Tuesday 14 June 2022

ಧರ್ಮ ದಂಗಲ್ ಎನ್ನುತ್ತಾ ರಂಗಭೂಮಿಗೆ ಕನ್ನ ಕೊರೆದ ಟಿವಿ ಚಾನೆಲ್ ಗಳು

 



ಮುಸ್ಲಿಮರನ್ನೇ ಕೇಂದ್ರೀಕರಿಸಿ ‘ಧರ್ಮ ದಂಗಲ್’ ಎಂಬಂಥ  ಪ್ರಚೋದಕ ಶೀರ್ಷಿಕೆಗಳನ್ನು ಕೊಟ್ಟು ಟಿ.ವಿ. ಚಾನೆಲ್‌ಗಳು ನಡೆಸುತ್ತಿದ್ದ  ಚರ್ಚೆಯಿಂದ ರೋಮಾಂಚನಗೊಂಡವರಂತೆ  ವರ್ತಿಸುತ್ತಿದ್ದವರ ಮಾತಿನ ವರಸೆ ಬದಲಾಗುತ್ತಿದೆ.

`ರಾತ್ರಿ 10ರಿಂದ ಮುಂಜಾನೆ 6ರ ವರೆಗೆ ಮೈಕ್ ಬಳಸಬಾರದು ಎಂಬ ಸುಪ್ರೀಮ್ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸಿ...'  ಎಂದು ಒತ್ತಾಯಿಸಿ ಅಭಿಯಾನ ನಡೆಸಿದವರ ಧ್ವನಿ ತಗ್ಗಿದೆ. ಮೌನವಾಗಿದ್ದವರಿಗೆ ಧ್ವನಿ ಬಂದಿದೆ. ಯಕ್ಷಗಾನ ಕ್ಷೇತ್ರದ ಕಲಾವಿದರು ಮೈಕ್  ನಿಷೇಧದಿಂದಾಗುವ ಪರಿಣಾಮಗಳ ಬಗ್ಗೆ ಮೊದಲ ಬಾರಿ ಮಾತಾನಾಡಿದ್ದಾರೆ. ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ, ಕಲಾವಿದರಾದ  ಚಂದ್ರಶೇಖರ ಮುಂಡಾಜೆ, ವಿಶ್ವನಾಥ ನಾಯಕ್ ಕಾರಿಂಜೆ ಮುಂತಾದವರು ಮೈಕ್ ನಿಷೇಧಕ್ಕೆ ಅಸಮಾಧಾನವನ್ನು ಮಾಧ್ಯಮಗಳ  ಮುಂದೆ ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಯಕ್ಷಗಾನ ಸಂಜೆ 6ರಿಂದ ಬೆಳಿಗ್ಗೆ 6ರ ವರೆಗೆ ನಡೆಯುವ ಸಂಪ್ರದಾಯವಿದ್ದು, ಇದು  ಬಹುತೇಕ ಮೈಕನ್ನೇ ಅವಲಂಬಿಸಿದೆ. ಮೈಕ್ ಇಲ್ಲದ ಯಕ್ಷಗಾನವನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲದ ಕಾರಣ, ನಿಯಮದಿಂದ  ಯಕ್ಷಗಾನಕ್ಕೆ ವಿನಾಯಿತಿ ನೀಡಬೇಕು ಎಂದು ಪಟ್ಲ ಸತೀಶ್ ಶೆಟ್ಟಿ ಸರ್ಕಾರವನ್ನು ಕೋರಿದ್ದಾರೆ. ಹಾಗಂತ,

ರಾತ್ರಿ 10ರಿಂದ ಬೆಳಿಗ್ಗೆ 6ರ ವರೆಗೆ ಮೈಕ್ ಬಳಕೆಯನ್ನು ನಿರ್ಬಂಧಿಸಿ ಸರ್ಕಾರ ಸುತ್ತೋಲೆ ಹೊರಡಿಸಿದ್ದು ದಿಢೀರ್ ಆಗಿ ಅಲ್ಲ.

