Wednesday 27 April 2022

ಸನ್ಮಾರ್ಗಕ್ಕೆ 44: ಕಳಂಕಿತ ರಾಜ ಮತ್ತು ಶಿಸ್ತುಬದ್ಧ ನಾಗರಿಕನ ನಡುವಿನ ಆಯ್ಕೆ

 


ಒಂದು ಪತ್ರಿಕೆಯನ್ನು ಆರಂಭಿಸುವುದಕ್ಕೆ ಏನೆಲ್ಲ ಬೇಕು ಎಂಬ ಪ್ರಶ್ನೆಗೆ ತಕ್ಷಣಕ್ಕೆ ಲಭ್ಯವಾಗುವ ಉತ್ತರ- ಹಣ. ಆದರೆ ಹಣವೊಂದಿದ್ದರೆ ಪತ್ರಿಕೆಯೊಂದನ್ನು ಪ್ರಾರಂಭಿಸಿಬಿಡಬಹುದೇ ಎಂಬ ಮರು ಪ್ರಶ್ನೆಗೆ ಉತ್ತರ ಇಷ್ಟು ಸುಲಭ ಅಲ್ಲ. ಮನಸ್ಸು ಮಾಡಿದರೆ ನೂರು ಪತ್ರಿಕೆಗಳನ್ನು ಪ್ರಾರಂಭಿಸುವಷ್ಟು ಧನಿಕರು ಈ ಸಮಾಜದಲ್ಲಿದ್ದಾರೆ. ಆದರೆ ಧನಿಕರ ಸಂಖ್ಯೆಗೆ ಅನುಗುಣವಾಗಿ ಪತ್ರಿಕೆಗಳೇನೂ ಇಲ್ಲಿ ಪ್ರಾರಂಭವಾಗುತ್ತಿಲ್ಲ. ಯಾಕೆಂದರೆ ಹಣ; ಪತ್ರಿಕಾ ರಂಗದ ಪ್ರಧಾನ ಘಟಕವೇ ಹೊರತು ಹಣವೇ ಸರ್ವವೂ ಅಲ್ಲ. ಪತ್ರಿಕಾ ರಂಗವು ಹಣಬಲದ ಆಚೆಗೆ ಕೆಲವು ಅರ್ಹತೆಗಳನ್ನು ಬಯಸುತ್ತದೆ. ಈ ಅರ್ಹತೆಯ ಪಟ್ಟಿಯಲ್ಲಿ,

ವೃತ್ತಿ ಗೌರವ, ಮೌಲ್ಯನಿಷ್ಠೆ, ದೂರದೃಷ್ಟಿ, ವೈಚಾರಿಕ ಸ್ಪಷ್ಟತೆ, ಸಾಮಾಜಿಕ ಕಳಕಳಿ, ಮೌಲ್ಯಗಳೊಂದಿಗೆ ರಾಜಿಯಾಗದ ಗುಣ, ಏಳು- ಬೀಳುಗಳನ್ನು ಧೈರ್ಯದಿಂದ ಎದುರಿಸುವ ಛಾತಿ, ಹೊಗಳಿಕೆ ಮತ್ತು ತೆಗಳಿಕೆಯನ್ನು ಸಹಜವಾಗಿ ಸ್ವೀಕರಿಸುವ ಸ್ಥಿತಪ್ರಜ್ಞೆ, ಕೇಸುಗಳನ್ನು ಜಡಿಸಿಕೊಳ್ಳಲು ಸಿದ್ಧವಾಗಿರಬೇಕಾದುದು, ಓದುಗರ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವುದಕ್ಕೆ ಮತ್ತು ಓದುಗರ ರುಚಿಯನ್ನು ಅರಿತುಕೊಂಡು ಮಾರ್ಪಾಡುಗಳನ್ನು ತರುವುದಕ್ಕೆ ಇರಬೇಕಾದ ಸೂಕ್ಷ್ಮ ದೃಷ್ಟಿ... ಇತ್ಯಾದಿ ಇತ್ಯಾದಿಗಳೂ ಇವೆ. ಪತ್ರಿಕೆಯೊಂದರ ಪ್ರಾರಂಭಕ್ಕೆ ಹಣ ಒಂದು ಘಟಕವಾದರೆ ಆ ಪತ್ರಿಕೆ ಬದುಕಿ ಉಳಿಯುವುದಕ್ಕೆ ಇನ್ನಿತರ ಹಲವು ಅಂಶಗಳೂ ಮುಖ್ಯವಾಗುತ್ತವೆ.

