Tuesday 25 September 2012

ದೇಶಭಕ್ತರಿಗೆ ಮನುಷ್ಯಪ್ರೇಮದ ಪಾಠ ಹೇಳಿಕೊಟ್ಟ ರೇಶ್ಮ

      2011 ಜುಲೈ 16ರಂದು ರಾತ್ರಿ, ಗುಜರಾತ್‍ನ ರೇಷ್ಮಾ ಎಂಬ ಮುಸ್ಲಿಮ್ ಮಹಿಳೆ ತನ್ನ ಗಂಡನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೊಡುತ್ತಾಳೆ. ತನ್ನ ಗಂಡ ಮನೆಯಲ್ಲಿ ಬಾಂಬ್ ತಂದಿಟ್ಟಿದ್ದಾನೆ ಅನ್ನುತ್ತಾಳೆ. ಪೊಲೀಸರು ಶಹಝಾದ್‍ನನ್ನು ಬಂಧಿಸುತ್ತಾರೆ. 8 ಬಾಂಬುಗಳು ಸಿಗುತ್ತವೆ. ಅಹ್ಮದಾಬಾದ್‍ನಲ್ಲಿ ನಡೆಯ ಲಿರುವ ರಥ ಯಾತ್ರೆಯಲ್ಲಿ ಈ ಬಾಂಬುಗಳನ್ನು ಸ್ಫೋಟಿಸಲು ಆತ ಸಂಚು ನಡೆಸಿದ್ದ ಎಂದು ಪೊಲೀಸರು ಮಾಧ್ಯಮಗಳ ಮುಂದೆ ಹೇಳುತ್ತಾರೆ. ತಕ್ಷಣ ರೇಷ್ಮಾಳಿಗೆ ಗುಜರಾತ್ ಸರಕಾರ 25 ಸಾವಿರ ರೂಪಾಯಿಯನ್ನು ಇನಾಮಾಗಿ ಕೊಡುತ್ತದೆ. ಇದಾಗಿ ಒಂದು ವರ್ಷದ ಬಳಿಕ ಕಳೆದ ವಾರ ಸೆ. 22ರಂದು ಆಕೆಗೆ  ಗಾಡ್‍ಫ್ರೆ  ಫಿಲಿಪ್ಸ್ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ. 4 ಲಕ್ಷ  ರೂಪಾಯಿಯನ್ನೂ ನೀಡಲಾಗುತ್ತದೆ..
       ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಹೆಚ್ಚಿನೆಲ್ಲ ಪತ್ರಿಕೆಗಳು ಈ ಸುದ್ದಿಯನ್ನು ಒಳಪುಟದಲ್ಲಿ ಪ್ರಕಟಿಸಿರುವುದರಿಂದ ಓದುಗರು ಗಮನಿಸಿರುವ ಸಾಧ್ಯತೆ ಕಡಿಮೆ. ಅಂದಹಾಗೆ, ಈ ಸುದ್ದಿಯು ಮಾಧ್ಯಮ ವಿಶ್ಲೇಷಣೆಗೆ ಒಳಗಾಗದಿರುವುದಕ್ಕೆ ಕಾರಣವೇನು? ಮುಸ್ಲಿಮರ ದೇಶನಿಷ್ಠೆಯನ್ನು ಅನುಮಾನಿಸಿ ಪುಟಗಟ್ಟಲೆ ಬರೆಯುವ ಮತ್ತು ಅವರಿಗೆ ದೇಶಭಕ್ತಿಯ ಪಾಠ ಮಾಡುತ್ತಾ ಆಗಾಗ ಹೇಳಿಕೆಗಳನ್ನು ಹೊರಡಿಸುತ್ತಿರುವ ಮಂದಿಯೆಲ್ಲ ಈ ಸುದ್ದಿಯನ್ನು ಎತ್ತಿಕೊಂಡು ಯಾಕೆ ಚರ್ಚಿಸಿಲ್ಲ? ಮುಸ್ಲಿಮನೊಬ್ಬ ಕಿಸೆಯಲ್ಲಿ ಪಟಾಕಿ ಇಟ್ಟುಕೊಂಡರೂ ಅದನ್ನು ಬಾಂಬೆಂದೇ ಸಾಬೀತುಪಡಿಸುವ ಚತುರರು ಮಾಧ್ಯಮಗಳಲ್ಲಿದ್ದಾರೆ. ಪಕ್ಷ  ಮತ್ತು ಸಂಘಟನೆಗಳಲ್ಲೂ ಅವರ ಸಂಖ್ಯೆ ಸಣ್ಣದಲ್ಲ. ಹೀಗಿರುವಾಗ, ಪತಿ-ಪತ್ನಿ ಎಂಬ ಪವಿತ್ರ ಸಂಬಂಧವನ್ನೂ ಲೆಕ್ಕಿಸದೇ ರಥ ಯಾತ್ರೆಯ ಕಾವಲಿಗೆ ನಿಂತ ಘಟನೆಯೇಕೆ ವಿಶ್ಲೇಷಣೆಗೆ ಒಳಗಾಗಲಿಲ್ಲ? ಘಟನೆ ನಡೆದಿರುವುದು ಗುಜರಾತ್‍ನಲ್ಲಿ. ಅದೇ ಗುಜರಾತ್‍ನಲ್ಲಿ ಮುಸ್ಲಿಮ್ ಕೇರಿಗಳಿಗೆ ನುಗ್ಗಿ ಮನುಷ್ಯರನ್ನು ಪೆಟ್ರೋಲು, ಸೀಮೆ ಎಣ್ಣೆ ಸುರಿದು ಜೀವಂತ ದಹಿಸಿದ ಅನೇಕ ಮಂದಿಯಿದ್ದಾರೆ. ಅವರು ಯಾರದ್ದೋ ಪತಿ, ಮಗ, ಅಪ್ಪ.. ಇನ್ನೇನೋ ಆಗಿದ್ದಾರೆ. ಆದರೆ ಗುಜರಾತ್‍ನಲ್ಲಿ ಒಬ್ಬಳೇ ಒಬ್ಬ ಮಹಿಳೆ ಪೊಲೀಸರಿಗೆ ಯಾಕೆ ಇಂಥ  ದೂರು ಕೊಟ್ಟಿಲ್ಲ, ತನ್ನ ಗಂಡ ಗುಲ್ಬರ್ಗ್ ಸೊಸೈಟಿಗೆ, ನರೋಡ ಪಾಟಿಯಾಕ್ಕೆ.. ನುಗ್ಗಿ ಮುಸ್ಲಿಮರನ್ನು ಕೊಂದಿದ್ದಾನೆ ಎಂದು ಯಾಕೆ ಹೇಳಿಲ್ಲ, ಇಷ್ಟಕ್ಕೂ ಬ್ಯಾಂಕ್‍ನಲ್ಲಿ ಒಂದು ಅಕೌಂಟೂ ಇಲ್ಲದ ರೇಷ್ಮಳು ಇಷ್ಟೊಂದು ಧೈರ್ಯ ಪ್ರದರ್ಶಿಸಿರುವಾಗ ದೇಶಭಕ್ತರೆಂದು ಸ್ವಯಂ ಘೋಷಿಸುತ್ತಾ ತಿರುಗುವವರಿಗೆ ಇವೇಕೆ ಕಾಣಿಸುತ್ತಿಲ್ಲ, ದೇಶನಿಷ್ಠೆ ಅಂದರೆ ಏನು, ಏನಲ್ಲ.. ಎಂದೆಲ್ಲಾ ಪ್ರಶ್ನಿಸುವ ಸಂದರ್ಭವನ್ನಾಗಿ ರೇಷ್ಮಳ ಘಟನೆಯನ್ನು ಮಾಧ್ಯಮಗಳು ಬಳಸಿಕೊಳ್ಳಬಹುದಿತ್ತಲ್ಲ?
