Monday, 17 September 2012

ಆಧುನಿಕ ಸಂಸ್ಕೃತಿಯ ಪೊಳ್ಳುತನವನ್ನು ಬೆತ್ತಲೆ ಮಾಡಿದ ಒಂದು ಪೋಟೋ

ಫ್ರಾನ್ಸ್ ನ  ಕ್ಲೋಸರ್ ಮ್ಯಾಗಸಿನ್‍ನಲ್ಲಿ ಬ್ರಿಟನ್ನಿನ ರಾಜಕುಮಾರಿ ಕೇಟ್ ಮಿಡ್ಲ್ ಟನ್‍ಳ ಪೋಟೋ ಪ್ರಕಟವಾಗಿರುವುದು ದೊಡ್ಡ ವಿವಾದವನ್ನು ಸೃಷ್ಟಿಸಿದೆ. ಬ್ರಿಟನ್‍ನ ರಾಜಕುಟುಂಬ ಮ್ಯಾಗಸಿನ್‍ನ ವಿರುದ್ಧ ಕೋರ್ಟಿಗೆ ಹೋಗಿದೆ. ಪ್ರಧಾನಿ ಕಚೇರಿಯು ಪೋಟೋ ಪ್ರಕಟಣೆಯನ್ನು ಖಂಡಿಸಿದೆ. ಒಂದು ರೀತಿಯಲ್ಲಿ ಕೇಟ್‍ಳ ಟಾಪ್‍ಲೆಸ್ ಪೋಟೋ, ಬ್ರಿಟನ್ನಿನಾದ್ಯಂತ ಒಂದು ಬಗೆಯ ಚರ್ಚೆಗೆ, ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚೆಗೆ ರಾಜಕುಮಾರ ವಿಲಿಯಮ್ಸ್ ಮತ್ತು ಪತ್ನಿ ಮಿಡ್ಲ್ ಟನ್‍ರು ರಜಾಕಾಲವನ್ನು ಕಳೆಯಲು ಫ್ರಾನ್ಸ್ ಗೆ ತೆರಳಿದ್ದರು. ಅಲ್ಲಿ ಟೆರೇಸ್‍ನ ಮೇಲೆ ನಿಂತಿದ್ದ ಮಿಡ್ಲ್ ಟನ್‍ಳ ಪೋಟೋವನ್ನು ಮ್ಯಾಗಸಿನ್‍ನ ಪೋಟೋಗ್ರಾಫರ್ ಕ್ಲಿಕ್ಕಿಸಿದ್ದಾನೆ. ಜಗತ್ತಿನಾದ್ಯಂತ ಪ್ರಕಟವಾಗುತ್ತಿರುವ ಕೋಟ್ಯಂತರ ಪೋಟೋಗಳಂತೆ ಇದೊಂದು ಸಾಮಾನ್ಯ ಪೋಟೋ. ಬೀಚ್‍ಗಳಲ್ಲಿ ಕ್ಲಿಕ್ಕಿಸಲಾಗುವ ಪೋಟೋಗಳಿಗೆ ಹೋಲಿಸಿದರೆ ಇದು ಏನೇನೂ ಅಲ್ಲ ಎಂದು ಮ್ಯಾಗಸಿನ್‍ನ ಸಂಪಾದಕ ಲಾರೆನ್ಸ್ ಸಮರ್ಥಿಸಿಕೊಂಡಿದ್ದಾರೆ.
