Wednesday 27 April 2022

ದ್ವೇಷದ ಕ್ರಿಯೆಗೆ ಫಾತಿಮಾ ಎಂಬ ಪ್ರತಿಕ್ರಿಯೆ




ಇಸ್ಲಾಮ್ ಮತ್ತು ಮುಸ್ಲಿಮರ ವಿರುದ್ಧ ರಾಜ್ಯದಲ್ಲಿ ಬಿಜೆಪಿ ಹಾಗೂ ಸಂಘಪರಿವಾರ ನಡೆಸುತ್ತಿರುವ ಅಭಿಯಾನ ರೂಪದ ಕ್ರಿಯೆಗಳಿಗೆ  ತಮಿಳುನಾಡಿನಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಮಿಳುನಾಡಿನ ಖ್ಯಾತ ಮೋಟಿವೇಶನಲ್ ಸ್ಪೀಕರ್ ಮತ್ತು ಸಾಮಾಜಿಕ  ಕಾರ್ಯಕರ್ತೆ ಶಬರಿಮಲ ಜಯಕಾಂತನ್ ಇಸ್ಲಾಮ್ ಸ್ವೀಕರಿಸಿದ್ದಾರೆ. ಸೌದಿ ಅರೇಬಿಯಾದ ಮಸ್ಜಿದುಲ್ ಹರಾಮ್‌ನಲ್ಲಿರುವ ಕಅಬಾದ ಎದುರು ಇಸ್ಲಾಮ್  ಸ್ವೀಕರಿಸಿದ ಅವರು ತನ್ನ ಹೆಸರನ್ನು ಫಾತಿಮಾ ಶಬರಿಮಲ ಎಂದು ಮರು ನಾಮಕರಣ ಮಾಡಿಕೊಂಡಿದ್ದಾರೆ. ಮಾತ್ರವಲ್ಲ, ತಾನೇಕೆ  ಇಸ್ಲಾಮ್ ಸ್ವೀಕರಿಸಿದೆ ಎಂಬುದನ್ನೂ ಹೀಗೆ ಸ್ಪಷ್ಟಪಡಿಸಿದ್ದಾರೆ-

‘ಪ್ರಪಂಚದಾದ್ಯಂತ  ಮುಸ್ಲಿಮರ ಮೇಲೆ ಯಾಕೆ ಇಷ್ಟೊಂದು ದ್ವೇಷವಿದೆ ಎಂದು ನನ್ನನ್ನು ನಾನು ಕೇಳಿಕೊಂಡೆ. ನಂತರ ತಟಸ್ಥ ಮನಸ್ಸಿನಿಂದ ಕುರ್‌ಆನ್ ಓದಲು ಆರಂಭಿಸಿದೆ. ಹಾಗೆ ನಾನು ಈ ಸತ್ಯ ಅರ್ಥ ಮಾಡಿಕೊಂಡೆ. ನಿಜವಾಗಿ, ಮುಸ್ಲಿಮರ ಕೈಯಲ್ಲಿ ಕುರ್‌ಆನ್  ಎಂಬ ಅದ್ಭುತವಾದ ಗ್ರಂಥವಿದೆ. ಅವರು ಅದನ್ನು ತಮ್ಮಲ್ಲೇ  ಇಟ್ಟುಕೊಳ್ಳದೇ ಜಗತ್ತಿಗೆ ಹಂಚಬೇಕು...’ ಎಂದೂ ಸಲಹೆ ನೀಡಿದ್ದಾರೆ.  ಅಂದಹಾಗೆ,

ಕುರ್‌ಆನನ್ನು ಅಧ್ಯಯನ ಮಾಡಿ ಮತ್ತು ಅದರ ವಿಚಾರಧಾರೆಗೆ ಮನಸೋತು ಇಸ್ಲಾಮ್ ಸ್ವೀಕರಿಸಿದವರಲ್ಲಿ ಶಬರಿಮಲ ಜಯಕಾಂತನ್  ಮೊದಲಿಗರೇನೂ ಅಲ್ಲ. ಖ್ಯಾತ ಸಾಹಿತಿ, ಕಾದಂಬರಿಗಾರ್ತಿ ಕೇರಳದ ಕಮಲಾದಾಸ್ ಅವರು ಕಮಲಾ ಸುರಯ್ಯ ಆಗಿ ರಾಷ್ಟ್ರ ಮಟ್ಟದಲ್ಲಿ  ಈ ಹಿಂದೆ ಸುದ್ದಿಗೀಡಾಗಿದ್ದರು. ಮಾತ್ರವಲ್ಲ, ಜಗತ್ತಿನಾದ್ಯಂತ ಜನರು ಇಸ್ಲಾಮನ್ನು ಅಧ್ಯಯನ ಮಾಡುವ ಮತ್ತು ಅದರ ಭಾಗವಾಗುವ  ಪ್ರಕ್ರಿಯೆಗಳು ನಡೆಯುತ್ತಲೂ ಇವೆ. ಅಚ್ಚರಿ ಏನೆಂದರೆ,

ಕುರ್‌ಆನನ್ನು ಮತ್ತು ಮುಸ್ಲಿಮರನ್ನು ಅವಮಾನಿಸುವ, ನಿಂದಿಸುವ ಮತ್ತು ಭೀಕರವಾಗಿ ವ್ಯಾಖ್ಯಾನಿಸುವ ಪ್ರಕ್ರಿಯೆಗಳು ಪ್ರತಿದಿನ  ನಡೆಯುತ್ತಿರುವಾಗಲೂ ಜನರೇಕೆ ಇಸ್ಲಾಮ್‌ನ ಭಾಗವಾಗುತ್ತಿದ್ದಾರೆ ಎಂಬುದು. ಕರ್ನಾಟಕವನ್ನೇ ಎತ್ತಿಕೊಳ್ಳಿ. ಕಳೆದ ಎರಡ್ಮೂರು ತಿಂಗಳಿನಿಂದ ಕುರ್‌ಆನನ್ನು ಮತ್ತು ಮುಸ್ಲಿಮರನ್ನು ಗುರಿ ಮಾಡಿಕೊಂಡು ಏನೆಲ್ಲ ಚಟುವಟಿಕೆಗಳು ನಡೆಯುತ್ತಿಲ್ಲ? ಆಳುವ ಬಿಜೆಪಿ ಸರ್ಕಾರ  ಮತ್ತು ಅದರ ಬೆಂಬಲಿಗ ಪರಿವಾರಗಳು ಪ್ರತಿದಿನ ಒಂದಲ್ಲ ಒಂದು ನೆಪವನ್ನು ಮುಂದು ಮಾಡಿಕೊಂಡು ಮುಸ್ಲಿಮರನ್ನು ಪ್ರಚೋ ದಿಸುತ್ತಿದೆ. ಅಕ್ಷಯ ತೃತೀಯಕ್ಕೆ ಮುಸ್ಲಿಮರ ಒಡೆತನದ ಮಳಿಗೆಗಳಿಂದ ಚಿನ್ನ ಖರೀದಿಸಬೇಡಿ ಎಂಬುದು ಈ ಪ್ರಚೋದನೆಯ ಹೊಚ್ಚ  ಹೊಸ ಬೆಳವಣಿಗೆ. ಅಂದಹಾಗೆ, 

ಈ ಪ್ರಕ್ರಿಯೆ ಹಿಜಾಬ್‌ನೊಂದಿಗೆ ಆರಂಭವಾಯಿತು. ಆ ಬಳಿಕ ಮುಸ್ಲಿಮರಿಗೆ ಬಹಿಷ್ಕಾರದ ಕರೆ  ಕೊಡಲಾಯಿತು. ಬಳಿಕ ಹಲಾಲ್ ಆಹಾರ ಕ್ರಮವನ್ನು ಪ್ರಶ್ನಿಸಲಾಯಿತು. ಇದರ ನಡುವೆ ಆಳುವ ಸರ್ಕಾರದ ನಾಯಕ ಸಿ.ಟಿ. ರವಿ  ಮಾಧ್ಯಮಗಳ ಮುಂದೆ ಕುರ್‌ಆನ್ ಸೂಕ್ತಗಳನ್ನು ಓದಿ ಹೇಳಿದರು ಮತ್ತು ಇವು ಸಾಮರಸ್ಯಕ್ಕೆ ಕಂಟಕ ಎಂದು ಸಾರಿದರು. ನಬಿಸಾಬ್  ಎಂಬ ಬಿಜಾಪುರದ ಬಡ ವ್ಯಾಪಾರಿಯ ಕಲ್ಲಂಗಡಿ ಹಣ್ಣುಗಳನ್ನು ನೆಲಕ್ಕೆ ಜಜ್ಜಿ ನಾಶಪಡಿಸಿದ ಘಟನೆಯೂ ನಡೆಯಿತು. ಹಾಗಂತ,