ಸನ್ಮಾರ್ಗಕ್ಕೆ 44 ವರ್ಷಗಳು ಪೂರ್ಣಗೊಂಡು 45ಕ್ಕೆ ಪಾದಾರ್ಪಣೆ ಮಾಡುವ ಈ ಹಂತದಲ್ಲಿ ಹಳತನ್ನೊಮ್ಮೆ ಅವಲೋಕಿಸುವಾಗ ಅಚ್ಚರಿ ಮತ್ತು ಅಭಿಮಾನ ಎರಡೂ ಜೊತೆಜೊತೆಗೇ ಉಂಟಾಗುತ್ತದೆ.

44 ವರ್ಷಗಳ ಹಿಂದೆ ಸನ್ಮಾರ್ಗ ಪತ್ರಿಕೆಯನ್ನು ಪ್ರಾರಂಭಿಸಲು ನಿರ್ಧರಿಸಿದ ಪುಟ್ಟ ತಂಡದಲ್ಲಿ ಧನಿಕರು ಇರಲಿಲ್ಲ. ಪತ್ರಿಕಾ ವೃತ್ತಿಯಲ್ಲಿ ತೊಡಗಿಸಿಕೊಂಡ ನಿಪುಣರೂ ಇರಲಿಲ್ಲ. ಪತ್ರಿಕೋದ್ಯಮದಲ್ಲಿ ಡಿಗ್ರಿಯ ಮೇಲೆ ಡಿಗ್ರಿ ಪಡೆದ ‘ಅರ್ಹರೂ’ ಇರಲಿಲ್ಲ. ಕೆ.ಎಂ. ಶರೀಫ್, ಇಬ್ರಾಹೀಮ್ ಸಈದ್, ನೂರ್ ಮುಹಮ್ಮದ್, ಸಾದುಲ್ಲಾ ಮತ್ತು ಕೆಲವೇ ಕೆಲವು ಉತ್ಸಾಹಿ ಯುವಕರಲ್ಲಿದ್ದುದು ಕನಸು, ಛಲ, ಬದ್ಧತೆ ಮತ್ತು ಅಪಾರ ಧೈರ್ಯ ಮಾತ್ರ. ಆ ಕಾಲದಲ್ಲಿ ಇಸ್ಲಾಮ್ ಏನು ಎಂಬುದಾಗಿ ಹೇಳುವುದಕ್ಕೆ ಇಲ್ಲಿ ದಿನ ಪತ್ರಿಕೆಗಳಿದ್ದುವು ಮತ್ತು ಅವು ಏನು ಹೇಳುತ್ತಿತ್ತೋ ಅದುವೇ ನಿಜವಾದ ಇಸ್ಲಾಮ್ ಎಂದು ಓದುಗರು ಅಂದುಕೊಳ್ಳಲೇ ಬೇಕಾದ ವಾತಾವರಣವೂ ಇತ್ತು. ಯಾಕೆಂದರೆ, ಯಾವುದು ಇಸ್ಲಾಮ್ ಮತ್ತು ಯಾವುದು ಅಲ್ಲ ಎಂದು ಹೇಳುವುದಕ್ಕೆ ಮತ್ತು ದಿನ ಪತ್ರಿಕೆಗಳು ಹೇಳುತ್ತಿರುವ ಇಸ್ಲಾಮ್ ಎಷ್ಟು ಶೇಕಡಾ ನಿಜ ಎಂಬುದನ್ನು ವಿಶ್ಲೇಷಿಸುವುದಕ್ಕೆ ಇಲ್ಲಿ ಯಾವ ಮಾಧ್ಯ ಮವೂ ಇರಲಿಲ್ಲ. ಕನ್ನಡ ಬಲ್ಲ ಮುಸ್ಲಿಮರು, ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿರುವ ಮುಸ್ಲಿಮರು, ಮುಸ್ಲಿಮ್ ಬರಹಗಾರರು, ಶಿಕ್ಷಣ ತಜ್ಞರು, ವಿಶ್ಲೇಷಣಕಾರರ ಬಹುದೊಡ್ಡ ಕೊರತೆಯೂ ಆ ಕಾಲದಲ್ಲಿತ್ತು. ಇಸ್ಲಾಮ್ ಮಾತ್ರ ಅಲ್ಲ, ಮುಸ್ಲಿಮರೇ ಅಂದಿನ ಸಮಾಜದ ಪಾಲಿಗೆ ಅಪರಿಚಿತರಾಗಿದ್ದರು. ಮಸೀದಿಯಲ್ಲಾಗಲಿ, ಸಾರ್ವಜನಿಕವಾಗಿಯಾಗಲಿ ಕನ್ನಡ ಬಳಕೆ ಮಾಡುವ ಮುಸ್ಲಿಮರ ಸಂಖ್ಯೆ ಬಹಳ ಕಡಿಮೆ ಇತ್ತು. ಇದರಿಂದಾಗಿ ಈ ನಾಡಿನ ಬಹುಸಂಖ್ಯಾತರಿಗೆ ಇಸ್ಲಾಮನ್ನು ಅರಿತುಕೊಳ್ಳುವುದಕ್ಕೆ ಇರುವ ಅವಕಾಶಗಳು ಬಹಳ ಸೀಮಿತವಾಗಿದ್ದುವು. ದಿನಪತ್ರಿಕೆಗಳು ಏನು ಹೇಳುತ್ತವೋ ಅದುವೇ ಇಸ್ಲಾಮ್ ಎಂದು ಅಂದುಕೊಳ್ಳುವುದರ ಹೊರತು ಅವರಲ್ಲಿ ಬೇರೆ ಆಯ್ಕೆಗಳಿರಲಿಲ್ಲ. ಮುಸ್ಲಿಮರ ರೀತಿ, ರಿವಾಜು, ಸಂಸ್ಕೃತಿ, ಭಾಷಾ ವೈವಿಧ್ಯ, ಪವಿತ್ರ ಕುರ್‌ಆನ್, ನಮಾಝ್, ಉಪವಾಸ, ಹಜ್ಜ್, ಪ್ರವಾದಿ ವಚನ... ಇತ್ಯಾದಿಗಳನ್ನು ವಿವರವಾಗಿ ತಿಳಿದುಕೊಳ್ಳುವುದಕ್ಕೆ ರಾಜ್ಯದ ಮಂದಿಯ ಪಾಲಿಗೆ ಯಾವ ಕನ್ನಡ ಮೂಲಗಳೂ ಇರಲಿಲ್ಲ. ಸನ್ಮಾರ್ಗ ಹುಟ್ಟಿಕೊಂಡದ್ದು ಇಂಥ ಸಂಕ್ರಮಣದ ಕಾಲದಲ್ಲಿ.