       ನಿಜವಾಗಿ ದೇಶಪ್ರೇಮ, ಮನುಷ್ಯ ಪ್ರೀತಿ, ಮಾನವ ಸಂಬಂಧಗಳಿಗೆಲ್ಲ ಅದರದ್ದೇ ಆದ ತೂಕ ಇದೆ. ಭಾರತದ ಪತಾಕೆಯನ್ನು ತನ್ನ ಮನೆಯ ಮಾಡಿನಲ್ಲೋ ವಾಹನದಲ್ಲೋ ಸಿಕ್ಕಿಸಿದ ಮಾತ್ರಕ್ಕೇ ಯಾರೂ ಪರಮ ದೇಶಪ್ರೇಮಿ ಆಗುವುದಿಲ್ಲ. ಯಾರಿಗೆ ಮನುಷ್ಯರನ್ನು ಧರ್ಮಾತೀತವಾಗಿ ಪ್ರೀತಿಸಲು ಸಾಧ್ಯವಾಗುತ್ತದೋ ಆತನಿಗೆ/ಳಿಗೆ ಮಾತ್ರ ದೇಶವನ್ನು ಪ್ರೀತಿಸಲು ಸಾಧ್ಯವಾಗುತ್ತದೆ. ರೇಶ್ಮಾಳ ಬಗ್ಗೆ ಮಾಧ್ಯಮಗಳಲ್ಲಿ  ಬಂದಿರುವ ಸುದ್ದಿ   ನಿಜವೇ ಆಗಿದ್ದರೆ, ಖಂಡಿತ, ದೇಶಭಕ್ತರಂತೆ ಫೋಸು ಕೊಡುವ ಸರ್ವರೂ ಆ ಸುದ್ದಿಯನ್ನು ಕತ್ತರಿಸಿ ತಮ್ಮ ಜೇಬಿನಲ್ಲಿಟ್ಟುಕೊಳ್ಳುವಷ್ಟು ಅದು ಅಮೂಲ್ಯವಾದದ್ದು. ಯಾಕೆಂದರೆ ಅವರ ಡಿಕ್ಷನರಿಯಲ್ಲಿ ರೇಶ್ಮಾಳಿಗೆ ದೇಶಭಕ್ತೆ ಎಂಬ ಬಿರುದಿಲ್ಲ. ಆಕೆ ಏನಿದ್ದರೂ ದೇಶದ್ರೋಹಿಗಳ (ಮುಸ್ಲಿಮರ) ಸಂಖ್ಯೆಯನ್ನು ಹೆಚ್ಚು ಮಾಡುವ, ದೇಶನಿಷ್ಠೆಯನ್ನು ಸದಾ ಪಾಕಿಸ್ತಾನಕ್ಕೆ ಅಡವಿಟ್ಟು ಬದುಕುತ್ತಿರುವ ಮಹಿಳೆ. ರಥ ಯಾತ್ರೆ, ಗಣೇಶೋತ್ಸವ, ಅಷ್ಟಮಿ.. ಹೀಗೆ ಯಾವುದೇ ಸಂಭ್ರಮವನ್ನೂ ಬಾಂಬಿಟ್ಟು ಹಾಳುಗೆಡಹುವುದಕ್ಕೆ ಹೊಂಚು ಹಾಕುತ್ತಿರುವ ಸಮಾಜವೊಂದರ ಸದಸ್ಯೆ. ಈ ದೇಶವನ್ನು ಮುಸ್ಲಿಮ್ ಬಹುಸಂಖ್ಯಾತ ರಾಷ್ಟ್ರವಾಗಿ ಮಾರ್ಪಡಿಸುವುದಕ್ಕೆ ಶ್ರಮಿಸುತ್ತಿರುವ ಸಮುದಾಯವೊಂದರ ಸದಸ್ಯೆ.. ಹೀಗಿರುವಾಗ ರೇಷ್ಮ ತನ್ನ ವೈವಾಹಿಕ ಬದುಕನ್ನೇ ಪಣಕ್ಕಿಟ್ಟು ರಥ ಯಾತ್ರೆ ಸುಗಮವಾಗಿ ನಡೆಯುವಂತೆ ನೋಡಿಕೊಂಡದ್ದೇಕೆ ಸಣ್ಣ ಸಂಗತಿಯಾಗಬೇಕು?
