Friday 26 January 2018

ಸುಖ ಮರಣಕ್ಕಾಗಿ ಪತ್ರ ಬರೆಯುವ ಹೆತ್ತವರು..

     ಕಳೆದವಾರ ಎರಡು ಗಮನಾರ್ಹ ಸುದ್ದಿಗಳು ಪ್ರಕಟವಾದುವು. ಒಂದು- ಮುಂಬೈಯ ದಂಪತಿಗಳದ್ದಾದರೆ, ಇನ್ನೊಂದು- ಮಾಜಿ ಚುನಾವಣಾ ಆಯುಕ್ತ ಟಿ.ಎನ್. ಶೇಷನ್‍ರಿಗೆ ಸಂಬಂಧಿಸಿದ್ದು. ಮುಂಬೈಯ 88 ವರ್ಷದ ನಾರಾಯಣ ರಾವತೆ ಮತ್ತು 78 ವರ್ಷದ ಇರವತಿ ದಂಪತಿಗಳು ಇತ್ತೀಚೆಗೆ ರಾಷ್ಟ್ರಪತಿ ರಮಾನಾಥ ಕೋವಿಂದ್‍ರಿಗೆ ಬರೆದ ಪತ್ರದ ಕುರಿತಾದ ಸುದ್ದಿ ಇದು. ತಮಗೆ ದಯಾ ಮರಣಕ್ಕೆ ಅನುಮತಿ ನೀಡಬೇಕು ಎಂದವರು ಪತ್ರದಲ್ಲಿ ಕೋರಿದ್ದರು. ಮಹಾರಾಷ್ಟ್ರ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅಧಿಕಾರಿಯಾಗಿ ನಿವೃತ್ತರಾಗಿರುವ ರಾವತೆ ಮತ್ತು ಶಾಲಾ ಪ್ರಾಂಶುಪಾಲರಾಗಿ ನಿವೃತ್ತರಾಗಿರುವ ಇರವತಿಯವರು ತಮ್ಮ ದಯಾ ಮರಣಕ್ಕೆ ಕಾರಣಗಳನ್ನು ಕೊಟ್ಟಿದ್ದರು. ಇನ್ನು ತಾವು ಬದುಕಿ ಉಳಿದು ಸಾಧಿಸುವುದಕ್ಕೇನೂ ಇಲ್ಲ ಎಂಬುದು ಅವರ ನಿಲುವು. ಮಕ್ಕಳಿಲ್ಲ, ಒಡಹುಟ್ಟಿದವರೂ ಜೀವಂತವಿಲ್ಲ. ಸಾವನ್ನು ಎದುರು ನೋಡುತ್ತಾ ಬದುಕುವುದಕ್ಕಿಂತ ಜೊತೆಯಾಗಿ ಸುಖಮರಣ ಹೊಂದುವುದು ಉತ್ತಮ ಎಂದು ಅವರು ಪತ್ರದಲ್ಲಿ ಬರೆದಿದ್ದರು. ತಾವು ವಾಸಿಸುವ ಮನೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದು ಮತ್ತು ಆ ಬಳಿಕ ನಿರ್ಧಾರದಿಂದ ಹಿಂದೆ ಸರಿದದ್ದನ್ನೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು. ಜಿಗಿದೂ ಸಾಯದಿದ್ದರೆ.. ಎಂಬ ಭಯವೇ ಜಿಗಿಯದಿರುವುದಕ್ಕೆ ಕಾರಣ ಎಂದೂ ಹೇಳಿದ್ದರು.
       ಇನ್ನೊಂದು- 85 ವರ್ಷದ ಟಿ.ಎನ್. ಶೇಷನ್ ಅವರದ್ದು. ಅವರು ಮತ್ತು ಅವರ ಪತ್ನಿ ಜಯಲಕ್ಷ್ಮಿಯವರು ಸದ್ಯ ಚೆನ್ನೈಯ ಗುರುಕುಲಂ ವೃದ್ಧಾಶ್ರಮದಲ್ಲಿದ್ದಾರೆ. ಹಲವು ಕಾಯಿಲೆಗಳು ಅವರನ್ನು ಮುತ್ತಿಕೊಂಡಿವೆ.