1978 ಎಪ್ರಿಲ್ 23ರಂದು ವಾರಪತ್ರಿಕೆಯಾಗಿ ಸನ್ಮಾರ್ಗದ ಪತ್ರಿಕಾ ರಂಗ ಪ್ರವೇಶವು ಸುಲಭದ್ದಾಗಿರಲಿಲ್ಲ. ಕನ್ನಡ ಬಲ್ಲ ರಾಜ್ಯದ ಮುಸ್ಲಿಮರಿಗೆ ಮತ್ತು ಮುಸ್ಲಿಮೇತರರಿಗೆ ಈ ಪತ್ರಿಕೆಯನ್ನು ತಲುಪಿಸುವುದು ಬಹುದೊಡ್ಡ ಸಾಹಸದ ಕೆಲಸವಾಗಿತ್ತು. ಇಂದಿನAತೆ ಸೋಶಿಯಲ್ ಮೀಡಿಯಾ, ಸ್ಮಾರ್ಟ್ ಫೋನ್, ಸಾರಿಗೆ ವ್ಯವಸ್ಥೆಗಳು ಇಲ್ಲದ ಕಾಲದಲ್ಲಿ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಮತ್ತು ಒಂದು ತಾಲೂಕಿನಿಂದ ಇನ್ನೊಂದು ತಾಲೂಕಿಗೆ ತಲುಪುವುದು ಬೆಟ್ಟ ಅಗೆದಷ್ಟೇ ತ್ರಾಸದಾಯಕ ವಾದ ಕೆಲಸವಾಗಿತ್ತು. ಈ ಹೊಣೆಗಾರಿಕೆಯನ್ನು ಇಬ್ರಾಹೀಮ್ ಸಈದ್‌ರಿಂದ ತೊಡಗಿ ಹಮೀದುಲ್ಲಾ, ಸಈದ್ ಇಸ್ಮಾಈಲ್ ಸಹಿತ ಹಲವು ಮಂದಿ ತಮ್ಮ ಹೆಗಲಿಗೇರಿಸಿಕೊಂಡರು. ರಾಜ್ಯಾದ್ಯಂತ ಪ್ರಯಾಣ ಬೆಳೆಸಿದರು. ಮನೆ ಮನೆ ತಲುಪಿ ಸನ್ಮಾರ್ಗವನ್ನು ಪರಿಚಯಿಸಿದರು. ಅಂದಹಾಗೆ,

ಸನ್ಮಾರ್ಗದ ಪ್ರಸಾರ ಹೆಚ್ಚಿದಂತೆಯೇ ಎರಡು ಪ್ರಮುಖ ಬೆಳವಣಿಗೆಗಳೂ ಅದರ ಜೊತೆಗೇ ನಡೆಯುತ್ತಾ ಬಂದುವು. 1. ಇಸ್ಲಾಮಿನ ಬಗ್ಗೆ ಸಾರ್ವಜನಿಕರಿಗಿದ್ದ ಅಜ್ಞಾನ ದೂರವಾಗುತ್ತಾ ಬಂದುದು. 2. ಪತ್ರಿಕಾ ಕಚೇರಿಗಳಲ್ಲಿ ಮತ್ತು ಪತ್ರಕರ್ತರಲ್ಲಿ ಇಸ್ಲಾಮಿನ ಕುರಿತು ಕವಿದಿದ್ದ ಗಾಢ ಕತ್ತಲೆಯಲ್ಲಿ ಬೆಳಕು ಮೂಡಲಾರಂಭಿಸಿದ್ದು.

