Monday 27 August 2012

ಅಮೇರಿಕ ಅಂದರೆ ನೀಲ್ ಆರ್ಮ್ ಸ್ಟ್ರಾಂಗ್ ಅಷ್ಟೇ ಅಲ್ಲ..

ನೀಲ್ ಆರ್ಮ್ ಸ್ಟ್ರಾಂಗ್
ಲ್ಯಾನ್ಸ್ ಆರ್ಮ್ ಸ್ಟ್ರಾಂಗ್
ಅಮೇರಿಕದ ಎರಡು ಮುಖಗಳಿಗೆ ಅತ್ಯಂತ ಪರಿಣಾಮಕಾರಿ ಉದಾಹರಣೆಗಳಾಗಬಹುದಾದ ಇಬ್ಬರು ವ್ಯಕ್ತಿಗಳು ಕಳೆದ ವಾರ ಜಾಗತಿಕವಾಗಿಯೇ ಸುದ್ದಿಗೊಳಗಾದರು. ಅವರೆಷ್ಟು ಪ್ರಭಾವಿಗಳೆಂದರೆ, ಜಗತ್ತಿನ ಮುಖ್ಯವಾಹಿನಿಯ ಪತ್ರಿಕೆಗಳು ಬಿಡಿ, ತೀರಾ ಭಾಷಾ ಪತ್ರಿಕೆಗಳು ಕೂಡಾ ಅವರಿಬ್ಬರಿಗೂ ಬಹುತೇಕ ಮುಖ ಪುಟಗಳಲ್ಲೇ ಜಾಗ ಕೊಟ್ಟು ಸುದ್ದಿ ಬರೆದುವು. ಅವರಿಬ್ಬರೂ ಅಮೇರಿಕದವರು. ಇಬ್ಬರ ಹೆಸರೂ ಆರ್ಮ್ ಸ್ಟ್ರಾಂಗ್ ಎಂದೇ. ಓರ್ವರು ಚಂದ್ರನ ಮೇಲೆ ಪ್ರಥಮವಾಗಿ ಹೆಜ್ಜೆ ಊರಿದ ನೀಲ್ ಆರ್ಮ್ ಸ್ಟ್ರಾಂಗ್ ಆದರೆ, ಇನ್ನೋರ್ವರು, ಸತತ ಏಳು ಬಾರಿ ವಿಶ್ವದ ಅತಿ ದೊಡ್ಡ ಟೂರ್ ಡಿ ಫ್ರಾನ್ಸ್ ಪ್ರಶಸ್ತಿಗಳನ್ನು ಗೆದ್ದು ವಿಶ್ವದಾಖಲೆ ಬರೆದ ಸೈಕ್ಲಿಂಗ್ ಪಟು ಲ್ಯಾನ್ಸ್ ಆರ್ಮ್‍ಸ್ಟ್ರಾಂಗ್. ದುರಂತ ಏನೆಂದರೆ, ಲ್ಯಾನ್ಸ್ ಆರ್ಮ್ ಸ್ಟ್ರಾಂಗ್‍ಗೆ ಆಗಸ್ಟ್ 24ರಂದು ಆಜೀವ ನಿಷೇಧ ಹೇರಲಾಯಿತು. ಸೈಕ್ಲಿಂಗ್ ರೇಸ್‍ನ ದಂತಕತೆ ಎನಿಸಿಕೊಂಡಿದ್ದ ಇವರು, ಉದ್ದೀಪನಾ ಮದ್ದು ಸೇವಿಸಿರುವುದೇ ಇದಕ್ಕೆ ಕಾರಣ. ಅವರ ಪ್ರಶಸ್ತಿಗಳನ್ನೆಲ್ಲಾ ಹಿಂತೆಗೆಯಲು ಕ್ರಮ ಕೈಗೊಳ್ಳುವುದಾಗಿ ತಪಾಸಣಾ ಸಂಸ್ಥೆ (USADA) ಘೋಷಿಸಿತು. ಇದರ ಮರುದಿನವೇ, ಮೊತ್ತಮೊದಲ ಗಗನಯಾತ್ರಿ ನೀಲ್ ಆರ್ಮ್ ಸ್ಟ್ರಾಂಗ್  ಸಾವಿಗೀಡಾದರು.
