Wednesday 5 June 2013

ಇದು ಹೆಗ್ಗಳಿಕೆಯಲ್ಲ, ಅವಮಾನ

   ಬಿಜೆಪಿಯಿಂದ ರಾಮ್ ಜೇಠ್ಮಲಾನಿಯ ಉಚ್ಛಾಟನೆ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್‍ರ ಪರ ಅಡ್ವಾಣಿಯವರು ವಕಾಲತ್ತು ವಹಿಸಿರುವುದು ಬಿಜೆಪಿಯನ್ನು ಮತ್ತೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಒಳಪಡಿಸಿದೆ. ಮೋದಿ          v/s ಚೌಹಾನ್ ಅನ್ನುವ ಶೀರ್ಷಿಕೆಗಳು ಮಾಧ್ಯಮಗಳಲ್ಲಿ ಪ್ರಕಟವಾಗತೊಡಗಿವೆ. ಲೋಕಸಭಾ ಚುನಾವಣೆಗೆ ಇನ್ನಿರುವುದು
ಒಂದೇ ವರ್ಷ. ಈ ಹಂತದಲ್ಲಿ ಬಿಜೆಪಿಯು ಒಳಜಗಳ, ದ್ವಂದ್ವ, ಕಾಲೆಳೆಯುವಿಕೆಗಾಗಿ ಸುದ್ದಿಗೀಡಾಗುತ್ತಿರುವುದನ್ನು ಅದರ ಬೆಂಬಲಿಗರು ಹತಾಶೆಯಿಂದ ನೋಡುತ್ತಿದ್ದಾರೆ. ನಿಜವಾಗಿ, ಬಿಜೆಪಿಯೊಳಗಿನ ದ್ವಂದ್ವ ಪ್ರಕಟವಾಗುತ್ತಿರುವುದು ಇದು ಮೊದಲೇನೂ ಅಲ್ಲ. ಒಂದು ವೇಳೆ ಆ ಪಕ್ಷಕ್ಕೆ ಪಾರದರ್ಶಕ ಪ್ರಣಾಳಿಕೆ, ನಿರ್ದಿಷ್ಟ ನಿಲುವು, ತತ್ವ ಇರುತ್ತಿದ್ದರೆ ಅದು ಈ ದೇಶದ ದೊಡ್ಡದೊಂದು ಜನಸಮೂಹದ ಪಾಲಿಗೆ ‘ಅಸ್ಪೃಶ್ಯ' ಅನ್ನಿಸಿಕೊಳ್ಳುತ್ತಿರಲಿಲ್ಲ. ಒಂದೆಡೆ, ಬಾಬರಿ ಮಸೀದಿಯನ್ನು ಉರುಳಿಸುವ ಉದ್ದೇಶವನ್ನಿಟ್ಟುಕೊಂಡೇ ಅಡ್ವಾಣಿ ರಥಯಾತ್ರೆ ನಡೆಸುತ್ತಾರೆ. ಇನ್ನೊಂದೆಡೆ, ಉರುಳಿದ ಬಾಬರಿಗಾಗಿ ವಿಷಾದ ವ್ಯಕ್ತಪಡಿಸುತ್ತಾರೆ. ಒಂದೆಡೆ, ಶಂಕಿತ ಭಯೋತ್ಪಾದಕಿ ಪ್ರಜ್ಞಾ ಸಿಂಗ್‍ಳ ಪರ ಪ್ರಭಾವ ಬೀರುವುದಕ್ಕಾಗಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ರನ್ನು ಭೇಟಿಯಾಗುತ್ತಾರೆ. ಇನ್ನೊಂದೆಡೆ, ತಾವು ಮಾಡದ ಕೃತ್ಯಕ್ಕಾಗಿ ಐದಾರು ವರ್ಷ ಜೈಲಲ್ಲಿದ್ದು ಬಿಡುಗಡೆಗೊಂಡ ಮಕ್ಕಾ ಮಸೀದಿ ಬಾಂಬ್ ಸ್ಫೋಟದ ‘ಶಂಕಿತ' ಮುಸ್ಲಿಮ್ ಯುವಕರ ಬಗ್ಗೆ ಸಣ್ಣದೊಂದು ಹೇಳಿಕೆಯನ್ನೂ ಹೊರಡಿಸುವುದಿಲ್ಲ. ಇದು ದ್ವಂದ್ವದ ಚಿಕ್ಕದೊಂದು ತುಣುಕು ಅಷ್ಟೇ. ಬಿಜೆಪಿಯ ಉದ್ದಕ್ಕೂ ಇಂಥ ದ್ವಂದ್ವಗಳ ದೊಡ್ಡದೊಂದು ಮೂಟೆಯೇ ಇದೆ.
