷಣೆಯ ಭೀತಿಯನ್ನು ಪುರುಷನೇಕೆ ಅನುಭವಿಸುತ್ತಿಲ್ಲ? ಯಾಕೆ ಎಲ್ಲವೂ ಏಕಮುಖವಾಗಿದೆ? ಹೆಣ್ಣು ಸ್ನೇಹಿ ಜಗತ್ತನ್ನು ನಿರ್ಮಿಸುವುದಕ್ಕೆ ಏನೆಲ್ಲ ಬದಲಾವಣೆ ಆಗಬೇಕು? ಅದಕ್ಕೆ ಯಾವುದು ಆಧಾರವಾಗಬೇಕು? ಕಾನೂನುಗಳಾಚೆ ಮತ್ತು ಸಿನಿಮಾಗಳಾಚೆ ಒಂದು ಸಂತುಲಿತ ಮನಸ್ಥಿತಿಯನ್ನು ಸಮಾಜದಲ್ಲಿ ತಯಾರಿಸುವುದು ಹೇಗೆ? ಇದರಲ್ಲಿ ಹೆಣ್ಣು ಮತ್ತು ಗಂಡಿನ ಪಾತ್ರ ಹಾಗೂ ಹೊಣೆಗಾರಿಕೆಗಳು ಏನೇನು?
ಚರ್ಚೆ ನಡೆಯಲಿ.



No comments:

Post a Comment