ಮೈಕನ್ನು ಕೇಂದ್ರೀಕರಿಸಿ ಚರ್ಚೆ ನಡೆಯುವುದಕ್ಕಿಂತ ಮರ‍್ನಾಲ್ಕು ತಿಂಗಳುಗಳ ಮೊದಲೇ ರಾಜ್ಯದಲ್ಲಿ ಮುಸ್ಲಿಮರನ್ನು ಗುರಿ ಮಾಡಿ  ಚರ್ಚೆ ಪ್ರಾರಂಭವಾಗಿತ್ತು. ಮುಸ್ಲಿಮ್ ವಿದ್ಯಾರ್ಥಿನಿಯರು ಧರಿಸುವ ಹಿಜಾಬ್ ಈ ಚರ್ಚೆಗೆ ಮುನ್ನುಡಿ ಬರೆಯಿತು. ಈ ಚರ್ಚೆಯನ್ನು ಎಷ್ಟು ಏಕಮುಖ ಗೊಳಿಸಲಾಯಿತೆಂದರೆ, ಬಿಂದಿ, ಕಾಲುಂಗುರ, ರುದ್ರಾಕ್ಷಿ ಮಾಲೆ, ನಾಮ, ಸಿಕ್ಖರ ಟರ್ಬನ್... ಎಲ್ಲವನ್ನೂ ಸಂಸ್ಕೃತಿಯ  ಹೆಸರಲ್ಲಿ ಸಮರ್ಥಿಸುತ್ತಾ, ಹಿಜಾಬನ್ನು ಮಾತ್ರ ಧಾರ್ಮಿಕ ಉಡುಪು ಎಂದು ವಿಭಜಿಸಲಾಯಿತು. ಹಿಜಾಬ್‌ಧಾರಿ ವಿದ್ಯಾರ್ಥಿನಿಯರನ್ನು ಇದೇ ಮೊದಲ ಬಾರಿ ನೋಡುವಂತೆ ಮಾಧ್ಯಮ ಕ್ಯಾಮರಾಗಳು ಬೆರಗಿನಿಂದ ಸೆರೆ ಹಿಡಿದುವು. ಆವರೆಗೆ ಹಿಜಾಬ್ ಧರಿಸಿ ತರಗತಿಯೊಳಗೆ ಕುಳಿತು ಪಾಠ ಕೇಳಲು ಅನುಮತಿಯಿತ್ತಿದ್ದ ಕಾಲೇಜುಗಳೇ ಹಿಜಾಬ್ ವಿರೋಧಿ ಅಬ್ಬರಕ್ಕೆ ಮಣಿದು ಅನುಮತಿ ನಿರಾಕರಿಸಿದುವು. ಸರ್ಕಾರವೇ ತನ್ನ ಈ ಹಿಂದಿನ ಸುತ್ತೋಲೆಯನ್ನು ತಿದ್ದಿ ಹೊಸ ಸುತ್ತೋಲೆಯನ್ನು ಹೊರಡಿಸಿತು.  ಹಿಜಾಬ್‌ನ ವಿರುದ್ಧ ಕೇಸರಿ ಶಾಲು ರಂಗಪ್ರವೇಶಿಸಿತು. ನಿಜವಾಗಿ,