            ನಿಜವಾಗಿ, ಇವರಿಬ್ಬರ ಬಗ್ಗೆ ಬರೆಯುವುದೆಂದರೆ ಅಮೇರಿಕದ ಬಗ್ಗೆ ಬರೆದಂತೆ. ಅಮೇರಿಕ ಈ ಜಗತ್ತಿನಲ್ಲಿ ಎಲ್ಲರೂ ನೆನಪಿಟ್ಟುಕೊಳ್ಳಬಹುದಾದ ಅನೇಕಾರು ಸಾಧನೆಗಳನ್ನು ಖಂಡಿತ ಮಾಡಿದೆ. ಒಲಿಂಪಿಕ್ಸ್ ನಲ್ಲಿ ಈ ಬಾರಿಯೂ ಅಮೇರಿಕವೇ ಮೊದಲು. ಆಧುನಿಕ ಸಂಶೋಧನಾ ಕ್ಷೇತ್ರದಲ್ಲಿ ಅಮೇರಿಕಕ್ಕೆ ಬಹಳ ದೊಡ್ಡ ಹೆಸರಿದೆ. ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ನೀಡಲಾಗುವ ನೋಬೆಲ್ ಪ್ರಶಸ್ತಿಯ ಪಟ್ಟಿಯಲ್ಲಿ ಪ್ರತಿವರ್ಷ ಒಬ್ಬರಾದರೂ ಅಮೇರಿಕನ್ ವಿಜ್ಞಾನಿ ಇದ್ದೇ ಇರುತ್ತಾರೆ. ಕೈಗಾರಿಕಾ ಕ್ಷೇತ್ರದಲ್ಲೂ ಅಮೇರಿಕ ಬಹಳ ಮುಂದು.. ಈ ಪಟ್ಟಿ ತುಂಬಾ ಉದ್ದವಿದೆ. ಆದರೆ, ಅಮೇರಿಕಕ್ಕೆ ಇನ್ನೊಂದು ಮುಖವೂ ಇದೆ. ಅದು ಲ್ಯಾನ್ಸ್ ಆರ್ಮ್‍ಸ್ಟ್ರಾಂಗ್‍ನಂಥ ಮುಖ. ಅಮೇರಿಕದ ಯಶೋ ಗಾಥೆಯ ಬಗ್ಗೆ ಬರೆಯುತ್ತಾ ಹೋದಂತೆಲ್ಲಾ, ಮನುಷ್ಯ ರಕ್ತದ, ಕಪಟತನದ, ದೌರ್ಜನ್ಯದ ಇತಿಹಾಸವೂ ಬಿಚ್ಚುತ್ತಲೇ ಹೋಗುತ್ತದೆ. ಇವತ್ತು ಕೆ.ಜಿ. ಕ್ಲಾಸಿನ ಮಕ್ಕಳಿಂದ ಹಿಡಿದು ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ವರೆಗೆ ಎಲ್ಲರಿಗೂ ಅಮೇರಿಕವೇ ಕನಸಿನ ದೇಶ. ಅಮೇರಿಕದಲ್ಲೊಂದು ಉದ್ಯೋಗ ಗಿಟ್ಟಿಸಲು, ಅಲ್ಲೊಂದು ಮನೆ ಮಾಡಲು, ಅಲ್ಲಿನ ಪ್ರಜೆಯಾಗಿ ಗುರುತಿಸಿಕೊಳ್ಳಲು ಆಸೆ ಪಡುವ ಕೋಟ್ಯಂತರ ಮಂದಿ ಈ ಜಗತ್ತಿನಲ್ಲಿದ್ದಾರೆ. ಅಮೇರಿಕವು ತನ್ನ ಸಾಧನೆ, ಅಭಿವೃದ್ಧಿಗಳ ಮುಖಾಂತರ ಈ ಜಗತ್ತಿನ ಮಂದಿಗೆ ನೀಲ್ ಆರ್ಮ್ ಸ್ಟ್ರಾಂಗ್ ಗ್‍ನಂತೆ ಕಾಣಿಸುತ್ತಿದೆ. ಆದರೆ ಆ ಸಾಧನೆಗಳ ಹಿಂದೆ ಅಫಘನ್ನಿಗಳ, ಇರಾಕಿಗಳ, ಕ್ಯೂಬನ್ನರ ರಕ್ತ ಇರುವುದು ಕಾಣಿಸುತ್ತಲೇ ಇಲ್ಲ. ಆರ್ಥಿಕ ಕ್ಷೇತ್ರದಲ್ಲಿ ಅಮೇರಿಕ ಇವತ್ತು ಬಲಾಢ್ಯ ಆಗಿದ್ದರೆ ಅಥವಾ ಜಗತ್ತಿನ ಅರ್ಥ ಕ್ಷೇತ್ರವನ್ನು ಪಲ್ಲಟಗೊಳಿಸುವ ಸಾಮರ್ಥ್ಯ  ಅಮೇರಿಕಕ್ಕಿದ್ದರೆ ಅದರ ಹಿಂದೆ ಕೊಲ್ಲಿ ರಾಷ್ಟ್ರಗಳಿಂದ ದರೋಡೆಗೈದ ತೈಲದ ಪಾತ್ರ ಇದೆ ಎಂಬುದನ್ನು ಯಾರು ತಾನೇ ಅಲ್ಲಗಳೆಯಬಲ್ಲರು? ಅರಬ್ ರಾಷ್ಟ್ರಗಳ ಬಗ್ಗೆ, ಅಲ್ಲಿರುವ ಮನುಷ್ಯರ ಬಗ್ಗೆ ಅಮೇರಿಕ ಇವತ್ತು ಅಪಾರ ಆಸಕ್ತಿ ತೋರಿಸುತ್ತಿರುವುದು, ಮಾನವ ಹಕ್ಕಿನ ಮೇಲಿನ ಕಾಳಜಿಯಿಂದ ಅಲ್ಲ ಎಂಬುದು ಎಲ್ಲರಿಗೂ ಗೊತ್ತು. ತನ್ನ ಹಿತವನ್ನು ಕಾಪಾಡಿಕೊಳ್ಳುವುದಕ್ಕಾಗಿ ಅದು ಏನು ಮಾಡುವುದಕ್ಕೂ ಹೇಸುವುದಿಲ್ಲ. ಒಂದು ರೀತಿಯಲ್ಲಿ ಅದರ ಸಾಧನೆಯ ಹಿಂದೆ ಗೋಲದ ಬಡ ರಾಷ್ಟ್ರಗಳಿಂದ ಹಿಂಡಿ ತೆಗೆದ ಉದ್ದೀಪನ ಮದ್ದು ಇದೆ. ಒಂದು ವೇಳೆ ಅತ್ಲೀಟ್‍ಗಳಂತೆ, ಅಮೇರಿಕವು ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿರುವ ಸಾಧನೆಗಳನ್ನು ಒಂದೊಂದಾಗಿ ಪರೀಕ್ಷಿಸುವುದಕ್ಕೆ ಸಾಧ್ಯವಾಗುತ್ತಿದ್ದರೆ, `ಬುಶ್‍ಗಳು’ ಇವತ್ತು ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ನಂತೆ ತಲೆ ತಗ್ಗಿಸಿ ಬದುಕಬೇಕಾಗಿತ್ತು. ಅಫಘಾನ್-ಇರಾಕ್‍ಗಳ ಸಾವಿರಾರು ಮಂದಿಯ ರಕ್ತವೆಂಬ ಉದ್ದೀಪನ ಮದ್ದು ಸೇವಿಸಿ ಸಿಕ್ಕಿ ಬಿದ್ದ ಖಳರಾಗಿ ಅವರು ಗುರುತಿಸಿಕೊಳ್ಳಬೇಕಾಗಿತ್ತು. ವಿಷಾದ ಏನೆಂದರೆ, ಅತ್ಲೀಟ್‍ಗಳನ್ನು ಪರೀಕ್ಷಿಸುವುದಕ್ಕೆ ಉಪಕರಣಗಳಿರುವಂತೆ ಮನುಷ್ಯ ವಿರೋಧಿಗಳನ್ನು ಪರೀಕ್ಷಿಸುವುದಕ್ಕೆ ಈ ಜಗತ್ತಿನಲ್ಲಿ ಪರಿಣಾಮಕಾರಿ ಉಪಕರಣಗಳು ಇಲ್ಲ ಅನ್ನುವುದು. ನಿಜವಾಗಿ ಲ್ಯಾನ್ಸ್ ಆರ್ಮ್ ಸ್ಟ್ರಾಂಗ್  ಉದ್ದೀಪನ ಮದ್ದು ಸೇವಿಸಿದುದರಿಂದ ಈ ಜಗತ್ತಿಗೆ ಯಾವ ಅನ್ಯಾಯವೂ ಆಗಿಲ್ಲ. ಹಾಗೇನೂ ಆಗಿದ್ದರೆ, ಅದು ಆತನ ಜೊತೆ ಸ್ಪರ್ಧೆಯಲ್ಲಿ ಭಾಗವಹಿಸಿದ ಕೆಲವಾರು ಸ್ಪರ್ಧಿಗಳಿಗೆ ಮಾತ್ರ. ಆದರೆ ಅಷ್ಟು ಸಣ್ಣ ಅನ್ಯಾಯಕ್ಕಾಗಿ ಓರ್ವ ವ್ಯಕ್ತಿಯ ಪ್ರಶಸ್ತಿಗಳನ್ನು ಹಿಂಪಡೆಯುವುದು, ಸಾಧಕರ ಪಟ್ಟಿಯಿಂದ ಆತನ ಹೆಸರನ್ನು ಅಳಿಸುವುದು ಮಾಡುತ್ತೇವೆಂದಾದರೆ, ಸಾವಿರಾರು ಮಂದಿಗೆ ಅನ್ಯಾಯ ಮಾಡಿದ ವ್ಯಕ್ತಿಗಳಿಗೆ ನಾವು ಕೊಡಬಹುದಾದ ಶಿಕ್ಷೆಯಾದರೂ ಯಾವುದಿದ್ದೀತು? ಆರ್ಮ್ ಸ್ಟ್ರಾಂಗ್ ನಿಂದ ಪದಕಗಳನ್ನು ಹಿಂಪಡೆದಂತೆ ಅನ್ಯಾಯಕ್ಕೊಳಗಾದ ರಾಷ್ಟ್ರಗಳಿಗೆ ಅಮೇರಿಕದಿಂದ ಪರಿಹಾರ ಕೊಡಿಸುವುದಾದರೆ ಅದರ ಖಜಾನೆಯ ಸ್ಥಿತಿ ಏನಾದೀತು? ಜಿಡಿಪಿ ಎಲ್ಲಿಗೆ ಮುಟ್ಟೀತು?
