Monday, 3 September 2012

ಭಯೋತ್ಪಾದನೆ ಅಂದರೆ ಲಾಡೆನ್ ನ ಪೊಟೋವಷ್ಟೇ ಅಲ್ಲವಲ್ಲ..

ಭಯೋತ್ಪಾದನೆಯ ಹೆಸರಲ್ಲಿ ಬಂಧನಕ್ಕೆ ಒಳಗಾದ ಯುವಕರು ಉಗ್ರರು ಹೌದೋ ಅಲ್ಲವೋ, ಆದರೆ ಆಗಸ್ಟ್ 31ರಿಂದ ಹಿಡಿದು ಈ ವರೆಗೆ ಪ್ರಕಟವಾದ ಹೆಚ್ಚಿನ ಕನ್ನಡ ದಿನ ಪತ್ರಿಕೆಗಳ ಸುದ್ದಿಗಳನ್ನು ಓದುವಾಗ,  ಪತ್ರಿಕಾ  ಕಛೇರಿಗಳಲ್ಲಿ ಭಯೋತ್ಪಾದಕರ ತಂಡವೊಂದು  ಕಾರ್ಯಾಚರಿಸುತ್ತಿರಬಹುದೇ ಅನ್ನುವ ಶಂಕೆ ಮೂಡುವುದು ಸಹಜ. ಪೊಲೀಸ್ ಮೂಲಗಳು ತಿಳಿಸಿವೆ ಎಂಬ ಜುಜುಬಿ ವಾಕ್ಯವನ್ನು ಎದುರಿಟ್ಟುಕೊಂಡು ಆನೆ ಲದ್ದಿಯಷ್ಟು ದೊಡ್ಡದಾದ ಶೀರ್ಷಿಕೆಯ ಅಡಿಯಲ್ಲಿ ಪತ್ರಿಕೆಗಳೆಲ್ಲ ಕಳೆದೊಂದು ವಾರದಿಂದ  ಧಾರಾಳ ಸುದ್ದಿಗಳನ್ನು ಬರೆದಿವೆ. ಸುದ್ದಿಯ ಮೂಲ ಯಾವುದು, ಅದೆಷ್ಟು ಪ್ರಬಲ ಮತ್ತು ಪ್ರಾಮಾಣಿಕ, ಸುದ್ದಿ ಕೊಟ್ಟವರಿಗೂ ತನಿಖೆ ನಡೆಸುತ್ತಿರುವವರಿಗೂ ಏನು ಸಂಬಂಧ ಇದೆ, ಪೊಲೀಸ್ ಮುಖ್ಯಸ್ಥರಿಗೇ ಗೊತ್ತಿಲ್ಲದ ಸಂಗತಿಗಳೆಲ್ಲಾ ಯಾವುದೋ ಅಜ್ಞಾತ ಪೊಲೀಸರಿಗೆ ಗೊತ್ತಾಗುವುದಾದರೂ ಹೇಗೆ.. ಇಂಥ ಅನೇಕಾರು ಪ್ರಶ್ನೆಗಳು ಓದುಗರ ಮನದಲ್ಲಿ ಹುಟ್ಟಿ ದಿನಂಪ್ರತಿ ಸಾಯುತ್ತಿವೆ. 2007ರ ಜುಲೈಯಲ್ಲಿ ಬೆಂಗಳೂರಿನ ವೈದ್ಯ ಮುಹಮ್ಮದ್ ಹನೀಫನು ಆಸ್ಟ್ರೇಲಿಯಾದಲ್ಲಿ ಬಂಧನಕ್ಕೀಡಾದಾಗ ಪತ್ರಿಕೆಗಳು ಹೀಗೆಯೇ ಬರೆದಿದ್ದುವು. ಆತನನ್ನು ಅವು ಟೆರರ್ ಡಾಕ್ಟರ್ ಅಂದಿದ್ದವು. ಬಾಂಬು ಸ್ಫೋಟಿಸುವಲ್ಲಿ ಆತ ಹೆಣೆದ ತಂತ್ರ, ಆತನ ಧಾರ್ಮಿಕತೆ.. ಎಲ್ಲವನ್ನೂ ಕನ್ನಡ ಪತ್ರಿಕೆಗಳು ಪುಟ ತುಂಬ ಬರೆದಿದ್ದುವು. 