ಹಿಜಾಬ್ ಎಂಬುದು ವಿದ್ಯಾರ್ಥಿನಿಯರು ಮತ್ತು ಶಾಲಾಡಳಿತದ ನಡುವಿನ ವಿಷಯವೇ ಹೊರತು ಹಿಂದೂಗಳು ಮತ್ತು  ಮುಸ್ಲಿಮರ ನಡುವಿನದ್ದಲ್ಲ. ಆದರೆ, ಸಚಿವರು, ಆಳುವ ಪಕ್ಷದ ಜನಪ್ರತಿನಿಧಿಗಳು ಮತ್ತು ಮಾಧ್ಯಮಗಳು ಇಡೀ ವಿಷಯವನ್ನು ಹಿಂದೂ- ಮುಸ್ಲಿಮ್ ಆಗಿ ಪರಿವರ್ತಿಸಿದುವು. ಸರ್ಕಾರ ಹೈಕೋರ್ಟ್ನಲ್ಲಿ ಹಿಜಾಬ್‌ನ ವಿರುದ್ಧ ವಾದಿಸಿತು. ವಿದ್ಯಾರ್ಥಿನಿಯರ  ಶಿಕ್ಷಣ ಮೊಟಕುಗೊಳ್ಳದಂತೆ ನೋಡಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕಾದ ಸರಕಾರವು ಅಚ್ಚರಿಯೆಂಬಂತೆ  ಅದಕ್ಕೆ ವಿರುದ್ಧವಾಗಿ ವರ್ತಿಸಿತು.  ಗೇಟು ಹಾಕಿ ವಿದ್ಯಾರ್ಥಿನಿಯರು ಕ್ಯಾಂಪಸ್ ಪ್ರವೇಶಿಸದಂತೆ ತಡೆಯುವುದಕ್ಕೆ ತಾನೇ ನೇತೃತ್ವ ನೀಡಿತು. ಮುಸ್ಲಿಮರನ್ನು ಖಳರಂತೆ,  ಕರ್ಮಠರಂತೆ, ಮತ್ತು ಹಿಂದೂ ವಿರೋಧಿಗಳಂತೆ ಬಿಂಬಿಸುವ ಶ್ರಮ ಸರ್ಕಾರದಿಂದ ಹಿಡಿದು ಮಾಧ್ಯಮಗಳ ವರೆಗೆ ಬಿರುಸಾಗಿ  ನಡೆಯಿತು. ಇದರ ಬೆನ್ನಿಗೇ ಮುಸ್ಲಿಮರಿಗೆ ವ್ಯಾಪಾರ ಬಹಿಷ್ಕಾರ ಹೇರುವ ಕೂಗು ಕೇಳಿ ಬಂತು. ಜಾತ್ರೆಗಳಲ್ಲಿ ಮುಸ್ಲಿಮ್ ವರ್ತಕರು  ಅಂಗಡಿ ಇಡುವಂತಿಲ್ಲ ಎಂಬುದನ್ನು ಘಂಟಾಘೋಷವಾಗಿ ಸಾರಲಾಯಿತು. ಸಚಿವರೇ ಇಂಥ ಪ್ರಕ್ರಿಯೆಯನ್ನು ಕಾನೂನಿನ ನೆಪದಲ್ಲಿ  ಸಮರ್ಥಿಸಿದರು. ದೇವಾಲಯದ ಸಮೀಪ ಕಲ್ಲಂಗಡಿ ಇಟ್ಟಿದ್ದ ನಬಿಸಾಬ್ ಎಂಬ ವಯೋವೃದ್ಧನ ಕಲ್ಲಂಗಡಿ ಹಣ್ಣುಗಳನ್ನು ನೆಲಕ್ಕೆ  ಚೆಲ್ಲಲಾಯಿತು. ಆ ಬಳಿಕ ಹಲಾಲ್ ಆಹಾರದ ಬಗ್ಗೆ ಚರ್ಚೆ ಶುರುವಾಯಿತು. ಹಲಾಲ್‌ಗೆ ವಿರುದ್ಧವಾಗಿ ಜಟ್ಕಾ ಕಟ್ ಅನ್ನು ಮುನ್ನೆಲೆಗೆ  ತರಲಾಯಿತು. ಜಟ್ಕಾ ಕಟ್ ಅಂಗಡಿಗಳು ತೆರೆದುವು. ಹಲಾಲ್ ಪದ್ಧತಿಯನ್ನು ಹಿಂದೂ ವಿರೋಧಿ ಎಂದು ಬಿಂಬಿಸಿ, ಅದರ ಸುತ್ತ ಹಲವು ಕಲ್ಪಿತ ಕತೆಗಳನ್ನು ಹುಟ್ಟು ಹಾಕಿ ಸಮಾಜವನ್ನು ಹಿಂದೂ ಮುಸ್ಲಿಮ್ ಆಗಿ ಒಡೆಯುವ ಪ್ರಯತ್ನ ನಡೆಯಿತು. ಹಲಾಲ್  ಮಾಂಸೋದ್ಯಮದಿಂದ  ಬರುವ ಹಣವು ಭಯೋತ್ಪಾದನೆಗೆ ಬಳಕೆಯಾಗುತ್ತಿದೆ ಎಂಬ ವದಂತಿಯನ್ನು ಹಬ್ಬಲಾಯಿತು. ಇದರ  ಜೊತೆಜೊತೆಗೇ ಮುಸ್ಲಿಮ್ ವ್ಯಾಪಾರಿಗಳಿಗೆ ಮಾವು ಮಾರಬೇಡಿ, ಕುರಿ, ಆಡುಗಳನ್ನು ಮಾರಬೇಡಿ ಎಂದೆಲ್ಲಾ ಕರೆ ಕೊಡಲಾಯಿತು.  ಇದೇವೇಳೆ,
`ಅಕ್ಷಯ ತೃತೀಯದ ಪ್ರಯುಕ್ತ ಚಿನ್ನ ಖರೀದಿಸುವವರು ಹಿಂದೂಗಳ ಮಳಿಗೆಗಳನ್ನೇ  ಆಯ್ಕೆ ಮಾಡಿಕೊಳ್ಳಿ' ಎಂಬ ಪ್ರಚಾರವೂ  ನಡೆಯಿತು. ಆ ಬಳಿಕದ್ದೇ  ಮೈಕ್ ಚರ್ಚೆ.