ಈ ದ್ವೇಷದ ದಾಳಿ ಕೇವಲ ಕರ್ನಾಟಕದಲ್ಲಿ ಮಾತ್ರ ನಡೆಯುತ್ತಿರುವುದಲ್ಲ. ಇದು ದೇಶದಾದ್ಯಂತ ಹರಡಿದೆ. ಇತ್ತೀಚೆಗೆ ನಡೆದ ರಾಮ ನವಮಿ ಮತ್ತು ಹನುಮಾನ್ ಜಯಂತಿ ರ‍್ಯಾಲಿಯ ವೇಳೆ ಮುಸ್ಲಿಮರನ್ನು ಪ್ರಚೋದಿಸುವ ಹಲವು ಬೆಳವಣಿಗೆಗಳು ನಡೆದುವು. ಮಸೀದಿಗಳ ಎದುರು ಉದ್ದೇಶಪೂರ್ವಕವಾಗಿ ಘೋಷಣೆ ಕೂಗುವ ಮತ್ತು ಅಲ್ಲಿ ನಿಂತು ನರ್ತನ ಮಾಡುವ ಸನ್ನಿವೇಶಗಳೂ  ಸೃಷ್ಟಿಯಾದುವು. ದೆಹಲಿಯ ಜಹಾಂಗೀರ್‌ಪುರ್ ಪ್ರದೇಶದಲ್ಲಂತೂ ಇದು ಬಟಾಬಯಲಾಯಿತು. ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಕಿರಣ್  ಮತ್ತು ರಾಜಾ ಎಂಬಿಬ್ಬರು ಇಂಡಿಯಾ ಟುಡೇ ಚಾನೆಲ್‌ಗೆ ಈ ಬಗ್ಗೆ ವಿವರವಾಗಿ ಮಾಹಿತಿ ಕೊಟ್ಟಿದ್ದರು ಮತ್ತು ತನ್ನ ರಹಸ್ಯ  ಕ್ಯಾಮರಾದಲ್ಲಿ ಅವೆಲ್ಲವನ್ನೂ ಚಾನೆಲ್ ವರದಿಗಾರ ಸೆರೆಹಿಡಿದಿದ್ದ. ಆ ಬಳಿಕ ಚಾನೆಲ್ ಅದರ ಪ್ರಸಾರವನ್ನೂ ಮಾಡಿತ್ತು. ಜಹಾಂಗೀರ್ ಪುರ್‌ನ ಮಸೀದಿ ಗೇಟ್‌ನ ಮುಂದೆ ರ‍್ಯಾಲಿಯನ್ನು ಸ್ಥಗಿತಗೊಳಿಸಿ ಘೋಷಣೆ ಕೂಗಿದ್ದು ಮತ್ತು ಅಲ್ಲಿ ನರ್ತನ ಮಾಡಿದ್ದನ್ನು ಅವರಿಬ್ಬರೂ  ಮುಕ್ತವಾಗಿ ಹೇಳಿಕೊಂಡಿದ್ದರು. ಮಾತ್ರವಲ್ಲ, ದೇಶದ ವಿವಿಧೆಡೆ ನಡೆದಿರುವ ಇಂತಹ ರ‍್ಯಾಲಿಗಳಲ್ಲಿ ಅತ್ಯಂತ ನಿಂದನೀಯ ಘೋಷಣೆಗಳು  ಕೂಗಲಾಗಿರುವ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆಯೂ ಆಗಿದ್ದುವು. ಹುಬ್ಬಳ್ಳಿಯಲ್ಲಿ ಪಿಯುಸಿ  ವಿದ್ಯಾರ್ಥಿಯೋರ್ವ ಮುಸ್ಲಿಮರನ್ನು ಪ್ರಚೋದಿಸುವ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಹಾಗಂತ,

