Tuesday 3 April 2018

ಜಾರ್ಖಂಡ್‍ನ 11 ಮಂದಿ ಮತ್ತು ಗೋವು

     ಗೋಮಾಂಸ ನಿಷೇಧದ ಹೆಸರಲ್ಲಿ ಬಿಜೆಪಿ ನಡೆಸುತ್ತಿರುವ ಭಾವನಾತ್ಮಕ ರಾಜಕೀಯವು ಎಷ್ಟು ಅಪಾಯಕಾರಿ ಎಂಬುದನ್ನು ಜಾರ್ಖಂಡ್‍ನ ತ್ವರಿತಿಗತಿ ನ್ಯಾಯಾಲಯವು ಸ್ಪಷ್ಟಪಡಿಸಿದೆ. 2017 ಜೂನ್ 29ರಂದು ಜಾರ್ಖಂಡ್‍ನ ರಾಮ್‍ಗರ್ ಎಂಬಲ್ಲಿ ಅಲೀಮುದ್ದೀನ್ ಅನ್ಸಾರಿ ಎಂಬವರನ್ನು ಗುಂಪೊಂದು ಥಳಿಸಿ ಕೊಂದಿತ್ತು. ಕೊಲೆಗಾರರಲ್ಲಿ ಸ್ಥಳೀಯ ಬಿಜೆಪಿ ನಾಯಕ ನಿತ್ಯಾನಂದ ಮಹತೋ ಕೂಡ ಸೇರಿದ್ದ. ಮಾಂಸ ಸಾಗಾಟದ ಶಂಕೆಯು ಹತ್ಯೆಗೆ ಕಾರಣವಾಗಿತ್ತು. ಇದೀಗ ತ್ವರಿತಗತಿ ನ್ಯಾಯಾಲಯವು ಮಹತೋ ಸೇರಿದಂತೆ 11 ಮಂದಿ ಆರೋಪಿಗಳನ್ನು ಅಪರಾಧಿಗಳು ಎಂದು ತೀರ್ಮಾನಿಸಿದೆ. ಇನ್ನು, ಈ ಅಪರಾಧಿಗಳು ಒಂದೋ ಜೈಲು ಸೇರಬೇಕು ಅಥವಾ ಹೈಕೋರ್ಟ್‍ಗೆ ಮನವಿ ಸಲ್ಲಿಸಿ ಕೋರ್ಟು-ಕಚೇರಿ ಎಂದು ಅಲೆದಾಡಬೇಕು. ಜೊತೆಗೇ ಇವರನ್ನು ಅವಲಂಬಿಸಿರುವ ಕುಟುಂಬ ಇದರ ಪರಿಣಾಮವನ್ನು ಅನುಭವಿಸಬೇಕು. ಇದು ಈ ಪ್ರಕರಣದ ಒಂದು ಮುಖವಾದರೆ, ಇದರ ಇನ್ನೊಂದು ಮುಖ ಅತ್ಯಂತ ಧಾರುಣವಾದುದು. ಈ ಹತ್ಯೆ ಅಚಾನಕ್ ಆಗಿರುವುದಲ್ಲ. ಅದರ ಹಿಂದೆ ವ್ಯವಸ್ಥಿತ ಪ್ರಚೋದನೆಯಿದೆ. ಗೋವಿನ ಹೆಸರಲ್ಲಿ ಹುಟ್ಟುಹಾಕಲಾದ ಆವೇಶಭರಿತ ಭ್ರಮೆಯು ಆ ಹತ್ಯೆಯನ್ನು ಸಾಧ್ಯವಾಗಿಸಿದೆ. ಹಾಗಂತ, ಈ ಭ್ರಮೆಯನ್ನು ಬಿತ್ತಿದ ಪಕ್ಷವು ನಿಜಕ್ಕೂ ಗೋಹತ್ಯೆ ನಿಷೇಧವನ್ನು ಪ್ರಾಮಾಣಿಕವಾಗಿ ಬಯಸುತ್ತಿದೆಯೇ ಎಂದು ಹುಡುಕ ಹೊರಟರೆ ಈ 11 ಅಪರಾಧಿಗಳಿಗೆ ಆಘಾತವಾಗಬಹುದು. ಜಾರ್ಖಂಡ್‍ನಲ್ಲಿ ಗೋಮಾಂಸ ಸೇವನೆಯನ್ನು ನಿಷೇಧಿ ಸಿರುವ ಬಿಜೆಪಿಯು ತ್ರಿಪುರ, ಗೋವಾ, ನಾಗಾಲ್ಯಾಂಡ್‍ಗಳಲ್ಲಿ ಗೋಹತ್ಯೆ ಮತ್ತು ಗೋಮಾಂಸ ಸೇವನೆಯನ್ನು ಬೆಂಬಲಿಸುತ್ತಿದೆ. ಇದರ ಅರ್ಥವೇನು? ಜಾರ್ಖಂಡ್‍ನಲ್ಲಿ ಗೋಮಾಂಸ ಸೇವನೆಯ ವಿರುದ್ಧ ಜನರನ್ನು ಎತ್ತಿ ಕಟ್ಟಿದ ಪಕ್ಷವೊಂದು ತನ್ನದೇ ಅಧಿಕಾರವಿರುವ ಗೋವಾ, ನಾಗಾಲ್ಯಾಂಡ್ ಮತ್ತು ತ್ರಿಪುರಗಳಲ್ಲಿ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದೇಕೆ? ಗೋಹತ್ಯೆ ನಿಷೇಧ ಎಂಬ ಕೂಗಿನ ಹಿಂದೆ ಪ್ರಾಮಾಣಿಕತೆ ಇದ್ದಿದ್ದೇ ಆದಲ್ಲಿ, ಇಡೀ ಭಾರತದಲ್ಲಿ ಆ ಕೂಗಿನಲ್ಲಿ ಏಕರೂಪತೆ ಇರಬೇಡವೇ? ಜಾರ್ಖಂಡ್‍ನಲ್ಲಿ ಒಂದು ನಿಲುವು, ತ್ರಿಪುರದಲ್ಲಿ ಇನ್ನೊಂದು ನಿಲುವು ಮತ್ತು ಗೋವಾದಲ್ಲಿ ಮತ್ತೊಂದು ನಿಲುವು ಎಂಬಂತಾಗಿರುವುದು ಏಕೆ? ಇನ್ನು, ಕೇಂದ್ರದಲ್ಲಿ ಅಧಿಕಾರದಲ್ಲಿರು ವುದೇ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ. ಮೈತ್ರಿ ಪಕ್ಷಗಳ ಹಂಗಿಲ್ಲದೇ ಆಡಳಿತ ನಡೆಸುವಷ್ಟು ಸ್ಪಷ್ಟ ಬಹುಮತವನ್ನು ಅದು ಪಡೆದುಕೊಂಡೂ ಇದೆ. ಇಷ್ಟಿದ್ದೂ ಅದೇಕೆ, ದೇಶಾದ್ಯಂತ ಗೋಮಾಂಸ ನಿಷೇಧವನ್ನು ಜಾರಿಗೆ ತರುತ್ತಿಲ್ಲ? ಒಂದು ವೇಳೆ, ಸಾಂವಿಧಾನಿಕ ಇತಿ-ಮಿತಿಗಳು ಹೀಗೆ ಮಾಡುವುದಕ್ಕೆ ಅಡ್ಡಿಯಾಗುತ್ತಿದೆ ಎಂದಾದರೆ, ಕನಿಷ್ಠ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಾದರೂ ನಿಷೇಧ ಹೇರಬಹುದಲ್ಲ? ಅಲ್ಲದೇ, ವಿದೇಶಗಳಿಗೆ ಮಾಂಸ ರಫ್ತು ಮಾಡುವ ರಾಷ್ಟ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಕೇಂದ್ರ ಸರಕಾರಕ್ಕೆ ಈ ಮಾಂಸ ರಫ್ತಿನ ಮೇಲೆ ನಿಷೇಧವನ್ನು ಹೇರಬಹುದಲ್ಲವೇ? ಗೋಹತ್ಯೆ ನಿಷೇಧಕ್ಕೆ ಸಂಪೂರ್ಣ ಅವಕಾಶ ಇದ್ದೂ ಹಾಗೆ ಮಾಡದಿರುವುದರ ಹೊಣೆಯನ್ನು ಯಾರು ಹೇರಬೇಕು? ತ್ರಿಪುರ, ಗೋವಾದ ಜನರು ಗೋಮಾಂಸ ಸೇವಿಸಬಹುದು ಎಂದಾದರೆ, ಉಳಿದ ರಾಜ್ಯಗಳ ಮಂದಿ ಯಾಕೆ ಸೇವಿಸಬಾರದು ಎಂಬ ಪ್ರಶ್ನೆಗೆ ಬಿಜೆಪಿ ಕೊಡುವ ಉತ್ತರವೇನು? ಗೋಮಾಂಸ ನಿಷೇಧ ಎಂಬ ಅದರ ಆಗ್ರಹ ಯಾಕೆ ದಿನೇ ದಿನೇ ಸೆಲೆಕ್ಟಿವ್ ಆಗುತ್ತಿದೆ?