        ದುರಂತ ಏನೆಂದರೆ, ಈ ದೇಶದಲ್ಲಿ ಎಲ್ಲವೂ, 'ಅವರು' ಮತ್ತು 'ಇವರು' ಆಗಿ ವಿಭಜನೆಗೊಂಡಿದೆ. ಹಿಂದೂ ಯುವತಿಯನ್ನು ಅತ್ಯಾಚಾರ ನಡೆಸಿದ್ದು ಮುಸ್ಲಿಮ್ ಹೆಸರಿನ ವ್ಯಕ್ತಿಯಾಗಿದ್ದರೆ, ತಕ್ಷಣ ಕೆಲವರ 'ಧರ್ಮ' ಜಾಗೃತಗೊಳ್ಳುತ್ತದೆ. ಅತ್ಯಾಚಾರಿಯನ್ನು ಹಿಡಿದು ಪಾಠ ಕಲಿಸಲಾಗುತ್ತದೆ. ಅದೇ ವೇಳೆ ಹಿಂದೂ ಯುವತಿಯನ್ನು ಹಿಂದೂ ಹೆಸರಿನ ವ್ಯಕ್ತಿಯೇ ಅತ್ಯಾಚಾರಕ್ಕೆ ಒಳಪಡಿಸಿದರೆ ಧರ್ಮ ಜಾಗೃತಗೊಳ್ಳುವುದೇ ಇಲ್ಲ. ಆತನಿಗೆ ಪಾಠ ಕಲಿಸುವುದಕ್ಕೆ ಪ್ರಯತ್ನಗಳೂ ನಡೆಯುವುದಿಲ್ಲ. ಮುಸ್ಲಿಮ್ ಹೆಣ್ಣು ಮಗಳ ಮೇಲೆ ಹಿಂದೂ ಹೆಸರಿನ ವ್ಯಕ್ತಿ ಅತ್ಯಾಚಾರ ನಡೆಸಿದರೂ ನಡೆಯುವುದು ಹೀಗೆಯೇ. ಒಂದು ರೀತಿಯಲ್ಲಿ, ಸರಿ-ತಪ್ಪುಗಳು, ಶಿಕ್ಷೆ-ಪುರಸ್ಕಾರಗಳೆಲ್ಲ ಅದನ್ನು ಎಸಗಿದವರ ಧರ್ಮದ ಆಧಾರದಲ್ಲಿ ನಿರ್ಧರಿಸಲ್ಪಡುತ್ತವೆ. ಅಂದಹಾಗೆ, ಧರ್ಮವನ್ನು ಇಷ್ಟು ಕೆಳಮಟ್ಟದಲ್ಲಿ ವ್ಯಾಖ್ಯಾನಿಸುವವರಿಂದ ದೇಶ ಪ್ರೇಮ, ಮನುಷ್ಯ ಪ್ರೇಮಗಳೆಲ್ಲ ನ್ಯಾಯಯುತ ವ್ಯಾಖ್ಯಾನಕ್ಕೆ ಒಳಗಾದೀತು ಎಂದು ಹೇಗೆ ನಿರೀಕ್ಷಿಸುವುದು? ನಿಜವಾಗಿ ಅತ್ಯಾಚಾರಕ್ಕೆ ಒಳಗಾದ ಯಾವ ಹೆಣ್ಣೂ ಆ ಕ್ರೌರ್ಯವನ್ನು ಧರ್ಮದ ಆಧಾರದಲ್ಲಿ ಖಂಡಿತ ವ್ಯಾಖ್ಯಾನಿಸಲಿಕ್ಕಿಲ್ಲ. ಅತ್ಯಾಚಾರ ಅನ್ನುವುದೇ ಭೀಕರ ಕ್ರೌರ್ಯ. ಅದನ್ನು ಅವರು ಇವರು ಎಂದು ವಿಂಗಡಿಸಿದ ಮಾತ್ರಕ್ಕೇ ಕ್ರೌರ್ಯದ ನೋವು ತಣ್ಣಗಾಗಲು ಸಾಧ್ಯವೇ?