        ಅಂದಹಾಗೆ, ನೀಲ್ ಆರ್ಮ್ ಸ್ಟ್ರಾಂಗ್  ಮತ್ತು ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ಎಂಬುದು ಅಮೇರಿಕದ ಎರಡು ವ್ಯಕ್ತಿತ್ವಗಳಷ್ಟೇ ಅಲ್ಲ, ಅದರ ಎರಡು ಮುಖಗಳು ಕೂಡ. ಇವತ್ತು ಯಾರೆಲ್ಲ ನೀಲ್ ಆರ್ಮ್ ಸ್ಟ್ರಾಂಗ್‍ನ ಬಗ್ಗೆ, ಆತನ ಸಾಧನೆಯ ಬಗ್ಗೆ ಹೊಗಳಿಕೆಯ ಮಾತಾಡುತ್ತಾರೋ ಅವರೆಲ್ಲ ಲ್ಯಾನ್ಸ್ ಆರ್ಮ್ ಸ್ಟ್ರಾಂಗ ನ್ನೂ  ನೆನಪಿಸಿಕೊಳ್ಳಬೇಕು. ಯಾಕೆಂದರೆ, ಅಮೇರಿಕ ಎಂಬುದು ನೀಲ್ ಆರ್ಮ್ ಸ್ಟ್ರಾಂಗ್ ಅಷ್ಟೇ ಅಲ್ಲ, ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ಕೂಡ. ನಿಜವಾಗಿ ಜಗತ್ತಿನ ಬಡ ರಾಷ್ಟ್ರಗಳೆಲ್ಲ ಅಮೇರಿಕವನ್ನು ಇವತ್ತು ನೋಡುತ್ತಿರುವುದೇ ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ನ ಪ್ರತಿರೂಪದಂತೆ. ಯಾಕೆಂದರೆ, ಒಬಾಮ ಆಗಲಿ, ಕ್ಲಿಂಟನ್, ಬುಶ್‍ಗಳೇ ಆಗಲಿ.. ಎಲ್ಲರೂ ಉದ್ದೀಪನ ಮದ್ದು (ಮನುಷ್ಯ ರಕ್ತ) ಸೇವಿಸಿದವರೇ. ಜಗತ್ತಿಗೆ ಇವರು ಪಾಠ ಮಾಡುವಾಗಲೆಲ್ಲ, ಅದರಲ್ಲಿ ನೀಲ್ ಆರ್ಮ್ ಸ್ಟ್ರಾಂಗ್ ನ ಪ್ರಾಮಾಣಿಕತೆಗಿಂತ ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ನ ವಂಚನೆಯನ್ನೇ ಜಗತ್ತು ಗುರುತಿಸುತ್ತಾ ಇದೆ. ಏನೇ ಆಗಲಿ, ಅಮೇರಿಕ ಅವಲೋಕನಕ್ಕೆ ಸಿದ್ಧವಾಗುವುದಾದರೆ ಈ ಇಬ್ಬರು ಆರ್ಮ್ ಸ್ಟ್ರಾಂಗ್ ಗಳಲ್ಲಿ ಅದಕ್ಕೆ ಖಂಡಿತ ಧಾರಾಳ ಪಾಠಗಳಿವೆ.

No comments:

Post a Comment