     ಅಷ್ಟಕ್ಕೂ, ರಾವತೆ ದಂಪತಿಗಳ ಪತ್ರವನ್ನು ಎತ್ತಿಕೊಂಡು ದಯಾಮರಣ ಬೇಕೋ ಬೇಡವೋ ಎಂದು ಚರ್ಚಿಸುವುದು ಸುಲಭ. ಸ್ವಿಝರ್‍ಲ್ಯಾಂಡ್‍ನಲ್ಲಿ ದಯಾಮರಣಕ್ಕೆ ಅನುಮತಿ ಇದೆ ಎಂದು ಹೇಳಿಕೊಂಡು ಚರ್ಚೆಯನ್ನು ಅತ್ಯಂತ ರೋಚಕ ಮಟ್ಟಕ್ಕೆ ಒಯ್ಯುವುದಕ್ಕೂ ಅವಕಾಶ ಇದೆ. ದಯಾ ಮರಣವೆಂಬುದು ವೈದ್ಯರ ಮೇಲ್ನೋಟದಲ್ಲಿ ಒದಗಿಸುವ ಸಾವು. ಸ್ವಿಸ್‍ನಲ್ಲಿ ಇದಕ್ಕಾಗಿ ಡಿಗ್ನಿಟಾಸ್ ಎಂಬ ಹೆಸರಿನ ಸಂಘಟನೆಯೇ ಇದೆ. ದಯಾ ಮರಣವನ್ನು ಬಯಸುವವರಿಗೆ ಅದು ನೆರವನ್ನು ನೀಡುತ್ತದೆ. ಇವು ಮತ್ತು ಇಂಥ ಹತ್ತು ಹಲವು ಉದಾಹರಣೆಗಳನ್ನು ಹರಡಿಕೊಂಡು ಈ ದೇಶದಲ್ಲೂ ದಯಾ ಮರಣಕ್ಕೆ ಸರಕಾರ ಸೂಕ್ತ ಕಾನೂನು ರೂಪಿಸಬೇಕು ಎಂದು ಚರ್ಚೆಯ ಮೂಲಕ ಒತ್ತಾಯಿಸಬಹುದು.
     ನಿಜವಾಗಿ, ರಾವತೆ ಅವರ ಪತ್ರ ಬಯಸುವುದು ಸುಖ ಮರಣದ ಚರ್ಚೆಯನ್ನಲ್ಲ. ಇಂಥದ್ದೊಂದು ಪತ್ರ ಬರೆಯಲು ಕಾರಣವಾಗಿಸಿದ ಅಂಶಗಳನ್ನು ಅದು ಚರ್ಚಿಸ ಬಯಸುತ್ತದೆ. ವೃದ್ಧಾಪ್ಯ ಎಂಬುದು ಈ ದೇಶದಲ್ಲಿ ರಾವತೆ ದಂಪತಿಗಳಿಗೆ ಮಾತ್ರ ಶಾಪ ಆಗಿರುವುದಲ್ಲ. ಕಳೆದ ವರ್ಷ ಪ್ರಕಟವಾದ ವರದಿಗಳ ಪ್ರಕಾರ, ಸುಮಾರು 70%ಕ್ಕಿಂತಲೂ ಅಧಿಕ ವೃದ್ಧರು ತಮ್ಮ ಮನೆಗಳಲ್ಲಿ ಮಾನಸಿಕ ಯಾತನೆಯನ್ನು ಅನುಭವಿಸುತ್ತಿದ್ದಾರೆ.  ಜಯಶ್ರೀ ಬೆನ್ ಎಂಬ ಕಾಯಿಲೆ ಪೀಡಿತ ತನ್ನ ತಾಯಿಯನ್ನು  ವೃತ್ತಿಯಲ್ಲಿ ಪ್ರೊಫೆಸರ್ ಆಗಿರುವ ಸಂದೀಪ್ ನಾಥ್ ವಾನಿ ಎಂಬ ಮಗ ಮನೆಯ ಟೆರೇಸ್‍ನಿಂದ ಕೆಳಕ್ಕೆ ತಳ್ಳಿ  ಹತ್ಯೆ ಮಾಡಿದ ಘಟನೆ ವಾರಗಳ ಹಿಂದೆ ಗುಜರಾತ್ ನಿಂದ  ವರದಿಯಾಗಿತ್ತು. ಭಿಕ್ಷೆ ಬೇಡಿ ಬದುಕುವ ಅಸಂಖ್ಯ ಮಂದಿ ವೃದ್ಧರು ಈ ದೇಶದಲ್ಲಿದ್ದಾರೆ. ಬಸ್ಸು, ರೈಲು ನಿಲ್ದಾಣಗಳು, ಜನ ನಿಬಿಡ ಪ್ರದೇಶಗಳಲ್ಲಿ ಇವರನ್ನು ನಾವು ನೋಡಿಯೂ ಇರುತ್ತೇವೆ. ಹೃದಯ ತುಂಬಾ ಯಾತನೆಗಳನ್ನು ಹೊತ್ತುಕೊಂಡು ನಡೆಯುವ ಮಂದಿ. ಅಲ್ಲದೇ, ಈ ದೇಶದಲ್ಲಿ ಅನೇಕಾರು ವೃದ್ಧಶ್ರಮಗಳಿವೆ. ಅಲ್ಲಿರುವವರೆಲ್ಲ ಸ್ವಇಚ್ಛೆಯಿಂದ ಬಂದು ಸೇರಿಕೊಂಡವರಲ್ಲ. ಅವರಲ್ಲೂ ನೂರಾರು ದೂರುಗಳಿವೆ. ಅಲ್ಲದೇ ಹೀಗೆ ವೃದ್ಧಾಶ್ರಮವನ್ನು ಸೇರಿಕೊಳ್ಳದೇ, ಭಿಕ್ಷಾಟನೆಯಲ್ಲೂ ಕಾಣಿಸಿಕೊಳ್ಳದೇ ತಂತಮ್ಮ ಮನೆಗಳಲ್ಲೇ ಕೈದಿಗಳಂತೆ ಬದುಕುವ ಅಸಂಖ್ಯ ಮಂದಿ ನಮ್ಮ ನಡುವೆ ಇದ್ದಾರೆ. ಒಂದು ಕಡೆ- ಪ್ರಾಯ ಸಹಜ ದಣಿವು, ಇನ್ನೊಂದು ಕಡೆ- ಕಾಯಿಲೆಗಳು, ಮತ್ತೊಂದು ಕಡೆ ತಮ್ಮವರಿಂದ ಸಿಗದ ಪ್ರೀತಿ ಮತ್ತು ವಾತ್ಸಲ್ಯಗಳು ಅವರನ್ನು ತೀವ್ರವಾಗಿ ನೋಯಿಸಿರುತ್ತವೆ. ಹಾಗಂತ, ಇವಕ್ಕೆಲ್ಲ ದಯಾಮರಣ ಉತ್ತರವಾಗಬಹುದೇ? ಸಾವನ್ನು ಪರಿಹಾರವಾಗಿ ಕಾಣುವುದೆಂದರೆ, ಸಮಸ್ಯೆಗಳಿಗೆ ಬೆನ್ನು ತಿರುಗಿಸುವುದು ಎಂದರ್ಥ. ಸಾಯುವುದು ಕಷ್ಟಕರವೇನೂ ಅಲ್ಲ. ಸಾಯುವುದಕ್ಕೆ ನೂರಾರು ದಾರಿಗಳು ನಮ್ಮ ಎದುರು ತೆರೆದೇ ಇವೆ. ಈ ಸುಲಭದ ದಾರಿಯ ಮೇಲೆ ಚರ್ಚಿಸುವುದೆಂದರೆ ನಿಜವಾಗಿ ಸಮಸ್ಯೆಗಳಿಗೆ ಪರಿಹಾರ ದೊರಕಲಾರದು. ಸದ್ಯ ನಾವು ನಡೆಸಬೇಕಾದ ಚರ್ಚೆ ಏನೆಂದರೆ, ರಾವತೆ ದಂಪತಿಗಳು ದಯಾ ಮರಣವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಕಾರಣಗಳೇನು ಎಂಬುದು. ತೀವ್ರ ಮಟ್ಟದ ಯಾವ ಕಾಯಿಲೆಯೂ ಇಲ್ಲದ ಇವರು ಸಾಯಲು ನಿರ್ಧರಿಸಿರುವುದಕ್ಕೆ ಒಂದೋ ಒಂಟಿತನ ಅಥವಾ ಮುಂದಿನ ದಿನಗಳು ಹೇಗೋ ಎಂಬ ಭಯವೇ ಕಾರಣ. ಹಾಗಂತ, ಇದು ಇವರಿಬ್ಬರ ಇಚ್ಛೆ ಮಾತ್ರ ಎಂದು ಹೇಳಬೇಕಿಲ್ಲ. ಈ ದೇಶದಲ್ಲಿ ಹೀಗೆ ಸಾವನ್ನು ಬಯಸುವ ವೃದ್ಧರು ಅನೇಕ ಇರಬಹುದು. ಅದಕ್ಕಿರುವ ಕಾರಣಗಳಲ್ಲಿ ಹೆಚ್ಚಿನವು ಮನುಷ್ಯ ನಿರ್ಮಿತವೇ ಹೊರತು ಪ್ರಕೃತಿ ನಿರ್ಮಿತವಲ್ಲ.