2008 ಮೇಯಲ್ಲಿ ಹುಬ್ಬಳ್ಳಿ ಕೋರ್ಟ್‍ ನಲ್ಲಿ  ಸ್ಫೋಟ ನಡೆಯಿತು. ಅದಕ್ಕೆ ಸಿಮಿ ಕಾರಣ ಅಂದವು ಕನ್ನಡ ಪತ್ರಿಕೆಗಳು. ಆ ಸ್ಫೋಟದ ಆರೋಪವನ್ನು ಮುಸ್ಲಿಮ್ ಯುವಕರ ಮೇಲೆ ಹೊರಿಸಿ ಅದಕ್ಕೆ ಬೇಕಾದ ಪುರಾವೆಗಳನ್ನೆಲ್ಲಾ ಮೂಲಗಳಿಂದ ಇವು ಹುಡುಕಿ ತಂದುವು. ಕೊನೆಗೆ ನಾಗರಾಜ ಜಂಬಗಿ ಎಂಬ ಶ್ರೀರಾಮ ಸೇನೆಯ ಕಾರ್ಯಕರ್ತ ಅದರ ರೂವಾರಿ ಅನ್ನುವುದು ಬಹಿರಂಗವಾಯಿತು. ದುರಂತ ಏನೆಂದರೆ, 2007ರ ಡಿಸೆಂಬರ್‍ನಲ್ಲಿ ಮುಹಮ್ಮದ್ ಹನೀಫ್‍ನ ಬಿಡುಗಡೆಯಾದರೂ ಕೆಲವು ಪತ್ರಕರ್ತರು ಈಗಲೂ ತಮ್ಮ ಭಯೋತ್ಪಾದಕ ಮನಃಸ್ಥಿತಿಯಿಂದ ಬಿಡುಗಡೆಗೊಂಡಿಲ್ಲ. ನಿಜವಾಗಿ ಒಂದು ಪತ್ರಿಕೆ ಬಂಧಿತ ಯುವಕರ ಹೆಸರಲ್ಲಿ ಕಲ್ಪಿತ ಸುದ್ದಿಗಳನ್ನು ಪ್ರಕಟಿಸುತ್ತದೆಂದರೆ ಅದು ಭಯೋತ್ಪಾದಕರಿಗಿಂತಲೂ  ಅಪಾಯಕಾರಿ. ಮನುಷ್ಯರನ್ನು ಕೊಲ್ಲುವ, ಸಾರ್ವಜನಿಕರು ನಿರೀಕ್ಷಿಸದೇ ಇರುವಂಥ ಅಪಾಯಕಾರಿ ಷಡ್ಯಂತ್ರಗಳನ್ನು ಓರ್ವ ಪತ್ರಕರ್ತ ಸುದ್ದಿ ಮನೆಯಲ್ಲಿ ಕೂತು ಬರೆಯುತ್ತಾನೆಂದರೆ ಆತನ ಮನಸ್ಥಿತಿಯಾದರೂ ಎಂಥದು? ಭಯೋತ್ಪಾದಕ ರಕ್ತ ಆತನೊಳಗೂ ಹರಿಯುತ್ತಿದೆ ಎಂದಲ್ಲವೇ ಇದರರ್ಥ? ಕೈಗಾದ ಅಣುಸ್ಥಾವರಕ್ಕೋ ದೇಗುಲಕ್ಕೋ ಬಾಂಬು ಹಾಕುವ ಬಗ್ಗೆ ಓರ್ವ ಸಾಮಾನ್ಯ ವ್ಯಕ್ತಿಗೆ ಊಹಿಸುವುದಕ್ಕೂ ಸಾಧ್ಯ ಇಲ್ಲ. ಒಂದು ವೇಳೆ ಹೀಗೆ ಪ್ರಕಟವಾಗುವ ಸುದ್ದಿಗಳಿಗೆಲ್ಲ ಯಾವ ಆಧಾರವೂ ಇಲ್ಲವೆಂದಾದರೆ, ಅದನ್ನು ಸೃಷ್ಟಿಸಿದವ ಭಯೋತ್ಪಾದಕನಷ್ಟೇ ಅಪಾಯಕಾರಿಯಲ್ಲವೇ? ಅವಕಾಶ ಸಿಕ್ಕರೆ ಇವರೂ ಅಂಥದ್ದೊಂದು ಕ್ರೌರ್ಯ ಎಸಗಿಯಾರು ಎಂಬುದಕ್ಕೆ ಇದು ಪುರಾವೆಯಲ್ಲವೇ?