   ‘ತಾನು ಮುಸ್ಲಿಮರ ವಿರೋಧಿಯಲ್ಲ’ ಎಂದು ನಂಬಿಸುವುದಕ್ಕೆ ಬಿಜೆಪಿ ಆಗಾಗ ಕಸರತ್ತುಗಳನ್ನು ನಡೆಸುವುದಿದೆ. ‘ತನ್ನ ವಿರೋಧ ದೇಶವಿರೋಧಿಗಳ ಬಗ್ಗೆ ಮಾತ್ರ’ ಎಂಬ ಸಮಜಾಯಿಷಿಕೆಯನ್ನೂ ಅದು ಕೊಡುವುದಿದೆ. ಅಷ್ಟಕ್ಕೂ, ‘ದೇಶವಿರೋಧಿಗಳು ಮುಸ್ಲಿಮರಲ್ಲಿ ಮಾತ್ರ ಇರಲು ಸಾಧ್ಯ’ ಎಂಬ ಸೂಕ್ಷ್ಮ ಸಂದೇಶ ಈ ಹೇಳಿಕೆಯಲ್ಲಿದೆ ಎಂಬ ಸತ್ಯ ಬಿಜೆಪಿಗೆ ಗೊತ್ತಿಲ್ಲ ಎಂದಲ್ಲ. ಮುಸ್ಲಿಮರ ಬಗ್ಗೆ; ಅವರ ಆಚಾರ, ದೇಶಪ್ರೇಮ, ತತ್ವನಿಷ್ಠೆಯ ಬಗ್ಗೆ ಅದು ಮಾತಾಡುವುದೇ ದ್ವಂದ್ವದೊಂದಿಗೆ. ಗುಜರಾತ್ ಹತ್ಯಾಕಾಂಡವನ್ನು ಮುಂದಿಟ್ಟುಕೊಂಡು ಯಾರಾದರೂ ಬಿಜೆಪಿಯ ‘ಮುಸ್ಲಿಮ್ ನೀತಿಯನ್ನು' ಪ್ರಶ್ನಿಸಿದರೆ ಅದು, ಬಿಹಾರದಲ್ಲಿ 1964ರಲ್ಲಿ ನಡೆದ ಹತ್ಯಾಕಾಂಡ, 1980ರಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್‍ನಲ್ಲಿ, 1969ರಲ್ಲಿ ಅಹ್ಮದಾಬಾದ್‍ನಲ್ಲಿ, 1983ರಲ್ಲಿ ಅಸ್ಸಾಮ್‍ನ ನೆಲ್ಲಿಯಲ್ಲಿ, 1989ರಲ್ಲಿ ಬಿಹಾರದ ಭಾಗಲ್ಪುರದಲ್ಲಿ, 1993ರಲ್ಲಿ ಮುಂಬೈಯಲ್ಲಿ.. ನಡೆದ ಹತ್ಯಾ ಕಾಂಡವನ್ನು ಪ್ರಸ್ತಾಪಿಸುತ್ತದೆ. ಇಲ್ಲೆಲ್ಲಾ ಮುಸ್ಲಿಮರು ಗುಜರಾತ್‍ಗಿಂತ ಹೆಚ್ಚಿನ ಪ್ರಮಾಣಧಲ್ಲಿ ಹತ್ಯೆ ಗೀಡಾಗಿದ್ದಾರೆ. ಅಲ್ಲದೇ ಈ ಸಂದರ್ಭಗಳಲ್ಲೆಲ್ಲಾ ಅಲ್ಲಿ ಅಧಿಕಾರದಲ್ಲಿದ್ದುದು ಬಿಜೆಪಿಯಲ್ಲ, ಕಾಂಗ್ರೆಸ್. ಹೀಗಿರುವಾಗ ಗುಜರಾತ್‍ನ ಏಕೈಕ ಘಟನೆಗಾಗಿ ಬಿಜೆಪಿಯನ್ನು ಮುಸ್ಲಿಮ್ ವಿರೋಧಿಯಾಗಿ ಬಿಂಬಿಸುವುದೇಕೆ ಎಂಬ ಮುಗ್ಧ ಪ್ರಶ್ನೆಯನ್ನೂ ಅದು ಎಸೆಯುವುದಿದೆ.