ಇಂಥ ಬೆಳವಣಿಗೆಗಳಿಗೆ ನಕಾರಾತ್ಮಕ ಮುಖವೊಂದೇ ಇರುವುದಲ್ಲ ಮತ್ತು ತಾಳ್ಮೆರಹಿತ ಪ್ರತಿಕ್ರಿಯೆಯೊಂದೇ ಇದಕ್ಕೆ ಉತ್ತರವೂ ಅಲ್ಲ.  ಮುಸ್ಲಿಮರು ತಾಳ್ಮೆಗೆಡಬೇಕು ಎಂಬುದು ಪ್ರಚೋದಿಸುವವರ ಹುನ್ನಾರ. ತಾಳ್ಮೆಗೆಟ್ಟರೆ ಏನೇನು ಮಾಡಬೇಕು ಎಂಬ ಚಿತ್ರಕತೆಯನ್ನು ಪ್ರಚೋದಿಸುವವರು ಆ ಮೊದಲೇ ಸಿದ್ಧಪಡಿಸಿ ಇಟ್ಟಿರುತ್ತಾರೆ. ರಾಜ್ಯದ ಹುಬ್ಬಳ್ಳಿ, ಮಧ್ಯಪ್ರದೇಶದ ಕಾರ್ಗೋನ್, ದೆಹಲಿಯ  ಜಹಾಂಗೀರ್‌ಪುರ್‌ನ ಬೆಳವಣಿಗೆಗಳು ಇದನ್ನೇ ಸ್ಪಷ್ಟಪಡಿಸುತ್ತವೆ. ಅಭಿಷೇಕ್ ಹಿರೇಮಠ ಎಂಬ ಪಿಯು ವಿದ್ಯಾರ್ಥಿಯೋರ್ವನ  ಕುಚೋದ್ಯಕ್ಕೆ ತಾಳ್ಮೆಗೆಟ್ಟ ಹುಬ್ಬಳ್ಳಿಯ ಮುಸ್ಲಿಮ್ ಸಮುದಾಯದ ನೂರಾರು ಮಂದಿ ಇವತ್ತು ಜೈಲಲ್ಲಿದ್ದಾರೆ. ಕಾರ್ಗೋನ್‌ನಲ್ಲಿ ತಾಳ್ಮೆಗೆಟ್ಟ  ಮುಸ್ಲಿಮ್ ಸಮುದಾಯದ ಸುಮಾರು 175ರಷ್ಟು ಮಂದಿ ಜೈಲಲ್ಲಿದ್ದಾರೆ. ಅವರಲ್ಲಿ ಅನೇಕರ ಕಟ್ಟಡಗಳನ್ನು ಬುಲ್ಡೋಜರ್‌ನಿಂದ ನಾಶಪಡಿಸಲಾಗಿದೆ. ದೆಹಲಿಯ ಜಹಾಂಗೀರ್‌ಪುರ್‌ನಲ್ಲಿ ತಾಳ್ಮೆಗೆಟ್ಟ ಸಮುದಾಯಕ್ಕೆ ಉಡುಗೊರೆಯಾಗಿ ಲಭಿಸಿದ್ದೂ ಇದೇ ಜೈಲು ಮತ್ತು  ಬುಲ್ಡೋಜರ್. ಅಂದಹಾಗೆ,

