Monday 26 August 2019

ಬಿಳಿ ಬಟ್ಟೆಯಿಂದ ಬಿಳಿ ಬಟ್ಟೆಯವರೆಗೆ




ಬದುಕು ಅಂದರೆ ಏನು?
ಈ ವಾಕ್ಯದಲ್ಲಿರುವ ಪ್ರಶ್ನಾರ್ಥಕ ಚಿಹ್ನೆಯನ್ನು ಅಳಿಸಿ ಮತ್ತೊಮ್ಮೆ ಈ ವಾಕ್ಯವನ್ನು ಓದಿದರೆ, ಇದು ಜಿಜ್ಞಾಸೆಯಾಗಿಯೂ ಕಾಣಿಸಬಹುದು. ಪ್ರಶ್ನೆಯಾಗಿಯೂ ಕಾಣಬಹುದು. ನಮ್ಮೊಳಗನ್ನು ಕಲಕುವ, ಕಾಡುವ, ಅರೆಕ್ಷಣ ನಿಂತು ಆಲೋಚಿಸುವಂತೆ ಮಾಡುವ, ನಗುವ, ಅಳುವ, ಅಂತರ್ಮುಖಿಯಾಗಿಸುವ, ಈವರೆಗಿನ ಜೀವನ ಪಥವನ್ನು ಮೆಲುಕು ಹಾಕುವಂತೆ ಒತ್ತಾಯಿಸುವ ವಾಕ್ಯವಾಗಿಯೂ ಕಾಡಬಹುದು. ಓದುವವನ ಮನಸ್ಥಿತಿ ಮತ್ತು ಆ ಓದುವ ಕ್ಷಣದಲ್ಲಿ ಆತನ ಸ್ಥಿತಿಗತಿಯೇ ಇವನ್ನು ನಿರ್ಧರಿಸುತ್ತದೆ. ನಿಜಕ್ಕೂ ಬದುಕು ಅಂದರೆ ಏನು? ಶ್ರೀಮಂತನಿಗೂ ಬದುಕಿದೆ. ಬಡವನಿಗೂ ಬದುಕಿದೆ. ಹೆಣ್ಣಿಗೂ ಬದುಕಿದೆ. ಗಂಡಿಗೂ ಇದೆ. ಮಗುವಿಗೂ ಬದುಕಿದೆ. ಯುವಕರಿಗೂ ಬದುಕು ಇದೆ. ಅಂದಹಾಗೆ,
ಬಿಳಿ ಬಟ್ಟೆಯನ್ನು ಹೊದೆಸಿ ಮಲಗಿಸಲಾದ ಮೃತದೇಹದ ಸುತ್ತ ನೂರು ಮಂದಿ ನೆರೆದಿದ್ದಾರೆ ಎಂದಿಟ್ಟುಕೊಳ್ಳೋಣ. ಬಾಹ್ಯನೋಟಕ್ಕೆ ಅವರೆಲ್ಲರೂ ಬಾಡಿದ ಮುಖ ಹೊತ್ತು ನಿಂತಿರುತ್ತಾರೆ. ಏಕೀಭಾವ ಎಲ್ಲರಲ್ಲೂ ನೆಲೆಸಿರುವಂತೆ ಕಾಣಿಸುತ್ತದೆ. ಆದರೆ, ಅವರೆಲ್ಲರ ಮನಸ್ಸಿನೊಳಗೆ ನಡೆಯುತ್ತಿರುವ ಪ್ರಕ್ರಿಯೆಗಳು ಏಕರೂಪದಲ್ಲಿರುತ್ತದೆಯೇ? ಆ ನೂರು ಮಂದಿಯ ಭಾವನೆ, ಆಲೋಚನೆಗಳು ನೂರು ರೀತಿಯಲ್ಲಿ ಖಂಡಿತ ಇರುತ್ತದೆ. ಹೊರನೋಟಕ್ಕೆ ಎಲ್ಲರ ಮುಖಭಾವವೂ ಶೋಕತಪ್ತವಾಗಿ ಕಂಡರೂ ಅವರೆಲ್ಲರ ಶೋಕ ಏಕರೂಪದ್ದಲ್ಲ. ಗುಂಪಾಗಿದ್ದೂ ಅವರೆಲ್ಲ ಒಂಟಿ ಒಂಟಿ. ಒಂಟಿ ಒಂಟಿಯಾಗಿಯೇ ಅವರು ಆಲೋಚಿಸುತ್ತಿರುತ್ತಾರೆ. ನೋವನ್ನೋ, ಭಯವನ್ನೋ, ಆರ್ಥಿಕ ಲೆಕ್ಕಾಚಾರವನ್ನೋ, ತನ್ನ ಆರೋಗ್ಯವನ್ನೋ ಬೆಳಗ್ಗಿನ ಔಷಧಿಯನ್ನು ಮಿಸ್ ಮಾಡಿಕೊಂಡದ್ದನ್ನೋ, ಮೃತ ವ್ಯಕ್ತಿಯು ತನಗೆ ಮಾಡಿದ ಉಪಕಾರವನ್ನೋ...ಹೀಗೆ ತಂತಮ್ಮ ಲೋಕದಲ್ಲೇ ಸುತ್ತುತ್ತಿರುತ್ತಾರೆ. ಬದುಕಿನ ವಾಸ್ತವ ಸ್ಥಿತಿಯಿದು. ನಾವೆಷ್ಟೇ ಗುಂಪಾಗಿದ್ದರೂ ಮತ್ತು ನಮ್ಮವರೆಂದು ನಂಬಿಕೊಂಡಿರುವ ಪತ್ನಿ ಮಕ್ಕಳು, ಹೆತ್ತವರು ನಮಗಿದ್ದರೂ ನಾವು ಒಂಟಿಯೇ. ನಾವೆಲ್ಲ ಜೊತೆಗಿದ್ದೂ ನಮ್ಮದೇ ಆದ ಬದುಕನ್ನು ಬದುಕುತ್ತೇವೆಯೇ ಹೊರತು ಇತರರದ್ದಲ್ಲ. ವಿಚಾರಣೆಯ ದಿನ ಮನುಷ್ಯರು ತನ್ನ ತಾಯಿ, ತಂದೆ, ಪತ್ನಿ, ಮಕ್ಕಳು ಎಲ್ಲರನ್ನೂ ಬಿಟ್ಟು ಒಂಟಿಯಾಗಿ ದೂರ ಓಡುತ್ತಾರೆ ಎಂದು ಪವಿತ್ರ ಕುರ್‍ಆನ್ (80: 34-37) ಹೇಳಿರುವುದರ ಭಾವಾರ್ಥ ಇದು.
ಹುಟ್ಟಿದ ಕೂಡಲೇ ಮಗುವಿಗೆ ಬಿಳಿ ಬಟ್ಟೆಯನ್ನು ಹೊದೆಸಿ ರಕ್ಷಣೆಯನ್ನು ನೀಡಲಾಗುತ್ತದೆ. ಅದೇ ಮಗು ಮೃತ ಪಟ್ಟಾಗಲೂ ಬಿಳಿ ಬಟ್ಟೆಯನ್ನೇ ಹೊದೆಸಲಾಗುತ್ತದೆ. ಬಿಳಿ ಯಾವುದು, ಕಪ್ಪು ಯಾವುದು ಎಂಬುದನ್ನು ಗುರುತಿಸುವಷ್ಟು ಜ್ಞಾನವಿಲ್ಲದ ಪ್ರಾಯದಲ್ಲಿ ಹೊದೆಸುವುದೂ ಬಿಳಿ ಬಟ್ಟೆಯನ್ನೇ. ತನಗೆ ಹೊದೆಸಿರುವ ಬಟ್ಟೆಯ ಬಣ್ಣ ಯಾವುದು ಎಂಬುದನ್ನು ನೋಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿರುವಾಗಲೂ ಹೊದೆಸುವುದು ಬಿಳಿ ಬಟ್ಟೆಯನ್ನೇ. ನಿಜವಾಗಿ,
ಈ ಎರಡೂ ಸ್ಥಿತಿಗಳಲ್ಲೂ ಮನುಷ್ಯ ಅಸಹಾಯಕ. ಹುಟ್ಟುವಾಗ ಏನನ್ನೂ ತರದೆಯೇ ಹುಟ್ಟುವ ಮತ್ತು ಮರಳುವಾಗ ಏನನ್ನೂ ಕೊಂಡುಹೋಗದೆಯೇ ಮರಳುವ ಎರಡೂ ಸ್ಥಿತಿಗಳೂ ಬಿಳಿ ಬಟ್ಟೆಯೊಂದಿಗೆ ಸಂಬಂಧವನ್ನು ಹೊಂದಿಕೊಂಡಿದೆ. ಆದ್ದರಿಂದ, ಈ ಸ್ಥಿತಿಗಳನ್ನು ಮುಖಾಮುಖಿಗೊಳಿಸಿ ನಾವು ಅನುಸಂಧಾನ ನಡೆಸಬೇಕು. ಈ ಸ್ಥಿತಿಗಳು ಸಾರುವ ಸಂದೇಶ ಏನು? ಮನುಷ್ಯನ ಬದುಕು ಆದಿಯಿಂದ ಅಂತ್ಯದ ವರೆಗೆ ಬಿಳಿ ಬಟ್ಟೆಯಂತೆ ಕಲೆರಹಿತವಾಗಿರಬೇಕು ಎಂದೇ? ಆತನ ಆಲೋಚನೆ, ವ್ಯವಹಾರ, ಮಾತು- ಮೌನ, ನಗು-ಅಳು, ಕೋಪ, ಗಳಿಕೆ, ಖರ್ಚು ಇತ್ಯಾದಿ ಎಲ್ಲವೂ ಬಿಳಿ ಬಣ್ಣದಂತೆ ನಿರ್ಮಲವಾಗಿರಬೇಕು ಎಂದೇ? ಒಂದು ತುಂಡು ಬಟ್ಟೆಯನ್ನು ಹೊದ್ದುಕೊಂಡು ಹುಟ್ಟುವ ನೀನು ಒಂದು ತುಂಡು ಬಟ್ಟೆಯನ್ನು ಹೊದ್ದುಕೊಂಡು ಹೋಗಬೇಕಾದಷ್ಟು ಯಕಶ್ಚಿತ್ ಜೀವಿ ಎಂದೇ? ಹುಟ್ಟುವಾಗ ಹೊದೆಸುವ ಅಚ್ಚ ಬಿಳಿ ಬಟ್ಟೆಯನ್ನು ಅಂತ್ಯದ ವರೆಗೆ ಕಲೆರಹಿತವಾಗಿ ಉಳಿಸಿಕೊಳ್ಳುವ ಪರೀಕ್ಷೆಯೇ (ಪವಿತ್ರ ಕುರ್‍ಆನ್: 67:2) ಜೀವನ ಎಂದೇ?
ಪ್ರವಾದಿ ಇಬ್ರಾಹೀಮ್(ಅ), ಹಾಜಿರಾ ಮತ್ತು ಇಸ್ಮಾಈಲ್(ಅ)- ಈ ಮೂವರೂ ಮತ್ತು ಈ ಮೂವರ ಬದುಕೂ ನಮ್ಮನ್ನು ಜಿಜ್ಞಾಸೆಗೆ ಒಳಪಡಿಸಬೇಕು. ಈ ಮೂವರೂ ಬರಿಗೈ ದಾಸರು. ಉರ್ ಎಂಬ ಹುಟ್ಟಿದೂರಿನಿಂದ ಹೊರಡುವಾಗ, ಮಕ್ಕಾದಲ್ಲಿ ನೆಲೆಸಲು ತೀರ್ಮಾನಿಸುವಾಗ ಮತ್ತು ಆತ್ಮಾರ್ಪಣೆಗೆ ಇಸ್ಮಾಈಲ್ ಸಿದ್ಧವಾಗುವಾಗ- ಈ ಮೂರು ಹಂತಗಳಲ್ಲೂ ಅವರು ಬರಿಗೈ ದಾಸರು. ಹಾಜಿಗಳೂ ಅಷ್ಟೇ. ಅವರ ಜೊತೆಗಿರುವುದು ಬಿಳಿ ಬಟ್ಟೆ ಮಾತ್ರ. ನಮ್ಮೆಲ್ಲರ ಬದುಕೂ ಇಷ್ಟೇ. ಈ ಬದುಕಿನ ಉದ್ದ ಎಷ್ಟೆಂದರೆ, ಬಿಳಿ ಬಟ್ಟೆಯಿಂದ ಬಿಳಿ ಬಟ್ಟೆಯವರೆಗೆ.

No comments:

Post a Comment