       ನಿಜವಾಗಿ, ಆಧುನಿಕತೆ ಎಂಬ ಚಂದದ ಹೆಸರಿನಲ್ಲಿ ಹೆಣ್ಣು ಮಕ್ಕಳ ಉಡುಪಿನ ಉದ್ದಳತೆಯನ್ನು ಸಾಕಷ್ಟು ಕಿರಿದುಗೊಳಿಸಿ ಜಗತ್ತಿಗೆ ಹಂಚಿದ್ದೇ ಯುರೋಪಿಯನ್ ರಾಷ್ಟ್ರಗಳು. ಬ್ರಿಟನ್‍ಗೆ ಅದರಲ್ಲಿ ದೊಡ್ಡದೊಂದು ಪಾಲಿದೆ. ಒಂದು ರಾಷ್ಟ್ರದ ಅಭಿವೃದ್ಧಿಯ ಮಾನದಂಡವನ್ನಾಗಿ ಈ ಎಲ್ಲ ರಾಷ್ಟ್ರಗಳು ಪರಿಗಣಿಸುತ್ತಿರುವುದೂ ಹೆಣ್ಣು ಮಕ್ಕಳ ಬಟ್ಟೆಯ ಉದ್ದಳತೆಯನ್ನೇ. ಅಫಘಾನಿನ ಮೇಲೆ ಅಮೇರಿಕ ಸಾರಿದ ಅತಿಕ್ರಮಣವನ್ನು ವರದಿ ಮಾಡುವುದಕ್ಕಾಗಿ ಇವಾನ್ ರಿಡ್ಲಿ ಅನ್ನುವ ಬ್ರಿಟನ್ನಿನ `ಆಧುನಿಕ’ ಪತ್ರಕರ್ತೆ ಅಲ್ಲಿಗೆ ತೆರಳಿದ್ದರು. ತಾಲಿಬಾನಿಗಳಿಗೆ ಗೊತ್ತಾಗದಿರಲಿ ಎಂದು ಮೈಮುಚ್ಚುವ ಬಟ್ಟೆಯನ್ನೂ ಧರಿಸಿದ್ದರು. ಆದರೆ ತಾಲಿಬಾನಿಗಳು ಆಕೆಯನ್ನು ಬಂಧಿಸಿದಾಗ ಬ್ರಿಟನ್ ಅವರ ಬಂಧ ಮುಕ್ತಿಗೆ ತೀವ್ರವಾಗಿ ಪ್ರಯತ್ನಿಸಿತ್ತು. ತನ್ನ ಗೌರವಾನ್ವಿತ ಪತ್ರಕರ್ತೆ ಎಂದೇ ಅದು ಸಂಬೋಧಿಸಿತ್ತು. ಕೊನೆಗೂ ರಿಡ್ಲಿ ಬಿಡುಗಡೆಗೊಂಡು ಬ್ರಿಟನ್‍ಗೆ ಹಿಂತಿರುಗಿದರಲ್ಲದೆ ವರ್ಷದ ಬಳಿಕ ಮೈಮುಚ್ಚುವ ಉಡುಪನ್ನೇ ತನ್ನ ನಿಜವಾದ ಉಡುಪಾಗಿ ಆಯ್ಕೆ ಮಾಡಿಕೊಂಡರು. ತಕ್ಷಣ, ಅದೇ ಬ್ರಿಟನ್ ಆಕೆಗೆ ಕೊಟ್ಟಿದ್ದ ಗೌರವಾನ್ವಿತ ಪದವನ್ನು ಕಿತ್ತುಕೊಂಡಿತು. ಆಧುನಿಕತೆಯಿಂದ ಅನಾಗರಿಕತೆಯೆಡೆಗೆ ಮುಖ ಮಾಡಿದ ಹೆಣ್ಣೆಂಬಂತೆ ಅವರನ್ನು ಮಾಧ್ಯಮ ಜಗತ್ತೂ ಬಿಂಬಿಸಿತು. ಇದೊಂದೇ ಅಲ್ಲ, ಕಳೆದ ಲಂಡನ್ ಒಲಿಂಪಿಕ್ಸ್ ನಲ್ಲೂ ಬಟ್ಟೆ ವಿವಾದದ ಸಂಗತಿಯಾಗಿತ್ತು. ಮೈಮುಚ್ಚುವ ಉಡುಪನ್ನು ಧರಿಸಿ ಕ್ರೀಡೆಯಲ್ಲಿ ಪಾಲುಗೊಳ್ಳುವುದನ್ನು ಒಲಿಂಪಿಕ್ಸ್ ಸಮಿತಿ ಕೊನೆವರೆಗೂ ತಡೆ ಹಿಡಿದಿತ್ತು. ಅಚ್ಚರಿ ಏನೆಂದರೆ, ಇದೇ ಬ್ರಿಟನ್‍ನಲ್ಲಿ, ರಾಜಕುಟುಂಬದ ಹೆಣ್ಣು ಮಕ್ಕಳು `ಆಧುನಿಕ’ ಉಡುಪಿನಲ್ಲಿ ಕಾಣಿಸಿಕೊಳ್ಳುವುದನ್ನು ಅಪರಾಧದಂತೆ ಕಾಣಲಾಗುತ್ತದೆ. ಬ್ರಿಟನ್ನೇ ಕಲಿಸಿದ ಮತ್ತು ಜಗತ್ತಿಗೆ ರಫ್ತು ಮಾಡಿದ `ಆಧುನಿಕ ಉಡುಪನ್ನು’ ರಾಜಕುಟುಂಬ ಧರಿಸುವುದನ್ನು ಅದು ಇಷ್ಟಪಡುತ್ತಿಲ್ಲ. ಇದರ ಅರ್ಥವಾದರೂ ಏನು? ಉಡುಪಿಗೂ ವ್ಯಕ್ತಿತ್ವಕ್ಕೂ ಸಂಬಂಧ ಇದೆ ಎಂದೇ ಅಲ್ಲವೇ?  