Friday 3 January 2020

ತಿದ್ದುಪಡಿಗೊಳಗಾಗಬೇಕಾದ ಕಾನೂನು ಯಾವುದು?



ಪೌರತ್ವ ತಿದ್ದುಪಡಿ ಕಾನೂನಿನ ಬಗ್ಗೆ ಬಿಜೆಪಿ ನೀಡುತ್ತಿರುವ ಸಮರ್ಥನೆ ಎಷ್ಟು ನಯವಂಚಕತನದ್ದು ಮತ್ತು ಮೋಸದ್ದು ಅನ್ನುವುದಕ್ಕೆ ಕಾಶ್ಮೀರವೊಂದೇ ಧಾರಾಳ ಸಾಕು. ಕಾಶ್ಮೀರದ ಸಾಂಸ್ಕೃತಿಕ ಮತ್ತು ಭಾಷಿಕ ಅನನ್ಯತೆಗೆ ರಕ್ಷಾಕವಚದಂತಿದ್ದ 370ನೇ ವಿಧಿಯನ್ನು ಕಳೆದ ಆಗಸ್ಟ್ ನಲ್ಲಿ ರದ್ದುಪಡಿಸುವಾಗ ಅದಕ್ಕೆ ಕೇಂದ್ರ ಸರಕಾರ ಕೊಟ್ಟ ಕಾರಣ ಹೀಗಿತ್ತು:
ಒಂದು ದೇಶ ಮತ್ತು ಸಮಾನ ಕಾನೂನು.
ಕಾಶ್ಮೀರಕ್ಕೆ ಸಾಂವಿಧಾನಿಕವಾಗಿ ನೀಡಲಾಗಿರುವ 370ನೇ ವಿಧಿ ಮತ್ತು ಆ ಮೂಲಕ ಕಾಶ್ಮೀರಿಗಳಿಗೆ ಲಭ್ಯವಾಗಿದ್ದ ಸಾಂಸ್ಕೃತಿಕ ಭದ್ರತೆಯನ್ನು ಗೃಹಸಚಿವ ಅಮಿತ್ ಶಾ ಅವರು ಸಂವಿಧಾನಕ್ಕೆ ಅಪಚಾರವೆಂಬಂತೆ ಚಿತ್ರಿಸಿದ್ದರು. 370ನೇ ವಿಧಿಯನ್ನು ರದ್ದುಪಡಿಸುವ ಮೂಲಕ ಕಾಶ್ಮೀರವು ಭಾರತಕ್ಕೆ ಸೇರ್ಪಡೆಗೊಂಡಿತು ಎಂದು ಅವರು ಸಮರ್ಥಿಸಿಕೊಂಡಿದ್ದರು. ಮಾತ್ರವಲ್ಲ, ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ಬೇರ್ಪಡಿಸಿದ್ದರು. ಆದರೆ ಈಗ ಅದೇ ಅಮಿತ್ ಶಾರ ಮುತುವರ್ಜಿಯಲ್ಲಿ ಕಾನೂನಾಗಿ ಪರಿವರ್ತನೆಯಾದ ಪೌರತ್ವ ತಿದ್ದುಪಡಿ ಮಸೂದೆಯು ಈ ಏಕದೇಶ ಮತ್ತು ಸಮಾನ ಕಾನೂನು ಎಂಬುದಕ್ಕೆ ಗೌರವವನ್ನೇ ಕೊಟ್ಟಿಲ್ಲ. ಈಶಾನ್ಯ ರಾಜ್ಯಗಳಾದ ಮೇಘಾಲಯ, ತ್ರಿಪುರ, ಅರುಣಾಚಲ, ನಾಗಾಲ್ಯಾಂಡ್ ಮತ್ತು ಅಸ್ಸಾಂಗಳಿಗೆ ಈ ಕಾನೂನಿನಲ್ಲಿ ವಿಶೇಷ ರಿಯಾಯಿತಿ ಇದೆ. ಅವರ ಸಾಂಸ್ಕೃತಿಕ ಅನನ್ಯತೆಗೆ ಭಂಗ ಬರದಂತೆ ನೋಡಿಕೊಳ್ಳುವುದಕ್ಕೆ ಅಲ್ಲಿನ ಬುಡಕಟ್ಟು ಪ್ರದೇಶಗಳನ್ನು ಈ ಕಾನೂನಿನ ವ್ಯಾಪ್ತಿಯಿಂದ ಹೊರಗಿಡಲಾಗಿದೆ. 