   ನಿಜವಾಗಿ, ಬಿಜೆಪಿಯನ್ನು ಅಳೆಯಬೇಕಾದದ್ದು ಅದು ಎಷ್ಟು ಮಂದಿ ಮುಸ್ಲಿಮರನ್ನು ಕೊಂದಿದೆ ಎಂಬುದರಿಂದಲ್ಲ ಬದಲು ಮುಸ್ಲಿಮರ ಕುರಿತಂತೆ ಅದರ ನಿಲುವು ಏನು ಎಂಬುದರಿಂದ. ಕಾಂಗ್ರೆಸ್‍ನ ಅಧಿಕಾರದ ಅವಧಿಯಲ್ಲಿ ಮುಸ್ಲಿಮರ ಹತ್ಯಾಕಾಂಡಗಳಾಗಿರಬಹುದು. ಆದರೆ ಈ ಎಲ್ಲ ಸಂದರ್ಭಗಳಲ್ಲಿ ಕಾಂಗ್ರೆಸ್‍ನ ವರ್ತನೆ ಬಿಜೆಪಿಯಂತೆ ಖಂಡಿತ ಇರಲಿಲ್ಲ. ಅದು ‘ಕ್ರಿಯೆಗೆ ಪ್ರತಿಕ್ರಿಯೆ' ಎಂಬ ನುಡಿಗಟ್ಟನ್ನು ಬಳಸಿರಲಿಲ್ಲ. ಮುಸ್ಲಿಮರಲ್ಲಿ ವಿಶ್ವಾಸ ತುಂಬುವ, ಆದ ತಪ್ಪಿಗೆ ವಿಷಾದ ಸೂಚಿಸುವ ಪ್ರಯತ್ನಗಳನ್ನು ಅದು ಮಾಡುತ್ತಾ ಬಂದಿದೆ. ಅಂದಹಾಗೆ, ಇವು ಪರಿಹಾರ ಅಲ್ಲದೇ ಇರಬಹುದು. ಆದರೆ, ಹತಾಶೆಯ ಸಂದೇಶವನ್ನಂತೂ ಅದು ರವಾನಿಸಿಲ್ಲ. ಅದರ ಹೇಳಿಕೆಗಳು, ಕ್ರಮಗಳೆಲ್ಲ ಒಂದು ಹಂತದ ವರೆಗೆ ಆ ಪಕ್ಷವನ್ನು ಮುಸ್ಲಿಮರು ಮುನಿಸಿನೊಂದಿಗೆ ಒಪ್ಪಿಕೊಳ್ಳುವಂತೆ ಮಾಡುವಷ್ಟು ಉತ್ತಮವಾಗಿತ್ತು. ಇದಕ್ಕೆ ಹೋಲಿಸಿದರೆ, ಬಿಜೆಪಿಯ ವರ್ತನೆ ಅತ್ಯಂತ ಆಘಾತಕಾರಿಯಾದದು. ಅದು ಮುಸ್ಲಿಮರ ಬಗ್ಗೆ ರವಾನಿಸುವ ಸಂದೇಶಗಳೆಲ್ಲ ಯಾವ ಮಟ್ಟದಲ್ಲಿರುತ್ತದೆಂದರೆ ಅದರ ಉದ್ದೇಶ ಶುದ್ಧಿಯ ಬಗ್ಗೆಯೇ ಅನುಮಾನಿಸುವಷ್ಟು. ಕಾಂಗ್ರೆಸ್ ಎಂದಲ್ಲ, ಯಾವ ಪಕ್ಷವೇ ಆಗಲಿ ಮುಸ್ಲಿಮರ ಕಲ್ಯಾಣಕ್ಕಾಗಿ ಎಲ್ಲಾದರೂ ಯೋಜನೆಗಳನ್ನು ಪ್ರಕಟಿಸಿದರೆ ತಕ್ಷಣ ತುಷ್ಟೀಕರಣ ಎಂಬ ಪದ ಬಳಸಿ ಮೊದಲಾಗಿ ಖಂಡಿಸುವುದು ಬಿಜೆಪಿಯೇ. ಅಲ್ಪಸಂಖ್ಯಾತ ವಿವಿಯನ್ನು ‘ಮುಸ್ಲಿಮ್ ವಿವಿ' ಎಂದು ಅಪಪ್ರಚಾರ ಮಾಡುತ್ತಿರುವುದೂ ಬಿಜೆಪಿಯೇ. ಮುಸ್ಲಿಮರನ್ನು ಹಣಿಯುವುದಕ್ಕಾಗಿ ಭಯೋತ್ಪಾದನೆಯನ್ನು, ಗೋವನ್ನು, ಸಮಾನ ಸಿವಿಲ್ ಕೋಡನ್ನು ಬಳಸುತ್ತಿರುವುದೂ ಬಿಜೆಪಿಯೇ. ಮುಸ್ಲಿಮರಿಗೆ ಸಂಬಂಧಿಸಿದ ಯಾವುದೇ ವಿಚಾರವಿರಲಿ, ಬಿಜೆಪಿಯ ನಿಲುವು ಯಾವಾಗಲೂ ಏಕಮುಖವಾಗಿರುತ್ತದೆ. ಅದರ ಬೆಂಬಲಿಗರ ಭಾಷಣ, ಘೋಷಣೆ, ಕಾರ್ಯಕ್ರಮಗಳೆಲ್ಲ ಮುಸ್ಲಿಮ್ ದ್ವೇಷದಿಂದ ತುಂಬಿರುತ್ತದೆ. ಇಷ್ಟೆಲ್ಲಾ ಇದ್ದೂ ಬಿಜೆಪಿ ತನ್ನನ್ನು ತಾನು ಸಭ್ಯ ಎಂದು ಘೋಷಿಸಿ ಕೊಂಡರೆ ಯಾರಾದರೂ ನಂಬಿಯಾರೇ? ಬಿಜೆಪಿ ಮತ್ತು ಇತರ ಪಕ್ಷಗಳ ನಡುವೆ ಆಯ್ಕೆಯ ಪ್ರಶ್ನೆ ಬಂದಾಗ, ಮುಸ್ಲಿಮರಿಗೆ ಇತರ ಪಕ್ಷಗಳನ್ನು ಆಯ್ಕೆ ಮಾಡಿಕೊಳ್ಳದೇ ಬೇರೆ ಅವಕಾಶವೇ ಇಲ್ಲದಂಥ ಇಮೇಜನ್ನು ಬಿಜೆಪಿ ಸೃಷ್ಟಿಸಿ ಬಿಟ್ಟಿದೆ. ಹೀಗಿರುವಾಗ, ಮುಸ್ಲಿಮರು ತನ್ನಲ್ಲಿ ನಂಬಿಕೆ ಇಡಬೇಕು ಎಂದು ಅದು ಬಯಸುವುದಾದರೂ ಹೇಗೆ?
   ಮುಸ್ಲಿಮರು ದೂರ ನಿಂತಿರುವುದು ಬಿಜೆಪಿಯಿಂದಲ್ಲ, ಅದರ ಮನುಷ್ಯ ವಿರೋಧಿ ನಿಲುವುಗಳಿಂದ. ಅದು ಒಂದೊಮ್ಮೆ ತನ್ನ ನಿಲುವನ್ನು ಬದಲಿಸಿಕೊಂಡರೆ, ಮನುಷ್ಯ ವಿರೋಧಿಗಳನ್ನು ದೂರ ಇಟ್ಟರೆ, ಸರ್ವರನ್ನೂ ಸಮಾನ ರೀತಿಯಲ್ಲಿ ಕಾಣುವ ಹೊಸ ಅಜೆಂಡಾವನ್ನು ರೂಪಿಸಿದರೆ, ಧರ್ಮದ ಆಧಾರದಲ್ಲಿ ಜನರನ್ನು ವಿಂಗಡಿಸುವ ಕೆಲಸವನ್ನು ಕೈಬಿಟ್ಟರೆ, ಮುಸ್ಲಿಮರನ್ನು ಒಳಗೊಳಿಸುವ ರಾಜಕೀಯ ನೀತಿಯನ್ನು ರೂಪಿಸಿದರೆ.. ಖಂಡಿತ ಮುಂದೊಂದು ದಿನ ಮುಸ್ಲಿಮರು ಬಿಜೆಪಿಯ ಬಗ್ಗೆ ನಿರೀಕ್ಷೆಯೊಂದಿಗೆ ಮಾತಾಡುವ ಸಂದರ್ಭವೂ ಬರಬಹುದು. ಈ ದೇಶದ ಹೆಚ್ಚಿನೆಲ್ಲಾ ರಾಜಕೀಯ ಪಕ್ಷಗಳಲ್ಲೂ ಮುಸ್ಲಿಮರು ಗುರುತಿಸಿಕೊಂಡಿದ್ದಾರೆ. ಆದರೆ ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಗೆ ಯಾಕೆ ಅವರ ಒಲವನ್ನು ಗಳಿಸಲಾಗಿಲ್ಲ ಅನ್ನುವ ಬಗ್ಗೆ ಅದು ಆತ್ಮಾವಲೋಕನ ನಡೆಸಲಿ. ಮೋದಿ v/s ಚೌಹಾನ್‍ಗಿಂತ ಗಂಭೀರವಾದ ವಿಚಾರ ಇದು. ರಾಷ್ಟ್ರೀಯ ಪಕ್ಷವೊಂದಕ್ಕೆ 20 ಕೋಟಿಯಷ್ಟು ಸಂಖ್ಯೆಯ ಒಂದು ದೊಡ್ಡ ಸಮುದಾಯದ ನಂಬಿಕೆಯನ್ನು ಗಳಿಸಲಾಗುತ್ತಿಲ್ಲ ಅನ್ನುವುದು ಹೆಗ್ಗಳಿಕೆಯಲ್ಲ, ಅವಮಾನ.

No comments:

Post a Comment