ಆಧುನಿಕ ಬಟ್ಟೆ ಧರಿಸುವುದು ಗೌರವಾರ್ಹ ಎಂದಾಗಿದ್ದರೆ ಮಿಡ್ಲ್ ಟನ್ ಧರಿಸಿದ್ದರಲ್ಲಿ, ಅದನ್ನು ಕ್ಲಿಕ್ಕಿಸಿ ಮ್ಯಾಗಸಿನ್‍ನಲ್ಲಿ ಪ್ರಕಟಿಸಿದ್ದರಲ್ಲಿ ಏನು ತಪ್ಪಿದೆ? ಮಿಡ್ಲ್ ಟನ್‍ರ ಪೋಟೋ ಯಾವ ಭಂಗಿಯಲ್ಲಿ ಕಾಣಿಸಿಕೊಂಡಿತ್ತೋ ಅದಕ್ಕಿಂತಲೂ ಆಧುನಿಕ ರೂಪದಲ್ಲಿ ಹೆಣ್ಣು ಮಕ್ಕಳ ಪೋಟೋಗಳು ಬ್ರಿಟನ್‍ನಾದ್ಯಂತ ಪತ್ರಿಕೆಗಳಲ್ಲಿ ನಿತ್ಯ ಪ್ರಕಟವಾಗುತ್ತಿವೆ. ಅವಾವುದಕ್ಕೂ ರಾಜಕುಟುಂಬವಾಗಲಿ, ಪ್ರಧಾನಿ ಕಚೇರಿಯಾಗಲೀ ವಿರೋಧ ವ್ಯಕ್ತಪಡಿಸಿಲ್ಲ. ಹೀಗಿರುವಾಗ ಮಿಡ್ಲ್ ಟನ್‍ಳ ಪೋಟೋಕ್ಕೆ ಮಾತ್ರ ತಗಾದೆಯೇಕೆ? ಅದರರ್ಥ, ಕನಿಷ್ಠ  ಬಟ್ಟೆಯಲ್ಲಿ ಕಾಣಿಸಿಕೊಳ್ಳುವುದು ಗೌರವಕ್ಕೆ ಕುಂದು ತರುತ್ತದೆ ಎಂದಲ್ಲವೇ? `ಆಧುನಿಕ’ ಬಟ್ಟೆಯಲ್ಲಿ ಮಿಡ್ಲ್ ಟನ್‍ಳನ್ನು ತೋರಿಸುವುದು ರಾಜಕುಟುಂಬಕ್ಕೆ ಅವಮರ್ಯಾದೆ ಎಂದಾದರೆ, ಬ್ರಿಟನ್ ರಫ್ತು ಮಾಡುತ್ತಿರುವ `ಆಧುನಿಕ’ ಸಂಸ್ಕ್ರಿತಿಯೇಕೆ ಅವಮಾನಕರ ಅನ್ನಿಸಿಕೊಳ್ಳುತ್ತಿಲ್ಲ?
        ನಿಜವಾಗಿ, ಮಿಡ್ಲ್ ಟನ್‍ಗೂ ಅವರಂತೆ ರಾಜಕುಟುಂಬದಲ್ಲಿ ಗುರುತಿಸಿಕೊಳ್ಳದ, ಆದರೆ ಅವರಂಥದ್ದೇ ಕೈ, ಕಾಲು, ಕಣ್ಣು, ದೇಹವನ್ನು ಹೊಂದಿರುವ ಜಗತ್ತಿನ ಇತರ ಕೋಟ್ಯಂತರ `ಮಿಡ್ಲ್ ಟನ್‍ಗಳಿಗೂ’ ಮರ್ಯಾದೆ, ವ್ಯಕ್ತಿತ್ವ, ಸ್ವಾಭಿಮಾನ.. ಎಲ್ಲವೂ ಒಂದೇ. ಮಿಡ್ಲ್ ಟನ್‍ಳನ್ನು `ಆಧುನಿಕ’ ಉಡುಪಿನಲ್ಲಿ ನೋಡುವುದನ್ನು ರಾಜಕುಟುಂಬ ಅಥವಾ ಬ್ರಿಟನ್ನಿನ ನಾಗರಿಕರು ಇಷ್ಟಪಡದಂತೆ ಇವರನ್ನು ಹಾಗೆ ನೋಡುವುದಕ್ಕೂ ಈ ಜಗತ್ತಿನಲ್ಲಿ ಇಷ್ಟಪಡದವರಿದ್ದಾರೆ. ಉಡುಪು ಎಂಬುದು ಮನುಷ್ಯರ ವ್ಯಕ್ತಿತ್ವವನ್ನು, ಅವರ ಘನತೆಯನ್ನು ಪ್ರತಿಬಿಂಬಿಸುವ ಸಂಕೇತ ಎಂದವರು ವಾದಿಸುತ್ತಿದ್ದಾರೆ. ಅದನ್ನು ಎಷ್ಟರ ಮಟ್ಟಿಗೆ ಕಿರಿದುಗೊಳಿಸಲಾಗುತ್ತದೋ ಅಷ್ಟೇ ಪ್ರಮಾಣದಲ್ಲಿ ಅವರ ಗೌರವಕ್ಕೆ ಧಕ್ಕೆ ಒದಗುತ್ತದೆ ಎಂದವರು ಅಂದುಕೊಂಡಿದ್ದಾರೆ. ದುರಂತ ಏನೆಂದರೆ, ರಾಜಕುಟುಂಬವು ಮಿಡ್ಲ್ ಟನ್‍ಳಿಗೆ ಯಾವ ನಿಯಮವನ್ನು ಹೇರುತ್ತದೋ ಅದೇ ನಿಯಮವನ್ನು ಜಗತ್ತಿನ ಇತರ ಕೋಟ್ಯಂತರ `ಮಿಡ್ಲ್ ಟನ್‍ಗಳು’ ತಮ್ಮ ಪಾಲಿಗೆ ಇಷ್ಟಪಟ್ಟುಕೊಂಡರೆ ಅದನ್ನು ಅನಾಗರಿಕತೆ ಎಂದು ಕರೆಯಲಾಗುತ್ತದೆ. ಯಾಕಿಂಥ ದ್ವಂದ್ವ?
      ನಿಜವಾಗಿ, ಈ ಜಗತ್ತನ್ನು ಇವತ್ತು ಆಳುತ್ತಿರುವುದೇ ಕೆಲವು ಇಬ್ಬಂದಿತನಗಳು. ಅಮೇರಿಕ ತನ್ನ ದೇಶದ ಸಾರ್ವಭೌಮತೆಗೆ ಯಾವ ಬಗೆಯ ಗೌರವವನ್ನು ಕಲ್ಪಿಸುತ್ತದೋ ಅದೇ ಗೌರವವನ್ನು ಅದು ಇತರ ದೇಶಗಳ ಸಾರ್ವಭೌಮತೆಗೆ ಕೊಡುವುದೇ ಇಲ್ಲ. ಕೃಷಿ ಸಬ್ಸಿಡಿಯನ್ನು ಕಡಿಮೆಗೊಳಿಸಿ ಎಂದು ಕರೆ ಕೊಡುವ ಅದೇ ಅಮೇರಿಕ ತನ್ನ ದೇಶದ ಕೃಷಿಕರಿಗೆ ಧಾರಾಳ ಸಬ್ಸಿಡಿಯನ್ನು ನೀಡುತ್ತದೆ. ಮಾನವ ಹಕ್ಕುಗಳ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತಲೇ ನೂರಕ್ಕಿಂತಲೂ ಅಧಿಕ ಬಾರಿ ಬ್ರಿಟನ್ ಮತ್ತು ಅಮೇರಿಕಗಳು ಇಸ್ರೇಲ್ ಪರ ವೀಟೋ ಚಲಾಯಿಸುತ್ತವೆ. ನೂರಾರು ಅಣ್ವಸ್ತ್ರಗಳನ್ನು ಸ್ವಯಂ ಗೋದಾಮುಗಳಲ್ಲಿ ಪೇರಿಸಿಟ್ಟುಕೊಂಡೇ ಇತರ ರಾಷ್ಟ್ರಗಳು ಅವನ್ನು ಹೊಂದದಂತೆ ತಡೆಯುತ್ತವೆ. ಹೀಗಿರುವಾಗ, ಈ ರಾಷ್ಟ್ರಗಳಿಂದ ದ್ವಂದ್ವವನ್ನಲ್ಲದೇ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ?
       ಏನೇ ಆಗಲಿ, ಒಂದೊಳ್ಳೆಯ ಚರ್ಚೆಗೆ ವೇದಿಕೆ ಒದಗಿಸಿದ ಫ್ರಾನ್ಸಿನ ಕ್ಲೋಸರ್ ಮ್ಯಾಗಸಿನ್‍ಗೆ ಅಭಿನಂದನೆ ಸಲ್ಲಿಸಬೇಕು. ಬ್ರಿಟನ್‍ನ `ಆಧುನಿಕತೆಯ’ ಪೊಳ್ಳುತನವನ್ನು ಅದು ಒಂದು ಪೋಟೋದ ಮೂಲಕ ಬಹಿರಂಗಕ್ಕೆ ತಂದಿದೆ. ಮಿಡ್ಲ್ ಟನ್‍ಳಂತೆ ಜಗತ್ತಿನ ಎಲ್ಲ ಹೆಣ್ಣು ಮಕ್ಕಳೂ ಗೌರವಾರ್ಹರು ಎಂಬುದನ್ನು `ಆಧುನಿಕ’ ಜಗತ್ತು ಈ ಮೂಲಕ ಅರ್ಥ ಮಾಡಿಕೊಳ್ಳಲಿ...

No comments:

Post a Comment