           ಮನುಷ್ಯ ವಿರೋಧಿ, ದೇಶ ವಿರೋಧಿ, ಸಮಾಜ ವಿರೋಧಿ.. ಮುಂತಾದ ಪದಗಳೆಲ್ಲ ಯಾವುದಾದರೊಂದು ನಿರ್ದಿಷ್ಟ ಚಿಹ್ನೆಗೆ, ಧರ್ಮಕ್ಕೆ, ಹೆಸರಿಗೆ ಸೀಮಿತವಾದ ಪದಗಳೇನೂ ಆಗಬೇಕಿಲ್ಲ. ಮುಹಮ್ಮದ್ ಹನೀಫ್‍ನ ಮೇಲೆ, ಆತ ಮಾಡದೇ ಇರುವ ಮತ್ತು ಹೂಡದೇ ಇರುವ ಷಡ್ಯಂತ್ರಗಳನ್ನೆಲ್ಲಾ ಹೊರಿಸಿ ಭಯೋತ್ಪಾದಕರಾಗಿಸಿದವರೂ ಮನುಷ್ಯ ವಿರೋಧಿಗಳೇ. ಮೊನ್ನೆ ಬಂಧಿಸಲಾದ ಯುವಕರು ಅಂಥ ಅಪರಾಧ ಮಾಡಿದ್ದರೆ ಅವರನ್ನು ಕರೆಯಬೇಕಾದದ್ದೂ ಇಂಥ ಪದಗಳಿಂದಲೇ. ವಿಷಾದ ಏನೆಂದರೆ ಈ ವರೆಗೆ ಈ ದೇಶದಲ್ಲಿ ಇಂಥ ಮೌಲ್ಯಗಳು ಪಾಲನೆಯಾಗಿಲ್ಲ ಅನ್ನುವುದು. ಕೊಲ್ಲುವ, ಸ್ಫೋಟಿಸುವ, ಬಾಂಬು ತಯಾರಿಸುವ.. ಭೀಕರ ಸುದ್ದಿಗಳನ್ನು ಯಾವ್ಯಾವುದೋ ಮೂಲಗಳನ್ನು ಉಲ್ಲೇಖಿಸಿ ನ್ಯೂಸ್ ರೂಮಲ್ಲಿ ಸೃಷ್ಟಿಸಿದವ ಹೀರೋ ಆಗುತ್ತಾನೆ. ಮಾಡದ ತಪ್ಪನ್ನು ಹೊತ್ತುಕೊಂಡು ಜೈಲಿಗೆ ಹೋದವ, ಹೋಗುವಾಗಲೂ,  ಬಳಿಕ ಅಮಾಯಕನೆಂದು ಬಿಡುಗಡೆಯಾದಾಗಲೂ ಖಳನಂತೆ ಹೊರಬರುತ್ತಾನೆ.