ಮೈಕ್ ಬಳಕೆಯ ಬಗ್ಗೆ ಸುಪ್ರೀಮ್ ತೀರ್ಪನ್ನು ಎತ್ತಿಕೊಂಡು ಇಲ್ಲಿನ ಮಾಧ್ಯಮಗಳು ಮತ್ತು ಕೆಲವು ಹರಕು ಬಾಯಿಗಳು ಎಷ್ಟು ಪಕ್ಷಪಾತಿತನದಿಂದ ಚರ್ಚೆ ಹುಟ್ಟು ಹಾಕಿದುವೆಂದರೆ, ಈ ರಾಜ್ಯದಲ್ಲಿ ಮುಸ್ಲಿಮರು ಮಾತ್ರ ಮೈಕ್ ಬಳಸುತ್ತಿದ್ದಾರೆ ಎಂದೇ ನಂಬುವಷ್ಟು.  ಸುಪ್ರೀಮ್ ತೀರ್ಪಿನಂತೆ ಸರ್ಕಾರ ನಡೆದುಕೊಂಡರೆ ಮುಂಜಾನೆಯ ಅಝಾನ್ ಸ್ಥಗಿತಗೊಳ್ಳುತ್ತದೆ ಎಂಬ ವಾದವನ್ನು ತೇಲಿಬಿಟ್ಟು ಟಿ.ವಿ.  ಆ್ಯಂಕರ್‌ಗಳು ಜನಸಾಮಾನ್ಯರನ್ನು ರೋಮಾಂಚಿತಗೊಳಿಸಿದರು. ಸರ್ಕಾರದ ಹೊಣೆಗಾರರು ಪರೋಕ್ಷವಾಗಿ ಇದಕ್ಕೆ ದನಿಗೂಡಿಸಿದರು.  ರಾಜ್ಯದಲ್ಲಿ ಎಷ್ಟೆಷ್ಟು ಮಸೀದಿಗಳಿವೆ ಮತ್ತು ಅವುಗಳಲ್ಲಿ ಎಷ್ಟೆಷ್ಟು ಮೈಕ್‌ಗಳಿವೆ ಎಂಬಲ್ಲಿಂದ ತೊಡಗಿ ಅಝಾನ್‌ನಿಂದಾಗುವ ಮಾನಸಿಕ  ಕಿರಿಕಿರಿ, ನಿದ್ರಾಭಂಗಗಳ ವರೆಗೆ ಚರ್ಚೆ ರಸವತ್ತಾಗಿ ನಡೆಯತೊಡಗಿತು. ಅಷ್ಟಕ್ಕೂ,