ಪ್ರತಿ ಕ್ರಿಯೆಗೂ ಪ್ರತಿಕ್ರಿಯೆ ಇದ್ದೇ  ಇರುತ್ತದೆ ಎಂಬುದು ಎಷ್ಟು ಸರಿಯೋ ಪ್ರತಿ ಕ್ರಿಯೆಯ ಉದ್ದೇಶವನ್ನು ಅರಿತುಕೊಂಡು ಮಾಡುವ  ಪ್ರತಿಕ್ರಿಯೆಯೇ ಅತ್ಯುತ್ತಮವಾದುದು ಎಂಬುದೂ ಅಷ್ಟೇ ಸರಿ. ಇಲ್ಲಿ ಸದ್ಯ ಇಸ್ಲಾಮ್ ಮತ್ತು ಮುಸ್ಲಿಮರ ವಿರುದ್ಧ ನಡೆಯುತ್ತಿರುವ ಪ್ರತಿ  ಕ್ರಿಯೆಯ ಹಿಂದೆಯೂ ಕ್ರಿಯೆ ಎಂಬ ಎರಡಕ್ಷರಕ್ಕಿಂತ ಹೊರತಾದ ನಿರ್ದಿಷ್ಟ ಉದ್ದೇಶಗಳಿವೆ. ಇಲ್ಲಿನ ಯಾವ ಕ್ರಿಯೆಯೂ ತP್ಷÀಣದ ಮತ್ತು  ಅಚಾನಕ್ ಆಗಿ ವ್ಯಕ್ತವಾಗುವ ಕ್ರಿಯೆಗಳಲ್ಲ. ಇದರ ಹಿಂದೆ ಹುನ್ನಾರಗಳಿವೆ. ರಾಜಕೀಯ ದುರುದ್ದೇಶವಿದೆ. ಮುಸ್ಲಿಮರನ್ನು  ತಾಳ್ಮೆಗೆಡಿಸಲೇಬೇಕು ಎಂಬ ಸ್ಪಷ್ಟ ಚಿತ್ರಕತೆಯಿದೆ. ಆದ್ದರಿಂದಲೇ ಪ್ರತಿಕ್ರಿಯೆಯ ವೇಳೆ ಈ ಹುನ್ನಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.  ಪ್ರಚೋದಿಸುವವರು ತೋಡುವ ದ್ವೇಷವೆಂಬ ಕುಲುಮೆಗೆ ತಾಳ್ಮೆಗೆಟ್ಟು ಬೀಳುವುದು ಜಾಣತನವಲ್ಲ. ಅದು ಕುಲುಮೆ ತಯಾರಿಸಿಟ್ಟವರ  ಬಯಕೆ. ಅವರ ಈ ಬಯಕೆಯನ್ನು ವಿಫಲಗೊಳಿಸುವ ಜಾಣತನದ ದಾರಿಯನ್ನು ಮುಸ್ಲಿಮರು ಆರಿಸಿಕೊಳ್ಳಬೇಕು. ರಾಜ್ಯದಲ್ಲಿ ಹುಬ್ಬಳ್ಳಿ  ಪ್ರಕರಣವೊಂದನ್ನು ಬಿಟ್ಟರೆ ಉಳಿದಂತೆ ಎಲ್ಲ ಪ್ರಚೋದನಾತ್ಮಕ ಕ್ರಿಯೆಗಳಿಗೆ ಮುಸ್ಲಿಮರು ಅತ್ಯಂತ ಜಾಣತನದ ಮತ್ತು ಪ್ರಬುದ್ಧ  ಪ್ರತಿಕ್ರಿಯೆಯನ್ನು ನೀಡಿದ್ದಾರೆ. ದ್ವೇಷದ ಕುಲುಮೆಗೆ ಬಲಿಯಾಗುವುದರಿಂದ ತಪ್ಪಿಸಿಕೊಂಡಿದ್ದಾರೆ. ಹಾಗಂತ,