       ನಿಜವಾಗಿ, ಮುಸ್ಲಿಮ್ ಪ್ರತಿಭೆಗಳನ್ನು ಮಾಧ್ಯಮದಿಂದ, ಸಾರ್ವಜನಿಕ ಸೇವಾ ಕ್ಷೇತ್ರಗಳಿಂದ ದೂರ ಇಡುವ ಶ್ರಮಗಳು ನಡೆಯುತ್ತಿವೆಯೋ ಅನ್ನುವ ಅನುಮಾನವೊಂದು ಕಾಡುತ್ತಿದೆ. ಪತ್ರಕರ್ತ, ವಿಜ್ಞಾನಿ, ವೈದ್ಯ, ಎಂ.ಬಿ.ಎ. ವಿದ್ಯಾರ್ಥಿ.. ಇವೆಲ್ಲ ಯಾವುದೋ ಮದ್ರಸ, ಮಸೀದಿಗಳಲ್ಲಿ ಕೆಲಸ ಮಾಡುವುದಕ್ಕೆ ಬೇಕಾದ ಪದವಿಗಳಲ್ಲ. ಮೊನ್ನೆ ಬಂಧನಕ್ಕೀಡಾದ ಯುವಕರಲ್ಲಿ ಇವರೆಲ್ಲ ಸೇರಿದ್ದಾರೆ. ಬಹುಶಃ ಮಾಧ್ಯಮ ಕ್ಷೇತ್ರದಿಂದ ಮುಸ್ಲಿಮ್ ಯುವಕರನ್ನು ಹೊರಗಿಡುವುದಕ್ಕೆ, ಸರಕಾರದ ಆಯಕಟ್ಟಿನ ಸ್ಥಳಗಳಲ್ಲಿ ಜಾಗ ಸಿಗದಂತೆ ತಡೆಯುವುದಕ್ಕೆ ಒಂದು ನೆಪವಾಗಿ ಇವನ್ನೆಲ್ಲ ಬಳಸಿಕೊಳ್ಳುವ ಸಾಧ್ಯತೆ ಖಂಡಿತ ಇದೆ. ಈಗಾಗಲೇ ಮುಂಬೈಯಂಥ ಬೃಹತ್ ನಗರಗಳ ಅನೇಕ ಕಟ್ಟಡಗಳು, ಮುಸ್ಲಿಮ್ ನಿಷೇಧ ನೀತಿಯನ್ನು ಸ್ವಯಂ ಜಾರಿಗೊಳಿಸಿಕೊಂಡಿರುವುದನ್ನು ಶಬನಾ ಅಜ್ಮಿಯಂಥವರೇ ಬಹಿರಂಗಪಡಿಸಿದ್ದಾರೆ. ಹೀಗಿರುವಾಗ ರಾಜ್ಯದಲ್ಲಾದ ಬಂಧನ ಮತ್ತು ಅದರ ಸುತ್ತ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಕತೆಗಳು ಸಮಾಜವನ್ನು ನಕಾರಾತ್ಮಕ ಧೋರಣೆಯೆಡೆಗೆ ಕೊಂಡೊಯ್ಯಲಾರದೆಂದು ಹೇಗೆ ಹೇಳುವುದು?
       ಏನೇ ಆಗಲಿ, ಭಯವನ್ನು ಉತ್ಪಾದಿಸುವ ಮತ್ತು ಮಾರುವ ಎರಡೂ ಕೃತ್ಯಗಳೂ ಅತ್ಯಂತ ಖಂಡನಾರ್ಹವಾದದ್ದು. ಒಂದು ವೇಳೆ ವಿಜ್ಞಾನಿ, ಪತ್ರಕರ್ತ, ವೈದ್ಯ.. ಯಾರೇ ಅದರ ಹಿಂದೆ ಇದ್ದರೂ ಅವರನ್ನು ಅವರ ಧರ್ಮ, ಹೆಸರು, ಹುದ್ದೆಯನ್ನು ನೋಡದೇ ದಂಡಿಸಲೇಬೇಕು. ಕೊಲ್ಲುವುದನ್ನು ಯಾವುದಾದರೊಂದು ಸಮಸ್ಯೆಗೆ ಪರಿಹಾರ ಎಂದು ಭಾವಿಸುವುದೇ ಅತಿ ದೊಡ್ಡ ಕ್ರೌರ್ಯ. ಅಂಥವರನ್ನು