     ಇವತ್ತು ಯಾರೆಲ್ಲ ವೃದ್ಧಾಪ್ಯಕ್ಕೆ ತಲುಪಿದ್ದಾರೋ ಅವರೆಲ್ಲ ಆ ರೂಪದಲ್ಲಿಯೇ ಜನಿಸಿದವರಲ್ಲ. ಅವರು ಮಗುತನ, ಯೌವನ ಮತ್ತು ಮಧ್ಯ ವಯಸ್ಸನ್ನು ದಾಟಿಯೇ ವೃದ್ಧಾಪ್ಯಕ್ಕೆ ತಲುಪಿದ್ದಾರೆ. ವೃದ್ಧಾಪ್ಯಕ್ಕಿಂತ ಮೊದಲಿನ ದೀರ್ಘ ಅವಧಿಯಲ್ಲಿ ಅವರು ಈ ದೇಶಕ್ಕೆ ಮತ್ತು ತಮ್ಮ ಕುಟುಂಬಕ್ಕೆ ದೊಡ್ಡದೊಂದು ಕೊಡುಗೆಯನ್ನು ಸಲ್ಲಿಸಿರುತ್ತಾರೆ. ಆ ಕೊಡುಗೆಯ ಪ್ರಮಾಣವನ್ನು ಪರಿಗಣಿಸಿದರೆ ಅವರನ್ನು ಸುಖಕರವಾಗಿ ನೋಡಿಕೊಳ್ಳುವುದಕ್ಕೆ ಇನ್ನಾವುದರ ಅಗತ್ಯವೂ ಬರಲಾರದು. ಮುಖ್ಯವಾಗಿ, ವೃದ್ಧರ ಮೇಲೆ ಮಕ್ಕಳ ಹಕ್ಕುಗಳಿವೆ. ಒಡ ಹುಟ್ಟಿದವರ ಹಕ್ಕುಗಳಿವೆ. ಸಮಾಜದ ಹಕ್ಕುಗಳಿವೆ ಮತ್ತು ಸರಕಾರದ ಜವಾಬ್ದಾರಿಗಳೂ ಇವೆ. ವೃದ್ಧರು ಮಕ್ಕಳ ಪಾಲಿಗೋ ಸಮಾಜದ ಪಾಲಿಗೋ ಅಥವಾ ಸರಕಾರಕ್ಕೋ ಭಾರವಲ್ಲ, ಅವರು ಆಸ್ತಿ. ದುರಂತ ಏನೆಂದರೆ, ಸಾಮಾಜಿಕ ಸಂಬಂಧಗಳು ಇವತ್ತು ದಿನೇ ದಿನೇ ಸಂಕೀರ್ಣವಾಗುತ್ತಾ ಹೋಗುತ್ತಿದೆ. ಮಕ್ಕಳು ತಮ್ಮ ಹೆತ್ತವರ ಕೊಡುಗೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಸಮಾಜಕ್ಕೂ ಕೆಲವೊಮ್ಮೆ ಕುರುಡುತನ ಬಾಧಿಸುತ್ತದೆ. ಸರಕಾರವಂತೂ ಇವರನ್ನು ಭಾರ ಜೀವಿಗಳಾಗಿ ನಿರ್ಲಕ್ಷಿಸುವುದೂ ನಡೆಯುತ್ತದೆ. ಹಿರಿಯರ ಕಲ್ಯಾಣದ ದೃಷ್ಟಿಯಿಂದ ಈ ದೇಶದಲ್ಲಿ ಏನೇನು ಕಾಯಿದೆ-ಕಾನೂನುಗಳಿವೆ ಎಂಬುದು ಬಹುತೇಕ ಹಿರಿಯರಿಗೂ ಗೊತ್ತಿರುವುದಿಲ್ಲ. ಸಮಾಜಕ್ಕೂ ಅರಿವಿರುವುದಿಲ್ಲ. ಹಿರಿಯರಿಗೆ ಪ್ರತಿಭಟಿಸುವ ಸಾಮಥ್ರ್ಯ ಇಲ್ಲವಾದುದರಿಂದ ಅವರ ಸಂಕಟ ಸಮಾಜದ ಮುಂದೆ ವ್ಯಕ್ತವಾಗುವುದೂ ಇಲ್ಲ. ಮನೆಯೆಂಬ ನಾಲ್ಕು ಗೋಡೆಯೊಳಗೆ ನೋವು ಅನುಭವಿಸುತ್ತಲೋ ಅಥವಾ ಮನೆಯಿಂದ ಹೊರದಬ್ಬಿಸಿಕೊಂಡು ಭಿಕ್ಷಾಟನೆಯಲ್ಲೋ ಅವರು ಆಯುಷ್ಯವನ್ನು ಕಳೆಯುತ್ತಿರುತ್ತಾರೆ. ಇದು ಅತ್ಯಂತ ವಿಷಾದನೀಯ. ಮೊದಲನೆಯದಾಗಿ, ಪ್ರತಿ ಹಿರಿಯರಿಗೂ ಸುಖಮಯ ಬದುಕಿನ ಖಾತರಿಯನ್ನು ನಮ್ಮ ವ್ಯವಸ್ಥೆ ನೀಡಬೇಕು. ಅವರ ಕಲ್ಯಾಣಕ್ಕಾಗಿ ಸೂಕ್ತ ಯೋಜನೆಗಳನ್ನು ರೂಪಿಸಬೇಕು. ಪ್ರತಿ ಮನೆಯ ವೃದ್ಧರ ಗಣತಿ ಮಾಡುವುದರೊಂದಿಗೆ ಅವರ ಸ್ಥಿತಿಗತಿಯ ಬಗ್ಗೆ ಮಾಹಿತಿ ಸಂಗ್ರಹವಾಗಬೇಕು. ಅವರಿಗೆ ಸರಕಾರದ ಯೋಜನೆಗಳು ಲಭ್ಯವಾಗುತ್ತಿವೆಯೋ ಎಂಬುದನ್ನು ನೋಡಿಕೊಳ್ಳಬೇಕು.
      ಧರ್ಮಶ್ರದ್ಧೆಯುಳ್ಳ ದೇಶವೊಂದರಲ್ಲಿ ಹೆತ್ತವರು ನಿರಾಶೆಯಿಂದ ಬದುಕುವುದೆಂದರೆ ಅದು ಮಕ್ಕಳ ಪಾಲಿಗೆ ಅವಮಾನಕರ. ಧರ್ಮಗಳಂತೂ ಹೆತ್ತವರ ಸೇವೆಯ ಬಗ್ಗೆ ದಾರಾಳವಾಗಿ ಹೇಳಿವೆ. ಇಸ್ಲಾಮ್ ಧರ್ಮವಂತೂ, ಹೆತ್ತವರ ತೃಪ್ತಿಯೇ ಮಕ್ಕಳ ಸ್ವರ್ಗ ಮತ್ತು ಅವರ ಅತೃಪ್ತಿಯೇ ಮಕ್ಕಳ ನರಕ ಎಂದು ಎಚ್ಚರಿಸಿದೆ. ಒಂದು ರೀತಿಯಲ್ಲಿ, ಹಿರಿಯರೆಂದರೆ ಕಿರಿಯರಿಗೆ ಸ್ವರ್ಗದ ಬಾಗಿಲುಗಳು. ಆ ಬಾಗಿಲುಗಳನ್ನು ಜೋಪಾನವಾಗಿ ಕಾಯೋಣ. ಸುಖಿ ಮರಣಕ್ಕಾಗಿ ಪತ್ರ ಬರೆಯುವ ಸ್ಥಿತಿಗೆ ಅವರನ್ನು ತಳ್ಳದಿರೋಣ.

No comments:

Post a Comment