371ನೇ ವಿಧಿಯ ಪ್ರಕಾರ ಈಶಾನ್ಯ ಭಾಗದ ರಾಜ್ಯಗಳು ಅನುಭವಿಸುತ್ತಿರುವ ವಿಶೇಷ ಸ್ವಾಯತ್ತ ಹಕ್ಕನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಬುಡಕಟ್ಟು ಸಂಸ್ಕೃತಿ ಮತ್ತು ಭಾಷಿಕ ವೈವಿಧ್ಯತೆಗೆ ಭಂಗ ಉಂಟಾಗದಂತೆ ನೋಡಿಕೊಳ್ಳುವುದಾಗಿ ಅಮಿತ್ ಶಾ ಪದೇ ಪದೇ ಭರವಸೆಯನ್ನೂ ನೀಡುತ್ತಿದ್ದಾರೆ. ಅಂದರೆ, 370ನೇ ವಿಧಿಯ ಪ್ರಕಾರ ಕಾಶ್ಮೀರಿಗಳಿಗೆ ಲಭ್ಯವಾಗಿದ್ದ ಸ್ವಾಯತ್ತತೆ ತಪ್ಪು, ಆದರೆ ಈಶಾನ್ಯ ರಾಜ್ಯಗಳು 371ನೇ ವಿಧಿ ಪ್ರಕಾರ ಪಡೆಯುತ್ತಿರುವ ಸ್ವಾಯತ್ತತೆ ಸರಿ. ಕಾಶ್ಮೀರಿಗಳಿಗೆ ಪ್ರತ್ಯೇಕ ಸ್ಥಾನಮಾನ ಮತ್ತು ಕಾನೂನುಗಳು ತಪ್ಪು, ಆದರೆ ಪೌರತ್ವ ತಿದ್ದುಪಡಿ ಕಾನೂನಿನಿಂದಲೂ ಈಶಾನ್ಯ ಭಾಗದ ರಾಜ್ಯಗಳ ಕೆಲವು ಪ್ರದೇಶಗಳಿಗೆ ವಿನಾಯಿತಿ ನೀಡುವುದು ಸರಿ. ಕಾನೂನು ಕಾಶ್ಮೀರಿಗಳಿಗೂ ಕೇರಳಿಗರಿಗೂ ಸಮಾನ ಎಂದಾದರೆ ಮತ್ತು ಇದುವೇ ಏಕ ಭಾರತದ ಸರಿಯಾದ ಪರಿಕಲ್ಪನೆ ಎಂದಾದರೆ ಈಶಾನ್ಯ ಭಾಗದ ರಾಜ್ಯಗಳಲ್ಲೇಕೆ ಇನ್ನೂ 371ನೇ ವಿಧಿಯನ್ನು ಉಳಿಸಿಕೊಳ್ಳಲಾಗಿದೆ? ಅಲ್ಲಿನ ಬುಡಕಟ್ಟುಗಳ ಸಾಂಸ್ಕೃತಿಕ ಅನನ್ಯತೆಯನ್ನು ಕೇಂದ್ರ ಸರಕಾರ ಮಾನ್ಯ ಮಾಡುತ್ತದೆಂದಾದರೆ, ಕಾಶ್ಮೀರಿಗಳೇಕೆ ಅಮಾನ್ಯರಾಗುತ್ತಾರೆ? ಭಿನ್ನ ಸಂಸ್ಕೃತಿಯ ಹೊರತಾಗಿಯೂ ಪೌರತ್ವ ತಿದ್ದುಪಡಿ ಕಾನೂನು ಕಾಶ್ಮೀರಿಗಳಿಗೆ ಅನ್ವಯಿಸುತ್ತದೆಂದರೆ, ಈಶಾನ್ಯ ರಾಜ್ಯಗಳಿಗೇಕೆ ಅದು ಏಕಪ್ರಕಾರವಾಗಿ ಅನ್ವಯಿಸುವುದಿಲ್ಲ? ಅವರಲ್ಲಿ ಕೆಲವು ಪ್ರದೇಶಗಳನ್ನು ಗುರುತಿಸಿ ಪೌರತ್ವ ತಿದ್ದುಪಡಿ ಕಾನೂನಿನಿಂದ ವಿನಾಯಿತಿ ತೋರುವುದು ಯಾಕಾಗಿ? ಒಂದೇ ದೇಶ ಮತ್ತು ಸಮಾನ ಕಾನೂನು ಅನ್ನುವುದು ಮುಸ್ಲಿಮರನ್ನು ಕಂಡಾಗ ಮಾತ್ರ ಕೆರಳುವುದು ಮತ್ತು ಉಳಿದವರ ಬಗ್ಗೆ ಶಾಂತವಾಗುವುದು ಏನನ್ನು ಸೂಚಿಸುತ್ತದೆ?