ಸುಪ್ರೀಮ್‌ನ ಆದೇಶದಲ್ಲಿ ಮಸೀದಿಯ ಮೈಕ್‌ಗಳು ಎಂಬ ಉಲ್ಲೇಖವೇ ಇರಲಿಲ್ಲ. ರಾತ್ರಿ 10ರಿಂದ ಬೆಳಿಗ್ಗೆ 6ರ ವರೆಗೆ ಯಾವ  ಮೈಕ್‌ಗಳೂ ಮಾತಾಡಬಾರದು ಎಂದಷ್ಟೇ ಸುಪ್ರೀಮ್ ಹೇಳಿದೆ. ಆದ್ದರಿಂದ ಮೈಕ್ ಕುರಿತಾದ ಯಾವುದೇ ಚರ್ಚೆ ಮತ್ತು ಹೇಳಿಕೆಯು,  ಮೈಕ್ ಬಳಸಿ ಮಾಡಲಾಗುವ ಯಕ್ಷಗಾನ, ರಸಮಂಜರಿ, ಜಾತ್ರೆ, ಕೋಲ, ಉರೂಸ್, ಮೆಹಂದಿ, ಗಣಪತಿ ಮೆಂಡಾಲ್, ಅಯ್ಯಪ್ಪ ಭಜನೆ,  ಸುಪ್ರಭಾತ... ಇತ್ಯಾದಿಗಳನ್ನು ಒಳಗೊಂಡದ್ದಾಗಿರಬೇಕಿತ್ತೇ ಹೊರತು ಅಝಾನ್ ಕೇಂದ್ರಿತವಾಗಿ ಅಲ್ಲ. ಆದರೆ ಚರ್ಚೆ ನಡೆದದ್ದು ಕೇವಲ  ಅಝಾನ್ ಸುತ್ತ ಮಾತ್ರ. `ಮಸೀದಿಯಿಂದ ಮೈಕ್‌ಗಳನ್ನು ಕಿತ್ತು ಹಾಕುತ್ತೇವೆ, ಮುಂಜಾನೆಯ ಅಝಾನ್ ವೇಳೆ ಮೈಕ್‌ನಲ್ಲಿ ಭಜನೆ  ಹಾಕುತ್ತೇವೆ, ಹನುಮಾನ್ ಚಾಲೀಸ ಪಠಿಸುತ್ತೇವೆ...' ಎಂಬಂಥ  ಪ್ರಚೋದಕ ಮಾತುಗಳ ಭರಾಟೆಯಲ್ಲಿ ನಿಜಕ್ಕೂ ಮೈಕ್ ನಿಷೇಧದಿಂದ  ಆಗುವ ಒಟ್ಟು ಸಾಮಾಜಿಕ ಸಮಸ್ಯೆಗಳು ಸಾರ್ವಜನಿಕರ ಗಮನಕ್ಕೇ ಬಾರದಂತೆ ನೋಡಿಕೊಳ್ಳಲಾಯಿತು. ಪ್ರತಿಯೊಂದನ್ನೂ ಹಿಂದೂ- ಮುಸ್ಲಿಮ್ ಆಗಿ ವಿಭಜಿಸುವುದು ಮತ್ತು ಆ ಮುಖಾಂತರ ರಾಜಕೀಯ ಲಾಭವನ್ನು ಕೊಯ್ಯುವುದು- ಎಂಬ ತಂತ್ರಕ್ಕೆ ಸುಪ್ರೀಮ್ ತೀ ರ್ಪನ್ನು ಬಳಸಿಕೊಳ್ಳಲಾಯಿತು. ಸರ್ಕಾರ ಮೈಕ್ ನಿಷೇಧಿಸಿ ಸುತ್ತೋಲೆಯನ್ನು ಹೊರಡಿಸಿತು. ಇದೀಗ,