         ಏನೇ ಆಗಲಿ, ತನ್ನ ಭಯೋತ್ಪಾದಕ ಗಂಡನನ್ನು ಪೊಲೀಸರಿಗೆ ಒಪ್ಪಿಸುವ ಮೂಲಕ ಸ್ವಘೋಷಿತ ದೇಶ ಭಕ್ತರ ಅಸಲಿ ಮುಖವನ್ನು ರೇಷ್ಮ ಬೆತ್ತಲೆ ಮಾಡಿದ್ದಾಳೆ. ಒಂದು ವೇಳೆ ಆಕೆಯೂ, 'ಅವರು-ಇವರು' ಎಂಬ ಮನುಷ್ಯ ವಿರೋಧಿ ಸಿದ್ಧಾಂತವನ್ನು ನೆಚ್ಚಿಕೊಂಡಿರುತ್ತಿದ್ದರೆ ತನ್ನ ಗಂಡನ ವಿರುದ್ಧ ದೂರು ಕೊಡಲು ಸಾಧ್ಯವಿತ್ತೇ? ರಥ ಯಾತ್ರೆಯಲ್ಲಿ ಸಾಯುವವರು 'ನಮ್ಮವರಲ್ಲವಲ್ಲ' ಅಂದುಕೊಳ್ಳುತ್ತಿದ್ದರೆ ಏನಾಗುತ್ತಿತ್ತು? ವಿಷಾದ ಏನೆಂದರೆ, ಸಂಕುಚಿತವಾದಿಗಳು ಇಂಥ  ಘಟನೆಗಳನ್ನು ಸ್ವಯಂ ತಿದ್ದಿಕೊಳ್ಳುವುದಕ್ಕೆ ಬಳಸಿಕೊಳ್ಳುವುದರ ಬದಲು ಅವು ಸುದ್ದಿಯೇ ಆಗದಂತೆ ನೋಡಿಕೊಳ್ಳುವುದು. ಎಲ್ಲಿ ಸಾರ್ವಜನಿಕ ಚರ್ಚೆಗೆ ಒಳಗಾಗಿ ಬಿಡುತ್ತದೋ ಎಂದು ಆತಂಕಪಡುವುದು. ಆದ್ದರಿಂದಲೇ ರೇಷ್ಮ ಅಭಿನಂದನೆಗೆ ಅರ್ಹಳು. ಆತ್ಮ ಸಾಕ್ಷಿ ಇರುವ ಪ್ರತಿಯೋರ್ವ 'ದೇಶಭಕ್ತ'ರಿಗೂ ಆಕೆ ನಿಜವಾದ ದೇಶಪ್ರೇಮದ ಪಾಠವನ್ನು ಹೇಳಿಕೊಟ್ಟಿದ್ದಾಳೆ. ಈ ಪಾಠದಲ್ಲಿ 'ಅವರು-ಇವರು' ಇಲ್ಲ. ಇರುವುದು ನಾವು ಮತ್ತು ನಾವೆಲ್ಲರೂ ಮಾತ್ರ.

No comments:

Post a Comment