ಹಿಡಿದು ಕಾನೂನಿನ ಕೈಗೆ ಒಪ್ಪಿಸುವ ಶ್ರಮಗಳು ಎಲ್ಲರಿಂದಲೂ ನಡೆಯಬೇಕು. ಅಷ್ಟಕ್ಕೂ ಸಮಾಜದ ಆರೋಗ್ಯವನ್ನು ಕೆಡಿಸುವುದಕ್ಕೆ, ಸಮಾಜವನ್ನು ಭೀತಿಯಲ್ಲಿ ಕೆಡಹುವುದಕ್ಕೆ ಬಾಂಬುಗಳೇ ಬೇಕಾಗಿಲ್ಲ. ಭಯೋತ್ಪಾದಕರ ಹೆಸರಲ್ಲಿ ಟಿ.ವಿ. ಚಾನೆಲ್‍ಗಳು ಪ್ರಸಾರ ಮಾಡುವ ಕ್ರೈಂ ವಾರ್ತೆಗಳು, ಬ್ರೇಕಿಂಗ್ ನ್ಯೂಸ್‍ಗಳೂ ಅವನ್ನು ಸಲೀಸಾಗಿ ಮಾಡಬಲ್ಲವು. ಆದ್ದರಿಂದ ಭಯೋತ್ಪಾದನೆಯ ಕುರಿತಂತೆ ಮಾಡಲಾಗುವ ಚರ್ಚೆಗಳು ಬರೇ ಬಾಂಬು, ಲಾಡೆನ್‍ನ ಪೋಟೋ, `ಜಿಹಾದಿ’ ಸಾಹಿತ್ಯಗಳಿಗೆ ಮಾತ್ರ ಸೀಮಿತಗೊಳ್ಳುವುದು ಬೇಡ. ಪತ್ರಿಕಾ ಸುದ್ದಿಗಳು ಮತ್ತು ಟಿ.ವಿ.ಗಳ ಬ್ರೇಕಿಂಗ್ ನ್ಯೂಸ್‍ಗಳ ವರೆಗೂ ಅದರ ವ್ಯಾಪ್ತಿ ವಿಸ್ತರಿಸಲಿ. ಅನಾರೋಗ್ಯ ಪೀಡಿತ ಸರ್ವ ಮನಸ್ಸುಗಳನ್ನೂ ಯಾವ ಹಂಗೂ ಇಲ್ಲದೆ ಖಂಡಿಸುವುದಕ್ಕೆ ನಮಗೆ ಸಾಧ್ಯವಾಗಲಿ.

1 comment:

  1. <>
    Good joke. :D. ಇಂಗ್ಲೆಂಡ್ ನ Glasgow attack ನಲ್ಲಿ ಭಾಗಿಯಾದ ಕಫೀಲ್ ಅಹ್ಮದ್ ಕೂಡ PhD ಮಾಡುತ್ತಿದ್ದ ಎಂಬುದು ಸತ್ಯ. ಹಾಗಾದರೆ ಆಗ ಆ ಪದವಿ ಹೇಗೆ ತಾನೇ ಮಸೀದಿಯಲ್ಲಿ ಕೆಲಸ ಮಾಡಿತು? ಸತ್ಯ ಪೂರ್ತಿಯಾಗಿ ರುಜುವಾತಾಗಬೇಕು ನಿಜ. ಆದರೆ ಅದಕ್ಕೂ ಮೊದಲೇ 'ಇವೆಲ್ಲ ಮಾಧ್ಯಮ ಕ್ಷೇತ್ರದಿಂದ ಮುಸ್ಲಿಮ್ ಯುವಕರನ್ನು ಹೊರಗಿಡುವುದಕ್ಕೆ, ಸರಕಾರದ ಆಯಕಟ್ಟಿನ ಸ್ಥಳಗಳಲ್ಲಿ ಜಾಗ ಸಿಗದಂತೆ ತಡೆಯುವುದಕ್ಕೆ ಮಾಡಿದ ಕುತಂತ್ರ' ಎಂದು ಹೇಗೆ ತಾನೇ ತೀರ್ಮಾನಿಸುತ್ತೀರಿ?ಅದೂ ಕೂಡ ಸಮರ್ಥನೆಯೇ ಅಲ್ಲವೇ? ಅಲ್ಲದೆ ಇದನ್ನು ಜುಜುಬಿ ಸುದ್ದಿ ಎಂದು ತೀರ್ಮಾನಿಸಿರುವಲ್ಲಿ ಇದೂ ಕೂಡ ಸಮರ್ಥನೆ ಎನಿಸುತ್ತದೆ.

    ReplyDelete