ಕಳೆದವಾರ 300ರಷ್ಟು ದಲಿತರು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪಟ್ಟಿಕೊಂಡ ಎಂಬಲ್ಲಿಂದ ನಾಲ್ಕು ಕಿಲೋಮೀಟರ್ ನಷ್ಟು ದೂರ ಮೆರವಣಿಗೆಯಲ್ಲಿ ಸಾಗಿ ಹೂಸೂರು ಎಂಬಲ್ಲಿಯ ವೀರಭದ್ರ ಸ್ವಾಮಿ ದೇಗುಲವನ್ನು ಪ್ರವೇಶಿಸಿದರು. ಈ ಮೆರವಣಿಗೆ ಮತ್ತು ದೇಗುಲ ಪ್ರವೇಶವು ಮಾಧ್ಯಮ ಸುದ್ದಿಗೂ ಒಳಗಾಯಿತು. ಸಹಜ ಸ್ಥಿತಿಯಲ್ಲಿ ಯಾರೂ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಹೋಗುವುದಿಲ್ಲ. ಆದರೆ ಗ್ರಾಮದ ದಲಿತರಿಗೆ ಕಳೆದ 200 ವರ್ಷಗಳಿಂದ ಈ ದೇಗುಲ ಪ್ರವೇಶದಿಂದ ತಡೆಯಲಾಗಿತ್ತು. ಕಳೆದ ಸೆಪ್ಟೆಂಬರ್ ನಲ್ಲಿ ಗ್ರಾಮದ ದಲಿತರು ಇದನ್ನು ಪ್ರತಿಭಟಿಸಿದರು. ದೇಗುಲದ ಹಬ್ಬದ ಸಮಿತಿಯಲ್ಲಿ ತಮ್ಮನ್ನೂ ಸೇರಿಸಬೇಕೆಂದು ಪಟ್ಟು ಹಿಡಿದರು. ಈ ಕಾರಣಕ್ಕಾಗಿ ಮೇಲ್ಜಾತಿಗಳು ಮತ್ತು ದಲಿತರ ಮಧ್ಯೆ ಘರ್ಷಣೆ, ಹೊೈಕೈಗಳೂ ನಡೆದುವು. ಅದು ಮಾಧ್ಯಮಗಳ ಗಮನ ಸೆಳೆಯಿತಲ್ಲದೆ, ದಲಿತರ ಮೇಲೆ ಆ ಗ್ರಾಮದಲ್ಲಿ ನಡೆಯುತ್ತಿರುವ ದೌರ್ಜನ್ಯ, ಮಾನವ ಹಕ್ಕು ನಿರಾಕರಣೆಯ ಕುರಿತಾದ ಸಂಗತಿಗಳ ಬಹಿರಂಗಕ್ಕೂ ಬಂತು. ಆ ಬಳಿಕ ಜಿಲಾಧಿಕಾರಿಗಳು ಸಭೆ ಸೇರಿಸಿದರು. ದಲಿತರ ದೇಗುಲ ಪ್ರವೇಶಕ್ಕೆ ಮೇಲ್ಜಾತಿಗಳನ್ನು ಒಪ್ಪಿಸುವುದಕ್ಕಾಗಿ ನಾಲ್ಕು ಸಭೆಗಳು ಬೇಕಾದುವು. ಕೊನೆಗೆ ಕಳೆದವಾರ ದಲಿತರು ತಮಗೆ ಸಿಕ್ಕ ಪ್ರವೇಶಾಧಿಕಾರವನ್ನು ಹಬ್ಬದಂತೆ ಆಚರಿಸಿದರು. ನಿಜವಾಗಿ,