ಅಲೀಮುದ್ದೀನ್ ಅನ್ಸಾರಿಯನ್ನು ಹತ್ಯೆಗೈದ 11 ಮಂದಿ ಅಪರಾಧಿಗಳು ಕೋಟ್ಯಾಧೀಶರೇನೂ ಅಲ್ಲ. ಅಲ್ಲದೇ, ಆ ಹತ್ಯೆಯಿಂದ ವೈಯಕ್ತಿಕವಾಗಿ ಅವರು ಪಡಕೊಂಡಿರುವುದು ಏನೂ ಅನ್ನುವ ಪ್ರಶ್ನೆಯೂ ಇದೆ. ಅಲ್ಲದೇ, ಅನ್ಸಾರಿಯನ್ನು ಕೊಂದು ಲಕ್ಷಾಂತರ ರೂಪಾಯಿಯನ್ನು ದೋಚುವುದು ಅವರ ಉದ್ದೇಶವೂ ಆಗಿರಲಿಲ್ಲ. ಯಾಕೆಂದರೆ, ಅನ್ಸಾರಿಯಲ್ಲಿ ಅಷ್ಟು ದುಡ್ಡೂ ಇರಲಿಲ್ಲ. ಆದ್ದರಿಂದ, ಅದು ರಾಜಕೀಯ ಪ್ರಚೋದಿತ ಭಾವನೆಯೊಂದರ ಅಭಿವ್ಯಕ್ತಿಯೇ ಹೊರತು ಸಹಜವಾದುದು ಅಲ್ಲ. ಸದ್ಯ ಆ 11 ಮಂದಿಯನ್ನು ಎದುರಿಟ್ಟುಕೊಂಡು ಗೋ ಸಂಬಂಧಿ ಹತ್ಯೆ ಮತ್ತು ಹಲ್ಲೆಗಳ ಕುರಿತು ದೇಶದಲ್ಲಿ ಗಂಭೀರ ಚರ್ಚೆ ನಡೆಯಬೇಕು. ನಿಜಕ್ಕೂ, ಮೊದಲ ಪಂಕ್ತಿಯಲ್ಲಿ ನಿಲ್ಲಬೇಕಾದ ಅಪರಾಧಿ ಗಳು ಆ 11 ಮಂದಿಯೋ ಅಥವಾ ಅವರನ್ನು ಆ ಮಟ್ಟದಲ್ಲಿ ಪ್ರಚೋದಿಸಿ ಅಪರಾಧಿಗಳಾಗಿಸಿದ ರಾಜಕೀಯ ನಾಯಕರೋ? ಜನಸಾಮಾನ್ಯರಲ್ಲಿ ಅಭಿಪ್ರಾಯಗಳನ್ನು ರೂಪಿಸುವಲ್ಲಿ ಮಾಧ್ಯಮಗಳು, ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ನೇತಾರರ ಪಾತ್ರ ಪ್ರಮುಖವಾದುದು. ಅವರನ್ನು ಜನ ಸಾಮಾನ್ಯರು ಆಲಿಸುತ್ತಾರೆ. ಅವರ ಮಾತುಗಳ ಮೇಲೆ ತಮ್ಮ ಅಭಿಪ್ರಾಯವನ್ನು ರೂಪಿಸಿಕೊಳ್ಳುತ್ತಾರೆ. ಗೋಮಾಂಸ ನಿಷೇಧದ ವಿಷಯದಲ್ಲಿ ಬಿಜೆಪಿ ಮತ್ತು ಇತರರ ಅಭಿಪ್ರಾಯವು ಜನಸಾಮಾನ್ಯರ ಮೇಲೆ ಖಂಡಿತ ಪ್ರಭಾವವನ್ನು ಬೀರಿದೆ. ಅದರಲ್ಲೂ
     ಅಲೀಮುದ್ದೀನ್ ಅನ್ಸಾರಿಯನ್ನು ಹತ್ಯೆಗೈದ ಅಪರಾಧಿಗಳಾಗಿ ನ್ಯಾಯಾಲಯದ ಎದುರು ತಲೆತಗ್ಗಿಸಿ ನಿಂತಿರುವ 11 ಮಂದಿಯ ಮೇಲೆ ನಾವು ಆಕ್ರೋಶಗೊಳ್ಳುವುದಕ್ಕಿಂತ ಅವರನ್ನು ತಯಾರಿಸಿದ ರಾಜಕೀಯ ವಿಚಾರಧಾರೆಯ ಮೇಲೆ ನಾವು ಸಿಟ್ಟಾಗಬೇಕು. ಗೋವು ಬಿಜೆಪಿಯ ಪಾಲಿಗೆ ರಾಜಕೀಯ ವಿಷಯವೇ ಹೊರತು ಬೇರೇನೂ ಅಲ್ಲ. ಆ ಪಕ್ಷಕ್ಕೂ ಗೋವಿಗೂ ನಡುವೆ ರಾಜಕೀಯ ಸಂಬಂಧದ ಹೊರತಾಗಿ ಬೇರೆ ಏನೂ ಇಲ್ಲ. ಬಿಜೆಪಿ, ಸಂದರ್ಭಕ್ಕೆ ತಕ್ಕಂತೆ ಗೋವನ್ನು ಭಾವುಕವೂ ಗೊಳಿಸುತ್ತದೆ ಮತ್ತು ಸಂದರ್ಭಕ್ಕೆ ತಕ್ಕಂತೆ ಅದು ಗೋವನ್ನು ಮಾಂಸದ ಪ್ರಾಣಿ ಯಾಗಿಯೂ ಪರಿಗಣಿಸುತ್ತದೆ. ರಾಜ್ಯದಿಂದ ರಾಜ್ಯಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಗೋವಿನ ವಿಷಯದಲ್ಲಿ ಅದರ ನಿಲುವು ಬದಲಾಗುತ್ತಲೇ ಇರುತ್ತದೆ. ಇದನ್ನು ಅರ್ಥೈಸದ ಮಂದಿ ಭಾವುಕವಾಗುತ್ತಾರೆ. ಪ್ರಚೋಧಿತರಾಗುತ್ತಾರೆ ಮತ್ತು ಕೆಲವೊಮ್ಮೆ ಹತ್ಯೆಯಂತಹ ಅಪಾಯಕಾರಿ ಕ್ರೌರ್ಯಗಳಲ್ಲೂ ಭಾಗಿಯಾಗುತ್ತಾರೆ. ಕೊನೆಗೆ ಅವರು ಅಪರಾಧಿಗಳಾಗಿ ಜೈಲು ಸೇರಬೇಕಾಗುತ್ತದೆ. ಜಾರ್ಖಂಡ್‍ನ 11 ಮಂದಿ ಅಪರಾಧಿಗಳು ಕೊಡುವ ಸಂದೇಶ ಇದು.

ಬಿಜೆಪಿ ಜನರ ಭಾವನೆಯನ್ನು ಪ್ರಚೋದಿಸುವ ಅಸಂಖ್ಯ ಹೇಳಿಕೆಗಳನ್ನೂ ಕಾರ್ಯಕ್ರಮಗಳನ್ನೂ ನೀಡಿದೆ. ಗೋಮಾಂಸ ಸೇವನೆಯನ್ನು ಅದರ ನಾಯಕರು ದೇಶದ್ರೋಹದ ಪಟ್ಟಿಯಲ್ಲಿಟ್ಟಿದ್ದೂ ನಡೆದಿದೆ. ಗೋವಿನ ಹೆಸರಲ್ಲಿ ಹತ್ಯೆಗೈದವರ ಪರ ವಹಿಸಿ ಮಾತನಾಡಿದ್ದೂ ಇದೆ. ಈ ಬಗೆಯ ವರ್ತನೆಗಳು ಸಮಾಜದ ಮೇಲೆ ಪರಿಣಾಮ ಬೀರುತ್ತವೆ. ಸಮಾಜದ ಮೇಲ್ತುದಿಯಲ್ಲಿರುವವರಿಗೆ ಇದರ ಹಿಂದಿರುವ ರಾಜಕೀಯದ ಅರಿವಿರುತ್ತದಾದರೂ ಜನಸಾಮಾನ್ಯರು ಹಾಗಲ್ಲ. ಅವರು ತಕ್ಷಣಕ್ಕೆ ಭಾವುಕರಾಗುತ್ತಾರೆ. ಅದನ್ನೊಂದು ಧಾರ್ಮಿಕ ಕ್ರಿಯೆಯಾಗಿ ಭಾವಿಸುತ್ತಾ ಕಾನೂನನ್ನು ಕೈಗೆತ್ತಿಕೊಳ್ಳುವ ಹಂತಕ್ಕೂ ತಲುಪುತ್ತಾರೆ.

No comments:

Post a Comment