ಆವರೆಗೆ ಇಸ್ಲಾಮನ್ನು ಕನ್ನಡ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳುವುದಕ್ಕೆ ಪತ್ರಕರ್ತರು ಮತ್ತು ಸಾರ್ವಜನಿಕರ ಪಾಲಿಗೆ ಮಾಹಿತಿ ಮೂಲಗಳ ಕೊರತೆಯಿತ್ತು. ಅಲ್ಲಿ-ಇಲ್ಲಿ ಕೇಳಿದ್ದು ಮತ್ತು ಮುಸ್ಲಿಮರನ್ನು ನೋಡಿಕೊಂಡು ಅಂದುಕೊಂಡಿದ್ದನ್ನೇ ಇಸ್ಲಾಮ್ ಎಂದು ಬಗೆದು ಬರೆಯುತ್ತಿದ್ದ ಪತ್ರಕರ್ತರು ಮತ್ತು ಸುದ್ದಿಮನೆಯ ಸಂಪಾದಕರ ಪಾಲಿಗೆ ಇಸ್ಲಾಮನ್ನು ಅರಿತುಕೊಳ್ಳುವುದಕ್ಕಿರುವ ಮಾಹಿತಿ ಮೂಲವೊಂದು ಸನ್ಮಾರ್ಗದ ಮೂಲಕ ಲಭ್ಯವಾಯಿತು. ಹಾಗಂತ, ಸನ್ಮಾರ್ಗ ಪ್ರಕಟವಾಗಲಾರಂಭಿಸಿದ ಬಳಿಕ ಕನ್ನಡ ಪತ್ರಿಕೆಗಳು ಇಸ್ಲಾಮ್‌ನ ಬಗ್ಗೆ ಕಲ್ಪಿತ ಮತ್ತು ಕುತ್ಸಿತ ಸುದ್ದಿಗಳನ್ನು ಪ್ರಕಟಿಸಿಲ್ಲ ಎಂದಲ್ಲ. ಆದರೆ, ಸನ್ಮಾರ್ಗ ಪ್ರಕಟವಾಗಲು ಪ್ರಾರಂಭವಾದ ಬಳಿಕ ಕಲ್ಪಿತ ಸುದ್ದಿಗಳನ್ನು ಪ್ರಕಟಿಸುವ ಮೊದಲು ಪತ್ರಿಕೆಗಳು ಹಿಂದು-ಮುಂದು ನೋಡತೊಡಗಿದುವು. ಒಂದುವೇಳೆ, ಕುತ್ಸಿತ ಅಭಿಪ್ರಾಯಗಳನ್ನು ಪ್ರಕಟಿಸಿದರೆ ತಕ್ಷಣ ಅದನ್ನು ಪ್ರಶ್ನಿಸುವ ಜಾಗೃತ ಓದುಗರನ್ನು ಸನ್ಮಾರ್ಗ ತಯಾರು ಮಾಡಿತು. ಪತ್ರಿಕಾ ಕಚೇರಿಗೆ ಕರೆ ಮಾಡಿ ಸತ್ಯ ಏನು ಎಂಬುದನ್ನು ತಿಳಿಸುವ ಓದುಗರು ಸೃಷ್ಟಿಯಾದರು. ಇದೊಂದು ದೊಡ್ಡ ಸಾಧನೆ. ಸನ್ಮಾರ್ಗ ಪ್ರತಿವಾರ ತನ್ನ ಅಷ್ಟೂ ಪುಟಗಳಲ್ಲಿ ಕುರ್‌ಆನ್ ಪ್ರಸ್ತುತಪಡಿಸುವ ಇಸ್ಲಾಮೀ ಕುಟುಂಬ, ಮದುವೆ, ತಲಾಕ್, ಮಹ್ರ್, ಇಸ್ಲಾಮೀ ಆರ್ಥಿಕ ನೀತಿ, ಸಾಮಾಜಿಕ ಕೆಡುಕುಗಳು, ಇಸ್ಲಾಮಿನ ರಾಜಕೀಯ ನೀತಿ, ಶೈಕ್ಷಣಿಕ ನೀತಿ, ನ್ಯಾಯ, ದಾನ, ಸಮಾನತೆಯ ಪರಿಕಲ್ಪನೆಯ ಕುರಿತಂತೆ ವಿವರವಾಗಿ ಬರೆಯಲಾರಂಭಿಸಿತು. ಅರಬಿ ಭಾಷೆಯಲ್ಲಿರುವ ಕುರ್‌ಆನ್‌ನನ್ನು ಕನ್ನಡಕ್ಕೆ ಅನುವಾದಿಸಿ ಓದುಗರ ಮುಂದಿಟ್ಟಿತು. ಹಾಗೆಯೇ, ಜಿಹಾದ್, ಕಾಫಿರ್, ಝಕಾತ್ ಇತ್ಯಾದಿ ಪದಗಳ ಬಗ್ಗೆ ಮತ್ತು ಪವಿತ್ರ ಕುರ್‌ಆನ್‌ನಲ್ಲಿರುವ ಯುದ್ಧಕಾಲದ ವಚನಗಳು ಮತ್ತು ಅದರ ಅರ್ಥ ವ್ಯಾಪ್ತಿಯ ಬಗ್ಗೆ ವಿವರವಾಗಿ ವಿಶ್ಲೇಷಣೆ ನಡೆಸಿತು. ಒಂದುರೀತಿಯಲ್ಲಿ,

ಕನ್ನಡ ನಾಡಿನ ಪಾಲಿಗೆ ಅಜ್ಞಾತವಾಗಿದ್ದ ಇಸ್ಲಾಮನ್ನು ಪರಿಚಯಿಸಿದ್ದೇ ಸನ್ಮಾರ್ಗ. ಯಾಕೆಂದರೆ, 44 ವರ್ಷಗಳ ಹಿಂದೆ ಕನ್ನಡದಲ್ಲಿ ಸನ್ಮಾರ್ಗದಂಥ ಇನ್ನೊಂದು ಪತ್ರಿಕೆ ಇರಲಿಲ್ಲ. ಅರಬಿ ಮತ್ತು ಉರ್ದು ಭಾಷೆಯಲ್ಲಿದ್ದ ಇಸ್ಲಾಮೀ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಿ ಕೊಡುವ ಬೇರೆ ಮಾಹಿತಿ ಮೂಲಗಳೂ ಇರಲಿಲ್ಲ. ಹೀಗೆ ಸಾಗಿ ಬಂದ ಹಾದಿಗೆ ಈಗ 44 ವರ್ಷಗಳು ತುಂಬಿವೆ. ಹಾಗಂತ, ಈ ಹಾ ದಿಯೇನೂ ಸರಾಗವಾಗಿರಲಿಲ್ಲ. ದಾರಿಯುದ್ದಕ್ಕೂ ಕಲ್ಲು-ಮುಳ್ಳುಗಳು ಮತ್ತು ಅಡೆ-ತಡೆಗಳು ಸಹಜವಾಗಿಯೇ ಎದುರಾಗಿವೆ. ಕೇಸೂ ದಾಖಲಾಗಿವೆ. ಸಂಪಾದಕರು ಮತ್ತು ಮಂಡಳಿ ಸದಸ್ಯರು ವರ್ಷಗಟ್ಟಲೆ ಕೋರ್ಟು-ಕಚೇರಿ ಎಂದು ಅಲೆದದ್ದಿದೆ. ಸಂಪಾದಕರನ್ನೇ ಜೈಲಿಗೆ ತಳ್ಳಿದ್ದೂ ಇದೆ. ಆದರೆ ಇವಾವೂ ಸನ್ಮಾರ್ಗವನ್ನು ತನ್ನ ಘೋಷಿತ ಧ್ಯೇಯದಿಂದ ಹಿಂಜರಿಸಲು ಶಕ್ತವಾಗಿಲ್ಲ. ಮೌಲ್ಯಗಳೊಂದಿಗೆ ರಾಜಿ ಮಾಡಿಕೊಂಡರೆ ಪತ್ರಿಕಾ ರಂಗದಲ್ಲಿ ರಾಜನಂತೆ ಮೆರೆಯಬಹುದು ಎಂಬ ಈಗಿನ ವಾತಾವರಣದ ನಡುವೆ ಸನ್ಮಾರ್ಗ ಈ ಆಮಿಷಕ್ಕೆಂದೂ ಬಲಿಯಾಗಿಲ್ಲ. ಕಳಂಕಿತ ರಾಜನಿಗಿಂತ ಶಿಸ್ತುಬದ್ಧ ನಾಗರಿಕನಾಗಿರುವುದನ್ನೇ ಸನ್ಮಾರ್ಗ ತನ್ನ ಆಯ್ಕೆಯಾಗಿ ಎತ್ತಿ ಹಿಡಿದಿದೆ. ಮುಂದೆಯೂ ಎತ್ತಿ ಹಿಡಿಯಲಿದೆ. ಇನ್‌ಶಾ ಅಲ್ಲಾಹ್.

ಎಲ್ಲರಿಗೂ 45ನೇ ವರ್ಷದ ಶುಭಾಶಯಗಳು.

No comments:

Post a Comment