ಯಾವುದೇ ನಕಾರಾತ್ಮಕ ಪ್ರಚೋದನೆಗೂ ಒಂದೇ ಮುಖ ಇರುವುದಲ್ಲ. ಕುರ್‌ಆನನ್ನು ಅಥವಾ ಯಾವುದೇ ಧರ್ಮಗ್ರಂಥವನ್ನು ಯಾರು  ಅಪಪ್ರಚಾರಕ್ಕೆ ಬಳಸುತ್ತಾರೋ ಅವರೇ ಪರೋಕ್ಷವಾಗಿ ಆಯಾ ಗ್ರಂಥಗಳ ಅಧ್ಯಯನಕ್ಕೆ ಜನರನ್ನು ಪ್ರೇರೇಪಿಸುತ್ತಾರೆ ಎಂಬುದೂ ಅಷ್ಟೇ  ನಿಜ. ಪ್ರಚೋದನೆಯ ಭಾಷೆಗೆ ತಾಳ್ಮೆ ಮತ್ತು ಬುದ್ಧಿವಂತಿಕೆಯ ಉತ್ತರದಲ್ಲೂ ಇದೇ ಗುಣವಿದೆ. ಅವರೇಕೆ ಇನ್ನೂ ತಾಳ್ಮೆಯಿಂದಿದ್ದಾರೆ  ಮತ್ತು ಪ್ರಚೋದಿತರಾಗುವುದಿಲ್ಲ ಎಂಬುದು ಜನರಲ್ಲಿ ಕುತೂಹಲವಾಗಿ ಮಾರ್ಪಟ್ಟು, ಇಸ್ಲಾಮ್‌ನ ಅಧ್ಯಯನಕ್ಕೆ ಪ್ರೇರಣೆಯಾಗುವುದಕ್ಕೂ  ಸಾಧ್ಯವಿದೆ. ಯಾವ ಕ್ರಿಯೆಗೂ ಏಕಮುಖವಿಲ್ಲ ಮತ್ತು ಈ ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯೂ ಇನ್ನೊಬ್ಬರಿಗಿಂತ ಭಿನ್ನ. ಆಲೋಚನೆಯೂ  ಭಿನ್ನ. ಆದ್ದರಿಂದ ಕೆಲವರು ಕುರ್‌ಆನನ್ನೋ ಮುಸ್ಲಿಮರನ್ನೋ ನಿಂದಿಸಿದರೆ ಆ ನಿಂದನೆಯು ಸರ್ವರನ್ನೂ ನಕಾರಾತ್ಮಕ ರೂಪದಲ್ಲೇ   ತಲುಪಬೇಕೆಂದಿಲ್ಲ. ಇದಕ್ಕೆ ತಾಜಾ ಉದಾಹರಣೆ ಶಬರಿಮಲ ಜಯಕಾಂತನ್. ಶಿಕ್ಷಕಿಯಾಗಿದ್ದ ಮತ್ತು ನೀಟ್ ಪರೀಕ್ಷೆಯನ್ನು ವಿರೋಧಿಸಿ  ಹುದ್ದೆಗೆ ರಾಜೀನಾಮೆ ಕೊಟ್ಟು ಸಾಮಾಜಿಕ ಕಾರ್ಯಕರ್ತೆಯಾಗಿ, 6 ಲಕ್ಷಕ್ಕೂ ಅಧಿಕ ಹೆಣ್ಣು ಮಕ್ಕಳಲ್ಲಿ ಸುರಕ್ಷತೆಯ ಅರಿವು  ಮೂಡಿಸಿರುವ ಈ ಮಹಿಳೆ ನಮ್ಮ ಪಕ್ಕದ ರಾಜ್ಯದವರು. ಅವರ ಮೇಲೆ ಮುಸ್ಲಿಮ್ ವಿರೋಧಿ ದ್ವೇಷ ಪ್ರಚಾರಗಳು ಸಕಾರಾತ್ಮಕ  ಪರಿಣಾಮವನ್ನು ಬೀರಿವೆ ಎಂಬುದಕ್ಕೆ ಅವರು ಫಾತಿಮ ಶಬರಿಮಲ ಆಗಿರುವುದೇ ಅತ್ಯುತ್ತಮ ನಿದರ್ಶನ. ನಿಜವಾಗಿ,

ದ್ವೇಷದ ಕ್ರಿಯೆಗೆ ಫಾತಿಮ ಅತ್ಯುತ್ತಮ ಪ್ರತಿಕ್ರಿಯೆ.

No comments:

Post a Comment