ಸಾರ್ವಜನಿಕ ಭ್ರಮೆ ಕಳಚತೊಡಗಿದೆ. ಮೈಕ್ ನಿಷೇಧದಿಂದಾಗಿ ಮುಸ್ಲಿಮರು ಕಳಕೊಳ್ಳುವುದಕ್ಕಿಂತ ಎಷ್ಟೋ ಪಟ್ಟು ಹೆಚ್ಚಿನದನ್ನು  ಯಕ್ಷಗಾನ, ಕೋಲ, ಜಾತ್ರೆ, ರಸಮಂಜರಿ, ಅಯ್ಯಪ್ಪ, ಗಣಪತಿ... ಇತ್ಯಾದಿಗಳಿಗಾಗಿ ಕಳಕೊಳ್ಳಬೇಕಾಗುತ್ತದೆ ಎಂಬ ಅರಿವು ಸಾಮಾನ್ಯ  ನಾಗರಿಕರಿಗೆ ಆಗತೊಡಗಿದೆ. ಮುಸ್ಲಿಮರು ಹೆಚ್ಚೆಂದರೆ, ಒಂದೂವರೆ ನಿಮಿಷದ ಅಝಾನನ್ನಷ್ಟೇ ಕಳಕೊಳ್ಳಬಲ್ಲರು. ಆದರೆ, ಮೈಕ್  ಬಳಸದೆಯೇ ಯಕ್ಷಗಾನ, ಕೋಲ, ಜಾತ್ರೆ, ಸುಪ್ರಭಾತ ಇತ್ಯಾದಿಗಳು ನಡೆಯುವುದು ಹೇಗೆ ಎಂಬ ಪ್ರಶ್ನೆಯನ್ನು ಆಯಾ ಕ್ಷೇತ್ರದವರೇ  ಕೇಳತೊಡಗಿದ್ದಾರೆ. ನಿಜವಾಗಿ,

ಪ್ರಭುತ್ವ ಮತ್ತು ಮಾದ್ಯಮ ಹುಟ್ಟು ಹಾಕಿದ ಮುಸ್ಲಿಮ್ ದ್ವೇಷದಿಂದಾದ ಪರಿಣಾಮ ಇದು. ಧರ್ಮದ ಆಧಾರದಲ್ಲಿ ಪೋಷಿಸಿ ಬೆಳೆಸುವ  ದ್ವೇಷ ಎಷ್ಟು ಅಪಾಯಕಾರಿ ಎಂದರೆ, ಅದು ಕಣ್ಣಿದ್ದೂ ಕುರುಡಾಗಿರುತ್ತದೆ. ಕಿವಿಯಿದ್ದೂ ಕಿವುಡಾಗಿರುತ್ತದೆ ಮತ್ತು ಹೃದಯದ ಭಾಷೆಯನ್ನೇ ಮರೆತಿರುತ್ತದೆ. ಹಿಜಾಬ್‌ನಿಂದ ಮೈಕ್‌ವರೆಗಿನ ಬೆಳವಣಿಗೆ ಇದನ್ನೇ ಸ್ಪಷ್ಟಪಡಿಸುತ್ತಿದೆ.

No comments:

Post a Comment