ಪೌರತ್ವವನ್ನು ಸಾಬೀತುಪಡಿಸುವಂತೆ ಮುಸ್ಲಿಮರನ್ನು ಒತ್ತಾಯಿಸುವುದಕ್ಕಿಂತ ಮೊದಲು ಈ ದೇಶದ ಮೂಲ ನಿವಾಸಿಗಳಾದ ದಲಿತರಿಗೆ ಘನತೆಯ ಮತ್ತು ಸ್ವಾಭಿಮಾನದ ಬದುಕನ್ನು ಖಾತರಿಪಡಿಸುವುದು ಕೇಂದ್ರ ಸರಕಾರದ ಆದ್ಯತೆಯ ವಿಷಯವಾಗಬೇಕಿತ್ತು. ಈ ದೇಶದಲ್ಲಿ ಅಕ್ರಮ ವಾಸಿಗಳು ಇದ್ದಾರೋ ಅನ್ನುವುದಕ್ಕಿಂತ ಸಕ್ರಮ ವಾಸಿಗಳು ಕ್ಷೇಮವಾಗಿದ್ದಾರೋ ಅನ್ನುವುದು ಮುಖ್ಯ. ದಲಿತರು ಶತಮಾನಗಳಿಂದ ಈ ದೇಶದ ನಾಗರಿಕರು. ಅವರಿಲ್ಲದ ಭಾರತವನ್ನು ಕಲ್ಪಿಸುವುದಕ್ಕೂ ಸಾಧ್ಯವಿಲ್ಲ. ಹೆಚ್ಚಿನ ಮುಸ್ಲಿಮರ ಮೂಲ ಬೇರನ್ನು ಹುಡುಕುತ್ತಾ ಹೊರಟರೆ ಅದು ಕೊನೆಗೊಳ್ಳುವುದು ದಲಿತ ಕೇರಿಗಳಲ್ಲಿ. ಆದರೂ ಅವರನ್ನು ನಾಗರಿಕವಾಗಿ ನಡೆಸಿಕೊಳ್ಳುವುದಕ್ಕೆ ನಮ್ಮ ಪ್ರಭುತ್ವಕ್ಕೆ ಸಾಧ್ಯವಾಗುತ್ತಿಲ್ಲ. ದಲಿತ ದೌರ್ಜನ್ಯ ಕಾಯ್ದೆಯಲ್ಲಿ ತಿದ್ದುಪಡಿ ತರುವುದಕ್ಕೆ ಸರ್ವೋಚ್ಚ ನ್ಯಾಯಾಲಯ ಮುಂದಾದಾಗ ಮರುಪರಿಶೀಲನಾ ಅರ್ಜಿ ಹಾಕುವುದಕ್ಕೆ ಮೀನ-ಮೇಷ ಎಣಿಸಿದ ಸರಕಾರ ಇದು. ದಲಿತರಿಗೆ ಗೌರವಾರ್ಹ ಮತ್ತು ಮಾನ್ಯ ಬದುಕನ್ನು ಒದಗಿಸಲು ಕಾನೂನು ರೂಪಿಸುವುದನ್ನೋ ಅಥವಾ ಇರುವ ಕಾನೂನಿಗೆ ತಿದ್ದುಪಡಿಯನ್ನು ತರುವುದನ್ನೋ ಮಾಡದ ಕೇಂದ್ರ ಸರಕಾರವು ಮುಸ್ಲಿಮರನ್ನು ನಾಗರಿಕ ರಹಿತರನ್ನಾಗಿ ಮಾಡುವುದು ಹೇಗೆ ಎಂದು ಚಿಂತಿಸುತ್ತದೆಂದರೆ ಅದರ ಅರ್ಥವೇನು? ಈ ದೇಶದ ಮೂಲ ನಿವಾಸಿಗಳಾದ ಹೂಸೂರಿನ ದಲಿತರು ದೇಗುಲ ಪ್ರವೇಶಿಸುವುದಕ್ಕೆ 200 ವರ್ಷಗಳಷ್ಟು ದೀರ್ಘ ಅವಧಿಯ ವರೆಗೆ ಕಾಯಬೇಕಾದ ಮತ್ತು ಸಭೆಗಳ ಮೇಲೆ ಸಭೆ ನಡೆಸಿ ಕೊನೆಗೂ ಪ್ರವೇಶಾನುಮತಿ ಗಿಟ್ಟಿಸಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿಯಾಗಿರುವಾಗ, ತಿದ್ದುಪಡಿಗೊಳ್ಳಬೇಕಾದ ಕಾನೂನಾದರೂ ಯಾವುದು? ಪೌರತ್ವ ಕಾನೂನೋ ಅಥವಾ ದಲಿತ ಕಾನೂನೋ? ದಲಿತರ ಕ್ಷೇಮಕ್ಕಾಗಿ ಮತ್ತು ಅವರ ಮೇಲಿನ ದೌರ್ಜನ್ಯವನ್ನು ತಡೆಯುವುದಕ್ಕಾಗಿ ಕಾನೂನನ್ನು ಬಿಗಿಗೊಳಿಸುವುದನ್ನು ಬಿಟ್ಟು ಪೌರತ್ವ ಕಾನೂನಿಗೆ ತಿದ್ದುಪಡಿ ತರುವುದೆಂದರೆ ಏನು? ಕೇಂದ್ರ ಸರಕಾರ ದಲಿತರನ್ನು ಮತ್ತು ಮುಸ್ಲಿಮರನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡುತ್ತಿರುವುದಕ್ಕೆ ಇದು ಪುರಾವೆಯಾಗದೇ? ದಲಿತರನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಸಾಮಾಜಿಕ ಮನಸ್ಥಿತಿಯನ್ನು ಹಾಗೆಯೇ ಇರಗೊಟ್ಟು ಅಥವಾ ಕಾನೂನನ್ನು ಬಲಗೊಳಿಸದೆಯೇ ಮುಸ್ಲಿಮರನ್ನು ಕಾನೂನಿನ ಮೂಲಕ ದಲಿತರದೇ ಸ್ಥಿತಿಗೆ ದೂಡುವ ಸಂಚು ಇದಲ್ಲವೇ? ಮುಸ್ಲಿಮರನ್ನು ಅಕ್ರಮ ವಲಸಿಗರಂತೆ ಬಿಂಬಿಸುವ ಮೂಲಕ ದಲಿತರಂತೆ ಮಾನಸಿಕ ಮತ್ತು ದೈಹಿಕ ದೌರ್ಜನ್ಯಕ್ಕೆ ಒಳಗಾಗುವಂತೆ ಮಾಡುವುದಕ್ಕೆ ಈ ಪೌರತ್ವ ತಿದ್ದುಪಡಿ ಕಾನೂನಿನ ಮರೆಯಲ್ಲಿ ಪ್ರಯತ್ನ ಮಾಡಲಾಗಿದೆಯೇ?
ಪೌರತ್ವ ತಿದ್ದುಪಡಿ ಕಾನೂನು ಮತ್ತು ಹೂಸೂರಿನ ದಲಿತರ ದೇಗುಲ ಪ್ರವೇಶ- ಇವೆರಡೂ ಸಮಾನ ರೇಖೆಗಳಲ್ಲ. ಇವು ಎಲ್ಲೋ ಒಂದು ಕಡೆ ಸಂದಿಸುತ್ತದೆ. ಮುಸ್ಲಿಮರಲ್ಲಿ ಭಯ ಹುಟ್ಟು ಹಾಕುವ ಮತ್ತು ಅವರಲ್ಲಿ ದ್ವಿತೀಯ ದರ್ಜೆಯ ನಾಗರಿಕ ಪ್ರಜ್ಞೆಯನ್ನು ಮೂಡಿಸುವ ಪ್ರಯತ್ನ ಒಂದು ಕಡೆ ಪ್ರಾರಂಭವಾಗಿದ್ದರೆ ಇನ್ನೊಂದು ಕಡೆ, ದ್ವಿತೀಯ ದರ್ಜೆಯ ನಾಗರಿಕರಂತೆ ಬದುಕುತ್ತಿರುವ ದಲಿತರನ್ನು ಹಾಗೆಯೇ ಉಳಿಸಿಕೊಳ್ಳುವುದು ಅಥವಾ ಅವರ ಕ್ಷೇಮಕ್ಕಾಗಿ ಆದ್ಯತೆಯನ್ನು ಕೊಡದಿರುವುದು- ಇವೆರಡನ್ನೂ ಮಾಡಲಾಗುತ್ತಿದೆ. ಎಚ್ಚೆತ್ತುಕೊಳ್ಳುವ ಸರದಿ ಎಲ್ಲರದು.

No comments:

Post a Comment